ಭಾನುವಾರ, ಜೂನ್ 6, 2021

ಅಗಲಿದ ಗುರುವಿನ ನೆನಪಿನಲ್ಲಿ….


ಬಾಲ್ಯದಿಂದಲೂ ನನಗೆ ಅಕ್ಷರ ಪ್ರಪಂಚದ ಬಗ್ಗೆ ಸೆಳೆತವಿತ್ತು. ಆಗ ನಮ್ಮ ಮನೆಗೆ “ಸುಧಾ” ವಾರ ಪತ್ರಿಕೆ ಬರುತ್ತಿತ್ತು. ನನ್ನಲ್ಲಿ ಓದುವ ಹವ್ಯಾಸ, ಸಾಹಿತ್ಯದೆಡೆಗಿನ ಆಸಕ್ತಿ ಮೂಡಿಸಿದ್ದೇ ಆ ಪತ್ರಿಕೆ. ಪ್ರತಿ ಗುರುವಾರ ಬರುತ್ತಿದ್ದ ಆ ಪತ್ರಿಕೆಗಾಗಿ ವಾರವಿಡೀ ಕಾಯುತ್ತಿದ್ದೆ. ಹಾಗೇ ಇಡೀ ಪತ್ರಿಕೆಯನ್ನು ಯಾವ ಪುಟವನ್ನು ಬಿಡದಂತೆ ಓದಿ ಮುಗಿಸುತ್ತಿದ್ದೆ. ಆಗ ‘ಸುಧಾ’ದಲ್ಲಿ “ಇಂದಿರಾತನಯ” ಅವರ ಜನಪ್ರಿಯ ಧಾರವಾಹಿ “ಮಂತ್ರಶಕ್ತಿ” ಪ್ರಕಟವಾಗುತಿತ್ತು. ಅದು ನಾನು ಓದಿದ ಮೊದಲ ಕಾದಂಬರಿ. ಅದು ಮುಗಿದ ಕೂಡಲೇ ಅವರದೇ “ಶಕ್ತಿಪೂಜೆ” ಧಾರವಾಹಿ ಪ್ರಕಟಗೊಂಡಿತು. ಅವೆರಡನ್ನು ಓದಿ ಮುಗಿಸಿದಾಗ ನಾನಿನ್ನು ಐದನೇ ತರಗತಿ ಮುಗಿಸಿ ಆರನೇ ತರಗತಿಗೆ ಹೋಗುತ್ತಿದ್ದೆ. ಚಂದಮಾಮ ಓದುವ ವಯಸ್ಸಿನಲ್ಲಿ 2 ಕಾದಂಬರಿಗಳನ್ನೇ ಓದಿ ಮುಗಿಸಿದ್ದೆ. ಮಂತ್ರಶಕ್ತಿ, ಶಕ್ತಿಪೂಜೆ ಧಾರವಾಹಿಗಳಲ್ಲಿನ ವಾಮಾಚಾರ, ತಾಂತ್ರಿಕ ವಿದ್ಯೆಯ ವಿವರಣೆಗಳು ಬಾಲ್ಯದಲ್ಲಿ ನನ್ನನ್ನು ತುಂಬಾ ಬೆರಗುಗೊಳಿಸಿದ್ದವು. (ನಾನು ಎಂ.ಎ. ಓದುವಾಗ ನಮ್ಮ ಪಿ.ಜಿ. ಸೆಂಟರ್ ನ ಲೈಬ್ರರಿಯಲ್ಲಿಆ ಎರಡೂ ಕಾದಂಬರಿಗಳು ಸಿಕ್ಕವು. ಬಾಲ್ಯದ ನೆನಪುಗಳು ಮರುಕಳಿಸಿದಂತಾಗಿ ಮತ್ತೆ ಅವೆರಡು ಕಾದಂಬರಿಗಳನ್ನು ಓದಿ ಮುದಗೊಂಡೆ. ) ಏಳು-ಎಂಟನೇ ತರಗತಿ ಓದುವಾಗ “ಸುಧಾ”ದಲ್ಲಿ “ಎಚ್.ಕೆ. ಅನಂತರಾವ್” ಅವರ “ಅನಾಮಿಕರು” ಧಾರವಾಹಿ ಶುರುವಾಗಿತ್ತು. ಭಾರತೀಯ ಗೂಢಚಾರಿ ಸುಧೀರ್, ಪಾಕಿಸ್ತಾನದ ಗೂಢಚಾರಿ ಚಾಂಡ್ (ಚಾಂದ್) ನಡುವೆ ಅರಳುವ ಪ್ರೇಮ ಹಾಗೂ ದೇಶಪ್ರೇಮದ ನಡುವಿನ ಕಥೆ. ತುಂಬಾ ರೋಚಕವಾದ ಧಾರವಾಹಿ. ಇವತ್ತಿಗೂ ಆ ಕಾದಂಬರಿಯ ಪಾತ್ರಗಳು, ಸನ್ನಿವೇಶಗಳು ಮರೆಯಲಾಗಿಲ್ಲ. ಆಗಿನ್ನು ನಮ್ಮ ಮನೆಗೆ ಟೀವಿ ಬಂದಿರಲಿಲ್ಲ. ಹೀಗಾಗಿ “ಸುಧಾ” ನನ್ನ ಪಾಲಿಗೆ ಎಂಟರ್ಟ್ರೈನ್ಮೆಂಟಾಗಿತ್ತು. ಸಹಜವಾಗಿ ಅಕ್ಷರ ಪ್ರಪಂಚ ನನ್ನನ್ನು ಸೆಳೆಯಿತು. ಸಾಹಿತ್ಯವೆಂದರೆ ಏನು ಎಂದು ತಿಳಿಯದ ವಯಸ್ಸಿನಲ್ಲಿ ಸಾಹಿತ್ಯ ಓದಲಾರಂಭಿಸಿದ್ದೆ. ಹಾಗೇ ಸಾಹಿತ್ಯದಡೆಗೆ ಆಕರ್ಷಿತನಾಗುತ್ತಲೇ ಹೈಸ್ಕೂಲ್ ಗೆ ಪಾದಾರ್ಪಣೆ ಮಾಡಿದೆ. ಆಗ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗುವ ಅಭ್ಯಾಸ ಬೆಳೆಸಿಕೊಂಡೆ. ಅಲ್ಲಿ ನಿಶ್ಶಬ್ಧವಾದ ವಾತಾವರಣದಲ್ಲಿ ಮೌನವಾಗಿ ಕುಳಿತುಕೊಂಡು ವಿವಿಧ ಪತ್ರಿಕೆಗಳನ್ನು ಓದಿ ಖುಷಿಪಡುತಿದ್ದೆ. ಆಗ ನನ್ನ ಕಣ್ಣಿಗೆ ಬಿದ್ದುದ್ದೇ “ಹಾಯ್ ಬೆಂಗಳೂರ್!”. ಅದರ ಆಕಾರದಿಂದಲೋ ಏನೋ ಮೊದಮೊದಲು ನನ್ನ ಗಮನವನ್ನು ಅಷ್ಟಾಗಿ ಸೆಳೆದಿರಲಿಲ್ಲ. ಸುಮ್ಮನೇ ಕಣ್ಣಾಡಿಸಿ ಎತ್ತಿಡುತ್ತಿದ್ದೆ ಅಷ್ಟೇ. ನಂಗೇನು ಗೊತ್ತು ಮುಂದೊಂದು ದಿನ ಈ ಪತ್ರಿಕೆಯ ಸಾರಥಿ ನನ್ನ ಬದುಕಿನ ತುಂಬಾ ಆವರಿಸಿಬಿಡುತ್ತಾರೆಂದು. “ರವಿ ಬೆಳಗೆರೆ” ಎಂಬ ಹೆಸರು ಆಗಿನ್ನು ನನಗೆ ಅಪರಿಚಿತವಾಗಿತ್ತು.ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದೆ. ಆ ಬೇಸಿಗೆಯ ಒಂದು ದಿನ ಯಥಾಪ್ರಕಾರ ಲೈಬ್ರರಿಗೆ ಹೋದೆ. ಎಲ್ಲಾ ಪತ್ರಿಕೆಗಳನ್ನು ಓದುತ್ತಾ ಸಹಜವಾಗಿಯೇ ‘ಹಾಯ್ ಬೆಂಗಳೂರ್!” ನ್ನು ಎತ್ತಿಕೊಂಡೆ. ಎಂದಿನಂತೆ ಸುಮ್ಮನೇ ಕಣ್ಣಾಡಿಸಿ ಎತ್ತಿಡಲಿಲ್ಲ. ಯಾಕೋ ಪತ್ರಿಕೆಯ ಎರಡನೇ ಪುಟದಲ್ಲಿದ್ದ ಅಂಕಣ “ಖಾಸ್ ಬಾತ್” ಓದಲಾರಂಭಿಸಿದೆ. ಮೊದಲ ಕೆಲವು ಸಾಲುಗಳು ನನ್ನನ್ನು ಎಷ್ಟೊಂದು ಮನನಸೆಳೆದುಬಿಟ್ಟವೆಂದರೆ ಇಡೀ ಪತ್ರಿಕೆಯನ್ನು ಓದಿ ಮುಗಿಸಿದೆ. ರವಿ ಬೆಳಗೆರೆ ನನಗೆ ಪರಿಚಯವಾಗಿದ್ದು ಹಾಗೆ. ನಂತರ ಪ್ರತಿವಾರ “ಹಾಯ್ ಬೆಂಗಳೂರ್!”ಗಾಗಿ ಕಾಯತೊಡಗಿದೆ. ನನ್ನ ಅಪ್ಪಣೆಯಿಲ್ಲದೇ ನನ್ನ ಹೃದಯದೊಳಗೆ ರವಿ ಬೆಳಗೆರೆ ಬಂದುಬಿಟ್ಟಿದ್ದರು. ಪಿಯು ಫಸ್ಟ್ ಇಯರ್ ವಾರ್ಷಿಕ ಪರೀಕ್ಷೆಯಲ್ಲಿ “ನಿಮ್ಮ ಇಷ್ಟದ ಲೇಖಕನನ್ನು ಕುರಿತು ಪ್ರಬಂಧ ಬರೆಯಿರಿ” ಎಂದು ಪ್ರಶ್ನೆಯಿತ್ತು. ನಾನು ರವಿ ಬೆಳಗೆರೆಯವರನ್ನು ಕುರಿತು ಸುದೀರ್ಘ ಪ್ರಬಂಧವನ್ನೇ ಬರೆದಿದ್ದೆ. ರವಿ ಬೆಳಗೆರೆ ನನ್ನ ಪಾಲಿಗೆ ಗುರುವಾಗಿಬಿಟ್ಟರು. ಆಮೇಲೆ ಬಿಡಿ, ನನ್ನ ಬದುಕಿನಲ್ಲಿ ಗುರುಗಳೊಂದಿಗೆ ನಡೆದದ್ದೇ “ರವಿ ರಾಜ ಮಾರ್ಗ..!” 


ನಾನು “ಹಾಯ್ ಬೆಂಗಳೂರ್!”ಓದುತ್ತಿದ್ದ ಆರಂಭದ ದಿನಗಳಲ್ಲಿ “ಹಾಯ್ ಬೆಂಗಳೂರ್!”ನ “ಹಲೋ” (ಸಂಪಾದಕೀಯ) ಅಂಕಣದಲ್ಲಿ ನಗುಮುಖದ ರವಿ ಬೆಳಗೆರೆಯವರ ಚಿತ್ರವಿರುತ್ತಿತ್ತು. ಅದನ್ನು ಹೊರತುಪಡಿಸಿದರೆ ರವಿ ಬೆಳಗೆರೆಯವರ ಇನ್ನೊಂದು ಫೋಟೋ ನೋಡಿರಲಿಲ್ಲ. ಈ ವ್ಯಕ್ತಿ ನೋಡಲಿಕ್ಕೆ ಹೇಗಿರಬಹುದು, ಇಷ್ಟು ಚೆಂದ ಬರೆಯುವ ಇವರ ಮಾತು ಹೇಗಿರಬಹುದು ಎಂಬ ಕಲ್ಪನೆಗಳಿದ್ದವು. ಆಗಿನ್ನು ರವಿ ಬೆಳಗೆರೆಯವರು ಸಿನೆಮಾ, ಟೀವಿಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಪತ್ರಿಕೋದ್ಯಮಕ್ಕೆ ಮಾತ್ರ ಸೀಮಿತರಾಗಿದ್ದರು. ಹೀಗಾಗಿ ಬರೀ ಅಕ್ಷರಗಳಲ್ಲಿ ಮಾತ್ರ ರವಿ ಬೆಳಗೆರೆ ಕಾಣಿಸುತ್ತಿದ್ದರು. ಆಮೇಲೆ ನಾನು ಪದವಿ ಓದಲಿಕ್ಕೆ ಧಾರವಾಡಕ್ಕೆ ಹೋದೆ. ಅಲ್ಲಿ ಕೋರ್ಟ್ ಹತ್ತಿರವಿದ್ದ ಕೇಂದ್ರ ಗ್ರಂಥಾಲಯದಲ್ಲಿ ಸದಸ್ಯತ್ವ ಪಡೆದು ವಿವಿಧ ಲೇಖಕರ ಅನೇಕ ಕೃತಿಗಳನ್ನು ಓದಿದೆ. ಗ್ರಂಥಾಲಯದ ಸದಸ್ಯತ್ವದ ಕಾರ್ಡ್ ದಿಂದ ಇಡೀ ಧಾರವಾಡದಲ್ಲಿರುವ ಶಾಖಾ ಗ್ರಂಥಾಲಯಗಳಲ್ಲಿ ಎಲ್ಲಿ ಬೇಕಾದರೂ ಪುಸ್ತಕ ಪಡೆಯಬಹುದಾಗಿತ್ತು. ಅಲ್ಲಿಯ ಗ್ರಂಥಾಲಯಗಳಲ್ಲಿ ರವಿ ಬೆಳಗೆರೆಯವರ ಅನೇಕ ಕೃತಿಗಳಿದ್ದವು. ಆಸೆಬುರುಕ ಮಗುವನ್ನು ಸಿಹಿತಿಂಡಿಯ ಅಂಗಡಿಯಲ್ಲಿ ಬಿಟ್ಟಂತಾಗಿತ್ತು. ಮಾಟಗಾತಿ, ಸರ್ಪಸಂಬಂಧ, ಮಾಂಡೋವಿ, ಗಾಡ್ ಫಾದರ್, ಮುಸ್ಲಿಂ, ದಾರಿ, ಪಾವೆಂ ಹೇಳಿದ ಕಥೆ…. ಓದಿದ್ದು ಅದೆಷ್ಟೋ. ಅವರ ಬದುಕು, ಬರವಣಿಗೆಯನ್ನು ಕುರಿತು ಕ್ಲಾಸಿನಲ್ಲಿ ಒಮ್ಮೆ ಸೆಮಿನಾರ್ ಕೂಡಾ ಮಾಡಿದ್ದೆ. 


ಪದವಿಯ ಕೊನೆವರ್ಷ ಇನ್ನೇನು ಮುಗಿಯುತ್ತಿತ್ತು. ಇದ್ದಕ್ಕಿದ್ದಂತೆಯೇ ಧಾರವಾಡ ಎಂಬ ನಗರಿ ನನ್ನನ್ನು ಒಂದು ಮಧುರ ಅನುಭವಕ್ಕೀಡು ಮಾಡಿತು! ಕಾನೂನು ವಿದ್ಯಾರ್ಥಿಗಳ ಯುವಕ ಸಂಘವೊಂದರ ಉದ್ಘಾಟನೆಗಾಗಿ ರವಿ ಬೆಳಗೆರೆ ಧಾರವಾಡಕ್ಕೆ ಬರಲಿದ್ದರೆಂದು ರಸ್ತೆ ಬದಿಯ ಗೋಡೆಗಳಲ್ಲಿ ಪೋಸ್ಟರ್ ಗಳನ್ನು ಅಂಟಿಸಿದ್ದರು. ನೋಡಿದವನೇ ಥ್ರಿಲ್ಲಾಗಿ ಹೋದೆ. ವಿದ್ಯಾವರ್ಧಕ ಸಂಘದ “ಡಾ. ಪಾಟೀಲ ಪುಟ್ಟಪ್ಪ ಸಭಾಂಗಣ”ದಲ್ಲಿ ಸಂಜೆ ಆರು ಗಂಟೆಗೆ ಕಾರ್ಯಕ್ರಮವಿತ್ತು. ನಾನು ಐದು ಗಂಟೆಗೆ ಅಲ್ಲಿ ಹಾಜರಿದ್ದೆ. ಒಬ್ಬ ಪತ್ರಕರ್ತನನ್ನು ನೋಡೋಕೆ (ಸಿನೆಮಾ ನಟ ಅಲ್ಲವಲ್ಲಾ!) ಸಾಕಷ್ಟು ಜನ ಯಾಕೆ ಬರುತ್ತಾರೆ ಬಿಡು ಎಂಬ ಉದಾಸೀನ ಮನೋಭಾವ ನನ್ನಲ್ಲಿತ್ತು. ಆದರೆ ಸಭಾಂಗಣದೊಳಗೆ ಕಾಲಿಡುತ್ತಲೇ ನನ್ನ ಲೆಕ್ಕಾಚಾರಗಳು ತಲೆಕೆಳಗಾದವು. ಇಡೀ ಸಭಾಂಗಣ ತುಂಬಿ ತುಳುಕುತಿತ್ತು. ನಿಲ್ಲಲಿಕ್ಕೂ ಜಾಗವಿರಲಿಲ್ಲ. ಹೇಗೋ ಕಷ್ಟಪಟ್ಟು ಜನರ ನಡುವೆ ತೂರಿಕೊಂಡೆ. ಸಮಾರಂಭ ಸಂಜೆ ಆರು ಗಂಟೆಗೆ ಎಂದಿದ್ದರೂ ರವಿ ಬೆಳಗೆರೆಯವರು ಬಂದಿದ್ದು ರಾತ್ರಿ ಎಂಟು ಗಂಟೆಗೆ. ಅಲ್ಲಿಯವರೆಗೆ ಜನ ಕಾಯುತ್ತಿದ್ದರು. ಕೈ ಬೀಸುತ್ತಾ ಸಭಾಂಗಣದೊಳಗೆ ರವಿ ಬೆಳಗೆರೆಯವರು ಕಾಲಿಟ್ಟರು ನೋಡಿ, ಜನ ಕರತಾಡನ ಮಾಡುತ್ತಾ ಹರ್ಷೋದ್ಗಾರದಿಂದ ಕೇಕೆ ಸಿಳ್ಳೆ ಹಾಕಲಾರಂಭಿಸಿದರು. ಅವತ್ತು ರವಿ ಬೆಳಗೆರಯವರು ಕಪ್ಪು ಬಣ್ಣದ ಜುಬ್ಬಾ ಧರಿಸಿದ್ದರು. ಅವರೊಂದಿಗೆ ಅವರ ಜೀವದ ಗೆಳೆಯ ಅಶೋಕ ಶೆಟ್ಟರ್, ಕವಿ ಮೋಹನ ನಾಗಮ್ಮನವರ್, ಪೋಲಿಸ್ ಅಧಿಕಾರಿ ರವಿಕಾಂತೇಗೌಡ್ರು ಇದ್ದರು. ನನ್ನ ಪ್ರೀತಿಯ ಲೇಖಕನನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಂಡೆ. ಎಂದಿನ ಖಡಕ್ ಶೈಲಿಯ ಭಾಷಣ, ನಡುನಡುವೆ ಹಾಸ್ಯದ ಮಾತುಗಳಿಂದ ನಗಿಸುತ್ತಾ ಒಂದು ತಾಸಿಗೂ ಮಿಕ್ಕಿ ಮಾತಾಡಿದರು. ಅವರಿಗೆ ಕೊಡಬೇಕೆಂದು ತಂದಿದ್ದ ಹೂವಿನ ಬೊಕೆ ಜನರ ತಳ್ಳಾಟದ ನಡುವೆ ನಲುಗಿಹೋಗಿತ್ತು. ಅದನ್ನು ಬಿಸಾಕಿದೆ. ಅವರು ಎಂ.ಎ ಇತಿಹಾಸ ಓದಿಕೊಂಡವರಾಗಿದ್ದರಿಂದ ಅವರಿಗೆ ಇಷ್ಟವಾಗಬಹುದೆಂದು ಹಿಟ್ಲರ್ ನ ಆತ್ಮಕಥನ “ಮೈನ್ ಕೆಂಫ್” ಕೃತಿಯನ್ನುಜೊತೆಗೆ ತಂದಿದ್ದೆ. ಅದನ್ನು ಹಿಡಿದುಕೊಂಡು ವೇದಿಕೆಯ ಎಡಬದಿಗೆ ನಿಂತುಕೊಂಡೆ. ಅವರು ಭಾಷಣ ಮುಗಿಸಿ ವೇದಿಕೆಯಲ್ಲಿ ಕುಳಿತುಕೊಂಡರು. ಅವರನ್ನು ಮಾತಾಡಿಸಲು, ಆಟೋಗ್ರಾಫ್ ಪಡೆಯಲು, ಫೋಟೋ ತೆಗೆಸಿಕೊಳ್ಳಲು ಜನರು ವೇದಿಕೆಯತ್ತ ನುಗ್ಗಿದರು. ಸಂಘಟಿಕರು ಜನರನ್ನು ಕೆಳಗೆ ತಳ್ಳಲಾರಂಭಿಸಿದರು. ನಾನು ಅದರ ನಡುವೆಯೇ ತೂರಿಕೊಂಡು ಗುರುವಿನತ್ತ ಧಾವಿಸಿದೆ. ಅವರು ನೀರು ಕುಡಿಯುತ್ತಾ ಪಕ್ಕದಲ್ಲಿದ್ದ ರವಿಕಾಂತೇಗೌಡರೊಂದಿಗೆ ಏನೋ ಮಾತಾಡುತ್ತಿದ್ದರು. ಅವರ ಅವರೆದುರಿಗೆ ನಿಂತವನೇ ಪುಸ್ತಕ ನೀಡಿ ಅವರ ಕೆನ್ನೆಗೆ ಮುತ್ತಿಕ್ಕಿದೆ..!! ಅಷ್ಟೇ! ಗುರುವಿನ ಮುಖದಲ್ಲಿ ನಗೆಯರಳಿತು. “ಮಾಂಡೋವಿ” ಕಾದಂಬರಿಯ ಮೊದಲ ಪುಟದಲ್ಲಿ ಅವರ ಸಹಿ ಪಡೆದೆ. Premier ಕಂಪೆನಿಯ Aim and shoot ಥರದ ಕೆಮೆರಾವನ್ನು ಒಯ್ದಿದ್ದೆ. ಆದರೆ ಜನರ ಕೂಗಾಟ ತಳ್ಳಾಟಗಳ ನಡುವೆ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲಾಗಲಿಲ್ಲ. ಆದರೆ ಅತೀ ಹತ್ತಿರದಿಂದ ಅವರ ಮುಖಕ್ಕೆ ಕೆಮೆರಾ ಹಿಡಿದು ಒಂದೇ ಒಂದು ಫೋಟೋ ಕ್ಲಿಕ್ಕಿಸಿದೆ. ಪರಮಗುರು ನಗುತ್ತಿದ್ದರು. 

ನನ್ನ ಕೆಮೆರಾದಲ್ಲಿ ಬಂಧಿಯಾದ ರವಿ

ಇದೆಲ್ಲಾ ಒಂದು ನಿಮಿಷದೊಳಗೆ ನಡೆದುಹೋಯ್ತು. ಆ ಗದ್ದಲದ ನಡುವೆ ಅವರೊಂದಿಗೆ ಏನೂ ಮಾತಾಡಲಾಗಲಿಲ್ಲ. ವೇದಿಕೆಯಿಂದ ಕೆಳಗಿಳಿದೆ. ರವಿ ಬೆಳಗೆರೆಯವರು ಮತ್ತೆ ಬೆಂಗಳೂರಿಗೆ ಹೊರಡುವವರಿದ್ದರು. ಸಭಾಂಗಣದ ಹೊರಗೆ ಟೊಯೋಟೋ ಥರದ ದೊಡ್ಡದೊಂದು ಕಾರ್ ನಿಂತಿತ್ತು. ಜನರು ಮತ್ತದೇ ಹರ್ಷೋದ್ಗಾರಗಳಿಂದ ಬೀಳ್ಕೊಟ್ಟರು. ಸಮಯ ರಾತ್ರಿ 11 ಗಂಟೆ ಸಮೀಪಿಸುತ್ತಿತ್ತು. ಅಷ್ಟೊತ್ತಿಗಾಗಲೇ ಸಿಟಿ ಬಸ್ ಓಡಾಟ ಬಂದ್ ಆಗಿತ್ತು. ಅಲ್ಲಿಂದ ರಜತಗಿರಿಯಲ್ಲಿದ್ದ ನನ್ನ ಹಾಸ್ಟೆಲ್ (ಕಾಳಿದಾಸ ಹಾಸ್ಟೆಲ್) ವರೆಗೆ ನಡೆದೆ. ಇವತ್ತು ರವಿ ಬೆಳಗೆರೆಯವರನ್ನು ನೋಡಿದ್ದು ಕನಸೋ ನನಸೋ ಎಂಬಂತ್ತಾಗಿತ್ತು. ಅಂದಿನ ಘಟನೆ, ನನ್ನ ಭಾವನೆಗಳ ಭೋರ್ಗೆರೆತದ ಪರಿಯನ್ನು ಅಕ್ಷರದಲ್ಲಿ ಸೆರೆ ಹಿಡಿಯಲು ಇಂದಿಗೂ ಸೋಲುತ್ತೇನೆ. ಇದನ್ನು ಅತಿರೇಕದ ಅಭಿಮಾನ ಅಂತಿರೋ, ಹುಚ್ಚು ಅಭಿಮಾನ ಅಂತಿರೋ ಗೊತ್ತಿಲ್ಲ.ನನ್ನ ಹೃದಯವನ್ನು ಅಷ್ಟೊಂದು ಆಕ್ರಮಿಸಿಕೊಂಡುಬಿಟ್ಟಿದ್ದರು ಆ ಅಕ್ಷರ ಮಾಂತ್ರಿಕ. ನೂರಾರು ಮೈಲಿ ದೂರದಲ್ಲಿ, ಎಲ್ಲೋ ಮೂಲೆಯಲ್ಲಿ ಕುಳಿತು ಬರೀ ಅಕ್ಷರಗಳೊಂದಿಗೆ ಆಟವಾಡುತ್ತಾ ನನ್ನಂತಹ ಅನಾಮಧೇಯ ಓದುಗನ ಹೃದಯಕ್ಕೆ ಲಗ್ಗೆಯಿಟ್ಟ ರವಿ ಬೆಳಗೆರೆ ನನ್ನ ಪಾಲಿಗೆ ರಿಯಲ್ ಹೀರೊ..! 


ಗುರುವಿನಿಂದ ಏನೆಲ್ಲಾ ತಿಳಿದುಕೊಂಡೆ! ಬಹುಶಃ ರವಿ ಬೆಳಗೆರೆಯವರು ನನ್ನ ಬದುಕಿನಲ್ಲಿ ಬರದಿದ್ದರೆ ಏನೆಲ್ಲಾ ಕಳೆದುಕೊಳ್ಳುತ್ತಿದ್ದೆನಲ್ಲಾ ಅಂತ ಅನಿಸುತ್ತೆ. ಬದುಕಿನ ಪಾಠಗಳನ್ನು ತಮ್ಮದೇ ಉದಾಹರಣೆ ಮೂಲಕ ನನಗೆ (ನನ್ನಂತ ಓದುಗರಿಗೆ) ಮನಮುಟ್ಟುವಂತೆ ತಿಳಿಸಿಕೊಟ್ಟ ಮಹಾಗುರು ನನ್ನ ರವಿ. ಸೋಲು, ಗೆಲುವು, ಅವಮಾನ, ಸನ್ಮಾನ, ಬಡತನ, ಹಸಿವು, ಛಲ, ಪ್ರೀತಿ, ನೋವು, ಹತಾಶೆ, ಉತ್ಸಾಹ, ಸಾಧನೆ..... ಎಲ್ಲವನ್ನು ಎಷ್ಟು ಚೆಂದಗೆ ಮನಮುಟ್ಟುವಂತೆ ಹೇಳಿದರಲ್ಲಾ. ನನ್ನ ಬದುಕಿನ ರಹದಾರಿಯಲ್ಲಿ ಅನಿರೀಕ್ಷಿತವಾಗಿ ಸಿಕ್ಕ ಪರಮ ಗುರು ಅವರು. ಅವರೊಂದಿಗೆ ನನ್ನದು Unconditional Love..! 

ಅದು ಈ ಜನ್ಮಕ್ಕೆ ಮುಗಿಯುವಂತದ್ದಲ್ಲ..!! 


(ಮುಂದಿನ ಭಾಗದಲ್ಲಿ ಮತ್ತಷ್ಟು ಬರೆಯುವೆ.)


                                                                                                                                                 ನಿಮ್ಮವನು,

                                                                                                                                                       - ರಾಜ್