ಸೋಮವಾರ, ಮೇ 1, 2023

ಒಂಬತ್ತು ವರ್ಷಗಳ ಸುದೀರ್ಘ ಹಾದಿಯಲ್ಲಿ ನಾನು, ನನ್ನ ಬೈಕು

ನಾನು ಮತ್ತು ನನ್ನ ಬೈಕು

ನನ್ನ ಈ  "Honda Shine"  ಬೈಕ್ ನೊಂದಿಗೆ ಸುತ್ತಾಟ ಶುರುವಾಗಿ ಇವತ್ತಿಗೆ ಭರ್ತಿ ಒಂಬತ್ತು ವರ್ಷಗಳಾದವು. ಇದರೊಂದಿಗೆ ನನ್ನ ಸಾವಿರಾರು ನೆನಪುಗಳಿವೆ. ನೂರಾರು ಘಟನೆಗಳಿಗೆ ಇದು ಸಾಕ್ಷಿಯಾಗಿದೆ. ಒಂಬತ್ತು ವರ್ಷದ ಹಿಂದೆ ಇದೇ ದಿನ...  ಮೇ ೧, ೨೦೧೪ ರಂದು ನಮ್ಮೂರಿನ "ಹೋಂಡಾ ಬೈಕ್ ಶೋ ರೂಂ" ನಿಂದ ಈ "ಶೈನ್ ಬೈಕ್" ಹೊರತಂದಿದ್ದೆ. ಅದಕ್ಕೂ ಮುಂಚೆ ಗೆಳೆಯನೊಬ್ಬನ ಹಳೇ ಟಿವಿಎಸ್ ವಿಕ್ಟರ್ ಬೈಕ್ ನ್ನು ಒಂದೆರಡು ಸಲ ಆತಂಕದಿಂದ ಓಡಿಸಿದ್ದೆ ಮತ್ತು ನಮ್ಮದೇ ಹಳೇ ಮಾಡೆಲ್ ನ ಹೀರೋ ಹೋಂಡಾ ಬೈಕ್ ನ್ನು ಓಡಿಸಿದ್ದನ್ನು ಬಿಟ್ಟರೆ  ಆಗಿನ್ನೂ ನಾನು ಬೈಕ್ ರೈಡಿಂಗ್ ನಲ್ಲಿ ಅಷ್ಟಾಗಿ ಪಳಗಿರಲಿಲ್ಲ. ಆದರೂ ಬೈಕ್  ರೈಡಿಂಗ್ ಕ್ರೇಜ್ ಇತ್ತು.  ಬೈಕ್ ಹಿಂದೆ ಲಗೇಜ್ ಹೇರಿಕೊಂಡು ಇಡೀ ಭಾರತವನ್ನು ಸುತ್ತಬೇಕೆಂಬುದು ನನ್ನ ಪುರಾತನ ಕನಸು ಇಂದಿಗೂ ನನಸಾಗದೇ ಹಾಗೇ ಉಳಿದುಕೊಂಡಿದೆ.  


ಬೈಕ್ ಖರೀದಿಸುವ ಮುನ್ನ  ಬೈಕ್ ನೋಡಲು ಶೋ ರೂಂ ಗೆ ಹೋದಾಗ ಅಲ್ಲಿ ಸಾಲಾಗಿ ನಿಂತ ಹೋಂಡಾ ಕಂಪನಿಯ ವಿವಿಧ ಬೈಕ್ ಗಳ ನಡುವೆ ಫಳಫಳ ಹೊಳೆಯುತ್ತಿದ್ದ ಈ ಬೂದುಬಣ್ಣದ ಶೈನ್ ಬೈಕ್ ತುಂಬಾ ಇಷ್ಟವಾಗಿಬಿಟ್ಟಿತು. ಪ್ರೀತಿಯಿಂದ ಮುಟ್ಟಿನೋಡಿದೆ. ಅದನ್ನೇ ತಗೋಬೇಕು ಅನ್ನೋ ತೀರ್ಮಾನವಾಯ್ತು. ಅದರ ಹಣೆ(!)ಯಲ್ಲಿ ನನ್ನನ್ನು ಹೊತ್ತು ತಿರುಗಬೇಕೆಂದು ಬರೆದಿತ್ತೇನೋ...?! ನನ್ನೊಂದಿಗೆ ಪಯಣ ಶುರುವಿಟ್ಟುಕೊಂಡಿತು. 


ಮೇ ೧, ೨೦೧೪  ರ ಬೆಳಿಗ್ಗೆ ೧೦ ಗಂಟೆಗೆ ಶೋ ರೂಂ ಗೆ ಹೋದೆ. ಮನಸ್ಸು ವಿವರಿಸಲಾರದ ಸಂಭ್ರಮದಲ್ಲಿ ಮುಳುಗಿತ್ತು.  ಶೋ ರೂಂ ನವರು ಬೈಕ್ ನ್ನು ನಿಧಾನವಾಗಿ ಕೆಳಗಿಳಿಸಿ ಅದಕ್ಕೆ ಸ್ನಾನಮಾಡಿಸಿ, ಮೈ  ಒರೆಸಿ ಕೀ ನನ್ನ ಕೈಗಿತ್ತರು. ಬೈಕ್ ಥಳಥಳಿಸುತ್ತಿತ್ತು. ಅಕ್ಕರೆಯಿಂದ ಅದರ ಮೈ ಸವರಿ ಸೀಟೆಂಬ ಸಿಂಹಾಸನವೇರಿ ವಿರಾಜಮಾನನಾದೆ. ಕೊಂಚ ಆತಂಕದಿಂದಲೇ ಇಗ್ನಿಷನ್ ಕಣ್ಣಿಗೆ ಕೀ ಚುಚ್ಚಿ, ಮೃದುವಾಗಿ ತಿರುವಿ, ಢವಢವಿಸುವ ಎದೆಬಡಿತದೊಂದಿಗೆ ಸ್ಟಾರ್ಟ್ ಬಟನ್ ಅದುಮಿದೆ ಅಷ್ಟೇ...! ತಕ್ಷಣ ಗುರುಗುಟ್ಟಿತು ನನ್ನ ಬೈಕ್..!!  ಅದಕ್ಕೆಲ್ಲಿ ನೋವಾಗಿಬಿಡುತ್ತೋ ಎಂಬ ಭಾವದಲ್ಲಿ ಮೆಲ್ಲಗೇ ಮೊದಲ ಗೇರ್ ತುಳಿದು ಸಣ್ಣಗೆ ಆ್ಯಕ್ಸಿಲೇಟರ್ ಹಿಂಡಿದೆ. ಗುರುಗುಡುತ್ತಾ ಮೆಲ್ಲಗೆ ಅಂಬೆಗಾಲಿಕ್ಕಿ ಚಲಿಸಲಾರಂಭಿಸಿತು. ಓಹ್..!  ಈಗ ರಿಲ್ಯಾಕ್ಸ್ ಆಗಿ ಕುಳಿತು ಚಕಚಕನೇ ಗೇರ್ ಬದಲಾಯಿಸಿ, ಆ್ಯಕ್ಸಿಲೇಟರ್ ತಿರುವಿದೆ. ರೊಯ್ರ್..... ಎಂಬ ಶಬ್ಧದೊಂದಿಗೆ ಹೆದ್ದಾರಿಯಲ್ಲಿ ಗೂಳಿಯಂತೆ ಮುನ್ನುಗ್ಗಿತು ನನ್ನ ಬೈಕ್..! ಗಾಳಿಯಲ್ಲಿ ತೇಲಿಹೋದ ಅನುಭವ..!! 

Ride with pride


ಬಿಡಿ, ಆಮೇಲೆ ಅದರೊಂದಿಗೆ ಅರ್ಧ ಕರ್ನಾಟಕ ಸುತ್ತಿದ್ದಾಯ್ತು. ವಿಜಯನಗರ, ಬಳ್ಳಾರಿ, ಕೊಪ್ಪಳ, ಯಾದಗಿರಿ, ರಾಯಚೂರು, ಗುಲಬರ್ಗಾ, ವಿಜಯಪುರ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ದಕ್ಷಿಣಕನ್ನಡ, ಉತ್ತರ ಕನ್ನಡ......  ಅದೆಷ್ಟು ಜಿಲ್ಲೆಗಳನ್ನು ಸುತ್ತಿದೆನೋ....  ಎಲ್ಲಿಯೂ ಒಂದಿಷ್ಟು ತಕರಾರು ಮಾಡದೇ ನನ್ನನ್ನು ಹೊತ್ತು ತಿರುಗಿದೆ.   ಅದರಲ್ಲೂ ನಮ್ಮೂರಿನಿಂದ ಗುಲಬರ್ಗಾ ದ ವರೆಗೆ ಸುಮಾರು ೩೫೦ ಕಿ.ಮೀ ಹಾದಿಯನ್ನು ಹಲವಾರು ಸಲ ಕ್ರಮಿಸಿದೆ. ನಮ್ಮೂರಿನಿಂದ ಕೊಡಗಿನವರೆಗೆ ಸುಮಾರು ೪೦೦ ಕಿ.ಮೀ ಹಾದಿಯನ್ನು ಒಂದೇ ದಿನದಲ್ಲಿ ಕ್ರಮಿಸಿದರೂ ಎಲ್ಲಿಯೂ ತೊಂದರೆಯನ್ನು ಕೊಡದೇ ಸುಮ್ಮನೇ ಜೊತೆ ಸಾಗಿದೆ. ಬಯಲುಸೀಮೆಯ ಬಿರುಬಿಸಿಲು, ಮಲೆನಾಡಿನ ತಂಪು, ಕರಾವಳಿಯ ಸೆಖೆ ಎಲ್ಲವನ್ನೂ ನನ್ನೊಂದಿಗೆ ನೋಡಿದೆ. ಸುರಿಯುವ ಮಳೆಯಲಿ, ಕೊರೆಯುವ ಚಳಿಯಲಿ, ಸುಡುಸುಡುವ ಬಿಸಿಲಿನಲಿ ನನ್ನೊಂದಿಗೆ ಸುಮ್ಮನೇ ಸಾಗಿದೆ. 


ನ್ಯಾಷನಲ್ ಹೈವೆ ೫೦ ರ ಸುವಿಶಾಲ ರಸ್ತೆಗಳಲ್ಲಿ,   ಧರ್ಮಸ್ಥಳದ ಹಾವುಹಾದಿಯ ತಿರುವುಗಳಲ್ಲಿ, ಕೊಡಗಿನ ಪರ್ವತಗಳ ಸಾಲಿನಲ್ಲಿ, ಶೃಂಗೇರಿ - ಹೊರನಾಡು- ಬಾಳೇಹೊನ್ನೂರಿನ ದಟ್ಟ ಕಾಡಿನ ರಸ್ತೆಗಳಲ್ಲಿ ಬೈಕ್ ರೈಡ್ ಥ್ರಿಲ್ ಕೊಟ್ಟಿದೆ. ಅದರಲ್ಲೂ ಬಾಳೇಹೊನ್ನೂರಿನ ಕಾಡಿನಲ್ಲಿ  ರೈಡ್ ಮಾಡಿದ್ದು ಮೈನವಿರೇಳಿಸುವಂತದ್ದು. ಶಿವಮೊಗ್ಗದಿಂದ ಎನ್.ಆರ್.ಪುರ ಮಾರ್ಗವಾಗಿ ಬಾಳೇಹೊನ್ನೂರಿಗೆ ಹೋಗುವ ಮಾರ್ಗವದು. ಎನ್.ಆರ್.ಪುರದ ವರೆಗಿನ ರಸ್ತೆ ಕಾಡಿನ ಹಾದಿಯೇನಲ್ಲ. ಆದರೆ ಎನ್. ಆರ್.ಪುರ ದಾಟಿ ಒಂದಿಷ್ಟು ದೂರ ಕ್ರಮಿಸಿದರೆ ಅಲ್ಲೊಂದು ಪುಟ್ಟ ಹಳ್ಳಿ (ಹೆಸರು ನೆನಪಿಲ್ಲ) ಸಿಗುತ್ತದೆ. ಆ ಹಳ್ಳಿಯ ಅಂಚಿಗೆ ರಸ್ತೆ  ಕವಲೊಡೆಯುತ್ತದೆ. ಅಲ್ಲಿ ದೊಡ್ಡದೊಂದು ಕಮಾನು. ಅಲ್ಲಿಂದ ಎಡಕ್ಕೆ ಹೋದರೆ ಶೃಂಗೇರಿ, ಬಲಕ್ಕೆ ಹೋದರೆ ಬಾಳೆಹೊನ್ನೂರು. ಅಲ್ಲಿಂದ ಬಾಳೇಹೊನ್ನೂರಿನವರೆಗೆ ಸುಮಾರು ೨೫ - ೩೦ ಕಿ.ಮೀ ದಟ್ಟವಾದ ಕಾಡು ಆರಂಭವಾಗುತ್ತದೆ. ಕಾಡನಡುವೆ ಅಲ್ಲಲ್ಲಿ ತೋಟದ ಮನೆಗಳು, ಒಂದೆರಡು ಹಳ್ಳಿಗಳು ಕಾಣಿಸುತ್ತವೆ.


ಅಲ್ಲಿ ವಾಹನಗಳು ಸಂಚರಿಸುವುದೇ ವಿರಳ. ದಟ್ಟ ಕಾಡಿನ ಕಿರಿದಾದ ರಸ್ತೆಗಳಲ್ಲಿ ಚಲಿಸುತ್ತಿದ್ದರೆ  ಎಡಬಲಗಳಲ್ಲಿ ಮುಗಿಲೆತ್ತರಕ್ಕೆ ಬೆಳೆದುನಿಂತ ಮರಗಳು ಸೂರ್ಯನ ಬೆಳಕು ನೆಲಕ್ಕೆ ತಾಕದಂತೆ ಹಗಲಿನಲ್ಲೇ ನಸುಗತ್ತಲೆಯನ್ನು ನಿರ್ಮಿಸಿಬಿಟ್ಟಿವೆ. ಕಾಡಿನ ಅಗಾಧತೆ ನನಗೆ ಅರಿವಾಗಿದ್ದೇ ಅಲ್ಲಿ. ಮಧ್ಯಾಹ್ನದ ಆ ನಿರ್ಜನ ನೀರವ ಮೌನದಲ್ಲಿ ಕಾಡಿನ ಮರ್ಮರ ಕಿವಿಗಪ್ಪಳಿಸುತ್ತದೆ.  ಶುದ್ಧ ಗಾವಿಲನಂತೆ ಗೂಗಲ್ ಮ್ಯಾಪ್ ನೋಡಿ ಬೈಕ್ ರೈಡಿಂಗ್ ಹೊರಟಿದ್ದ ನಾನು ಆ ರಸ್ತೆಗೆ ಹೊಸಬ.‌ ಕಾಡಿನ ಮಧ್ಯೆ ಅರಣ್ಯ ಇಲಾಖೆಯವರು ಒಂದು ಬೋರ್ಡ್ ನೆಟ್ಟಿದ್ದರು... "ಹುಲಿಗಳು ಸಂಚರಿಸುವ ಪ್ರದೇಶ. ಎಚ್ಚರಿಕೆಯಿಂದ ಚಲಿಸಿ". ಕಾಡಿನ ಮೌನ ಸೀಳಿಕೊಂಡು ಬೈಕ್ ಸದ್ದು ಮಾಡುತ್ತಾ ಚಲಿಸುತ್ತಿರುವಾಗ ಈ ಬೋರ್ಡ್ ನೋಡಿ ಭಯವೆಂಬುದು ಬೆನ್ನಮೂಳೆಯ ಆಳದೆಲ್ಲೆಲ್ಲೋ ಹುಟ್ಟಿಬಿಟ್ಟಿತು. ಮನುಷ್ಯ ಸಂಚಾರವಿಲ್ಲದ ಈ ಕಾಡುಹಾದಿಯಲ್ಲಿ ಬೈಕ್ ಪಂಕ್ಚರ್ ಆಗಿಬಿಟ್ಟರೆ...?  ಹುಲಿ ದಾಳಿ ಮಾಡಿಬಿಟ್ಟರೆ....? ಈ ಭಯ, ಆತಂಕ ಎಲ್ಲವನ್ನೂ ಆಳವಾಗಿ ಅನುಭವಿಸಿಬಿಟ್ಟೆ. ಹುಲಿ ಭಯ ಮಾತ್ರವಲ್ಲ; ಕಾಡಿನ ಆ ನಿಶ್ಯಬ್ಧತೆಯೇ ಹೆದರಿಕೆ ಹುಟ್ಟಿಸುತ್ತೆ. ಕಾರಿನಲ್ಲಿ ಹೋಗುವವರಿಗೆ ಇದೆಲ್ಲಾ ಅನುಭವಕ್ಕೆ ಬರಲಿಕ್ಕಿಲ್ಲ. ಕಾಡಿನ ನಡುವೆ ಕಾರ್ ನಿಲ್ಲಿಸಿ ಹತ್ತು ಹೆಜ್ಜೆ ಆ ರಸ್ತೆಯಲ್ಲಿ ನಡೆದರೆ ಅನುಭವವಾಗಬಹುದು.


ಇವತ್ತಿಗೂ ಕಾರ್ ಡ್ರೈವಿಂಗ್ ಗಿಂತ ಈ ಬೈಕ್ ರೈಡಿಂಗ್ ನೇ ಇಷ್ಟ. ಬೈಕ್ ಓಡಿಸುವ ಥ್ರಿಲ್ ಕಾರ್ ನಲ್ಲಿ ಸಿಗಲಾರದು. ನನ್ನ ಬೈಕ್ ಪ್ರೀತಿ ಕಂಡು ಈ "Honda Shine" ಬೈಕ್ ನ್ನು ನನಗೆ ಗಿಫ್ಟ್ ಆಗಿ  ಕೊಡಿಸಿದ್ದು ನನ್ನ ಸಹೋದರ ರಾಘು. ಅವನಿಗೆ ಬರೀ ಥ್ಯಾಂಕ್ಸ್ ಹೇಳಿದರೆ ಸಾಲದು. ಕೊನೆಯದಾಗಿ,  ಬೈಕ್ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ....  

"bike it's not only vehicle, it's our emotions....!"


 - ನಿಮ್ಮವನು, 

    ರಾಜ್  ❤