ಅವು ನಿರುದ್ಯೋಗದ ದಿನಗಳು. ಆಗತಾನೇ ಕೊರೋನಾದ ಕರಿಛಾಯೆ ಸರಿದಿತ್ತು, ಆ ದಿನಗಳಲ್ಲೇ ನನ್ನ ಪಿಎಚ್ಡಿ ಕೂಡಾ ಮುಗಿದಿತ್ತು. ಎಲ್ಲಾದರೂ ಕಾಲೇಜಿನಲ್ಲಿ ಮೇಷ್ಟ್ರ ಕೆಲಸಕ್ಕೆ ಸೇರಿಬಿಡೋಣ ಅನ್ನುವ ಹುರುಪಿತ್ತು. ನನ್ನ ಗೆಳೆಯನೊಬ್ಬ ಹೇಳಿದ, ಕೊಪ್ಪಳದ "ಅದೆಂತದ್ದೋ ಇಂಟರ್ ನ್ಯಾಶನಲ್ ಸ್ಕೂಲ್ ಮತ್ತು ಕಾಲೇಜು" (ಸಂಯುಕ್ತ ಪದವಿ ಪೂರ್ವ ಕಾಲೇಜು)ನಲ್ಲಿ ಕನ್ನಡ ಮೇಷ್ಟ್ರು ಕೆಲಸ ಖಾಲಿ ಇದೆ, ಅಲ್ಲಿ ಅಪ್ಲೆ ಮಾಡು ಅಂದ. ಕೇಳಬೇಕೆ? ಭರಪೂರ ಉತ್ಸಾಹದಲ್ಲಿ ನನ್ನ ಮೂಲ ದಾಖಲೆಗಳು, ಒಂದು ಪ್ರತಿ ಜೆರಾಕ್ಸ್, ರೆಸ್ಯೂಮ್ ನೊಂದಿಗೆ ಹೊರಟೆ. ನನ್ನ ಉದ್ದೇಶ ಇದ್ದಿದ್ದು ಅಲ್ಲಿಯ ಪಿಯು ಕಾಲೇಜು ವಿಭಾಗದಲ್ಲಿ ಉಪನ್ಯಾಸಕನಾಗಿ ಪಾಠ ಮಾಡುವುದಾಗಿತ್ತು. ಕೊಪ್ಪಳದ ಬಸ್ ಸ್ಟ್ಯಾಂಡ್ ನ ಹತ್ತಿರದ ಗಲ್ಲಿಯೊಳಗೆ ಆ ಶಾಲೆ ಇತ್ತು. ಶಾಲೆಯ ಹೆಸರಿನಲ್ಲಿ ಮಾತ್ರ "ಇಂಟರ್ ನ್ಯಾಷನಲ್" ಅಂತ ಇತ್ತು ಅಷ್ಟೇ! ಆದರೆ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು. ಗೋಡೆಗಳು ಬಣ್ಣಗೆಟ್ಟು ನಿಂತಿದ್ದವು. ಒಟ್ಟು ೮-೧೦ ಕೊಠಡಿಗಳಿದ್ದವು. ನಾನು ಹೋದಾಗ ವಿದ್ಯಾರ್ಥಿಗಳು ಅಂಗನವಾಡಿ ಮಕ್ಕಳಂತೆ ಗದ್ದಲವೆಬ್ಬಿಸುತ್ತಿದ್ದವು. ಶಾಲೆಯ ಫ್ಯೂನ್ ಒಳಗೆ ಕರೆದು ಕೂರಿಸಿದ. ಶಾಲೆಯ ಅಧ್ಯಕ್ಷರು ಹೊರಗೆಲ್ಲೋ ಹೋಗಿದ್ದಾರೆ, ಆಮೇಲೆ ಬರ್ತಾರೆ ಅಂದ. ಅದೊಂದು ಸಣ್ಣ ಸೈಜ್ ನ ರೂಂ. ಬಾಗಿಲ ಎದುರಿಗೆ ಒಂದು ಟೇಬಲ್, ಚೇರ್. ಅದು ಕ್ಲರ್ಕ್ ಗೆ, ಆಫೀಸ್ ರೂಂ ಥರಾ! ಅದರ ಸುತ್ತಲೂ ಒಂದಿಷ್ಟು ಚೇರ್ ಗಳು, ಅವುಗಳೇ ಮೇಷ್ಟರುಗಳು ಆಸನಗಳು/ಸ್ಟಾಫ್ ರೂಂ ಥರಾ!, ಇವುಗಳನ್ನು ಪ್ರತ್ಯೇಕಿಸಿ (ಬಹುಶಃ ಪ್ಲೇವುಡ್ ನಿಂದ) ಇನ್ನೊಂದು ರೂಂ ಮಾಡಲಾಗಿತ್ತು (ರೂಂ ನೊಳಗೊಂದು ರೂಂ!). ಅದು ಕಾಲೇಜು ಮಂಡಳಿಯ ರೂಂ. ಅಲ್ಲಿ ಒಂದು ಟೇಬಲ್, ನಾಲ್ಕು ಚೇರ್ ಗಳಿದ್ದವು. ಎಲ್ಲವೂ ಪುರಾತನ ಪಳಿಯುಳಿಕೆಗಳೇ! ಒಂದು ತಾಸು ಕಳೆದ ಬಳಿಕ ಅಧ್ಯಕ್ಷರು ಕಂ ಮಾಲೀಕರು ಬಂದರು. ಅರವತ್ತರ ಆಸುಪಾಸಿನಲ್ಲಿದ್ದರು. ಸ್ವಲ್ಪ ದಪ್ಪಗಿದ್ದರು. ಅವರಿಗೆ ನಮಸ್ಕರಿಸಿ, ಬಂದ ವಿಷಯ ತಿಳಿಸಿದೆ. ರೆಸ್ಯೂಮ್ ಕೊಟ್ಟೆ. ಅದರಲ್ಲಿ ಎಲ್ಲಾ ವಿವರಗಳಿದ್ದವು. ಅದನ್ನು ನೋಡುತ್ತಾ... ,
ಹೆಸರು ಕೇಳಿದರು, ಹೇಳಿದೆ.
ಊರು ಕೇಳಿದರು, ಹೇಳಿದೆ.
ಕ್ವಾಲಿಫಿಕೇಷನ್ ಕೇಳಿದರು, ಹೇಳಿದೆ.
ಅರೇ! ಎಲ್ಲಾ ಮಾಹಿತಿ ರೆಸ್ಯೂಮ್ ನಲ್ಲಿ ಇದೆ, ನೋಡಿದರೂ ಕೇಳುತ್ತಿದ್ದಾರಲ್ಲ ಅಂತ ಅನಿಸಿದರೂ "ಯಾರಿಗೊತ್ತು, ಇದೊಂಥರಾ ಇಂಟರ್ವಿವ್ಯೂ ಟ್ರಿಕ್ಸ್ ಇರಬಹುದೇನೋ" ಅಂತ ಅನಿಸಿತು. ಸ್ವಲ್ಪ ಹೊತ್ತು ಹಾಗೇ ರೆಸ್ಯೂಮ್ ಮೇಲೆ ಕಣ್ಣಾಡಿಸತೊಡಗಿದರು. ಅವರ ಮೂಗಿನಲ್ಲಿ ದಟ್ಟವಾಗಿ ಬೆಳೆದಿದ್ದ ಬಿಳಿ ಕೂದಲುಗಳ ಪೈಕಿ ಒಂದಿಷ್ಟು ಕೂದಲು ಹೊರಬಂದು ತಮ್ಮ ಬಿಳಿ ಬಣ್ಣವನ್ನು ಪ್ರದರ್ಶಿಸುತ್ತಿದ್ದವು. ಅವುಗಳನ್ನೇ ನಿರುಕಿಸುತ್ತಾ ಕೂತೆ.
**********************
ನಿಜವಾದ ಇಂಟರ್ವಿವ್ಯೂ ಆರಂಭವಾಯ್ತು!
"ನಿಮ್ಮನ್ನು ಪಿಯು ತರಗತಿಗೆ ನೇಮಕ ಮಾಡಿಕೊಂಡರೂ ಎಸ್ಸೆಸ್ಸೆಲ್ಸಿ ತರಗತಿಗೂ ಪಾಠ ಮಾಡಬೇಕೆಂದರು.
ನಿರುದ್ಯೋಗದ ತಾಪ! ಸುಮ್ಮನೆ ಹ್ಞೂಂಗುಟ್ಟಿದೆ.
" ಒಂಬತ್ತನೆ ತರಗತಿಗೂ ಮಾಡಬೇಕು" ಅಂದರು!
"ಹ್ಞೂಂ" ಅಂದೆ.
"ಎಂಟಕ್ಕೂ ಮಾಡಬೇಕು"
".......!"
"ಏಳಕ್ಕೂ!"
".........!!"
"ಆರಕ್ಕೂ..."
".........!!!"
ಒಟ್ಟು ಆರನೇ ಕ್ಲಾಸಿನಿಂದ ಸೆಕೆಂಡ್ ಪಿಯುವರೆಗೆ ಎಲ್ಲಾ ತರಗತಿಗಳಿಗೆ ಪಾಠ ಮಾಡಬೇಕೆಂದರು ಖಾವಂದರು!
ಎದೆ ಬಡಿತ ನಿಂತಂತಾಗಿತ್ತು! ಆದರೂ, ಸಾವರಿಸಿಕೊಂಡು ಕೇಳಿದೆ.
ಸರ್, ಒಂದು ದಿನದಲ್ಲಿ ಒಟ್ಟು ಎಷ್ಟು ಪಿರಿಯಡ್ ಗಳಿರುತ್ತವೆ?
"ಏಳು" ಉತ್ತರಿಸಿದರು.
"ಏಳು ಪಿರಿಯಡ್ಸ್!! ಏಳಕ್ಕೆ ಏಳು ಪಾಠ ಮಾಡಬೇಕಾ?" ಕೇಳಿದೆ.
"ಹೌದು" ಉತ್ತರಿಸಿದರು ಮಹಾನುಭಾವ.
"ಬೆಳಿಗ್ಗೆಯಿಂದ ಸಂಜೆಯವರೆಗೂ ಪಾಠ ಮಾಡುತ್ತಿದ್ದರೆ ನಾವು ರೆಸ್ಟ್ ಮಾಡೋದು ಹೇಗೆ ಸರ್?" ಕೇಳಿದೆ.
"ಎರಡು ಪಿರಿಯಡ್ ಆದಮೇಲೆ ಇಂಟರ್ವಲ್ ಇರುತ್ತಲ್ಲಾ, ಆಗ ರೆಸ್ಟ್ ಸಿಗುತ್ತಲ್ಲಾ.... ಹಾಗೆ, ಮಧ್ಯಾಹ್ನ ಊಟಕ್ಕೂ ಬಿಡುವು ಸಿಗುತ್ತಲ್ಲಾ ಆಗ ರೆಸ್ಟ್ ಮಾಡ್ಕೊಳ್ಳಿ ಅಂದುಬಿಟ್ಟರು! ಬಹುಶಃ ಈತ ನನ್ನನ್ನು ರೋಬೋಟ್ ಎಂದು ಭಾವಿಸಿರಬೇಕು ಎಂದನಿಸಿತು. ಅಲ್ಲಿ ಕೆಲಸ ಮಾಡುವ ಉತ್ಸಾಹ ಯಾವಾಗಲೋ ಹೊರಟುಹೋಗಿತ್ತು. ಬೆಳಗಿನಿಂದ ಸಂಜೆವರೆಗೂ ಮಾತಾಡಿ, ಕೂಗಾಡಿ ಅಲ್ಲಿಯ ಮೇಷ್ಟ್ರುಗಳ ಆರೋಗ್ಯ ಸ್ಥಿತಿ ಏನಾಗಬಹುದು ಎಂದು ಊಹಿಸಿ ಸಣ್ಣಗೆ ಕಂಪಿಸಿದೆ. ಹಾಗೆಯೇ, ಅಲ್ಲಿ ವಿದ್ಯಾರ್ಥಿಗಳಿಗೆ ಸಿಗುವ ಶಿಕ್ಷಣದ ಗುಣಮಟ್ಟ ಕೂಡಾ ಎಂಥದ್ದಿರಬಹುದೆಂದು ಯೋಚಿಸಿದೆ.
ನಿಮ್ಮದು ದೂರದ ಊರು, ಇಲ್ಲಿ ಕೆಲಸ ಕೊಟ್ಟರೆ ಎಲ್ಲಿರುತ್ತಿರಿ? ಕೇಳಿದರು.
"ಬಾಡಿಗೆ ರೂಂ ಮಾಡಿಕೊಂಡಿರುತ್ತೇನೆ ಸರ್" ಹೇಳಿದೆ. ಆದರೆ, ಅಂತರಾಳದಲ್ಲಿ ಇಂತಹ ಜೀತಗಾರಿಕೆಯ ಕೆಲಸ ಯಾವತ್ತೂ ಮಾಡಬಾರದೆಂದು ತೀರ್ಮಾನಿಸಿದ್ದೆ. ಆದರೂ ಸುಮ್ಮನೇ ಉತ್ತರಿಸಿದ್ದೆ.
"ಊಟ ಎಲ್ಲಿ ಮಾಡುತ್ತೀರಿ?"
"ನಾನೇ ಮಾಡಿಕೊಳ್ಳುವೆ ಅಥವಾ ಹೊಟೇಲ್ ನಲ್ಲಿ ಮಾಡುತ್ತೇನೆ" ಅಂದೆ.
"ನಾವು ಕೊಡುವ ಸಂಬಳದಲ್ಲಿ ಅದೆಲ್ಲಾ ಮಾಡಿಕೊಳ್ಳೋಕೆ ಆಗುತ್ತಾ?" ಕೇಳಿದರು.
ಈಗ ಕುತೂಹಲ ಹೆಚ್ಚಿತು.
"ಹಾಗಾದರೆ ಸಂಬಳ ಎಷ್ಟು ಕೊಡುತ್ತೀರಿ ಸರ್?" ಕೇಳಿದೆ.
"ಎಂಟು ಸಾವಿರ" ನಿರುಮ್ಮಳವಾಗಿ ಉತ್ತರಿಸಿ ಸುಮ್ಮನಾದರು.
"ದಿನಕ್ಕೆ ಏಳು ಪಿರಿಯಡ್, ಹಾಗಾದ್ರೆ ವಾರಕ್ಕೆಷ್ಟು? ತಿಂಗಳಿಗೆಷ್ಟು? ಮುಂದೆ ಕಳೆದುಕೊಳ್ಳಲಿರುವ ಆರೋಗ್ಯಕ್ಕೆ ಕಟ್ಟಬೇಕಾದ ಕಂದಾಯವೆಷ್ಟು? ಮನದೊಳಗೆ ಲೆಕ್ಕಾಚಾರ ಹಾಕಲಾರಂಭಿಸಿದೆ.
ಆಧುನಿಕ ಜೀತ ಪದ್ದತಿ ಅಂದ್ರೆ ಇದೇ ಅಲ್ವೇ? ಮಾನವೀಯತೆಯನ್ನೇ ಮರೆತು ಕಾರ್ಮಿಕರನ್ನು ಶೋಷಣೆ ಮಾಡುವ ಶೋಷಕರು ಇಂತವರೇ. ಬಹುಶಃ ನನ್ನ ಸ್ಥಾನದಲ್ಲೇನಾದರೂ ಕಾರ್ಲ್ ಮಾರ್ಕ್ಸ್ ಕುಳಿತುಕೊಂಡಿದ್ದರೆ ಕಥೆ ಬೇರೆಯದೇ ತಿರುವನ್ನು ಪಡೆದುಕೊಳ್ಳುತ್ತಿತ್ತು.
"ಬೇಡ ಬಿಡಿ ಸರ್" ಕಡ್ಡಿಮುರಿದಂತೆ ಹೇಳಿದೆ.
ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತಾ ರೆಸ್ಯೂಮ್ ನಲ್ಲಿ ಏನೋ ಹುಡುಕುತ್ತಾ ಕುಳಿತಿದ್ದವರು, ತಲೆಯೆತ್ತಿ "ಹ್ಞಾಂ?" ಎಂದವರೇ
"ನಿಮ್ಮ ಜಾತಿ ಯಾವುದು?" ಎಂದು ಕೇಳಿಬಿಟ್ಟರು. ಆ ಪ್ರಶ್ನೆ ಅವರಿಗೆ ಅಗತ್ಯವಿರಲಿಲ್ಲ. ಅದು ಅನಗತ್ಯವೆಂದು ಭಾವಿಸಿಯೇ ನಾನು ರೆಸ್ಯೂಮ್ ನಲ್ಲಿ ಜಾತಿ ಬರೆದಿರಲಿಲ್ಲ.
ಇದೊಂದು ಖಾಸಗಿ ಶಾಲೆ, ಜಾತಿ ತಿಳಿದುಕೊಂಡು ಮೀಸಲಾತಿ ಕೊಡುವಂತಹ ಸರ್ಕಾರಿ ಸಂಸ್ಥೆಯಲ್ಲ. ಆದರೂ ಅದರ ಒಡೆಯನಿಗೆ ಜಾತೀಯತೆಯ ಕೊಳಕು ಮನಸ್ಥಿತಿ! ಅವರ ಕೈಯಲ್ಲಿದ್ದ ನನ್ನ ರೆಸ್ಯೂಮ್ ನ ಮೆಲ್ಲಗೆ ಎಳೆದುಕೊಂಡು ಆತನ ಪ್ರಶ್ನೆಗೆ ಉತ್ತರಿಸುತ್ತಾ ಹೊರಬಂದೆ. ಗೋಡೆಯ ಮೇಲೆ ಬಸವಣ್ಣನ ಫೋಟೋ ಕಾಣಿಸಿತು!
*************************
ವೈಯಕ್ತಿಕವಾಗಿ ಹೇಳಬೇಕೆನಿಸಿದರೆ, ಹೋಟೆಲ್ ಗೆ ಹೋಗಿ ಇಡ್ಲಿ ಅಥವಾ ದೋಸೆ ತಿನ್ನುವಾಗ ಎರಡನೇ ಸಲಕ್ಕೆ ಚಟ್ನಿ ಕೇಳಲು ನನಗೆ ತುಂಬಾ ಸಂಕೋಚವಾಗಿಬಿಡುತ್ತೆ. ಅದರಲ್ಲೇ ಅಡ್ಜೆಸ್ಟ್ ಮಾಡಿಕೊಂಡು ತಿಂದುಬಿಡುತ್ತೇನೆ. ದುಡ್ಡು ಕೊಟ್ಟೇ ತಿನ್ನುತ್ತೇನಾದರೂ ಮತ್ತೆ ಚಟ್ನಿ ಕೇಳಲು ಸಂಕೋಚ ಕಾಡಿಬಿಡುತ್ತೆ. ಹಲವರಂತೂ ಸಂಕೋಚಬಿಡಿ, ಟೀ ಆಯ್ತಾ? ತಿಂಡಿ ಆಯ್ತಾ? ಊಟ ಆಯ್ತಾ? ಎಂಬಷ್ಟೇ ಸಹಜವಾಗಿ "ನಿಮ್ಮದು ಯಾವ ಜಾತಿ ?" ಎಂದು ಕೇಳಿಬಿಡುತ್ತಾರೆ. Irritate ಆಗಿಬಿಡುತ್ತೆ. ಅನೇಕ ಸಲ ಬಸ್ಸಿನಲ್ಲಿ ಪಯಣಿಸುವಾಗ ಪಕ್ಕದಲ್ಲಿ ಕುಳಿತ ಸಹಪ್ರಯಾಣಿಕರು "ಯಾವೂರಿಗೆ ಹೋಗಬೇಕು?" ಎಂದು ಮೊದಲಪ್ರಶ್ನೆ ಕೇಳಿರುತ್ತಾರೆ. ನಾನು ಉತ್ತರಿಸುತ್ತೇನೆ.
ನಾಲ್ಕೈದು ನಿಮಿಷದ ಮಾತುಕತೆ ಮುಗಿಯುವುದರೊಳಗೆ "ನಿಮ್ಮ ಜಾತಿ ಯಾವುದು?" ಪ್ರಶ್ನೆ ಕೇಳಿಬಿಡುತ್ತಾರೆ. ಎಷ್ಟೋಸಲ ನನ್ನ ಹೆಸರು ಕೂಡಾ ಕೇಳಿ ತಿಳಿದುಕೊಂಡಿರುವುದಿಲ್ಲ!
"ನನ್ನ ಹೆಸರು ತಿಳಿದುಕೊಳ್ಳುವುದಕ್ಕೂ ಮುಂಚೆಯೇ ಜಾತಿಯನ್ನು ಕೇಳುತ್ತೀರಲ್ಲಾ...? ನನ್ನ ಹೆಸರಿಗಿಂತ ಜಾತಿ ಮುಖ್ಯವಾಯಿತೇ? ಎಂದು ಕೇಳುತ್ತೇನೆ.
***************************
ಇನ್ನು ಕೆಲವರು ಜಾಣರು. ಜೊತೆಯಲ್ಲಿ ಕೆಲಸ ಮಾಡುವವರು, ಸ್ವಲ್ಪ ಪರಿಚಯಸ್ಥರು ನೇರವಾಗಿ ಜಾತಿ ಕೇಳದೇ, ನೀವು ಓಬಿಸಿ ಅಲ್ವಾ? ನೀವು 2A ಅಂದಿದ್ರಿ ಅಲ್ವಾ? ಅಂತ ಕೇಳಿಬಿಡುತ್ತಾರೆ. ಅರೇ! ನಾನ್ಯಾವಾಗ ಓಬಿಸಿ ಅಂದಿದ್ದೆ? ನಾನ್ಯಾವಾಗ 2A, 2B ಅಂದಿದ್ದೆ? ಅಂತ ಅಂದುಕೊಳ್ಳುತ್ತೇನೆ.
ಗಿರೀಶ್ ಕಾರ್ನಾಡ್ ರ "ತಲೆದಂಡ" ನಾಟಕ (ಒಂದನೇ ಅಂಕ, ಎರಡನೇ ದೃಶ್ಯ)ದಲ್ಲಿ ಕಲ್ಯಾಣದ ದೊರೆ ಬಿಜ್ಜಳನು ಆಡುವ ಮಾತು ನೆನಪಾಗುತ್ತದೆ. "ಜಾತಿ ಅಂದರ ಮೈ ತೊಗಲಿದ್ದಾಂಗ. ಅದನ್ನು ಸುಲಿದು ಕಿತ್ತು ಒಕ್ಕೊಟ್ಟರೂ ಹೊಸ ತೊಗಲು ಬಂದ ಗಳಿಗ್ಗೆ ಎಲ್ಲರ ಕಣ್ಣು ಬೀಳೋದು ಅದ.... ಅದ ಹಳೇ ಜಾತಿ. ಇವ ಹೊಲೆಯ, ಇವ ಕ್ಷತ್ರಿಯ, ಇವ ಕುರುಬ. ಇದು ಈ ನಾಡಿನ ಗುಣ. ಈ ನೀರಿನ ಗುಣ..!"
ಈ ಸಂಭಾಷಣೆ ವಾಸ್ತವದ "ಜಾತಿ ಭಾರತ"ಕ್ಕೆ ಹಿಡಿದ ಕೈಗನ್ನಡಿಯಂತಿದೆ, ಅಲ್ಲವೇ...?
- ನಿಮ್ಮವನು,
ರಾಜ್

.jpeg)


