ಬುಧವಾರ, ಜುಲೈ 1, 2020

ನಗುವಿನ ಹೂದೋಟದಲ್ಲಿ ಸದಾ ನಗುವ ಹೂ ಬ್ಯಾಲಾಳ್ ನಾಗು...!

ಬ್ಯಾಲಾಳು ದೊರೆಯೇ...  ನಿನಗ್ಯಾರು ಸರಿಯೇ…
ಸರಿಯೆಂದವರ ಹಲ್ಲು ಮುರಿಯೇ…!


ನಾನು ಎಂ.. ಓದುವಾಗ ಪರಿಚಯವಾದವನು ಬಿ. ನಾಗರಾಜ ಅಲಿಯಾಸ್ ಬ್ಯಾಲಾಳ್ ನಾಗು. ಎಂ..ಯಲ್ಲಿ ನನ್ನ ಸಹಪಾಠಿ ಗೆಳೆಯ. ಕೆಲವೇ ದಿನಗಳಲ್ಲಿ ಏಕವಚನದ ಆತ್ಮೀಯನಾಗಿಬಿಟ್ಟ. ನನ್ನೂರಿನಿಂದ ಕೂಗಳತೆಯ ದೂರದಲ್ಲಿರುವ ಪಕ್ಕದ ಬ್ಯಾಲಾಳ್ ಎಂಬ ಹಳ್ಳಿಯಿಂದ ಎದ್ದುಬಂದ ಅಪ್ಪಟ ಗ್ರಾಮೀಣ ಪ್ರತಿಭೆ ಅವನು...!

ಬ್ಯಾಲಾಳ್ ಅಸ್ಮಿತೆ

ಬರಗೂರು, ದೇವನೂರು, ಮಾಲಗತ್ತಿ, ಆಲನಹಳ್ಳಿ, ಆರನಕಟ್ಟೆ, ಹುಳಿಯಾರು.... ಸ್ಥಳನಾಮಗಳು ಕಿವಿಗೆ ಬಿದ್ದ ಕೂಡಲೇ ನೆನಪಾಗುವುದು ಊರುಗಳಲ್ಲ... ಊರನ್ನು ಮೀರಿನಿಂತ ವ್ಯಕ್ತಿತ್ವಗಳು. Of course, ಊರಿಗೊಂದು Identity ತಂದುಕೊಟ್ಟಿದ್ದಾರೆ. ಊರಿನ ಹಿರಿಮೆಯನ್ನು, ಗರಿಮೆಯನ್ನು ಹೆಚ್ಚಿಸಿದ್ದಾರೆ. ನಾಗು ಕೂಡಾ ಹಾಗೇ. ಎಲ್ಲಿಯೂ ಗುರುತಿಸಿಕೊಳ್ಳದೇ, ತನ್ನ ಪಾಡಿಗೆ ತಾನು ಮೌನವನ್ನೇ ಹೊದ್ದುಕೊಂಡಂತಿದ್ದ "ಬ್ಯಾಲಾಳ್" ಎಂಬ ಅಮಾಯಕ ಹಳ್ಳಿಯ ಹೆಸರನ್ನು ತನ್ಮೂಲಕ ವಿಖ್ಯಾತಗೊಳಿಸಿದ್ದಾನೆ. ಅದರಲ್ಲಿ ಸ್ವಲ್ಪ ನನ್ನದೂ ಪಾಲು ಇದೆಯೆನ್ನಿ. ನಾವು ಎಂ. ಓದುವಾಗ ನಾಗರಾಜ ಎನ್ನುವವರು ಇಬ್ಬರಿದ್ದರು. ಒಬ್ಬ ಜಿ.ಟಿ. ನಾಗರಾಜ, ಇನ್ನೊಬ್ಬ ಬಿ. ನಾಗರಾಜ. ಕರೆಯುವಾಗ ಕೇಳಿಸಿಕೊಳ್ಳುವ ಇಬ್ಬರಿಗೂ ಗೊಂದಲವಾಗಬಾರದೆಂಬ ಉದ್ದೇಶದಿಂದ ಬಿ. ನಾಗರಾಜನನ್ನು ನಾನು ಬ್ಯಾಲಾಳ್ ನಾಗರಾಜನನ್ನಾಗಿ ಮಾಡಿದೆ. ಜಿ.ಟಿ. ನಾಗರಾಜ "ಜೀಟ್ಗ್ಯಾ" ಆದಂತೆ ಬಿ. ನಾಗರಾಜ ಎಂಬ ಹೆಸರು ''ಬ್ಯಾಲಾಳ್ ನಾಗರಾಜ'' ಆಗಿ, ಅದು ಕೂಡಾ ಉದ್ದವೆನಿಸಿ ಕೆಲವೇ ದಿನಗಳಲ್ಲಿ ಕೇವಲ " ಬ್ಯಾಲಾಳ್ " ಆಗಿ ಮಾರ್ಪಾಟಾಗಿತು. ಅವನಿಗದು ಇಷ್ಟವೋ ಅನಿವಾರ್ಯವೋ ಗೊತ್ತಿಲ್ಲ... "ಹೇ... ಬ್ಯಾಲಾಳ್..." ಎಂದು ಕರೆದರೆ ಅದಕ್ಕೆ ಓಗೊಡುತ್ತಿದ್ದ. ಕೆಲವರು ಬ್ಯಾಲಾಳ್ ಎಂದು ಕರೆಯುವುದಕ್ಕೆ ತುಂಬಾ ತ್ರಾಸೆನಿಸಿ ಬ್ಯಾಲಾಳಿ ಎಂದು ಕರೆದರು. ಬ್ಯಾಲಾಳ್ ನಾಗ್, ಮಿಸ್ಟರ್ ಬ್ಯಾಲಾಳ್, ಬ್ಯಾಲಾಳಿ... ಹೀಗೆ ಕರೆದ ಹೆಸರುಗಳಿಗೆ ಹೊಂದಿಕೊಳ್ಳತೊಡಗಿದ. (ನಾಗರಾಜ ಎನ್ನುವುದನ್ನು 'ಸ್ನೇಕ್ ಕಿಂಗ್' ಎಂದು ಭಯಂಕರವಾಗಿ ಅನುವಾದಿಸಿದ ನಾನು "ಸ್ನೇಕ್" ಎಂದು ಕರೆದರೂ ಅನ್ನುತ್ತಿದ್ದ) Actually ಅವನ ಹೆಸರಿನೊಂದಿಗಿದ್ದ "ಬಿ" ಎಂಬ ಇನಿಷಿಯಲ್ ಅರ್ಥ 'ಬ್ಯಾಲಾಳ್' ಅಲ್ಲ. ಆದರೆ ನಾನು ಅದನ್ನು ಬ್ಯಾಲಾಳ್ ಎಂದು ಬದಲಾಯಿಸಿ ಹಾಗೆ ಕರೆಯಲಾರಂಭಿಸಿದೆ. ಎಲ್ಲರೂ ಹಾಗೆ ಕರೆಯಲಾರಂಭಿಸಿದರು. ಕೆಲವೇ ದಿನಗಳಲ್ಲಿ ಬ್ಯಾಲಾಳ್ ಎಂಬ ಸ್ಥಳನಾಮವು ವ್ಯಕ್ತಿನಾಮವಾಗಿ ಬದಲಾವಣೆಗೊಂಡಿತು. "ನಮ್ಮೂರಿನ ಹೆಸರನ್ನು ನಾನೇ ಮರೆತಿದ್ದೆ. ಅದನ್ನು ನೀನು ನನ್ನ ಹೆಸರಿಗಿಟ್ಟು ಪದೇಪದೇ ನೆನಪಿಸಿಕೊಳ್ಳುವ ಹಾಗೆ ಮಾಡಿದೆಯಲ್ಲೋ..." ಅಂತ ಹಲವು ಬಾರಿ ನನಗೆ ಹೇಳಿದ್ದ.

ನಂದಿಹಳ್ಳಿ ಗೆ ಗ್ರೇಟ್ ಎಂಟ್ರಿ

ಅವನು ನಗುತ್ತಾ, ನಗಿಸುತ್ತಾ ಎಲ್ಲರನ್ನು ಮಾತಿಗೆಳೆದುಕೊಳ್ಳುವ ಸ್ನೇಹಜೀವಿ. ಅವನೊಂದಿಗಿನ ನೆನಪುಗಳು ಅಪಾರ. ನೆನಪಿಸಿಕೊಂಡಾಗ ಇಂದಿಗೂ ತುಟಿಯಂಚಿನಲ್ಲಿ ನಗೆ ಉಕ್ಕಿಸುತ್ತದೆ. ಅವನು ಕೊಟ್ಟೂರಿನಲ್ಲಿ ಬಿ., ಬಳ್ಳಾರಿಯಲ್ಲಿ ಬಿ.ಇಡಿ. ಮುಗಿಸಿ ಸಂಡೂರಿನ ನಂದಿಹಳ್ಳಿಯ ಪಿ.ಜಿ. ಸೆಂಟರ್ ಗೆ ಎಂ. ಮಾಡಲು ಬಂದ ದಿನ ನನಗೆ ಅಂಗೈ ರೇಖೆಯಷ್ಟು ಸ್ಪಷ್ಟವಾಗಿ ನೆನಪಿದೆ. ಎಂ. ಗೆ ಅಡ್ಮಿಷನ್ ಮಾಡಿಸಿದ್ದರೂ ಕ್ಲಾಸ್ ಗೆ ಅವನು ಅಟೆಂಡ್ ಆಗಿರಲಿಲ್ಲ. ಡೈರೆಕ್ಟ್ ಆಗಿ ಎಕ್ಸಾಂ ಗೆ ಬರಬೇಕೆಂದುಕೊಂಡಿದ್ದನೇನೋ... ಮೊದಲ ಸೆಮಿಸ್ಟರ್ ಮುಗಿಯುತ್ತಾ ಬಂದಿತ್ತು. ಆಗ ತನ್ನ ಎಡಗಾಲನ್ನು ನಮ್ಮ ಪಿಜಿ ಸೆಂಟರ್ ಒಳಗೆ ಇಟ್ಟುಬಿಟ್ಟ! ಕಾಲವೆಂಬುದು ಸ್ತಂಭಿಸಿತು..!!

ಮೊದಲು ನಾಗುನನ್ನು ನಾನು ನಮ್ಮೂರಲ್ಲಿ ನೋಡಿದ್ದೆನಾದರೂ ಪರಿಚಯವಿರಲಿಲ್ಲ. ಅಷ್ಟಾಗಿ ಮನಸ್ಸಿನೊಳಗೂ ದಾಖಲಾಗಿರಲಿಲ್ಲ. ಅವತ್ತು ನಮ್ಮ ಪಿ.ಜಿ. ಸೆಂಟರ್ ಗೆ ಬಂದ ಮೊದಲ ದಿನ ಅವನ ಮುಖದಲ್ಲಿ ಯಾವುದೋ ಚಿಂತೆ, ದುಗುಡ ಎದ್ದು ಕಾಣುತ್ತಿತ್ತು. ಕೈಯಲ್ಲಿ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ತನ್ನ ಪದವಿಯ ಅಂಕಪಟ್ಟಿಗಳ ಜೆರಾಕ್ಸ್ ಪ್ರತಿಗಳನ್ನಿಕೊಂಡು ಬಂದಿದ್ದ. ಬಂದ ನಂತರ ಅವನಿಗೆ ಗೊತ್ತಾಗಿದ್ದೇನೆಂದರೆ ಎಂ..ಯನ್ನು ಇರ್ರೆಗ್ಯುಲರ್ ಆಗಿ ಮಾಡಲು ಇಲ್ಲಿ ಅವಕಾಶವಿಲ್ಲವೆಂಬುದು. ಬಹುಶಃ ಆಗ ಅವನಿಗೆ ಇದ್ದ ಅವಕಾಶಗಳು ಎರಡೇ... ಎಂ.. ಓದುವುದನ್ನು ಕೈ ಬಿಡುವುದು. ಅಥವಾ ರೆಗ್ಯುಲರ್ ಆಗಿ ಎಂ. ಓದುವುದು. ಇರ್ರೆಗ್ಯುಲರ್ ಆಗಿ ಎಂ.. ಮಾಡಲು ಅವನು ನಿರ್ಧರಿಸುವುದಕ್ಕೂ ಒಂದು ಕಾರಣವಿತ್ತು. ಬಿ.ಇಡಿ ಮುಗಿಸಿದ ಕೂಡಲೇ ಹೈಸ್ಕೂಲ್ ಶಿಕ್ಷಕರ ನೇಮಕಾತಿಗಾಗಿ ಸೀರಿಯಸ್ಸಾಗಿ ಎಲ್ಲಾದರೂ ರೂಂ ಮಾಡಿಕೊಂಡು ಓದಬೇಕು. ಹಾಗೆಯೇ ಅದರ ಜೊತೆಜೊತೆಗೆ ಒಂದು ಎಂ..ಯನ್ನು ರೆಗ್ಯುಲರ್ ಹೆಸರಿನಲ್ಲಿ ಇರ್ರೆಗ್ಯುಲರ್ ಆಗಿ ಮಾಡಿಬಿಡಬೇಕೆಂಬುದು. ಆದರೆ ನಂದಿಹಳ್ಳಿಯ ಪಿ.ಜಿ. ಸೆಂಟರ್ ನಲ್ಲಿ ಇರ್ರೆಗ್ಯುಲರ್ ಗೆ ಅವಕಾಶವಿಲ್ಲವೆಂಬುದು ಗೊತ್ತಾಗುವ ವೇಳೆಗೆ ಅವನು ಅಡ್ಮಿಷನ್ ಮಾಡಿಸಿದ್ದ. ಹಾಗೂ ಮೊದಲ ಸೆಮಿಸ್ಟರ್ ಎಕ್ಸಾಂ ಕಣ್ಮುಂದೆ ಬಂದಾಗಿತ್ತು. ಎಂ. ಗೆ ಅಡ್ಮಿಷನ್ ಮಾಡಿಸಿದ್ದರೂ ಕ್ಲಾಸ್ ಗೆ ಅಟೆಂಡ್ ಆಗಿರದಿದ್ದ ನಾಗುಗೆ ಇನ್ಮುಂದೆ ರೆಗ್ಯುಲರ್ ಆಗಿ ಕ್ಲಾಸ್ ಗೆ ಬರುತ್ತೀನಿ ಎಂದರೆ ಮಾತ್ರ ಮೊದಲ ಸೆಮಿಸ್ಟರ್ ಎಕ್ಸಾಂ ಬರೆಯಲು ಅನುಮತಿಸುವುದಾಗಿ ವಿಭಾಗದ ಮುಖ್ಯಸ್ಥರು ಸ್ಟ್ರಿಕ್ಕಾಗಿ ಹೇಳಿದ್ದರು. ನನಗೆ ನೆನಪಿದ್ದಂತೆ ನಾಗು ಆಗ ಅಡ್ಡ ಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ. ಎಂ. ಬಿಡುವುದೋ... ಬೇಡವೋ... ಎಂಬ ಗೊಂದಲದಲ್ಲಿದ್ದ. ಅದ್ಯಾವ ದೇವರು ಎದೆಗೆ ಒದ್ದಿತೋ ಗೊತ್ತಿಲ್ಲ... ಎಂ.. ರೆಗ್ಯುಲರ್ ಆಗಿ ಓದಲು ನಿರ್ಧರಿಸಿ ಮೊದಲ ಸೆಮಿಸ್ಟರ್ ಎಕ್ಸಾಂ ಬರೆದೂಬಿಟ್ಟ. ಅವನ ಜೀವನದ ಒಂದು ಮಗ್ಗುಲು ಹೊರಳಿತು.

ಬಯಲಿನಲ್ಲಿ ಬಯಲಾದವರು

ಬ್ಯಾಲಾಳ್ ನಾಗು ಗೆ ಮತ್ತು ನನಗೆ ಎಂ. ದಲ್ಲಿ ಎಲ್ಲರೂ ಸ್ನೇಹಿತರಾಗಿದ್ದರೂ ನಮ್ಮದೊಂದು ಗುಂಪು ಬೇರೆಯಿತ್ತು. ನಾನು, ಬ್ಯಾಲಾಳ್ ನಾಗು ಮತ್ತವನ ರೂಂ ಮೇಟ್ ಗೋಣಿಬಸವರಾಜ ಅಲಿಯಾಸ್ ಗೋಣಿ, ಬನ್ನಿಗೋಳ ಭೀಮಪ್ಪ ಮತ್ತವನ ರೂಂ ಮೇಟ್ ಮತ್ತಿಹಳ್ಳಿ ಮಂಜ ಅಲಿಯಾಸ್ ಕುನ್ನೇರ್ ಮಂಜ ಹಾಗೂ ಬ್ಯಾಲಾಳ್ ರೂಂ ಎದುರಿದ್ದ ರೂಂನಲ್ಲಿ ಒಬ್ಬನೇ ಚಿಂತಾಕ್ರಾಂತನಾಗಿ ಜೀವಿಸುತ್ತಿದ್ದ ಹನುಮನಹಳ್ಳಿ ನಾಗಪ್ಪ... ಇವರ ಪೈಕಿ ನಾನು ಮತ್ತು ಬ್ಯಾಲಾಳ್ ಹೊರತು ಪಡಿಸಿದರೆ ಉಳಿದವರೆಲ್ಲಾ ನಮ್ಮ ಜ್ಯೂನಿಯರ್ ಗಳೇ. Of course, ಅವರೂ ಎಂ. ಕನ್ನಡದವರು. ನಾವು ಎರಡನೇ ವರ್ಷದ ಎಂ. ಇದ್ದಾಗ ಬಂದವರು, ಅಷ್ಟೇ ಬೇಗ ಅತ್ಯಾಪ್ತ ಗೆಳೆಯರಾದವರು. ಗೋಣಿ ಮತ್ತು ಬ್ಯಾಲಾಳ್ ಒಂದೇ ಊರಿನವರು ಮತ್ತು ಬಾಲ್ಯದ ಗೆಳೆಯರು. ಹೀಗಾಗಿ ಅವರ ನಡುವೆ ಸಲುಗೆ ಜಾಸ್ತಿ. ಇವನು ಅವನಿಗೆ " ಲೇ ಗೋಣಿ... ಲೇ ಗೋಣಿ " ಎಂದು ಮಾತಾನಾಡಿಸಿದರೆ, ಅವನು ಇವನಿಗೆ "ಲೇ ನಾಗ.... ಲೇ ನಾಗ " ಎಂದು ಮಾತಾಡಿಸುತ್ತಿದ್ದ. ಇವರಿಬ್ಬರ ಮಾತು ಕೇಳುವುದಕ್ಕೆ ಖುಷಿ ಕೊಡುತ್ತಿತ್ತು. ಹಾಸ್ಟೆಲ್ ನಲ್ಲಿ ಶೌಚಾಲಯವಿದ್ದರೂ ಬಯಲು ವಿಸರ್ಜನೆಯು ಬ್ಯಾಲಾಳ್ ಮತ್ತು ಗೋಣಿಗೆ ಪ್ರಿಯವಾಗಿತ್ತು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಇಬ್ಬರೂ ಪ್ಲಾಸ್ಟಿಕ್ ಚೊಂಬಿನಲ್ಲಿ ನೀರು ತುಂಬಿಕೊಂಡು ಹಾಸ್ಟೆಲ್ ಹಿಂದುಗಡೆಯಿದ್ದ ವಿಶಾಲ ಗುಡ್ಡಗಳ ಸಮೂಹದಲ್ಲಿ ಪೊದೆಯೊಂದನ್ನು ಆರಿಸಿಕೊಂಡು ಧ್ಯಾನಾಸಕ್ತರಾಗುತ್ತಿದ್ದರು. ಪ್ರತಿಸಂಜೆಯೂ ಅವರೊಂದಿಗೆ ನಾನು, ಮಂಜ, ಭೀಮ ಸುಮ್ಮನೇ ಗುಡ್ಡದಲ್ಲಿ ಸುತ್ತಾಡೋಕೆ ಹೋಗುತ್ತಿದ್ದೆವು. ಬ್ಯಾಲಾಳ್, ಗೋಣಿಯರ ಬಹಿರ್ದೆಸೆಗೆ ಆಗಾಗ ಮಂಜ, ಭೀಮ ಕೂಡಾ ಸಾಥ್ ಕೊಡುತ್ತಿದ್ದರು. ಆಗ ನಾಲ್ಕು ಜನರ ಸಂಭಾಷಣೆ ರೋಚಕವಾಗಿರುತ್ತಿತ್ತು. ನಾಲ್ಕು ಪೊದೆಗಳ ಹಿಂದಿನಿಂದ ಅವರ ಮಾತು, ನಗು ಕೇಳಿಬರುತ್ತಿತ್ತು.

ಉಡುಪಿನಲ್ಲೊಂದು ಶಿಸ್ತು

ಬ್ಯಾಲಾಳ್ ನಾಗು ಕ್ಲಾಸ್ ನಿಂದ ಬಂದಮೇಲೆ ಪ್ಯಾಂಟ್ ಶರ್ಟ್ ಬಿಚ್ಚಾಕಿ ಬನಿಯನ್, ಒಂದು ತಿಳಿ ಕೇಸರಿ ಬಣ್ಣದ ಚೆಕ್ಸ್ ಟವೆಲ್ ನ್ನು ಸೊಂಟಕ್ಕೆ ಸುತ್ತಿಕೊಂಡರೆ ಮತ್ತೆ ಡ್ರೆಸ್ ಹಾಕಿಕೊಳ್ಳುವುದು ಮರುದಿನ ಬೆಳಿಗ್ಗೆಯೇ. ಟವೆಲ್ ಮತ್ತು ಬನಿಯನ್ ಗೆ ಅಷ್ಟು ಒಗ್ಗಿಕೊಂಡಿದ್ದ. ಅದವನ ಕಂಫರ್ಟ್ ಡ್ರೆಸ್. ಆದರೆ ಕ್ಲಾಸ್ ಗೆ ಬರುವಾಗ ಮಾತ್ರ ಇಸ್ತ್ರಿ ಮಾಡಿದ ಗರಿಗರಿ ಡ್ರೆಸ್ ನ್ನೇ ಉಡುತ್ತಿದ್ದ. ಒಂದು ದಿನವೂ ಇಸ್ತ್ರಿಯಿಲ್ಲದೇ ಕ್ಲಾಸ್ ಗೆ ಬಂದಿದ್ದನ್ನು ನಾ ಕಾಣೆ. ಉಡುಪಿನಲ್ಲಿ ಅವನಿಗೆ ಅಷ್ಟೊಂದು ಮಟ್ಟಸತನವಿತ್ತು. ಆದರೆ ಶಿಸ್ತು ಪುಸ್ತಕ ಓದುವಾಗ ಇರಲಿಲ್ಲ. ಪುಸ್ತಕಕ್ಕೇನಾದರೂ ಜೀವವಿದ್ದು ಅದು ಬ್ಯಾಲಾಳ್ ಕೈಗೇನಾದರೂ ಸಿಕ್ಕುಬಿಟ್ಟರೆ ಅದು ಖಂಡಿತಾವಾಗಿ ಸತ್ತುಹೋಗುತ್ತಿತ್ತು ಅನ್ಸುತ್ತೆ. ಅಷ್ಟೊಂದು ಹಿಂಸೆ ಮಾಡಿಬಿಡುತ್ತಿದ್ದ. ಗುಲಾಬಿ ಬಣ್ಣದ ನಾಲಿಗೆಯನ್ನು ಸರಕ್ಕನೇ ಹೊರಚಾಚಿ ತನ್ನ ಬಲಗೈಯ ನಡುವಿನ ಬೆರಳನ್ನು ನಾಲಿಗೆಯ ಎಂಜಲಲ್ಲಿ ತೋಯ್ಯಿಸಿ ಅದರಿಂದ ಪುಟ ತಿರುವಿಹಾಕುತ್ತಿದ್ದ ಪುಣ್ಯಾತ್ಮ..! ಒಮ್ಮೆ ಯಾವುದೊ ಪುಸ್ತಕವನ್ನು ಓದುತ್ತಿದ್ದವನು ಬೆರಳಿಗೆ ಉಗುಳು ಹಚ್ಚಿ ಇನ್ನೇನು ಪುಟ ತಿರುವಬೇಕೆನ್ನುವಷ್ಟರಲ್ಲಿ ಅವನ ಕೈ ಹಿಡಿದು "ಇದೇನೋ ಬ್ಯಾಲಾಳ್?" ಅಂದೆ. ಅವನ ಬೆರಳಿನ ಮೇಲೆ ಬಿಳಿ ಉಗುಳಿನ ಕುಪ್ಪೆಯಿತ್ತು. ಏನನ್ನೂ ಉತ್ತರಿಸದೇ ನಗುತ್ತಾ ಕೈ ಒರೆಸಿಕೊಂಡ. ಆಮೇಲೂ ಅಭ್ಯಾಸ ಬಿಡಲಿಲ್ಲ.

ಬ್ಯಾಲಾಳ್  TO  ಕೊಟ್ಟೂರು

ಬ್ಯಾಲಾಳ್ ನಾಗು ಅಪಾರ ದೈವಭಕ್ತಿಯನ್ನು ಹೊಂದಿದ್ದ. ಕೊಟ್ಟೂರಿನ ಕೊಟ್ರೇಶ್ವರನನ್ನು ಸದಾ ಸ್ಮರಿಸುತ್ತಿದ್ದ. ಕೊಟ್ಟೂರಿನಲ್ಲಿ ಅವನು ಪದವಿಯ ಮೂರು ವರ್ಷ ಓದಿದ್ದು ಇದಕ್ಕೆ ಕಾರಣವಾಗಿರಬಹುದು. ಹಾಸ್ಟೆಲ್ ನಲ್ಲಿ ವಗ್ಗರಣೆ (ಗುಲ್ಬರ್ಗ ಭಾಷೆಯಲ್ಲಿ ಸುಸುಲ), ಮಿರ್ಚಿ ಮಾಡಿದಾಗ ಕೊಟ್ಟೂರಿನ "ಮತ್ತಿಹಳ್ಳಿ ಹೋಟೆಲ್" ವಗ್ಗರಣೆ,ಮಿರ್ಚಿ ನೆನಪಿಸಿಕೊಂಡು ( ಹೋಟೆಲ್ ರುಚಿಕರವಾದ ವಗ್ಗರಣೆ - ಮಿರ್ಚಿಗೆ ಸುತ್ತ ಹತ್ತೂರಿಗೆ ಫೇಮಸ್ಸು)‍ ಅದರ ರುಚಿ ವಿವರಿಸುತ್ತಾ ತಿನ್ನುತ್ತಿದ್ದ ಭೋಜನಪ್ರಿಯ. ಕೊಟ್ಟೂರಿನೊಂದಿಗಿನ ಅವನ ಮೋಹ ಜನ್ಮಕ್ಕೆ ಮುಗಿಯಲಾರದು ಅನ್ಸುತ್ತೆ. ಅದು ಎಷ್ಟರಮಟ್ಟಿಗೆ ಎಂದರೆ... ಅವನು ಜಿ.ಕೆ. ಮ್ಯಾಗಜೀನ್ (ಸ್ಪರ್ಧಾಸ್ಫೂರ್ತಿ, ಸ್ಪರ್ಧಾ ವಿಜೇತ ಥರದ ಪತ್ರಿಕೆಗಳು) ಕೊಳ್ಳಲು ಕೊಟ್ಟೂರಿಗೆ ಹೋಗುತ್ತಿದ್ದ. ನಾನು ಒಮ್ಮೆ ಕೇಳಿದೆ. "ಇಲ್ಲೇ ನಮ್ಮೂರಿನಲ್ಲೆ ಎಲ್ಲಾ ಮ್ಯಾಗಜೀನ್ಸ್ ಸಿಗುತ್ತೆ. ಅದು ಬಿಟ್ಟು, ಬಸ್ ಚಾರ್ಜ್ ಇಟ್ಟುಕೊಂಡು ಅದೇ ಮ್ಯಾಗಜೀನ್ ತರಲು ಅಷ್ಟುದೂರ ಯಾಕೆ ಹೋಗ್ತೀಯಾ?" ಅಂತಅದಕ್ಕೆ ಅವನು ಕೊಟ್ಟ ಉತ್ತರ ಬೆಚ್ಚಿಬೀಳಿಸುವಂತಿತ್ತು"ಕೊಟ್ಟೂರಿನಲ್ಲಿ ಮ್ಯಾಗಜೀನ್ ಚೆನ್ನಾಗಿರುತ್ತವೆ" ಅಂದದೇವರೇ.... ಹಣ್ಣು, ತರಕಾರಿ, ಬಟ್ಟೆ ಇತ್ಯಾದಿಗಳು ಊರಿಂದೂರಿಗೆ ಭಿನ್ನವಾಗಿರಬಹುದು. ಆದರೆ ಪತ್ರಿಕೆಗಳ ಗುಣಮಟ್ಟ ಕೂಡಾ ಭಿನ್ನವಾಗಿರುತ್ತವಾ? ಹಾಗಂತ ಅವನೊಂದಿಗೆ ವಾದ ಮಾಡಿದೆ. ಪ್ರಯೋಜನವಾಗಲಿಲ್ಲ. ಪ್ರತಿ ಅಮವಾಸ್ಯೆ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಕೊಟ್ಟೂರಿಗೆ ಪಯಣಿಸಿ ಕೊಟ್ಟೂರೇಶ್ವರನಿಗೆ ಹಣ್ಣುಕಾಯಿ ಸಮರ್ಪಿಸುತ್ತಿದ್ದ. ಅದು ಕೊಟ್ಟೂರೇಶ್ವರನ ಮೇಲಿನ ಭಕ್ತಿಯೋ ಅಥವಾ ಕೊಟ್ಟೂರಿನ ಮೇಲಿನ ಪ್ರೇಮವೂ ಇವತ್ತಿಗೂ ಗೊತ್ತಾಗಿಲ್ಲ.

ರಹಸ್ಯ ಬೇಧಿಸಿದಾಗ...

ಅವನು ಪ್ಯಾಂಟ್ ಧರಿಸಿದ್ದಾಗ ಬಲತೊಡೆಯಲ್ಲಿ ಯಾವಾಗಲೂ ಒಂದು ದುಂಡಾಕಾರದ ಆಕೃತಿ ಗೋಚರಿಸುತ್ತಿತ್ತು. ಅದು ಏನಿರಬಹುದು ಎಂದ ಕುತೂಹಲ ನನಗೆ. ಕೆಲವರಿಗೆ ಅದು ಅಪಾರ್ಥವಾಗಿ ಕಂಡಿರಲೂಬಹುದು. ಒಮ್ಮೆ ಸಂಡೂರಿನಿಂದ ನಂದಿಹಳ್ಳಿಗೆ ಬಸ್ಸಿನಲ್ಲಿ ಹೊರಟಿದ್ದೆವು. ನನ್ನ ಪಕ್ಕದಲ್ಲೇ ಬ್ಯಾಲಾಳ್ ಕೂತಿದ್ದ. ಒಳ್ಳೆಯ ಮೂಡ್ ನಲ್ಲಿ ನಗುತ್ತಾ ಮಾತಾಡುತ್ತಿದ್ದ. ಅವನುಟ್ಟಿದ್ದ ಶರ್ಟ್ ಸ್ವಲ್ಪ ಮೇಲಕ್ಕೆದ್ದು ಪ್ಯಾಂಟಿನಲ್ಲಿ ಅಡಗಿದ್ದ ಸುಪುಷ್ಟ ತೊಡೆಯ ಮೇಲಿನ ದುಂಡಾಕಾರ ಕಾಣಿಸಿತು. ಇನ್ನೂ ಕುತೂಹಲ ತಾಳಲಾರದೇ ಮೆಲ್ಲನೆ ಅದುಮಿದೆ. ಅಷ್ಟೇ....! ಅದು ಮೆತ್ತಗಿತ್ತು...!! ಆತಂಕದಿಂದ ಬ್ಯಾಲಾಳ್ ಕಡೆಗೊಮ್ಮೆ ನೋಡಿದೆ. ಅವನು ಒಮ್ಮೆ ಮುಗುಳ್ನಕ್ಕು ಸುಮ್ಮನಾದ. ಧೈರ್ಯ ಹೆಚ್ಚಿದಂತಾಗಿ ಅವನ ಪ್ಯಾಂಟಿನ ಜೇಬಿನೊಳಗೆ ಕೈ ಹಾಕಿದೆ... ತಂಪನೆಯ ಸ್ಪರ್ಷ..! ಚಕ್ಕನೇ ಕೈ ಹೊರ ತೆಗೆದೆ. ಕೈ ಜೊತೆಗೆ ದುಂಡನೇ ವಸ್ತುವೂ ಹೊರಬಂತು. ತಿಳಿಹಳದಿ ಬಣ್ಣದ ದುಂಡನೆಯ ವಸ್ತು...!!!

ಒಂದು ದೊಡ್ಡ ಅಚ್ಚರಿಯೊಂದಿದೆ ದೀರ್ಘವಾದ ನಿಟ್ಟುಸಿರುಬಿಟ್ಟೆ. ನನ್ನ ಕಣ್ಣುಗಳಲ್ಲಿನ ಪ್ರಶ್ನೆಗಳಿಗೆ ಬ್ಯಾಲಾಳ್ ನಗೆಯೇ ಉತ್ತರವಾಗಿತ್ತು. ನಂತರ ಅವನು ಹೇಳಿದ್ದೇನೆಂದರೆ... ಅಪಾರವಾದ ದೈವಭಕ್ತಿ, ಮಂತ್ರ ತಂತ್ರಗಳನ್ನು ನಂಬುತ್ತಿದ್ದ ಬ್ಯಾಲಾಳ್ ನಾಗು ದುಷ್ಟಶಕ್ತಿಗಳಿಂದ ತನ್ನನ್ನು ತಾನು ಕಾಪಾಡಿಕೊಳ್ಳಲು ಸದಾ ತನ್ನ ಪ್ಯಾಂಟಿನ ಜೇಬಲ್ಲಿ ಮಂತ್ರಿಸಿದ (ಅದನ್ನು ಯಾರು ಮಂತ್ರಿಸಿಕೊಟ್ಟಿದ್ದರೋ ಗೊತ್ತಿಲ್ಲ) ನಿಂಬೆಹಣ್ಣನ್ನು ಇಟ್ಟುಕೊಳ್ಳುತ್ತಿದ್ದ. ಮತ್ತು ನನ್ನಂತವರ ಕಿವಿಯಲ್ಲಿ ಹುಳು ಬಿಟ್ಟಿದ್ದ... "ಅಲ್ಲೊ ಮಾರಾಯಾ... ನೀನು ಎಂ. ಓದ್ತಾ ಇದೀಯಾ... ಆದ್ರೂ ಇದನ್ನೆಲ್ಲಾ ನಂಬ್ತೀಯಾ? ಇನ್ನೊಂದ್ಸಲ ನಿನ್ ಜೇಬಿನಲ್ಲಿ ನಿಂಬೆಹಣ್ಣು ನೋಡಿದ್ರೆ ಕಿತ್ಗೊಂಡು ಶರಬತ್ ಮಾಡ್ಕೊಂಡು ಕುಡಿತೀನಿ ನೋಡು" ಅಂದೆ. ನನ್ ಮಾತು ಕೇಳಿದವನೇ ಒಮ್ಮೆ ಜೋರಾಗಿ ಹ್ಹಿ...ಹ್ಹಿ..ಹ್ಹಿ... ಅಂತ ನಗತೊಡಗಿದ. ಆದರೆ ನಿಂಬೆಹಣ್ಣು ತ್ಯಜಿಸಲಿಲ್ಲ. ಎಂ. ಮುಗಿಯುವವರೆಗೂ ನಿಂಬೆಹಣ್ಣು ಅವನ ಪ್ಯಾಂಟಿನ ಜೇಬಿನಲ್ಲಿ ಹಿಂಸೆ ಅನುಭವಿಸುತ್ತಾ ಮಲಗಿರುತ್ತಿತ್ತು. ಈಗ ಅವನು ನಿಂಬೆಹಣ್ಣಿನೊಂದಿಗಿನ ಗೆಳೆತನ ಬಿಟ್ಟಿದ್ದಾನೋ ಇಲ್ಲವೋ ಗೊತ್ತಿಲ್ಲ. ಕೇಳಬೇಕಿದೆ....

ಚಹಾ ಪ್ರಿಯ

ಬ್ಯಾಲಾಳ್ ನಿಂದ ನಾನು ಕಲಿತ ಅಭ್ಯಾಸ 'ಟೀ ಕುಡಿಯೋದು'. ಮೊದಲು ಟೀ ಕುಡಿಯುತ್ತಿದ್ದೆನಾದರೂ ಅದು ಅಭ್ಯಾಸವಾಗಿರಲಿಲ್ಲ. ಆದರೆ "ಚಹಾ ಪ್ರಿಯ" ನಾಗು ನಂದಿಹಳ್ಳಿಯಲ್ಲಿದ್ದಾಗ ಪ್ರತಿದಿನ ಸಂಜೆ ನಾವು (ನಾನು, ಬ್ಯಾಲಾಳ್, ಗೋಣಿ, ಭೀಮಪ್ಪ, ಮಂಜ) ಅಜ್ಜಿಯ ಹೋಟೆಲ್ ವರೆಗೆ ವಾಕಿಂಗ್ ಹೋದಾಗ ಒಬ್ಬನೇ ಟೀ ಕುಡಿಯಲಾರದೇ ಬೇಡವೆಂದರೂ ಕೇಳದೆ ನಮ್ಮೆಲ್ಲರಿಗೂ ಟೀ ಕುಡಿಸುತ್ತಿದ್ದ. ನಮ್ಮೆಲ್ಲರನ್ನು ಬಿಟ್ಟು ಒಬ್ಬನೇ ಟೀ ಕುಡಿಯಲು ಅವನ ಮನಸ್ಸು ಒಪ್ಪುತ್ತಿರಲಿಲ್ಲ. ಅಂಥಾ ಸಹೃದಯಿ ಅವನು. ಕೊನೆಗೂ 'ಟೀ' ನನಗೆ ಅಭ್ಯಾಸವಾಗುವಂತೆ ಮಾಡಿಬಿಟ್ಟ.

ರಂಗುರಂಗಿನ ಗುಂಗಿನಲ್ಲಿ...

ಬ್ಯಾಲಾಳ್ ನಾಗು ತೆಲುಗು, ತಮಿಳು ಚಿತ್ರನಟಿ ತ್ರಿಶಾಳ ಬಹುದೊಡ್ಡ ಅಭಿಮಾನಿ. ಆಕೆಯ ಒಂದು ಸಿನೆಮಾವನ್ನು ಮಿಸ್ ಮಾಡುತ್ತಿರಲಿಲ್ಲ. ಅವನ ಮೊಬೈಲ್ ಸ್ಕ್ರೀನ್ ಸೇವರ್ ನಲ್ಲಿ ತ್ರಿಶಾಳ ಚಿತ್ರವನ್ನು ಹಾಕಿಕೊಂಡಿದ್ದ. ಪುಸ್ತಕಗಳಿಗೆ ನ್ಯೂಸ್ ಪೇಪರ್ ಗಳಿಂದ ಕವರ್ ಹಾಕುವಾಗ ತ್ರಿಶಾ ಇರುವ ಸಿನೆಮಾ ಪೇಪರ್ ಗಳನ್ನು ಆಯ್ದಿಟ್ಟುಕೊಂಡು ಅವು ಪುಸ್ತಕದ ಮೇಲೆ ಬರುವಂತೆ ಕವರ್ ಹಾಕುತ್ತಿದ್ದ. ದಿನಗಳಲ್ಲಿ ತ್ರಿಶಾ ಮತ್ತು ಪ್ರಭಾಸ್ ಬಗ್ಗೆ ಅಧಿಕವಾಗಿ ಗಾಸಿಪ್ ಗಳು ಹರಡಿದ್ದವು. ಅವರಿಬ್ಬರು ಲವ್ ಮಾಡ್ತಿದ್ದಾರೆ, ಮದ್ವೆ ಆಗ್ತಿದ್ದಾರೆ ಅಂತ. ತ್ರಿಶಾಳನ್ನು ಅತೀವವಾಗಿ ಪ್ರೀತಿಸುತ್ತಿದ್ದ ಬ್ಯಾಲಾಳ್ ನ್ನು "ಪ್ರಭಾಸ್" ಎಂದು ಕರೆಯಲು ಶುರುವಿಟ್ಟುಕೊಂಡವನು ಗೆಳೆಯ ಬಡಿಗೇರ್ ಮಂಜು. ಆಮೇಲೆ ಬಹುತೇಕರು ಅವನಿಗೆ ಪ್ರಭಾಸ್ ಎಂದೆ ಕರೆಯತೊಡಗಿದರು. ಎಲ್ಲಾ ಹೆಸರುಗಳನ್ನು ನಗುತ್ತಲೇ ಸ್ವೀಕರಿಸಿದ ಬ್ಯಾಲಾಳ್ ಇಷ್ಟಪಡುತ್ತಿದ್ದ ಇನ್ನೊಬ್ಬ ನಟಿ ಅಮೂಲ್ಯ. ಆಕೆಯ ಸ್ಟಿಕರ್ ಗಳನ್ನು ತನ್ನ ಪುಸ್ತಕಕ್ಕೆ ಹಚ್ಚಿಕೊಂಡಿದ್ದ. ಒಮ್ಮೆ ಅವನ ಮನೆಗೆ ಹೋಗಿದ್ದಾಗ ಅವನ ಅಭಿಮಾನ ಕಂಡು ಬೆರಗಾಗಿದ್ದೆ. ಗೋಡೆಯ ತುಂಬಾ ತ್ರಿಶಾ, ಅಮೂಲ್ಯರ ಪೋಸ್ಟರ್ ಗಳು, ನ್ಯೂಸ್ ಪೇಪರ್ ಫೋಟೋ ಕಟಿಂಗ್ಸ್ ಹಚ್ಚಿದ್ದ..!

ಎಂ. ಮುಗಿದ ನಂತರ ಪ್ರತಿದಿನ ಸಂಜೆ ನಾನು, ಅವನು ನಮ್ಮೂರ ಲೈಬ್ರರಿಯಲ್ಲಿ ಮೀಟ್ ಆಗುತ್ತಿದ್ದೆವು. ಅಲ್ಲಿ ಓದೋದು ಮುಗಿದ ನಂತರ ಹೊರಗೆ ಬಂದು ಹರಟೆ ಹೊಡೆಯುತ್ತಿದ್ದೆವು. ಸಂದರ್ಭದಲ್ಲಿ ನಾಗು ಪದೇ ಪದೇ ತನ್ನ ಮೊಬೈಲ್ ಹೊರತೆಗೆದು ಸಮಯ ನೋಡಿಕೊಳ್ಳುತ್ತಿದ್ದ. ಸಮಯ 7:00 ದಾಟುತ್ತಲೇ ಊರಿಗೆ ಹೋಗಲು ಅವಸರಿಸುತ್ತಿದ್ದ. ಊರಿಗೆ ಹೋಗಲು ಸಮಯದಲ್ಲಿ ಬಸ್ ಗಾಗಿ ಕಾಯುವ ಅನಿವಾರ್ಯತೆ ಅವನಿಗಿರಲಿಲ್ಲ. ಅವನ ಊರು ಕೂಗಳತೆಯ ದೂರದಲ್ಲಿತ್ತು. ನಡೆದುಕೊಂಡೇ ಹೋಗಬಹುದಾಗಿತ್ತು. ಅಲ್ಲದೇ ಅವನು ತನ್ನ ಅಟ್ಲಾಸ್ ಸೈಕಲ್ ತಂದಿರುತ್ತಿದ್ದ. ಆದರೂ ಅವನೇಕೆ ಟೈಂ ನಲ್ಲಿ ಅವಸರ ಮಾಡುತ್ತಿದ್ದಾನೆಂದು ಗೊತ್ತಾಗಲಿಲ್ಲ. ಒಟ್ಟಿನಲ್ಲಿ ಅವಸರ ಮಾಡಿಕೊಳ್ಳುತ್ತಾ ತನ್ನ ಸೈಕಲ್ಲನ್ನೇರಿ ಎಡಕ್ಕೊಮ್ಮೆ ಬಲಕ್ಕೊಮ್ಮೆ ವಾಲಿಕೊಳ್ಳುತ್ತಾ ಪೆಡಲ್ ತುಳಿದುಕೊಂಡು ಹೊರಟುಬಿಡುತ್ತಿದ್ದ. ಆಮೇಲೆ ಗೊತ್ತಾಗಿದ್ದೇನೆಂದರೆ ಸಂಜೆ ಏಳಕ್ಕೆ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ "ಲಕ್ಷ್ಮಿ ಬಾರಮ್ಮ" ಧಾರವಾಹಿಯ ಬಹುದೊಡ್ಡ ಅಭಿಮಾನಿಯಾಗಿಬಿಟ್ಟಿದ್ದ. ಮತ್ತು ಅದನ್ನು ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳಲು ಅವನು ಸಿದ್ಧನಿರಲಿಲ್ಲ. ಧಾರವಾಹಿಗಳನ್ನು ಕೇವಲ ಹೆಂಗಳೆಯರು ಮಾತ್ರ ಇಷ್ಟಪಡುತ್ತಾರೆ ಅಂದುಕೊಂಡಿದ್ದ ನನ್ನ ನಂಬಿಕೆಗೆ ನಾಗು ಬಲವಾದ ಪೆಟ್ಟು ನೀಡಿದ್ದ. ಧಾರವಾಹಿಯ ಪಾತ್ರಗಳಾದ ಚಿನ್ನು, ಗೊಂಬೆಯರ ( ಪಾತ್ರಗಳ ಬಗ್ಗೆ ಅವನೇ ಹೇಳಿದ್ದು!) ಫೋಟೋಗಳನ್ನು ತನ್ನ ಮೊಬೈಲ್ ನಲ್ಲಿ ಇಟ್ಟುಕೊಂಡು ಅವುಗಳನ್ನು ಆಗಾಗ ನೋಡುತ್ತಾ ಮುಗುಳ್ನಗುತ್ತಿದ್ದ. ಮುಂದೆ ಅವನು ಸ್ಮಾರ್ಟ್ ಫೋನ್ ಕೊಂಡಾಗ ಮಿಸ್ ಆದ ಎಪಿಸೋಡ್ ಗಳನ್ನು ಅದರಲ್ಲಿ ನೋಡಿ ಆನಂದಿಸುತ್ತಿದ್ದಅವನಿಗೆ ಕ್ರಿಕೆಟ್ಅಂದ್ರೆ ಜೀವ. ಕ್ರಿಕೆಟ್ ಪಂದ್ಯಗಳಿದ್ದಾಗ ಟಿವಿ ರಿಮೋಟ್ ನ್ನು ಯಾರಿಗೂ ಕೊಡದೇ ಗಟ್ಟಿಯಾಗಿ ಹಿಡಿದುಕೊಂಡು ಹಾಸ್ಟೆಲ್ ಟಿವಿ ಹಾಲ್ ಮುಂದಿನ ಸಾಲಿನಲ್ಲಿ ಕುಳಿತು ಕುತೂಹಲಭರಿತನಾಗಿ ಕುಳಿತು ಕ್ರಿಕೆಟ್ ವೀಕ್ಷಿಸುತ್ತಿದ್ದ.

ಮೊಬೈಲ್ ಮೋಹದಲ್ಲಿ...

ಎಂ. ಓದುತ್ತಿದ್ದಾಗ ಅವನಲ್ಲಿ ನೋಕಿಯಾ 1100 ಥರದ ಕಲರ್ ಫೋನಿತ್ತು. ಅದರಲ್ಲೇ ತ್ರಿಶಾ, ಅಮೂಲ್ಯ, ಚಿನ್ನು, ಗೊಂಬೆಯರ ಫೋಟೋಗಳನ್ನಿಟ್ಟುಕೊಂಡಿದ್ದ. ಆಗಿನ್ನೂ ನನ್ನ ಹತ್ತಿರ ಫೋನ್ ಇಲ್ಲದ ಕಾರಣ ಆಗಾಗ ನಾಗುವಿನ ಮೊಬೈಲ್ ಬಳಸುತ್ತಿದ್ದೆ. ಮೊಬೈಲ್ ಗೆ ಅವನು ಮೊಳ ಉದ್ದದ ಲೆದರ್ ಕೇಸ್ ಹಾಕಿಸಿಕೊಂಡಿದ್ದ. ಕರೆ ಮಾಡುವಾಗ ಅದು ಉದ್ದಕ್ಕೆ ತೆರೆದುಕೊಳ್ಳುತ್ತಿತ್ತು. ಅವನಿಗೆ, ಮೊಬೈಲ್ ಬಗ್ಗೆ ವಿಪರೀತವಾದ ವ್ಯಾಮೋಹವಿತ್ತು. ಅದರಲ್ಲೂ ಸ್ಮಾರ್ಟ್ ಫೋನ್ ಗಳೆಂದರೆ ಹೆಚ್ಚು ಇಷ್ಟಪಡುತ್ತಿದ್ದ. ಯಾರಾದ್ರೂ ಅವನ ಎದುರಲ್ಲಿ ಸ್ಮಾರ್ಟ್ ಫೋನ್ ಬಳಸುತ್ತಿದ್ದರೆ ಸೀದಾ ಅವರೆಡೆಗೆ ತೆರಳಿ ಫೋನ್ ಬೆಲೆ ಇತ್ಯಾದಿ ವಿವರಗಳನ್ನು ವಿಚಾರಿಸಿ, ಅವರ ಫೋನ್ ನ್ನು ಒಮ್ಮೆ ತೆಗೆದುಕೊಂಡು ಸವರಿ, ಬಟನ್ ಒತ್ತಿ, ಎಲ್ಲಾ ಪರೀಕ್ಷಿಸಿ 'ಚೆನ್ನಾಗಿದೆ' ಅಂದು ವಾಪಾಸ್ ಕೊಡುತ್ತಿದ್ದ . ಫೋನ್ ಮುಟ್ಟಿದ ತೃಪ್ತಭಾವ ಅವನಲ್ಲಿರುತ್ತಿತ್ತು. ಒಮ್ಮೆ ನಾನು, ಗೋಣಿ,ಮಂಜ, ಬ್ಯಾಲಾಳ್ ನಾಗು ಸಂಡೂರಿನಿಂದ ಹಂಪಿ ಉತ್ಸವಕ್ಕಾಗಿ ಹಂಪಿಗೆ ತೆರಳಿದ್ದೆವು. ಹೊಸಪೇಟೆಗೆ ಬಂದಾಗ ಹಂಪಿ ಕಡೆಗೆ ಹೋಗುವ ಬಸ್ ಗಳೆಲ್ಲವೂ ವಿಪರೀತ ರಶ್. ಹೇಗೋ ಒಂದು ಬಸ್ ನಲ್ಲಿ ನುಸುಳಿಕೊಂಡು ನಿಂತೆವು. ಬಸ್ ತುಂಬಾ ಜನರ ಉಸಿರಾಟ, ಬೆವರ ವಾಸನೆ. ಅದೇ ಸಮಯದಲ್ಲಿ ಯಾರೋ ಒಬ್ಬ ತನ್ನ ಮೊಬೈಲ್ ನಲ್ಲಿ ಜೋರಾಗಿ ಹಾಡು ಹಾಕಿದ. ತಕ್ಷಣ ನಾಗುವಿನ ಕಣ್ಣುಗಳು ಅರಳಿದವು. "ಅಣ್ಣಾ... ಸ್ವಲ್ಪ ಮೊಬೈಲ್ ಕೊಡಣ್ಣಾ..." ಬ್ಯಾಲಾಳ್ ಅವನನ್ನು ವಿನಂತಿಸಿದ. ಅವನು ಇವನ ಕಡೆಗೆ ಒಮ್ಮೆ ನೋಡಿ ಕೊಡಲು ಒಪ್ಪಲಿಲ್ಲ. ಆದರೂ ಇವನು ಬಿಡಬೇಕಲ್ಲಾ...? ತುಂಬಾ ಒತ್ತಾಯ ಮಾಡಿ ತಗೊಂಡು, ಅದನ್ನು ಸುತ್ತಲೂ ಪರೀಕ್ಷಿಸಿ, ಬೆಲೆ ಕೇಳಿ ತಿಳಿದುಕೊಂಡು, ಮೆಚ್ಚುಗೆಯ ಭಾವದಿಂದ ''ಚೆನ್ನಾಗಿದೆ ಅಣ್ಣಾ'' ಅಂದು ವಾಪಾಸು ಕೊಟ್ಟ. ನಾವೆಲ್ಲ ಅವನಿಗೆ ಬೈದೆವು. "ಅಲ್ಲೋ ಮಾರಾಯ... ನಾವೆಲ್ಲಾ ಸೀಟ್ ಸಿಗದೇ ಪರದಾಡುತ್ತಾ ನಿಂತಿದ್ರೆ ನೀನು ಇಂಥಾ ಟೈಂ ಲಿ ಯಾರಾರನ್ನೋ ಮೊಬೈಲ್ ಕೇಳ್ತಿದೆಯಲ್ಲ" ಅಂದೆವು. "ನಿಮ್ಗೆ ಗೊತ್ತಾಗಲ್ಲ, ಸುಮ್ನಿರಿ" ಎಂದು ಸಿಡುಕಿದ ಬ್ಯಾಲಾಳ್.

ಮೀಸೆ ಚಿಗುರಿದಾಗ...

ಬ್ಯಾಲಾಳ್ ನಾಗುವಿಗೆ ಬಹುಬೇಗನೇ ತಲೆಗೂದಲು ನೆರೆದಿತ್ತು. ಪ್ರತಿ ತಿಂಗಳು ಹೇರ್ ಡೈ ಮಾಡುತ್ತಿದ್ದ. ಆದರೆ ನೆರೆ ಎಂಬುದು ಅವನ ಗಡ್ಡಕ್ಕೂ ಆವರಿಸಿತ್ತು. ಶೇವ್ ಮಾಡಿಕೊಳ್ಳುತ್ತಿದ್ದನಾದ್ದರಿಂದ ಅದು ಅಷ್ಟಾಗಿ ಸಮಸ್ಯೆಯಾಗಿ ಕಾಡಿರಲಿಲ್ಲ. ಮೀಸೆಯನ್ನು ಕೂಡಾ ದಪ್ಪಗೆ ಬಿಡದೇ ಟ್ರಿಮ್ ಮಾಡಿಕೊಳ್ಳುತ್ತಿದ್ದ. ಆದರೆ ಮೀಸೆಯಲ್ಲಿ, ಸರಿಯಾಗಿ ಅವನ ಮೂಗಿನ ಕೆಳಗಡೆ ಒಂದು ನೆರೆಗೂದಲು ಕಾಣಿಸಿಕೊಳ್ಳಲಾರಂಭಿಸಿತು. ಮತ್ತು ಅವನಿಗೆ ಅದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು. ಅದಕ್ಕೆ ಹೇರ್ ಡೈ ಮಾಡಿ ಅಡಗಿಸುವಂತಿಲ್ಲ. ಒಂದೆರಡು ದಿನದಲ್ಲಿ ಬೆಳ್ಳಿರೇಖೆ ಗೋಚರಿಸಿಬಿಡುತ್ತೆ. ಇಡೀ ಮೀಸೆಯನ್ನು ಬೋಳಿಸಿಕೊಳ್ಳಲು ಇಷ್ಟವಿಲ್ಲ. ಇಂಥಾ ಸಂದರ್ಭದಲ್ಲಿ ನಾಗು ಒಂದು ಉಪಾಯ ಕಂಡುಹಿಡಿದು ಒಂದು ಬಿಳಿ ಕೂದಲನ್ನು ಮಾತ್ರ ಸೂಕ್ಮವಾಗಿ ಹಿಡಿದುಕೊಂಡು ಕತ್ತರಿಯ ಸಹಾಯದಿಂದ ಬುಡಕ್ಕೆ ಕತ್ತರಿಸಲಾರಭಿಸಿದ. ಇದನ್ನು ಗಮನಿಸಿದ ನಾನು " ಏನ್ ನಾಗಣ್ಣ, ಇವತ್ತು ಬಡ್ಡಿ(ಬುಡಕ್ಕೆ)ಗೆ ಕತ್ತರಿಸಿದೆಯಾ..?" ಅಂತ ಛೇಡಿಸುತ್ತಿದ್ದೆ. ಆವಾಗೆಲ್ಲ ನಾಗು ನಗುತ್ತಾ "ಸುಮ್ನಿರೋ ಮಾರಾಯ, ಎಲ್ಲರಿಗೂ ಗೊತ್ಮಾಡ್ತಿಯಲ್ಲಾ" ಅಂತಿದ್ದ.

ಪಿಎಚ್ ಡಿ ಸೀಳಿದನು...!

ನಾನು, ಅವನು ಎಂ. ಮುಗಿದ ಬಳಿಕ ಪಿಎಚ್.ಡಿ ಮಾಡಲು ನಿರ್ಧರಿಸಿ ಕೆಲವು ವಿ.ವಿಗಳಿಗೆ ಅರ್ಜಿ ಸಲ್ಲಿಸಿ ಅದಕ್ಕಾಗಿ ಸಾರಲೇಖ ಸಿದ್ಧಪಡಿಸತೊಡಗಿದೆವು. ನನ್ನ ವಿಷಯ "ರವಿ ಬೆಳಗೆರೆಯವರ ಸೃಜನಶೀಲ ಸಾಹಿತ್ಯ: ಒಂದು ಅಧ್ಯಯನ". ವಿಷಯದ ಮೇಲೆ ಸಾರಲೇಖ ಸಿದ್ಧಪಡಿಸಿ ಟೈಪ್ ಮಾಡಿಸಿಟ್ಟಿದ್ದೆ. ಬ್ಯಾಲಾಳ್ ನಾಗುವಿನ ವಿಷಯ "ಕೋ. ಚೆನ್ನಬಸಪ್ಪನವರ ಸಮಗ್ರ ಕಾದಂಬರಿಗಳು : ಒಂದು ಅಧ್ಯಯನ"‌. ಅವನೂ ಸಾರಲೇಖ ಸಿದ್ಧಪಡಿಸಿದ್ದ. ಟೈಪ್ ಮಾಡಿಸುವುದು ಬಾಕಿಯಿತ್ತು. ಡಿ.ಟಿ.ಪಿ ಆಪರೇಟರ್ ಬಳಿ ನನ್ನನ್ನು ಕರೆದುಕೊಂಡು ಹೋದ. ಟೈಪ್ ಮಾಡುತ್ತಿದ್ದವಳು ಒಬ್ಬ ಯುವತಿ. ಇಬ್ಬರೂ ಅಲ್ಲೇ ಕಂಪ್ಯೂಟರ್ ಪಕ್ಕದಲ್ಲೇ ಸ್ಟೂಲ್ ಎಳೆದುಕೊಂಡು ಕುಂತೆವು. ಬ್ಯಾಲಾಳ್ ಬರೆದ ಸಾರಲೇಖವನ್ನು ಯುವತಿ ಟೈಪ್ ಮಾಡಲಾರಂಭಿಸಿದಳು. ಟೈಪಿಂಗ್ ಸ್ಪೀಡ್ ನಲ್ಲಿ ಹಲವಾರು ತಪ್ಪುಗಳಾಗುತ್ತಿದ್ದವು. ಆಗ ನಾನು ಅಥವಾ ನಾಗು ತಪ್ಪು ಗುರುತಿಸಿ ಹೇಳುತ್ತಿದ್ದೆವು. ಟೈಪಿಂಗ್ ಜೊತೆಜೊತೆಗೆ ಲೈವ್ ಆಗಿ ಪ್ರೂಫ್ ಕರೆಕ್ಷನ್ ಕೂಡಾ ನಡೆಯುತ್ತಿತ್ತು. ಟೈಪಿಂಗ್ ಯುವತಿ ಅವನ ಸಾರಲೇಖದ ಶೀರ್ಷಿಕೆಯಲ್ಲಿಯೇ ಲೋಪವೆಸಗಿದ್ದಳು. " ಕೋ.ಚೆನ್ನಬಸಪ್ಪನವರ ಸಮಗ್ರ ಕಾದಂಬರಿಗಳು : ಒಂದು ಅಧ್ಯಯನ" ಎನ್ನುವ ಶೀರ್ಷಿಕೆಯಲ್ಲಿ "ಅಧ್ಯಯನ" ಎನ್ನುವುದನ್ನು "ಅದ್ಯಯನ" ಎಂದು ಟೈಪಿಸಿಬಿಟ್ಟಿದ್ದಳು. ಅದನ್ನು ಗುರುತಿಸಿದ್ದ ಬ್ಯಾಲಾಳ್ ನಾಗರಾಜನೆಂಬ ಮಹಾನುಭಾವ... " - ಕುಂಡಿ ಸೀಳ್ರಿ... ಕುಂಡಿ ಸೀಳ್ರೀ.‌‌.." ಎಂದು ಅವಸರಿಸತೊಡಗಿದ. ಅವನ ಭಯಂಕರ ಪದ ಪ್ರಯೋಗದಿಂದ ದಿಗ್ಭ್ರಾಂತಳಾದ ಟೈಪಿಸ್ಟ್ ಒಮ್ಮೆ ಅವನೆಡೆಗೆ ಆಘಾತಗೊಂಡವಳಂತೆ ನೋಡಿ ತಕ್ಷಣವೇ ಸಾವರಿಸಿಕೊಂಡು ಅಕ್ಷರ ಸರಿಪಡಿಸತೊಡಗಿದಳು. ಆದರೆ ನಾನು ನಾನಾಗಿ ಉಳಿಯಲಿಲ್ಲ. ಹೊಟ್ಟೆಯೊಳಗೆ ನಗುವಿನ ಬಾಂಬ್ ಸ್ಫೋಟಿಸಿದಂತಾಗಿ ಹೊಟ್ಟೆ ಹಿಡಿದುಕೊಂಡು ಹೊರಗೆ ಬಂದವನೇ ಬಿದ್ದುಬಿದ್ದು ನಗತೊಡಗಿದೆ. ಬಹಳ ದಿನದವರೆಗೆ ಅದನ್ನೇ ನೆನಪಿಸಿಕೊಂಡು ನಕ್ಕಿದ್ದೇ ನಕ್ಕಿದ್ದು...

ಆಮೇಲೆ ಇಬ್ಬರೂ ಜೊತೆಯಾಗಿಯೇ ಹಂಪಿಯ ಕನ್ನಡ ಯುನಿವರ್ಸಿಟಿ ಗೆ ಪಿಎಚ್ ಡಿ ಅಪ್ಲೆ ಮಾಡಿದೆವು. ಅಲ್ಲಿನ ಪಂಡಿತರು ನನ್ನ ವಿಷಯ ಕೇಳಿಯೇ ಪಿಎಚ್ ಡಿ ಗೆ ಆಯ್ಕೆಮಾಡಿಕೊಳ್ಳಲಿಲ್ಲ. ಅವನದು ಜೆಆರ್ ಎಫ್ ಇದ್ದರೂ ಆಯ್ಕೆಯಾಗಲಿಲ್ಲ. ಆಮೇಲೆ ಶಿವಮೊಗ್ಗದ ಕುವೆಂಪು ಯುನಿವರ್ಸಿಟಿಗೆ ಅಪ್ಲೆ ಮಾಡಿದೆವು. ಅಲ್ಲಿ ಕೂಡಾ ಇದೇ ಕಾರಣಕ್ಕೆ ನಾನು ಆಯ್ಕೆಯಾಗಲಿಲ್ಲ. ಅವನೂ ಆಯ್ಕೆಯಾಗಲಿಲ್ಲ. ಕುವೆಂಪು ಯುನಿವರ್ಸಿಟಿಗೆ ಅಪ್ಲೆ ಮಾಡಿದಾಗ ಬೆಳಿಗ್ಗೆ 10 ಕ್ಕೆ ವೈವಾ ಇತ್ತು. ಹೀಗಾಗಿ ಒಂದು ದಿನ ಮೊದಲೇ ಶಿವಮೊಗ್ಗಕ್ಕೆ ಹೋಗಿ ಅಲ್ಲಿ ಲಾಡ್ಜ್ ವೊಂದರಲ್ಲಿ ಉಳಿದುಕೊಂಡೆವು. ಬ್ಯಾಲಾಳ್ ನಾಗು ರಾತ್ರಿ ವೇಳೆ ಅಷ್ಟೊಂದು ಹೆದರಿಕೊಳ್ಳುತ್ತಾನೆಂದು ಗೊತ್ತಾಗಿದ್ದೆ ಅವತ್ತು. ಯಾವತ್ತೂ ರಾತ್ರಿ ಒಬ್ಬನೇ ಮಲಗಿಕೊಳ್ಳುತ್ತಿರಲಿಲ್ಲ. ನನ್ನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ನನ್ನ ಮಂಚದಲ್ಲೇ ಮಲಗಿಕೊಳ್ಳುತ್ತಾ "ಭಯ ಆಗ್ತಿದೆ... ಕೈ ಬಿಡಿಸಿಕೊಳ್ಳಬೇಡ" ಎಂದು ವಿನಂತಿಸತೊಡಗಿದ. "ಆಯ್ತು ಮಲ್ಕೊಳ್ಳೊ..." ಎಂದು ಮಲಗಿದೆ. ಆಗ ಅವನು ಒಂದು ಮಗು ಥರಾ ಅಂತ ಅನಿಸಿತು. ಬೆಳಿಗ್ಗೆ ಹೊಸ ಹುರುಪಿನೊಂದಿಗೆ ಎದ್ದು ವೈವಾ ಎದುರಿಸಿದೆವು. ( ವೈವಾದು ಇನ್ನೊಂದು ಕಥೆ. ಅದನ್ನು ಮುಂದಿನ ಅಧ್ಯಾಯದಲ್ಲಿ ಬರೆಯುವೆ.) ಆದರೂ ಇಬ್ಬರೂ ಸೆಲೆಕ್ಟ್ ಆಗಲಿಲ್ಲ. ಮುಂದೆ ಸಿಯುಕೆಗೆ ಬಂದೆವು. ಅಲ್ಲಿ ನಾನು ಸೆಲೆಕ್ಟ್ ಆದೆ. ಅಲ್ಲಿ ಅವನು ವಿಪರೀತ ಟೆನ್ಷನ್ ನಿಂದಾಗಿ ವೈವಾ ಸರಿಯಾಗಿ ಮಾಡದೇ ಸೆಲೆಕ್ಟ್ ಆಗಲಿಲ್ಲ. ಅಲ್ಲಿಗೆ ತನ್ನ ಪ್ರಯತ್ನ ಬಿಡದೇ ಆಂಧ್ರಪ್ರದೇಶದ ಕುಪ್ಪಂ "ದ್ರಾವಿಡ ವಿಶ್ವವಿದ್ಯಾಲಯ"ದಲ್ಲಿ ಪಿಎಚ್ ಡಿ ಸೀಟು ಪಡದೇಬಿಟ್ಟ. ಅವನ ಬದುಕು ಇನ್ನೊಂದು ಮಗ್ಗುಲಿಗೆ ಹೊರಳಿತು. ಬರೆದರೆ ಅದು ಇನ್ನೊಂದು ಅಧ್ಯಾಯ...


ನಿಮ್ಮವನು,
- ರಾಜ್

ಕಾಮೆಂಟ್‌ಗಳಿಲ್ಲ: