ಬುಧವಾರ, ಜನವರಿ 1, 2020

ನಾನು, ಅವಳು ಮತ್ತು ಮೌನ


ಕೋಪದ ಕುಲುಮೆಯಲ್ಲೀಗ
ಪ್ರೇಮದ ಮೊಳಕೆಯೊಡೆಯುತಿದೆ
ಮೌನದಲ್ಲೀಗ ವಿಷಾದವಿಲ್ಲ
ಮಾತುಗಳೇ ಮೂಕವಾಗಿ
ತುಟಿಗಳೇ ಸ್ತಬ್ಧವಾಗಿ
ಕಣ್ಣುಗಳು ಮಾತಾಡತೊಡಗಿವೆ

ಮೌನದ ಭಾಷೆಗೆ
ಭಾಷಾಂತರದ ಹಂಗೇಕೆ...?

ಈಗೀಗ ಮಾತು ಬೇಕೆನಿಸುತ್ತಿಲ್ಲ
ಮೌನದೂರಿನಲ್ಲಿ ವಿಹರಿಸುತ್ತಾ
ಸುಮ್ಮನೇ ನಿನ್ನೊಂದಿಗೆ
ಹೆಜ್ಜೆ ಹಾಕಬೇಕು
ಅಂತ್ಯವಿಲ್ಲದ ಹಾದಿಯಲ್ಲಿ...

ಚಡಪಡಿಸುವ ಹೃದಯದ
ಪಿಸುಮಾತುಗಳನ್ನು ನಿನಗೆ
ಕೇಳಿಸಬೇಕೆನಿಸಿದೆ

ಒಮ್ಮೆ ಕಣ್ಣಲ್ಲಿ ಕಣ್ಣಿಟ್ಟು ನೋಡು
ಅಲ್ಲಿ ನೀ ಓದಲಾರದ ಸಾವಿರಾರು
ಸಾಲುಗಳ ಒಲುಮೆಯ
ಮಹಾಕಾವ್ಯವಿದೆ

ಬಿಸಿಲೂರಿನ ತುಂಬೆಲ್ಲಾ
ಈಗ ಬೆಳದಿಂಗಳ ಹೊಳಪು
ಚೆಲ್ಲಿಕೊಂಡ ಕನಸುಗಳನ್ನಿಲ್ಲಿ
ಆಯುತಿರುವೆ, ಜೊತೆಯಾಗು ಗೆಳತಿ

ನಿನ್ನ ರೆಪ್ಪೆಯೊಳಗಿನ ಕಣ್ಣ
ಕದಲಿಕೆಯ ಸದ್ದಿನಲ್ಲಿ ನಿಶ್ಯಬ್ದವಾಗಿ
ಕದಲದೇ ಕರಗಿಹೋಗಬೇಕಾಗಿದೆ
ಕರೆದುಕೋ ಒಮ್ಮೆ

ನಗು ಕೆನ್ನೆಯ ತಿರುವಿನ ಹಾದಿಯಲ್ಲಿ
ಆಯತಪ್ಪಿ ಬಿದ್ದು ವರುಷವೊಂದು
ಉರುಳಿದ್ದು ಗೊತ್ತೇ ಆಗಲಿಲ್ಲ ನೋಡು ಗೆಳತಿ

ಚಾಚಿರುವ ಕೈಯನ್ನು ಹಿಡಿದು ಬಿಡು ಒಮ್ಮೆ
ನೆನಪುಗಳ ಸಂತೆಯಲ್ಲಿ
ಸಂಭ್ರಮಿಸುತ್ತಾ ಕಳೆದುಹೋಗೋಣ

ನಿನ್ನ ಮುಂಗುರುಳ ತುದಿಯ
ಉರುಳಿಗೆ ಸಿಲುಕಿಕೊಂಡು
ಒದ್ದಾಡುವ ನನ್ನನ್ನು ನಾನು
ಬಿಡಿಸಿಕೊಳ್ಳಲು ಯಾಕೋ
ಇಷ್ಟವೇ ಆಗುತ್ತಿಲ್ಲ

ಕಾಡಿಸಿ ಪೀಡಿಸಿ ಕಿರುಬೆರಳ
ತುದಿಯಲ್ಲಿ ಗಿರಗಿರ ತಿರುಗಿಸಿ
ದೂರಕ್ಕೆಸೆದು ಹತ್ತಿರಕ್ಕೆಳೆದುಕೊಳ್ಳುವ
ನಿನ್ನೆಡೆಗೆ... ಈಗ ನನ್ನ ನಡಿಗೆ...

-
ರಾಜ್