ಭಾನುವಾರ, ಏಪ್ರಿಲ್ 23, 2023

ಬಸವಣ್ಣ - ಅಂಬೇಡ್ಕರ್ ಮತ್ತು ನಾವು

    
    ಜಗಜ್ಯೋತಿ ಬಸವಣ್ಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ರು ಮನುಕುಲದ ಮಹಾತ್ಮರು. ಇವರಿಬ್ಬರೂ ಜಾತಿಪದ್ಧತಿ, ಅಸ್ಪೃಶ್ಯತೆಯ ವಿರುದ್ಧ ಹೋರಾಡಿದವರು. ವಿಪರ್ಯಾಸವೆಂದರೆ, ಇಂದು ಇವರಿಬ್ಬರ ತತ್ವ ಚಿಂತನೆ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಅನುಸರಿಸುವವರ ಸಂಖ್ಯೆ ತುಂಬಾ ವಿರಳ. ಬಸವಣ್ಣನವರನ್ನು ಆದರ್ಶವಾಗಿಟ್ಟುಕೊಂಡ "ಅನೇಕರು" ಜಾತಿಯ ಮೇಲರಿಮೆಯಿಂದ ಬಳಲುತ್ತಿರುವವರೇ. ಬಹುತೇಕ ಊರುಗಳಲ್ಲಿ (ಅದರಲ್ಲೂ ಹಳ್ಳಿಗಳಲ್ಲಿ) ಜಾತಿ ತಾರತಮ್ಯ, ಅಸ್ಪೃಶ್ಯತೆಯನ್ನು ಜೀವಂತವಾಗಿಟ್ಟವರಲ್ಲಿ ಇಂತವರ ಪಾಲು ಅಧಿಕ. 


 ಇನ್ನು ದಲಿತರು (ಬಹುತೇಕ) ಕೂಡಾ ಕಮ್ಮಿಯೇನಿಲ್ಲ. ಸ್ವತಃ ತಾವು ದಲಿತರಾಗಿದ್ದು, ಅಸ್ಪೃಶ್ಯತೆಯನ್ನು ಆಳವಾಗಿ ಅನುಭವಿಸಿದ್ದರೂ ಕೂಡಾ ದಲಿತ ಜಾತಿಯ ಶ್ರೇಣೀಕೃತ ವ್ಯವಸ್ಥೆಯಲ್ಲಿ ಅವರು ನವಬ್ರಾಹ್ಮಣ್ಯವನ್ನು ಆಚರಿಸುವವರೇ. ದಲಿತರಲ್ಲಿ ಮೇಲ್ಜಾತಿಯ ದಲಿತ(!)ರೆಂದುಕೊಂಡವರು ಕೆಳಜಾತಿಯ ದಲಿತರನ್ನು ಅದೇ ಅಸ್ಪೃಶ್ಯಭಾವದಿಂದ ಕಾಣುತ್ತಾರೆ. ಇವರದು ಕೂಡಾ ಜಾತಿಯ ಮೇಲರಿಮೆ. ತಾವು ಜಾತಿಯ ವಿಷಯದಲ್ಲಿ ಶೋಷಣೆಯನ್ನು ಅನುಭವಿಸಿ, ಅದೇ ಜಾತಿಯನ್ನು ಹಿಡಿದು ಇನ್ನೊಬ್ಬರನ್ನು ಶೋಷಿಸುವವರು. ತಾವು ಅನುಭವಿಸಿದ ನೋವು ಇನ್ನೊಬ್ಬರು ಅನುಭವಿಸಲಿ ಎಂಬ ವಿಲಕ್ಷಣ ಮನಸ್ಥಿತಿ. ಇಂತಹ ದಲಿತ ವ್ಯಕ್ತಿಗಳು ಅಸ್ಪೃಶ್ಯತೆ, ಜಾತಿ ಪದ್ದತಿ ವಿರುದ್ಧ ವೇದಿಕೆಗಳಲ್ಲಿ ಚೀರಾಡುತ್ತಿದ್ದರೆ ಕೇಳಿಬಿಡಬೇಕೆನಿಸುತ್ತದೆ.... "ಇನ್ನು ಎಷ್ಟು ದಿನ ಬ್ರಾಹ್ಮಣ್ಯದ ವಿರುದ್ಧ ಕೂಗಾಡುತ್ತೀರಿ...? ಮೊದಲು ನಿಮ್ಮೊಳಗಿನ ಬ್ರಾಹ್ಮಣ್ಯ ತೊಲಗಿಸಿ. ನಿಮಗಿಂತ ಕೆಳಜಾತಿಯ ದಲಿತರನ್ನು ನಿಮ್ಮವರೆಂದುಕೊಂಡಿದ್ದೀರಾ...?" ಅವರನ್ನು ಎಂದಾದರೂ ನಿಮ್ಮ ಮನೆ-ಮನದೊಳಗೆ ಬಿಟ್ಟುಕೊಂಡಿದ್ದೀರಾ..? ಅವರ ಮನೆಯ ನೀರು ಕುಡಿದಿದ್ದೀರಾ..? ಅನ್ನ ತಿಂದಿದ್ದೀರಾ..? ....." ಹೀಗೆ ಜೋರಾಗಿ ಕೂಗಿ ಕೂಗಿ ಕೇಳಬೇಕೆನಿಸುತ್ತದೆ. ನಿತ್ತರಿಸಿಕೊಳ್ಳಲಾಗದೇ ಒಮ್ಮೆ ಕೇಳಿಯೂ ಬಿಟ್ಟೆ. ಅಲ್ಲಿದ ಸಮೂಹ ಹುಯ್ಯಲಿಟ್ಟಿತು. "ದಲಿತ ಭಜನಾ ಪರಂಪರೆ" ಯ ಬಗ್ಗೆ ಸೆಮಿನಾರ್ ನಡೆಯುತ್ತಿದ್ದ ಆ ಸಭಾಂಗಣದಲ್ಲಿ ಬಹುತೇಕ ಮೇಲ್ಜಾತಿ(!)ದಲಿತರು ನೆರೆದಿದ್ದರು. ನನ್ನ ಮಾತು ಅನೇಕ ಜನರಿಗೆ ಇರುಸುಮುರಿಸು ಉಂಟುಮಾಡಿತ್ತು. ಹಲವರು ವಿರೋಧ ವ್ಯಕ್ತಪಡಿಸಿದರು. ಸಮಾಜಕ್ಕೆ ಅನಾರೋಗ್ಯವಾದಗಲೆಲ್ಲಾ ಪತ್ರಿಕೆಗಳಲ್ಲಿ ಆಗಾಗ ಕವಿತೆಗಳ ಮೂಲಕ ಚುಚ್ಚುಮದ್ದು ಕೊಡುವ ಒಬ್ಬ ಕವಿ ಮಹಾಶಯರು. ಇಬ್ಬರು ಲೇಖಕಿಯರು ಕಂ ಭಾಷಣಕಾರ್ತಿಯರು ಅಲ್ಲಿದ್ದರು. ಅವರ್ಯಾರು ನನ್ನ ಮಾತಿನ ಪರವಾಗಿ ಧ್ವನಿ ಎತ್ತದೇ ಸುಮ್ಮನಾದರು. ಸಭೆ ಹೊರಗೆ ಬಂದಾಗ ಊಟದ ವೇಳೆಯಲ್ಲಿ ಆ ಕವಿಗಳು ಮತ್ತು ಲೇಖಕಿಯರು ನನ್ನನ್ನು ಸಂತೈಸಿ, ನನ್ನ ಮಾತಿಗೆ ತಮ್ಮ ಸಹಮತವಿದೆಯೆಂದು ಹೇಳಿದರು. ಇದನ್ನೇ ವೇದಿಕೆ ಮೇಲೆ ಹೇಳಬಹುದಿತ್ತಲ್ಲವೇ? ಅಂತ ಕೇಳಿದೆ. "ಇದು ಹೇಳೋ ಸಂದರ್ಭ ಅಲ್ಲ" ಅಂತ ನುಣ್ಣಗೆ ಜಾರಿಕೊಂಡರು. ನಾನು ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿದ್ದರೂ ಒಂದೊಂದ್ಸಲ ಅನ್ಸುತ್ತೆ.... "ಈ ಕವಿಗಳು, ಲೇಖಕರಿಗೆ ಗಟ್ಸ್ ಬರಹದಲ್ಲಿರುತ್ತದೆ ಅಷ್ಟೇ... ಮಾತಾಡುವಾಗ ಇರಲ್ಲ..!" 

  "ಬಸವಣ್ಣ - ಅಂಬೇಡ್ಕರ್ ಅವರನ್ನು ಪ್ರತಿಮೆ - ಜಯಂತಿಗಳಿಗೆ ಮಾತ್ರ ಸೀಮಿತಗೊಳಿಸದೇ ಅವರ ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿಗಳಿಗೆ ಅರ್ಥ ಬರುತ್ತದೆ.


"ಜಾತ್ಯಾತೀತ ಮನಸ್ಸಿನ ಎಲ್ಲರಿಗೂ ಜಗಜ್ಯೋತಿ ಬಸವ ಜಯಂತಿಯ ಶುಭಾಶಯಗಳು" 


-  ನಿಮ್ಮವನು, 
      ರಾಜ್

ಕಾಮೆಂಟ್‌ಗಳಿಲ್ಲ: