ಮಂಗಳವಾರ, ನವೆಂಬರ್ 3, 2020

ಅವಳೊಂದಿಗಿನ ನೆನಪುಗಳು (ಕಥೆ)

ಅವತ್ತು ಹೈದ್ರಾಬಾದ್ ನ ಡೆಕ್ಕನ್ ರೈಲ್ವೇ ಸ್ಟೆಷನ್ ಗೆ ಬಂದಾಗ ಇನ್ನು ಬೆಳಗಿನ ಏಳು ಗಂಟೆಯ ಸಮಯ. ಬಳ್ಳಾರಿಗೆ ಹೊರಡಲಿದ್ದ ರೈಲು ಇನ್ನು ಫ್ಲಾಟ್ ಫಾರಂನಲ್ಲೇ ಗುರುಗುಡುತ್ತಾ ವಿರಮಿಸುತ್ತಿತ್ತು. ಹಬೆಯಾಡುವ ಒಂದು ಬಿಸಿಬಿಸಿ ಟೀ ಕುಡಿದವನೇ ರೈಲನ್ನೇರಿದೆ. ರೈಲು ಸಿಳ್ಳೆ ಹಾಕಿ ಸಣ್ಣಗೆ ಚಲಿಸುತ್ತಿದ್ದಂತೆಯೇ ಕಡುನೀಲಿ ಜೀನ್ಸ್ ಪ್ಯಾಂಟ್, ತಿಳಿನೀಲಿ ಜೀನ್ಸ್ ಶರ್ಟ್ ತೊಟ್ಟಿದ್ದ ಯುವತಿಯೊಬ್ಬಳು ಅವಸರವಸರವಾಗಿ ಬೋಗಿಯೊಳಗೆ ನುಗ್ಗಿ ತನ್ನ ಏರ್ ಬ್ಯಾಗ್ ಸೂಟ್ ಕೇಸ್ ಗಳನ್ನು ಎಳೆದುಕೊಳ್ಳುತ್ತಾ ನನ್ನೆದುರಿಗಿನ ಸೀಟ್ ನಲ್ಲಿ ಉಸ್ಸೆಂದು ಕೂತಳು. ಬಹುಶಃ ಸ್ವಲ್ಪ ದೂರದಿಂದ ಓಡಿ ಬಂದಿರಬೇಕು. ಆಯಾಸದಿಂದಾಗಿ ಸಣ್ಣಗೆ ತೇಕುತ್ತಿದ್ದಳು. ಹಣೆಯಲ್ಲಿ ಮೂಡತೊಡಗಿದ್ದ ಬೆವರ ಹನಿಗಳನ್ನು ಒರೆಸಿಕೊಳ್ಳುತ್ತಾ ಕಿಟಕಿಯಿಂದ ಬೀಸುತ್ತಿದ್ದ ತಂಗಾಳಿಗೆ ಮುಖವೊಡ್ಡಿ ಕಣ್ಮುಚ್ಚಿ ದಣಿವಾರಿಸಿಕೊಳ್ಳತೊಡಗಿದಳು. ರೈಲು ನಿಧಾನವಾಗಿ ವೇಗವನ್ನೆತ್ತಿಕೊಳ್ಳತೊಡಗಿತು.


ಮೊದಲ ನೋಟದಲ್ಲಿ ಅವಳು ಆಕರ್ಷಕವಾಗಿಯೇನೂ ಕಾಣಲಿಲ್ಲ. ತೀರಾ ದಪ್ಪವೂ ಅಲ್ಲದ ತೀರಾ ತೆಳ್ಳಗೂ ಅಲ್ಲದ, ನಸುಗಪ್ಪು ಮೈ ಬಣ್ಣ, ಸಾಧಾರಣ ರೂಪ, ಕೆನ್ನೆಯಲ್ಲೊಂದಿಷ್ಟು ಮೊಡವೆಗಳು.... ಹುಡುಗಿಯೊಬ್ಬಳನ್ನು ಹಾಗೆಲ್ಲಾ ಸೂಕ್ಷ್ಮವಾಗಿ ದಿಟ್ಟಿಸಿನೋಡುವುದು ಅಸಭ್ಯವೆನಿಸಿ ಕಿಟಕಿಯೆಡೆಗೆ ಮುಖ ಚಾಚಿದೆ. ಕೊಂಚಹೊತ್ತಿಗೆ ಕಣ್ಣು ಮತ್ತೆ ಅವಳತ್ತ ತಿರುಗಲು ಚಡಪಡಿಸುತ್ತಿವೆಯೆನಿಸಿತು. ಬಹುಶಃ ಹಾಗಿರಲಿಕ್ಕಿಲ್ಲ. ಅವಳು ಸರಿಯಾಗಿ ನನ್ನೆದುರಿಗೆ ಕುಳಿತಿದ್ದು ಕಾರಣವಾಗಿರಬಹುದು. ಎಷ್ಟುಹೊತ್ತು ಕಿಟಕಿಯಲ್ಲಿ ಕಣ್ಣು ಕೀಲಿಸಿಕೊಂಡು ಕೂಡಲಿ? ಕತ್ತು ನೋಯುತ್ತಿದೆಯೆನಿಸಿ ಮುಖ ತಿರುಗಿಸಿದೆ. ಅದೇ ಕ್ಷಣ ಅವಳೂ ನನ್ನನ್ನೇ ನೋಡಿದಳು. ಇದು ಪದೇಪದೇ ಪುನರಾವರ್ತನೆಯಾದರೆ ಅವಳಿಗೂ ಇರಿಟೇಟ್ ಆಗಬಹುದು, ನನ್ನ ಬಗ್ಗೆಯೂ ತಪ್ಪು ಕಲ್ಪನೆ ಬರಬಹುದೆಂದುಕೊಂಡೆ. ಆದರೆ ಕಣ್ಣೆದುರಿಗೇ ಕುಳಿತಿದ್ದರಿಂದ ಮತ್ತೆ ಮತ್ತೆ ನೋಡುವ ಸಂಭವವಿತ್ತು. ದೂರದ ಪ್ರಯಾಣ ಬೇರೆ. 'ಹಾಯ್... ಹಲೋ...' ಅಂದು ಪರಿಚಯ ಮಾಡಿಕೊಳ್ಳೋಣವೆಂದರೆ ಅವಳು ಹೆಚ್ಚುಕಡಿಮೆ ನನ್ನದೇ ವಯಸ್ಸಿನ ಹುಡುಗಿ. ಪರಿಚಿತ ಹುಡುಗಿಯರನ್ನೇ ಮಾತಾಡಿಸಲು ಹಿಂಜರೆಯುತ್ತಿದ್ದ ನಾನು ನನ್ನದೇ ಓರೆಗೆಯ ಒಬ್ಬ ಅಪರಿಚಿತ ಹುಡುಗಿಯನ್ನು ಮಾತಾಡಿಸಿ ಪರಿಚಯಿಸಿಕೊಳ್ಳುವ ಜಾಣ್ಮೆ ಖಂಡಿತಾ ಇರಲಿಲ್ಲ. ಒಂದು ವೇಳೆ ನಾನು ಮಾತನಾಡಿಸಲು ಪ್ರಯತ್ನಿಸಿದರೂ ನನ್ನ ನಾಲಿಗೆ ನನಗೆ ಸಪೋರ್ಟ್ ಮಾಡುತ್ತದೆ ಎಂಬ ಭರವಸೆ ನನಗಿರಲಿಲ್ಲ. ಇದ್ಯಾವುದು ರಗಳೆ ಬೇಡವೆನ್ನಿಸಿ ಬ್ಯಾಗ್ ತಡಕಾಡಿ ಅರ್ಧ ಓದಿ ಮುಚ್ಚಿಟ್ಟಿದ್ದ "ಹೇಳಿಹೋಗು ಕಾರಣ" ಕಾದಂಬರಿ ಕೈಗೆತ್ತಿಕೊಂಡೆ. ಒಂದೆರಡು ನಿಮಿಷಗಳಲ್ಲಿ ಎಲ್ಲವನ್ನು ಮರೆತು ಕಾದಂಬರಿಯ ಹಿಮವಂತನ ದಿವ್ಯಪ್ರೇಮದಲ್ಲಿ ಮುಳುಗಿದೆ. 'ಪ್ರೇಮದ ಮಹೋನ್ನತಿಯ ಬಗ್ಗೆ ರವಿ ಬೆಳಗೆರೆ ಎಷ್ಟೊಂದು ಅತ್ಯದ್ಭುತವಾಗಿ ಬರೆದಿದ್ದಾರಲ್ಲವಾ' ಅಂತನಿಸಿತು.

"ಓಹ್! ಹೇಳಿಹೋಗು ಕಾರಣ ನಾ? ರವಿ ಬೆಳಗೆರೆ My favorite writer....!!" ಶೃತಿಗೊಂಡ ವೀಣೆಯ ತಂತಿಯೊಂದು ಸಣ್ಣಗೆ ಝೇಂಕರಿಸಿದಂತಾಯಿತು. ಫಕ್ಕನೇ ತಲೆಯೆತ್ತಿದೆ. ಅಚ್ಚರಿ ಬೆರೆತ ಕಂಗಳೊಂದಿಗೆ ಮುಗುಳ್ನಗುತ್ತಾ ಕೂತಿದ್ದ ಅವಳು ತಕ್ಷಣವೇ "ಅಯ್ಯೋ.. Sorry... Disturb ಮಾಡಿದ್ನೇನೋ... ಓದಿ, ಚೆನ್ನಾಗಿದೆ" ಅಂದು ಸುಮ್ಮನಾದಳು. 
"ಹಾಗೇನಿಲ್ಲ, ಇದು ಓದುತ್ತಿರುವುದು ನಾಲ್ಕನೇ ಸಲ" ಅಂದೆ. 
"ಓಹ್... ನಾಲ್ಕನೇ ಸಲವಾ...? You are a great reader" ಉಲಿದಳು. 
"Because of he... he is a great writer..." ಅಂದೆ. 
"ಹಾಯ್, ಐಯಾಮ್ ಮೋನಿ... ಮೋನಿಕಾ..." ಮುಗುಳ್ನಗೆಯೊಂದಿಗೆ ನನ್ನೆಡೆಗೆ ಕೈ ಚಾಚಿದಳು. "ಹಲೋ..." ಕೈ ಕುಲುಕಿ ಪರಿಚಯಿಸಿಕೊಂಡೆ. 

ಒಂದಿಷ್ಟು ಹಿಂಜರಿಕೆ ಸಂಕೋಚವಿಲ್ಲದೇ ದೃಢವಾಗಿ ಆತ್ಮವಿಶ್ವಾಸದಿಂದ ಅಪರಿಚಿತನೊಬ್ಬನೆಡೆಗೆ ಅವಳು ಕೈ ಚಾಚಿದ ರೀತಿಯೇ ಇಷ್ಟವಾಗಿಬಿಟ್ಟಿತು. ಅದು ತಕ್ಷಣವೇ ನನ್ನನ್ನು ಎಷ್ಟೊಂದು ಗಾಢವಾಗಿ ಪ್ರಭಾವಿಸಿತೆಂದರೆ ನಾನು ಸರಾಗವಾಗಿ ಅವಳೊಂದಿಗೆ ಮಾತಾಡಲಾರಂಭಿಸಿದೆ. ಮೂಲತಃ ಕೊಡಗಿನವಳಾದ ಅವಳು ಹೈದ್ರಾಬಾದ್ ನಲ್ಲಿ ಸ್ಲಂ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಿದ್ದ ಎನ್.ಜಿ.ಓ ವೊಂದರಲ್ಲಿ ಒಂದುವರ್ಷ ದುಡಿದು ಈಗ ಅದೇ ಎನ್.ಜಿ.ಓ ದ ಭಾಗವಾಗಿದ್ದ ಬಳ್ಳಾರಿಯ ಶಾಖೆಗೆ ವರ್ಗಾವಣೆ ಮಾಡಿಸಿಕೊಂಡು ಹೊರಟಿದ್ದಳು.. ಸಾಹಿತ್ಯ, ಆಧ್ಯಾತ್ಮ, ಪ್ರೇಮ, ತಿರುಗಾಟ, ಓದು, ಬದುಕು.... ಇತ್ಯಾದಿಗಳ ಬಗ್ಗೆ ಹರಟತೊಡಗಿದ್ದೆವು. ಬಳ್ಳಾರಿ ತಲುಪುವ ವೇಳೆಗೆ ಆತ್ಮೀಯತೆಯ ತಂತು ಇಬ್ಬರ ನಡುವೆ ಬೆಸೆದಿತ್ತು. ಮತ್ತು ಆ ನಂತರವೂ ಆ ಆತ್ಮೀಯತೆ ಮುಂದುವರಿಯಿತು. ಪರಿಚಯದ ಆರಂಭದ ದಿನಗಳಲ್ಲಿದ್ದ ಬಹುವಚನ ಕೆಲವೇ ದಿನಗಳಲ್ಲಿ ಏಕವಚನದ ಸಲುಗೆಗೆ ತಿರುಗಿತ್ತು. ಇಬ್ಬರ ಮಧ್ಯೆ ಇದ್ದ ಸಂಕೋಚದ ತೆರೆಗಳು ಸರಿದಿದ್ದವು.

 ********************* 

ಬಳ್ಳಾರಿಗರ ಪಾಲಿಗೆ ಜಗತ್ಪ್ರಸಿದ್ಧ ತಿಂಡಿಯೆಂದರೆ ಒಗ್ಗರಣೆ ಮಿರ್ಚಿ. ಬಹುತೇಕ ಬಳ್ಳಾರಿಗರ ಬೆಳಿಗ್ಗೆ ಆರಂಭವಾಗುವುದೇ ಒಗ್ಗರಣೆ ಮಿರ್ಚಿಯಿಂದ. ಅದು ಬಳ್ಳಾರಿಯ ಸ್ಪೆಷಲ್! ನಾವಿಬ್ಬರೂ ಅದರ ರುಚಿಗೆ ಮನಸೋತಿದ್ದೆವು. ಬರೀ ಇಪ್ಪತೈದು ರುಪಾಯಿಗೆ ಬೊಗಸೆ ತುಂಬಾ ಒಗ್ಗರಣೆ, ಎರಡು ಬಿಸಿ ಬಿಸಿ ಮಿರ್ಚಿ. ಅದರಲ್ಲೂ ನಟರಾಜ – ಉಮಾ ಥಿಯೇಟರ್ ನ ಬೀದಿಯಲ್ಲಿದ್ದ ಹೆಸರಿಲ್ಲದ ಚಿಕ್ಕಚಿಕ್ಕ ಹೋಟೆಲ್ ಗಳಲ್ಲಿನ ಒಗ್ಗರಣೆ ಮಿರ್ಚಿಯ ರುಚಿ ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. “ಯಾವ ಫೈವ್ ಸ್ಟಾರ್ ಹೋಟೆಲಿನಲ್ಲೂ ಕೂಡಾ ಈ ರುಚಿ ಸಿಗಲ್ಲ ನೋಡು” ಒಗ್ಗರಣೆ ಮಿರ್ಚಿ ಚಪ್ಪರಿಸುತ್ತಾ ಮೋನಿ ಅದೆಷ್ಟು ಸಲ ಅಂದಿದ್ದಳೋ. ಅವಳು Down to earth. ಬೀದಿಬದಿಯ ತಳ್ಳುಗಾಡಿಯ ಇಡ್ಲಿ ಚಿತ್ರಾನ್ನವನ್ನು ಕೂಡಾ ಇಷ್ಟಪಟ್ಟು ತಿನ್ನುತ್ತಿದ್ದಳು. ಅವಳಿಗೆ ಹೆಚ್ಚಿನ ನಿರೀಕ್ಷೆ, ಆಸೆ, ಬೇಡಿಕೆಗಳಿರಲಿಲ್ಲ. ತುಸು ಬೋಲ್ಡ್ ಹುಡುಗಿಯೆನಿಸಿದರೂ ತುಂಬಾ ಸರಳ ವ್ಯಕ್ತಿತ್ವದವಳು. ಆ ಕಾರಣಕ್ಕೆ ನನಗೆ ಇಷ್ಟವಾದವಳು. ಅದು ಆಗಸ್ಟ್ ತಿಂಗಳ ಭಾನುವಾರ. ರಾತ್ರಿಯಿಡೀ ಧಾರಾಕಾರ ಮಳೆ ಸುರಿದಿದ್ದರಿಂದಲೋ ಏನೋ ಬೆಳಿಗ್ಗೆ ತುಂಬಾ ಹೊತ್ತಾದರೂ ಬಿಸಿಲು ಮೂಡಿರಲಿಲ್ಲ. ಬಳ್ಳಾರಿಯ ಮುಗಿಲು ಮುಸುಕುಹೊದ್ದು ಮಲಗಿತ್ತು. ಅದೇ ನಟರಾಜ – ಉಮಾ ಥಿಯೇಟರ್ ಬೀದಿಯಲ್ಲಿದ್ದ ಚಿಕ್ಕ ಹೋಟೆಲ್ಲೊಂದರಲ್ಲಿ ಇಬ್ಬರೂ ಒಗ್ಗರಣೆ ಮಿರ್ಚಿ ಸವಿದೆವು. ಹೋಟೆಲ್ಲಿಂದ ಹೊರಬಂದು ಇನ್ನೇನು ಬೈಕ್ ಏರಬೇಕೆನ್ನುವಷ್ಟರಲ್ಲಿ "ಕೀ ಪ್ಲೀಸ್…” ಮೋನಿ ಕೈವೊಡ್ಡಿದಳು. ಮೌನವಾಗಿ ಬೈಕ್ ಕೀ ಅವಳ ಕೈಗಿಟ್ಟೆ. ಧರಿಸಿದ್ದ ಶರ್ಟ್ ನ ತೋಳೇರಿಳಿಸಿಕೊಂಡು ಬೈಕ್ ಏರಿ ಇಗ್ನಿಷನ್ ಗೆ ಕೀ ಚುಚ್ಚಿ ಬಲವಾಗಿ ಕಿಕ್ ಹೊಡೆದಳು. ತಕ್ಷಣ ಬೈಕ್ ಗುರುಗುಟ್ಟಿತು. ನಾನು ಅಚ್ಚರಿಯಿಂದ ಅವಳನ್ನೇ ನೋಡುತ್ತಿದ್ದೆ. "ಬಾ ಹಿಂದೆ ಕೂತ್ಕೊ" ಅಂದವಳೇ ಆಕ್ಸಿಲೇಟರ್ ಹಿಂಡತೊಡಗಿದಳು. ಬೈಕ್ ಹತ್ತಿದ ತಕ್ಷಣ ಬಳ್ಳಾರಿಯ ಸಂದಿಗೊಂದಿಗಳಲ್ಲಿ ಲೀಲಾಜಾಲವಾಗಿ ಬೈಕ್ ಓಡಿಸುತ್ತಾ, ಹಂಪ್ ಗಳಲ್ಲಿ ಗಕ್ಕನೆ ಬ್ರೇಕ್ ಹಾಕಿ, ಕ್ಲಚ್ ಒತ್ತಿ ಚಕಚಕನೆ ಗೇರು ಬದಲಿಸಿ ವೇಗ ಹೆಚ್ಚಿಸತೊಡಗಿದಳು. "ಗಟ್ಟಿಯಾಗಿ ಹಿಡ್ಕೊಳ್ಳೋ, ಬಿದ್ದುಬಿಟ್ಟಿಯಾ" ಕೂಗಿದಳು. ಹಿಡಿದುಕೊಳ್ಳಲು ಏನಿದೆ ? ಅವಳ ಭುಜವನ್ನು ಹಿಡಿದುಕೊಂಡೆ. ನುರಿತ ಬೈಕ್ ಸವಾರರಂತೆ ಗಾಳಿಯನ್ನು ಸೀಳಿಕೊಂಡು ಮುನ್ನುಗ್ಗುತ್ತಿದ್ದ ಅವಳ ವೇಗಕ್ಕೆ ಬೆರಗಾದೆ. ಒಂದು ದೊಡ್ಡ ಪೊದೆಯಂತೆ ಹಾರಾಡುತ್ತಿದ್ದ ಅವಳ ಜೊಂಪೆ ಜೊಂಪೆ ಗುಂಗುರು ಕೂದಲು ನನ್ನ ಇಡೀ ಮುಖವನ್ನು ಮುಚ್ಚಿಹಾಕಿತ್ತು. ಅದರೊಳಗಿನಿಂದ ಹೊರಸೂಸುತ್ತಿದ್ದ ಸೀಗೆಯ ಘಮ ದಟ್ಟವಾಗಿ ಆವರಿಸಿತ್ತು . ಕೋಟೆ ಪ್ರದೇಶದ ಒಳಗಿನಿಂದ ನುಗ್ಗಿ ಬೆಟ್ಟದ ಬುಡಕ್ಕೆ ತಲುಪಿ ಬ್ರೇಕ್ ಹಾಕಿ ನಿಲ್ಲಿಸಿದಳು.

ಮೊದಲು ಬಳ್ಳಾರಿಗೆ ಬಂದಾಗ ನನ್ನನ್ನು ಆಕರ್ಷಿಸಿದ್ದು ಬೃಹತ್ ಬೆಟ್ಟ, ಇಲ್ಲಿನ ಕೋಟೆ. ನನ್ನ ಏಕಾಂತದ ಸಮಯವನ್ನು ಬೆಟ್ಟದ ಮೇಲಿನ ಬೃಹದಾಕಾರದ ಬಂಡೆಗಳ ನಡುವೆ ಕಳೆಯುತ್ತಿದ್ದೆ. ಅಲ್ಲಿಂದ ಕೆಳಗೆ ಕಾಣುವ ಬಳ್ಳಾರಿ ನಗರದ ವಿಹಂಗಮ ನೋಟ, ನಗರದ ನಡುವೆ ಇರುವೆಗಳಂತೆ ಓಡಾಡುವ ಜನರು, ಕಡ್ಡಿ ಪೆಟ್ಟಿಗೆಯಂತೆ ಚಲಿಸುವ ಬಸ್ಸು ಕಾರುಗಳು, ಊರ ಸುತ್ತಲಿನ ಹಳ್ಳಿಗಳ ಹೊಲಗದ್ದೆಗಳು... ಇವುಗಳನ್ನೆಲ್ಲಾ ನೋಡುತ್ತಾ ಕ್ಯಾಮೆರಾದಲ್ಲಿ ಚಿತ್ರ ಸೆರೆ ಹಿಡಿಯುತ್ತಿದ್ದೆ. ಮೋನಿಕಾ ಪರಿಚಯವಾದ ನಂತರ ಬೆಟ್ಟದ ಸಾಂಗತ್ಯವನ್ನು ಮರೆತಿದ್ದೆ. 
"ಏನೇ ಮಾರಾಯ್ತಿ ಎಷ್ಟು ಸ್ಪೀಡಾಗಿ ಓಡಿಸ್ತೀಯಲ್ಲಾ… ಇದನ್ಯಾವಾಗ ಕಲಿತೆ?’’ ಎಂದೆ ಸುಧಾರಿಸಿಕೊಳ್ಳುತ್ತಾ. 
"ಅಯ್ಯೋ ಇದಾ...? ಪಿಯು ಓದುವಾಗಲೇ ಕಲಿತದ್ದು, ಲೆಟ್ಸ್ ಗೋ.. ಬೆಟ್ಟ ಹತ್ತೋಣ" ಎನ್ನುತ್ತಾ ಜಿಂಕೆಯಂತೆ ಚಿಮ್ಮುತ್ತಾ ಬೆಟ್ಟ ಏರತೊಡಗಿದಳು. ರಾತ್ರಿಯಿಡೀ ಭಾರೀ ಮಳೆ ಸುರಿದಿದ್ದರಿಂದ ಬೆಟ್ಟದ ಮೇಲೆ ಅಲ್ಲಲ್ಲಿ ಸಣ್ಣ ನೀರ ತೊರೆಗಳು ಹರಿಯುತ್ತಿದ್ದು ಹಿತವಾದ ವಾತಾವರಣ ಅರಳಿಕೊಂಡಿತ್ತು. ಅರಳು ಹುರಿದಂತೆ ಚಟಪಟನೆ ಮಾತಾಡುವ ಮೋನಿಯ ಮಾತಿಗೆ ಮಾತು ಸೇರಿಸುತ್ತಾ ಹೆಜ್ಜೆ ಹಾಕತೊಡಗಿದೆ. ಮಳೆ ಸುರಿದು ನಿಂತ ಆಕಾಶ ಸುಸ್ತಾದಂತಿತ್ತು. ಮಾತು ಜಲಪಾತವಾಗಿ ಪ್ರವಹಿಸಿತೊಡಗಿದವು. ನಾನು ಮಾತನಾಡುವುದಕ್ಕಿಂತ ಅವಳು ಮಾತನಾಡಿದ್ದೇ ಹೆಚ್ಚು. ಸುಮ್ಮನೇ ಅವಳ ಹಾವಭಾವ, ಕಣ್ರೆಪ್ಪೆಗಳ ಕದಲಿಕೆಯನ್ನು ನೋಡುತ್ತ ಕುಳಿತುಬಿಟ್ಟೆ. ಮೋನಿಕಾ ಕಪ್ಪೆಚಿಪ್ಪಿನೊಳಗಿನ ಮುತ್ತಿನಂಥವಳು. ಇತರರ ಗಮನ ಸೆಳೆಯುವಷ್ಟು ಸುಂದರಿಯಲ್ಲದಿದ್ದರೂ ಲಕ್ಷಣವಾಗಿದ್ದಳು. ಸುಂದರಿಯೆನಿಸಿಕೊಳ್ಳುವ ಖಯಾಲಿಯೂ ಅವಳಿಗಿರಲಿಲ್ಲ. ಅವಳು ಹೆಜ್ಜೆ ಇಟ್ಟಾಗಲೊಮ್ಮೆ ಅವಳ ಹೆಗಲಮೇಲಿನ ಜೊಂಪೆ ಜೊಂಪೆ ಕೂದಲು ಸ್ಪ್ರಿಂಗಿನಂತೆ ತೊನೆಯುತಿತ್ತು. ಅಲಂಕಾರವಿಲ್ಲದ ಅವಳ ಮುಖ ಸಹಜತೆಯ ಬಿಂಬವಾಗಿತ್ತು. ಆ ಸಹಜತೆ ಅವಳ ಪ್ರತಿ ಕದಲಿಕೆಯಲ್ಲಿತ್ತು. ತಿದ್ದಿ ತೀಡಿದಂತಹ ಹುಬ್ಬು, ಭಾವನೆಗಳನ್ನು ಅಭಿವ್ಯಕ್ತಿಸಬಲ್ಲ ಜೇನುಬಣ್ಣದ ಕಣ್ಣು, ಪುಟ್ಟ ಮೂಗು, ಆ ಮೂಗಿಗೊಂದು ಚುಕ್ಕೆಯಂತಹ ಮೂಗುತಿ.... ಅವಳಲ್ಲೊಂದು ಅಗೋಚರ ಸೌಂದರ್ಯ ಅಡಗಿರುವುದನ್ನು ಮನ ಹುಡುಕಿತ್ತು. ಸ್ವಲ್ಪಹೊತ್ತಿನ ನಂತರ ಮಾತುಗಳು ಖಾಲಿ ಖಾಲಿಯೆನಿಸಿ ಸುಮ್ಮನೇ ಕುಳಿತೆವು. ಕೆನ್ನೆಗೆ ಮುತ್ತಿಕ್ಕುತ್ತಿದ್ದ ಅವಳ ಮುಂಗುರುಳನ್ನು ಕಿವಿ ಬದಿಗೆ ಸರಿಸಿಟ್ಟು.... 
"ಕಳೆದುಕೊಂಡಿದ್ದನ್ನು ಹುಡುಕಿ ಪಡೆಯುವುದೇ ಜೀವನ ಅಲ್ವಾ?" ಎಂದಳು ನನ್ನೆಡೆಗೆ ನೋಡುತ್ತಾ. ಹಾಗನ್ನುವುದಕ್ಕಿಂತ "ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ತುಡಿಯುವುದೇ ಜೀವನ" ಅಂದೆ. ಅದುವರೆಗೆ ಮುಸುಕಿಕೊಂಡಿದ್ದ ಆಕಾಶದಲ್ಲಿ ನಿಧಾನವಾಗಿ ಹಿಂಡುಹಿಂಡಾಗಿ ಕಪ್ಪನೆಯ ದಟ್ಟ ಮೋಡಗಳು ಜಮೆಯಾಗತೊಡಗಿದವು. 'ಥಪ್...' ಎಂದು ಮೊದಲ ಹನಿ ಮೋನಿಯ ಕೆನ್ನೆಗೆ ಬಿದ್ದಾಕ್ಷಣ ದೂರದಲ್ಲೆಲ್ಲೋ ಫಳ್ಳೆಂದು ಮಿಂಚು ಮಿಂಚಿ ಮರೆಯಾಯಿತು. ನಿಧಾನವಾಗಿ ಮಳೆ ಹನಿಯತೊಡಗಿತು. ಓಡಿ ಹೆಬ್ಬಂಡೆಯೊಂದರ ಮರೆಯಲ್ಲಿ ನಿಂತಿದ್ದೇವಾದರೂ ಮಳೆ ಆರ್ಭಟಕ್ಕೆ ಸಿಲುಕಿ ಇಬ್ಬರೂ ತೊಯ್ದು ತೊಪ್ಪೆಯಾದೆವು. ನಾವು ಇನ್ನು ಮರೆಯಲ್ಲೇ ನಿಲ್ಲುವುದು ಉಪಯೋಗವಿಲ್ಲವೆನಿಸಿ ಮಳೆಗೆ ನಮ್ಮನ್ನು ನಾವು ತೆರೆದುಕೊಂಡೆವು. ಸ್ವಲ್ಪಹೊತ್ತು ಅಷ್ಟೇ, ಮಳೆಯ ಆರ್ಭಟ ತಗ್ಗಿ ತುಂತುರು ಹನಿಯಾಗಿ ನಿಂತಿತು. ಬೆಟ್ಟ ಇಳಿಯತೊಡಗಿದೆವು. ಅದೆಲ್ಲಿಂದಲೋ ಜೋರಾಗಿ ಬೀಸಿ ಬಂದ ತಣ್ಣನೆಯ ಗಾಳಿಗೆ ಮೋನಿ 'ಹ್ಮ್...' ಎಂದು ಸಣ್ಣಗೆ ಚೀರಿದವಳೇ ಬಿಗಿಯಾಗಿ ತಬ್ಬಿಕೊಂಡಳು. ಅದು ನನಗೆ ಅನಿರೀಕ್ಷಿತ! ಎದೆಬಡಿತವೆಂಬುದು ನಗಾರಿಯಾಯಿತು. ಕೆಲವೇ ಕ್ಷಣಗಳಲ್ಲಿ ಎಚ್ಚೆತ್ತು ತೆಕ್ಕೆ ಸಡಿಲಿಸಿ ಮುಖದ ಮೇಲೆ ನಾಚಿಕೆಯ ಎಳೆಯೊಂದನ್ನು ಎಳೆದುಕೊಂಡು, ತುಟಿಯ ತುದಿಯಲ್ಲಿ ಕ್ಷೀಣವಾದ ಕಿರುನಗೆಯೊಂದನ್ನು ಮೂಡಿಸಿಕೊಂಡು ಸುಮ್ಮನಾದಳು. ಮೊದಲ ಬಾರಿಗೆ ಅವಳ ಮುಖದಲ್ಲಿ ಹೆಣ್ತನದ ನಾಚಿಕೆಯ ಭಾವ! ಬೆಟ್ಟವಿಳಿದಾಗ ಇಬ್ಬರ ಉಸಿರೂ ಭಾರವಾಗಿದ್ದವು. ಅವಳ ಸಾಂಗತ್ಯದಲ್ಲಿ ಮೂರು ವರ್ಷಗಳು ಹೇಗೆ ಕಳೆದುಹೋದವೋ ಗೊತ್ತಾಗಲಿಲ್ಲ. ಜೀವನೋತ್ಸಾಹವೆಂಬುದು ಅವಳ ಪ್ರತಿ ಹೆಜ್ಜೆಯಲ್ಲಿ ಪುಟಿಯುತಿತ್ತು.

 ****************************

“ನಿನಗೊಂದು ಸರ್ ಪ್ರೈಸ್ ಕಾದಿದೆ ಗುರುವೇ...” ಎನ್ನುತ್ತಾ ಕೈ ಹಿಡಿದು ತನ್ನ ರೂಮ್ ಗೆ ಕರೆತಂದಾಗ ಬಳ್ಳಾರಿ ನಸುಗತ್ತಲೆಯಲ್ಲಿ ಮುಳುಗುತಿತ್ತು. ಪರಿಚಯವಾಗಿ ಮೂರು ವರ್ಷಗಳು ಕಳೆದಿದ್ದರೂ ಮೊದಲ ಬಾರಿಗೆ ಅವಳ ರೂಮಿನಲ್ಲಿ ಕಾಲಿಟ್ಟಿದ್ದೆ. ಅಪ್ಪಟ ಬ್ಯಾಚುಲರ್ ಹುಡುಗನೊಬ್ಬನ ರೂಮಿನಂತಿತ್ತು. ಒಳಬಾಗಿಲಲ್ಲಿ ನಾಲ್ಕೈದು ಜೊತೆ ಶೂಗಳು ಗುಂಪಾಗಿ ಬಿದ್ದಿದ್ದವು. ಮೂಲೆಯಲ್ಲಿ ಪುಸ್ತಕದ ರಾಶಿ, ಚೇರೊಂದರ ಮೇಲೆ ಒಣಗಲು ಹರಡಿದ್ದ ಒದ್ದೆ ಟವೆಲ್ಲು, ಇನ್ನೊಂದು ಚೇರ್ ಮೇಲೆ ಅಡ್ಡಾದಿಡ್ಡಿ ಸುತ್ತಿಟ್ಟ ಪ್ಯಾಂಟು ಶರ್ಟುಗಳ ರಾಶಿ, ಟೇಬಲ್ ಮೇಲೆ ತಿಂದಿಟ್ಟಿದ್ದ ಪ್ಲೇಟ್, ನೆಲದ ಮೇಲೆ ಅಲ್ಲಲ್ಲಿ ಬಿದ್ದಿದ್ದ ಬ್ರೆಡ್ ಚೂರುಗಳು, ಗೋಡೆಯುದ್ದಕ್ಖೂ ಹರಡಿದ ಜೇಡರಬಲೆ, ರೂಮಿನ ಕಮಟು ವಾಸನೆ, ಅಸ್ತವ್ಯಸ್ತವಾಗಿ ಮಂಚದ ಮೇಲೆ ಹರಡಿದ್ದ ಹಾಸಿಗೆ ದಿಂಬುಗಳು..... 
“ಇರು ಒಂದ್ನಿಮಿಷ, ಎಲ್ಲಾ ಕ್ಲೀನ್ ಮಾಡ್ತೀನಿ” ಎಂದವಳೇ ಪೊರೆಕೆಗಾಗಿ ಹುಡುಕತೊಡಗಿದಳು. 
“ಇರ್ಲಿ ಬಿಡೆ, ನಾನೇನು ಗೆಸ್ಟ್ ಅಲ್ಲ. ನೀನು ಹೀಗಿರೋದೆ ಇಷ್ಟ” ಎನ್ನುತ್ತಾ ಚೇರ್ ಮೇಲಿದ್ದ ಬಟ್ಟೆ ರಾಶಿ ಎತ್ತಿಟ್ಟು ಕೂತೆ. ಮಂಚದ ಒಂದು ಬದಿಗೆ ಓಷೋನ 'ಸಂಭೋಗದಿಂದ ಸಮಾಧಿವರೆಗೆ' ಬುಕ್ ಅರ್ಧಕ್ಕೆ ತರೆದುಕೊಂಡು ಬೋರಲಾಗಿ ಮಲಗಿತ್ತು. ಬಹುಶಃ ಮೋನಿ ರಾತ್ರಿ ಅದನ್ನು ಓದುತ್ತಾ ಓದುತ್ತಾ ನಿದ್ರೆ ಬಂದಂತಾಗಿ ಅರ್ಧಕ್ಕೆ ಮುಚ್ಚಿಟ್ಟಿರಬೇಕೆಂದುಕೊಂಡು ಕುತೂಹಲದಿಂದ ಕೈಗೆತ್ತಿಕೊಂಡೆ. 
“ನನಗೆ ಹೇಗೆ ಬದುಕಬೇಕೆಂದು ಕಲಿಸಿಕೊಟ್ಟ ಮಹಾಗುರು ಓಷೋ ರಜನೀಶ್. ಅವನ ಬಗ್ಗೆ ಅರೆಬರೆ ತಿಳ್ಕೊಂಡ ಜನರು ಅವನಿಗೆ ಸೆಕ್ಸ್ ಗುರು ಅಂತ ಕರೀತಾರೆ. ಆದರೆ ನಿಂಗೊತ್ತಾ? ಅವನು ಸೆಕ್ಸ್ ಗಿಂತ ಹೆಚ್ಚಾಗಿ ಧ್ಯಾನದ ಬಗ್ಗೆ ಮಾತಾಡಿದ್ದಾನೆ.” ಮೋನಿ ವಿವರಿಸತೊಡಗಿದಳು. ಬೆರಗಿನಿಂದ ಅವಳನ್ನೇ ನೋಡಿದೆ. ಅವಳ ಓದಿನ ವ್ಯಾಪ್ತಿ ತುಂಬಾ ವಿಸ್ತಾರವೆನಿಸಿತು. 

“ಏನು ಸರ್ ಪ್ರೈಸ್ ಹೇಳೆ....” ಅವಸರಿಸಿದೆ. 
"ಬದುಕೆಂಬುದೇ ಚಿಕ್ಕ ಚಿಕ್ಕ ಅಚ್ಚರಿಗಳ ಸಂತೆ ಕಣೋ, ಆಚಾರ್ಯ ಓಷೋ ರಜನೀಶ್ ಹೇಳಿಲ್ವಾ? ಅಚ್ಚರಿಗಳನ್ನು ಹುಡುಕಿಕೊಳ್ಳುವ ವ್ಯವಧಾನ ಮತ್ತು ಆಸಕ್ತಿ ನಮ್ಮಲ್ಲಿರಬೇಕು ಅಷ್ಟೇ" ಎನ್ನುತ್ತಾ ಕಣ್ಣು ಮಿಟುಕಿಸಿ ರೂಂ ನ ಲೈಟ್ ಆಫ್ ಮಾಡಿದಳು. ಮೊಂಬತ್ತಿಯೊಂದನ್ನು ಬೆಳಗಿಸಿ ಟೇಬಲ್ ಮೇಲಿಟ್ಟು “ಎ ಕ್ಯಾಂಡಲ್ ಡಿನ್ನರ್ ವಿಥ್ ಯೂ..” ನಗೆಯರಳಿಸಿದಳು. 
ದೀಪದ ಬೆಳಕಿನಲ್ಲಿ ಅವಳ ಮುಖ ಇನ್ನಷ್ಟು ಚೆಲುವಿನಿಂದ ಕಂಗೊಳಿಸಿತು. ಮೂಲೆಯಲ್ಲಿದ್ದ ಚಿಕ್ಕ ರೆಫ್ರಿಜರೇಟರ್ ನ ಬಾಗಿಲು ತರೆದಳು. ಬಿಚ್ಚಿಕೊಂಡ ರೆಫ್ರಿಜರೇಟರ್ ನ ತಿಳಿಹಳದಿ ಬಣ್ಣದ ಬೆಳಕಿನಲ್ಲಿ ಸಾಲಾಗಿ ಜೋಡಿಸಲ್ಪಟ್ಟ ವಿವಿಧ ಬಗೆಯ ಮದ್ಯದ ಬಾಟಲಿಗಳು, ಸೋಡಾ ಬಾಟಲಿಗಳು,ತಂಪು ಪಾನೀಯಗಳು, ಕೆಲವೊಂದಿಷ್ಟು ಹಣ್ಣುಗಳು ಅಲ್ಲಿದ್ದವು. 
"ವೋಡ್ಕಾ ಮೈ ಆಲ್ ಟೈಮ್ ಫೇವರಿಟ್.." ಎನ್ನುತ್ತಾ ಬಾಟಲಿಯೊಂದಿಗೆ ಎರಡು ಗ್ಲಾಸುಗಳನ್ನು ಟೀಪಾಯಿ ಮೇಲಿಟ್ಟು ಅದರ ಜೊತೆಗೆ ಚಿಪ್ಸ್, ಕುರುಕಲು ತಂದಿಟ್ಟಳು . 
"ನೀನು ಕುಡಿತೀಯಾ..?" ಅಚ್ಚರಿಯಿಂದ ಕೇಳಿದೆ. 
"ಇಲ್ಲ ಪೂಜೆ ಮಾಡಕ್ಕೆ ಇಟ್ಟುಕೊಂಡಿದ್ದೀನಿ" ತುಂಟ ಉತ್ತರ ಅವಳದಾಗಿತ್ತು . 
ಎರಡು ಗ್ಲಾಸ್ ಗಳಿಗೆ ಅರ್ಧರ್ಧ ದ್ರವ ಸುರಿದು, ಐಸ್ ಕ್ಯೂಬ್ ಹಾಕಿ "ತಗೋ ಚಿಯರ್ಸ್" ಎಂದು ಗ್ಲಾಸ್ ಮುಂದೆ ಹಿಡಿದಳು. 
"ಇಲ್ಲ ನಾನು ಕುಡಿಯಲ್ಲ" ಹೇಳಿದೆ . 
"ವ್ಹಾಟ್!?" ಅವಳದು ಅಚ್ಚರಿಯ ಉದ್ಗಾರ. 
"ಹೌದು ನಾನು ಕುಡಿಯಲ್ಲ, ಅಭ್ಯಾಸವಿಲ್ಲ" ಎಂದೆ. 
"ಯಾರಿಗೂ ಅಭ್ಯಾಸ ಇರಲ್ಲಪ್ಪ, ಅಭ್ಯಾಸ ಮಾಡ್ಕೊಬೇಕು, ಹೊಸ ಹೊಸ ಅನುಭವಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು. ಆದರೆ ಅದಕ್ಕೆ ಅಡಿಕ್ಟ್ ಆಗಬಾರದು ಅಷ್ಟೇ. ವೋಡ್ಕಾ ಕುಡಿಯದಿದ್ದರೆ ಪರವಾಗಿಲ್ಲ ಬಿಡು , ಬೀರ್ ಕುಡಿಬಹುದಲ್ಲ? ಇದರಲ್ಲಿ ತೊಂಬತ್ತ್ಮೂರು ಪರ್ಸೆಂಟ್ ನೀರೇ ಇರುತ್ತೆ ಗೊತ್ತಾ?" ಎನ್ನುತ್ತಾ ಗ್ಲಾಸಿಗೆ ಬೀರು ಸುರಿದು ಕೈಗಿಟ್ಟಳು. 
ಬಿಳಿ ನೊರೆ ಗ್ಲಾಸ್ ನೊಳಗಿನಿಂದ ಉಕ್ಕತೊಡಗಿತು. ಫಳಫಳ ಹೊಳೆಯುವ ಬಂಗಾರು ಬಣ್ಣದ ಆ ದ್ರವವನ್ನು ತುಟಿಗಿಟ್ಟು ಮೊದಲ ಗುಟುಕು ಹೀರಿದೆ . ಗಂಟಲೊಳಗೆ ಬೆಂಕಿ ಸುರಿದಂತಾಯಿತು. ಆ ಕಹಿ ಒಗರು ಮಿಶ್ರಿತ ದ್ರವವನ್ನು ಆಸೆಯಿಂದ ಜನರು ಹೇಗೆ ಕುಡಿಯುತ್ತಾರೆ ಎನಿಸಿತು. 
"ಮೋನಿ, ನಾ ಒಲ್ಲೆ ಈ ವಿಷ" ಅಂದೆ. 
"ಹೇ ಈಡಿಯಟ್... ತಪ್ಪಾಯ್ತು ಅನ್ನು. ವಿಷ ಅಲ್ಲ ಅದು ಅಮೃತ! ಧರೆಯಲ್ಲಿನ ಅಮೃತ!!" ಎಂದು ನಗುತ್ತಾ ವೋಡ್ಕಾ ಸಿಪ್ ಮಾಡತೊಡಗಿದಳು. 
"ಡ್ರಿಂಕ್ಸ್ ಮಾಡುವಾಗ ಫ್ರೆಂಡ್ ಗೆ ಕಂಪನಿ ಕೊಡಬೇಕು. ಆದರೆ ನೀನು ಇದೀಯಾ ಪೂರ್ ಫೆಲೋ. ಸ್ಮೋಕ್ ಆದರೂ ಮಾಡ್ತೀಯಾ ಇಲ್ವಾ" ಕೇಳಿದಳು. 
"ಇಲ್ಲ.." ಉತ್ತರಿಸಿದೆ. 
"ಡ್ರಿಂಕ್ಸ್ ಮಾಡಲ್ಲ ಸ್ಮೋಕ್ ಮಾಡಲ್ಲ, ಅಂದ್ಮೇಲೆ ಬದುಕಿರೋದ್ಯಾಕೆ?" ಹಣೆ ಚಚ್ಚಿಕೊಳ್ಳುತ್ತಾ ಕೇಳಿದಳು. 
"ಇಲ್ನೋಡು, ಇದು ನೇವಿ ಬ್ಲೂ ಸಿಗರೇಟ್… ನನ್ನ ಫೇವರೇಟ್. ಒಂದೇ ಒಂದು ಜುರಿಕೆ ಎಳಿ, ಮಜವಾಗಿರುತ್ತೆ" ಅಂದವಳೇ ಸಿಗರೇಟ್ ನನ್ನ ತುಟಿಗಿಟ್ಟು ತಾನೇ ಲೈಟರ್ ಹಚ್ಚಿದಳು. ತಿರಸ್ಕರಿಸುವ ಮನಸ್ಥಿತಿ ನನ್ನದಾಗಿರಲಿಲ್ಲ. ಒಮ್ಮೆ ದೀರ್ಘವಾಗಿ ಸಿಗರೇಟ್ ಎಳೆದುಕೊಂಡೆ. ಅದೆಲ್ಲಿ ಅಗೋಚರವಾಗಿತ್ತೋ... ಹೊಟ್ಟೆಯೊಳಗಿನಿಂದ ಕೆಮ್ಮು 'ಖಂವ ಖಂವ್ವನೇ' ಹೊರ ಬೀಳತೊಡಗಿತು. ಕಣ್ಣಲ್ಲಿ ನೀರು ಸರಿದಾಡತೊಡಗಿತು. ನನ್ನ ಪರಿಸ್ಥಿತಿ ಕಂಡು ಕಿಲಕಿಲನೆ ನಗತೊಡಗಿದ ಮೋನಿ ನನ್ನ ಬಾಯಿಂದ ಇನ್ನೇನು ಕೆಳಗೆ ಬೀಳಲಿದ್ದ ಸಿಗರೇಟ್ ತೆಗೆದುಕೊಂಡು "ಸ್ಮೋಕ್ ಮಾಡುವುದು ಹಾಗಲ್ಲ, ಹೀಗೆ..." ಎನ್ನುತ್ತಾ ತೋರು ಬೆರಳು ಮತ್ತು ಮಧ್ಯ ಬೆರಳಿನ ನಡುವೆ ಓರೆಯಾಗಿ ಹಿಡಿದು ಅದನ್ನು ತುಟಿಯಂಚಿಗೆ ಒಯ್ದು ತುಂಬಾ ತನ್ಮಯತೆಯಿಂದ ಅಕ್ಕರೆಯಿಂದ ಒಳಗೆ ಉಸಿರೆಳೆದುಕೊಳ್ಳುತ್ತಾ ಅಲೆಅಲೆಯಾಗಿ ಹೊಗೆ ಹೊರಬಿಡತೊಡಗಿದಳು. ನೆತ್ತಿಯ ಮೇಲೆ ಕ್ಷೀಣವಾಗಿ ತಿರುಗತೊಡಗಿದ ಫ್ಯಾನಿನ ಗಾಳಿಯಲ್ಲಿ ಸಿಗರೇಟ್ ಹೊಗೆ ಚಿತ್ತಾರ ಬಿಡಿಸುತ್ತಿತ್ತು. ಎಡಗೈ ಬೆರಳುಗಳ ನಡುವೆ ಸಿಗರೇಟ್, ಬಲಗೈಯಲ್ಲಿ ವೋಡ್ಕಾ ತುಂಬಿದ ಗ್ಲಾಸ್ ಹಿಡಿದುಕೊಂಡಿದ್ದ ಮೋನಿ ಗಾಲಿಬ್ ನ ಗಜಲೊಂದನ್ನು ಹೇಳುತ್ತಾ ವಿವರಿಸುತ್ತಾ ವೋಡ್ಕಾ ಹೀರತೊಡಗಿದಳು. ಅದರ ಮಧ್ಯೆ ಸಿಗರೇಟಿನ ಘಮಲು. ಅವಳು ವೋಡ್ಕಾ ಸಿಪ್ ಮಾಡುವ ರೀತಿಯೇ ಬಲು ಚೆಂದ. ವೋಡ್ಕಾ ತುಂಬಿದ ಗ್ಲಾಸ್ ನ್ನು ತುಟಿಯಂಚಿಗೆ ಒಯ್ದು ಕೊಂಚವೂ ಸದ್ದಾಗದಂತೆ ಬರೀ ತುಟಿಗಷ್ಟೇ ಹಾಕಿಸುತ್ತಿದ್ದಾಳೇನೋ ಎಂಬಂತೆ ಮೃದುವಾಗಿ ಹೀರುತ್ತಿದ್ದಳು... ದುಂಬಿ ಹೂವಿನ ಮಕರಂದ ಹೀರುವಂತೆ. ಅವರ್ಚನೀಯ ಸುಖ ಅನುಭವಿಸುವಂತೆ ಪ್ರತಿ ಸಿಪ್ ಗೂ ಒಂದು ಕ್ಷಣ ಕಣ್ಣು ಮುಚ್ಚಿ ಆನಂದಿಸುತ್ತಿದ್ದಳು. ವೋಡ್ಕಾದಿಂದಾಗಿ ತೆಳುವಾಗಿ ಒದ್ದೆಯಾಗಿದ್ದ ಅವಳ ತುಟಿ ಮೇಣದ ಬೆಳಕಿನಲ್ಲಿ ಚಿಕ್ಕದೊಂದು ಮಿಂಚಿನಂತೆ ಮಿನುಗುತಿತ್ತು.

ಸಿಗರೇಟು ಸೇದುವುದರಲ್ಲಿ ಕೂಡ ಅಷ್ಟೇ ಕಲಾತ್ಮಕತೆ ಮೋನಿಗಿರುವುದನ್ನು ಕಂಡೆ. ಒಂದು ಪುಟ್ಟ ಕೂಸನ್ನು ಲಾಲಿಸುವಂತೆ, ಮುದ್ದಿಸುವಂತೆ ಬೆರಳುಗಳ ನಡುವೆ ಓಡಾಡಿಸುತ್ತ ಸಿಗರೇಟ್ ತುಟಿಗಿಟ್ಟು ಸುದೀರ್ಘವಾಗಿ ಎಳೆಯುತ್ತಿದರೆ ಸಿಗರೇಟು ತುದಿ ನಾಚಿಕೆಯಿಂದ ಕೆಂಪಾಗುತ್ತಿತ್ತು. ಎದೆ ತುಂಬಾ ಎಳೆದುಕೊಂಡ ಹೊಗೆ ಹೊರಗೆ ಬಿಡುವಾಗಲೂ ಅಷ್ಟೇ ಲಾಲಿತ್ಯದಿಂದ ಸುರುಳಿ ಸುರುಳಿಯಾಗಿ ಬಿಡುತ್ತಿದ್ದಳು. ಅವಳನ್ನೇ ತಲ್ಲೀನನಾಗಿ ನೋಡುತ್ತಾ ಕುಳಿತಿದ್ದ ನನ್ನನ್ನು “ಈ ಕುರುಕುಲು ತಿಂಡಿಯನ್ನಾದರೂ ತಿಂತಿಯೋ ಅಥವಾ ಇಲ್ವೊ?" ಎಂದು ಛೇಡಿಸಿದಳು. "ಹಾಗೇನಿಲ್ಲ.." ಎಂದು ನಗುತ್ತಾ ಚಿಪ್ಸ್ ತುಂಡೊಂದನ್ನು ಕೈಗೆತ್ತಿಕೊಂಡೆ. 
"ಹೀಗೆಲ್ಲಾ ಡ್ರಿಂಕ್ಸ್ - ಸ್ಮೋಕ್ ಮಾಡುತ್ತಾ ಬಿಂದಾಸ್ ಆಗಿ ಬದುಕುವ ನನ್ನ ಬಗ್ಗೆ ನಿನಗೇನು ಅನ್ನಿಸಲ್ವಾ?" ಕೇಳಿದಳು. 
"ಏನೂ ಅನಿಸಲ್ಲ, ನಮ್ಮ ಬದುಕು, ನಮ್ಮ ಇಷ್ಟದ ರೀತಿಯಲ್ಲಿ ಬದುಕಬೇಕು" ಎಂದೆ. 
"ಗುಡಿಪಾಟಿ ವೆಂಕಟಾಚಲಂ ಥರ ಬದುಕಬೇಕು ಕಣೋ. ಅಟ್ ಲಿಸ್ಟ್ ಕೆಲವು ದಿನಗಳವರೆಗೆ. ಹೊಳೆದಂಡೆಯಲ್ಲಿ ಮೂರು ಕಲ್ಲು ಹೂಡಿ ಅನ್ನ ಬೇಯಿಸಿಕೊಂಡು ಅದಕ್ಕೆ ಉಪ್ಪೋ ಖಾರೋ ಹಾಕಿಕೊಂಡು ತಿನ್ನುತ್ತಾ... ಹಾಡುತ್ತಾ... ಓದುತ್ತಾ... ಹೊಳೆಯಲ್ಲಿ ಈಜುತ್ತಾ... ದಡದಲ್ಲಿ ಪುಟ್ಟ ಗುಡಿಸಲನ್ನು ಹಾಕಿಕೊಂಡು ಬದುಕಬೇಕು" ಗ್ಲಾಸಿನ ಕೊನೆಯ ಸಿಪ್ ಮುಗಿಸುತ್ತಾ ಹೇಳಿದಳು. 
ತೆಲುಗಿನ ಖ್ಯಾತ ಲೇಖಕ ಚಲಂನನ್ನು ಅವಳಿಗೆ ಪರಿಚಯಿಸಿದ್ದೇ ನಾನು. ಚಲಂ ನ ಮೈದಾನಂ, ಅಮೀನಾ ಕಾದಂಬರಿಗಳನ್ನು ಓದಲು ಕೊಟ್ಟಿದ್ದೆ. ಅವನ ಆತ್ಮ ಚರಿತ್ರೆ ಓದಿ ನಿಬ್ಬೆರಗಾಗಿದ್ದಳು. ಅವಳಿಗೆ ತೆಲುಗು ಅರ್ಥವಾಗದಿದ್ದರೂ ಆ ಕೃತಿಗಳ ಅನುವಾದವನ್ನು ಹುಡುಕಿ ಓದುತ್ತಿದ್ದಳು. 

"ಮುಂದೆ..? " ಖಾಲಿ ಗ್ಲಾಸ್ ಗೆ ವೋಡ್ಕಾ ತುಂಬಿಸುತ್ತಾ ಕೇಳಿದೆ. 
“ಈ ಬದುಕನ್ನು ಇಂಟೆನ್ಸಿವ್ ಆಗಿ ಪ್ರೀತಿಸುತ್ತಾ ಬದುಕಬೇಕು ಕೊನೆ ಕ್ಷಣದವರೆಗೆ…” ಎನ್ನುತ್ತಾ ಸಿಗರೇಟಿನ ಕೊನೆಯ ಜುರಿಕೆ ಎಳೆದು ಆ್ಯಷ್ ಟ್ರೇ ಯಲ್ಲಿ ಫಿಲ್ಟರ್ ಹೊಸಕಿ, ಗ್ಲಾಸ್ ಕೈಗೆತ್ತಿಕೊಂಡಳು. ಇಬ್ಬರ ನಡುವೆ ಒಂದು ಸಣ್ಣ ಮೌನ ಆವರಿಸಿತು.
 
ಮೌನ ಮುರಿದವಳೇ, “ನಿನ್ಜೊತೆ ಮಾತಾಡ್ತಿದ್ರೆ ಟೈಂ ಹೋಗೋದೆ ಗೊತ್ತಾಗಲ್ಲ ನೋಡು ಮಾರಾಯ, ಏಳು ಊಟ ಮಾಡೋಣ” ಎಂದು ತೂರಾಡುತ್ತಾ ಎದ್ದಳು. 
“ಡ್ರಿಂಕ್ಸ್ ಹೆವಿಯಾಯ್ತು ಕಣೋ ಇವತ್ತು” ತೊದಲುತ್ತಾ ನುಡಿದಳು. 
“ದಿನಾಲೂ ಡ್ರಿಂಕ್ಸ್ ತಗೋತೀಯಾ?” ಕೇಳಿದೆ.
“ಇಲ್ಲಪ್ಪಾ... ಹೀಗೆ ಯಾವಾಗಲೊಮ್ಮೆ ಮನಸ್ಸು ಬಂದಾಗ ಅಷ್ಟೇ. ದಿನಾ ತಗೋಂಡ್ರೆ ಮುಗೀತು ನನ್ ಕಥೆ. ನಿಂಗೊತ್ತಾ... ಹೆಂಡ ಸಾರಾಯಿಂದ ಹಿಡಿದು ಬ್ರಾಂದಿ, ರಮ್ಮು, ವಿಸ್ಕಿ, ವೈನ್, ಜಿನ್, ವೋಡ್ಕಾ, ಠಕೀಲಾ.... ಎಲ್ಲಾ ಟೇಸ್ಟ್ ನೋಡಿದೀನಿ. ಆದರೆ ಸಾಹಿತ್ಯ ಅದರಲ್ಲೂ ಕಾವ್ಯ ಕೊಡುವ ಕಿಕ್ಕು ಬೇರಾವುದರಿಂದಲೂ ಸಿಕ್ಕಿಲ್ಲ ನೋಡು ಇದುವರೆಗೆ” ಎನ್ನುತ್ತಾ ತಟ್ಟೆಗೆ ಊಟ ಬಡಿಸತೊಡಗಿದಳು. “ನಂಗೆ ಈ ಅಡುಗೆ, ಕಸ, ಮುಸುರೆ ಮಾಡ್ಕೊಂಡು ಟಿಪಿಕಲ್ ಹೆಣ್ಣಿನ ಹಾಗೆ ಬದುಕೋದು ಇಷ್ಟವಿಲ್ಲ. ಆದರೆ ಇವತ್ತು ಮಾತ್ರ ನಿನಗೋಸ್ಕರ ಪ್ರೀತಿಯಿಂದ ಅಡುಗೆ ಮಾಡಿದೀನಿ. ನಿನಗಿಷ್ಟವಾದ ಬಿರಿಯಾನಿ. ಹೇಗಿದೆ?” ಕಣ್ಣರಳಿಸಿ ಕೇಳಿದಳು. ಘಮಘಮಿಸುತಿದ್ದ ಬಿರಿಯಾನಿಯ ಮೊದಲ ತುತ್ತು ಬಾಯಿಗಿಟ್ಟುಕೊಂಡೆ, ಅಷ್ಟೇ! ಮೋನಿ ಅದ್ಭುತ ಪಾಕಶಾಸ್ತ್ರ ಪ್ರವೀಣೆ ಅಂತ ಗೊತ್ತಾಗಿದ್ದೇ ಆಗ. 
“ಕೇವಲ ದೇವತೆಗಳು ಮಾತ್ರ ತಿನ್ನುವಂತದ್ದು” ಅಂದೆ. 
“ಥ್ಯಾಂಕ್ಯೂ ದೇವರೆ...” ಎಂದು ನಗುತ್ತಾ ನನ್ನೊಂದಿಗೆ ಊಟ ಮುಗಿಸಿದಳು. 

“ಕೆಲವೊಮ್ಮೆ ನಾನು ಸಾಹೀರ್ ಲೂಧಿಯಾನ್ವಿ ಅನ್ನಿಸಿಬಿಡುತ್ತೆ. ನಿಂಗೊತ್ತಲ್ಲಾ ಸಾಹೀರ್.... ? ಕಭೀ ಕಭೀ ಮೇರಾ ದಿಲ್ ಮೇ ಖಯಾಲ್ ಆತಾ ಹೈ...." ಕಣ್ಮುಚ್ಚಿ ಹಾಡತೊಡಗಿದಳು. ಹಾಡು ಮುಗಿಸುವ ಹೊತ್ತಿಗೆ ಕಣ್ಣಂಚಿನಲ್ಲಿ ಸಣ್ಣಗೆ ಮೂಡುತ್ತಿದ್ದ ನೀರತೆರೆಯನ್ನು ಕಿರುಬೆರಳ ತುದಿಯಲ್ಲಿ ಒರೆಸಿ ಮುಗುಳ್ನಕ್ಕಳು. 
“ಬಾಲ್ಯದಲ್ಲಿ ಅಮ್ಮನ ಕಳ್ಕೊಂಡೆ. ಅಮ್ಮನ ಪ್ರೀತಿನಾ ಅಪ್ಪ ಕೊಡಲಿಲ್ಲ. ಬದಲಾಗಿ ಹೊಸ ಅಮ್ಮನನ್ನು ತಂದಿಟ್ಟುಕೊಂಡ. ಚಿಕ್ಕಮ್ಮನ ಪ್ರೀತಿ ಕೂಡಾ ಸಿಗಲಿಲ್ಲ. ಊಟಿ ಬೋರ್ಡಿಂಗ್ ಸ್ಕೂಲ್ ನಲ್ಲಿ ಅನಾಥಳಂತೆ ಬದುಕಿದೆ. ಕಾಲೇಜು ಮೆಟ್ಟಿಲು ಹತ್ತಿದಾಗ ವಯೋಸಹಜ ಪ್ರೀತಿಯಲ್ಲಿ ಸಿಲುಕಿದೆ. ಪ್ರೀತಿಗಾಗಿ ಹಂಬಲಿಸಿದೆ. ಬಾಲ್ಯದಿಂದಲೂ ಕೌಟುಂಬಿಕ ಪ್ರೀತಿಯಿಂದ ವಂಚಿತಳಾಗಿದ್ದು ಕಾರಣವಾ ? ಗೊತ್ತಿಲ್ಲ. ನನ್ನವನೆಂದುಕೊಂಡಿದ್ದ ನನ್ನವನು ವಿನಾಕಾರಣ ನನ್ನಿಂದ ದೂರವಾದ. ಕೆಲವೇ ದಿನಗಳಲ್ಲಿ ಬೇರೊಂದು ಹುಡುಗಿಯೊಂದಿಗೆ ಕ್ಯಾಂಪಸ್ಸಿನಲ್ಲಿ ತಿರುಗಾಡತೊಡಗಿದ. ಅವನ ಮನಸ್ಸಿನಿಂದ ನಾನು ಸಂಪೂರ್ಣವಾಗಿ ಅಳಿಸಿಹೋಗಿದ್ದೆ. ನಂಗೆ ಈಗಲೂ ಅಚ್ಚರಿ ಅನ್ಸುತ್ತೆ. ನೀವು ಹುಡುಗ್ರು ಅದೆಷ್ಟು ಬೇಗ ಎಲ್ಲಾ ಮರೆತುಬಿಡ್ತೀರಿ? ನಮ್ಮ ಮನಸ್ಸಿನೊಳಗೆ ಗಾಯ ಮಾಡಿಬಿಡ್ತೀರಿ. ಕಾಲವೆಂಬುದು ಗಾಯ ವಾಸಿಮಾಡಿದರೂ ಅದರ ಕಲೆ ಬದುಕಿನುದ್ದಕ್ಕೂ ಶಾಶ್ವತವಾಗಿ ಉಳಿದುಬಿಡುತ್ತೆ ನಮ್ಮ ನೆರಳಿನಂತೆ...” ಎಂದು ನಿಟ್ಟುಸಿರು ಬಿಡುತ್ತಾ ಒಂದುಕ್ಷಣ ಸುಮ್ಮನಾದಳು. ನೀರವ ರಾತ್ರಿಯ ನಿಶ್ಯಬ್ಧವನ್ನು ಕದಡುವಂತೆ ದೂರದೆಲ್ಲೆಲ್ಲೋ ಬೀದಿನಾಯಿಯೊಂದು ಊಳಿಡುವ ಸದ್ದು, ಅದರ ಬೆನ್ನಲ್ಲೇ ರಾತ್ರಿಬೀಟ್ ನ ಪೇದೆಯ "ಸಿಳ್ ಸಿಳಲ್" ವಿಷಲ್ ಸದ್ದು ಕೇಳಿಬರುತ್ತಿತ್ತು. 

"ನನ್ನ ಕಾಲೇಜು ದಿನಗಳ ಪ್ರೇಮ ಹೇಗಿತ್ತು ಗೊತ್ತಾ?" ಊಟದ ತಟ್ಟೆಯನ್ನು ಸಿಂಕ್ ನಲ್ಲಿ ತೊಳೆಯುತ್ತಾ ಹೇಳಿದಳು. “ಕಾಲೇಜಿನ ಕ್ಯಾಂಪಸ್ಸಿನಲ್ಲಿ ಅವನು ಗುಡುಗುಡು ಸದ್ದು ಮಾಡುತ್ತಾ ರಾಯಲ್ ಎನ್ ಫೀಲ್ಡ್ ಬೈಕ್ ನಲ್ಲಿ ಬರುತ್ತಿದ್ದರೆ ನನ್ನೆದೆಯಲ್ಲಿ ಸದ್ದು ಎದ್ದುಬರುತ್ತಿದೆಯೇನೋ ಅಂತನಿಸುತ್ತಿತ್ತು. ಅವನಿಗೆ ಇಷ್ಟ ಅಂತ ನಾನೇ ಬೈಕ್ ಪ್ರಸೆಂಟ್ ಮಾಡಿದ್ದೆ ಅವನ ಬರ್ತ್ ಡೇ ಗೆ. ಅಪ್ಪ ಪ್ರೀತಿಗೆ ಕೊರೆತೆ ಮಾಡಿದ್ದರೂ ಹಣಕ್ಕೇನೂ ಕೊರೆತೆ ಮಾಡಿರಲಿಲ್ಲ. ಧಾರಾಳವಾಗಿ ಹಣ ಕಳಿಸುತ್ತಿದ್ದರು. ನನ್ನ ನೋವುಗಳನ್ನು ಹಂಚಿಕೊಂಡಿದ್ದೇ ತಪ್ಪಾಯ್ತೇನೋ ಗೊತ್ತಿಲ್ಲ. ಅವನು ನನ್ನ ಹಣದ ಮರವನ್ನಾಗಿ ಬಳಸಿಕೊಳ್ಳತೊಡಗಿದ. ಮೂರು ವರ್ಷದ ಡಿಗ್ರಿ ಮುಗಿಯುವ ಹೊತ್ತಿಗೆ ಅವನು ಶಾಶ್ವತವಾಗಿ ನನ್ನಿಂದ ದೂರವಾಗಿಬಿಟ್ಟ. ಪ್ರೀತಿಸ್ತೀನಿ ಅಂತ ಹತ್ತಿರ ಬಂದಿದ್ದು ಅವನೇ, ಬೋರಾಯ್ತು ಅಂತ ಎದ್ದುಹೋಗಿದ್ದು ಅವನೇ. ಆಗಿನ್ನು ಈಗಿರುವಷ್ಟು ರಫ್ ಆಗಿರಲಿಲ್ಲ. ತುಂಬಾ ಎಮೋಷನಲ್ ಆಗಿದ್ದೆ. ಚಿಕ್ಕದಕ್ಕೂ ಕಣ್ಣೀರು ಹಾಕ್ತಿದ್ದೆ. ಮನಸ್ಸಿನ ತಿಳಿಗೊಳವನ್ನು ಅವನು ಕದಡಿಹಾಕಿದ್ದ. ಪ್ರೇಮವೈಫಲ್ಯವೆಂಬುದು ಅಂಗಾಲಿಗೆ ಚುಚ್ಚಿ ಒಳಗೆ ಮುರಿದುಕೊಂಡ ಮುಳ್ಳಿನ ಥರಾ. ಸದಾ ಕುಟುಕುತ್ತಾ ನೋವು ನೀಡುತ್ತಲೇ ಇರುತ್ತದೆ. ಆ ನೋವಿನಿಂದ ಹೊರಬರಲು ನಾನು ತೆಗೆದುಕೊಂಡಿದ್ದು ಭರ್ತಿ ಒಂದು ವರ್ಷ. ಒಂದು ದಿನ ಬೆಳಿಗ್ಗೆ ಎದ್ದವಳೇ ಅವನು ಕೊಟ್ಟಿದ್ದ ಲವ್ ಲೆಟರ್, ಗ್ರೀಟಿಂಗು, ಗಿಫ್ಟ್ ಗಳನ್ನೆಲ್ಲಾ ಸೇರಿಸಿ ಮನೆಯ ಹಿತ್ತಲಲ್ಲಿ ಗುಂಡಿತೋಡಿ ಅವುಗಳನ್ನೆಲ್ಲಾ ಹೂತುಹಾಕಿ ಅದರ ಮೇಲೊಂದು ಗುಲಾಬಿ ಸಸಿ ನೆಟ್ಟುಬಿಟ್ಟೆ. ಫಿನಿಷ್! ಅಲ್ಲಿಗೆ ಎಲ್ಲಾ ನೋವು,ಹತಾಷೆ, ಕಣ್ಣೀರು, ನರಳಿಕೆ, ದುಃಖವನ್ನೆಲ್ಲಾ ಬಡ್ಡಿಸಮೇತ ಅಳಿಸಿಹಾಕಿಬಿಟ್ಟೆ. ಆದರೆ ಆ ನೆನಪನ್ನು ಮರೆಯಲು ಕಲಿತ ಈ ಸಿಗರೇಟು ಡ್ರಿಂಕ್ಸು ಇನ್ನೂ ಬಿಟ್ಟುಹೋಗಿಲ್ಲ ನೋಡು, ಅವನು ಬಿಟ್ಟುಹೋದ್ರೂ ಕೂಡಾ...” ಎಂದು ವಿಷಾದದ ನಗೆ ನಕ್ಕಳು.

“ಆಮೇಲೆ ಬಿಡು, ಬಿಂದಾಸ್ ಆಗಿ ಬದುಕಿದೆ. ಬದುಕಿನ ಪ್ರತಿಕ್ಷಣವನ್ನು ಸವಿಯಬೇಕೆಂದು ನಿರ್ಧರಿಸಿದೆ. ಬದುಕಿನ ಪುಸ್ತಕದಲ್ಲಿ ಅವನೊಂದು ಪುಟ ಅಷ್ಟೇ ಎಂದು ತಿರುವಿಹಾಕಿದೆ. ನಂತರ ಪಿ.ಜಿ. ಓದಿದೆ. ಸಾಹಿತ್ಯ ನನ್ನನ್ನು ಇನ್ನಷ್ಟು ಮಾಗಿಸಿತು. ಸಾಕಷ್ಟು ಓದಿಕೊಂಡೆ. ಪುಸ್ತಕಲೋಕ ನನ್ನನ್ನು ಒಬ್ಬಂಟಿತನದಿಂದ ಬಿಡುಗಡೆಗೊಳಿಸಿ ದಿವ್ಯ ಏಕಾಂತವನ್ನು ಸೃಷ್ಟಿಸಿಕೊಟ್ಟಿತು. ಜೊತೆಗೆ ಸಂಗೀತದ ಗೀಳು ಹಚ್ಚಿಕೊಂಡೆ. ಸಾಹಿತ್ಯ, ಸಂಗೀತ, ನಾನು ಮತ್ತು ನನ್ನ ಏಕಾಂತ ಇವಿಷ್ಟೇ ನನ್ನ ಜಗತ್ತಾಗಿಸಿಕೊಂಡೆ. ಓದು ಮುಗಿದ ನಂತರ ಹೈದ್ರಾಬಾದ್ ನ ಸ್ಲಂ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಿದ್ದ ಎನ್.ಜಿ.ಓ ಒಂದರಲ್ಲಿ ಒಂದು ವರ್ಷ ಕೆಲಸ ಮಾಡಿದೆ. ಅಪ್ಪ ನನಗೆ ದುಡ್ಡಿಗೇನೂ ಕೊರೆತೆ ಮಾಡದಿದ್ದರೂ ಆತನ ಹಣದಲ್ಲಿ ಬದುಕಬಾರದೆಂಬ ಸ್ವಾಭಿಮಾನ ಹೆಡೆಯೆತ್ತಿತ್ತು. ನನ್ನ ಖರ್ಚು ವೆಚ್ಚ ನನ್ನ ಸಂಪಾದನೆಯಲ್ಲೇ ಮಾಡತೊಡಗಿದೆ. ಆಮೇಲೆ ಅಪ್ಪ ಒಂದೆರಡು ಸಲ ನನ್ನ ಮದ್ವೆ ಬಗ್ಗೆ ಪ್ರಸ್ತಾಪಿಸಿದನಾದರೂ ನನ್ನ ಸ್ವಭಾವ ಗೊತ್ತಿದ್ದರಿಂದ ಸುಮ್ಮನಾಗಿಬಿಟ್ಟ. ಅಪ್ಪನ ಮನೆ ಈವಾಗ ನನ್ನ ಮನೆ ಅಂತ ಅನಿಸ್ತಿಲ್ಲ. ಅಲ್ಲಿ ನನ್ನ ಅಪ್ಪ, ಅಪ್ಪನ ಹೆಂಡತಿ, ಅವರ ಮಕ್ಕಳು... ಎಲ್ಲರ ನಡುವೆ ನಾನು ಏಕಾಂಗಿ ಅನಿಸುತ್ತೆ. ಆ ಭಾವ ಹುಟ್ಟಿದ್ದೇ ಕೊನೆ, ಮತ್ತೆ ಮನೆಗೆ ಹೋಗಲಿಲ್ಲ. ಎಷ್ಟು ವರ್ಷಗಳಾದವೋ... ಯಾವಾಗಾದರೊಮ್ಮೆ ನೆನಪಾದಾಗ ಅಪ್ಪ ಫೋನ್ ಮಾಡ್ತಾನೆ ಅಷ್ಟೇ.’’ 

“ಬೈ ದಿ ಬೈ ನಮ್ಮಿಬ್ಬರ ನಡುವೆ ಇರುವ ಸಂಬಂಧ ಏನು? ಬರೀ ಸ್ನೇಹನಾ?” ಕೇಳಿದಳು. 
“ಅಲ್ಲ” ಉತ್ತರಿಸಿದೆ. 
“ಪ್ರೇಮ ನಾ?” 
“ಅಲ್ಲ” 
“ಆಕರ್ಷಣೆಯಾ?” 
“ಅಲ್ಲ” 
“ಮತ್ತೆ?” ಬೊಗಸೆಯಲ್ಲಿ ಕೆನ್ನೆ ಹುದುಗಿಸುತ್ತಾ ಕೇಳಿದಳು. “ಪ್ರೇಮವೂ ಅಲ್ಲದ, ಸ್ನೇಹವೂ ಅಲ್ಲದ, ಆಕರ್ಷಣೆಯನ್ನೂ ಮೀರಿದ ಸಂಬಂಧವಿದು. ಆತ್ಮ ಸಾಂಗತ್ಯವೆನ್ನಬಹುದು” ಎಂದೆ. “ವಾವ್ಹ್..! “ ಕಣ್ಣರಳಿಸಿ ಮೆಚ್ಚುಗೆ ಚಿಮ್ಮಿಸಿದಳು. ಗಡಿಯಾರದ ಮುಳ್ಳು ರಾತ್ರಿಯ ಎರಡು ಗಂಟೆಯನ್ನು ಸಮೀಸುತ್ತಿತ್ತು. ಹೊರಗೆ ಮೂಳೆಕಟಕಟಿಸುವ ಭಯಂಕರ ಚಳಿ ಹರಡಿಕೊಂಡಿತ್ತು. 
“ಮೋನಿ... ತುಂಬಾ ತಡವಾಗಿದೆ, ನಾನಿನ್ನು ಹೊರಡುತ್ತೇನೆ. ಮಲಗು, ಗುಡ್ ನೈಟ್” ಎಂದು ಹೇಳುತ್ತಾ ಹೊರಡಲನುವಾದೆ. 
“ಇಷ್ಟೊತ್ತಲ್ಲಿ ಎಲ್ಲಿಗೆ ಹೋಗ್ತೀಯಾ? ಅದೂ ಇಂಥ ಚಳಿಯಲ್ಲಿ..? ಬಾ ಇಲ್ಲೇ ಮಲಗುವಂತೆ, ನಾನೇನು
ನಿನ್ನ ತಿಂದುಬಿಡಲ್ಲ” ಎಂದಳು ನಗುತ್ತಾ. 
ಅವಳ ಕಣ್ರೆಪ್ಪೆಗಳು ಅದಾಗಲೇ ಭಾರವಾಗಿದ್ದವು. ಅದು ನಿದ್ದೆಯಿಂದಲಾ? ಕುಡಿದ ನಿಷೆಯಿಂದಲಾ? ಗೊತ್ತಿಲ್ಲ. ಅಲ್ಲಿ ಇದ್ದದ್ದು ಒಂದೇ ಮಂಚ. ಅದರ ಮೇಲೊಂದು ಹಾಸಿಗೆ ಹೊದಿಕೆ ಅಷ್ಟೇ. 
“ಅಲ್ಲ ಮೋನಿ... ನಾನು ಇಲ್ಲಿ..?” ತೊದಲಿದೆ. 
“ನೀನು ಇಲ್ಲಿ ಮಲಗಬೇಕು, ನನ್ಜೊತೆ...” ವಾಕ್ಯ ಪೂರ್ಣಗೊಳಿಸುತ್ತಾ ನನ್ನ ತಬ್ಬಿಕೊಂಡು ಹಾಸಿಗೆಯ ಮೇಲೆ ಉರುಳಿಕೊಂಡಳು. ಅವಳ ಬಿಗಿ ಅಪ್ಪುಗೆಯಲ್ಲಿ ನನ್ನ ಎದೆ ಬಡಿತ ಜೋರಾಗಿತ್ತು. ಡಿಸೆಂಬರ್ ತಿಂಗಳ ಆ ಕೊರೆಯುವ ಚಳಿಯಲ್ಲೂ ಸಣ್ಣಗೆ ಬೆವರಲಾರಂಭಿಸಿದೆ. ಇದ್ಯಾವುದರ ಪರಿವೆಯಿಲ್ಲದಂತೆ ತನ್ನ ತೊಡೆಯೊಂದನ್ನು ನನ್ನ ಮೇಲೆ ಬಿಸಾಕಿ ಎದೆಯ ಪೊದೆಗೂದಲಿನಲ್ಲಿ ಮೂಗನ್ನುಜ್ಜುತ್ತಾ , ಏನನ್ನೋ ತೊದಲುತ್ತಾ ಮಗುವಿನಂತೆ ನಿದ್ರೆಗೆ ಜಾರಿದಳು. ಹಚ್ಚಿಟ್ಟಿದ್ದ ಮೊಂಬತ್ತಿ ಕರಗುತ್ತಾ ತನ್ನ ಕೊನೆಯ ಉಸಿರು ಚೆಲ್ಲಿ ನಂದಿಹೋಯ್ತು. ಕತ್ತಲೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿತು. ನನಗೆ ನಿದ್ರೆ ಬರಲಿಲ್ಲವಾದರೂ ನಸುಕಿನ ಜಾವದ ವೇಳೆ ಗಾಢವಾದ ನಿದ್ರೆ ಆವರಿಸಿತು. 

 *********************** 

ಕಿಟಕಿಯೊಳಗಿನಿಂದ ತೂರಿದ ಸೂರ್ಯನ ಕಿರಣ ಮುಖದ ಮೇಲೆ ಚುರುಕು ಮೂಡಿಸಿದಾಗಲೇ ಎಚ್ಚರವಾದುದು. ತಡಬಡಿಸಿ ಎದ್ದೆ. ಸಮಯ ಅದಾಗಲೇ ಏಳೂವರೆಯಾಗಿತ್ತು. ಪಕ್ಕದಲ್ಲಿ ಮೋನಿ ಇರಲಿಲ್ಲ. ಬಾತ್ ರೂಂನಲ್ಲಿ ನೀರಿನ ಸಪ್ಪಳ. ಬಹುಶಃ ಸ್ನಾನ ಮಾಡುತ್ತಿರಬೇಕೆಂದುಕೊಳ್ಳುತ್ತಾ ಎದ್ದೆ. ತೆರೆದುಕೊಂಡ ಬಾತ್ ರೂಂ ನ ಬಾಗಿಲಲ್ಲಿ ನಿಂತಿದ್ದ ಮೋನಿ ಪುನುಗು ಬೆಕ್ಕಿನಂತೆ ಘಮಘಮಿಸುತ್ತಿದ್ದಳು. ಮೊಲದ ಬಿಳುಪಿನ ಮೃದುವಾದ ಟವೆಲ್ ಅವಳ ದೇಹವನ್ನು ಸುತ್ತುವರಿದಿತ್ತು. ದಟ್ಟವಾಗಿದ್ದ ಅವಳ ತಲೆಗೂದಲಿನಿಂದ ನೀರ ಹನಿ ಸಣ್ಣಗೇ ತೊಟ್ಟಿಕ್ಕುತ್ತಾ ಹಣೆಯಿಂದ ಇಳಿದು ಹುಬ್ಬಿನ ಅಂಚಿಗೆ ತಾಕಿ, ಕೆನ್ನೆಯ ಮೇಲೆ ಜಾರಿ, ತುಟಿಯಂಚಿನ ಚುಕ್ಕಿ ಮಚ್ಚೆಯ ಮುತ್ತಿಕ್ಕಿ, ಕೊರಳಲ್ಲಿ ಹೊರಳುತ್ತಾ ಸಮೃದ್ಧ ಎದೆ ಕಣಿವೆಯ ಮಿದುವಿನಲ್ಲಿ ಲೀನವಾಗುತ್ತಿತ್ತು. ಮೋನಿ ನಿಜಕ್ಕೂ ಚೆಲುವೆ ಅನ್ನಿಸಿತು. ಕಣ್ಣು ಮಿಟುಕಿಸದೇ ನೋಡುತ್ತಾ ಒಂದೆರಡು ಕ್ಷಣ ಮೈಮರೆತೆ. ತುಟಿಗಳನ್ನು ದುಂಡಾಗಿಸಿ ಜೋರಾಗಿ ಶಿಳ್ಳೆ ಹಾಕಿ “ಹಲೋ ಗುರುಗಳೇ...” ಮುಖದ ಹತ್ತಿರ ಚಿಟಿಕೆ ಹೊಡೆದು ನಗುತ್ತಾ ಎಚ್ಚರಿಸಿದಳು. 
"ಹ್ಞಾಂ..." ಬೆಚ್ಚಿಬಿದ್ದೆ. 
“ಏನ್ ಸಾಹೇಬ್ರಿಗೆ ರಾತ್ರಿ ಚೆನ್ನಾಗಿ ನಿದ್ದೆ ಬಂತಾ?” ಹುಬ್ಬೇರಿಸುತ್ತಾ ತುಂಟತನದಲ್ಲಿ ಕೇಳಿದಳು. “ಹ್ಞೂಂ”ಗುಟ್ಟಿದೆ. 
“ತುಂಬಾ ಒಳ್ಳೆಯವನಾಗಬೇಡ ದೊರೆ... ಕೆಲವೊಮ್ಮೆ ತಪ್ಪು ಮಾಡಬೇಕು... of course ಮಧುರವಾಗಿ...” ಕಿಲಕಿಲನೆ ನಕ್ಕಳು. ಸಾಲಾಗಿ ಜೋಡಿಸಿದಂತಿದ್ದ ಅಚ್ಚ ಬಿಳುಪಿನ ಸ್ವಚ್ಛ ದಂತಪಕ್ತಿ ಫಳಫಳಿಸಿತು. 'ಹ್ಞಾಂ...?' ಅರ್ಥವಾಗದವನಂತೆ ದಿಟ್ಟಿಸಿದೆ. 
“ಏನಿಲ್ಲ ಬಿಡು, ಶುದ್ಧ ಪೆದ್ದು ನೀನು. ಬೇಗ ರೆಡಿ ಆಗು ಹೊರಡೋದಿದೆ” ಅವಸರಿಸಿದಳು. 
“ಎಲ್ಲಿಗೆ?” ಅಚ್ಚರಿಯಿಂದ ಕೇಳಿದೆ. 
“ಹೇಳ್ತೀನಿ, ಬೇಗ ರೆಡಿ ಆಗು” ಮತ್ತದೇ ಅವಸರ. 
ಅಲ್ಲೇ ಮೂಲೆಯಲ್ಲಿ ಟವೆಲ್ ಕಳಚಿ ಬೆನ್ನ ಮೇಲೆ ಹರಡಿಕೊಂಡವಳೇ ತಿಳಿನೀಲಿ ಜೀನ್ಸ್ ನಲ್ಲಿ ಕಾಲು ತೂರಿಸಿ ಮೇಲಕ್ಕೆಳೆದುಕೊಂಡಳು. ಅವಳ ಕಾಲುಗಳನ್ನು ಜೀನ್ಸ್ ಬಿಗಿಯಾಗಿ ಅಪ್ಪಿಹಿಡಿಯಿತು. ಅದಕ್ಕೊಪ್ಪುವ ತಿಳಿಹಳದಿ ಬಣ್ಣದ ಶರ್ಟ್ ನೊಳಗೆ ನುಗ್ಗಿ ಅರ್ಧಕ್ಕೆ ತೋಳು ಮಡಚಿಕೊಳ್ಳುತ್ತಾ ತಲೆ ಒರೆಸಿಕೊಳ್ಳಲಾರಂಭಿಸಿದಳು. ಬಾತ್ ರೂಂ ಹೊಕ್ಕು ಹೊರಬಂದೆ. ದೊಡ್ಡದೊಂದು ಏರ್ ಬ್ಯಾಗ್ ನೊಂದಿಗೆ ಮೋನಿ ಹೊರಡಲು ತಯಾರಾಗಿ ನಿಂತಿದ್ದಳು. 
“ಮೋನಿ...?” ಎಂದವನ ಕಣ್ಣಲ್ಲಿ ಸಾವಿರಾರು ಪ್ರಶ್ನೆಗಳಿದ್ದವು. 
“ಇದು ನಮ್ಮ ಕೊನೆ ಭೇಟಿಯಾಗಬಹುದು ಕಣೋ...” ಭಾರದ ದನಿಯಲ್ಲಿ ಹೇಳಿದಳು. 
“ವ್ಹಾಟ್..!?” ದಿಗ್ಬ್ರಮೆಯಿಂದ ಕೇಳಿದೆ. 
“ಹೌದು ಕಣೋ... ನಿನ್ನೆನೇ ಹೇಳ್ಬೇಕಿತ್ತು. ಇಲ್ಲಿ ಆಫೀಸಲ್ಲಿ ನಿನ್ನೆ ಜಾಬ್ ರಿಸೈನ್ ಮಾಡ್ದೆ. ನಂಗೆ ರೈಲ್ವೆ
ಇಲಾಖೆಯಲ್ಲಿ ಕೆಲಸ ಸಿಕ್ಕಿದೆ. ದೂರದ ಶಿಮ್ಲಾದಲ್ಲಿ. ನಾಡಿದ್ದು ಡ್ಯೂಟಿ ರಿಪೋರ್ಟ್ ಮಾಡ್ಕೋಬೇಕು. ಇವತ್ತು ಬೆಂಗಳೂರಿಗೆ ಹೋಗಿ ಅಲ್ಲಿಂದ ಫ್ಲೈಟ್ ಲಿ ಡೆಲ್ಲಿ - ಸಿಮ್ಲಾ. ಮತ್ತೆ ತಿರುಗಿ ಬರುವ ಅವಕಾಶಗಳು ತುಂಬಾ ಕಡಿಮೆ ಅನ್ಸುತ್ತೆ. ಸಿಕ್ಕರೆ ಅನಿರೀಕ್ಷಿತವಾಗಿ ಸಿಗಬೇಕಷ್ಟೇ. ನಿಂಗೂ ಗೊತ್ತಲ್ಲಾ, ಸೋಷಿಯಲ್ ಮೀಡಿಯಾದಿಂದ  ನಾನು ಬಹು ದೂರ ಅಂತ. ಮೊಬೈಲ್ ಬಳಸುವುದು ಕೂಡಾ ತೀರಾ ಅಗತ್ಯಕ್ಕೆ ಅಷ್ಟೇ.” 

“ಏನಿದು ದಿಢೀರ್ ಅಂತ?” ಏನೋ ಕಳೆದುಕೊಳ್ಳುತ್ತಿರುವ ಭಾವದಲ್ಲಿ ಕೇಳಿದೆ. 
“ನನ್ನೊಳಗೊಬ್ಬ ಅಲೆಮಾರಿ ಇದಾಳೆ ಕಣೋ. ಅವಳು ರೆಕ್ಕೆ ಕಟ್ಟಿಕೊಂಡು ಹಾರಾಡೋಕೆ ಇಷ್ಟಪಡ್ತಾಳೆ. ಕೋಶ ಓದಿದ್ದಾಯ್ತು, ಇನ್ನು ದೇಶ ಸುತ್ತಬೇಕು. ಹೊಸ ಭಾಷೆ, ಹೊಸ ಪರಿಸರ, ಹೊಸ ಅನುಭವಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು. ಕುಳಿತಲ್ಲೇ ಕುಳಿತಿದ್ರೆ ನಾವು ತುಕ್ಕು ಹಿಡಿದುಬಿಡ್ತೀವಿ. ಬಳ್ಳಾರಿ ಆಗ್ಲೆ ಬೋರ್ ಆಯ್ತು ಮಾರಾಯ. ಯಾರಿಗೊತ್ತು...? ಮುಂದೆ ಸಿಮ್ಲಾನೂ ಬೋರೆನಿಸಬಹುದು. ಆಗ ಇನ್ನೆಲ್ಲೋ...? ಬದುಕು ಹೀಗೆ ಸಾಗುತ್ತೆ. ನಮ್ಮ ಆಫೀಸ್ ಅಸಿಸ್ಟೆಂಟ್ ಗೆ ಹೇಳಿದೀನಿ, ಮನೆ ಸಾಮಾನೆಲ್ಲಾ ತಗೋಂಡುಹೋಗಿ ಅಂತ. ಮಧ್ಯಾಹ್ನದ ಹೊತ್ತಿಗೆ ಬರಬಹುದು. ಕಳಿಸಿಕೊಡು." 
ಸುಮ್ಮನೇ “ಹ್ಞೂಂ”ಗುಟ್ಟಿದೆ. 
“ಯಾವುದರ ಬಗ್ಗೆಯೂ ಅಟ್ಯಾಚ್ ಮೆಂಟ್ ಬೆಳೆಸಿಕೊಳ್ಳಬಾರದೆಂದು ನನ್ನ ಪ್ರೇಮ ಒಡೆದುಹೋದಾಗಲೇ ನಿರ್ಧರಿಸಿದ್ದೆ. ಆದರೆ ನಿನ್ನ ಬಗ್ಗೆ ಮಾತ್ರ ಹಾಗೆ ಇರಲಾಗಲಿಲ್ಲ ನೋಡು, "ಏನು ಕೊಡಲಿ ಈ ನೆನಪಿಗೆ?” ಕೇಳಿದಳು. 
“ಈ ನೆನಪುಗಳೇ ನೆನಪಿಗೆ ಇರಲಿ” ಅಂದೆ. 
“ನಿನ್ನ ಬಿಗಿಯಾಗಿ ತಬ್ಬಿಕೊಂಡು ರಾತ್ರಿಯಿಡೀ ಮಲಗಿದರೂ ನಿಂಗೆ ಏನೂ ಅನಿಸಲಿಲ್ವಾ?” ನಗುತ್ತಾ ಕೇಳಿದಳು. 
“ಅನಿಸ್ತು”. 
“ಏನು ಅನ್ನಿಸ್ತು?” 
"ಎದೆ ಢವಢವಿಸುತ್ತಿತ್ತು, ಬಾಯಿ ಒಣಗುತಿತ್ತು, ಮೈ ಬೆವರತೊಡಗಿತ್ತು, ಸಣ್ಣ ಭಯ, ದೊಡ್ಡ ಆತಂಕ... ಏನೇನೋ ಅನುಭವಿಸಿದೆ ಬಿಡು. ಆಮೇಲೆ ನಿಧಾನವಾಗಿ ನಿರಾಳನಾದೆ." 
“ಒಮ್ಮೊಮ್ಮೆ ತಪ್ಪು ಮಾಡಬೇಕು ಮಧುರವಾಗಿ...” ಮತ್ತೊಮ್ಮೆ ನಗೆ ಚಿಮ್ಮಿಸಿದಳು. 
“ಕೊಟ್ಟೆ ಎಂಬ ಭಾವ ನಿನ್ನಲ್ಲೂ... ದೋಚಿಕೊಂಡೆ ಎಂಬ ಭಾವ ನನ್ನಲ್ಲೂ ಇರಬಾರದಲ್ವೆ..?” ಹೇಳಿದೆ. 
“ಹಾಗೆ ಅನ್ನುವುದಕ್ಕಿಂತ ನಾವು ಪಡೆದುಕೊಂಡೆವು” ಅಂತ ಅಂದುಕೊಳ್ಳಬಹುದಲ್ವಾ? ಹೆಗಲ ಮೇಲೆ ಕೈ ಹಾಕುತ್ತಾ ಹೇಳಿದಳು. 
"........................" ಏನೂ ಹೇಳಲಾಗದೆ ತಡವರಿಸಿದೆ. 
“ಯಾಕೋ ಗೊತ್ತಿಲ್ಲ ಕಣೋ... ನೀನು ತುಂಬಾ ಇಷ್ಟವಾಗಿದೀಯ. ನಿನ್ನೊಳಗಿರುವ ಸಂಯಮಿ ತುಂಬಾ ಇಷ್ಟವಾದ. ನಿನ್ನ ಗೆಳೆಯನಂತೆ ಇಷ್ಟಪಡಲಾರೆ, ಪ್ರೇಮಿಯಂತೆ ಪ್ರೇಮಿಸಲಾರೆ, ಗಂಡನನ್ನಾಗಿ ಕಲ್ಪಿಸಿಕೊಳ್ಳಲಾರೆ. ಅದೆಂತದ್ದೋ ಆತ್ಮ ಸಾಂಗತ್ಯ ಅಂದೆಯಲ್ಲಾ... ಅದಿರಬಹುದೇನೋ ಗೊತ್ತಿಲ್ಲ. ಅಷ್ಟಕ್ಕೂ ಈ ಸಂಬಂಧಕ್ಕೊಂದು ಹೆಸರು ಬೇಕಂತನಿಸಿಲ್ಲ ನೋಡು.” ಕೆನ್ನೆ ಹಿಂಡಿದಳು. 
ನನ್ನೊಳಗಿನ ಅವ್ಯಕ್ತ ಭಾವನೆಗಳನ್ನೇ ಅವಳು ಮಾತಾಗಿಸಿದ್ದಳು. 
ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ “ನಾನಿನ್ನು ಸುಮ್ಮನಿರಲಾರೆ” ಎಂದು ಪಿಸುಗುಟ್ಟಿದವಳೇ ನನ್ನ ಶರ್ಟಿನ ಕಾಲರ್ ಗೆ ಕೈಹಾಕಿ ಎಳೆದುಕೊಂಡು ಗೋಡೆಗೆ ಒತ್ತಿಹಿಡಿದು ತುಟಿಗೆ ತುಟಿವೊತ್ತಿ ತನ್ಮಯತೆಯಿಂದ ಕಣ್ಮುಚ್ಚಿದಳು. ಅವಳ ಕೈಬೆರಳುಗಳು ನನ್ನ ತಲೆಗೂದಲಿನಲ್ಲಿ ಕಳೆದುಹೋದವು. ನನಗರಿವಿಲ್ಲದಂತೆ ನನ್ನ ಕೈಗಳು ಅವಳನ್ನು ಬಿಗಿಯಾಗಿ ತಬ್ಬಿಕೊಂಡವು.... ನನ್ನೊಳಗೆ ಅವಳು, ಅವಳೊಳಗೆ ನಾನು ಕರಗಿಹೋಗುವಂತೆ. ಅವಳ ದೇಹಗಂಧದಲ್ಲಿ ತೊಯ್ದುಹೋದೆ. ಅಕ್ಷರಶಃ ಅವಳು ನನ್ನ ತುಟಿಗಳನ್ನು ತಿಂದುಹಾಕಿದಳು. 

 ************************
ಬಳ್ಳಾರಿಯಿಂದ ಬೆಂಗಳೂರಿಗೆ ಹೊರಡಲಿದ್ದ 'ಹಂಪಿ ಎಕ್ಸ್‌ಪ್ರೆಸ್‌' ನ ಬೋಗಿಯೊಳಗೆ ಕುಳಿತ ಮೋನಿಕಾಳ ಮುಖದಲ್ಲಿ ಅಗಲಿಕೆಯ ನೋವಿನ ಭಾವವಿತ್ತು. ಅದನ್ನೆಲ್ಲಾ ನುಂಗಿಕೊಂಡೇ ಬಲವಂತದ ನಗು ತುಳುಕಿಸುತ್ತಾ... "ಬದುಕಿನ ಜರ್ನಿಯಲ್ಲಿ ಮತ್ತೆ ಸಿಗೋಣ... ಅನಿರೀಕ್ಷಿತ ತಿರುವುಗಳಲ್ಲಿ ಅಚಾನಕ್ಕಾಗಿ ಮುಖಾಮುಖಿಯಾಗೋಣ... You are a unforgettable in my life. ಖುದಾ ಹಾಫೀಜ್…" ಅಂದಳು. 
 "……………………." ಅವಳನ್ನು ಬೀಳ್ಕೊಡಲು ಬಂದಿದ್ದ ನನ್ನಲ್ಲಿ ಮಾತುಗಳೇ ಉಳಿದಿರಲಿಲ್ಲ. 
ಪ್ಲಾಟ್ ಫಾರಂ ಮೇಲೆ ನಿಂತುಕೊಂಡೇ ಕಿಟಕಿಯಿಂದ ಸುಮ್ಮನೇ ಅವಳ ಕೈ ಒತ್ತಿಹಿಡಿದೆ. ರೈಲು ಸಿಳ್ಳೆಹಾಕಿ ಹೊರಡುವ ಸೂಚನೆ ತೋರಿತು. ಮೌನವಾಗಿ ಕೈ ಬೀಸಿದೆ. ರೈಲು ಬೆಂಗಳೂರಿನತ್ತ ಓಡತೊಡಗಿತು. 


*****************************************

- ರಾಜ್             

ಬುಧವಾರ, ಸೆಪ್ಟೆಂಬರ್ 30, 2020

ಆಪತ್ಕಾಲದಲ್ಲಿ ಸಿಕ್ಕ ಆಪ್ತಮಿತ್ರ ಆಜಪ್ಪ ಬಾಬು ಕಂಬಾರ 


ಶೆಟ್ಟಿಗೇರಿ ಸಿಂಹ ಆಜಪ್ಪ

ದಿ ಬಿಗಿನಿಂಗ್

ಯಾದಗಿರಿ ಜಿಲ್ಲೆಯ ಶೆಟ್ಟಿಗೇರಿ ಗ್ರಾಮದ ಸಿಡಿಲಮರಿ ಆಜಪ್ಪ ಬಾಬು ಕಂಬಾರ ಅಲಿಯಾಸ್ ಆಜಪ್ಪ ಅಲಿಯಾಸ್ ಗೊಬ್ಬ ಅಲಿಯಾಸ್ ಗೊಬ್ಬು….  ಅವನು ನಂಗೆ ಹಳೇ ಪರಿಚಯ. ಎಂ.ಫಿಲ್ ಓದುವಾಗ ಪರಿಚಯವಾಗಿದ್ದ. ಆಗ ತೀರಾ ಆತ್ಮೀಯನೇನೂ ಆಗಿರಲಿಲ್ಲ.  2014 ರಲ್ಲಿ ನಾನು ಪಿಎಚ್.ಡಿ ಗೆ ಆಯ್ಕೆಯಾಗಿ ಸಿ.ಯು.ಕೆ ಗೆ ಬಂದಾಗ ಶುರುವಾಗಿದ್ದೇ ವಸತಿ ಸಮಸ್ಯೆ. ಯುನಿವರ್ಸಿಟಿ ಹಾಸ್ಟೆಲ್ ಫುಲ್ ಆಗಿತ್ತು. ಹೊರಗಡೆ ರೂಂ ಮಾಡಿ ಓದುವ ಅನಿವಾರ್ಯತೆ. ಅಪರಿಚಿತ ಊರು ಬೇರೆ. ಇಂತಹ ಪರಿಸ್ಥಿತಿಯಲ್ಲಿ ನೆರವಾದವನೇ ಆಜಪ್ಪ. ಈಗಾಗಲೇ ಅವನು ಸಿಯುಕೆಯಲ್ಲಿ ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಹಳೇ ಪರಿಚಯದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ (ನನಗೆ ಹೊರಗೆ ರೂಂ ಸಿಗುವವರೆಗೆ) ತನ್ನ ಹಾಸ್ಟೆಲ್ ರೂಂ ನಲ್ಲಿರಲು ಅವಕಾಶ ಮಾಡಿಕೊಟ್ಟ. ಐದು ದಿನ ಅವನ ರೂಂ ನಲ್ಲಿದ್ದೆ. ಅಷ್ಟರಲ್ಲಿ ನಂಗೆ ಸಾಕಾಗಿಹೋಗಿತ್ತು. ಚಿಕ್ಕ ರೂಂ, ಜೊತೆಗೆ ಅವನ ರೂಂ ಮೇಟ್. ಅವರವರ ಬಟ್ಟೆ, ಪುಸ್ತಕ ಇನ್ನಿತರ ಲಗೇಜ್. ರೂಂ ತುಂಬಿಹೋಗಿತ್ತು. ನನ್ನ ಬಟ್ಟೆ ಬಿಚ್ಚಿ ಹಾಕಲು ಜಾಗವಿರಲಿಲ್ಲ. ಬಟ್ಟೆ ಬದಲಾಯಿಸಿ ನನ್ನ ಬ್ಯಾಗ್ ನಲ್ಲೇ ತುರುಕುತಿದ್ದೆ. ಮೊದಲಿನಿಂದಲೂ ಮಟ್ಟಸವನ್ನೇ ಬಯಸುತ್ತಿದ್ದ ನನಗೆ ರೂಂ ಕಿಷ್ಕಿಂದೆ ಅನಿಸತೊಡಗಿತು. ಐದೇ ದಿನಕ್ಕೆ ಗುಲಬರ್ಗ ಬೋರ್ ಹೊಡೆಸತೊಡಗಿತು. ಸಾಕು ಪಿಎಚ್.ಡಿ ಅನ್ನಿಸಿತು. ಚಿಕ್ಕ ಪುಟ್ಟ ಸಮಸ್ಯೆಗಳೇ ಬೆಟ್ಟದಂತ ಸಮಸ್ಯೆಗಳಾಗಿ ಕಾಣಿಸಿದವು. ಡಿಪಾರ್ಟ್ಮೆಂಟ್ ನಲ್ಲಿ ಅಡ್ಮಿಷನ್ ಗೆ ಕೊಟ್ಟಿದ್ದ ನನ್ನ ಒರಿಜಿನಲ್ ಡಾಕ್ಯುಮೆಂಟ್ಸ್ ಗಳನ್ನು ಏನೋ ಒಂದು ನೆಪ ಹೇಳಿ ವಾಪಾಸು ತಗೋಂಡೆ. ಐದನೇ ದಿನ ಸಂಜೆ (ಶುಕ್ರವಾರ) ಅವನು ರೂಂ ನಿಂದ ಹೊರಗಡೆ ಹೋಗಿದ್ದ. ಅವನಿಗೆ ಒಂದು ಮಾತು ಹೇಳದೇ ನನ್ನ ಬ್ಯಾಗ್ ಎತ್ತಿಕೊಂಡು ನನ್ನೂರಿಗೆ ಬಂದುಬಿಟ್ಟೆ. ಆಮೇಲೆ ಗುಲ್ಬರ್ಗ ಕಡೆ ತಲೆ ಹಾಕಿಯೂ ಮಲಗಲಿಲ್ಲ. ತುಂಬಾ ದಿನಗಳು ಕಳೆದವುಆಮೇಲೆ ಒಂದು ದಿನ ಗೊಬ್ಬು ಫೋನ್ ಮಾಡಿದ, ಸುಮಾರು ಒಂದು ತಾಸು ಮಾತಾಡಿದ, ತುಂಬಾ ಬೈದ. ಹೀಗೆ ಪಿಎಚ್.ಡಿ ಬಿಟ್ಟುಹೋದ್ರೆ ಹೇಗೆ? ಇಂತಹ ಯುನಿವರ್ಸಿಟಿಲಿ ಪಿಎಚ್.ಡಿ ಸೀಟ್ ಸಿಗೋದೇ ಕಷ್ಟ. ಅಂತದ್ರಲ್ಲಿ ಸಿಕ್ಕ ಸೀಟ್ ಬಿಟ್ಟು ಹೋಗಿದಿಯಲ್ಲ? ಸಮಸ್ಯೆ ಯಾರಿಗಿಲ್ಲ? ನಿನಗೇನೇ ಸಮಸ್ಯೆ ಇದ್ರೂ ನನಗೆ ಹೇಳು, ನಾನಿದೀನಿ ಬಾಅಂತ ಕರೆದಮತ್ತೆ ಮನಸ್ಸು ಗುಲಬರ್ಗದ ಕಡೆ ಜಗ್ಗತೊಡಗಿತು.

 

ಗುಲಬರ್ಗದ ಹಾದಿಯಲ್ಲಿ

 

ನಾನೇನೋ ಮತ್ತೆ ಯುನಿವರ್ಸಿಟಿ ಗೆ ಹೋಗಲು ತಯಾರಾಗಿದ್ದೆ. ಆದರೆ ನಮ್ಮ ವಿಭಾಗದಲ್ಲಿ ನನ್ನ ಹಾಜರಾತಿ ನಿಂತುಹೋಗಿ ತುಂಬಾ ದಿನಗಳೇ ಉರುಳಿದ್ದವು. ಇದರಿಂದಾಗಿ ನನ್ನ ಅಡ್ಮಿಷನ್ ಕ್ಯಾನ್ಸಲ್ ಆಗಿರುವ ಸಾಧ್ಯತೆಗಳು ಇದ್ದವು. ಇದನ್ನೆ ಗೊಬ್ಬುಗೆ ಹೇಳಿದೆ. ವಿಭಾಗದ ಗುರುಗಳಿಗೆ ಫೋನ್ ಮಾಡಿ ವಿನಂತಿಸಿಕೋ, ಅವ್ರು ತುಂಬಾ ಒಳ್ಳೆಯವರು ಅಂದ. ಗುರುಗಳು ತುಂಬಾ ಸ್ಟ್ರಿಕ್, ಅವ್ರಿಗೆ ಅಟೆಂಡೆನ್ಸ್ ತುಂಬಾ ಇಂಪಾರ್ಟೆಂಟ್ ಅನ್ನೊ ಮಾತುಗಳು ಮೊದಲ ಐದು ದಿನದಲ್ಲಿ ಕೇಳಿದ್ದೆ. ಜೊತೆಗೆ ಅವರ ಗಂಭೀರ ಮುಖಭಾವ ನನ್ನಲ್ಲಿ ಒಂದು ರೀತಿಯ ಅಳುಕು ಉಂಟು ಮಾಡಿತ್ತು. ಅಳುಕಿನಿಂದಲೇ ಅವರಿಗೆ ಫೋನಾಯಿಸಿದೆ... ನನ್ನ ಸಮಸ್ಯೆ ಹೇಳಿಕೊಂಡೆ, ಮತ್ತೇ ಬರ್ತೀನಿ ಅಂತ ವಿನಂತಿಸಿಕೊಂಡೆ. ಅವರು ಎಷ್ಟು ಒಳ್ಳೆಯ ಮನಸ್ಸಿನಿಂದ ಒಪ್ಪಿದರು ಅಂದ್ರೆ ನನ್ನ ಒಂದೇ ವಿನಂತಿಗೆ "ಬಾ.." ಅಂದರು. ( ಆಜಪ್ಪ ಮತ್ತು ವಿಭಾಗದ ಗುರುಗಳು ಇವರಿಬ್ಬರು ನನ್ನ ಡಾಕ್ಟರೇಟ್ ಪದವಿಗೆ ಕಾರಣ. ಇವರಿಬ್ಬರು ಇಲ್ಲದಿದ್ದರೆ ಸಿಯುಕೆಯಲ್ಲಿ ನನ್ನ ಪಿಎಚ್.ಡಿ ಕನಸಾಗಿಯೇ ಉಳಿಯುತಿತ್ತು. ) 

 

ಹಾಸ್ಟೆಲ್ ರೂಂ ನಲ್ಲಿ… 


ಪಿಎಚ್.ಡಿ ಎರಡನೇ ಇನ್ನಿಂಗ್ ಶುರುವಾಯಿತು. ಗೊಬ್ಬುವಿನ ರೂಂ ನಲ್ಲೇ ಮತ್ತೆ ವಾಸ್ತವ್ಯ ಹೂಡಿದೆ. ಅವನು ಎಷ್ಟೊಂದು  ಸಹೃದಯಿಯೆಂದರೆ ತಾನು ಮಲಗುವ ಮಂಚವನ್ನೇ ನನಗಾಗಿ ಬಿಟ್ಟುಕೊಟ್ಟು ತಾನು ಕೆಳಗೆ ಕೌದಿ ಹಾಸಿಕೊಂಡು ಮಲಗತೊಡಗಿದ. ಅದು ಸುಮಾರು ಆರು ತಿಂಗಳವರೆಗೆ! ಮಂಚದ ಒಂದು ಬದಿಗೆ ನನ್ನ ಪುಸ್ತಕ, ಬಟ್ಟೆಗಳನ್ನು ಇಡತೊಡಗಿದೆ. ಇಲ್ಲಿ ಅವನ ರೂಂ ಬಗ್ಗೆ ಹೇಳಬೇಕು. ಅದು 12x12 ಸೈಜಿನ ಚಿಕ್ಕ ರೂಂ. ಅಟ್ಯಾಚ್ಡ್ ಬಾತ್ ಆ್ಯಂಡ್ ಟಾಯ್ಲೆಟ್. Maximum ಇಬ್ಬರು ಇರಬಹುದಾದ ರೂಂ. ರೂಂ ಬಾಗಿಲೊಳಗೆ ಕಾಲಿಟ್ಟ ಕೂಡಲೇ ಎಡಕ್ಕೆ ಟೇಬಲ್, ಟೇಬಲ್ ಮೇಲೆ ಒಂದು ಎಚ್.ಪಿ ಲ್ಯಾಪ್ ಟಾಪ್ ಇಟ್ಕೊಂಡು ಗೊಬ್ಬುವಿನ ರೂಂ ಮೇಟ್ ರಘು ಸ್ಥಾಪಿತನಾಗಿದ್ದ. ರಘು ಆಜಾನುಬಾಹು, ಸ್ನೇಹಜೀವಿ. ಹಾಗೆ ಸರಿಯಾಗಿ ಮುಂದೆ ಎರಡು ಹೆಜ್ಜೆ ಇಟ್ಟರೆ ಅಲ್ಲಿ ಗೊಬ್ಬುವಿನ ಮಂಚ, ಮಂಚದ ಮೇಲೆ ಅಸ್ತವ್ಯಸ್ತವಾಗಿ ಸುರಿದಿದ್ದ ರಾಶಿ ಪುಸ್ತಕಗಳು, ಬಿಚ್ಚಿಟ್ಟ ಲುಂಗಿ, ಮುದುಡಿದ ಅಂಗಿ, ಮಂಚದ ಕೆಳಗೆ ಅವನ ಲ್ಯಾಪ್ ಟಾಪ್, ಸುತ್ತಿ ಬಿಸಾಡಿದ ಕೌದಿ, ಕಮಟು ದಿಂಬು, ಟೇಬಲ್ ಮೇಲೆ ರಾಶಿಯಾಗಿ ಸುರಿದ ಬಟ್ಟೆಗಳು. ಚೇರ್ ಮೇಲೆ ಸ್ನಾನ ಮಾಡಿ ಹಿಂಡಿಹಾಕಿದ ಹಸಿ ಚೆಡ್ಡಿ, ತುಂಬು ತೋಳಿನ ಬಿಳಿ ಬನಿಯನ್... ಇದಿಷ್ಟು ಚಿತ್ರಣ ಕಾಣುತ್ತಿತ್ತು. ಆಮೇಲೆ ಮಂಚ ಖಾಲಿ ಮಾಡಿ ನನಗೆ ಬಿಟ್ಟುಕೊಟ್ಟ. (ಆರು ತಿಂಗಳ ನಂತರ ಅದೇ ಗುರುಗಳ ಕೃಪೆಯಿಂದಾಗಿ ನನಗೆ ಅದೇ ಹಾಸ್ಟೆಲ್ ನಲ್ಲಿ ರೂಂ ಕೂಡಾ ಸಿಕ್ಕಿತು.)

 

ಭಾಷೆಗೆ ಹೊಸ ಭಾಷ್ಯ ಬರೆದ ಭಯಂಕರ ಭಾಷಾವಿಜ್ಞಾನಿ

 

ಸ್ನಾನ ಮಾಡಿದರೂ ಮಾಡದಂತೆ ಕಾಣುತ್ತಿದ್ದ ಆಜಪ್ಪ ತನ್ನನ್ನು ತಾನು ಗೊಬ್ಬ ಎಂದು ಹೆಮ್ಮೆಯಿಂದ, ಖುಷಿಯಿಂದ ಕರೆದುಕೊಳ್ಳುತ್ತಿದ್ದ. Basically ಅವನು ಯಾವಾಗಲೂ ಸ್ವಚ್ಛವಿರುತ್ತಿರಲಿಲ್ಲ. ಆದ್ದರಿಂದಲೇ ಅವನ ಅಜ್ಜಿ ಅವನಿಗೆ ಗೊಬ್ಬ (ಗಬ್ಬು, ಗಬ್ಬು ನಾತ ಅಂತೀವಲ್ಲ ಹಾಗೆ!) ಎಂದು ಕರೆಯುತ್ತಿದ್ದಳಂತೆ. ಅದನ್ನೆ ತನ್ನ ಅಸ್ಮಿತೆಯ ಕುರುಹಾಗಿ ಹೆಸರಿಟ್ಟುಕೊಂಡಿದ್ದ. ಅಷ್ಟೇ ಯಾಕೆ, ಅವನ Mail ID ಕೂಡಾ gobbavanu@gmail.com . ಗೊಬ್ಬು ದಿನದಿಂದ ದಿನಕ್ಕೆ ಇಂಚಿಂಚಾಗಿ ಅರ್ಥವಾಗತೊಡಗಿದ. ಅವನಿಗೆ ಹಿಂಜರಿಕೆ, ಸಂಕೋಚಗಳೇ ಇರುತ್ತಿರಲಿಲ್ಲ. ಕರ್ಣ ಕಠೋರವಾದ, ಭಯಂಕರ ಪದಗಳನ್ನು ಸಹಜವಾಗಿ, ಲೀಲಾಜಾಲವಾಗಿ ಬಳಸುತ್ತಿದ್ದ. ಅವನು ಭಾಷಾಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿದ್ದು (ಅವನ ಎಂ.ಫಿಲ್ ಮತ್ತು ಪಿಎಚ್.ಡಿ ಕ್ಷೇತ್ರ ಭಾಷಾವಿಜ್ಞಾನ) ಇದಕ್ಕೆ ಕಾರಣವಾಗಿರಬಹುದೇನೋ? ಗೊತ್ತಿಲ್ಲ! ನನಗೆ ಮೊದಮೊದಲು ಇದರಿಂದ ತುಂಬಾ ಕಿರಿಕಿರಿಯಾದದ್ದು ಸತ್ಯ. ಅವನ ಅನಾಗರಿಕ ವರ್ತನೆಗೆ ಸಾಕಷ್ಟು ಸಲ ಬೈದಿದ್ದೆ. ಅದಕ್ಕೆಲ್ಲಾ ಅವನು 'ಹ್ಹಿಹ್ಹಿಹ್ಹೀ...' ಅಂತ ನಗುತ್ತಲೇ ನನ್ನನ್ನು ಸುಮ್ಮನಾಗಿಸುತ್ತಿದ್ದ. ಅವನು ಒಂದು ರೀತಿಯಲ್ಲಿ ಉಪೇಂದ್ರ ಸಿನೆಮಾದ ಉಪೇಂದ್ರನ ಥರಾ. ಮನಸ್ಸು ಮತ್ತು ನಾಲಗೆ ನಡುವಿನ ಫಿಲ್ಟರ್ ಕಿತ್ತುಹಾಕಿದ್ದ. ಮನಸ್ಸಿನೊಳಗೇನು ಹುಟ್ಟುತ್ತೋ ಅದನ್ನು ಸರಾಗವಾಗಿ ನಾಲಿಗೆಯಿಂದ ಹೊರಹಾಕುತಿದ್ದ. ಇದು ಕೆಲವರಿಗೆ ಕಿರಿಕಿರಿಯನ್ನೂ, ಇನ್ನು ಕೆಲವರಿಗೆ ಮನೋರಂಜನೆಯನ್ನು ನೀಡುತಿತ್ತು. ಹಾಸ್ಟೆಲ್ Free Wi-Fi facility ಯನ್ನು ಪರಿಪೂರ್ಣವಾಗಿ ಬಳಸಿಕೊಂಡವನು ಗೊಬ್ಬು ಮಾತ್ರ ಅನ್ಸುತ್ತೆ. ಸಾವಿರ ಕಲೆಗಳಿದ್ದ ಕೌದಿಯನ್ನು ಬಿಗಿಯಾಗಿ ಹೊದ್ದುಕೊಂಡು ಲ್ಯಾಪ್ಟಾಪ್ ಬಿಚ್ಚಿ ಕುಳಿತನೆಂದರೆ ಅವನಿಗೆ ಸಮಯದ ಮಿತಿಯಿರುತ್ತಿರಲಿಲ್ಲ. ಹಗಲಿರುಳು ವಿವಿಧ ವೆಬ್ ಸೈಟ್ ಗಳನ್ನು ತಡಕಾಡುತ್ತಾ, ಮಾಹಿತಿ ಹೆಕ್ಕುತ್ತಾಸಂಶೋಧನೆಯಲ್ಲಿ ತೊಡಗುತ್ತಿದ್ದ. ಹೀಗಾಗಿ ಅವಧಿಗಿಂತ ಒಂದು ವರ್ಷ ಮುಂಚೆಯೇ ಪಿಎಚ್.ಡಿ ಮುಗಿಸಿಬಿಟ್ಟ!

 

 ಉನ್ಮತ್ತ ಪ್ರೇಮ ಸಂದೇಶಗಳ ಜಡಿಮಳೆಯಲ್ಲಿ ನಗುತ್ತಾ ನಿಂತವನು

 

ಹ್ಹಿಹ್ಹಿಹ್ಹೀ… ನಗೆಯ 💗ಗೊಬ್ಬು


ಅವನು ಹಾಸ್ಟೆಲ್ ನಲ್ಲಿ ಇರುವವರೆಗೆ ನೋಕಿಯಾ 1100 ಥರದ ಕಡುನೀಲಿ ಬಣ್ಣದ ಬೇಸಿಕ್ ಮೊಬೈಲ್ ಬಳಸುತ್ತಿದ್ದ. ರಾತ್ರಿ ವೇಳೆ ಅದರಲ್ಲಿ  ಯಾರೊಂದಿಗೋ  SMS ಚಾಟ್ ಮಾಡುತ್ತಾಅದರಲ್ಲಿಯ ಮೆಸೇಜ್ (SMS) ಗಳನ್ನು ಪದೇ ಪದೇ  ಓದುತ್ತಾ 'ಹ್ಹೀಹ್ಹೀಹ್ಹೀ...' ನಗುತ್ತಿದ್ದ. ರಾತ್ರಿಯ ನೀರವತೆಯಲ್ಲಿ ಅವನ ನಗು ಅಲೆಯಾಗಿ ತೇಲುತಿತ್ತು. ಮೊದಲೆಲ್ಲಾ ಅದನ್ನು ನಿರ್ಲಕ್ಷಿಸಿದ್ದ ನಾನು ನಂತರ ಅದು ಪುನರಾವರ್ತನೆಯಾದಂತೆಲ್ಲಾ ಕುತೂಹಲ ಕೆರಳತೊಡಗಿತು. 'ಏನಿದು ಗೊಬ್ಬವನೇ...?' ಅಂತ ಕೇಳುವುದಕ್ಕೂ ಮುಂಚೆ ತಾನೇ ಎಲ್ಲಾ ಮೆಸೇಜ್ ತೋರಿಸಿದ. ಓದಿ ನಿಬ್ಬೆರಗಾದೆಅವನಿಗೊಬ್ಬ ಪ್ರೇಯಸಿ ಸಿಕ್ಕುಬಿಟ್ಟಿದ್ದಳು!! ಅದೂ ಅವಳೇ ಇವನಿಗೆ ಪ್ರಪೋಸ್ ಮಾಡಿ, ಇವನ ಪ್ರೀತಿಗಾಗಿ ದುಂಬಾಲು ಬಿದ್ದಿದ್ದಳು!!! ಅದನ್ನು ಒಪ್ಪಿಕೊಳ್ಳಲು ಆಗದೇ, ತಿರಸ್ಕರಿಸಲೂ ಆಗದೇ ತೊಳಲಾಟದಲ್ಲಿ ಸಿಲುಕಿದ್ದ. ಪ್ರೇಮದ ಬಗ್ಗೆ, ಅದರ ಅಗಾಧತೆಯ ಬಗ್ಗೆ ಒಂಚೂರು ಅನುಭವವಿರದ ಜಾಲಿಬೊಡ್ಡೆಯಂತಹ ಗೊಬ್ಬು ಅವಳ ಭಾವನೆಗಳ ಭೋರ್ಗೆರೆತದ ಪ್ರೇಮಭರಿತ ಸಂದೇಶಗಳನ್ನು ಓದಿ ಅದಕ್ಕೆ ಸ್ಪಂದಿಸುವ ಅರಿವಿಲ್ಲದವನಾಗಿದ್ದರಿಂದ  ಅವೆಲ್ಲಾ ಅವನಲ್ಲಿ ಕಿಸಕಿಸನೇ ನಗು ಉಕ್ಕಿಸುತ್ತಿತ್ತು. ಪ್ರೇಮದ ಉತ್ತುಂಗವೆಂಬಂತೆ  "ನಿನ್ನ ಕಚ್ಚಿಬಿಡ್ತೇನೆ" ಅಂತ ಅವಳು ಇವನಿಗೆ ಸಂದೇಶ ಕಳಿಸಿದ್ದಳು. ಪುಣ್ಯಾತ್ಮ ಅದನ್ನು ಓದಿ ನಗು ನಿತ್ತರಿಸಿಕೊಳ್ಳಲಾಗದೇ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದ, ಬಹುಹೊತ್ತಿನವರೆಗೆ ನಗುತ್ತಿದ್ದ. ನಂತರವೂ ಬಹುದಿನಗಳವರೆಗೆ ಮೆಸೇಜ್ ನ್ನು ಪದೇಪದೇ ಓದಿ ನಗುತ್ತಿದ್ದ. ನನಗೆ ನೆನಪಿದ್ದಂತೆ ಅವನ ಪಿಎಚ್.ಡಿ ಮುಗಿಯುವ ಕೊನೆಯ ದಿನದವರೆಗೂ ಅವನ ಮೊಬೈಲ್ ನಲ್ಲಿ ಮೆಸೇಜ್ ಇತ್ತು. ಬರಗಾಲದಲ್ಲಿ ಬಿರುಕುಬಿಟ್ಟ ಒಣಭೂಮಿಯಂತಹ ಇವನ ಒಣಗಿದ ಹೃದಯದಲ್ಲಿ ಕೊನೆಗೂ ಪ್ರೇಮದ ಸಸಿ ಚಿಗುರಿಸಲು ಹುಡುಗಿಯಿಂದ ಸಾಧ್ಯವಾಗಲಿಲ್ಲ. ನಂತರ ಅವಳು ಬೇರೊಬ್ಬನನ್ನು ಮದುವೆಯಾದಳು. ಅವಳ ಬಗ್ಗೆ ಪ್ರೇಮದ ಭಾವನೆಯನ್ನೇ ಬೆಳೆಸಿಕೊಂಡಿರದ ಗೊಬ್ಬು ಅದಕ್ಕೇನು ಕೊರಗಲಿಲ್ಲ, ಮರುಗಲಿಲ್ಲ. "ನನ್ನಂತ ಗೊಬ್ಬನನ್ನು ಪ್ರೀತಿಸುವ ಒಬ್ಬ ಹುಡುಗಿ ಜಗತ್ತಲ್ಲಿ ಇದಾಳಲ್ಲ" ಎಂದು ಒಮ್ಮೊಮ್ಮೆ ಅಚ್ಚರಿ, ಖುಷಿ ವ್ಯಕ್ತಪಡಿಸುತ್ತಿದ್ದ

"ವಿಕಾರ ಸ್ವರೂಪಿಯಾದ ಅಷ್ಟಾವಂಕ್ರನನ್ನು ಸೌಂದರ್ಯದ ಖನಿಯಾದ ರಾಣಿ ಅಮೃತಮತಿ ಪ್ರೀತಿಸಿದ ('ಜನ್ನ' 'ಯಶೋಧರ ಚರಿತ್ರೆ'ಯಲ್ಲಿ ಬರುವ ಪಾತ್ರಗಳು) ನೆಲವಿದು. ಯಾರಿಗೆ ಯಾರಮೇಲೂ ಪ್ರೀತಿ ಹುಟ್ಟಬಹುದು, Love is blind" ಅಂದೆ

"ಹೇ... ನಾನೇನು ಅಷ್ಟಾವಂಕ್ರನಷ್ಟು ವಿಕಾರವಾಗಿದೀನಾ..? ಅವಳೇನು ಅಮೃತಮತಿಯಷ್ಟು ಸೌಂದರ್ಯವತಿನಾ? ಎಂದು 'ಹಿಹ್ಹಿಹ್ಹಿ...' ನಗತೊಡಗಿದ

 

ಗೊಬ್ಬುವಿನ ವಿರಾಟ್ ಸ್ವರೂಪ ದರ್ಶನ

 

ಗೊಬ್ಬನಿಗೊಂದು ವಿಚಿತ್ರ ಅಭ್ಯಾಸವಿತ್ತು. ಅವನು ಪ್ರತಿದಿನ ಹುಟ್ಟುಡುಗೆಯಲ್ಲಿ ಸ್ನಾನ ಮಾಡುತ್ತಿದ್ದ! ಮಾಡಲಿ, ಆದರೆ ಬಾತ್ ರೂಮಿನ ಡೋರ್ ಲಾಕ್ ಹಾಕಿಕೊಳ್ಳುತ್ತಿರಲಿಲ್ಲ. ಲಾಕ್ ಹಾಕಿಕೊಳ್ಳುವುದಿರಲಿ, ಸರಿಯಾಗಿ ಡೋರ್ ಕೂಡಾ ಮುಚ್ಚಿಕೊಳ್ಳುತ್ತಿರಲಿಲ್ಲ. ನೆಪಕ್ಕೆ ಮಾತ್ರ ಡೋರ್ ನ್ನು ಸ್ವಲ್ಪ ಮರೆಮಾಡಿ ಏನೇನೋ ಕೂಗಾಡುತ್ತಾ, ಹಾಡು ಹೇಳಿಕೊಳ್ಳುತ್ತಾ ಸ್ನಾನ ಮಾಡುತ್ತಿದ್ದ. ಅವನ ಸ್ವಭಾವ ಗೊತ್ತಿದ್ದ ನಾನು ಮತ್ತು ರೂಂ ಮೇಟ್ ರಘು ಬಾತ್ ರೂಂ ಡೋರ್ ಮುಟ್ಟುವ ಸಾಹಸ ಮಾಡುತ್ತಿರಲಿಲ್ಲಒಮ್ಮೆ ರೂಂ ನಲ್ಲಿ ಗೊಬ್ಬು ಒಬ್ಬನೇ ಇದಾನೆ. ಮೇನ್ ಡೋರ್ ತೆರೆದಿಟ್ಟುಕೊಂಡು ಬಾತ್ ರೂಂ ಡೋರ್ ಸ್ವಲ್ಪ ಮರೆಮಾಡಿ ಉದ್ದೋಉದ್ದಕ್ಕೆ ನವಜಾತ ಶಿಶುವಿನಾವಸ್ಥೆಯಲ್ಲಿ  ನಿಂತು ಖುಷಿಯಲ್ಲಿ ಜಲಕ್ರೀಡೆಯಾಡಲಾರಂಭಿಸಿದ್ದಾನೆ. ಅವನ ಅತ್ಯದ್ಭುತ ಸ್ವಭಾವದ ಬಗ್ಗೆ ಗೊತ್ತಿಲ್ಲದ ರಘು ಗೆಳೆಯ ಶರಣ್ ಯಾವುದೋ ಕಾರಣಕ್ಕೆ ರೂಂ ಒಳಗೆ ಬಂದಿದ್ದಾನೆ. ರೂಂ ನಲ್ಲಿ ಯಾರೂ ಇಲ್ಲ. ಬಾತ್ ರೂಂ ಒಳಗೆ ನೀರಿನ ಸದ್ದು ಕೇಳಿಬರುತ್ತಿದೆ. ಬಾತ್ ರೂಂ ಡೋರ್ ಅರ್ಧ ಓಪನ್ ಇರುವುದರಿಂದ ಬಹುಶಃ ಯಾರೋ ಮುಖ ತೊಳೆಯುತ್ತಿರಬೇಕು, ಮಾತಾಡಿಸಿದರಾಯ್ತು ಎಂದುಕೊಂಡನೇನೋ.... ಜೋರಾಗಿ ಡೋರ್ ತಳ್ಳಿಬಿಟ್ಟಿದ್ದಾನೆ..! ಅಷ್ಟೇ..!! 

 

ಗೊಬ್ಬುವಿನ ವಿರಾಟ್ ಸ್ವರೂಪ ದರ್ಶನ!!! 

 

ಗೊಬ್ಬುವಿನ ವಿಕಾರ್ ಸ್ವರೂಪ ದರ್ಶನ!!!

 

ಶರಣ್ ಗೆ ದಿಗ್ಭ್ರಮೆ! ಅಸಹ್ಯ, ಭಯ, ಸಿಟ್ಟು, ಸಂಕೋಚ, ಜಿಗುಪ್ಸೆ, ಆಕ್ರೋಶ, ಆವೇಶ... ಎಲ್ಲಾ ಭಾವಗಳು ಒಮ್ಮೆಲೆ ಉಕ್ಕಿಬಂದಂತಾಗಿ ಚೀರಿಕೊಂಡು ರೂಂ ನಿಂದ ಹೊರಕ್ಕೋಡಿದ್ದಾನೆ. ಗೊಬ್ಬುಗೆ ಶರಣ್ ವರ್ತನೆ ವಿಚಿತ್ರವೆನಿಸಿ ನಿರಾತಂಕನಾಗಿ ಸ್ನಾನ ಮುಗಿಸಿ ಹೊರಬಂದಿದ್ದಾನೆ. ಆಮೇಲೆ ಶುರುವಾಯ್ತಲ್ಲ ಶರಣ್ ಆಕ್ರೋಶ. ಕೂಗಾಡುತ್ತಾ ಗೊಬ್ಬು ಜೊತೆ ಜಗಳ ತೆಗೆದಿದ್ದಾನೆ. "ನೀನು ಯಾಕೆ ಚೆಡ್ಡಿ ಧರಿಸಿರಲಿಲ್ಲ?" ಎಂಬುದು ಶರಣ್ ತಕರಾರು. "ನೀನ್ಯಾಕೆ ಡೋರ್ ತಳ್ಳಿದೆ?" ಎಂಬುದು ಗೊಬ್ಬುವಿನ ಪ್ರಶ್ನೆ. ತಪ್ಪು ಇಬ್ಬರದೂ ಇದ್ದರಿಂದ ಕೊನೆಗೂ ಜಗಳ ಬಗೆಹರಿಯಲಿಲ್ಲ. ಆಮೇಲೆ ತುಂಬಾ ದಿನಗಳವರೆಗೆ ಶರಣ್ ಅಸ್ವಸ್ಥಗೊಂಡವನಂತಿದ್ದ. ಗೊಬ್ಬುವನ್ನು ಮಾತಾಡಿಸುವುದನ್ನು ಬಿಟ್ಟ. ಇದರಾವುದರ ಬಗ್ಗೆ ತಲೆಕೆಡಿಸಿಕೊಳ್ಳದ ಗೊಬ್ಬು ಎಂದಿನಂತೆ ಸರ್ವವಸ್ತ್ರ ಪರಿತ್ಯಾಗಿ ಸಂತನಂತೆ ಜಲಕ್ರೀಡೆಯಾಡಲಾರಂಭಿಸಿದ್ದ

 

ಪಿಎಚ್.ಡಿ ಥೀಸಿಸ್ ಸಬ್ಮಿಟ್ ಮಾಡಿದ ನಂತರ ಗೊಬ್ಬು ಮದುವೆಯಾದ. ಅವನ ಮದುವೆಗೆ ಇಡೀ ಸಿಯುಕೆ ಬಳಗದೊಂದಿಗೆ ನಾನು ಹೋಗಿದ್ದೆ. ಆದರೆ ಶರಣ್ ಮಾತ್ರ ಬಂದಿರಲಿಲ್ಲ ಅಷ್ಟೇ

 

ಗೊಬ್ಬು ಈಗ ಬದುಕಿನಲ್ಲಿ ಸಂತೃಪ್ತ.

 

ಬೆಚ್ಚನೆಯ ಮನೆ

 

ವೆಚ್ಚಕ್ಕೆ ಹೊನ್ನು

 

ಇಚ್ಚೆಯನರಿಯುವ ಸತಿ 

 

ಎಲ್ಲವೂ ಇದೆ... ಸ್ವರ್ಗಕ್ಕೆ ಕಿಚ್ಚು ಹಚ್ಚುವುದೊಂದು ಬಾಕಿ ಇದೆ ಅಷ್ಟೇ.

 

ಅಳುವೇ ಕಾಣದ ಗೊಬ್ಬುವಿನ ಮುಖದಲ್ಲಿ ನಗು ಚಿರಸ್ಥಾಯಿಯಾಗಿ ಉಳಿಯಲಿ ಎಂಬುದೇ ನನ್ನ ಹಾರೈಕೆ....

  

                                                                                                                                  ನಿಮ್ಮವನು,

                                                                                                                                         - ರಾಜ್