ಶುಕ್ರವಾರ, ಮಾರ್ಚ್ 15, 2019

ರವಿ ಬೆಳಗೆರೆ ಎಂದರೆ………


ರವಿ ಬೆಳಗೆರೆಯವರು ತಮ್ಮ ಅಫಿಡವಿಟ್ಟಿನಲ್ಲಿ “ನನಗೆ ಸಮಾನ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ನನ್ನ ಮುಖ ಕಂಡರಾಗದವರೂ ಇದ್ದಾರೆ” ಎಂದು ಹೇಳಿದ್ದಾರೆ. ಅದು ನಿಜವೂ ಹೌದು….

ಬರವಣಿಗೆಯ ವಿಷಯಕ್ಕೆ ಸಂಬಂಧಿಸಿದಂತೆ ರವಿ ಬೆಳಗೆರೆಯವರನ್ನು ಇಷ್ಟಪಡದಿರುವವರು ಅಥವಾ ದ್ವೇಷಿಸುವವರು ನೀಡುವ ಕಾರಣಗಳು ಎರಡೇ ಎರಡು....

1. ಸೆಕ್ಸ್ ನ್ನು ರಂಜಿತವಾಗಿ ಬರೆಯುತ್ತಾರೆ.
2. ಕ್ರೈಂ ನ್ನು ವೈಭವೀಕರಿಸಿ ಬರೆಯುತ್ತಾರೆ.

ಇವರಿಗೆ ಮೂರನೇ ಕಾರಣ ಸಿಗುವುದಿಲ್ಲ. ಸಾಮಾನ್ಯವಾಗಿ ಇವರು….

• ರವಿ ಬೆಳಗೆರೆಯವರ ಬರಹಗಳನ್ನು ಓದಿರುವುದಿಲ್ಲ. ಒಂದುವೇಳೆ ಓದಿದ್ದರೂ  ಅವು ಒಂದೆರಡು ಬರಹಗಳಾಗಿರುತ್ತವೆ. ಓದಿದ್ದಕಿಂತ ಹೆಚ್ಚಾಗಿ ಅಂತೆ ಕಂತೆ ಕೇಳಿರುತ್ತಾರೆ.

• ಸೆಕ್ಸ್, ಕ್ರೈಂ ಹೊರತುಪಡಿಸಿ ಇವರಿಗೆ ರವಿ ಬೆಳಗೆರೆಯವರ ಬೇರೆ ಬರಹಗಳು ಕಣ್ಣಿಗೆ ಕಂಡಿರುವುದಿಲ್ಲ. ಕಂಡಿದ್ದರೂ ಮುಟ್ಟಿರುವುದಿಲ್ಲ. ಮುಟ್ಟಿದ್ದರೂ ಓದಿರುವುದಿಲ್ಲ. ಒಂದು ರೀತಿಯ ಅರೆ ಓದುಗರು.

• ಬುಕ್ ಸ್ಟಾಲ್ ಗಳಲ್ಲಿ ತೂಗು ಹಾಕಿರುವ ಹಾಯ್ ಬೆಂಗಳೂರ್ ನ ಮುಖಪುಟದ ಹೆಡ್ ಲೈನ್ಸ್ ನೋಡಿ, ವರದಿಗಳನ್ನು ನೋಡಿ ಆ ತೀರ್ಮಾನಕ್ಕೆ ಬಂದಿರುತ್ತಾರೆ. (ಸಾಮಾನ್ಯವಾಗಿ ಇವರಿಗೆ ಕೇವಲ “ಕ್ರೈಂ ಪತ್ರಕರ್ತ ರವಿಬೆಳಗೆರೆ” ಕಂಡಿರುತ್ತಾನೆ, ಅಷ್ಟೇ!)

• ಈ ಟೀವಿಯಲ್ಲಿ ಆಗ ಪ್ರಸಾರವಾಗುತ್ತಿದ್ದ ‘ಕ್ರೈಂ ಡೈರಿ’ ಕಾರ್ಯಕ್ರಮವನ್ನು ನೋಡಿದವರಾಗಿರುತ್ತಾರೆ.

• ರವಿ ಬೆಳಗೆರೆಯವರ ಬರಹಕ್ಕಿಂತ ಜಾಸ್ತಿಯಾಗಿ ಅವರ ವೈಯಕ್ತಿಕ ಬದುಕಿನ ಬಗ್ಗೆ ಕೆಟ್ಟ ಕುತೂಹಲ ಹೊಂದಿರುವವರಾಗಿರುತ್ತಾರೆ. (Ofcourse, ಬೆತ್ತಲಾದಷ್ಟು ಮನುಷ್ಯ ಮಾನವಂತನಾಗಿರುತ್ತಾನೆ ಎಂಬ ಮಾತನ್ನು ಅಕ್ಷರಶಃ ಪಾಲಿಸುತ್ತಿರುವ ರವಿಯವರು ತಮ್ಮ ಬದುಕಿನ ಬಗ್ಗೆ ಎಲ್ಲಿಯೂ ಮುಚ್ಚಿಡದಂತೆ ‘ಖಾಸ್ ಬಾತ್’ ನಲ್ಲಿ ಹೇಳಿಕೊಂಡಿದ್ದರೂ ಇಂತವರಿಗೆ ಕುತೂಹಲ ಜಾಸ್ತಿ. ಹಾಗೂ ತಮ್ಮ ಟೀಕೆಗೆ ಬೆಳಗೆರೆ ಹೇಳಿಕೊಂಡಿರುವುದನ್ನೇ ತಮ್ಮ ಮಾತಿಗೆ ರೆಫ್ರೆನ್ಸ್ ಆಗಿ ಇಟ್ಟುಕೊಂಡಿರುತ್ತಾರೆ.)

• ತುಂಬಾ ಮಡಿವಂತಿಕೆಯಿಂದ ಸಾಹಿತ್ಯ ಓದುವವರು ಅಥವಾ ಕನ್ನಡ ಸಾಹಿತ್ಯವನ್ನು ಕೇವಲ ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯ ಕಾಲಘಟ್ಟಗಳಿಗೆ ಮಾತ್ರ ಸೀಮಿತವಾಗಿಟ್ಟುಕೊಂಡು ಅಪ್ ಡೇಟ್ ಆಗದಿರುವವರು.

• ವಿಪರೀತ ಲಂಕೇಶ್ ಬರಹಗಳನ್ನು ಓದಿಕೊಂಡು ಅದರಲ್ಲೇ ಸುಖಿಸುವವರು.

ಇಂಥವರಿಗೆ………. 

• ಪಾ.ವೆಂ. ಹೇಳಿದ ಕಥೆಗಳನ್ನು ಹೇಳುವ ಅದ್ಭುತ “ಕಥೆಗಾರ ರವಿ ಬೆಳಗೆರೆ” ಕಾಣಿಸುವುದಿಲ್ಲ.

• ಹೇಳಿಹೋಗು ಕಾರಣ, ಮಾಂಡೋವಿಯಂತ ಪ್ರೇಮಕಥನಗಳನ್ನು ಬರೆದ “ಕಾದಂಬರಿಕಾರ ರವಿ ಬೆಳಗೆರೆ” ಕಾಣಿಸುವುದಿಲ್ಲ.

• ತೆಲುಗಿನಿಂದ, ಇಂಗ್ಲಿಷ್ ನಿಂದ ಅನೇಕ ಅತ್ತ್ಯುತ್ತಮ ಕೃತಿಗಳನ್ನು ಕನ್ನಡಕ್ಕೆ ಬಹು ಚೆಂದದಿಂದ ಅನುವಾದಿಸಿದ “ಅನುವಾದಕ ರವಿ ಬೆಳಗೆರೆ” ಕಾಣಿಸುವುದಿಲ್ಲ.

• ‘ಬಾಟಮ್ ಐಟಮ್’ ನ “ಅಂಕಣಕಾರ ರವಿ ಬೆಳಗೆರೆ” ಕಾಣಿಸುವುದಿಲ್ಲ.

• ‘ಹಲೋ’ ದ “ರಾಜಕೀಯ ವಿಶ್ಲೇಷಕ ರವಿ ಬೆಳಗೆರೆ” ಕಾಳಿಸುವುದಿಲ್ಲ.

• ‘ಲವ್ ಲವಿಕೆ’ಯ “ಪ್ರೇಮಿ ರವಿ ಬೆಳಗೆರೆ” ಕಾಣಿಸುವುದಿಲ್ಲ.

• ‘ಕೇಳಿ’ ಯ “ತುಂಟ ರವಿ ಬೆಳಗೆರೆ” ಕಾಣಿಸುವುದಿಲ್ಲ.

• ಕಾರ್ಗಿಲ್, ಪುಲ್ವಾಮದ ಯುದ್ಧ ನೆಲದಲ್ಲಿ ಓಡಾಡಿ ನಮ್ಮ ಭಾರತೀಯ ಸೈನ್ಯದ ಬಗ್ಗೆ ತುಂಬು ಹೆಮ್ಮೆಯಿಂದ ಬರೆಯುವ “ದೇಶಪ್ರೇಮಿ ರವಿ ಬೆಳಗೆರೆ” ಕಾಣಿಸುವುದಿಲ್ಲ.

•  ಕಾರ್ಗಿಲ್ ನಲ್ಲಿ ಮಡಿದ ವೀರಯೋಧರಿಗೆ ಪತ್ರಿಕೆಯ ಮೂಲಕ ಸುಮಾರು (ಆ ಕಾಲಕ್ಕೆ) ಹದಿನಾಲ್ಕು(?) ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ಅದನ್ನು ನೇರವಾಗಿ ಮಡಿದ ವೀರ ಯೋಧರ ಕುಟುಂಬಗಳಿಗೆ ತಲುಪಿಸಿದ “ಅಂತಃಕರಣದ ರವಿ ಬೆಳಗೆರೆ” ಕಾಣಿಸುವುದಿಲ್ಲ.

• ಎಚ್ ಐ ವಿ ಪೀಡಿತೆ ವೀಣಾಧರಿಯವನ್ನು ಮನೆಯಲ್ಲಿಯೇ ಇಟ್ಟುಕೊಂಡು ಸಲುಹಿದ “ಮಾದರಿ ರವಿ ಬೆಳಗೆರೆ” ಕಾಣಿಸುವುದಿಲ್ಲ.

• ಆಸಿಡ್ ದಾಳಿಗೆ ಒಳಗಾದ ಹಸೀನಾಳಿಗೆ ನೆರವು ನೀಡಿದ “ಹೃದಯವಂತ ರವಿ ಬೆಳಗೆರೆ” ಕಾಣಿಸುವುದಿಲ್ಲ.

• ಜಾತಿಯ ಪ್ರಸ್ತಾಪವಿಲ್ಲದ, ಡೊನೇಷನ್ ಇಲ್ಲದ ಶಾಲೆಯನ್ನು ಕಟ್ಟಿದ “ಜಾತ್ಯಾತೀತ ರವಿ ಬೆಳಗೆರೆ” ಕಾಣಿಸುವುದಿಲ್ಲ.

• ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೊಟ್ಟು ಓದಿಸುವ “ಶಿಕ್ಷಣ ಪ್ರೇಮಿ ರವಿ ಬೆಳಗೆರೆ” ಕಾಣಿಸುವುದಿಲ್ಲ.

#ಚಂದಮಾಮ ಓದುವ ವಯಸ್ಸಿನಲ್ಲಿ ‘ಹಾಯ್ ಬೆಂಗಳೂರ್!’ ಓದಲು ಶುರು ಮಾಡಿದವನು ನಾನು. ರವಿ ಬೆಳಗೆರೆಯವರನ್ನು ಆರಾಧಿಸುವ ಹುಚ್ಚು ಅಭಿಮಾನಿ ನಾನಲ್ಲ. ಆದರೆ ಅವರನ್ನು, ಅವರ ಬರಹಗಳನ್ನು ತುಂಬಾ ತುಂಬಾ ಪ್ರೀತಿಸುತ್ತೇನೆ. ಅವರಿಗೆ ಪರಮ ಗುರುವಿನ ಸ್ಥಾನವನ್ನು ಕೊಟ್ಟಿದ್ದೇನೆ. ಪತ್ರಿಕೋದ್ಯಮದ ಜೊತೆಜೊತೆಯಲ್ಲೇ ರವಿ ಬೆಳಗೆರೆಯವರು ಸುಮಾರು 80 ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಅದರಲ್ಲಿ ಏನಿಲ್ಲವೆಂದರೂ 65 ಕೃತಿಗಳನ್ನು ಓದಿದ್ದೇನೆ. ಅವರಿಂದ ಕಲಿತಿದ್ದು, ತಿಳಿದುಕೊಂಡಿದ್ದು ಅಪಾರ. ಚಲಂ, ಮಾರ್ಕ್ವೆಜ್, ಸಾಹಿರ್, ಸಿಡ್ನಿ ಶೆಲ್ಡನ್, ಮಾರಿಯೋ ಫ್ಯೂಜೋ, ಪ್ರೊತಿಮಾ ಬೇಡಿ,  ಎಸ್.ಎಲ್. ಭೈರಪ್ಪ, ಅಬಿದಾ ಪರ್ವಿನ್, ಗುಲಾಮ್ ಅಲಿ, ಮಹಮದ್ ರಫಿ , ಓಷೋ ರಜನೀಷ್, ಸತ್ಯಕಾಮ, ಪಾ. ವೆಂ. ಆಚಾರ್ಯ, ಸತ್ಯಕಾಮ, ಖುಷ್ವಂತ್ ಸಿಂಗ್, ಮನೋಹರ್ ಮಳಗಾಂವ್ಕರ್, ಜೋಗಿ, ನಾಗತಿಹಳ್ಳಿ ಚಂದ್ರಶೇಖರ್, ಚಂದ್ರಶೇಖರ್ ಆಲೂರು, ಹುಸೇನ್ ಜೈದಿ,  ನಕ್ಸಲ್ ಚಳುವಳಿ, ಗಝಲ್….. ಇವುಗಳ ಬಗ್ಗೆ ತಿಳಿದುಕೊಂಡಿದ್ದು “ಹಾಯ್ ಬೆಂಗಳೂರ್!” ನಿಂದಲೇ.  ಬಿ.ಎ. ಓದುವ ವೇಳೆಗೆ ಬೆಳಗೆರೆಯವರ Almost ಎಲ್ಲಾ ಕೃತಿಗಳನ್ನು ಓದಿದ್ದೆ. ಕೆಲವು ಕೃತಿಗಳು Reprint ಆಗದ ಕಾರಣ ಇದುವರೆಗೂ ಸಿಕ್ಕಿಲ್ಲ, ಅಷ್ಟೇ. ರವಿ ಬೆಳಗೆರೆ ಬರೀ ಸೆಕ್ಸ್- ಕ್ರೈಂ ಬರೆಯುತ್ತಾನೆ ಎನ್ನುವವರಿಗೆ ಬರೀ ಅದೆ ಕಂಡಿದೆ. ನನಗೆ ಕಂಡಿದ್ದು ಈ ಮೇಲೆ ಹೇಳಿರುವೆ. ರವಿ ಬೆಳಗೆರೆಯವರು ಸೆಕ್ಸ್, ಕ್ರೈಂ ಬರೆದಿಲ್ಲ ಅಂತ ನಾನು ಹೇಳುತ್ತಿಲ್ಲ. ಬರೆದಿದ್ದಾರೆ. ಆದರೆ, ಅದೇ ಅವರ ಬ್ರಾಂಡ್ ಅಲ್ಲ. ಅದರಾಚೆಗಿನ ರವಿ ಬೆಳಗೆರೆಯವರನ್ನು ನೋಡಲು ಅವರ ಕೃತಿಗಳನ್ನು ಓದುವ ಆಸಕ್ತಿ, ಸಹನೆ ಬೇಕು. ಅದು ಇದ್ದಾಗ ಮಾತ್ರ ಪೂರ್ವಾಗ್ರಹ ಪೀಡಿತ ನಿಲುವು ತೊಲಗುತ್ತದೆ.


                                                                   ನಿಮ್ಮವನು,
                                                                    - ರಾಜ್