ಶನಿವಾರ, ಆಗಸ್ಟ್ 15, 2020

ಮಹಾನ್ ಕಲಾವಿದನೊಬ್ಬನ ಪ್ರೇಮದ ಕಾಣಿಕೆ


ಮುಂದೊಂದು ಕಾಲ ತಾನು ಜಗದ್ವಿಖ್ಯಾತ ಕಲಾವಿದನಾಗುತ್ತೇನೆಂಬ ಚಿಕ್ಕ ಕಲ್ಪನೆಯೂ ಇಲ್ಲದೇ ಸಾಯುವತನಕ ಕಡು ಬಡತನ, ದಾರಿದ್ರ್ಯದಲ್ಲೇ ಬದುಕಿದ ದುರ್ದೈವಿ ಅವನು. ತೀರಾ ಪುರಾತನ ಕಾಲದವನೇನಲ್ಲ. ನೂರು ಮೂವತ್ತು ವರ್ಷದ ಹಿಂದೆ ಬದುಕಿದ್ದವನು. ಹಾಲೆಂಡ್, ನೆದರ್ಲ್ಯಾಂಡ್ಸ್, ಬೆಲ್ಜಿಯಂ, ಇಂಗ್ಲೆಂಡ್, ಪ್ಯಾರಿಸ್ ಗಳಲ್ಲಿ ಜೀವನ ಕಳೆದ ಡಚ್ ಕಲಾವಿದ ಅವನು. ಆರಂಭದಲ್ಲಿ ಬದುಕಿನ ನಿರ್ವಹಣೆಗೆ ಗುಮಾಸ್ತನಾಗಿ, ಧರ್ಮ ಪ್ರಚಾರಕನಾಗಿ, ಶಿಕ್ಷಕನಾಗಿ ಕೆಲಸ ಮಾಡಿದ. ಎಲ್ಲದರಲ್ಲೂ ಸೋಲು ಅನುಭವಿಸಿದ. ಪ್ರೇಮದಲ್ಲೂ ಕೂಡ... ಸತತ ಪ್ರೇಮ ವೈಫಲ್ಯಗಳು ಅವನನ್ನು ಜರ್ಜರಿತನನ್ನಾಗಿ ಮಾಡಿದವು. ಮೊದಲಿಗೆ ಇಂಗ್ಲಂಡ್ ಒಬ್ಬ ಶಿಕ್ಷಕಿಯನ್ನು ಪ್ರೀತಿಸಿ ಅವಳಿಂದ ತಿರಸ್ಕೃತನಾದ. ನಂತರ ಬ್ರಸೆಲ್ಸ್ ನಲ್ಲಿಯ ತನ್ನ ಸಂಬಂಧಿ ಹುಡುಗಿಯೊಬ್ಬಳನ್ನು ಪ್ರೀತಿಸಿ ಅದರಲ್ಲಿಯೂ ವಿಫಲನಾದ. ಸತತ ನೋವು, ನಿರಾಸೆ, ಅವಮಾನಗಳಲ್ಲೆ ಬದುಕು ಸವೆಸಿದ. ಎರಡನೇ ಪ್ರೇಮ ವೈಫಲ್ಯದ ನಂತರ ಬ್ರಸೆಲ್ಸ್ ತೊರೆದು ಹೇಗ್ ಪಟ್ಟಣಕ್ಕೆ ಬಂದು ನೆಲೆ ನಿಂತ... ಅಲ್ಲಿ ತೆರೆದುಕೊಳ್ಳುತ್ತೆ ನೋಡಿ....
ಅವನ ಪ್ರೇಮದ ಮಹೋನ್ನತ ದರ್ಶನ...! 

ಕ್ರಿಶ್ಚನ್ ಎಂಬ ವೇಶ್ಯೆಯ ಪರಿಚಯವಾಗಿ, ಪರಿಚಯ ಆತ್ಮೀಯತೆಗೆ ತಿರುಗಿ ಅವಳನ್ನು ಪ್ರೇಮಿಸಲಾರಂಭಿಸಿದ. ಅವಳಲ್ಲಿ ಪ್ರೇಮಯಾಚಿಸಿ, ಹೊಸ ಬದುಕಿನ ಕನಸು ತುಂಬಿ ಅವಳನ್ನು ತನ್ನ ಮುರುಕು ಜೋಪಡಿಗೆ ಕರೆ ತಂದ. ಅಲ್ಲಿ ದೌರ್ಭಾಗ್ಯವೆಂಬುದು ಕಾಲು ಚಾಚಿ ಮಲಗಿತ್ತು. ತನ್ನ ಹೊಟ್ಟೆ ತುಂಬಿಸುವುದೇ ದೊಡ್ಡ ಸಮಸ್ಯೆಯಾಗಿರುವಾಗ ಇವಳಿಗೆಲ್ಲಿ ಅನ್ನ ನೀಡಬಲ್ಲ? ಇಂಥ ನಿಷ್ಕೃಷ್ಟನನ್ನು ನಂಬಿ ಬಂದ ಅವಳಿಗೆ ಒಂದು ಬೆಚ್ಚನೆಯ ಪ್ರೀತಿ ಹೊರತು ಕೊಡಲು ಅವನಲ್ಲಿ ಏನೂ ಇರಲಿಲ್ಲ. ಆದರೆ ಪ್ರೀತಿ ಹೊಟ್ಟೆ ತುಂಬಿಸಲಾರದಲ್ವಾ? ವಿಪರೀತ ಚಳಿವುಂಟಾದಾಗ ಮೂಲೆಯಲ್ಲಿ ಮಾರಾಟವಾಗದ ರಾಶಿ ರಾಶಿ ಪೇಟಿಂಗ್ಸ್ ಇದ್ದವಲ್ಲಾ ಅವುಗಳಿಗೆ ಬೆಂಕಿ ಹಚ್ಚಿ ಉರಿಸಿ ಚಳಿ ನೀಗಿಸತೊಡಗಿದ್ದ. ಕೆಲವೇ ದಿನಗಳಲ್ಲಿ ಅವರಿಬ್ಬರಿಗೂ ಬದುಕಿನ ವಾಸ್ತವದ ದರ್ಶನವಾಯ್ತು. ಅವಳ ಮೊದಲ ವೇಶ್ಯಾ ಬದುಕು ಹೇಗಿತ್ತೋ ಏನೋ At list, ಹೊಟ್ಟೆಯಾದರೂ ತುಂಬುತ್ತಿತ್ತು. ಆದರೆ ಇಲ್ಲಿ ತುತ್ತು ಅನ್ನಕ್ಕೂ ಕಷ್ಟ. ಕೊನೆಗೆ ಅವರು ಬೇರೆ ಬೇರೆಯಾಗಲು ನಿರ್ಧರಿಸಿದರು.

ಹುಚ್ಚು ಪ್ರೇಮಿ ವ್ಯಾನ್ ಗೋ

ಅವನು ಬದುಕನ್ನರಸಿಕೊಂಡು ಪ್ಯಾರಿಸ್ ಗೆ ಹೋಗಲು ಸಿದ್ಧನಾದ. ಅವನು ತೊರೆದು ಹೋದ ನಂತರ ಅನ್ನಕ್ಕಾಗಿ ಅವಳು ಮತ್ತೆ ವೇಶ್ಯೆಯಾಗಲಿದ್ದಳು. ಅವನಿಗೆ ಕೊನೆಯ ವಿದಾಯ ಹೇಳಲು ಅವನೊಂದಿಗೆ ರೈಲ್ವೆ ಸ್ಟೇಷನ್ ವರೆಗೂ ಬಂದಳು. ಅವರಿಬ್ಬರೂ ರೈಲ್ವೆ ಸ್ಟೇಷನ್ ಕಡೆಗೆ ಹೆಜ್ಜೆ ಹಾಕುತ್ತಿರುವಾಗ ಇಬ್ಬರ ನಡುವೆ ಪ್ರೇಮ ದಕ್ಕಿದ್ದರೂ ದಕ್ಕಿಸಿಕೊಳ್ಳಲಾರದ ಅಸಹಾಯಕತನ ದಟ್ಟವಾಗಿತ್ತು. ಇಬ್ಬರ ಮುಖದಲ್ಲಿ ಕಣ್ಣೀರು, ನೋವು, ವಿಷಾದ, ದುಃಖ ಮಡುವುಗಟ್ಟಿತ್ತು. ಅಗಲಿಕೆಯ ನೋವು ಇಬ್ಬರಲ್ಲೂ ಇತ್ತಾದರೂ ಅದು ಇಬ್ಬರಿಗೂ ಅನಿವಾರ್ಯವಾಗಿತ್ತು. ರೈಲು ಹೊರಡಲು ಸಿದ್ಧವಾಗಿ ನಿಂತಿತ್ತು. ಫ್ಲಾಟ್ ಫಾರಂ ಮೇಲೆ ಎದುರುಬದುರಾಗಿ ನಿಂತಿದ್ದ ಇಬ್ಬರ ಕಣ್ಣಲ್ಲೂ ವಿವರಿಸಲಾರದ ವೇದನೆ...! ಕೇವಲ ನನ್ನ ಪ್ರೇಮವನ್ನು ನಂಬಿ ಬಂದು ಇಷ್ಟು ದಿನ ಜೀವನ ಹಂಚಿಕೊಂಡ ಇವಳಿಗೆ ಏನಾದರೂ ಕೊಡಬೇಕು ಎಂಬ ಭಾವ ಇದ್ದಕ್ಕಿಂದಂತೆ ಅವನನ್ನು ಕಾಡತೊಡಗಿತು. ಆದರೆ ಕೊಡಲು ಏನಿದೆ..? ತನ್ನ ದೌರ್ಭಾಗ್ಯವನ್ನು ನೆನೆದು ಕಣ್ಣೀರಾದ. ರೈಲು ಶಿಳ್ಳೆಹಾಕುತ್ತಾ ಹೊರಡುವ ಸೂಚನೆ ನೀಡಿ ನಿಧಾನವಾಗಿ ಚಲಿಸಲಾರಂಭಿಸಿತು. ಕೂಡಲೇ ತನ್ನ ಹರುಕು ಕೋಟಿನ ಜೇಬಿನೊಳಗಿನಿಂದ ಫಳಫಳಿಸುವ ಹರಿತವಾದ ಬ್ಲೇಡ್ ವೊಂದನ್ನು ತೆಗೆದುಕೊಂಡವನೇ ತನ್ನ ಕಿವಿಯೊಂದನ್ನು 'ಕಸಕ್' ಎಂದು ಸಂಪೂರ್ಣವಾಗಿ ಕತ್ತರಿಸಿ ಅವಳ ಅಂಗೈಯಲ್ಲಿಟ್ಟು " ಇದು ನನ್ನ ನೆನಪಿಗಿರಲಿ" ಎಂದು ಹೇಳಿ ಧಾರಾಕಾರವಾಗಿ ಸುರಿಯುತ್ತಿದ್ದ ರಕ್ತದೊಂದಿಗೆ ಓಡಿಹೋಗಿ ಚಲಿಸುತ್ತಿದ್ದ ರೈಲಿನ ಬೋಗಿಯನ್ನು ಹತ್ತಿಕೊಂಡು ಕಣ್ಮರೆಯಾದ.
ವ್ಯಾನ್ ಗೋ ನ ಪ್ರಸಿದ್ಧ ಕಲಾಕೃತಿ “ಕೆಫೆ ಟೆರೆಸ್ ಅಟ್ ನೈಟ್”

ಪ್ರೇಮ ಮನುಷ್ಯನನ್ನು ನಿಜಕ್ಕೂ ಇಷ್ಟು ಭಾವುಕನನ್ನಾಗಿ, ಹುಚ್ಚನನ್ನಾಗಿ, ವಿಕ್ಷಿಪ್ತನನ್ನಾಗಿ ಮಾಡಿಬಿಡುತ್ತದೆಯಾ? ಒಂದು ಹಿಡಿ ಪ್ರೇಮಕ್ಕಾಗಿ ಮನುಷ್ಯ ಏನೆಲ್ಲಾ ಮಾಡಿಬಿಡಲು ಸಿದ್ಧನಾಗಿಬಿಡುತ್ತಾನಲ್ಲವಾ..? ಜಗತ್ತಿನಲ್ಲಿ ಪ್ರೇಮವೊಂದು ಇರದೇ ಹೋಗಿದ್ದರೆ.....?

ಮುಂದೆ ಅವನು ಅತಿಯಾದ ಮಾನಸಿಕ ಖಿನ್ನತೆಯಿಂದಾಗಿ ತನ್ನ ಮುವ್ವತ್ತೇಳನೆ ವಯಸ್ಸಿನಲ್ಲಿ 1890 ಜುಲೈ 27 ರಂದು ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ. ವಿಚಿತ್ರ ನೋಡಿ, ಅವನು ಬದುಕಿದ್ದೇ ಮೂವತ್ತೇಳು ವರ್ಷ
(1853 - 1890). ಮೊದಲ ಕಲಾಕೃತಿ ರಚಿಸಿದಾಗ ಅವನ ವಯಸ್ಸು 28. ಅಲ್ಲಿಂದ ಅವನು ಸಾಯುವವರೆಗೆ (1890) ಅಂದರೆ ಒಟ್ಟು ಒಂಬತ್ತು ವರ್ಷದ ಅವಧಿಯಲ್ಲಿ ಅವನು ರಚಿಸಿದ ಕಲಾಕೃತಿಗಳ ಸಂಖ್ಯೆ ಅನಾಮತ್ತು 900. ಮತ್ತು ಅವನು ಬದುಕಿದ್ದಾಗ ಮಾರಾಟವಾದ ಕಲಾಕೃತಿ ಕೇವಲ ಒಂದು ಮಾತ್ರ..!  ಅವನು ಸತ್ತ ನಂತರ ಅವನ ಕಲಾಕೃತಿಗಳು ಕೋಟ್ಯಾಂತರ ಡಾಲರ್ಗಳ ಲೆಕ್ಕದಲ್ಲಿ ಮಾರಾಟವಾದವು. ಅನೇಕ ಮ್ಯೂಸಿಯಂಗಳಲ್ಲಿ ಇಂದಿಗೂ ಅವನ ಕಲಾಕೃತಿಗಳು ಬಿಗಿಭದ್ರತೆಯಲ್ಲಿವೆ. ಶಸ್ತ್ರಸಜ್ಜಿತ ಯೋಧರ ರಕ್ಷಣೆಯಲ್ಲಿ ಅವನ ಕಲಾಕೃತಿಗಳ ಪ್ರದರ್ಶನಗಳು ಏರ್ಪಡುತ್ತವೆ.

ಅಂದಹಾಗೆ, ಬದುಕಿದ್ದಾಗ ತನ್ನ ಕಲಾಕೃತಿಗಳಿಂದ ಒಂದು ಹೊತ್ತಿನ ಊಟವನ್ನು ಮಾಡದೇ ನಿರ್ಗತಿಕನಾಗಿ, ನಿಷ್ಕೃಷ್ಟನಾಗಿ ಸತ್ತುಹೋದ ಮಹಾನ್ ಕಲಾವಿದನ ಹೆಸರು....

ವ್ಯಾನ್ ಗೊ..!

ವಿನ್ಸೆಂಟ್ ವಿಲ್ಲೆಮ್ ವ್ಯಾನ್ ಗೋ..!!


ನಿಮ್ಮವನು,
ರಾಜ್



2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಪ್ರೇಮದ ನೋವು ನಿತ್ಯ ನಿರಂತರ ರಾಜ್....!

Kinnarloka.blogsopt.com ಹೇಳಿದರು...

Nice bro