ಶುಕ್ರವಾರ, ಏಪ್ರಿಲ್ 10, 2020

ನೆನಪಿನ ಗಣಿಯಲ್ಲೊಂದು ನನಸಾಗದೇ ಉಳಿದ ಕನಸು..!


ನಾನು ಪಿ.ಯು. ಮುಗಿಸುವ ವೇಳೆಗೆ ರವಿ ಬೆಳಗೆರೆ ಅವರ ಬರಹ ನನ್ನನ್ನು ತುಂಬಾ ಆವರಿಸಿತ್ತು. ಆ ವೇಳೆಗೆ ಅವರ ಬಹುತೇಕ ಕೃತಿಗಳನ್ನು ಓದಿದ್ದೆ. ಆಗಲೇ ಅವರ ಒಟ್ಟು ಸಾಹಿತ್ಯವನ್ನು ಕುರಿತು ಪಿಎಚ್.ಡಿ ಮಾಡಬೇಕೆಂಬ ಕನಸು ಬಲವಾಗಿ ಮನದಲ್ಲಿ ಬೇರೂರಿತ್ತು. ಅದು ಎಷ್ಟರಮಟ್ಟಿಗೆ ಅಂದರೆ… ಫಸ್ಟ್ ಇಯರ್ ಬಿ.ಎ ಓದುವಾಗಲೇ ಪಿಎಚ್.ಡಿ ಗೆ ರವಿ ಬೆಳಗೆರೆಯವರ ಸಾಹಿತ್ಯ ಕುರಿತು ಏನನ್ನೆಲ್ಲಾ ಮಾಡಬಹುದೆಂದು ನನ್ನದೇ ಆದ ಶೈಲಿಯಲ್ಲಿ ಕೆಲವು ಟಿಪ್ಪಣಿಗಳನ್ನು, ಅಧ್ಯಾಯಗಳ ವಿಭಾಗೀಕರಣ ಮಾಡಿಕೊಂಡು, ಸಾರಲೇಖವನ್ನು ಬರೆದಿಟ್ಟುಕೊಂಡಿದ್ದೆ. ಎಂ.ಎ ಓದುವಾಗ ಆ ಕನಸು ಹೆಮ್ಮರವಾಗಿತ್ತು. ಪಿಎಚ್.ಡಿ ಯ ರೂಪುರೇಷೆಗಳು ಸ್ಪಷ್ಟವಾಗತೊಡಗಿದ್ದವು. ಪಿಎಚ್.ಡಿ ಗೂ ಮುನ್ನ ಒಂದು ಎಂ.ಫಿಲ್ ಮುಗಿಸಿಬಿಟ್ಟರೆ ಪಿಎಚ್.ಡಿ ಗೆ ಅನುಕೂಲವಾಗುತ್ತದೆ, ಅದು ನನ್ನ ಬರವಣಿಗೆಯನ್ನು ಇನ್ನಷ್ಟು ಮಾಗಿಸುತ್ತದೆ ಎಂಬ ಕಾರಣಕ್ಕೆ ಎಂ.ಫಿಲ್ ಗೆ ಸೇರಿದೆ. 
ಪರಮ ಗುರುವಿನ ತೋಳ್ತೆಕ್ಕೆಯಲ್ಲಿ ನಾನೆಂಬ ನಾನು..!

ನನ್ನ ಪ್ರೀತಿಯ ಬರಹಗಾರರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಕೂಡಾ ಒಬ್ಬರು. ಅವರ ಕಥಾ ಸಂಕಲನಗಳನ್ನೆಲ್ಲಾ ಓದಿದ್ದೆ. ಅವರ ಕಥೆಗಳನ್ನು ಕುರಿತು (ರವಿ ಬೆಳಗೆರೆ ಅವರ ಸಾಹಿತ್ಯವನ್ನು ಕೇವಲ ಪಿಎಚ್.ಡಿ ಗೆ ಮಾತ್ರ ಮೀಸಲಾಗಿರಿಸಿದ್ದೆ.) ಅಧ್ಯಯನ ಮಾಡಲು ನಿರ್ಧರಿಸಿ ಅದರ ಸಾರಲೇಖ ಕೂಡಾ ಬರೆದೆ. ಆದರೆ ಎಂ.ಫಿಲ್ ವಿಷಯ ನೋಂದಣಿಯಾಗುವ ವೇಳೆಗೆ ನನಗೆ ಗೊತ್ತಾಗಿದ್ದೇನೆಂದರೆ, ಈಗಾಗಲೇ ನಾಗತಿಹಳ್ಳಿಯವರ ಕಥೆಗಳನ್ನು ಕುರಿತು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಎಂ.ಫಿಲ್ ಮಾಡಲಾಗಿದೆ ಎಂಬುದು. ಹೀಗಾಗಿ ಆ ವಿಷಯ ಅಲ್ಲಿಗೆ ಕೈಬಿಟ್ಟೆ. ಬೇರೆ ವಿಷಯದ ಆಯ್ಕೆಗೆ ಸಮಯವಿರಲಿಲ್ಲ. ಅನಿವಾರ್ಯವಾಗಿ ರವಿ ಬೆಳಗೆರೆಯವರ ಕಥೆಗಳನ್ನು ಆಯ್ಕೆಮಾಡಿಕೊಂಡೆ. (ಮುಂದೆ ರವಿ ಬೆಳಗೆರೆಯವರ ಸೃಜನಶೀಲ ಸಾಹಿತ್ಯವನ್ನು ಕುರಿತು ಪಿಎಚ್.ಡಿ ಮಾಡುವಾಗ ಕಥೆಗಳ ಬಗ್ಗೆ ಹೆಚ್ಚು ಚರ್ಚಿಸದೇ ಸಂಕ್ಷಿಪ್ತವಾಗಿ ಬರೆದರಾಯ್ತು ಎಂದುಕೊಂಡೆ.) ಕೆಲವೊಮ್ಮೆ ಕನಸುಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ತಪ್ಪಾಗುತ್ತದೆ ಎಂಬುದು ಎಂ.ಫಿಲ್ ಮುಗಿಸಿದಾಗ ಅರಿವಾಯ್ತು. ಆಮೇಲೆ ಬಿಡಿ, ಪಿಎಚ್.ಡಿ ಗೆ ಕೆಲವು ಯುನಿವರ್ಸಿಟಿಗಳಿಗೆ ಅಪ್ಲೆ ಮಾಡಿದೆ. ವೈವಾಕ್ಕೆ ಹೋದಾಗಲೆಲ್ಲಾ ನನ್ನ ವಿಷಯ ಕೇಳಿಯೇ ಅಲ್ಲಿಯ ಮೇಷ್ಟ್ರುಗಳು ತಕರಾರು ತೆಗೆದರು. ನಾನೂ ವಾದಕ್ಕೆ ಬಿದ್ದೆ. ಪರಿಣಾಮ, ಸೀಟು ಸಿಗಲಿಲ್ಲ. (ಕೆಲವು ತಿಂಗಳುಗಳ ಹಿಂದೆ ರವಿ ಬೆಳಗೆರೆಯವರನ್ನು ಭೇಟಿಯಾದಾಗ ನನ್ನ ಈ ಪಿಎಚ್.ಡಿ ಫಜೀತಿ ಬಗ್ಗೆ ಹೇಳಿಕೊಂಡೆ, ಅವರು ನಕ್ಕುಬಿಟ್ಟರು! )

ಮೊದಲು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಭಾಷಾ ಅಧ್ಯಯನ ವಿಭಾಗಕ್ಕೆ ಪಿಎಚ್.ಡಿ ಅಪ್ಲೆ ಮಾಡಿದೆ. ನನ್ನೊಂದಿಗೆ ಮಿತ್ರ ಬ್ಯಾಲಾಳ್ ನಾಗು ಇದ್ದ. ಅವನೂ ಪಿಎಚ್.ಡಿ ಗೆ ಅಪ್ಲೆ ಮಾಡಿದ್ದ. ನಾನು ಮತ್ತು ಬ್ಯಾಲಾಳ್ ನಾಗು ಇಬ್ಬರೂ ಬೆಳಿಗ್ಗೆ ಬೇಗ ರೆಡಿಯಾಗಿ ನಮ್ಮೂರಿಂದ ಯುನಿವರ್ಸಿಟಿಗೆ ಬೈಕ್ ನಲ್ಲಿ ಹೊರಟಿದ್ದೆವು. ಬೆಳಗಿನ ವಾತಾವರಣ ಆಹ್ಲಾದಕರವಾಗಿತ್ತು. ಎಳೆಬಿಸಿಲು, ತಣ್ಣನೆಯ ಗಾಳಿ, ಮಾರ್ಗದುದ್ದಕ್ಕೂ ನಗೆ ಚಿಮ್ಮಿಸುವ ಬ್ಯಾಲಾಳ್..! ಗಾಳಿಗೆ ವೇಗ ಕಲಿಸುವವನ ಹಾಗೆ ಉತ್ಸಾಹದಲ್ಲಿ ನಾನು ಬೈಕ್ ಓಡಿಸುತ್ತಿದ್ದೆ. ಹೊಸಪೇಟೆಗೆ ಎಂಟ್ರಿಯಾದೆವು. ಬೆಳಗಿನ ಎಂಟೂವರೆಯ ಸಮಯವಿರಬಹುದು. ರಸ್ತೆಯಲ್ಲಿ ವಾಹನಗಳು ವಿರಳವಾಗಿ ಓಡಾಡುತ್ತಿದ್ದವು. “ಸಿಟಿ ಎಂಟ್ರಿಯಾದ್ವಿ, ಸ್ವಲ್ಪ ನಿಧಾನವಾಗಿ ಗಾಡಿ ಓಡಿಸು” ಬ್ಯಾಲಾಳ್ ಉಸುರಿದ. “ಇಲ್ಲಿ ರಸ್ತೆ ಫ್ರೀ ಇದೆ ಬಿಡು, ರಶ್ ಏನಿಲ್ಲಾ…” ಎನ್ನುತ್ತಾ  ಬೈಕ್ ನ ಆ್ಯಕ್ಸಿಲೇಟರ್ ಹಿಂಡಿದೆ. ರೊಂಯ್… ಎಂದು ಗುರುಗುಟ್ಟಿತು ಬೈಕ್. ದೂರದಲ್ಲಿ ಬಲಿಷ್ಟ ಹಂದಿಯೊಂದು ತನ್ನ ಬೃಹತ್ ಸಂತಾನ ಸಮೂಹದೊಂದಿಗೆ ರಸ್ತೆಯ ಎಡಭಾಗದಿಂದ ಬಲಕ್ಕೆ ದಾಟುತಿತ್ತು. ನಾನು ಹತ್ತಿರ ಬರುವ ವೇಳೆಗೆ ಅದು ರಸ್ತೆಯ ಬಲಭಾಗದ ಅಂಚಿನಲ್ಲಿತ್ತು. ಇನ್ನೇನು ಹಂದಿ ರಸ್ತೆ ದಾಟಿದೆಯಲ್ಲ ಬಿಡು ಎಂಬ ಸಣ್ಣ ಉಡಾಫೆಯೊಂದಿಗೆ ಬೈಕ್ ಆ್ಯಕ್ಸಿಲೇಟರ್ ಹಿಂಡಿದ್ದೆ. ಮತ್ತು ಅದೇ ನಾನು ಮಾಡಿದ ಘೋರ ತಪ್ಪಾಗಿತ್ತು. ರಸ್ತೆ ದಾಟಿದ ಹಂದಿಗೆ ಅದೇನನ್ನಿಸಿತೋ ಏನೋ… ಸಡನ್ನಾಗಿ ಮತ್ತೇ ವಾಪಾಸ್ಸು ತಿರುಗಿ ಓಡುತ್ತಾ ರಸ್ತೆಯ ಮಧ್ಯೆ ಸರಿಯಾಗಿ ನನ್ನ ಬೈಕ್ ನ ಮುಂದಿನ ಚಕ್ರಕ್ಕೆ ಢಿಕ್ಕಿ ಹೊಡೆಯಿತು. ಬ್ರೇಕ್ ಒತ್ತುವುದಕ್ಕೂ ಸಮಯವಿರಲಿಲ್ಲ. ಏನಾಗುತ್ತಿದೆ ಎಂದು ಅರಿವಾಗುವುದರೊಳಗೆ ಎಲ್ಲವೂ ಆಗಿಹೋಗಿತ್ತು. ಹಂದಿ ಜೋರಾಗಿ “ಕ್ರೀಂ..ವ್” ಎಂದು ಚೀರಿಕೊಂಡಿದ್ದು ಸ್ಪಷ್ಟವಾಗಿಯೇ ಕೇಳಿಸಿತು. ರಸ್ತೆಯಲ್ಲಿ ನಾನು, ಬ್ಯಾಲಾಳ್, ಬೈಕ್, ಹಂದಿ ಎಲ್ಲವೂ ದಿಕ್ಕಿಗೊಂದಂದರಂತೆ ಅನಾಥವಾಗಿ ಬಿದ್ದುಬಿಟ್ಟೆವು. ಬೈಕ್ ಜೋರಾಗಿ ರೋಧಿಸುತ್ತಲೇ ಇತ್ತು. ಉರುಳಿಬಿದ್ದ ಹಂದಿ ನಿಧಾನವಾಗಿ ಎದ್ದು ತಾನು ಏನೂ ಮಾಡಿಯೇ ಇಲ್ಲವೆಂಬಂತೆ ‘ಗುರ್ರ್’ ಎಂದು ಸ್ವರ ಹೊರಡಿಸಿ, ನಮ್ಮೆಡೆಗೆ ತಿರುಗಿ ನೋಡದೇ ಮೊಂಡು ಬಾಲದಿಂದ ಹಿಂಗಾಲುಗಳಿಗೆ ಬಡಿದುಕೊಳ್ಳುತ್ತಾ ಹೊರಟುಹೋಯಿತು. ನನ್ನ ಮೊಳಕಾಲು, ಮೊಣಕೈ ಕೆತ್ತಿಹೋಗಿ ರಕ್ತ ಒಸರುತ್ತಿತ್ತು. ಬ್ಯಾಲಾಳ್ ಗೂ ತರಚಿದ ಗಾಯಗಳಾಗಿದ್ದವು. ರಸ್ತೆಯಲ್ಲೇ ಬಿದ್ದುದ್ದರಿಂದ ಡ್ರೆಸ್ ಗಲೀಜಾದವು.  ಅಲ್ಲಿದ್ದ ಜನರು ನಮ್ಮನ್ನು, ಬಿದ್ದಿದ್ದ ಬೈಕನ್ನು ಎಬ್ಬಿಸಿ ಉಪಚರಿಸಿದರು. ಗಾಯ ತೊಳೆದುಕೊಳ್ಳಲು ನೀರು ಕೊಟ್ಟರು. ಆಗಿನ್ನು ಯಾವ ಆಸ್ಪ್ರತೆಯೂ ಓಪನ್ ಆಗಿರಲಿಲ್ಲ. ಅಲ್ಲದೇ ನಮ್ಮ ವೈವಾಗೆ ಲೇಟಾಗುವ ಸಂಭವವಿದ್ದುದ್ದರಿಂದ ಹಾಗೆಯೇ ಹಸಿ ಗಾಯದೊಂದಿಗೆ, ಗಲೀಜಾದ ಉಡುಪಿನೊಂದಿಗೆ ವೈವಾಕ್ಕೆ ಹಾಜರಾದೆವು.

ವೈವಾ ನಡೆಸುವ ಟೀಮ್ ನಲ್ಲಿ ಪ್ರೊ ಸುಬ್ಬಣ್ಣ ರೈ, ಮಾಧವ ಪೆರಾಜೆ ಇನ್ನಿತರ 3-4 ಮೇಸ್ಟ್ರುಗಳಿದ್ದರು. ನನ್ನ ಸರದಿ ಬಂದಾಗ ವೈವಾ ನಡೆಯುತ್ತಿದ್ದ ರೂಂ ನಲ್ಲಿ ಕಾಲಿಟ್ಟೆ. ಸಾಹಿತ್ಯಕ್ಕೆ ಸಂಬoಧಿಸಿದ ಕೆಲವು ಪ್ರಶ್ನೆಗಳನ್ನು ಕೇಳಿದ ಬಳಿಕ ನನ್ನ ಉದ್ದೇಶಿತ ಪಿಎಚ್.ಡಿ ವಿಷಯದ ಬಗ್ಗೆ ಕೇಳಿದರು. ನಾನು ಉತ್ಸಾಹದಲ್ಲಿ ಹೇಳಲು ಶುರುವಿಟ್ಟುಕೊಂಡೆ. ‘’ರವಿ ಬೆಳಗೆರೆ’’ ಎಂಬ ಹೆಸರು ಕೇಳಿದ ಕೂಡಲೇ ಮಾಧವ ಪೆರಾಜೆಯವರ ಕಣ್ಣಲ್ಲಿ ಕ್ರೋಧ ಕಾಣಿಸಲಾರಂಭಿಸಿತು.
 ‘ನಿನ್ನ ರವಿ ಬೆಳಗೆರೆ ಪಂಪನಷ್ಟು ದೊಡ್ಡವನಾ..?’ ಕೇಳಿದರು. 
“ಕನ್ನಡ ಸಾಹಿತ್ಯವನ್ನು ಬರಿ ಪಂಪ ರನ್ನರಿಂದ ಹಿಡಿದು….. ಕುವೆಂಪು, ಬೇಂದ್ರೆ, ಕಾರಂತವರೆಗೆ ಮಾತ್ರ ಯಾಕೆ ಸೀಮಿತಗೊಳಿಸುತ್ತೀರಿ ಸರ್? ಕನ್ನಡ ಸಾಹಿತ್ಯವೆಂದರೆ ಪಂಪನನ್ನು ಒಳಗೊಂಡಂತೆ ಅಲ್ಲಿಂದ ಹಿಡಿದು ಇಂದು ಬರೆಯುತ್ತಿರುವ ವಸುಧೇಂದ್ರರವರೆಗೆ…” ಅಂತ ಹೇಳತೊಡಗಿದೆ. 
ಪೆರಾಜೆಯವರ ಕಣ್ಣುಗಳಲ್ಲಿ ಕ್ರೋಧ ಹೆಚ್ಚಾಗಿತ್ತು. ನನ್ನ ಮಾತು ಉದ್ದಟತನವೆನಿಸಿರಬೇಕು. ಎರಡು ನಿಮಿಷದಲ್ಲಿ ವೈವಾ ಮುಗೀತು. ಇಲ್ಲಿ ಪಿಎಚ್.ಡಿ ಸೀಟು ಸಿಗಲ್ಲ ಅಂತ ಕನ್ಫರ್ಮ್ ಆಯ್ತು. ಸಂಜೆ ಬೈಕ್ ನಲ್ಲಿ ಬ್ಯಾಲಾಳ್ ಜೊತೆ ವಾಪಾಸ್ಸು ಊರಿಗೆ ಬರುವಾಗ ಅವನಿಗೆ ಹೇಳಿದೆ “ ರಕ್ತ ಸುರಿಸಿಕೊಂಡು ವೈವಾ ಕ್ಕೆ ಬಂದ್ರೂ ಉಪಯೋಗವಾಗಲಿಲ್ವಲ್ಲೋ..” ಅಂದೆ. ಅವನು ಎಂದಿನಂತೆ ಹಿ…ಹ್ಹಿ…ಹ್ಹಿ.. ಎಂದು ನಗುತ್ತಾ “ಇದೊಂದೆ ಯುನಿವರ್ಸಿಟಿನಾ ಇರೋದು?, ಬೇರೆ ಯುನಿವರ್ಸಿಟಿಗೆ ಅಪ್ಲೆ ಮಾಡೋಣ, ಎಲ್ಲಾದ್ರೂ ಸೀಟು ಸಿಕ್ಕೇ ಸಿಗುತ್ತೆ” ಅಂತ ಹೇಳುತ್ತಿದ್ದ. (ಅವನಿಗೂ ಸೀಟು ಸಿಗಲ್ಲ ಎಂದು ಕನ್ಫರ್ಮ್ ಆಗಿತ್ತು.) ವೈವಾ ಮುಗಿಸಿ ಸಂಜೆ ಊರಿಗೆ ವಾಪಾಸ್ಸಾಗುವಾಗ ಹೊಸಪೇಟೆಯಲ್ಲಿ ನಾವು ಬಿದ್ದ ಜಾಗವನ್ನು ಮತ್ತೊಮ್ಮೆ ನೋಡಿ ನಕ್ಕೆವು. (ಇಂದಿಗೂ ಕೂಡಾ ಆ ರಸ್ತೆಯಲ್ಲಿ ಹೋಗುವಾಗ ಆ ಜಾಗ ಬಂದೊಡನೇ ತುಟಿಯಂಚಿನಲ್ಲಿ ನಗು ಉಕ್ಕುತ್ತದೆ.)

ಆಮೇಲೆ ಶಿವಮೊಗ್ಗದ ಕುವೆಂಪು ಯುನಿವರ್ಸಿಟಿಗೆ ಇಬ್ಬರೂ ಅಪ್ಲೆ ಮಾಡಿದೆವು. ಅಲ್ಲಿ ಕೂಡಾ ಹಂಪಿ ಕನ್ನಡ ವಿ.ವಿ.ಯಲ್ಲಿ ಆದಂತಹ ಅನುಭವ. ವೈವಾದಲ್ಲಿ ಸುಮಾರು 12 ಜನ ಮೇಷ್ಟ್ರುಗಳಿದ್ದರು. ಬಹುಶಃ ಶಿವಾನಂದ ಮೇಲಿನಮನಿ ಅಥವಾ ಕೆಳಗಿನಮನಿ ಇರಬೇಕು ಅನ್ಸುತ್ತೆ. ಮಾಧವ ಪೆರಾಜೆಯವರಂತೆಯೇ ಇವರೂ ಸಿಟ್ಟಿಗೆದ್ದರು. “ರವಿ ಬೆಳಗೆರೆ ಏನು ಬರ್ದಾನೆ? ಜನಪ್ರಿಯ ಶೈಲಿಯಲ್ಲಿ ಬರೆಯೋನು… ಅದರ ಬಗ್ಗೆ ಪಿಎಚ್.ಡಿ ಮಾಡೋದೇನಿದೆ” ಅಂದರು. “ಬಿ.ಎಲ್. ವೇಣು ಅವರನ್ನೂ ಕೂಡಾ ಜನಪ್ರಿಯ ಸಾಹಿತಿ ಅಂತಾನೆ ಕರೀತಾರೆ. ಆದರೆ ಅವರು ಜನಪ್ರಿಯ ಶೈಲಿಯಾಚೆ ಗುರುತಿಸಿಕೊಂಡಿದ್ದಾರೆ. ಇದೇ ಯುನಿವರ್ಸಿಟಿಯಲ್ಲಿ ಅವರ ಬಗ್ಗೆ ಒಂದು ಪಿಎಚ್.ಡಿ ಕೂಡಾ ಆಗಿದೆ. ರವಿ ಬೆಳಗೆರೆಯವರು ಕೂಡಾ ಹಾಗೇಯೆ. ಅವರ ಸೃಜನಶೀಲ ಸಾಹಿತ್ಯವನ್ನು ಕುರಿತು ಪಿಎಚ್.ಡಿ ಮಾಡಬಹುದು, ಸಾರಲೇಖದಲ್ಲಿ ಬರೆದಿರುವೆ, ನೋಡಿ ಸರ್” ಅಂದೆ. ಅವರು ಅದರತ್ತ ಕಣ್ಣು ಹಾಯಿಸದೇ “ಬಿ.ಎಲ್. ವೇಣು ಬೇರೆ, ರವಿ ಬೆಳಗೆರೆ ಬೇರೆ. ಇಬ್ಬರನ್ನು ಹೋಲಿಸಲಿಕ್ಕಾಗುವುದಿಲ್ಲ” ಅಂದರು. ನನ್ನ ವಿಷಯ ಸಮರ್ಥನೆಯನ್ನು ವಾದ ಎಂದುಕೊಂಡರೇನೋ ಗೊತ್ತಿಲ್ಲ. ಏನೋ ಹೇಳಲು ಬಾಯ್ತೆಗೆದೆ. ಅಷ್ಟರಲ್ಲಿ,  “ಆಯ್ತು, ಪಿಎಚ್.ಡಿ ಸೀಟು ಕೊಡ್ತೇವೆ, ಮಾಡುವಂತೆ” ಎಂದು ಶಿವಾನಂದ ಮೇಷ್ಟ್ರು ವ್ಯಂಗ್ಯವಾಡಿದರು. ಅದನ್ನು ಅರಿಯದವನೇನಲ್ಲ ನಾನು. ಸೀಟು ಸಿಗಲ್ಲ ಅಂತ ಕನ್ಫರ್ಮ್ ಆಯ್ತು. ಸುಮ್ನೆ ಯಾಕೆ ಹೋಗಬೇಕು, ನಂದೂ ಒಂದು ಮಾತು ಇರ್ಲಿ ಅಂತ  “ ಮೊದ್ಲು ಮಾತಾಡೋಕೆ ಅವಕಾಶ ನೀಡಬೇಕು ಸರ್. ನೀವು ಸೀಟ್ ಕೊಡಲ್ಲ ಅಂತ ಗೊತ್ತು, ಕೊಟ್ರೂ ಕೂಡಾ ನಾನು ಮಾಡಲ್ಲ ಬಿಡಿ” ಎಂದು ಸಿಟ್ಟಿನಲ್ಲೇ ಹೇಳಿ ವೈವಾ ರೂಂ ನಿಂದ ಹೊರಗೆ ಬಂದೆ. ವೈವಾ ಕ್ಕೆ ಕುಳಿತಿದ್ದ ಇನ್ನೊಬ್ಬ ಮೇಷ್ಟ್ರು ನನಗೆ “ಸ್ವಲ್ಪ ಇರಿ” ಎಂದು ಕ್ಷೀಣವಾಗಿ ಕೂಗಿದ್ದು ಕೇಳಿಸಿತು. ಬಾಗಿಲಲ್ಲಿ ನಿಂತು ಬಗ್ಗಿ ನನ್ನ ಮಾತು ಕೇಳಿಸಿಕೊಳ್ಳುತ್ತಿದ್ದ ಬ್ಯಾಲಾಳ್ ನ ಮುಖದಲ್ಲಿ ನನ್ನ ವರ್ತನೆಯ ಬಗ್ಗೆ ಅಚ್ಚರಿಯಿತ್ತು.
  
ಮುಂದೆ ಇಬ್ಬರು ಸಿಯುಕೆ ಗೆ ಪಿಎಚ್.ಡಿ ಅಪ್ಲೆ ಮಾಡಿದೆವು. ಇಲ್ಲಿ ಕೂಡಾ ಹಠ ಬಿಡದೇ ವೈವಾದಲ್ಲಿ ಇದೇ ವಿಷಯ ಕುರಿತು ಸುದೀರ್ಘವಾಗಿ (ಮಾತಾಡಲು ಅವಕಾಶ ನೀಡಿದ್ದರಿಂದ!) ಮಾತಾಡಿದೆ. ವೈವಾ ಮುಗಿಸಿ ಹೊರಬಂದ ಕೂಡಲೇ ಬ್ಯಾಲಾಳ್ ಗೆ ಹೇಳಿದೆ “ಇಲ್ಲಿ ಖಂಡಿತಾ ಆಯ್ಕೆ ಆಗುತ್ತೇನೆ” ಅಂತ. ನಿರೀಕ್ಷಿಸಿದಂತೆ ಆಯ್ಕೆ ಕೂಡಾ ಆದೆ. ಬ್ಯಾಲಾಳ್ ಸಿಯುಕೆ ಗೆ ಆಯ್ಕೆಯಾಗದಿದ್ದರೂ ಕುಪ್ಪಂ ನ ದ್ರಾವಿಡ ವಿಶ್ವವಿದ್ಯಾಲಯಕ್ಕೆ ಆಯ್ಕೆ ಆದ. ಕೆಲವು ಅನಿವಾರ್ಯ ಕಾರಣಗಳಿಂದಾಗಿ ರವಿ ಬೆಳಗೆರೆಯವರ ಸೃಜನಶೀಲ ಸಾಹಿತ್ಯವನ್ನು ಕುರಿತ ನನ್ನ ಪಿಎಚ್.ಡಿ ವಿಷಯ ಬದಲಾಯಿಸಿಕೊಳ್ಳಬೇಕಾಯಿತು.  “ಕನ್ನಡ ಕಾದಂಬರಿಗಳಲ್ಲಿ ಜಾಗತೀಕರಣ ಮತ್ತು ಪ್ರತಿರೋಧ”  ಎಂಬ ವಿಷಯ ಆಯ್ಕೆಮಾಡಿಕೊಂಡು ಪಿಎಚ್.ಡಿ ನೂ ಮುಗಿಸಿಬಿಟ್ಟೆ. “ರವಿ ಬೆಳಗೆರೆ ಅವರ ಸೃಜನಶೀಲ ಸಾಹಿತ್ಯ : ಒಂದು ಅಧ್ಯಯನ” ಎಂಬ ನನ್ನ ಪುರಾತನ ಕನಸಿನ ಪಿಎಚ್.ಡಿ ಕನಸಾಗಿಯೇ ಉಳಿಯಿತು. ಕೊನೆಗೂ ನನಸಾಗಲಿಲ್ಲ. ಆದರೂ ರವಿ ಬೆಳಗೆರೆಯವರ ಕಥೆಗಳನ್ನು ಕುರಿತು ಎಂ.ಫಿಲ್ ಮಾಡಿದ ಆತ್ಮತೃಪ್ತಿಯಿದೆ. ಬಿ.ಎ. ಫಸ್ಟ್ ಇಯರ್ ಓದುವಾಗ ರವಿ ಬೆಳಗೆರೆಯರ ಸಾಹಿತ್ಯವನ್ನು ಕುರಿತು ಪಿಎಚ್.ಡಿ ಮಾಡಬೇಕೆಂದು ಟಿಪ್ಪಣಿ ಮಾಡಿಟ್ಟುಕೊಂಡಿದ್ದೆ ಅಂತ ಹೇಳಿದ್ದೆನಲ್ಲಾ, ಅದು ಇಂದಿಗೂ ನನ್ನ ಪುಸ್ತಕಗಳ ಶೆಲ್ಫಿನ ಮಧ್ಯೆ ಮುದುಡಿಕೊಂಡು ಬೆಚ್ಚಗೇ ಮಲಗಿದೆ. ಒಮ್ಮೊಮ್ಮೆ ಅದನ್ನು ಪ್ರೀತಿಯಿಂದ, ವಿಷಾದದಿಂದ ಸವರಿ ಹಾಗೆಯೇ ಎತ್ತಿಟ್ಟುಬಿಡುತ್ತೇನೆ.


ನಿಮ್ಮವನು,
-      ರಾಜ್