ಗುರುವಾರ, ಮಾರ್ಚ್ 5, 2020

ಮರೆಯಲಾಗದ ಮಧುರ ನೆನಪಿನ ಆ ದಿನಗಳು


ಸಂಡೂರಿನ ಬೆಟ್ಟದ ತಪ್ಪಲಲ್ಲಿರುವ ನಂದಿಹಳ್ಳಿಯ ಪ್ರಕೃತಿ ಸೌಂದರ್ಯ ವರ್ಣಿಸಲು ಪದಗಳೇ ಸಾಲದು. ಅಂಥ ಹಚ್ಚಹಸಿರಿನ ಅರಣ್ಯದ ನಡುವೆಯೇ ಅರಳಿ ನಿಂತಿರುವ ಪಿ.ಜಿ. ಸೆಂಟರ್ (ಜ್ಞಾನ ಸರೋವರ ಕ್ಯಾಂಪಸ್)ನಲ್ಲಿ ಎಂ. (ಕನ್ನಡ) ಓದಿದ ಅನುಭವ ಅವಿಸ್ಮರಣೀಯವಾದುದು. ಮೊದಲು ಗುಲಬರ್ಗ ವಿಶ್ವವಿದ್ಯಾಲಯದ ಪಿ.ಜಿ. ಸೆಂಟರ್ ಆಗಿದ್ದ ಕೇಂದ್ರ ಈಗ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪಿ.ಜಿ. ಸೆಂಟರ್ ಆಗಿದೆ. ನಗರ ಜಂಜಡಗಳಿಂದ ದೂರವಿರುವ ಕೇಂದ್ರದಲ್ಲಿ ಆಗ ಮೊಬೈಲ್ ನೆಟ್ವರ್ಕ್ ಕೂಡಾ ಸರಿಯಾಗಿ ಸಿಗುತ್ತಿರಲಿಲ್ಲ. ಕೆಲವು ನಿರ್ದಿಷ್ಟ ಜಾಗಗಳಲ್ಲಿ ನಿಂತರೆ ಮಾತ್ರ ಸಿಗ್ನಲ್ ಸಿಗುತ್ತಿತ್ತು. ಅದೂ ಒಂದೆರಡು ಪಾಯಿಂಟ್ ಮಾತ್ರ. ಇದ್ದುದರಲ್ಲೇ ಬಿಎಸ್ಎನ್ಎಲ್ ಪರ್ವಾಗಿಲ್ಲ ಎನ್ನುವಂತಿತ್ತು. ವಿದ್ಯಾರ್ಥಿಗಳಿಗೇನಾದರೂ ಆರೋಗ್ಯದಲ್ಲಿ ಏರುಪೇರಾದರೆ ಅಲ್ಲಿ ತುರ್ತಾಗಿ ಚಿಕಿತ್ಸೆ ನೀಡಲು ಆಸ್ಪತ್ರೆ ಇರಲಿಲ್ಲ, ಈಗಲೂ ಇಲ್ಲ. ಬಸ್ ವ್ಯವಸ್ಥೆ ಸಮಯಕ್ಕೆ ಸರಿಯಾಗಿರಲಿಲ್ಲ. ಬೆಳಿಗ್ಗೆ ಹೊರತುಪಡಿಸಿದರೆ ಉಳಿದ ಸಮಯದಲ್ಲಿ ಬಸ್ ಬರುವುದೇ ಅನುಮಾನವಾಗಿತ್ತು. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಟ್ರ್ಯಾಕ್ಸ್ ಗಳು ಸಂಡೂರಿನಿಂದ ನಂದಿಹಳ್ಳಿ ಮಾರ್ಗವಾಗಿ ದೇವಗಿರಿಯವರೆಗೆ ಓಡಾಡುತ್ತಿದ್ದವು. ಆದರೆ ಅವು ಪಿ.ಜಿ. ಸೆಂಟರ್ ಕ್ಯಾಂಪಸ್ ನೊಳಗೆ ಬರದೇ ನಂದಿಹಳ್ಳಿಯಲ್ಲೇ ಇಳಿಸಿ ಮುಂದೆ ಹೋಗುತ್ತಿದ್ದವು. ನಂದಿಹಳ್ಳಿಯಿಂದ ಸುಮಾರು ಎರಡು ಕಿ.ಮೀ. ಒಳಗೆ ನಡೆದು ಬರಬೇಕಾಗಿತ್ತು. ಅತಿಯಾದ ಮೈನ್ಸ್ ಲಾರಿಗಳ ಓಡಾಟದಿಂದಾಗಿ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದವು. ಬಸ್, ಟ್ರ್ಯಾಕ್ಸ್ ಗಳಲ್ಲಿ ಕುಳಿತ ಜನರು ರಸ್ತೆಯ ತಗ್ಗು ಗುಂಡಿಗಳಿಗೆ ಹಿಡಿಶಾಪ ಹಾಕುತ್ತಾ, ಮೈನ್ಸ್ ಧೂಳಿನ ಅಭಿಷೇಕದಲ್ಲಿ ಮಿಂದು ಅನಿವಾರ್ಯವಾಗಿ ಪ್ರಯಾಣಿಸುತ್ತಿದ್ದರು. ಸೋಪ್, ಪೇಸ್ಟ್ ನಂತಹ ಕೆಲವು ದೈನಂದಿನ ವಸ್ತುಗಳಿಗೆ ಕ್ಯಾಂಪಸ್ ನಲ್ಲಿಯೇ ಇದ್ದ ಅಜ್ಜಿ ಹೋಟೆಲ್ ನ್ನು ಅವಲಂಬಿಸಿದ್ದೆವು. ಅಜ್ಜಿಯ ಸಣ್ಣ ಹೋಟೆಲ್ಲೇ ನಮ್ಮ ಪಾಲಿಗೆ ಫೈವ್ ಸ್ಟಾರ್ ಹೋಟೆಲ್ ನಂತಿತ್ತು. ಅದು ಬಿಟ್ಟರೆ ಉಳಿದಂತೆ ಏನೇ ಬೇಕಾಗಿದ್ದರೂ ನಂದಿಹಳ್ಳಿಯಿಂದ ಸುಮಾರು ಎಂಟ್ಹತ್ತು ಕಿ.ಮೀ ದೂರವಿದ್ದ ಸಂಡೂರಿಗೆ ಹೋಗಬೇಕಾದ ಪರಿಸ್ಥಿತಿ. ಇಂತಹ ವಾತಾವರಣದಲ್ಲಿ ಎಂ. ಓದಿದ್ದು ಮಧುರವಾದ ಅನುಭವ ಅಂತ ಹೇಳುವುದಕ್ಕೆ ಕಾರಣ ಅಲ್ಲಿನ ರಮ್ಯ ಮನೋಹರ ದಟ್ಟ ಕಾಡಿನ ಪರಿಸರ...!!

ಅದರಲ್ಲೂ ಜುಲೈ ತಿಂಗಳಿನ ಮಳೆಗಾಲದಿಂದ ಡಿಸೆಂಬರ್ ವರೆಗಿನ ಚಳಿಗಾಲದವರೆಗೆ (ಸೆಪ್ಟೆಂಬರ್ ತಿಂಗಳಿನಲ್ಲಿ ಇನ್ನೂ ಚೆಂದ) ಅಲ್ಲಿನ ನಿಸರ್ಗ ತನ್ನ ಸೌಂದರ್ಯವನ್ನು ಉತ್ತುಂಗಕ್ಕೇರಿಸಿಕೊಂಡು ಸಿಂಗಾರಗೊಂಡಿರುತ್ತದೆ. ಬೆಳಿಗ್ಗೆ 8 - 9 ಗಂಟೆಯವರೆಗೂ ಇಡೀ ಕ್ಯಾಂಪಸ್ಸನ್ನು ಮೋಡಗಳು ಆವರಿಸಿ ಮಲೆನಾಡನ್ನು ನೆನಪಿಸುತ್ತಿತ್ತು. ಮೋಡಗಳು ತೀರಾ ಕೆಳಗೆ ಚಲಿಸುತ್ತಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಮಗೆ ಮೃದುವಾಗಿ ತಾಕುತ್ತಾ, ತಮ್ಮೊಳಗೆ ಹುದುಗಿಸಿಕೊಳ್ಳುತ್ತಾ ಸಾಗುತ್ತಿದ್ದವು. ಅದೊಂದು ಚೆಂದದ ಅನುಭವ. ಕ್ಯಾಂಪಸ್ನಲ್ಲಿ ನವಿಲುಗಳು, ಮೊಲಗಳು, ವಿವಿಧ ಪಕ್ಷಿಗಳು ಸಹಜವಾಗಿಯೇ ನಮಗೆ ಪ್ರತಿದಿನ ಕಾಣಿಸುತ್ತಿದ್ದವು. ನಿರುಪದ್ರವಿ ಕೋತಿಗಳ ದೊಡ್ಡ ಹಿಂಡೇ ಅಲ್ಲಿತ್ತು.

ಕ್ಯಾಂಪಸ್ ಹಿಂಭಾಗದಲ್ಲಿಯೇ ದೊಡ್ಡ ದೊಡ್ಡ ಗುಡ್ಡಗಳೊಂದಿಗೆ ಕಾಡು ಹರಡಿದೆ. ನಾವಿದ್ದದ್ದು ಕ್ಯಾಂಪಸ್ನಲ್ಲಿಯೇ ಇದ್ದ ತುಂಗಭದ್ರಾ ಹಾಸ್ಟೆಲ್ ನಲ್ಲಿ. ಅಲ್ಲಿಂದ ನಮ್ಮ ವಿಭಾಗ ಸುಮಾರು ಅರ್ಧ ಕಿ.ಮೀ ದೂರವಿದೆ. ಒಂಬತ್ತು ಗಂಟೆಗೆಲ್ಲಾ ಟಿಫಿನ್ ಮುಗಿಸಿಕೊಂಡು ಹಾಸ್ಟೆಲ್ ನಿಂದ ವಿಭಾಗದ ಕಡೆಗೆ ಹೊರಟರೆ ಮತ್ತೆ ಬರುವುದು ಮಧ್ಯಾಹ್ನ ಊಟಕ್ಕೆ. ಆಮೇಲೆ ಸಂಜೆವರೆಗೂ ಕ್ಲಾಸ್. ಬೇಸರವೆಂಬುದು ಅಪರಿಚಿತವಾಗಿತ್ತು. ಪದವಿಯವರೆಗೆ ನನಗೆ ಗುರುಗಳೆಂದರೆ ಒಂದು ರೀತಿಯ ಭಯಬೆರೆತ ಹಿಂಜರಿಕೆಯಿತ್ತು. ಪಾಠಕ್ಕೆ ಸಂಬಂಧಿಸಿದ ಪ್ರಶ್ನೆ, ಚರ್ಚೆ ಮಾಡುತ್ತಿದ್ದೆನಾದರೂ ಪಠ್ಯ ಹೊರತುಪಡಿಸಿ ಜನರಲ್ ಆದ ಕುಶಲೋಪರಿ ಮಾತುಕತೆಯಾಡದ ನನಗೆ ಎಂ..ಯಲ್ಲಿ ಸಿಕ್ಕ ಗುರುಗಳು ಸ್ನೇಹಿತರಂತೆ ಆತ್ಮೀಯತೆಯ ಜಲಪಾತದಲ್ಲಿ ತೋಯ್ಯಿಸಿದರು. ಒಂದು ಆರೋಗ್ಯಕರ ಸಲುಗೆ ಬೆಳೆಯಿತು. ಇದು ಕೇವಲ ನನ್ನೊಬ್ಬನಿಗೆ ಮಾತ್ರವಲ್ಲ, ಇಡೀ ಕ್ಲಾಸ್ ಸಹಪಾಠಿಗಳೊಂದಿಗೆ ಗುರುಗಳ ಸ್ನೇಹ ಹಾಗಿತ್ತು. ಕ್ಲಾಸ್ ನಿಂದ ಪಾಠ ಮಾಡಿ ಹೊರಬಂದರೆ ಅವರು ನಮಗೆ ಅತ್ಯಾಪ್ತ ಸ್ನೇಹಿತರಾಗುತ್ತಿದ್ದರು. ಬೇರೆ ವಿಭಾಗ ಹೇಗಿತ್ತೋ ನಾ ಕಾಣೆ. ಆದರೆ ನಮ್ಮ ಎಂ.. ಕನ್ನಡ ವಿಭಾಗ ಮಾತ್ರ ಸ್ನೇಹಲೋಕವೇ. ಗುರುಗಳಾದ ಜಾಜಿ ದೇವೇಂದ್ರಪ್ಪ ಸರ್, ರಾಜಶೇಖರ್ ಸರ್, ಶಿವಾಜಿ ಕಾಂಬ್ಳೆ ಸರ್ ಎಲ್ಲರೂ ಸ್ನೇಹಿತರಂತಿದ್ದ ಗುರುಗಳೇ. ಪ್ರತಿ ಸೆಮಿಸ್ಟರ್ ಸಿಲೆಬಸ್ ಮುಗಿದ ಕೊನೆಯ ದಿನ ನಮ್ಮೆಲ್ಲರನ್ನು ಅದೇ ಅಜ್ಜಿಯ ಹೋಟೆಲ್ ಗೆ ಕರೆದೊಯ್ದು ಎಲ್ಲರಿಗೂ ಟೀ ಕೊಡಿಸಿ ಆತ್ಮೀಯವಾಗಿ ಎಲ್ಲರೊಂದಿಗೆ ಹರಟುತ್ತಿದ್ದರು. ಎರಡನೇ ವರ್ಷ ಜೋಗ್, ಮುರುಡೇಶ್ವರ, ಧರ್ಮಸ್ಥಳ, ಇಡಗುಂಜಿ, ಶೃಂಗೇರಿ, ಹೊರನಾಡು... ಇತ್ಯಾದಿ ಸ್ಥಳಗಳನ್ನು ನೋಡಲು ಮೂರು ದಿನ ಟೂರ್ ಹೋದಾಗಲಂತೂ ಗುರುಗಳು ನಮ್ಮೊಂದಿಗೆ ಸ್ನೇಹಿತರೇ ಆಗಿಹೋಗಿದ್ದರು. ( ಸಮಯದಲ್ಲಿಯೇ ಘೋರಮಿತ್ರ ''ಬ್ಯಾಲಾಳ್ ನಾಗು'' ನನ್ನ ಮೇಲೆ ವಾಂತಿ ಮಾಡಿಕೊಂಡಿದ್ದುಮುಂದಿನ ಅಧ್ಯಾಯದಲ್ಲಿ ಆ ಪ್ರಸಂಗದ ಬಗ್ಗೆಯೇ ಪ್ರತ್ಯೇಕವಾಗಿ ಬರೆಯುವೆ, ಓದಿ...)


ಅಲ್ಲಿ ಕಳೆದ ಎರಡು ವರ್ಷಗಳು ನಿಜಕ್ಕೂ ಮಧುರವಾದದ್ದು. ಜಾಜಿ ಸರ್ ಬೋಧಿಸುತ್ತಿದ್ದ "ಪಂಪ ಭಾರತ" ಮರೆಯಲಾಗದಂತದ್ದು. ಪಾಠ ಮಾಡುತ್ತಿದ್ದ ಅವರ ಮುಖದ ಹಾವಭಾವ ನೋಡುವುದೇ ಒಂದು ರೀತಿಯ ಸೊಗಸು. ಪುಸ್ತಕ ಹಿಡಿದುಕೊಂಡು ಮುಗುಳ್ನಗುತ್ತಾ ಓದುತ್ತಾ, ರಸಮಯ ಸನ್ನಿವೇಶಗಳಲ್ಲಿ ತಮ್ಮ ನೀಳವಾದ ಮೂಗು, ಕೆನ್ನೆ ಕೆಂಪೇರಿಸಿಕೊಂಡು ವಿವರಿಸುತ್ತಿದ್ದರೆ ನಾವು ನಾವಾಗಿ ಉಳಿಯುತ್ತಿರಲಿಲ್ಲ. ಹಳಗನ್ನಡದ ಬಗ್ಗೆ ಆಸಕ್ತಿ, ಪ್ರೀತಿ ಹುಟ್ಟಿಸಿದವರೇ ಅವರು. ಅವರ ಓದಿನ ವ್ಯಾಪ್ತಿ ತುಂಬಾ ದೊಡ್ಡದು, ಜೀವನ ಪ್ರೀತಿ ಕೂಡಾ. ಒಮ್ಮೆ ಕ್ಲಾಸ್ ನಲ್ಲಿ ಮಾತಾಡುತ್ತಾ "ನೀವು ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಕಾದಂಬರಿಗಳನ್ನು ಓದಲಾರದೇ ಕನ್ನಡ ಎಂ.. ಓದಿದರೆ ಅದು ವೇಸ್ಟ್" ಅಂತ ಹೇಳಿದರು. ಅವರು ಅದನ್ನು ಸಹಜವಾಗಿಯೇ ಹೇಳಿದರು. ಆದರೆ ಅದು ನನ್ನ ಮನಸ್ಸಿಗೆ ತಾಕಿತು. ಅವತ್ತೇ ಲೈಬ್ರರಿಯಲ್ಲಿ ಎರಡೂ ಕಾದಂಬರಿಗಳನ್ನು ತಂದು ನಾಲ್ಕು ದಿನಕ್ಕೆ ಒಂದರಂತೆ ಎರಡೂ ಕಾದಂಬರಿಗಳನ್ನು ಓದಿ ಮುಗಿಸಿದೆ. ಕುವೆಂಪು ಅವರ ವಿಸ್ಮಯ ಬರಹಕ್ಕೆ ಬೆರಗಾದೆ

ನಮ್ಮ ಸಿಲೆಬಸ್ ಗೆ ಇರದಿದ್ದರೂ ಆಗಾಗ ರಾಜಶೇಖರ್ ಸರ್ ಮಲೆಗಳಲ್ಲಿ ಮದುಮಗಳು, ಕಾರಂತರ ಚೋಮನ ದುಡಿ ಕಾದಂಬರಿಯ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ಅದರಲ್ಲೂ ಚೋಮನ ಬಗ್ಗೆ ಹೇಳುವಾಗ ನೋವನ್ನು ತಾವೇ ಅನುಭವಿಸುವವರಂತೆ ಮುಖದಲ್ಲಿ ಭಾವನೆಗಳನ್ನು ಅಭಿವ್ಯಕ್ತಿಸುತ್ತಾ ವಿವರಿಸುತ್ತಿದ್ದರೆ ನಿಜಕ್ಕೂ ನಾವು ಭಾವುಕರಾಗುತ್ತಿದ್ದೆವು. ಅವರ ಬೋಧನೆಯೇ ನನ್ನನ್ನು ಹೊಸ ಓದಿಗೆ ಪ್ರೇರೇಪಿಸಿತು. ಇಂಥ ಗುರುಗಳು ನನ್ನ ಪ್ರೈಮ್ ಟೈಂ ನಲ್ಲಿ ಸಿಕ್ಕಿದ್ದು ನನ್ನ ಪುಣ್ಯವೆಂದೇ ಭಾವಿಸುವೆ. ಈಗ ಜಾಜಿ ದೇವೇಂದ್ರಪ್ಪ ಸರ್ ಗಂಗಾವತಿಯ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ, ರಾಜಶೇಖರ್ ಸರ್ ಉಜಿರೆಯ ಎಸ್.ಡಿ.ಎಂ. ಡಿಗ್ರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇವತ್ತಿಗೂ ಅದೇ ಪ್ರೀತಿಯಿಂದ ಮಾತಾಡಿಸುತ್ತಾರೆ. ನನಗೆ ಅದೇ ಖುಷಿ.

ಎಂ.. ದಲ್ಲಿ ಇದ್ದದ್ದೇ ಹದಿನೇಳು ಜನ ವಿದ್ಯಾರ್ಥಿಗಳು. ಅದರಲ್ಲಿ ಇಬ್ಬರು ಹುಡುಗಿಯರು. ಎಲ್ಲರೂ ಹಾಸ್ಟೆಲ್ ನಲ್ಲಿದ್ದವರೇ. ಸಹಪಾಠಿ ಗೆಳೆಯರೋ... ವೈವಿಧ್ಯಮಯ..! ಒಬ್ಬೊಬ್ಬರೂ ಒಂದೊಂದು ಬಗೆ.

ಗೆಳೆಯ ರಾಮಸ್ವಾಮಿ ಇಡೀ ನಮ್ಮ ಬ್ಯಾಚ್ ನಲ್ಲೇ ಆಜಾನುಬಾಹು. ಆದರೆ ಅದು ಕೇವಲ ಬಾಹ್ಯನೋಟಕ್ಕೆ ಮಾತ್ರ. ಯಾವಾಗಲೂ ಸಣ್ಣಗೆ ಕೆಮ್ಮುತ್ತಾ, ಕ್ಯಾಕರಿಸುತ್ತಾ, ಹಣೆ ಮೂಗು ಎದೆಗೆ ಅಮೃತಾಂಜನ್ ಹಚ್ಚಿಕೊಂಡು ಓಡಾಡುತ್ತಿದ್ದ. ಹಾಸ್ಟೆಲ್ ರೂಂ ನಲ್ಲೆ ಸಣ್ಣ ಅಂಗಡಿಯೊಂದನ್ನು ಇಟ್ಟುಕೊಂಡು ನಮಗೆಲ್ಲ ಸೋಪ್, ಶ್ಯಾಂಪೂ, ತಲೆನೋವಿನ ಮಾತ್ರೆ, ಹೊಟ್ಟೆನೋವಿನ ಮಾತ್ರೆ, ನೆಗಡಿ ಮಾತ್ರೆ ಇತ್ಯಾದಿಗಳನ್ನು ಮಾರುತ್ತಾ ನಮ್ಮ ಪಾಲಿಗೆ ಮೆಡಿಕಲ್ ಆ್ಯಂಡ್ ಜನರಲ್ ಸ್ಟೋರ್ ಆಗಿದ್ದ. ವಿಶೇಷ ಸಂದರ್ಭಗಳಲ್ಲಿ ಚಿಕನ್ ಅಡುಗೆ ಮಾಡುವಾಗ ಮೇಲುಸ್ತುವಾರಿ ವಹಿಸಿಕೊಳ್ಳುತ್ತಿದ್ದ. ಇವನು ಸಂಡೂರು ಪಕ್ಕದ ಬೊಮ್ಮಗಟ್ಟಿಯವನು.

ಇನ್ನೊಬ್ಬ ಮಿತ್ರ ಪಲ್ಲಿ ಅಲಿಯಾಸ್ ಪ್ರಹ್ಲಾದ ನನ್ನ ಪಕ್ಕದ ರೂಂ ನಲ್ಲಿದ್ದ. ಸದಾ ಸೆನ್ಸಾರ್ ರಹಿತವಾಗಿ ಮಾತಾಡುತ್ತಾ ಕೆಲವರಿಗೆ ರಂಜನೆಯನ್ನು ಇನ್ನೂ ಕೆಲವರಿಗೆ ಕಿರಿಕಿರಿಯನ್ನು ಉಂಟುಮಾಡುತ್ತಿದ್ದ. ಎಲ್ಲರಿಗೂ "ಅಜ್ಜಾ" ಎಂದೇ ಮಾತಾಡಿಸುತ್ತಿದ್ದ. "ಏನಜ್ಜಾ... ಉಂಡ್ಯಾ... ತಿಂದ್ಯಾ..." ಅಂತ. ಇವನು ಕೂಡ್ಲಿಗಿಯ ಗುಣಸಾಗರದವನು.

ಕೊಪ್ಪಳದ ಗುಳದಳ್ಳಿಯಿಂದ ಬಂದ ಉಗ್ರಮಿತ್ರ "ಬಡಿಗೇರ ಮಂಜುನಾಥ" ಪುಟ್ಟ ಗಣೇಶನ ಅವತಾರದಂತವನು. ತನ್ನ ಬದುಕಿನಲ್ಲಿ ನಡೆದ ಘಟನೆಗಳನ್ನು ಆಗಾಗ ವಿವರಿಸುತ್ತಾ, ತನ್ನ ದೊಡ್ಡ ಹೊಟ್ಟೆಯನ್ನು ಸವರಿಕೊಂಡು ಕುಲುಕುಲು ನಗುತ್ತಿರುವ ಮಿತ್ರ. ಪಲ್ಲಿಯ ಸೆನ್ಸಾರ್ ಇಲ್ಲದ ಮಾತಿಗೆ ನಗುತ್ತಾ, ತಾನೂ ಹಾಗೆ ಮಾತಾಡುತ್ತಾ, ಪಲ್ಲಿಯನ್ನು ಅಂಥ ಮಾತಿಗೆ ಹುರಿದುಂಬಿಸುತ್ತಿದ್ದ. ಇಬ್ಬರೂ ಕಿರಿಕ್ ಪಾರ್ಟಿಗಳೇ.

ಸದಾ ಅರ್ಥವಾಗದಂತೆ ಗೊಂದಲಮಯವಾಗಿ ಮಾತಾಡುತ್ತಾ, ತನ್ನ ಹೇಳಿಕೆಗಳಿಗೆ ಅರಿಸ್ಟಾಟಲ್‌, ಪ್ಲೇಟೋ, ಸಾಕ್ರಟೀಸ್ ಹೆಸರಿಟ್ಟು ಮೂಲಕ ತನ್ನ ಅರಿವನ್ನು ತತ್ವಶಾಸ್ತ್ರವೆಂಬ ಹೆಸರಿನಲ್ಲಿ ಹರಡುತ್ತಿದ್ದ ಗಂಗಾವತಿಯ ವಡ್ಡರಹಟ್ಟಿಯಿಂದ ಬಂದ ಹನುಮಪ್ಪ ನಮ್ಮ ಗುಂಪಿನಲ್ಲಿ ತತ್ವಜ್ಞಾನಿ ಎಂದೇ ಖ್ಯಾತನಾದವನು. ಎಲ್ಲರಿಗೂ ದೋಸ್ತಾ ಎಂದು ಕರೆಯುತ್ತಾ, ತನ್ನನ್ನು ತಾನು "ರಾಯಲ್ ಸ್ಟಾರ್" "ಹನುಮಕುಮಾರ್ ಹೆಗಡೆ" ಎಂದು ಕರೆದುಕೊಂಡು ಖುಷಿಪಡುವವನು. ಹಲವು ವಿಷಯಗಳಲ್ಲಿ ತುಂಬಾ ಗುಪ್ತವಾಗಿರುತ್ತಿದ್ದ. ಅಂತಹ ರಹಸ್ಯ ಅವನಲ್ಲಿ ಏನಿತ್ತೋ ಇಂದಿಗೂ ಅರ್ಥವಾಗಿಲ್ಲ... ಬಹುಶಃ ಮುಂದೆಯೂ ಅರ್ಥವಾಗಲ್ಲ ಅನ್ಸುತ್ತೆ. ಕೊನೆಗೂ ಅರ್ಥವಾಗದ ವ್ಯಾಕರಣವಾಗಿ ಉಳಿದುಬಿಟ್ಟ ಮಹಾಗುರು ಈತ

ಉಳಿದಂತೆ, "ಬಿ. ನಾಗರಾಜ ಅಲಿಯಾಸ್ ಬ್ಯಾಲಾಳ್ ನಾಗು" ನನ್ನ ಪಕ್ಕದ ಊರು ಬ್ಯಾಲಾಳ್ ಕಣ್ಮಣಿ. ಅವನು ಸ್ನೇಹಜೀವಿ, ಭೋಜನಪ್ರಿಯ. ಕನ್ನಡಕ ಹಾಕಿಕೊಂಡಿದ್ದರಿಂದಲೋ ಏನೋ ಬಾಹ್ಯವಾಗಿ ಗಂಭೀರ ವ್ಯಕ್ತಿ ಎನಿಸಿದರೂ ಆಂತರ್ಯದಲ್ಲಿ ಕಾಮಿಡಿ ಫೆಲೋ..! ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗಿಂತ ರೂಂ ಗಳ ಸಂಖ್ಯೆಯೇ ಹೆಚ್ಚಿದ್ದರಿಂದ ಒಬ್ಬೊಬ್ಬರಿಗೂ ಒಂದೊಂದು ರೂಂ ನೀಡಲಾಗಿತ್ತು. ಆದರೆ ಬ್ಯಾಲಾಳ್ ನಾಗು ರಾತ್ರಿಯ ಕತ್ತಲಲ್ಲಿ ಒಬ್ಬನೇ ಮಲಗುವುದಕ್ಕೆ ಅಂಜಿಕೊಳ್ಳುತ್ತಿದ್ದರಿಂದ ಬಾಲ್ಯದಿಂದಲೂ ಅವನ ಗೆಳೆಯನಾಗಿದ್ದ, ಅವನ ಊರಿನವನೇ ಆದ ಗೋಣಿಬಸವರಾಜನೊಂದಿಗೆ ರೂಂ ಮೇಟ್ ಆಗಿದ್ದ. ಗೋಣಿಬಸವರಾಜನೆಂಬ ಮಾರುದ್ದದ ಹೆಸರು ನಾಗು ಬಾಯಲ್ಲಿ "ಗೋಣಿ" ಎಂಬುದಾಗಿ ರೂಪಾಂತರವಾಗಿತ್ತು. "ಲೇ ಗೋಣಿ.... ಲೇ ಗೋಣಿ.." ಎನ್ನುತ್ತಾ ತನ್ನ ಹಳೆಯ ನೆನಪುಗಳ ಪೈಕಿ ಯಾವುದಾದರೊಂದು ನೆನಪಿಸಿಕೊಂಡು ಒಮ್ಮೆ ಜೋರಾಗಿ ಹಿಹ್ಹಿಹ್ಹಿಹಿ... ಅಂತ ನಕ್ಕರೆ ಇಡೀ ಹಾಸ್ಟೆಲ್ ಪ್ರತಿಧ್ವನಿಸುತ್ತಿತ್ತು.
 (ಅವನ ಬಗ್ಗೆ ನಂತರದ ಅಧ್ಯಾಯದಲ್ಲಿ ಪ್ರತ್ಯೇಕವಾಗಿ ಬರೆಯುವೆ, ಓದಿ...)

ಗೌರಿಪುರ ರಾಜಣ್ಣ, ಕುಮಾರ, ಅಂಜಿನಪ್ಪ, ಮಹಾರಾಜ, ಸತೀಶ, ಪಂಪಾಪತಿ, ಜಿ.ಟಿ. ನಾಗರಾಜ, ಹುಲಿಕುಂಟೇಶ್ವರ.... ಎಲ್ಲರೂ ಒಳ್ಳೆ ಮನಸ್ಸಿನ ಸ್ನೇಹಿತರೇ... ಪೈಕಿ ಜಿ.ಟಿ. ನಾಗರಾಜನೆಂಬ ಸಂಭಾವಿತ ಸ್ನೇಹಿತನಿಗೆ ಹುಲಿಯೆಂಬ ಹುಲಿಕುಂಟೇಶ್ವರ ಅದ್ಯಾಕೆ ಹಾಗೆ ಹೆಸರಿಟ್ಟನೋ ಗೊತ್ತಿಲ್ಲ... ಜಿ.ಟಿ. ನಾಗರಾಜನೆಂಬ ಸುಂದರ ಹೆಸರನ್ನು "ಜೀಟ್ಗ್ಯಾ..." ಎಂದು ವಿಕಾರವಾಗಿ ಕರೆಯಲಾರಂಭಿಸಿದ. ಅಷ್ಟೇ ಅಲ್ಲ, ಜಿ.ಟಿ. ನಾಗರಾಜನೂ ಕೂಡಾ ಹೆಸರಿಗೆ ಹೊಂದಿಕೊಂಡು ಓಗೊಡತೊಡಗಿದ್ದ. ಬಹುಶಃ ಹೆಸರು ಅವನಿಗಿಷ್ಟವಾಗಿತ್ತು ಅನ್ಸುತ್ತೆ.

ಎಲ್ಲಾ ಮಿತ್ರರೊಂದಿಗೆ ನಿಸರ್ಗದ ಮಡಿಲಲ್ಲಿ ಎರಡು ವರ್ಷ ಕಳೆದಿದ್ದೇ ಗೊತ್ತಾಗಲಿಲ್ಲ. ಎಲ್ಲರೂ ಬಳ್ಳಾರಿ ಜಿಲ್ಲೆ ಹಾಗೂ ಬಳ್ಳಾರಿ ಜಿಲ್ಲೆಯ ಸುತ್ತಮುತ್ತಲಿನವರೇ. ಯಾರೂ ಶ್ರೀಮಂತರಲ್ಲ. ಬಡ ಹಾಗೂ ಮಧ್ಯಮ ವರ್ಗದವರೇ. ಆದರೂ ನಮ್ಮ ಖುಷಿಗೆ ಕೊರೆತೆಯಿರಲಿಲ್ಲ. ಖುಷಿಗೆ ಶ್ರೀಮಂತಿಕೆಯ ಹಂಗ್ಯಾಕೆ ಬಿಡಿ. ನಾಲ್ಕನೆಯ ಸೆಮಿಸ್ಟರ್ ಕೊನೆಯ ಎಕ್ಸಾಂ ಬರೆದು ಮುಗಿಸಿದಾಗ ಎಲ್ಲರ ಮುಖದಲ್ಲಿ ಎಂ. ಮುಗಿಸಿದ ಖುಷಿ ಬೆರೆತ ನಿರಾಳ ಭಾವವಿತ್ತು. ಹಾಸ್ಟೆಲ್ ನೆತ್ತಿಯ ಮೇಲೆ ಚಿಕನ್ ಪಾರ್ಟಿ ಏರ್ಪಡಿಸಿದ್ದೆವು. ಎಂದಿನಂತೆ ಅಡುಗೆಯ ಉಸ್ತುವಾರಿ ರಾಮಸ್ವಾಮಿ ವಹಿಸಿಕೊಂಡಿದ್ದ. ಸಂಡೂರಿನಿಂದ ಚಿಕನ್ ಜೊತೆಗೆ ಬಿಯರ್ ಕೂಡಾ ತರಲಾಗಿತ್ತು. (ಕುಡಿತ ಕೆಟ್ಟ ಅಭ್ಯಾಸ ಎಂಬ ಭಾವನೆ ಹೊಂದಿದ್ದರಿಂದ ನಾನು ಹಾಗೂ ಇತರೇ ಮೂರು ಜನ ಪಾನಗೋಷ್ಠಿಯಲ್ಲಿ ಪಾಲ್ಗೊಳ್ಳಲಿಲ್ಲ.) 93% ನೀರೆ ತುಂಬಿರುವ ಬಿಯರ್ ನಲ್ಲಿ ಅದೇನು ಕಿಕ್ ಹೊಡಿತೋ ಏನೋ ಒಂದಿಬ್ಬರು ಬಿಕ್ಕಿ ಬಿಕ್ಕಿ ಅಳುತ್ತಾ, ಏನನ್ನೋ ನೆನಪಿಸಿಕೊಳ್ಳುತ್ತಾ ನಮ್ಮ ಅಚ್ಚರಿಗೆ, ಕುತೂಹಲಕ್ಕೆ ಕಾರಣರಾದರು. ಮಧ್ಯರಾತ್ರಿಯವರೆಗೆ ಹರಟೆ, ಕೂಗಾಟ ಸಾಗಿತ್ತು. ಮರುದಿನ ಬೆಳಿಗ್ಗೆ ತಡವಾಗಿ ಎದ್ದು ಹಾಸ್ಟೆಲ್ ರೂಂ ಖಾಲಿ ಮಾಡಿ , ನಮ್ಮ ಲಗೇಜ್ ಗಳನ್ನು ಪ್ಯಾಕ್ ಮಾಡಿ ಟ್ರ್ಯಾಕ್ಸ್ ನಲ್ಲಿ ಸಂಡೂರಿಗೆ ಎಲ್ಲರೂ ಒಟ್ಟಿಗೆ ತೆರಳಿದೆವು. ಅಲ್ಲಿ ಎಲ್ಲರೂ ಪರಸ್ಪರ ವಿದಾಯ ಹೇಳಿ ನಮ್ಮ ನಮ್ಮ ಊರುಗಳಿಗೆ ಪಯಣಿಸಿದೆವು....
ಮಧುರ ನೆನಪುಗಳ ರಾಶಿಯನ್ನು ಹೊತ್ತುಕೊಂಡು.....

(ಒಂದು ಸುಧೀರ್ಘ ಗ್ಯಾಪ್ ನಂತರ ಮೊನ್ನೆ ನಂದಿಹಳ್ಳಿಯ ನಮ್ಮ ಪಿ.ಜಿ. ಸೆಂಟರ್ ಗೆ ಭೇಟಿ ಕೊಟ್ಟಾಗ ಹಳೆಯ ನೆನಪುಗಳು ಮರುಕಳಿಸಿದವು. ಕ್ಯಾಂಪಸ್ ಬದಲಾಗಿಲ್ಲ, ಹಾಗೇ ಇದೆ. ಸಂಡೂರಿನಿಂದ ಕುಮಾರಸ್ವಾಮಿ ಬೆಟ್ಟದವರೆಗೂ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಬಹುಶಃ ಅದು ಅದರ ಮುಂದಕ್ಕೂ ಇರಬಹುದೇನೋ. ಲೋಕಾಯುಕ್ತ ವರದಿಯ ನಂತರ ಬಹುತೇಕ ಮೈನ್ಸ್ ಕಂಪನಿಗಳು ಸ್ಥಗಿತಗೊಂಡಿರುವುದರಿಂದ ನಿಸರ್ಗ ತನ್ನ ಸೌಂದರ್ಯವನ್ನು ಮರಳಿ ಮೈದುಂಬಿಕೊಂಡಿದೆ.)


ನಿಮ್ಮವನು,
   - ರಾಜ್