ಶುಕ್ರವಾರ, ಏಪ್ರಿಲ್ 14, 2023

ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಾರ್ಡ್ರನ್ ದಲಿತತ್ವ

        
        ಕರ್ನಾಟಕದ ಉಳಿದ ಊರುಗಳಿಗೆ ಹೋಲಿಸಿದರೆ ಗುಲಬರ್ಗದಲ್ಲಿ ಅಂಬೇಡ್ಕರ್ ಜಯಂತಿಯನ್ನು ಒಂದು ಬಹುದೊಡ್ಡ ಹಬ್ಬವೆಂಬಂತೆ ಪ್ರತಿಯೊಬ್ಬ ದಲಿತರ ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಗುಲಬರ್ಗ ಮಹಾರಾಷ್ಟ್ರಕ್ಕೆ ಹತ್ತಿರವಿರುವುದರಿಂದ ಅದರ ಪ್ರಭಾವವೂ ಇರಬಹುದೇನೋ. ಅದು 2015 ರ ಎಪ್ರಿಲ್ 14. ನಾನು ಗುಲ್ಬರ್ಗಕ್ಕೆ ಬಂದು ಕೆಲವು ತಿಂಗಳುಗಳು ಕಳೆದಿದ್ದವು. ಹೊಸ ಊರಾಗಿದ್ದರಿಂದ ಎಲ್ಲವನ್ನು ಕುತೂಹಲದಿಂದ ಗಮನಿಸುತ್ತಿದ್ದೆ. ಅವತ್ತು ಬೆಳಿಗ್ಗೆ ಗುಲ್ಬರ್ಗದ ಕಣ್ಣಿ ಮಾರ್ಕೆಟ್ ಗೆ ಹೋಗಿದ್ದೆ. ಅಲ್ಲಿದ್ದ ಫ್ಲೆಕ್ಸ್ ನನ್ನ ಗಮನ ಸೆಳೆಯಿತು. ಅಂಬೇಡ್ಕರ್ ಜಯಂತಿಗೆ ಶುಭಕೋರಿದ ಫ್ಲೆಕ್ಸ್ ಅದಾಗಿತ್ತು. ಫ್ಲೆಕ್ಸ್ ತುಂಬಾ ವಿಚಿತ್ರ ಕೇಶವಿನ್ಯಾಸದ, ಬಣ್ಣದ ಕನ್ನಡಕ ಧರಿಸಿದ್ದ ಒಂದಿಷ್ಟು ಹುಡುಗರು ದೊಡ್ಡ ಗಾತ್ರದಲ್ಲಿ ತುಂಬಿಕೊಂಡಿದ್ದರು. ಅಲ್ಲಿ ಅಂಬೇಡ್ಕರ್ ರ ಭಾವಚಿತ್ರ ಎಲ್ಲಿದೆ ಅಂತ ಹುಡುಕಾಡಿದರೆ ಮೇಲೆ ಮೂಲೆಯಲ್ಲಿ ಚಿಕ್ಕದಾಗಿ ಮುದ್ರಿಸಲಾಗಿತ್ತು! ಅಂದು ಸಂಜೆ ಬಸ್ ಸ್ಟ್ಯಾಂಡ್ ನಿಂದ ಹಾಸ್ಟೆಲ್ ಕಡೆಗೆ ಸಿಟಿಬಸ್ ನಲ್ಲಿ ಹೊರಟಿದ್ದೆ. ತಿಮ್ಮಾಪುರಿ (ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಲ್) ಸರ್ಕಲ್ ಗೆ ಬಂದಾಗ ಇಡೀ ರಸ್ತೆ ಬ್ಲಾಕ್ ಆಗಿತ್ತು. ರಸ್ತೆಯುದ್ದಕ್ಕೂ ಜನಸಾಗರ! ಅದರ ನಡುವೆ ತೆರೆದ ವಾಹನವೊಂದು ಝಗಮಗಿಸುವ ಬಣ್ಣಬಣ್ಣದ ವಿದ್ಯುದೀಪಗಳೊಂದಿಗೆ ಅಲಂಕೃತವಾಗಿ ಮೆರವಣಿಗೆ ಹೊರಟಿತ್ತು. ಅದರಲ್ಲಿ ಅಬ್ಬರದ ಡಿ.ಜೆ. ಸೌಂಡ್ ನಲ್ಲಿ ನಟ ಪ್ರಭುದೇವನ ‘’ಮುಕಾಬುಲಾ’’ ಹಾಡು ಹೊರಹೊಮ್ಮುತ್ತಿತ್ತು. ನನ್ನ ಪಕ್ಕದಲ್ಲಿ ಕೂತಿದ್ದ ಗೆಳೆಯನನ್ನು ಕೇಳಿದೆ, ಏನಿದು ಕಾರ್ಯಕ್ರಮ? ಅದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಮೆರವಣಿಗೆ ಅಂತ ಅವನು ವಿವರಿಸಿದ. ಅಷ್ಟರಲ್ಲಿ ನಮ್ಮ ಬಸ್ ರಸ್ತೆಯ ಒಂದು ಬದಿಗೆ ನಿಧಾನವಾಗಿ ತೆವಳುತ್ತಾ ಸಾಗಿತು. ಆ ಮೆರವಣಿಗೆಯ ವಾಹನದ ಹತ್ತಿರ ಬಂದಾಗ ನೋಡಿದೆ. ವಾಹನದಲ್ಲಿ ಹೂಗಳಿಂದ ಅಲಂಕೃತವಾದ ಬಾಬಾಸಾಹೇಬ್ ಅಂಬೇಡ್ಕರ್ ರ ದೊಡ್ಡದಾದ ಭಾವಚಿತ್ರವಿತ್ತು. ವಾಹನದ ಎದುರಿಗೆ ವಿಚಿತ್ರ ಕೇಶವಿನ್ಯಾಸದ, ಕೇಶಕ್ಕೆ ಕಂದು ಬಣ್ಣ ಬಳಿದುಕೊಂಡ, ಕಿವಿಗೆ ಓಲೆ ಚುಚ್ಚಿಸಿಕೊಂಡ, ಕೈಗೆ ಚೈನು-ದಾರ ಸುತ್ತಿಕೊಂಡ, ಕೊರಳಲ್ಲಿ ಥರೆವಾರಿ ಬಣ್ಣದ ಮಣಿಸರಗಳನ್ನು ಧರಿಸಿಕೊಂಡು, ಶರ್ಟ್ ಗುಂಡಿ ಬಿಚ್ಚಿಕೊಂಡು ಕೆಲವು ಯುವಕರು ನಟ ಪ್ರಭುದೇವನ "ಮುಕಾಬುಲಾ” ಹಾಡಿನ ಡಿ.ಜೆ. ಸೌಂಡ್ ಗೆ ಹುಚ್ಚೆದ್ದು ಕುಣಿಯುತ್ತಿದ್ದರು. ಅವರ ವೇಷಭೂಷಣಗಳನ್ನು ಗಮನಿಸಿದರೆ ಅವರು ಹೆಚ್ಚಿಗೆ ಓದಿಕೊಂಡವರಲ್ಲ, ಕಾಲೇಜು ಮೆಟ್ಟಿಲು ಹತ್ತಿದವರಲ್ಲ ಎಂದು ಗೊತ್ತಾಗುತ್ತಿತ್ತು.. ಬಾಬಾ ಸಾಹೇಬ್ ಅಂಬೇಡ್ಕರ್ ರು ವಿದ್ಯೆಯ ಮಹತ್ವವನ್ನು ಸಾರಿದವರು. ಬದುಕಿನ ಎಲ್ಲಾ ಸಂಕೋಲೆಗಳಿಂದ ನಮ್ಮನ್ನು ಬಿಡುಗಡೆಗೊಳಿಸುವುದು ವಿದ್ಯೆಯಿಂದ ಮಾತ್ರ ಸಾಧ್ಯ ಎಂದು ಹೇಳಿದವರು. ನಾವು ಓದಿ ವಿದ್ಯಾವಂತ, ಪ್ರಜ್ಞಾವಂತರಾಗುವುದೇ ಬಾಬಾಸಾಹೇಬರಿಗೆ ನಾವು ಕೊಡುವ ನಿಜವಾದ ಗೌರವ ಅಲ್ಲವೇ..? ಈ ಮೆರವಣಿಗೆಯ ರೀತಿ ನೋಡಿ ನನಗನಿಸಿದ್ದಿಷ್ಟೇ….. ಯಾವುದೋ ಸಿನಿಮಾ ಹಾಡಿನ ಉನ್ಮಾದಕ್ಕೆ ಒಳಗಾಗಿ, ಅಬ್ಬರದ ಸಂಗೀತಕ್ಕೆ ಉನ್ಮತ್ತರಾಗಿ ಕುಣಿಯುವುದಕ್ಕಿಂತ ಅಂಬೇಡ್ಕರ್ ರ ಜೀವನ - ಸಾಧನೆ - ಹೋರಾಟಗಳ ಬಗ್ಗೆ ಕನ್ನಡದಲ್ಲೇ ನೂರಾರು ಹಾಡುಗಳಿವೆ. ಅವುಗಳನ್ನು ಬಳಸಿಕೊಂಡು ಸರಳ ಸುಂದರ ಸೌಮ್ಯವಾಗಿ ನೃತ್ಯ ಮಾಡಿದ್ದರೆ ಹೆಚ್ಚು ಸೂಕ್ತವಾಗುತ್ತಿತ್ತು. ಹಾಗೂ ನೋಡುವವರಿಗೂ ಹಿತವೆನಿಸುತ್ತಿತ್ತು.


*********************************** 
    
    ನನ್ನ ಪರಮಾಪ್ತ ಗೆಳತಿಯೊಬ್ಬಳು ಎಂ.ಎ ಪದವೀಧರೆ. ಅವಳ ಕುಟುಂಬ ದಲಿತ ರಾಜಕಾರಣಿಯೊಬ್ಬರ ಉಗ್ರ ಅಭಿಮಾನಿಗಳು. ಅದಕ್ಕೆ ನನ್ನ ತಕರಾರೇನಿರಲಿಲ್ಲ. ಅವರವರ ಅಭಿಮಾನ ಅನ್ಕೊಂಡಿದ್ದೆ. ಒಮ್ಮೆ ನನ್ನ ಈ ಗೆಳತಿ ಮಾತಾಡುತ್ತಾ ಆ ದಲಿತ ರಾಜಕಾರಣಿಯನ್ನು ಉಲ್ಲೇಖಿಸಿ “ಅವರು ಎರಡನೇ ಅಂಬೇಡ್ಕರ್” ಅಂದುಬಿಟ್ಟಳು! ಒಂದು ಕ್ಷಣ ತಲೆ ತಿರುಗಿದಂತಾಯಿತು. ಅಂಬೇಡ್ಕರ್ ಅವರ ವ್ಯಕ್ತಿತ್ವದ ಅಗಾಧತೆಯ ಬಗ್ಗೆ ಅರಿವಿದ್ದವರು ಈ ಬಗೆಯ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಯಾರೋ ಅವಿದ್ಯಾವಂತ ವ್ಯಕ್ತಿಯೊಬ್ಬ ಹೀಗೆ ಮಾತಾಡಿದ್ದರೆ ನಿರ್ಲಕ್ಷಿಸಬಹುದಿತ್ತು. ಇವಳು ಎಂ.ಎ. ಓದಿಕೊಂಡು ಶುದ್ಧ ಅಪ್ರಬುದ್ಧಳಂತೆ ಎಳಸು ಎಳಸಾಗಿ ಮಾತಾಡಿದ್ದನ್ನು ಕಂಡು ರೇಗಿದೆ. “ಈ ಜಗತ್ತಿಗೊಬ್ಬನೇ ಸೂರ್ಯ, ಈ ಜಗತ್ತಿಗೊಬ್ಬನೇ ಚಂದ್ರ.... ಹಾಗೆಯೆ ಈ ಜಗತ್ತಿಗೊಬ್ಬರೇ ಅಂಬೇಡ್ಕರ್. ಅವರನ್ನು ಯಾರೊಂದಿಗೂ ಹೋಲಿಸಲಾಗದು” ಅಂದೆ. ಅವಳು ಒಂದಿಷ್ಟು ಕಾಲ ಮುನಿಸಿಕೊಂಡಿದ್ದಳು. “ಹೋಗ್ಲಿ, ಅಂಬೇಡ್ಕರ್ ಬಗ್ಗೆ ಏನನ್ನು ಓದಿಕೊಂಡಿದ್ದಿಯ?” ಅಂತ ಕೇಳಿದಾಗಲೂ ಅವಳಲ್ಲಿ ಉತ್ತರವಿರಲಿಲ್ಲ. ಅಂಬೇಡ್ಕರ್ ರ ಬದುಕಿನ ಕಥೆ ಓದಿ, ಕೇಳಿ ತಿಳಿದುಕೊಂಡಿದ್ದನ್ನು ಹೊರತುಪಡಿಸಿದರೆ ತಲೆಯಲ್ಲಿ ಬರೀ ಭಾವುಕತೆ ಮಾತ್ರ ತುಂಬಿಕೊಂಡಿದ್ದಳು. ಇದು ಕೇವಲ ನನ್ನ ಗೆಳತಿಯ ಸ್ಥಿತಿ ಮಾತ್ರವಲ್ಲ, ಇಂದು ಬಹುತೇಕರು ಅಂಬೇಡ್ಕರ್ ರನ್ನು ಭಾವುಕವಾಗಿ ಪ್ರೀತಿಸ್ತಾರೆಯೇ ಹೊರತು, ಅವರ ವಿಚಾರಧಾರೆಗಳನ್ನು ತಿಳಿದುಕೊಂಡು, ಅವರನ್ನು ಸೈದ್ಧಾಂತಿಕವಾಗಿ ಸ್ವೀಕರಿಸುವವರ, ಅನುಸರಿಸುವವರ ಸಂಖ್ಯೆ ತುಂಬಾ ಕಡಿಮೆ. ಅದರಲ್ಲೂ ಇವತ್ತಿನ ವಾಟ್ಸಾಪ್ ಮತ್ತು ಫೇಸ್ ಬುಕ್ ಯೂನಿವರ್ಸಿಟಿಗಳು ಯಾರದೋ ಹೇಳಿಕೆಗಳಿಗೆ ಬಾಬಾಸಾಹೇಬರ ಫೋಟೊ - ಹೆಸರು ಅಂಟಿಸಿ ಅವರ ಹೆಸರಿಗೆ ಕಳಂಕ ತರುವುದಲ್ಲದೇ ಜನರಲ್ಲೂ ಅದೇ ಮನೋಭಾವ ಬಿತ್ತಲಾಗುತ್ತಿದೆ. ಈ ಲಿಂಕ್ ನೋಡಿ : https://www.facebook.com/profile.php?id=100069370945613... ಈ ಫೇಸ್ ಬುಕ್ ನ ಈ ಫೇಕ್ ಪೇಜ್ ಅಂಬೇಡ್ಕರ್ ರ ಹೆಸರಿನಲ್ಲಿ ವಿಷಕಾರಿ ವಿಚಾರಗಳನ್ನು ಸಮಾಜದಲ್ಲಿ ಪಸರಿಸುತ್ತಿದೆ. ಇಂತಹ ಮೆಸೇಜ್ ಗಳೇ ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವುದು. ಮತ್ತು ಅನೇಕರು ಇದನ್ನೇ ನಿಜವೆಂದು ಭಾವಿಸುವುದು.
 

 ******************************** 
     
    ಇನ್ನು ಕೆಲವರಿರುತ್ತಾರೆ. ಅಂಬೇಡ್ಕರ್ ರನ್ನು ಆಳವಾಗಿ ಓದಿಕೊಂಡಿರುತ್ತಾರೆ. ಅಂಬೇಡ್ಕರ್ ಹೆಸರಿನಿಂದ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಅಂಬೇಡ್ಕರ್ ರ ತತ್ವಗಳನ್ನು ಗಾಳಿಗೆ ತೂರಿ ಕಡುಭ್ರಷ್ಟರಾಗಿ ದಲಿತರನ್ನೇ ಶೋಷಿಸುತ್ತಿರುತ್ತಾರೆ. ಇಂತವರನ್ನು ನೋಡಿದಾಗ ನಿಜಕ್ಕೂ ಅಸಹ್ಯವೆನಿಸುತ್ತದೆ. ನಾನು ಹತ್ತಿರದಿಂದ ನೋಡಿರುವ ಯೂನಿವರ್ಸಿಟಿಯ ಪ್ರೊಪೆಸರ್ ಒಬ್ಬರಿದ್ದಾರೆ. ಜಾತಿಯಿಂದ ದಲಿತರು. ಅಂಬೇಡ್ಕರ್ ಸಾಹಿತ್ಯ, ದಲಿತ ಸಾಹಿತ್ಯವನ್ನೆಲ್ಲಾ ಅರೆದು ಕುಡಿದುಬಿಟ್ಟಿದ್ದಾರೆ. ಭಾಷಣಕ್ಕೆ ನಿಂತರೆ ದಲಿತಪರ ಕಾಳಜಿ, ಅಂಬೇಡ್ಕರ್ ಚಿಂತನೆಗಳ ಬಗ್ಗೆ ತಾಸುಗಟ್ಟಲೆ ನಿರರ್ಗಳವಾಗಿ ಮಾತಾಡುತ್ತಾರೆ. ಬಹಿರಂಗ ಸಭೆಗಳಲ್ಲಿ, ಯೂನಿವರ್ಸಿಟಿಯ ಸೆಮಿನಾರುಗಳಲ್ಲಿ ಜಾತಿವ್ಯವಸ್ಥೆ, ದಲಿತ ಶೋಷಣೆ, ಅಸ್ಪೃಶ್ಯತೆಯನ್ನು ವಿರೋಧಿಸಿ ಗರ್ಜಿಸುತ್ತಾರೆ. ದಲಿತ ವಿದ್ಯಾರ್ಥಿಗಳ ಪಾಲಿಗೆ ಗಾಡ್ ಫಾದರ್ ಎಂಬಂತೆ ಸಮಾಜದಲ್ಲಿ ಬಿಂಬಿಸಿಕೊಂಡಿದ್ದಾರೆ. ಆದರೆ ಅವರ ಸಾರ್ವಜನಿಕ ಜೀವನಕ್ಕೂ ಮತ್ತು ವೈಯಕ್ತಿಕ ಬದುಕಿಗೂ ಅಗಾಧ ವ್ಯತ್ಯಾಸವಿದೆ. ‘ದಲಿತರೆಂದರೆ ಕೇವಲ ತಮ್ಮ ಸ್ವಜಾತಿಯವರು ಮಾತ್ರ, ಸ್ವಜಾತೀಯರ ಉದ್ಧಾರವೇ ಸಮಸ್ತ ದಲಿತರ ಉದ್ಧಾರ’ ಎಂಬಂತಿದೆ ಅವರ ನಿಲುವು. ಅವರ ಬದುಕಿನಲ್ಲಿ ಸ್ವಜಾತಿಯ ವಿದ್ಯಾರ್ಥಿಗಳಿಗೆ ಹೊರತುಪಡಿಸಿ ಇತರೆ ಜಾತಿಯವರಿಗೆ ಪಿ.ಎಚ್ಡಿ ಮಾರ್ಗದರ್ಶನ ಮಾಡಿಲ್ಲ. ಉಳಿದ ದಲಿತ ವಿದ್ಯಾರ್ಥಿಗಳ ಕುಂದುಕೊರೆತೆಗಳ ಬಗ್ಗೆ ತಲೆಕೆಡಿಸಿಕೊಂಡವರೇ ಅಲ್ಲ. ಅವರನ್ನು ದೂರವೇ ಇಟ್ಟಿರುವುದರ ಜೊತೆಗೆ ಎಡ-ಬಲಗಳ ನಡುವೆ ಕಿಡಿಯಿಡುವ ಕೆಲಸವನ್ನೂ ಮಾಡಿದ್ದಾರೆ. ಜಾತಿ ವ್ಯವಸ್ಥೆ, ಸಾಮಾಜಿಕ ನ್ಯಾಯ, ಅಂಬೇಡ್ಕರ್ ಚಿಂತನೆಗಳ ಬಗ್ಗೆ ಡಜನ್ ಗಟ್ಟಲೇ ಕೃತಿಗಳನ್ನು ಬರೆದಿರುವ ಈ ಮಹಾನುಭಾವರು ವೈಯಕ್ತಿಕ ಜೀವನದಲ್ಲಿ ಬಾಬಾ ಸಾಹೇಬರ ನಿಲುವುಗಳನ್ನು ಕಿತ್ತಿಂಚೂ ಅಳವಡಿಸಿಕೊಂಡಿಲ್ಲ. ತನ್ನ ಜಾತಿಯನ್ನೇ ಅಸ್ತ್ರವನ್ನಾಗಿಸಿಕೊಂಡು ಯೂನಿವರ್ಸಿಟಿಯಲ್ಲಿ ಪ್ರಭಾವಶಾಲಿಯಾಗಿ ಬೆಳೆದಿದ್ದಾರೆ. ಜೊತೆಗೆ ಅವರ ಅಪಾರ ವಿದ್ವತ್ತು, ದಲಿತಪರ ಚಿಂತನೆಗಳು, ಬರೆದ ಕೃತಿಗಳು, ಪ್ರಖರ ಭಾಷಣಗಳು.... ಅವರನ್ನು ಸಮಾಜದಲ್ಲಿ ದಲಿತೋದ್ಧಾರಕ ಎಂಬಂತೆ ಬಿಂಬಿಸಿವೆ. ಹೋಗಲಿಬಿಡಿ, ಅವರು ತಮ್ಮ ಜಾತಿಯ ವಿದ್ಯಾರ್ಥಿಗಳನ್ನಾದರೂ ಉದ್ಧಾರ ಮಾಡುತ್ತಿದ್ದರಾ? ಎಂದು ನೋಡಿದರೆ ಹೇವರಿಕೆಯಾಗುತ್ತದೆ. ಪಿಎಚ್.ಡಿ ಸಂಶೋಧನೆ ಕೈಗೊಳ್ಳುವ ಪ.ಜಾತಿ/ಪ.ಪಂ ದ ವಿದ್ಯಾರ್ಥಿಗಳು ಜೆ.ಆರ್.ಎಫ್. ಪಾಸು ಮಾಡಿಕೊಂಡಿದ್ದರೆ ಅಥವಾ ಯುಜಿಸಿ ಯ ‘ರಾಜೀವ್ ಗಾಂಧಿ ಫೆಲೋಶಿಪ್’ ಗೆ ಆಯ್ಕೆಯಾಗಿದ್ದರೆ ಪ್ರತಿ ತಿಂಗಳು ಮೂವತ್ತು ಸಾವಿರ ರೂ ಫೆಲೋಶಿಪ್ ನೀಡಲಾಗುತ್ತದೆ. ಬಹುತೇಕ ವಿದ್ಯಾರ್ಥಿಗಳು ಈ ಎರಡರಲ್ಲಿ ಒಂದು ಆಯ್ಕೆ ಆಗಿರುತ್ತಾರೆ. ತನ್ನ ಮಾರ್ಗದರ್ಶನದಲ್ಲಿ ಪಿಎಚ್.ಡಿ ಮಾಡುವ ಇಂತಹ ವಿದ್ಯಾರ್ಥಿಗಳಿಂದ ಆಗಾಗ ಹಣ ಪೀಕುತ್ತಾನೆ ಈ ಪ್ರೊಫೆಸರ್. ಹಣ ನೀಡದಿದ್ದರೆ ಫೆಲೊಶಿಪ್ ಫೈಲ್ ಗೆ ಸಹಿ ಹಾಕದೇ ಗೋಳಾಡಿಸಿ ಜೊತೆಗೆ ಇತರೆ ತೊಂದರೆ ನೀಡುತ್ತಾರೆ. ವಿದ್ಯಾರ್ಥಿಗಳು ಅಸಹಾಯಕರಾಗಿ ಹಣ ನೀಡುತ್ತಾರೆ. ಪ್ರತಿ ತಿಂಗಳು ಲಕ್ಷಾಂತರ ರೂ ಸಂಬಳ ಪಡೆಯುವ ಈ ಪ್ರೊಫೆಸರ್ ಸ್ವತಃ ದಲಿತರಾಗಿದ್ದು ದಲಿತ ವಿದ್ಯಾರ್ಥಿಗಳನ್ನು ಉದ್ಧಾರ ಮಾಡುವುದು ಒತ್ತಟ್ಟಿಗಿರಲಿ, ಅವರನ್ನೇ ಸುಲಿಗೆ ಮಾಡುತ್ತಿರುವುದು ಅಸಹ್ಯದ ಪರಮಾವಧಿಯೇ ಸರಿ. ಇಂತವರಿಗೆ ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಇಲ್ಲ. ಇಂದು ದಲಿತರ ಮೇಲೆ ಶೋಷಣೆಯಾಗುವುದು ಇಂತಹ ವಿದ್ಯಾವಂತ ದಲಿತರಿಂದಲೇ. ಇದಕ್ಕೆ ಮುಕ್ತಿ ಯಾವಾಗ..? 


 - ನಿಮ್ಮವನು, 
     ರಾಜ್


ಕಾಮೆಂಟ್‌ಗಳಿಲ್ಲ: