ಸೋಮವಾರ, ಅಕ್ಟೋಬರ್ 7, 2019

ಚಿತ್ರದುರ್ಗ ಎಂದ ಕೂಡಲೇ ನನಗೆ ಮೊದಲು ನೆನಪಾಗುವುದು ಕೋಟೆಯಲ್ಲ...!

ನಾನಾಗ ಪಿಯುಸಿ ಓದುತ್ತಿದ್ದೆ. ಯಥಾಪ್ರಕಾರ ಒಮ್ಮೆ ಲೈಬ್ರರಿಗೆ ಓದಾಗ ಎಲ್ಲಾ ಪತ್ರಿಕೆಗಳನ್ನು ತಿರುವಿ ಹಾಕುತ್ತಾ ತರಂಗ ಪತ್ರಿಕೆಯನ್ನು ಕೈಗೆತ್ತಿಕೊಂಡೆ. ಅದರಲ್ಲಿ ಬಿ. ಎಲ್. ವೇಣು ಅವರ ಹೊಸ ಕಾದಂಬರಿ "ಮಿಂಚಿನಬಳ್ಳಿ" ಧಾರವಾಹಿಯಾಗಿ ಆರಂಭವಾಗಿತ್ತು. ವೇಣು ಅವರ ಬಗ್ಗೆ ಕೇಳಿದ್ದೇನಾದರೂ ಅವರ ಯಾವುದೇ ಬರವಣಿಗೆ ಓದಿರಲಿಲ್ಲ. ಸುಮ್ಮನೇ ಕುತೂಹಲಕ್ಕೆ ಓದತೊಡಗಿದೆ ಅಷ್ಟೆ. ಅವರ ಬರವಣಿಗೆ ನನ್ನನ್ನು ಸಮ್ಮೋಹನಗೊಳಿಸತೊಡಗಿತ್ತು. ಅದ್ಭುತ ಪ್ರೇಮ ಕಥನವದು. ಓದುತ್ತಾ ಓದುತ್ತಾ ಅದರಲ್ಲೇ ಲೀನವಾಗಿಬಿಟ್ಟೆ. ಆಗ ತರಂಗ ಪತ್ರಿಕೆ ಗುರುವಾರ ಬರುತ್ತಿತ್ತು. ಪ್ರತಿ ಗುರುವಾರ ಅದಕ್ಕೋಸ್ಕರವೇ ಕಾಯುತ್ತಿದ್ದೆ. ಕಾಯುವ ಹಾಗೆ ಮಾಡಿಬಿಟ್ಟಿತು ಆ ಧಾರವಾಹಿ. ಸ್ನೇಹ ಮತ್ತು ಪ್ರೇಮ ಎರಡನ್ನೂ ಕಥೆಯಲ್ಲಿ ಹೆಣೆದಿರುವ ಪರಿ ಬಲು ಸೊಗಸು. ಅನಂತ, ರವಿ, ಹೇಮಾ ಈ ಮೂರು ಪಾತ್ರಗಳ ನಡುವೆ ನಡೆಯುವ ಪ್ರೇಮ ಕಥನವೇ "ಮಿಂಚಿನಬಳ್ಳಿ". ಕಥಾನಾಯಕ ಅನಂತ ಪ್ರಸಿದ್ಧ ಕಾದಂಬರಿಕಾರ. ಆದರೆ ಬಡವ. ಇವನ ಸ್ನೇಹಿತ ರವಿ, ಆಗರ್ಭ ಶ್ರೀಮಂತ. ಅಷ್ಟೇ ಹಠಮಾರಿ, ಬೇಕೆನಿಸಿದ್ದನ್ನು ಪಡದೇ ತೀರುವನೆಂಬ ಜಿದ್ದಿನ ಸ್ವಭಾವದವನು. ಆದರೆ ಅನಂತನಿಗೆ ರವಿ ಪ್ರಾಣಸ್ನೇಹಿತ. ಅನಂತ - ಹೇಮಾ ಪರಸ್ಪರ ಪ್ರೀತಿಸುತ್ತಿದ್ದರೂ ಅದರ ಬಗ್ಗೆ ಗೊತ್ತಿಲ್ಲದೆ ತಾನೂ ಹೇಮಾಳನ್ನು ಪ್ರೀತಿಸತೊಡಗುತ್ತಾನೆ. ಅವಳಿಗೆ ಅತ್ಯಂತ ಆತ್ಮೀಯನೂ ಆಗುತ್ತಾನೆ. ಸ್ನೇಹಿತರಿಬ್ಬರೂ ತಮ್ಮ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರೂ ಒಬ್ಬಳನ್ನೇ ತಾವು ಪ್ರೀತಿಸುತ್ತಿರುವುದು ಗೊತ್ತೆ ಇರುವುದಿಲ್ಲ. ಒಮ್ಮೆ ಇಬ್ಬರೂ ಒಬ್ಬಳನ್ನೆ ಪ್ರೀತಿಸುತ್ತಿರುವ ವಿಷಯ ಗೊತ್ತಾಗಿಬಿಡುತ್ತದೆ. ಮುಂದೇನಾಗಿಬಿಡುತ್ತದೆ....? ಹೀಗೆ ಇಂತಹ ತಿರುವುಗಳ ಕಥನಶೈಲಿಯಿಂದ ಓದುಗರ ಕುತೂಹಲ ಅರಳಿಸಿಬಿಡುತ್ತದೆ. ಅನಂತನಿಗೆ ತನ್ನ ಪ್ರೇಮವನ್ನು ತ್ಯಾಗ ಮಾಡಲು ಮನಸ್ಸಿಲ್ಲ. ರವಿಗೂ ಅಷ್ಟೇ ಹೇಮಾಳನ್ನು ಪಡೆದೆ ತೀರುವನೆಂಬ ಛಲ. ಹೇಮಾಗೆ ಇಬ್ಬರೂ ಮುಖ್ಯ. ಸ್ನೇಹ ಮತ್ತು ಪ್ರೇಮದ ಸಂಘರ್ಷದಲ್ಲಿ ಯಾವುದಕ್ಕೆ ಗೆಲುವಾಯಿತು? ಇದನ್ನು ಓದಿಯೇ ಅನುಭವಿಸಬೇಕು.

ಒಂದು ವಾರವೂ ತಪ್ಪಿಸದಂತೆ ಈ ಕಾದಂಬರಿ ಓದಿದ ಮೇಲೆ ನಾನು ವೇಣು ಅವರ ಅಭಿಮಾನಿಯಾದೆ. ನಂತರ ಅವರ ಉಳಿದೆಲ್ಲ ಕಾದಂಬರಿಗಳನ್ನು ಓದಿ ಮುಗಿಸಿದೆ. ಪ್ರೀತಿಯ ಹೂಗಳು, ಮೆಟ್ಟಿಲುಗಳು, ವಜ್ರಕಾಯ, ಪಾರಿವಾಳ, ಮಹಾನದಿ, ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ, ಅಜೇಯ, ಪ್ರೇಮಪರ್ವ, ಕಲ್ಲರಳಿ ಹೂವಾಗಿ ..... ಇತ್ಯಾದಿ ಸುಮಾರು 25 ಕಾದಂಬರಿಗಳನ್ನು ಓದಿಬಿಟ್ಟೆ. ಎಷ್ಟೋ ಕಾದಂಬರಿಗಳನ್ನು ಒಂದೇ sitting ನಲ್ಲಿ ಓದಿ ಮುಗಿಸಿದೆ. ನನ್ನನ್ನು ಆಪ್ತವಾಗಿ ತಾಕಿದ ಕೆಲವೇ ಕೆಲವು ಬರಹಗಾರರಲ್ಲಿ ವೇಣು ಕೂಡಾ ಒಬ್ಬರು. ಅವರ ಕಾದಂಬರಿಗಳನ್ನು ಒಮ್ಮೆ ಓದಿದರೆ ಕಥೆ, ಪಾತ್ರಗಳು ಸುಲಭವಾಗಿ ಮರೆಯಲಾಗುವುದಿಲ್ಲ. ಓದುತ್ತಾ ಓದುತ್ತಾ ಕಣ್ಮುಂದೆಯೇ ದೃಶ್ಯಕಾವ್ಯವಾಗಿ ನಿಂತುಬಿಡುತ್ತವೆ. ವೇಣು ಅವರ ಬಹುತೇಕ ಕಾದಂಬರಿಗಳು ಮೊದಲು ತರಂಗ ವಾರಪತ್ರಿಕೆಯಲ್ಲಿ ಧಾರವಾಹಿಗಳಾಗಿ ಪ್ರಕಟಗೊಂಡಂಥವು. ಇವರ ಧಾರವಾಹಿಗಳಿಂದಾಗಿಯೇ ಪತ್ರಿಕೆ ತನ್ನ ಪ್ರಸರಣ ಸಂಖ್ಯೆಯನ್ನು ಹೆಚ್ಚಿಸಿಕೊಂಡದ್ದು ಸುಳ್ಳಲ್ಲ. ವೇಣುರವರು ಕಾದಂಬರಿಗಳೊಂದಿಗೆ ಕಥೆಗಳನ್ನು ಬರೆದಿದ್ದಾರೆ. ವೈಚಾರಿಕ ಬರಹಗಳನ್ನು ಬರೆದಿದ್ದಾರೆ. ಇವರ ಅನೇಕ ಕಾದಂಬರಿಗಳು ಚಲನಚಿತ್ರಗಳಾಗಿವೆ. ಇಲ್ಲಿಯವರೆಗೆ ಸುಮಾರು ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಸ್ವತಃ ಇವರೇ ಹಲವಾರು ಚಲನಚಿತ್ರಗಳಿಗೆ ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ರಾಶಿ ರಾಶಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಕುವೆಂಪು ವಿ.ವಿ. ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇವರ ಸಾಹಿತ್ಯವನ್ನು ಕುರಿತು ಅಧ್ಯಯನ ನಡೆಸಿ ವಿವಿಧ ವಿಶ್ವವಿದ್ಯಾಲಯಗಳಿಂದ ಮೂವರು ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಇವರ ಬಹುತೇಕ ಕಥೆ ಕಾದಂಬರಿಯ ವಸ್ತು ಜಾತಿ ಮತ್ತು ಪ್ರೇಮ. Ofcourse ಅದು ಜಾತಿವ್ಯವಸ್ಥೆಯ ವಿರುದ್ಧ ಪ್ರೇಮದ ಪ್ರತಿಭಟನೆ..! ನಾನು ಪಿಯುಸಿ ಇದ್ದಾಗ ಮೊದಲ ಬಾರಿಗೆ ಒಂದೇ ದಿನಕ್ಕೆ ಸುಮಾರು 300 ಪುಟ ಓದಿದ್ದೆ, ಅದು ಒಂದೇ sitting ನಲ್ಲಿ. ಅದು ವೇಣು ಅವರ "ಮೆಟ್ಟಿಲುಗಳು" ಕಾದಂಬರಿ. ಇದರಲ್ಲಿ ಆಶ್ಚರ್ಯವೇನಿಲ್ಲ. ವೇಣು ಅವರ ಬರವಣಿಗೆ ಶೈಲಿ ಹಾಗಿದೆ. ನಾವು ಒಂದೆರಡು ಪುಟ ಓದಿದರೆ ಸಾಕು... ಉಳಿದೆಲ್ಲ ಪುಟಗಳನ್ನು ಕಥೆಯೇ ಓದಿಸಿಕೊಂಡು ಹೋಗಿಬಿಡುತ್ತೆ. ಅವರ ಬರವಣಿಗೆ ತಂಗಾಳಿಯಂತೆ. ಹಾಗೆ ನಮ್ಮನ್ನು ತೇಲಿಸಿಕೊಂಡು ಎಲ್ಲಿಗೋ ಕರೆದೊಯ್ದುಬಿಡುತ್ತೆ. ಪ್ರೇಮದ ಬಗ್ಗೆ ಬರೆಯುವಾಗಲಂತೂ ವೇಣು ಅವರ ಪೆನ್ನಿಗೆ ರೆಕ್ಕೆ ಮೂಡಿಬಿಡುತ್ತವೆ. ಪೆನ್ನಿನಲ್ಲಿ ಇಂಕ್ ತುಂಬಿಕೊಂಡು ಬರೆಯುತ್ತಾರೋ ಅಥವಾ ಪ್ರೇಮವನ್ನೇ ಪೆನ್ನಿನಲ್ಲಿ ತುಂಬಿಕೊಂಡು ಬರೆಯುತ್ತಾರೋ ಎಂಬ ಗುಮಾನಿ ಮೂಡಿಸುವಷ್ಟು ರೊಮ್ಯಾಂಟಿಕ್ ಆಗಿ ಬರೆಯುತ್ತಾರೆ.

ಇಂತಹ ಸಾಹಿತಿಯನ್ನು ಹುಡುಕಿಕೊಂಡು 2010 ರಲ್ಲಿ ಒಮ್ಮೆ ಚಿತ್ರದುರ್ಗಕ್ಕೆ ಹೋಗಿದ್ದೆ. ಅದು ಅವರ ಊರು. ಚಿತ್ರದುರ್ಗದ ಕೆಳಗೋಟೆಯ 4th ಕ್ರಾಸ್ ನಲ್ಲಿ ಅವರ ಮನೆಯಿದೆ. ಮನೆಗೆ ಹೋಗಿ ಭೇಟಿಯಾದೆ. ನಮಸ್ಕರಿಸಿ ಖುಷಿಯಿಂದ ತಬ್ಬಿಕೊಂಡೆ. ತಮ್ಮ ಖಾಸಗಿ ಕೋಣೆಯಲ್ಲಿ ಕರೆದೊಯ್ದು ಪ್ರೀತಿಯಿಂದ ಮಾತಾಡಿಸಿದರು. ಅವರ ಭೇಟಿಗೂ ಮುನ್ನ ಅದುವರೆಗೂ ನಾನು ಓದಿದ ಅವರ ಕೃತಿಗಳ ಬಗ್ಗೆ ಟಿಪ್ಪಣಿ ಮಾಡಿಟ್ಟುಕೊಂಡು ಹೋಗಿದ್ದೆ. ಅವುಗಳ ಬಗ್ಗೆ ವಿವರಿಸುತ್ತಾ ತುಂಬಾ ಹೊತ್ತು ಚರ್ಚಿಸಿದೆ. ಅವರಿಗೆ ನನ್ನ ಓದು, ಟಿಪ್ಪಣಿ ಇಷ್ಟವಾಗಿತ್ತು ಅಂತ ಕಾಣುತ್ತೆ. ಸುಮಾರು ಒಂದು ತಾಸಿಗೂ ಮಿಗಿಲಾಗಿ ನನ್ನೊಂದಿಗೆ ಮಾತಾಡಿದರು. ತಾವೇ ನನ್ನನ್ನು ಕರೆದೊಯ್ದು ತಮ್ಮ ಮನೆಯ ಗೋಡೆ ತುಂಬಿಹೋಗುವಂತಿದ್ದ ಶೋಕೇಸ್ ನಲ್ಲಿ ಜೋಡಿಸಿಡಲಾಗಿದ್ದ ಅವಾರ್ಡ್ ಗಳು, ಫೋಟೋಗಳನ್ನು ಒಂದೊಂದಾಗಿ ತೋರಿಸುತ್ತಾ ಅವುಗಳ ಬಗ್ಗೆ ವಿವರಿಸುತ್ತಿದ್ದರು. ಅಷ್ಟೊಂದು ಪ್ರಖ್ಯಾತ ಸಾಹಿತಿಯಾಗಿದ್ದರೂ ನನ್ನಂಥ ಸಾಮಾನ್ಯ ಓದುಗನೊಂದಿಗೆ ಅವರು ಪ್ರೀತಿಯಿಂದ ಬೆರೆತ ರೀತಿ ನನಗೆ ತುಂಬಾ ಖುಷಿಕೊಟ್ಟಿತು. ಅವರ ಮೇಲಿನ ಪ್ರೀತಿ ಅಂದು ದುಪ್ಪಟಾಯಿತು. ಆಟೋಗ್ರಾಫ್ ಬರೆಸಿಕೊಂಡೆ. "ಜಾತಿಗಿಂತ ಪ್ರೀತಿ ಮುಖ್ಯ" ಅಂತ ಬರೆದುಕೊಟ್ಟರು. ಬರುವಾಗ ಅವರಿಗೊಂದು ಮಾತು ಹೇಳಿದೆ... " ಸರ್, ಚಿತ್ರದುರ್ಗ ಎಂದರೆ ಎಲ್ಲರಿಗೂ ಮೊದಲು ಕೋಟೆ ನೆನಪಾಗುತ್ತೆ. ಆದರೆ, ನನಗೆ ನೀವು ನೆನಪಾಗುತ್ತೀರಿ" ಅಂದೆ. ವೇಣು ಅವರ ಮುಖದಲ್ಲಿ ಪ್ರೀತಿ ಬೆರೆತ ಮುಗುಳ್ನಗೆ ತುಂಬಿತ್ತು.

- ನಿಮ್ಮವನು
ರಾಜ್



1 ಕಾಮೆಂಟ್‌:

Unknown ಹೇಳಿದರು...

ನೀವು ಬರಹದಲ್ಲಿ ಜಾದೂಗಾರ ಓದುಗರ ಮೋಡಿಗಾರ. ಹೀಗೆ ಮುಂದುವರಿಯಲಿ ನಿಮ್ಮ ಬರವಣಿಗೆಯ ರಸದೌತಣ.