ತುಂಗಭದ್ರೆ ತೀರದಲ್ಲಿ
ಎಂದಿನಂತೆ ನಸುಕಿನ ಜಾವ ಎದ್ದ ಕೊಟ್ರ ಎದುರಿಗೆ ಹರಿಯುತ್ತಿದ್ದ ತುಂಗಭದ್ರೆಯಲ್ಲಿ ಈಸುಬಿದ್ದ. ಮಳೆಗಾಲದಲ್ಲಿ ಧುಮ್ಮಿಕ್ಕಿ ಆವೇಶದಿಂದ ಹರಿಯುವ ತುಂಗಭದ್ರೆ ಕಡುಬೇಸಿಗೆ ಹೊತ್ತಿಗೆ ಅಂಗಾಲು ತೋಯ್ಯುವಷ್ಟು ಅಥವಾ ಸಂಪೂರ್ಣ ಬತ್ತಿ ಬಿಡುತ್ತಾಳೆ. ಆದರೆ ಈ ಸಲ ಸೊಂಟದವರೆಗೆ ನೀರು ಹರಿಯುತ್ತಿತ್ತು. ಸುಸ್ತಾಗುವಷ್ಟು ನೀರಲ್ಲಿ ಈಜಿ ಎದ್ದು ವಿರೂಪಾಕ್ಷ ದೇವಸ್ಥಾನದ ಗೋಪುರದ ಹೆಬ್ಬಾಗಿಲು ದಾಟಿ ವಿರೂಪಾಕ್ಷನ ಸನ್ನಿಧಿಯಲ್ಲಿ ಕೊಂಚಹೊತ್ತು ಧ್ಯಾನಾಸಕ್ತನಾಗಿ ಈಚೆ ಬರುವ ವೇಳೆಗೆ ಪೂರ್ವದಲ್ಲಿ ಸೂರ್ಯ ತನ್ನ ಮೊದಲ ಗೆರೆಯನ್ನು ಮೂಡಿಸಿದ್ದ. ಹಂಪಿ ಕೊಟ್ರನಂತವರ ಪಾಲಿಗೆ ಅನ್ನದ ಬಟ್ಟಲು. ಅವನಪ್ಪ ಬದುಕಿನುದ್ದಕ್ಕೂ ಇದೇ ಹಂಪಿಯಲ್ಲಿ ಬದುಕಿ ಇಲ್ಲೇ ಕೊನೆಯುಸಿರೆಳೆದ. ಅವರಪ್ಪನೂ ಕೂಡಾ ಇಲ್ಲೇ ಬದುಕಿದ್ದನಂತೆ. ಕೊಟ್ರ ಎಷ್ಟನೇ ತಲೆಮಾರಿನ ಕೊಂಡಿಯೋ? ಆ ವಿರೂಪಾಕ್ಷನೇ ಬಲ್ಲ. ಕೊಟ್ರನಿಗೆ ಮೂವತ್ತೋ ಮುವ್ವತೈದೋ ಪ್ರಾಯ. ಕಡುಗಪ್ಪು ಮೈ ಬಣ್ಣ, ಅವನು ನಕ್ಕಾಗ ಕಾಣಿಸುವ ಹಲ್ಲುಗಳು ಮಾತ್ರ ಕಾರ್ಮೋಡದಲ್ಲೊಂದು ಮಿಂಚು ಸುಳಿದಂತಾಗುತ್ತದೆ. ತೆಪ್ಪದ ಹುಟ್ಟು ತಿರುವಿ ತಿರುವಿ ಅಂಗೈಯೆಂಬುದು ಒರಟಾಗಿಬಿಟ್ಟಿವೆ. ವಕ್ರವಾಗಿರುವ ಜಾಲಿಬೊಡ್ಡೆಯಂತಹ ಕಾಲುಗಳು, ಬಿರುಕುಬಿಟ್ಟ ಪಾದಗಳು... ತೀರಾ ವಿಕಾರಿಯಲ್ಲದಿದ್ದರೂ ಸ್ಫುರದ್ರೂಪಿಯೇನಲ್ಲ. ಅವನಿಗೆ ಬದುಕಿನ ಬಗ್ಗೆ ಹೆಚ್ಚಿನ ನಿರೀಕ್ಷೆಯಿಲ್ಲ. ಹೊಟ್ಟೆ ತುಂಬಾ ಊಟ, ಕಣ್ತುಂಬಾ ನಿದ್ದೆ, ಸೇದಲಿಕ್ಕೊಂದಿಷ್ಟು ಹೊಗೆಸೊಪ್ಪು, ಸಂಜೆಗೊಂದಿಷ್ಟು ಹೆಂಡ ಇದ್ದರೆ ಸಾಕು ಜಗತ್ತಿನ ಯಾವ ಮೂಲೆಯಲ್ಲಿ ಎಷ್ಟು ವರ್ಷ ಬೇಕಾದರೂ ಬದುಕಿಬಿಡಬಲ್ಲ.
ಬಾಲ್ಯದಲ್ಲಿ ಅವನ ತಾಯಿ ತುಂಗಭದ್ರೆಯ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಳು. ಯೌವನಕ್ಕೆ ಕಾಲಿಡುವ ವೇಳೆಗೆ ಅವನ ಅಪ್ಪ ಕ್ಷಯರೋಗಕ್ಕೆ ಬಲಿಯಾದ. ಒಡಹುಟ್ಟಿದವರಿಲ್ಲದೇ ಏಕಾಂಗಿಯಾಗಿ ಬೆಳೆದ ಅವನಿಗೆ ಅವನ ಅಪ್ಪ ಬಿಟ್ಟುಹೋದ ಆಸ್ತಿಯೆಂದರೆ ಮುರುಕು ಗುಡಿಸಲು ಮತ್ತು ಹರುಕು ತೆಪ್ಪ ಮಾತ್ರ. ಕಲಿಸಿದ ವಿದ್ಯೆಯೆಂದರೆ ತೆಪ್ಪ ನಡೆಸುವುದು ಅಷ್ಟೇ. ಉಳಿದೆಲ್ಲಾ ವಿದ್ಯೆ ಬುದ್ದಿ ಕಲಿಸಿದ್ದು ಹಂಪಿಯೇ. ಎಂದಿಗೂ ಶಾಲೆಯ ಮೆಟ್ಟಿಲು ಹತ್ತದ ಕೊಟ್ರ ಇಂಗ್ಲಿಷ್ ನ್ನು ಸರಾಗವಾಗಿ ಮಾತಾಡಬಲ್ಲ. ಬರೀ ಕೊಟ್ರ ಮಾತ್ರವಲ್ಲ ಹಂಪಿಯ ಬಹುತೇಕ ಜನರಿಗೆ ಇಂಗ್ಲಿಷ್ ಅನ್ನುವುದು ಕನ್ನಡದಷ್ಟೇ ಪರಿಚಿತ. ಕೆಲವರಂತೂ ಹಲವು ವಿದೇಶಿ ಭಾಷೆಗಳನ್ನು ಮಾತಾಡಬಲ್ಲರು. ಅದು ಹಂಪಿ ಜನರ ವೈಶಿಷ್ಟ್ಯ. ಸದಾ ದೇಸಿ ವಿದೇಶಿ ಪ್ರವಾಸಿಗರಿಂದ ತುಂಬಿರುವ ಹಂಪಿಯಲ್ಲಿ ಸ್ಥಳೀಯರು ಸಹಜವಾಗಿಯೇ ಹಲವು ಭಾಷೆಗಳನ್ನು ಮಾತಾಡುತ್ತಾರೆ. ಹಂಪಿ ವಿರೂಪಾಕ್ಷ ದೇವಸ್ಥಾನದ ಗೋಪುರದ ಎದುರಿಗೆ ನಿಂತರೆ ಬಲಭಾಗಕ್ಕೆ ಇರುವ ಚಿಕ್ಕದೊಂದು ಕಾಲುದಾರಿಯಲ್ಲಿ ಒಂದಿಷ್ಟು ದೂರ ನಡೆದರೆ ಅಲ್ಲಿ ಕೊಟ್ಟೂರೇಶ್ವರ ಮಠ. ಅದರ ಎದುರಲ್ಲೇ ತುಂಗಭದ್ರೆ ಹರಿಯುತ್ತಾಳೆ ಮಳೆಗಾಲದಲ್ಲಿ ಭೋರ್ಗೆರೆಯುತ್ತಾ, ಚಳಿಗಾಲದಲ್ಲಿ ಜುಳುಜುಳು ಹರಿಯುತ್ತಾ, ಬೇಸಿಗೆಯಲ್ಲಿ ತೆವಳುತ್ತಾ.... ಈ ನದಿ ತೀರದಲ್ಲಿಯೇ ಕೊಟ್ರನ ಗುಡಿಸಲಿರುವುದು. ಕೂಗಳತೆಯ ದೂರದಲ್ಲಿ ನದಿಯಾಚೆಗಿರುವುದೇ ವಿರುಪಾಪುರ ಗಡ್ಡಿಯೆಂಬ ಪುಟ್ಟ ದ್ವೀಪ. ಅಲ್ಲಿ ವಿದೇಶಿಯರಿಗೆಂದೇ ಹಲವು ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಗಳಿವೆ. ವಿದೇಶಿಗರ ಖಾಸಗಿತನಕ್ಕೆ, ಏಕಾಂತಕ್ಕೆ ಹೇಳಿ ಮಾಡಿಸಿದ ತಾಣವದು. ನದಿಯ ಈ ದಡದಿಂದ ಆ ದಡಕ್ಕೆ ಜನರನ್ನು ದಾಟಿಸಲು ಕೊಟ್ರ ತೆಪ್ಪ ನಡೆಸುತ್ತಾನೆ. ಫೆಬ್ರವರಿ ಮುಗಿಯುತ್ತಿದ್ದಂತೆ ಅಲ್ಲಿಂದ ಮೂರ್ನಾಲ್ಕು ತಿಂಗಳು ಧಗಧಗಿಸುವ ರಣಬೇಸಿಗೆ ಶುರುವಾದ ಹಾಗೆ. ಈ ಅವಧಿಯಲ್ಲಿ ತುಂಗಭದ್ರೆ ಭಾಗಶಃ ಬತ್ತಿಹೋಗಿರುತ್ತಾಳಾದ್ದರಿಂದ ಕೊಟ್ರನ ತೆಪ್ಪಕ್ಕೆ ಕೆಲಸವಿರುವುದಿಲ್ಲ. ಅದನ್ನು ದಡಕ್ಕೆಳೆದು ಮರವೊಂದಕ್ಕೆ ಕಟ್ಟಿಹಾಕಿರುತ್ತಾನಷ್ಟೇ. ಕೊಟ್ರನಿಗೆ ತೆಪ್ಪ ನಡೆಸುವುದಷ್ಟೇ ಕೆಲಸವಲ್ಲ. ಪ್ರವಾಸಿಗರ ಅದರಲ್ಲೂ ವಿದೇಶಿ ಪ್ರವಾಸಿಗರ ಲಗೇಜ್ ಹೊತ್ತು ಸಾಗಿಸುವುದು, ಹಂಪಿಯ ವಿವಿಧ ಸ್ಥಳಗಳನ್ನು ಅದರ ಇತಿಹಾಸವನ್ನು ಪರಿಚಯಿಸುವ ಗೈಡ್ ಕೆಲಸ ಮಾಡುತ್ತಾನೆ. ಅದರಿಂದ ದೊರೆಯುವ ಪುಡಿಗಾಸಿನಲ್ಲೇ ಅವನ ಅವತ್ತಿನ ಜೀವನ.
****************
ಅವತ್ತು ಕೊಟ್ರ ಹಂಪಿಯ ರಥಬೀದಿಯ ಕಲ್ಲುಮಂಟಪವೊಂದರ ನೆರಳಿಗೆ ಕೂತಿದ್ದ. ಮೇ ತಿಂಗಳ ಸುಡುಬಿಸಿಲು ಸುರಿಯುತ್ತಿತ್ತು. ಪ್ರವಾಸಿಗರ ಸಂಖ್ಯೆ ಎಂದಿಗಿಂತ ಕಡಿಮೆಯಿತ್ತು. ದೂರದಲ್ಲಿ ವಿದೇಶಿ ಜೋಡಿಯೊಂದು ಏನನ್ನೋ ಮಾತಾಡುತ್ತಾ ರಸ್ತೆಬದಿಯಲ್ಲಿ ನಿಂತಿದ್ದರು. ಅವರ ಹೆಗಲಿಗೆ ದೊಡ್ಡ ಏರ್ ಬ್ಯಾಗ್ ಗಳಿದ್ದವು. ಅವರು ಗಂಡ ಹೆಂಡತಿಯೋ, ಪ್ರೇಮಿಗಳೋ, ಸ್ನೇಹಿತರೋ..? ಅವೆಲ್ಲಾ ಹಂಪಿ ಕೇಳುವುದಿಲ್ಲ. ಅವರನ್ನು ನೋಡಿದ ಕೊಟ್ರನ ಕಣ್ಣು ಅರಳಿದವು. ಸರಸರನೇ ಅವರ ಬಳಿ ಧಾವಿಸಿ 'ಹಾಯ್' ಹೇಳಿ ಸ್ಫುಟವಾದ ಇಂಗ್ಲಿಷ್‌ನಲ್ಲಿ ತನ್ನನ್ನು ತಾನು ಪರಿಚಯಿಸಿಕೊಂಡ. ಅವಳು ಸ್ವೀಡನ್‌ನ ಕ್ಯಾಥರೀನ್, ಅವನು ಜರ್ಮನಿಯ ಡೇವಿಡ್. ಭಾರತದ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಒಟ್ಟಿಗೆ ಸುತ್ತಾಡಿ ಈಗ ಹಂಪಿಗೆ ಬಂದಿದ್ದರು. ಒಂದೆರಡು ದಿನ ತಂಗಲು ಅವರಿಗೆ ವಸತಿಗೃಹ ಬೇಕಾಗಿತ್ತು. ಕಡಿಮೆ ಬೆಲೆಯಲ್ಲಿ ಸುಸಜ್ಜಿತ ರೂಂ ಕೊಡಿಸುವೆನೆಂದು ಹೇಳಿದ ಕೊಟ್ರ ಅವರ ಲಗೇಜ್ ಹೊತ್ತುಕೊಂಡು ಹೊರಟ. ಅವರೊಂದಿಗೆ ಕುಶಲೋಪರಿ ಮಾತಾಡುತ್ತಾ ವಿರುಪಾಪುರ ಗಡ್ಡಿಯ 'ಬ್ಲೂ ಸ್ಟಾರ್ ಹೋಂ ಸ್ಟೇ' ಗೆ ಕರೆತಂದ. ಅವನ ಸಹಾಯಕ್ಕೆ ಪ್ರತಿಯಾಗಿ ವಿದೇಶಿ ಜೋಡಿ ಕೊಂಚ ಹಣ ನೀಡಿದರು. ಹೋಂ ಸ್ಟೇ ಮಾಲೀಕರಿಂದಲೂ ತನ್ನ ಕಮೀಷನ್ ಹಣ ಪಡೆದುಕೊಂಡ.
ಕೊಟ್ರ ಹಂಪಿಯಲ್ಲೇ ಹುಟ್ಟಿ ಬೆಳೆದವನಾದ್ದರಿಂದ ಹಂಪಿಯ ಇತಿಹಾಸ ಮತ್ತು ಹಂಪಿಯ ಇಂಚಿಂಚು ಜಾಗದ ಪರಿಚಯವಿತ್ತು. ಜೊತೆಗೆ ಅಸ್ಖಾಲಿತ್ಯ ಇಂಗ್ಲಿಷ್ ಜೊತೆಗಿತ್ತು. ಹಂಪಿಯ ಗೈಡ್ ಆಗಲಿಕ್ಕೆ ಇನ್ನೇನು ಬೇಕು? ಅನೇಕ ವಿದೇಶಿಯರಿಗೆ ಗೈಡ್ ಆಗಿ ಕೆಲಸ ಮಾಡುತ್ತಿದ್ದ. ಅವರು ಕೊಟ್ಟಷ್ಟೇ ಹಣ ತೆಗೆದುಕೊಂಡು ನಗುತ್ತಾ ಸ್ನೇಹದಿಂದ ವರ್ತಿಸುತ್ತಿದ್ದ ಕೊಟ್ರ ವಿದೇಶಿಗರಿಗೆ ಮೆಚ್ಚಿನ ಗೈಡ್ ಆಗಿದ್ದ. ಮರುದಿನ ಬೆಳಿಗ್ಗೆ ಹೋಂ ಸ್ಟೇ ಗೆ ಬಂದು ಕ್ಯಾಥರೀನ್ ಡೇವಿಡ್ ಗೆ 'ಗುಡ್ ಮಾರ್ನಿಂಗ್' ಹೇಳಿದ. ಪರಿಚಯದ ನಗೆ ಬೀರಿದ ಅವರು 'ಗುಡ್ ಮಾರ್ನಿಂಗ್' ಹೇಳಿದರು. ಅವರಿಗೆ ತಾನು ಹಂಪಿ ಗೈಡ್ ಮಾಡುವುದಾಗಿ ಹೇಳಿದ. ಜೊತೆಗೆ ಹೋಂ ಸ್ಟೇ ಮಾಲೀಕರು ಅವನ ಬಗ್ಗೆ ಒಂದೆರಡು ಒಳ್ಳೆ ಮಾತು ಹೇಳಿ ''ಅನುಭವಿ ಗೈಡ್, ನಿಮ್ಮ ಜೊತೆಗಿಟ್ಟುಕೊಳ್ಳಿ'' ಎಂದು ವಿದೇಶಿಯರಿಗೆ ಶಿಫಾರಸ್ಸು ಮಾಡಿದ. ಡೇವಿಡ್ ಕ್ಯಾಥರೀನ್ ಒಪ್ಪಿದರು. ಮೊದಲ ದಿನ ಹಂಪಿಯನ್ನೆಲ್ಲಾ ಸುತ್ತಾಡಿಸಿದ ಕೊಟ್ರ ವಿರೂಪಾಕ್ಷ ದೇವಸ್ಥಾನ, ಹಜಾರರಾಮ ದೇವಸ್ಥಾನ, ವಿಜಯ ವಿಠಲ ದೇವಸ್ಥಾನ, ಕಲ್ಲಿನ ರಥ, ಕಮಲ ಮಹಲ್, ರಾಣಿಯರ ಈಜುಕೊಳ, ಮಹಾನವಮಿ ದಿಬ್ಬಗಳನ್ನೆಲ್ಲಾ ತೋರಿಸಿ ಅದರ ಐತಿಹಾಸಿಕ ವಿವರಗಳನ್ನು, ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪಗಳ ಬಗ್ಗೆ ವಿವರಿಸಿದ. ಇಬ್ಬರೂ ಅಚ್ಚರಿಯ ಕಂಗಳಿಂದ ಕುತೂಹಲಭರಿತರಾಗಿ ಆಲಿಸುತ್ತಿದ್ದರು. ಡೇವಿಡ್ ಆರಡಿ ಎತ್ತರದ ಆಜಾನುಬಾಹು, ಅಷ್ಟೇ ಸ್ಫುರದ್ರೂಪಿ. ಸ್ವಲ್ಪ ಜೋರಾಗಿ ಚಿವುಟಿದರೂ ರಕ್ತ ಬರುವಂತಿತ್ತು ಅವನ ಮೈ ಬಣ್ಣ. ಚೆಲುವು ಎಂಬುದಕ್ಕೆ ಪರ್ಯಾಯವೆಂಬತ್ತಿದ್ದಳು ಕ್ಯಾಥರೀನ್. ಹಾಲು ಬಿಳುಪಿನ ಮೈ ಬಣ್ಣ, ನೀಲಿ ಕಣ್ಣುಗಳು, ಬಂಗಾರು ವರ್ಣದ ಕೂದಲು, ತುಂಬುಗೆನ್ನೆ, ಗುಲಾಬಿ ತುಟಿ, ಬಲಿಷ್ಟವಾದ ನೀಳ ಕಾಲುಗಳು, ಬಳ್ಳಿಯಂತೆ ಬಳುಕುವ ತೆಳುವಾದ ದೇಹ.... ಮೋಹಕ ಸಾಮ್ರಾಜ್ಯದ ಯುವರಾಣಿಯಂತಿದ್ದಳು. ಪುಟ್ಟ ಜೀನ್ಸ್ ಚೆಡ್ಡಿ, ಸ್ಲೀವ್‌ಲೆಸ್ ಟೀ ಶರ್ಟ್ ಧರಿಸಿದ್ದ ಕ್ಯಾಥರೀನ್ ಳ ದೇಹದ ಕಣಕಣದಲ್ಲೂ ಸೌಂದರ್ಯವೆಂಬುದು ಜಿನುಗುತ್ತಿತ್ತು.
ಎರಡನೇ ದಿನ ಬೆಳಿಗ್ಗೆ ಅವರಿಬ್ಬರನ್ನು ಹೊರಡಿಸಿಕೊಂಡ ಕೊಟ್ರ ಅಂಜನಾದ್ರಿ ಬೆಟ್ಟಕ್ಕೆ ತೆರಳಿದ. ಆಂಜನೇಯನ ಜನ್ಮಸ್ಥಳದ ಪುರಾಣ, ರಾಮಾಯಣದ ಮಹತ್ವ ವಿವರಿಸುತ್ತಿದ್ದರೆ ಕ್ಯಾಥರೀನ್ ಪರವಶವಾದವಳಂತೆ ಆಸಕ್ತಿಯಿಂದ ಕೇಳುತ್ತಿದ್ದಳು. ಅಷ್ಟರಲ್ಲಿ ಅವಘಢವೊಂದು ಸಂಭವಿಸಿತು. ಅಂಜನಾದ್ರಿ ಬೆಟ್ಟದಲ್ಲಿ ಮೊದಲೇ ಕೋತಿಗಳ ಹಾವಳಿ ವಿಪರೀತ. ಆಂಜನೇಯನ ಜನ್ಮಸ್ಥಳದಲ್ಲಿಯ ಕೋತಿಗಳು ಆಂಜನೇಯನ ಪ್ರತಿರೂಪವೆಂದೇ ಸ್ಥಳೀಯರು ಭಾವಿಸುತ್ತಾರೆ. ಕ್ಯಾಥರೀನ್ ತನ್ನ ಕೊರಳಲ್ಲಿದ್ದ ಪುಟ್ಟ ಬ್ಯಾಗ್‌ವೊಂದನ್ನು ತೆಗೆದು ಪಕ್ಕದಲ್ಲಿ ಇಟ್ಟುಕೊಂಡಿದ್ದಳು. ಇದ್ದಕ್ಕಿದ್ದಂತೆ ಬಲಿಷ್ಟ ಕೋತಿಯೊಂದು ಕುಪ್ಪಳಿಸಿ ನೆಗೆದು ಬ್ಯಾಗ್ ಎತ್ತಿಕೊಂಡು ಸರಸರನೇ ಮರ ಏರಲಾರಂಭಿಸಿತು. ಕ್ಯಾಥರೀನ್ ಜೋರಾಗಿ ಕೂಗಲಾರಂಭಿಸಿದಳು. ಜನರಿಗೆ ಇದೊಂದು ತಮಾಷೆಯ ಸಂಗತಿಯಾಗಿ ತೋರಿತು. ಕೆಲವರು ಸಹಾಯ ಮಾಡಲೆಂಬಂತೆ ಕೋತಿಯೆಡೆಗೆ ಕಲ್ಲು ತೂರಿದಾಗ ಕೋತಿ ಇನ್ನಷ್ಟು ಎತ್ತರಕ್ಕೇರಿ ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಾ ಬೇರೊಂದು ಮರದೆಡೆಗೆ ಸಾಗಿತು.
ಕೊಟ್ರನಿಗೆ ಮರ ಏರಲು ಬರುತ್ತಿದ್ದರೂ ಅವನು ಮರ ಏರುವವರೆಗೆ ಕೋತಿ ಅಲ್ಲೇ ಕುಳಿತಿರಬೇಕಲ್ಲ..? ಅವನೂ ಅಸಹಾಯಕನಾದ. ಕ್ಯಾಥರೀನ್‌ಳ ಕೂಗು ಈಗ ಅಳುವಾಗಿ ಮಾರ್ಪಾಟ್ಟಿತು. ತನ್ನ ಬ್ಯಾಗ್‌ನಲ್ಲಿ ದುಬಾರಿ ಕೆಮೆರಾ, ಪಾಸ್‌ಪೋರ್ಟ್, ವೀಸಾ, ಕರೆನ್ಸಿ, ಡೆಬಿಟ್ ಕ್ರೆಡಿಟ್ ಕಾರ್ಡ್ ಗಳಿವೆಯೆಂದು ಅಳಲಾರಂಭಿಸಿದಳು. ಕೊಟ್ರ ಸಮಾಧಾನಿಸಿದ. ಡೇವಿಡ್ ಏನೂ ಮಾಡಲು ತೋಚದೇ ಅತ್ತಿಂದಿತ್ತ ಓಡಾಡಿದ. ಪಶ್ಚಿಮದಲ್ಲಿ ಸೂರ್ಯ ಇನ್ನೇನು ಮುಳುಗುವ ಹಂತದಲ್ಲಿದ್ದ. ನಿಧಾನವಾಗಿ ಸಂಜೆ ಕರಗುತ್ತಿತ್ತು. ಇನ್ನು ಕೆಲವೇ ನಿಮಿಷಗಳಲ್ಲಿ ಕತ್ತಲೆ ತನ್ನ ಸಾಮ್ರಾಜ್ಯವನ್ನು ಪಸರಿಸಲಿತ್ತು. ತಾನಿಲ್ಲಿದ್ದು ಹೇಗಾದರೂ ಮಾಡಿ ಬ್ಯಾಗ್ ತರುವೆಯೆಂದು ಹೇಳಿ ಅವಳನ್ನು ಸಮಾಧಾನಿಸಿ ಡೇವಿಡ್‌ನೊಂದಿಗೆ ಹಂಪಿಗೆ ಹೊರಟಿದ್ದ ಆಟೋವೊಂದರಲ್ಲಿ ಹತ್ತಿಸಿ ಕಳಿಸಿದ.
ಕೊಟ್ರನನ್ನು ನೋಡಿದ ಕೋತಿ ಮರದಿಂದ ಮರಕ್ಕೆ ಜಿಗಿಯುತ್ತಾ ಅಂಜನಾದ್ರಿ ಬೆಟ್ಟದಿಂದ ಬಹುದೂರ ಹೋಗಿತ್ತು. ಸುತ್ತಲೂ ದೊಡ್ಡ ದೊಡ್ಡ ಬಂಡೆಗಳಿಂದ ಕೂಡಿದ ಕುರುಚಲು ಕಾಡು. ಅಲ್ಲಿ ಚಿರತೆ ಕರಡಿಗಳ ಹಾವಳಿ ಬೇರೆ. ಕತ್ತಲೂ ಆವರಿಸಿದ್ದರೂ ಆಕಾಶದಲ್ಲಿ ಹುಣ್ಣಿಮೆಯ ಚಂದ್ರ ಅರಳಿದ್ದ. ಸುತ್ತಲಿನ ವಸ್ತುಗಳು ತಕ್ಕಮಟ್ಟಿಗೆ ಸ್ಪಷ್ಟವಾಗಿ ಕಾಣಿಸುತ್ತಿದ್ದವು. ಹತ್ತಿರದಲ್ಲೇ ನರಿ ಊಳಿಡುವ ಸದ್ದು, ಜೀರುಂಡೆಗಳ ಝೀಂ ಸದ್ದು ಕೇಳಿಸುತ್ತಿತ್ತು. ಕೋತಿ ಕಾಣಿಸಿತು. ನೆಗೆದು ನೆಗೆದು ಸುಸ್ತಾದಂತೆ ಒಂದು ಕಡೆಗೆ ತೆಪ್ಪಗೆ ಕುಳಿತಿತ್ತು. ತೀರಾ ಎತ್ತರದಲ್ಲೇನೂ ಕುಳಿತಿರಲಿಲ್ಲ. ಸ್ವಲ್ಪ ಹೊತ್ತು ಅದನ್ನು ನಿರ್ಲಕ್ಷಿಸಿದಂತೆ ಮಾಡಿದ ಕೊಟ್ರ ನಿಧಾನವಾಗಿ ಅದರ ಗಮನ ಬೇರೆಡೆಗೆ ಸೆಳೆದು ಮನಸ್ಸಿನಲ್ಲಿ ಆಂಜನೇಯನ ಕ್ಷಮೆ ಕೋರಿ ಪುಟ್ಟ ಕಲ್ಲೊಂದನ್ನು ಎತ್ತಿಕೊಂಡು ಕೋತಿ ಎದೆಗೆ ಗುರಿಯಿಟ್ಟು ಬೀಸಿದ ಅಷ್ಟೇ. ಗುರಿ ತಪ್ಪಲಿಲ್ಲ. ತಕ್ಷಣ ಬೆಚ್ಚಿಬಿದ್ದ ಕೋತಿ ಬ್ಯಾಗ್ ಕೈ ಬಿಟ್ಟಿತು. ಬೀಳುತ್ತಿದ್ದ ಬ್ಯಾಗ್ ರಪ್ಪನೇ ಹಿಡಿದುಕೊಂಡವನೇ ಕಲ್ಲು ಮುಳ್ಳುಗಳ ಹಾದಿಯಲ್ಲಿ ಹಂಪಿಯೆಡೆಗೆ ಹೆಜ್ಜೆ ಹಾಕತೊಡಗಿದ. ತೀರಾ ದೂರದ ಹಾದಿಯಲ್ಲದಿದ್ದರೂ ರಾತ್ರಿಯ ವೇಳೆಯ ಸಂಚಾರ ಅಪಾಯಕಾರಿಯಾದುದು. ಚಿರತೆ, ಕರಡಿ, ವಿಷಕಾರಿ ಹಾವುಗಳು ಓಡಾಡುವ ಜಾಗವದು. ಮನದಲ್ಲಿ ವಿರೂಪಾಕ್ಷನನ್ನು ನೆನೆದು ವೇಗವಾಗಿ ನಡೆಯಲಾರಂಭಿಸಿದ. ಹಂಪಿ ತಲುಪುವ ವೇಳೆಗೆ ಹಂಪಿ ಗಾಢ ನಿದ್ರೆಯಲ್ಲಿತ್ತು.
ಮರುದಿನ ಬೆಳಿಗ್ಗೆ ಅವರ ರೂಂ ಗೆ ಬಂದಾಗ ಡೇವಿಡ್ ತನ್ನ ಲ್ಯಾಪ್‌ಟಾಪ್ ನಲ್ಲಿ ಏನನ್ನೋ ಟೈಪ್ ಮಾಡುತ್ತಿದ್ದ. ಮಂಚದ ಮೇಲೆ ಕುಳಿತಿದ್ದ ಕ್ಯಾಥರೀನ್ ಳ ಮುಖದಲ್ಲಿ ದಿಗಿಲು, ಖಿನ್ನತೆ, ಚಿಂತೆಯ ಗೆರೆಗಳು ಕದಲುತ್ತಿದ್ದವು. ರಾತ್ರಿಯಿಡೀ ನಿದ್ದೆಗೆಟ್ಟಿದ್ದ ಅವಳ ನೀಲಿಕಂಗಳು ಕಳೆಗುಂದಿದ್ದವು. ಬಾಗಿಲ ಮರೆಯಲ್ಲಿ ಬ್ಯಾಗ್ ಇಟ್ಟ ಕೊಟ್ರ 'ಹಾಯ್ ಡೇವಿಡ್ ಕ್ಯಾಥರೀನ್ ಗುಡ್ ಮಾರ್ನಿಂಗ್' ಅಂದ. ಲ್ಯಾಪ್‌ಟಾಪ್ ನಿಂದ ತಲೆಯೆತ್ತಿದ ಡೇವಿಡ್ ಮುಗುಳ್ನಗುತ್ತಾ 'ಗುಡ್ ಮಾರ್ನಿಂಗ್' ಹೇಳಿದ. ಕ್ಯಾಥರೀನ್ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾ 'ಮೈ ಬ್ಯಾಗ್..?' ಕೇಳಿದಳು. ಅವಳ ದನಿಯಲ್ಲಿ ಆತಂಕದ ಪ್ರವಾಹವೇ ಇತ್ತು. ಕೊಟ್ರನ ಖಾಲಿ ಕೈ ನೋಡಿ ಇನ್ನೇನು ದುಃಖದ ಕಟ್ಟೆಯೊಡೆದು ಅಳಬೇಕೆನ್ನುವಷ್ಟರಲ್ಲಿ ಅವನು ಬಾಗಿಲ ಮರೆಯಲ್ಲಿದ್ದ ಬ್ಯಾಗ್ ತೆಗೆದು ತೋರಿಸಿದ. ತಕ್ಷಣ ಅವಳ ಕಣ್ಣು ಮಿನುಗಿದವು. ಅದೆಷ್ಟು ಖುಷಿಗೊಂಡಳೋ, ಮಂಚದ ಮೇಲೆ ಕುಳಿತಿದ್ದವಳು ಖುಷಿಯಿಂದ ಚೀತ್ಕರಿಸುತ್ತಾ ಚಕ್ಕನೇ ಅಲ್ಲಿಂದ ಚಿಮ್ಮಿ ಅವನ ತೆಕ್ಕೆಗೆ ಬಿದ್ದಳು. ಹಣೆ ಕಣ್ಣು ಕೆನ್ನೆಯನ್ನೆಲ್ಲಾ ಚುಂಬಿಸುತ್ತಾ ಕೊನೆಗೊಮ್ಮೆ ತುಟಿ ಮೇಲೆ ತುಟಿಯಿಟ್ಟು ಸುದೀರ್ಘವಾಗಿ ಚುಂಬಿಸಿದಳು ಆ ನೀಲಿಕಣ್ಣಿನ ಸುಂದರಿ! ಕೊಟ್ರ ದಿಗ್ಬ್ರಾಂತನಾಗಿದ್ದ. ಬೆನ್ನಮೂಳೆಯ ಆಳದಲ್ಲೆಲ್ಲೊ ರೋಮಾಂಚನವೆಂಬ ಕೋಟಿ ವೋಲ್ಟ್ ನ ಬಲ್ಬ್ ಹೊತ್ತಿಸಿದಂತಾಗಿತ್ತು. ಡೇವಿಡ್ ಅದೆಲ್ಲಾ ಸಹಜವೆಂಬಂತೆ ನೋಡಿ ಸುಮ್ಮನಾದ. ಕ್ಯಾಥರೀನ್ ತನ್ನ ಪರ್ಸ್‌ನಲ್ಲಿದ್ದ ನೋಟಿನ ಪುಡಿಕೆಯೊಂದನ್ನು ಅವನೆಡೆಗೆ ಚಾಚಿದಳು. ಅದೇಕೋ ಕೊಟ್ರ ನಿರಾಕರಿಸಿದ. ಅವಳಿಗೂ ಏನನಿಸಿತೋ ಒತ್ತಾಯಿಸಲಿಲ್ಲ. ಇನ್ನೊಮ್ಮೆ ಹಗುರವಾಗಿ ಪ್ರೀತಿಯಿಂದ ತಬ್ಬಿಕೊಂಡಳು. ಅದು ಹಂಪಿಗೆ ಅವರು ಬಂದು ಮೂರನೇ ದಿನ. ಕೊಟ್ರ ಹಂಪಿಯ ಕೋಟೆ ಕೊತ್ತಲುಗಳು, ಆನೆಗೊಂದಿ ಕಿಷ್ಕಿಂದ ಸುತ್ತಲಿನ ಕಲ್ಲು ಮಂಟಪಗಳು, ಪಾಳುಬಿದ್ದ ದೇವಾಲಯಗಳು ತೋರಿಸಿ ಸಾಳ್ವ, ಸಂಗಮ, ತುಳುವ, ಅರವೀಡು ವಂಶಗಳ ಆಳ್ವಿಕೆಯಲ್ಲಿ ಹಂಪಿ ಹೇಗಿತ್ತು ಎಂಬುದನ್ನು, ಅಳಿಯ ರಾಮರಾಯನ ಕಾಲದಲ್ಲಿ ತಾಳಿಕೋಟಿ ಯುದ್ದದೊಂದಿಗೆ ವಿಜಯನಗರ ಸಾಮ್ರಾಜ್ಯ ಹೇಗೆ ನಾಶವಾಯಿತು ಎಂದು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ ಸಾಗಿದ. ಜೊತೆಗೆ ಭಾರತೀಯ ಸಂಸ್ಕೃತಿ ಪರಂಪರೆ, ಆಧ್ಯಾತ್ಮ, ಪುರಾಣ, ರಾಮಾಯಣ, ಮಹಾಭಾರತಗಳನ್ನೆಲ್ಲಾ ವಿವರಿಸಿ ಹೇಳುತ್ತಿದ್ದ. ಡೇವಿಡ್ ಅದರಲ್ಲಿ ಅಷ್ಟೊಂದು ಆಸಕ್ತಿ ತೋರದಿದ್ದರೂ ಕ್ಯಾಥರೀನ್ ಅಪರಿಮಿತ ಆಸಕ್ತಿಯಿಂದ ಕೇಳುತ್ತಿದ್ದಳು. ಮೂರೇ ದಿನದಲ್ಲಿ ಅವಳಿಗೆ ಭಾರತದ ನೆಲದೆಡೆಗೆ ಪ್ರೀತಿ ಬೆಳೆದಿತ್ತು. ಮೂರು ದಿನದಲ್ಲಿ ಹಂಪಿ ಹಾಗೂ ಹಂಪಿ ಸುತ್ತಲಿನ ಎಲ್ಲಾ ಸ್ಥಳಗಳನ್ನು ತೋರಿಸಿಯಾಗಿತ್ತು. ನಾಳೆ ನಾವು ಗೋವಾಗೆ ಹೊರಡುವೆವೆಂದು ಸಂಜೆ ನಮ್ಮೊಂದಿಗೆ ಡಿನ್ನರ್‌ಗೆ ಬಾ ಎಂದು ಕೊಟ್ರನನ್ನು ಡೇವಿಡ್ ಆಹ್ವಾನಿಸಿದ. ಅವರೀಗ ಬರೀ ಗೈಡ್ - ಪ್ರವಾಸಿಗರಾಗಿಯಷ್ಟೇ ಉಳಿದಿರಲಿಲ್ಲ. ಆತ್ಮೀಯ ಗೆಳೆಯರಂತಾಗಿದ್ದರು. ಸಂಜೆ ಕೊಟ್ರ ವಿರುಪಾಪುರ ಗಡ್ಡಿಗೆ ಹೋದಾಗ 'ಬ್ಲೂ ಮೂನ್ ಹೋಟೆಲ್' ಲಾನ್ ನ ತಿಳಿಬೆಳಕಿನಲ್ಲಿ ಟೇಬಲ್‌ವೊಂದರಲ್ಲಿ ಡೇವಿಡ್ ಕ್ಯಾಥರೀನ್ ಕುಳಿತಿದ್ದರು. ಕೊಟ್ರನನ್ನು ನಗುಮುಖದಿಂದಲೇ ಸ್ವಾಗತಿಸಿದ ಡೇವಿಡ್ ತಾನೇ ಗ್ಲಾಸ್ ಗೆ ವಿಸ್ಕಿ ಸುರಿದುಕೊಟ್ಟು ಚಿಯರ್ಸ್ ಅಂದ. ವಿಸ್ಕಿ ಕುಡಿಯುತ್ತಾ ಸ್ವಲ್ಪ ಹೊತ್ತು ಹರಟಿದರು. ಕ್ಯಾಥರೀನ್ ಮುಖದಲ್ಲಿ ಎಂದಿನ ಲವಲವಿಕೆಯಿರಲಿಲ್ಲ. ಮೌನವಾಗಿ ವಿಸ್ಕಿ ಹೀರುತ್ತಿದ್ದಳು. ಊಟ ಮುಗಿಸಿ ಎದ್ದೇಳುವ ಹೊತ್ತಿಗೆ ಡೇವಿಡ್ ಸ್ವಲ್ಪ ಹಣದೊಂದಿಗೆ ದುಬಾರಿ ಸ್ಕಾಚ್ ವಿಸ್ಕಿ ಬಾಟಲೊಂದನ್ನು ಕೊಟ್ರನಿಗೆ ಉಡುಗೊರೆಯಾಗಿ ನೀಡಿ 'ಗುಡ್‌ನೈಟ್' ಹೇಳಿ ಬೀಳ್ಕೊಟ್ಟ.
***************
ಕ್ಯಾಥರೀನ್‌ಗೆ ಹಂಪಿ ಬಿಟ್ಟುಹೋಗಲು ಮನಸ್ಸಿರಲಿಲ್ಲ. ಇನ್ನೊಂದೆರಡು ದಿನ ಇಲ್ಲೇ ಇದ್ದು ಬರುವೆ. ನಂತರ ಗೋವಾದಲ್ಲಿ ಭೇಟಿಯಾಗುವೆ ಎಂದು ಹೇಳಿ ಡೇವಿಡ್ ನನ್ನು ಕಳಿಸಿದಳು. ತನಗಿದ್ದ ರಜೆ ಮತ್ತು ಹಣ ಯಾವತ್ತೂ ವ್ಯರ್ಥವಾಗದಂತೆ ನೋಡಿಕೊಳ್ಳುತ್ತಿದ್ದ ಡೇವಿಡ್ ತನ್ನ ಪ್ಲಾನಿಂಗ್ ಪ್ರಕಾರ ಹಂಪಿ ಪ್ರವಾಸ ಮುಗಿಸಿ ಹೊರಟ. ಊರು ಪೂರ್ತಿಯಾಗಿ ನೋಡಿದ ಮೇಲೂ ಅಲ್ಲೆ ಉಳಿದು ಕೊಳ್ಳುವುದು ದುಂದು ವೆಚ್ಚಕ್ಕೆ ದಾರಿ, ಕಾಲಹರಣ ಎಂಬುದು ಅವನ ಭಾವನೆ. ಅವನಿಗೆ ದೊರಕಿದ್ದ ರಜೆಗಳಲ್ಲಿ ಇನ್ನೂ ನೋಡಬೇಕಾದ ಬಹಳಷ್ಟು ಸ್ಥಳಗಳಿದ್ದವು. ಹೀಗಾಗಿ ಮರುಮಾತಿಲ್ಲದೇ ಹೊರಟ.
ಇತ್ತ ಕ್ಯಾಥರೀನ್ ಕೊಟ್ರನ ಗುಡಿಸಲಿಗೇ ಬಂದಿದ್ದಳು. ರಾತ್ರಿ ಡೇವಿಡ್ ಕೊಟ್ಟ ವಿಸ್ಕಿಯನ್ನು ಮೂಗಿನ ಮಟ್ಟಕ್ಕೆ ಕುಡಿದು ಕೊಟ್ರ ಎಚ್ಚರವಿಲ್ಲದವನಂತೆ ಮಲಗಿದ್ದ. ಅದೇನೂ ಕೂಗಿದಳೋ ಅವನಿಗೆ ಅಸ್ಪಷ್ಟವಾಗಿ ಕೇಳಿಸಿತು. ಕುಡಿದ ನಿಶೆ ಗಾಢವಾಗಿ ಆವರಿಸಿತ್ತು. ಒಳಗೆ ಬಂದವಳು ಅವನ ಮೈ ಅಲುಗಾಡಿಸಿದಾಗಲೇ ಅವನು ನಿಧಾನವಾಗಿ ಕಣ್ಬಿಟ್ಟಿದ್ದು. ಕುಡಿದ ನಿಶೆ ಹಾರಿ ಹೋದಂತಾಗಿ ತಕ್ಷಣವೇ ಬೆಚ್ಚಿ ಎದ್ದು ಕುಳಿತ. ಇದು ಕನಸೋ...ನನಸೋ... ಹುಣ್ಣಿಮೆಯ ಚಂದ್ರ ಅವನ ಗುಡಿಸಲೊಳಗೆ ಬಂದತ್ತಿತ್ತು. ಕ್ಯಾಥರೀನ್ ನಗುತ್ತಿದ್ದಳು. ಉಟ್ಟ ಬಟ್ಟೆಯ ಮೇಲೆ ಪರಿವಿಲ್ಲದಂತೆ ಮುರುಕು ಗುಡಿಸಲಿನಲ್ಲಿ ನಿರ್ಗತಿಕನಂತೆ ಮಲಗಿದ್ದ ಕೊಟ್ರನಿಗೆ ತನ್ನ ಬಗ್ಗೆ ತನಗೆ ಸಂಕೋಚವೆನಿಸಿತು. ಡೇವಿಡ್ ಹೋಗಿದ್ದು, ತಾನಿನ್ನು ಕೆಲವು ದಿನಗಳವರೆಗೆ ಹಂಪಿಯಲ್ಲಿ ಉಳಿದುಕೊಳ್ಳುತ್ತೇನೆಂದು, ಅಲ್ಲಿಯವರೆಗೆ ನೀನು ನನ್ನ ಜೊತೆ ಇರಬೇಕೆಂದು ಹೇಳಿದಳು. ಒಪ್ಪಿಗೆ ಸೂಚಿಸಿದ ಕೊಟ್ರ ಅವಳ ಮುಖ ದಿಟ್ಟಿಸಿದ. ಅವನ ದಾರಿದ್ರ್ಯದ ಬಗ್ಗೆ ಅವಳಿಗೆ ಅಸಹ್ಯವೆನಿಸುವ ಭಾವ ಕಾಣಲಿಲ್ಲ. ಅವಳು ಮುಗುಳ್ನಗುತ್ತಿದ್ದಳು. ತೊಟ್ಟಿದ್ದ ಲುಂಗಿ ಬನಿಯನ್ ಬಿಚ್ಚಿದವನೇ ಎದುರಿಗೆ ಹರಿಯುತ್ತಿದ್ದ ತುಂಗಭದ್ರೆಗೆ ಹಾರಿದ. ಮನದಣಿಯೆ ಈಜಿ ಹೊರಬಂದಾಗ ಕ್ಯಾಥರೀನ್ ಕಣ್ಣಲ್ಲಿ ಮೆಚ್ಚುಗೆ ಹೊಮ್ಮುತ್ತಿತ್ತು. ಮತ್ತೆ ಹಂಪಿಯ ಮೂಲೆ ಮೂಲೆ ಸುತ್ತಿದರು. ಅದೆಷ್ಟು ಮಾತಾಡಿದನೋ ಕೊಟ್ರ. ಅವಳು ಅಷ್ಟೇ ತನ್ಮಯತೆಯಿಂದ ಕೇಳುತ್ತಿದ್ದಳು. ಹಂಪಿಯಲ್ಲಿ ಹೊಸದಾಗಿ ನೋಡಲು, ಮಾತಾಡಲು ಇನ್ನು ಏನೂ ಉಳಿದಿರಲಿಲ್ಲ. ಅವಳಿನ್ನು ಹೋಗಬಹುದೆಂದುಕೊಂಡ. ಆದರೆ ಅವನ ಊಹೆ ಸುಳ್ಳಾಯಿತು. ಕ್ಯಾಥರೀನ್ ಹಂಪಿ ಬಿಟ್ಟು ಕದಲಲಿಲ್ಲ. ಪ್ರತಿದಿನ ಕೊಟ್ರನಿಗೆ ಹಣ ನೀಡುತ್ತಿದ್ದಳಾದರೂ ಸುಖಾಸುಮ್ಮನೇ ಹಣ ಪಡೆಯಲು, ವ್ಯರ್ಥವಾಗಿ ಸುತ್ತಾಡಲು ಅವನಿಗೆ ಹಿಂಸೆಯೆನಿಸತೊಡಗಿತು. ಅವರ ನಡುವಿನ ಅಂತರ ಈಗ ಕಡಿಮೆಯಾಗಿ ಅವಳು ಅವನಿಗೆ ಹತ್ತಿರವಾಗತೊಡಗಿದಳು. ಅದು ಸ್ನೇಹದ ಪರಧಿಯನ್ನು ಮೀರತೊಡಗಿತೆನೋ ಕೇಳಿಯೇ ಬಿಟ್ಟ "ಕ್ಯಾಥರೀನ್ ತುಂಬಾ ದಿನವಾಯ್ತಲ್ಲ ಬಂದು, ಹಂಪಿ ಬಿಟ್ಟು ಹೋಗಲ್ವಾ..?" "ನೋ" ಕ್ಲುಪ್ತವಾಗಿ ಉತ್ತರಿಸಿದಳು. "ಯಾಕೆ?" ಎಂದು ಕೇಳಬೇಕೆಂದುಕೊಂಡವನು ಯಾಕೋ ಸುಮ್ಮನಾಗಿಬಿಟ್ಟ.
ಅಕ್ಕತಂಗಿಯರ ಹೆಬ್ಬಂಡೆಯ ಕೆಳಗೆ ನಿಂತಿದ್ದರು. ಜೂನ್ ತಿಂಗಳ ಮೊದಲ ವಾರವದು. ಮಧ್ಯಾಹ್ನದ ಹೊತ್ತಿಗೇ ಆಕಾಶದಲ್ಲಿ ಕಾರ್ಮೋಡಗಳು ಕವಿದುಬಿಟ್ಟವು. ದೊಡ್ಡದೊಂದು ಮಳೆ ಸುರಿಯುವ ಸೂಚನೆಗಳು ಕಾಣಿಸಿದವು. ನಿಧಾನವಾಗಿ ಹತ್ತಿರಬಂದ ಕ್ಯಾಥರೀನ್ ಕೊಟ್ರನ ಉಸಿರಿಗೆ ಉಸಿರು ತಾಕುವಷ್ಟು ಸನಿಹವಾದಳು. "ನಿನ್ನೊಳಗೆ ಹಂಪಿ ಬೆರೆತಿರುವಂತೆ ನನ್ನೊಳಗೆ ನೀನು ಬೆರೆತಿರುವೆ, ಲವ್ಯೂ ಖೋಥ್ರಾ" ಎನ್ನುತ್ತಾ ಅವನನ್ನು ಬಿಗಿಯಾಗಿ ತಬ್ಬಿಕೊಂಡಳು. ಕಾಲ ಸ್ತಂಭಿಸಿತ್ತು! ಆಕಾಶಕ್ಕೇ ಆಕಾಶವೇ ಸ್ಫೋಟಿಸಿದ ಹಾಗೆ "ಖ್ರಿಢ್ ಖ್ರಿಢಿಲ್" ಎಂಬ ಭಯಂಕರ ಸದ್ದಿನೊಂದಿಗೆ ಸಿಡಿಲು ಹಂಪಿಯ ನೆತ್ತಿಯ ಮೇಲೆ ಸಿಡಿಯಿತು. ಕೆಲವೇ ಕ್ಷಣಗಳಲ್ಲಿ ಮುಗಿಲು ಹರಿದುಕೊಂಡಿದೆಯೇನೋ ಎಂಬಂತೆ ಕುಂಭದ್ರೋಣ ಮಳೆ ಭೋರ್ಗೆರೆಯಲಾರಂಭಿಸಿತು. ಅಕ್ಕತಂಗಿಯರ ಹೆಬ್ಬಂಡೆ ಕೆಳಗೆ ಕೃತಕ ಕತ್ತಲೆ ನಿರ್ಮಾಣವಾಯಿತು. ಕೊಟ್ರ ಇದ್ಯಾವುದನ್ನು ಗಮನಿಸದೇ ಸಿಹಿಯಾದ ಆಘಾತಕ್ಕೊಳಗಾಗಿ ದಿಗ್ಮೂಢನಾಗಿದ್ದ. ಅವನಿಗೆ ಅವಳ ಪ್ರೀತಿಯನ್ನು ಒಪ್ಪಿಕೊಳ್ಳುವ ಮತ್ತು ತಿರಸ್ಕರಿಸುವ ಎರಡೂ ಯೋಗ್ಯತೆಯಿರಲಿಲ್ಲ. ಅವಳ ಅಪ್ಪುಗೆಯಲಿ ಇಂಚಿಂಚಾಗಿ ಕರಗಿಹೋದ. ಜಾಲಿಬೊಡ್ಡೆಯಂತೆ ಒರಟು ಒರಟಾಗಿದ್ದ, ದಾರಿದ್ರ್ಯವೇ ಹೊದ್ದುಕೊಂಡಂತಿದ್ದ, ಸ್ಫುರದ್ರೂಪಿಯಲ್ಲದ, ಬುದ್ಧಿವಂತನಲ್ಲದ, ಕೊಟ್ರನಲ್ಲಿ ಅವಳು ಅದೇನೋ ಕಂಡಳೋ ಗೊತ್ತಿಲ್ಲ; ಈ ಅಪ್ರತಿಮ ಸುಂದರಿ ಅವನಲ್ಲಿ ಅನುರಕ್ತಳಾಗಿದ್ದಳು.
******************
ಮರುದಿನ ಹೊಟೆಲ್ ರೂಂ ಖಾಲಿ ಮಾಡಿದವಳೇ ತನ್ನ ಲಗೇಜ್‌ನೊಂದಿಗೆ ಕೊಟ್ರನ ಗುಡಿಸಲಿಗೆ ಬಂದಳು. ಎಂಥಾ ಶ್ರೀಮಂತಿಕೆಯ ವೈಭೋಗದಲ್ಲಿ ಬೆಳೆದಿದ್ದಳೋ ಇಲ್ಲಿ ಮುರುಕು ಗುಡಿಸಲಿನಲ್ಲಿ ಅವನೊಂದಿಗೆ ಬದುಕತೊಡಗಿದಳು. ಗುಡಿಸಲ ಅಸಂಖ್ಯಾತ ಕಿಂಡಿಗಳಿಂದ ಬರುತ್ತಿದ್ದ ಹುಣ್ಣಿಮೆಯ ಬೆಳಕನ್ನು ನೋಡಿ ನಕ್ಷತ್ರಗಳೇ ಮನೆಯೊಳಗೆ ಬರುತ್ತಿವೆಯೇನೋ ಎಂಬಂತೆ ಸಂಭ್ರಮಿಸುತ್ತಿದ್ದಳು. ಅವಳ ಬೆತ್ತಲೆ ಬೆನ್ನ ಮೇಲೆ ಅವನು ಕೈ ಬೆರಳುಗಳಿಂದ ಚಿತ್ತಾರ ಬಿಡಿಸುತ್ತಿದ್ದರೆ ಅವಳು ಕಿಲಕಿಲನೇ ನಗುತ್ತಿದ್ದಳು. ಅವಳು ಹಾಸಿಗೆಯಾದರೆ ಅವನು ಹೊದಿಕೆಯಾದ. ಅವರಿಬ್ಬರ ಸರಸ ಸಲ್ಲಾಪ ನೋಡಲಾಗದೇ ಚಂದ್ರ ಮೋಡದ ಮರೆಯಲ್ಲಿ ಸರಿದುಬಿಡುತ್ತಿದ್ದ. ನೀರವ ರಾತ್ರಿಯಲ್ಲಿ ಇಬ್ಬರೂ ತುಂಗಭದ್ರೆಯಲ್ಲಿ ಈಜುತ್ತಿದ್ದರು. ಬೆಳದಿಂಗಳ ರಾತ್ರಿಯಲ್ಲಿ ನದಿ ತೀರದುದ್ದಕ್ಕೂ ಹರಡಿದ ಸಕ್ಕರೆಯಂತಹ ಮರಳಿನ ಹಾಸಿಗೆ ಮೇಲೆ ಮಲಗಿ ಪೂರ್ಣಚಂದ್ರನನ್ನು ನೋಡುತ್ತಾ, ನಕ್ಷತ್ರಗಳನ್ನು ಎಣಿಸುತ್ತಾ, ಒಬ್ಬರಲ್ಲೊಬ್ಬರು ಏನನ್ನೋ ಹುಡುಕುತ್ತಾ ಕೆರಳುತ್ತಾ ಅರಳುತ್ತಿದ್ದರು. ಕ್ಯಾಥರೀನ್ ಳ ಸಾನಿಧ್ಯದಲ್ಲಿ ಕೊಟ್ರ ತನ್ನಿಡೀ ಜಡತ್ವವನ್ನು ಕಳೆದುಕೊಂಡಂತವನಾಗಿ ಹೊಸ ಚೈತನ್ಯ ಪಡೆದುಕೊಂಡ.
ಅವರಿಬ್ಬರ ಸಹಜೀವನ ಹಂಪಿಯಂತ ಸಣ್ಣ ಊರಿನ ಜನರ ಕಣ್ಣಲ್ಲಿ ಅಸೂಯೆಯಾಗಿ ಹರಿದಾಡತೊಡಗಿತು. ಕಾಗೆಯ ಜೊತೆಗೆ ಅರಗಿಣಿಯ ಗೆಳೆತನ ಅವರಿಗೆ ಅರಗಿಸಿಕೊಳ್ಳಲಾಗದ ಸಂಗತಿಯಾಯಿತು. ಹಲವು ಪುಂಡುಪೋಕರಿ ಯುವಕರು ಚಿತ್ರವಿಚಿತ್ರ ಹೇರ್‌ಸ್ಟೈಲ್, ಕನ್ನಡಕ, ದಿರಿಸುಗಳಿಂದ ಕ್ಯಾಥರೀನ್ ಳನ್ನು ಆಕರ್ಷಿಸಲು ವ್ಯರ್ಥ ಕಸರತ್ತು ನಡೆಸಿದ್ದರು. ಕೊಟ್ರನಂತವನ ಮೋಹಕ್ಕೆ ಒಳಗಾದವಳು ತಮ್ಮಂತ ಯುವಕರ ಆಕರ್ಷಣೆಗೆ ಒಳಗಾಗದೇ ಇರುತ್ತಾಳಾ? ಎಂಬ ತರ್ಕ ಅವರದು. ಆದರೆ ಕ್ಯಾಥರೀನ್ ಇನ್ನೊಬ್ಬ ಗಂಡಸಿನ ಕಡೆ ತಲೆಯೆತ್ತಿ ನೋಡಲಿಲ್ಲ. ಅವರ ಈ ಸಂಬಂಧ ಹಂಪಿ ಜನರ ಬಾಯಿಗೆ ಆಹಾರವಾಗುವುದನ್ನು ತಪ್ಪಿಸಿಬಿಡಬೇಕೆಂದು ನಿರ್ಧರಿಸಿದ ಕೊಟ್ರ ಒಂದು ಬೆಳಿಗ್ಗೆ ಒಂದಷ್ಟು ಜನರನ್ನು ಒಟ್ಟುಗೂಡಿಸಿ ವಿರೂಪಾಕ್ಷ ದೇವಸ್ಥಾನದ ಎದುರಲ್ಲಿ ಅರಿಶಿಣ ಕೊಂಬೊಂದನ್ನು ಕ್ಯಾಥರೀನ್ ಕೊರಳಿಗೆ ಕಟ್ಟಿದ. ಕ್ಯಾಥರೀನ್ ಕಣ್ಣಲ್ಲಿ ಆನಂದ ಭಾಷ್ಪವಿತ್ತು. ಅವರಿಬ್ಬರ ಪ್ರೇಮಕ್ಕೆ ಹಂಪಿ ವಿರೂಪಾಕ್ಷ ಮುದ್ರೆ ಒತ್ತಿದ್ದ.
*****************
ಕೊಟ್ರ ತನ್ನ ಅಂಗಿ ಜೇಬಿನಿಂದ ಹೊಗೆಸೊಪ್ಪಿನ ಪುಡಿಯನ್ನು ತೆಗೆದು ಅಂಗೈಯಲ್ಲಿ ಸುರುವಿಕೊಂಡು ಹದವಾಗಿ ತಿಕ್ಕಿದ. ಇನ್ನೊಂದು ಅಗಲವಾದ ಹೊಗೆಸೊಪ್ಪಿನ ಎಲೆಯನ್ನು ವೃತ್ತಾಕಾರವಾಗಿ ಹರಿದು ಅದರ ನಡುವೆ ತಿಕ್ಕಿಕೊಂಡ ಹೊಗೆಸೊಪ್ಪಿನ ಪುಡಿ ಸುರುವಿಕೊಂಡು ಸುರುಳಿಯಾಗಿ ಸುತ್ತಿ ಬಾಯ್ಗಿಟ್ಟುಕೊಂಡು ಕಡ್ಡಿ ಗೀರಿ ಅತ್ಯುತ್ಸಾಹದಿಂದ ಪುಸುಸುಸು ಹೊಗೆ ಬಿಡುತ್ತಾ ಕ್ಯಾಥರೀನ್ ಕಡೆ ಕುಡಿನೋಟ ಬೀರಿದ. "ಖೋಥ್ರಾ... ಯೂ ಆರ್ ಎ ಹ್ಯೂಮನ್ ಟ್ರೈನ್" ಛೇಡಿಸಿದಳು ಕ್ಯಾಥರೀನ್. ಅವಳ ಹತ್ತಿರವಿದ್ದ ದುಬಾರಿ ಹವಾನಾ ಸಿಗಾರ್ ಸೇದಿ ನೋಡಿದ್ದರೂ ಅವನು ಅದನ್ನು ಇಷ್ಟಪಟ್ಟಿರಲಿಲ್ಲ. ಬದಲಿಗೆ ಅವಳಿಗೇ ಹೊಗೆಹೊಪ್ಪಿನ ರುಚಿ ಹಚ್ಚಿಸಿದ್ದ. "ಕೊಟ್ರ" ಎಂಬುದು ಕ್ಯಾಥರೀನ್ ಳ ಉಚ್ಛಾರದಲ್ಲಿ "ಖೋಥ್ರಾ" ಆಗಿತ್ತು. ಅದನ್ನು ತಿದ್ದಲು ಕೊಟ್ರ ಬಹುವಾಗಿ ಪ್ರಯತ್ನಿಸಿದರೂ ಸಫಲನಾಗದಿದ್ದಾಗ "ನಿನಗೋಸ್ಕರ ನನ್ನ ಹೆಸರನ್ನೇ "ಖೋಥ್ರಾ" ಎಂದು ಬದಲಾಯಿಸಿಕೊಳ್ಳುತ್ತೇನೆ ಬಿಡು ಎಂದು ನಗೆಯಾಡಿದ್ದ". ಕೆಲವು ಕನ್ನಡ ಪದಗಳನ್ನು ಕಲಿತು ಅವುಗಳ ತೊದಲು ಉಚ್ಛಾರದೊಂದಿಗೆ ಇಂಗ್ಲಿಷ್ ಪದಗಳನ್ನು ಸೇರಿಸಿ ಮಾತಾಡುವ ಕ್ಯಾಥರೀನ್ ಳ ಭಾಷೆಗೆ "ಇಂಗ್ಲಿಷ್ಗನ್ನಡ" ಎಂದು ರೇಗಿಸುತ್ತಿದ್ದ.
ಕೆಲವೇ ದಿನಗಳಲ್ಲಿ ಕ್ಯಾಥರೀನ್ ಹತ್ತಿರವಿದ್ದ ಹಣವೆಲ್ಲಾ ಮುಗಿದುಹೋಯ್ತು. ಕೊಟ್ರನ ಪುಡಿಗಾಸು ಸಂಪಾದನೆಯಲ್ಲಿಯೇ ಸಂತಸದಿಂದ ಬದುಕುವುದನ್ನು ರೂಢಿಸಿಕೊಂಡಳು. ಎಷ್ಟೋ ರಾತ್ರಿ ತುಂಗಭದ್ರೆಯ ನೀರು ಕುಡಿದು ಮಲಗಿದ್ದುಂಟು. ಆಗೆಲ್ಲಾ ಕ್ಯಾಥರೀನ್ ಬೇಸರಿಸಿಕೊಳ್ಳುತ್ತಿರಲಿಲ್ಲ. ಸ್ವತಃ ಕೊಟ್ರನೇ ಬೆರಗಾಗುವಷ್ಟು ಬದಲಾದಳು. ಬೀದಿಬದಿಯ ನಲ್ಲಿಯಲ್ಲಿ ಎಲ್ಲಾ ಹೆಂಗಸರೊಂದಿಗೆ ತಾನು ಕೊಡ ಇಟ್ಟು ನೀರಿಗೆ ನಿಲ್ಲುತ್ತಿದ್ದಳು. ನೀರಿಗಾಗಿ ಜಗಳ ತೆಗೆಯುತ್ತಿದ್ದಳು. ಅರೆಬರೆ ಕನ್ನಡಕ್ಕೆ ಇಂಗ್ಲಿಷ್ ಬೆರೆಸಿ ಅವರೊಂದಿಗೆ ವಾದಿಸುತ್ತಿದ್ದಳು. ಗುಡಿಸಲಿನ ನೆಲಕ್ಕೆ ಸಗಣಿ ಸಾರಿಸುವುದು, ಬಟ್ಟೆ ಒಗೆಯುವುದು, ಕಟ್ಟಿಗೆ ಪುಳ್ಳೆಗಳನ್ನು ಆಯ್ದುಕೊಂಡು ಬಂದು ಮೂರು ಕಲ್ಲು ಹೂಡಿ ಮಾಡಲಾಗಿದ್ದ ಒಲೆಯಲ್ಲಿ ಹೊಗೆ ಊದುತ್ತಾ ಅಡುಗೆ ಮಾಡುವುದು ಅವಳ ಅಕ್ಕರೆಯ ಕೆಲಸವಾಯ್ತು. ಅಪ್ಪಟ ಗ್ರಾಮೀಣ ಭಾರತದ ಹೆಣ್ಣಾಗಿ ಪರಿವರ್ತನೆಯಾದಳು. ಕೊಟ್ರನ ಸಾಂಗತ್ಯದಲ್ಲಿ ಏಳು ವರ್ಷಗಳೆಂಬುದು ಏಳು ನಿಮಿಷಗಳಂತೆ ಉರುಳಿಹೋಗಿದ್ದವು.
ಕ್ಯಾಥರೀನ್ ಸ್ವೀಡನ್ ವಿಶ್ವವಿದ್ಯಾಲಯದಿಂದ ತೆಕ್ಕೆ ತುಂಬಾ ಮಾರ್ಕ್ಸ್ ಪಡೆದು ರಾಂಕ್‌ನೊಂದಿಗೆ ಆರ್ಕಿಟೆಕ್ಚರ್ ನಲ್ಲಿ ಪದವಿ ಪಡೆದಿದ್ದಳು. ಆದರೆ ಅವಳ ವೈಯಕ್ತಿಕ ಬದುಕು ಸಂತಸದ್ದಾಗಿರಲಿಲ್ಲ. ತಂದೆತಾಯಿಯರ ಡಿವೋರ್ಸ್‌ನಲ್ಲಿ ಅವಳ ಬಾಲ್ಯ ಶುರುವಾಗಿತ್ತು. ತಾಯಿಯೊಂದಿಗೆ ಬೆಳೆದಳಾದರೂ ಅವಳೊಂದಿಗೆ ಭಾವನಾತ್ಮಕ ಸಂಬಂಧ ಬೆಳಯಲಿಲ್ಲ. ಪದವಿ ಮುಗಿಸಿದ ಕೂಡಲೇ ಕಂಪೆನಿಯೊಂದರಲ್ಲಿ ಆರ್ಕಿಟೆಕ್ಚರ್ ಕೆಲಸ ಹುಡುಕಿಕೊಂಡು ಬಂತು. ಮೂರ್ನಾಲ್ಕು ವರ್ಷ ದುಡಿದು ಕೈತುಂಬಾ ಸಂಪಾದಿಸಿದಾಗ ಜಗತ್ತು ಸುತ್ತಬೇಕೆಂಬ ಆಸೆ ಶುರುವಾಯಿತು. ತನ್ನ ಸುತ್ತಲಿನ ಬಂಧನಗಳನ್ನು ಕಿತ್ತೆಸೆದು ನೌಕರಿಗೆ ಗುಡ್‌ಬೈ ಹೇಳಿ ಹೊರಟಾಗ ಕಣ್ಣ ತುಂಬಾ ಕನಸುಗಳಿದ್ದವು. ಆ ಕನಸುಗಳಿಗೆ ರೆಕ್ಕೆ ಮೂಡುತ್ತಿದ್ದವು. ಉಗಾಂಡ ಸೋಮಾಲಿಯಾದ ಕಡು ಬಡತನವನ್ನೂ, ಇಂಗ್ಲೆಂಡ್ ಫ್ರಾನ್ಸ್ ನ ಕಡು ಶ್ರೀಮಂತಿಕೆಯನ್ನು ನೋಡುತ್ತಾ ಬದುಕಿನ ವಾಸ್ತವತೆಗೆ ತನ್ನನ್ನು ತಾನು ತೆರೆದುಕೊಳ್ಳುತ್ತಾ ಭಾರತಕ್ಕೆ ಬಂದಿದ್ದಳು. ಇಲ್ಲಿಯ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಒಂಟಿಯಾಗಿ ಸುತ್ತುವಾಗ ಜಂಟಿಯಾದವನೇ ಜರ್ಮನಿಯ ಡೇವಿಡ್. ಅವಳದೇ ವಯಸ್ಸು. ಇಬ್ಬರ ಆಸಕ್ತಿ ಅಭಿರುಚಿಗಳು ಒಂದೇ ಆಗಿದ್ದರಿಂದ ಜೊತೆಯಾಗಿ ಪಯಣ ಕೈಗೊಂಡಿದ್ದರು. ಈಗ ಬದುಕಿನ ಪಯಣಕ್ಕೆ ಕೊಟ್ರ ಜೊತೆಯಾಗಿದ್ದ.
*****************
ವಿರುಪಾಪುರ ಗಡ್ಡಿಯ ತೋಟವೊಂದರ ಮೂಲೆಯಲ್ಲಿ ಈಚಲುಮರದ ಹೆಂಡವನ್ನು ತಯಾರಿಸುವ ಬಸ್ಯಾ ಸಂಜೆ ಕೆಲವು ನಿತ್ಯದ ಗಿರಾಕಿಗಳಿಗಷ್ಟೇ ಮಾರುತ್ತಾನೆ. ಅವನಿಂದ ಹೆಂಡ ತಂದ ಕೊಟ್ರ ಗುಡಿಸಲಿಗೆ ಬಂದಾಗ ಕ್ಯಾಥರೀನ್ ಒಂದಿಷ್ಟು ಮೀನುಗಳನ್ನು ಹದವಾಗಿ ಹುರಿದಿದ್ದಳು. ನದಿ ತೀರದಲ್ಲಿ ಇಬ್ಬರೂ ಕುಳಿತುಕೊಂಡು ಕುಡಿಯುತ್ತಾ, ಮೀನನ್ನು ನೆಂಚಿಕೊಳ್ಳುತ್ತಾ ಏಳು ವರ್ಷಗಳ ತಮ್ಮ ಬದುಕಿನ ಹಾದಿಯನ್ನು ಮೆಲುಕು ಹಾಕಿದರು. ಆಗಸದಲ್ಲಿ ಪೂರ್ಣಚಂದ್ರ ಕಂಗೊಳಿಸುತ್ತಿದ್ದ. ತಂಗಾಳಿ ಅಲೆಅಲೆಯಾಗಿ ಬೀಸುತ್ತಿತ್ತು. ಲಹರಿಗೊಳಗಾದವಳಂತೆ ಕ್ಯಾಥರೀನ್ ಎದ್ದು ಮರಳಿನ ಮೇಲೆ ನೃತ್ಯ ಮಾಡಲಾರಂಭಿಸಿದಳು. ಅವಳ ಒನಪು ವೈಯಾರಗಳ ಕದಲಿಕೆಗೆ, ಅವಳ ನೃತ್ಯದ ಚೆಲುವಿಗೆ ಮನಸೋತ ಕೊಟ್ರ ಚಪ್ಪಾಳೆ ತಟ್ಟುತ್ತಾ ಅವಳನ್ನು ಹುರಿದುಂಬಿಸಿದ. ಕೊಟ್ರ ಕ್ಯಾಥರೀನ್‌ಳ ಪ್ರೇಮ ಏಳು ವರ್ಷಗಳ ನಂತರ ಈಗ ಅವಳ ಒಡಲಲ್ಲಿ ಹೂವಾಗಿ ಅರಳತೊಡಗಿತು. ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಕನಸುಗಳ ಸಾಮ್ರಾಜ್ಯದಲ್ಲಿ ವಿಹರಿಸಿದರು. ಕೊಟ್ರನಂತೂ ಒಂದು ನಿಮಿಷ ಕೂಡಾ ಅವಳನ್ನು ಬಿಟ್ಟು ಕದಲುತ್ತಿರಲಿಲ್ಲ. ಆದರೆ ಕೆಲವು ದಿನಗಳಲ್ಲೇ ಒಡಲ ಹೂ ಬಾಡಿಹೋಯ್ತು. ನೋವು ಖಿನ್ನತೆಯಲ್ಲಿ ಕ್ಯಾಥರೀನ್ ಮಂಕಾದಳು. ದಿನಗಟ್ಟಲೇ ತುಂಗಭದ್ರೆಯನ್ನು ದಿಟ್ಟಿಸುತ್ತಾ ಮೌನವಾಗಿ ಕೂತುಬಿಡುತ್ತಿದ್ದಳು. ಕೊಟ್ರ ಅವಳನ್ನು ಮಗುವಿನಂತೆ ಆರೈಕೆ ಮಾಡಿದ. ಅವನಿಗೆ ಅವಳು, ಅವಳಿಗೆ ಅವನು ಮಗುವಾದರು.
ಇದ್ದಕ್ಕಿದ್ದಂತೆ ಹಂಪಿಯ ಚಿತ್ರಣ ಬದಲಾಗತೊಡಗಿತು. ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಹಂಪಿಯ ಬೀದಿಗಳು ನಿರ್ಜನವಾಗತೊಡಗಿದವು. ಕೊರೋನಾ ಎಂಬ ವೈರಸ್ ರೋಗವೊಂದು ಇಡೀ ಜಗತ್ತನ್ನೇ ಆಕ್ರಮಿಸಿ ಹೆಣಗಳನ್ನು ಉರುಳಿಸುತ್ತಿದೆಯೆಂದು ಜನ ಮಾತಾಡಿಕೊಳ್ಳಲಾರಂಭಿಸಿದರು. ಆ ರೋಗ ಈಗ ಭಾರತಕ್ಕೂ ಕಾಲಿಟ್ಟು ಕರ್ನಾಟಕದ ಮೂಲೆಮೂಲೆಗೂ ವ್ಯಾಪಿಸುತ್ತಿದೆಯಾದ್ದರಿಂದ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡು ಪ್ರವಾಸಿಗರ ಮೇಲೆ ನಿರ್ಬಂಧ ಹೇರಿದೆ ಎಂಬ ಸುದ್ದಿ ಹರಿದಾಡತೊಡಗಿತು. ಪ್ರವಾಸಿಗರನ್ನೇ ನಂಬಿಕೊಂಡಿದ್ದ ಕೊಟ್ರನ ವೃತ್ತಿ ಬದುಕು ಹಳಿ ತಪ್ಪತೊಡಗಿತು. ದೇಶಕ್ಕೆ ದೇಶವೇ ದಿಗ್ಭಂದನಕ್ಕೊಳಗಾದಾಗ ಹಂಪಿ ಅದರಿಂದ ಹೊರತಾಗಲಿಲ್ಲ. ಹಂಪಿಯ ನಿರ್ಜನ ಬೀದಿಗಳಲ್ಲಿ ಪೋಲಿಸ್ ವಾಹನಗಳು ಸಂಚರಿಸತೊಡಗಿದವು. ಅನಾವಶ್ಯಕ ತಿರುಗಾಡುವವರಿಗೆ ಪೋಲಿಸರು ಲಾಠಿ ಬೀಸತೊಡಗಿದರು. ಒಂದು ಅಸಹನೀಯ ವಾತಾವರಣ ನಿರ್ಮಾಣವಾಯಿತು. ಕೊಟ್ರ ಇಡೀ ದಿನ ತುಂಗಭದ್ರೆಯ ಒಡಲಲ್ಲಿ ಗಾಳ ಇಳಿಬಿಟ್ಟು ಮೀನು ಹಿಡಿದು ಗುಟ್ಟಾಗಿ ಕೆಲವು ಮನೆಗಳಿಗೆ ಮಾರತೊಡಗಿದ. ಅದರಿಂದ ಸಿಗುವ ಪುಡಿಗಾಸಿನಲ್ಲೇ ಬದುಕು ಸಾಗಿಸುವ ಪ್ರಯತ್ನ ಮಾಡಿದ. ಕೆಲವು ದಿನಗಳಲ್ಲಿ ಕೊಟ್ರನಿಗೆ ಸಣ್ಣಗೆ ಜ್ವರ ಕಾಣಿಸಿಕೊಂಡಿತು. ಜೊತೆಯಲ್ಲಿ ಸುಸ್ತು, ಕೆಮ್ಮು, ನೆಗಡಿ, ಉಸಿರಾಟದ ಸಮಸ್ಯೆ ಶುರುವಾಯಿತು. ಬದುಕಿನಲ್ಲೆಂದೂ ಆಸ್ಪತ್ರೆಯ ಮುಖ ನೋಡದ ಅವನು ಅದನ್ನೆಲ್ಲಾ ನಿರ್ಲಕ್ಷಿಸಿದ. ಆದರೆ ಕ್ಯಾಥರೀನ್ ಗೂ ಅದೇ ಲಕ್ಷಣಗಳು ಕಾಣಿಸಿಕೊಂಡು ಒಂದೆರಡು ದಿನಗಳಲ್ಲಿ ಅದು ಉಲ್ಬಣಿಸಿತು. ಕೊಟ್ರನ ಮನಸ್ಸಿನಲ್ಲಿ ಕೊರೋನಾ ಸುಳಿದು ಹೋದಂತಾಯ್ತು. ಹೊಸಪೇಟೆ, ಕಮಲಾಪುರದಲ್ಲಿ ಕೊರೋನಾದಿಂದ ಸಾಯುವವರ ಸಂಖ್ಯೆ ಹೆಚ್ಚಾಗಿತ್ತು. ಹಂಪಿಯಲ್ಲಿ ಕೂಡಾ ಕೊರೋನಾ ರೋಗಿಗಳ ಸಂಖ್ಯೆ ಹೆಚ್ಚಾಗಿ ಒಂದೆರಡು ಸಾವುಗಳಾಗಿದ್ದವು. ಕೊಟ್ರ ತಡ ಮಾಡಲಿಲ್ಲ. ಹಂಪಿಗೆ ಬಂದಿದ್ದ ಅಂಬುಲೆನ್ಸ್‌ನಲ್ಲಿ ಕ್ಯಾಥರೀನ್ ಳೊಂದಿಗೆ ಕಮಲಾಪುರ ಸರ್ಕಾರಿ ಆಸ್ಪತ್ರೆಗೆ ಹೊರಟ. ಇಬ್ಬರನ್ನೂ ಪರೀಕ್ಷಿಸಿದ ವೈದ್ಯರು ಘೋಷಿಸಿದ್ದರು "ನಿಮ್ಮಿಬ್ಬರಿಗೂ ಕೊರೋನಾ ಪಾಸಿಟಿವ್..!"
ಆಸ್ಪತ್ರೆಗೆ ದಾಖಲಾದ ಕೆಲವೇ ದಿನಗಳಲ್ಲಿ ಕೊಟ್ರ ಗುಣಮುಖನಾದ. ಆದರೆ ಕ್ಯಾಥರೀನ್ ಳ ಸ್ಥಿತಿ ಗಂಭೀರವಾಗಿತ್ತು. ಕೊರೋನಾ ಅವಳನ್ನು ಹಿಂಡಿ ಹಿಪ್ಪೆ ಮಾಡಿ ಹಾಕಿತ್ತು. ಚಿಕಿತ್ಸೆಗೆ ಅವಳ ದೇಹ ಸ್ಪಂದಿಸುತ್ತಿಲ್ಲವೆಂದೂ ಜೊತೆಗೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಖಾಲಿಯಾಗುತ್ತಿವೆ ಎಂದು ಡಾಕ್ಟರ್ ಹೇಳಿದಾಗ ಕೊಟ್ರನ ಎದೆ ಬಡಿತ ನಿಂತಂತಾಯ್ತು. ಮರುದಿನ ಆಕ್ಸಿಜನ್ ಕೊರೆತೆಯಿಂದ ನಾಲ್ಕೈದು ರೋಗಿಗಳು ಸಾಯುತ್ತಿರುವುದನ್ನು ಕಣ್ಣಾರೆ ನೋಡಿದ. ಹಂಪಿ ವಿರೂಪಾಕ್ಷನಲ್ಲಿ ಹರಕೆ ಹೊತ್ತ. ಅವನ ಹರಕೆ ಫಲಿಸಲಿಲ್ಲ. ಇಳಿಸಂಜೆಯ ವೇಳೆಗೆ ಅವನಿಗೊಂದು ಮಾತೂ ಹೇಳದೇ ಕ್ಯಾಥರೀನ್ ನಿರ್ಗಮಿಸಿದಳು. "ಯಾರ್ರಿ ಕ್ಯಾಥರೀನ್ ಕಡೆಯವರು? ಬಾಡಿ ತಗೊಂಡೋಗಬೋದು" ವಾರ್ಡ್‌ಬಾಯ್ ಹೊರಗೆ ಬಂದು ಸಹಜವೆಂಬಂತೆ ಕೂಗಿದ. ಅವನ ಬದುಕಿನಲ್ಲಿ ಇಂತಹ ಕೇಸ್‌ಗಳೆಷ್ಟೋ? ಹೊರಗೆ ಕಲ್ಲುಬೆಂಚಿನ ಮೇಲೆ ಕೂತಿದ್ದ ಕೊಟ್ರನ ಎದೆ ಝಲ್ ಎಂದಿತು. ಒಂದು ನಿಮಿಷದ ಹಿಂದೆ ಬದುಕಿದ್ದ ಕ್ಯಾಥರೀನ್ ಈಗ ಕೇವಲ "ಬಾಡಿ" ಅಷ್ಟೇ. ಅರಗಿಸಿಕೊಳ್ಳಲಾಗಲಿಲ್ಲ. ಅಳು ಉಮ್ಮಳಿಸಿ ಬರುತ್ತಿದ್ದರೂ ಅಳುವುದನ್ನೇ ಮರೆತವನಂತೆ ಕಲ್ಲಾಗಿ ಹೋದ.
ಅಂಬುಲೆನ್ಸ್‌ನಲ್ಲಿ ಹಂಪಿಗೆ ಹೊರಟಿದ್ದ ಶವಗಳ ಮಧ್ಯೆ ಕ್ಯಾಥರೀನ್‌ಳನ್ನು ಮಲಗಿಸಲಾಯ್ತು. ಪಿಪಿಇ ಕಿಟ್ ತೊಟ್ಟ ಕೊಟ್ರ ಜೊತೆಯಲ್ಲಿಯೇ ಹೊರಟ. ಹಂಪಿ ತಲುಪಿದಾಗ ಸಂಜೆ ಮುಗಿದು ರಾತ್ರಿ ಬಿಚ್ಚಿಕೊಳ್ಳುವ ಹೊತ್ತು. ಇಡೀ ಊರು ಸ್ಮಶಾನ ಮೌನವನ್ನು ಹೊದ್ದುಕೊಂಡಿತ್ತು. ಕ್ಯಾಥರೀನ್ ಳನ್ನು ಗುಡಿಸಲಿನ ಮುಂದೆ ಮಲಗಿಸಿದಾಗ ಅವಳನ್ನು ನೋಡುತ್ತಾ ನೋಡುತ್ತಾ ಕೊಟ್ರ ಅದುವರೆಗೆ ತಡೆದಿಟ್ಟ ದುಃಖದ ಕಟ್ಟೆ ಒಡೆದಂತಾಗಿ ಆಕ್ರಂದಿಸಿ ಅಳತೊಡಗಿದ. ಅವನ ಬದುಕಿನ ಒಂದು ಭಾಗವಾಗಿದ್ದ ಕ್ಯಾಥರೀನ್ ಈಗ ಬರೀ ನೆನಪಾಗಿ ಉಳಿದಿದ್ದಳು. ಗುಡಿಸಲ ಮೂಲೆಯಲ್ಲಿದ್ದ ಸಲಿಕೆ ಹಾರೆಗಳನ್ನು ತೆಗೆದುಕೊಂಡವನೇ ನದಿತೀರದಲ್ಲೊಂದು ಸಮತಟ್ಟಾದ ಜಾಗ ಗುರುತಿಸಿ ಅಗೆಯತೊಡಗಿದ. ತೀರಾ ಬಿಗಿಯಲ್ಲದ ಸಡಿಲ ಮಣ್ಣು. ಮೂರನೇ ಜಾವದ ಹೊತ್ತಿಗೆ ಗುಂಡಿ ತಯಾರಾಗಿತ್ತು. ಕೊನೆಯ ಬಾರಿಗೆ ಕ್ಯಾಥರೀನ್ ಳನ್ನು ಅಪ್ಪಿಕೊಂಡು ಮುತ್ತಿಕ್ಕಿದ. ಭಾರವಾದ ಹೃದಯದಿಂದ ಅವಳನ್ನು ಗುಂಡಿಗೆ ಇಳಿಸಿ ಮಣ್ಣೆಳೆದು ಮುಚ್ಚಿ ಹಾಕಿದ. ಕ್ಯಾಥರೀನ್ ಶಾಶ್ವತವಾಗಿ ಈ ಜಗತ್ತಿಂದ ನಿರ್ಗಮಿಸಿದಳು. ಅವಳ ಮೇಲಿದ್ದ ಮಣ್ಣಿನ ರಾಶಿಯನ್ನು ತಬ್ಬಿ ಹಾಗೆ ಕಣ್ಮುಚ್ಚಿ ಮಲಗಿದ. ಕ್ಯಾಥರೀನ್ ಳ ತಬ್ಬುಗೆಯಲ್ಲಿ ಮಲಗಿದಂತಾಯ್ತು.
************
ಬೆಳಕು ಹರಿದು ಎಷ್ಟೊತ್ತಾಯಿತೋ ಸೂರ್ಯ ನೆತ್ತಿಯ ಮೇಲೆ ಬಂದಿದ್ದ. ಕೊಟ್ರ ಅದರ ಪರಿವಿಲ್ಲದವನಂತೆ ಕ್ಯಾಥರೀನ್ ಳ ಸಮಾಧಿ ತಬ್ಬಿಕೊಂಡು ಮಲಗಿದ್ದ. ಅಲ್ಲಿ ಹೋಗುತ್ತಿದ್ದ ಅವನ ಪರಿಚಿತನೊಬ್ಬ ಎಷ್ಟೇ ಕೂಗಿದರೂ ಕೊಟ್ರ ಏಳದಿದ್ದಾಗ ಹತ್ತಿರ ಬಂದು ಅವನ ಭುಜ ತಟ್ಟಿದಾಗಲೇ ಗೊತ್ತಾಗಿದ್ದು.... ಕೊಟ್ರ ಕ್ಯಾಥರೀನ್‌ಳನ್ನು ಹಿಂಬಾಲಿಸಿದ್ದ..!
- ರಾಜ್