ಶುಕ್ರವಾರ, ಜೂನ್ 5, 2020

ಹೀಗೊಂದು ಪ್ರಯಾಸದ ಪ್ರಯಾಣ


ಅವು ನಾನು ಎಂ.ಎ ಓದುತ್ತಿದ್ದ ದಿನಗಳು. ಸಂಡೂರಿನ ದಟ್ಟ ಅರಣ್ಯ ಪರಿಸರದ ನಂದಿಹಳ್ಳಿ ಪಿ.ಜಿ. ಸೆಂಟರ್ ಮನಸ್ಸಿಗೆ ಉಲ್ಲಾಸ ನೀಡುತ್ತಿತ್ತು. ಅದರ ಅನುಭವದ ಬಗ್ಗೆ ಬರೆಯೋದು ತುಂಬಾ ಇದೆ. ಅದರ ಒಂದು ಭಾಗ ಇಲ್ಲಿದೆ....

ಎಂ.ಎ ತರಗತಿಯಲ್ಲಿ ನಾವಿದ್ದುದ್ದೇ 15 ವಿದ್ಯಾರ್ಥಿಗಳು. ಅದ್ರಲ್ಲಿ ಇಬ್ಬರೇ ಹುಡುಗಿಯರು! ಸ್ನೇಹಿತರಂತ ಮೂವರು ಗುರುಗಳು. ಮೂರನೇ ಸೆಮಿಸ್ಟರ್ ಮುಗಿದು ಸ್ವಲ್ಪ ಎಲ್ಲರೂ ರಿಲ್ಯಾಕ್ಸ್ ಆದಾಗ ಟೂರ್ ಹೋಗೋಣ ಎಂಬ ಪ್ರಸ್ತಾಪ ಬಂತು. ಸರಿ, ನಾವೆಲ್ಲರೂ (ಗುರುಗಳು ಸೇರಿದಂತೆ) ಚರ್ಚೆಮಾಡಿ ಟೂರ್ ನ ಅಂತಿಮ ರೂಪು ರೂಪುರೇಷೆ ಸಿದ್ಧಪಡಿಸಿದೆವು. ಜೋಗ್, ಮುರುಡೇಶ್ವರ, ಇಡಗುಂಜಿ, ಹೊರನಾಡು, ಶೃಂಗೇರಿ, ಧರ್ಮಸ್ಥಳ, ಕೊಲ್ಲೂರು..... ಇತ್ಯಾದಿ. ಒಟ್ಟು ಮೂರು ದಿನಗಳ ಟೂರ್ ಅದು. ನಂದಿಹಳ್ಳಿಯದೇ ಆದ ಕ್ರೂಸರ್ ಜೀಪ್ ನ್ನು ಟೂರ್ ಗೆ ಫಿಕ್ಸ್ ಮಾಡಿದೆವು. ಎಲ್ಲರೂ ನಸುಕಿನಲ್ಲಿ ಎದ್ದು ಲಗುಬಗೆಯಿಂದ ರೆಡಿಯಾಗಿ ಖುಷಿಯಿಂದ ಹೊರೆಟೆವು. ನಗು, ಹರಟೆ, ಕೇಕೆ ಹೀಗೆ ಸಾಗಿತ್ತು ನಮ್ಮ ಪಯಣ. ನಮ್ಮ ಗುರುಗಳಂತೂ ನಮ್ಮೊಂದಿಗೆ ಗೆಳೆಯರಂತೆ ನಮ್ಮ ಹರಟೆ ನಗುವಿನಲ್ಲಿ ಪಾಲ್ಗೊಂಡಿದ್ದರು. ಮೊದಲ ದಿನದ ಪಯಣದಲ್ಲಿ ನಮ್ಮ ಜೀಪ್ ಉಜಿರೆ, ಕೊಟ್ಟೆಗೆಹಾರವನ್ನು ದಾಟಿ ಧರ್ಮಸ್ಥಳಕ್ಕೆ ಹೊರಟಿತ್ತು. ಮೊದಲೇ ಹಾವುಹಾದಿ. ಅಸಂಖ್ಯಾತ ತಿರುವುಗಳ ಘಟ್ಟ ಪ್ರದೇಶ. ನಮ್ಮ ಜೀಪ್ ನಿಧಾನವಾಗಿ ಘಟ್ಟ ಏರುತ್ತಿತ್ತು. ಎಲ್ಲರೂ ಕೂಗಾಡಿ ಕಿರುಚಾಡಿ ಸುಸ್ತಾದವರಂತೆ ಸುಮ್ಮನಾಗಿದ್ದರು. ಜೀಪ್ ಕಿಟಕಿಯೊಳಗಿನಿಂದ ಸುತ್ತಲಿನ ಹಸಿರು, ಮೈ ನವಿರೇಳಿಸುವ ಪ್ರಪಾತ ಸುಮ್ಮನೇ ನೋಡುತ್ತಿದ್ದೆ. ಈ ಮುಂಚೆ ಧರ್ಮಸ್ಥಳವನ್ನು ನೋಡಿದ್ದರೂ ಪ್ರತಿಸಲ ನೋಡಿದಾಗ ಏನೋ ಹೊಸದನ್ನು ನೋಡಿದಂತೆ ಅನಿಸುತ್ತಿತ್ತು. ಪ್ರಕೃತಿಯೇ ಹಾಗೆ, ಅದು ನಮ್ಮನ್ನು ತನ್ನ ತೆಕ್ಕೆಯೊಳಗೆ ಎಳೆದುಕೊಂಡು ಸಮ್ಮೋಹನಗೊಳಿಸುತ್ತೆ.


ಜೋಗ್ ಜಲಪಾತದ ಸನ್ನಿಧಿಯಲ್ಲಿ… (ಕುಳಿತವರ ಪೈಕಿ ಮಧ್ಯೆ ಇರುವವನೇ ಘೋರ ಮಿತ್ರ “ಬ್ಯಾಲಾಳ್ ನಾಗು..!)

ನಿರ್ಜನ ದಟ್ಟಡವಿಯ ಮಧ್ಯೆ ನಿಶ್ಯಬ್ದವಾಗಿ ಚಲಿಸುತ್ತಿದ್ದ ನಮ್ಮ ಜೀಪ್ ನೊಳಗಿನಿಂದ "ವಂಯಕ್... ವಂಯಕ್" ಎಂಬ ಘನಘೋರ ಸದ್ದು ಕೇಳಿ ಬಂತು. ಬೆಚ್ಚಿಬಿದ್ದೆ..! ಯಾವ ಅನಾಹುತ ಆಗಬಾರದೆಂದು ಅಂದುಕೊಂಡಿದ್ದೆವೋ ಅದು ನಿರಾತಂಕವಾಗಿ ಸಂಭವಿಸುತ್ತಿತ್ತು. ಹಾವು ಹಾದಿಯ ತಿರುವುಗಳಿಗೆ ತಲೆತಿರುಗಿ ಮಿತ್ರನೊಬ್ಬ ಜೀಪ್ ನ ಕಿಟಕಿಯಾಚೆ ತಲೆ ಹೊರಗೆ ಹಾಕಿ ಪ್ರಕೃತಿಯ ಮಡಿಲಿಗೆ ತನ್ನ ಮೊದಲ ಕಾಣಿಕೆಯನ್ನು ಧಾರಾಳವಾಗಿ ನೀಡುತ್ತಿದ್ದ. ಅದರ ಪರಿಮಳ ನಿಧಾನವಾಗಿ ಜೀಪ್ ನ ಒಳಗೆ ಹರಡಲಾರಂಭಿಸಿತು. ಅದರಿಂದಾಗಿಯೋ ಅಥವಾ ತಿರುವುಗಳಿಂದಾಗಿಯೋ ಒಟ್ಟಿನಲ್ಲಿ ಒಬ್ಬೊಬ್ಬರಾಗಿ ವಂಯಕ್... ವಂಯಕ್... ಎನ್ನುತ್ತಾ ತಮ್ಮ ಶಕ್ತಾನುಸಾರವಾಗಿ ಪ್ರಕೃತಿಗೆ ಕಾಣಿಕೆಯನ್ನು ಸಲ್ಲಿಸಲಾರಂಭಿಸಿ ಸುಸ್ತಾಗತೊಡಗಿದರು. ನಮ್ಮ ಡ್ರೈವರ್ ಎಲ್ಲಿ ಇವರೆಲ್ಲಾ ನನ್ನ ಜೀಪ್ ನಲ್ಲೆ ಕಾಣಿಕೆ ಸುರುವಿ ತುಂಬಿಸಿಬಿಡುತ್ತಾರೋ ಎಂದು ಆತಂಕಿತನಾಗಿ ಅಲ್ಲಲ್ಲಿ ಜೀಪ್ ನಿಲ್ಲಿಸುತ್ತಿದ್ದ. ಪ್ರಕೃತಿಮಾತೆಯ ನಡುವೆ ಹೀಗೆ ಕಾಣಿಕೆ ಸಲ್ಲಿಸುವಿಕೆ ನಡೆಯುತ್ತಿತ್ತು. ಕೊನೆಗೆ ನಮ್ಮ ಗುರುಗಳೂ ಕಾಣಿಕೆ ಸಲ್ಲಿಸಿದ್ದೂ ಆಯ್ತು. ಬಹುತೇಕ ನನ್ನ ಗೆಳೆಯರೆಲ್ಲ ಕಾಣಿಕೆ ಸಲ್ಲಿಸಿ ನಿರಾಳವಾಗಿದ್ದರು, ಕೆಲವರು ಸುಸ್ತಾಗಿದ್ದರು. ಕಾಣಿಕೆ ಸಲ್ಲಿಸದವರೆಂದರೆ ನನ್ನನ್ನು ಒಳಗೊಂಡಂತೆ ಮೂರು ಜನ ಇದ್ದೆವು. ಅದೇನೋ ಗೊತ್ತಿಲ್ಲ, ಮೊದಲಿನಿಂದಲೂ ನನಗೆ ದೂರದ ಪ್ರಯಾಣ ಸುಸ್ತು ತರಿಸುವುದಿಲ್ಲ. ಘಟ್ಟದ ತಿರುವುಗಳು ತಲೆ ತಿರುಗಿಸುವುದಿಲ್ಲ, ವಾಂತಿ ತರಿಸುವುದಿಲ್ಲ. 
ಮುರುಡೇಶ್ವರದಲ್ಲಿ… (ಕೈ ಕಟ್ಟಿಕೊಂಡು ನಿಂತಿರುವವನೇ ರಾಜ್!)


ಕ್ರೂಸರ್ ಜೀಪ್ ನ ಹಿಂದೆ ಎದುರು ಬದಿರಾಗಿ ಉದ್ದವಾದ ಸೀಟ್ ಇರುತ್ತಲ್ಲಾ, ಅಂಥ ಸೀಟ್ ವೊಂದರ ಮಧ್ಯೆ ನಾನು ಕುಳಿತಿದ್ದೆ. ನನ್ನ ಅಕ್ಕಪಕ್ಕದಲ್ಲಿ ಗೆಳೆಯರು ಒತ್ತೊತ್ತಾಗಿ ಕುಳಿತಿದ್ದು, ಸರಿದಾಡಲು ಜಾಗವೇ ಇರಲಿಲ್ಲ. ಹದಿನೈದು ಸೀಟ್ Capacity ಯ ಕ್ರೂಸರ್ ಜೀಪ್ ನಮ್ಮ ಗುರುಗಳನ್ನು, ಡ್ರೈವರ್ ನ್ನು ಒಳಗೊಂಡಂತೆ ಹದಿನೆಂಟು ಜನರನ್ನು ತುಂಬಿಕೊಂಡು ತುಳುಕುತ್ತಿತ್ತು. ಹಿಂದೆ ಕುಳಿತಿದ್ದ ನನಗೆ ಸರಿಯಾಗಿ ಎದುರಿನ ಸೀಟ್ ನಲ್ಲಿ ನನ್ನ ಘೋರ ಮಿತ್ರ ಬಿ.ನಾಗರಾಜ ಅಲಿಯಾಸ್ ಬ್ಯಾಲಾಳು ನಾಗಣ್ಣ ಕುಳಿತಿದ್ದ. ಘಟ್ಟ ಏರುತ್ತಿದ್ದ ಜೀಪ್ ಒಂದು ಐತಿಹಾಸಿಕ ತಿರುವಿನಲ್ಲಿ ಹೊರಳಿದ ಕೂಡಲೇ ಬ್ಯಾಲಾಳು ನಾಗುವಿನ ಕನ್ನಡಕದ ಹಿಂದಿನ ಕಣ್ಣುಗಳಲ್ಲಿ ಪ್ರಕ್ಷುಬ್ಧದ ಅಲೆ ಏಳಲಾರಂಭಿಸಿತು. ಕ್ಷಣ ಕ್ಷಣಕ್ಕೂ ಅವನ ಮುಖ ವಿವರ್ಣವಾಗತೊಡಗಿತು. ಹೊಟ್ಟೆಯೊಳಗಿನಿಂದ ಉಕ್ಕುತ್ತಿದ್ದ ವಾಂತಿಯನ್ನು ತಡೆಹಿಡಿವ ಪ್ರಯತ್ನ ನಡೆಸಿದ ಬ್ಯಾಲಾಳು ನಾಗು ಒಂದು ಕೈಯಲ್ಲಿ ಬಾಯಿಯನ್ನು , ಇನ್ನೊಂದು ಕೈಯಲ್ಲಿ ಹೊಟ್ಟೆಯನ್ನು ಅದುಮಿಡಲಾರಂಭಿಸಿದ. ಅವನ ಎದುರಿಗೇ ಕುಳಿತಿದ್ದ ನನ್ನೆದೆ 'ಧಸಕ್' ಅಂತು. ವಾಂತಿ ಬಂದಾಗ ಹಿಂದೆ ತಿರುಗಿ ಕಿಟಕಿಯಲ್ಲಿ ತಲೆ ಹೊರಗೆ ಹಾಕಿ ಸುರುವಿದ್ದರೂ ಸಾಕಿತ್ತು. ಆದರೆ ಈ ಮಿತ್ರ ಅದ್ಯಾವುದು ಮಾಡದೇ ಉಕ್ಕಿ ಬರುವ ಪ್ರವಾಹವನ್ನು ತಡೆಯುವ ವ್ಯರ್ಥ ಪ್ರಯತ್ನ ನಡೆಸಿದ. ನಾನು ಯಾವುದು ಸಂಭವಿಸಬಾರದೆಂದು ಅಂದುಕೊಂಡಿದ್ದೇನೋ ಅದು ಘಟಿಸಿಯೇಬಿಟ್ಟಿತು...!! "ರ್ರುಂಳ್ಳ್..." ಎಂಬ ವಿಚಿತ್ರ ಸದ್ಧಿನೊಂದಿಗೆ ಅವನ ಹೊಟ್ಟೆಯೊಳಗಿನಿಂದ ವಾಂತಿ ಸಾವಿರ ಕಿಲೋಮೀಟರ್ ವೇಗದೊಂದಿಗೆ ಹೊರಗೆ ಮುನ್ನುಗ್ಗಿತು. ಬ್ಯಾಲಾಳು ತನ್ನ ಬಾಯನ್ನು ಇನ್ನಷ್ಟು ಬಿಗಿಗೊಳಿಸಿದ. ಆದರೆ ಚಂಡಮಾರುತದ ಮುಂದೆ ನಿಂತ ಹುಲ್ಲುಕಡ್ಡಿಯಂತಾಯ್ತು ಅವನ ಸ್ಥಿತಿ. ನಾನಂತೂ ಮುಂದಿನ ಕ್ಷಣ ನೆನಪಿಸಿಕೊಂಡೆ ನಡುಗಿ ಹೋಗಿದ್ದೆ. ಎದ್ದುಹೋಗುವುದು ಒತ್ತಟ್ಟಿಗಿರಲಿ, ಒಂದು ಇಂಚು ಸರಿದುಕೊಳ್ಳಲು ಜೀಪ್ ನಲ್ಲಿ ಜಾಗವಿರಲಿಲ್ಲ. ಮರಣದಂಡನೆಗೆ ಒಳಗಾದ ಖೈದಿ ತನ್ನ ಕೊನೆಯ ಕ್ಷಣದಲ್ಲಿ ಸುಮ್ಮನೇ ನಿರ್ಭಾವುಕನಾಗಿ, ನಿಸ್ಸಹಾಯಕನಾಗಿ, ನಿತ್ರಾಣವಾಗಿ ಬಿಡುತ್ತಾನಲ್ಲಾ.... ಥೇಟ್ ನನ್ನ ಮನಸ್ಥಿತಿಯೂ ಹಾಗೆ ಆಗಿಬಿಟ್ಟಿತು. ಬಾಯಿಯನ್ನು ಬಿಗಿಯಾಗಿ ಮುಚ್ಚಿಕೊಂಡಿದ್ದ ಅವನ ಕೈ ಬೆರೆಳುಗಳ ಸಂಧಿಯಿಂದ ವಾಂತಿಯೆಂಬುದು ಕಾರಂಜಿಯಂತೆ ಛಿಲ್ಲನೇ ಚಿಮ್ಮಿ ಎದುರಿಗೆ ಕುಳಿತಿದ್ದ ನನ್ನ ಇಡೀ ಶರ್ಟ್ ನ್ನು ತೋಯಿಸಿಲಾರಂಭಿಸಿತು. ದೇವರೇ...!! ನಾನು ನಾನಾಗಿ ಉಳಿಯಲಿಲ್ಲ. ಟೂರ್ ಉತ್ಸಾಹ ಜರ್ರನೇ ಇಳಿದುಹೋಯ್ತು.

ಮಿತ್ರ ಭಯಂಕರ “ಬ್ಯಾಲಾಳ್ ನಾಗು”

ಅಷ್ಟಕ್ಕೆ ಮುಗಿದುಹೋಗಿದ್ದರೆ ಸರಿಹೋಗ್ತಿತ್ತೇನೋ... ಆದರೆ ಈ ಬ್ಯಾಲಾಳು ನಾಗಣ್ಣ ಅದ್ಯಾವ ಶತಮಾನದ ದ್ವೇಷ ಇಟ್ಟುಕೊಂಡಿದ್ದನೋ ಏನೋ... ಅಷ್ಟಕ್ಕೇ ಸುಮ್ಮನೇ ಬಿಡಲಿಲ್ಲ. ಶ್ವೇತ ಕಾರಂಜಿಯ ಪ್ರೋಕ್ಷಣೆ ಮುಗಿದ ಕೂಡಲೇ "Sorry ರಾಜ್... Sorry..." ಎಂದು ಮುಖದಲ್ಲಿ Guilt ತುಂಬಿಕೊಂಡು ನನ್ನ ಶರ್ಟ್ ಗೆ ಮೆತ್ತಿಕೊಂಡಿದ್ದ ಅವನ ಅವಶೇಷವನ್ನು ಬಳಿಯಲಾರಂಭಿಸಿದ. ಮೈಮೇಲೆ ಬೆಂಕಿ ಬಿದ್ದಹಾಗೆ ಆಯ್ತು. "ಹೇ... ಮಾರಾಯ ಬಿಡೋ... ಸಾಕು ಬಿಡೋ.." ನಾನು ಕ್ಷೀಣವಾಗಿ ಕೂಗಿದೆ. ಅದರ ಪರಿವಿಲ್ಲದಂತೆ ಶರ್ಟ್ ಗೆ ಇನ್ನಷ್ಟು ತನ್ನ ಅವಶೇಷದ ವ್ಯಾಪ್ತಿಯನ್ನು ವಿಸ್ತರಿಸಿ ಸ್ವಚ್ಛಗೊಳಿಸಿದವನಂತೆ ತೃಪ್ತನಾಗಿ ಸುಮ್ಮನಾದ. ಯುದ್ಧದಲ್ಲಿ ಸೋತು ಓಡಿಹೋಗಿ ಬಳಲಿ ಬೆಂಡಾಗಿ ಅಡಗುತಾಣದಲ್ಲಿ ಅಡಗಿಕೊಂಡ ಯುದ್ಧಖೈದಿಯಂತಾಯಿತು ನನ್ನ ಪರಿಸ್ಥಿತಿ. ಮೈ ಮುದುಡಿಕೊಂಡೇ ಕುಳಿತೆ. "ದೇವರೇ... ಬೇಗ ಈ ಸ್ಥಿತಿಯಿಂದ ಪಾರುಮಾಡು..." ಎಂದು ಮೊರೆಯಿಟ್ಟೆ. ಸುತ್ತಲಿನ ನಿಸರ್ಗ ಸೌಂದರ್ಯ ಸವಿಯುವ ನನ್ನ ಉತ್ಸಾಹ ಯಾವಾಗಲೋ ಸತ್ತುಹೋಗಿತ್ತು. ಮುಂದೆ ಧರ್ಮಸ್ಥಳ ತಲುಪಿದಾಗ ಸ್ನಾನಮಾಡಿ ಬಟ್ಟೆ ಬದಲಾಯಿಸಿದ್ದು ಆಯ್ತು. ಆದರೆ ಸ್ನಾನದ ನಂತರವೂ ಮೈಗೆ ವಾಂತಿ ಮೆತ್ತಿಕೊಂಡಿರುವಂತೆ, ಅದೇ ವಾಸನೆ ಪಯಣದ ಉದ್ದಕ್ಕೂ ಕಾಡಿದ್ದು ಸುಳ್ಳಲ್ಲ.......!


- ನಿಮ್ಮವನು
ರಾಜ್