“ಹಾಯ್ ಬೆಂಗಳೂರ್!” ನಲ್ಲಿ “ಕೇಳಿ” ಎಂಬುದು
ಜನಪ್ರಿಯ ಅಂಕಣ. ಇಲ್ಲಿ ಓದುಗರು
ಮತ್ತು ಸಂಪಾದಕರ ಮಧ್ಯೆ ಒಂದು
ಆತ್ಮೀಯತೆಯನ್ನು ಬೆಳೆಯುತ್ತದೆ. ಓದುಗರ ತಮಾಷೆಯ ಪ್ರಶ್ನೆಗಳು
– ಅದಕ್ಕೆ ಸಂಪಾದಕರ ಕಚಗುಳಿ ಉತ್ತರಗಳು
ಇಲ್ಲಿ ಕಾಣಬಹುದು.
**************
ತುಂಬಾ ವರ್ಷಗಳ ಹಿಂದೆ ಓದುಗರೊಬ್ಬರು
(ಹೆಸರು ನೆನಪಿಲ್ಲ) “ಕೇಳಿ”ಯಲ್ಲಿ ರವಿ
ಬೆಳಗೆರೆಯವರನ್ನು ಪ್ರಶ್ನಿಸಿದ್ದರು.
“ ಪತ್ರಕರ್ತನಾಗದಿದ್ದರೆ
ಏನಾಗುತ್ತಿದ್ರಿ?”
ಅದಕ್ಕೆ
ರವಿ ಬೆಳಗೆರೆಯವರ ಉತ್ತರ ಹೀಗಿತ್ತು “ ಪತ್ರಕರ್ತನಾಗದಿದ್ದರೆ
ಪುತ್ರಕರ್ತನಾಗಿರುತ್ತಿದ್ದೆ!”
ಇಂತಹ ಅನೇಕ ನಗೆಯುಕ್ಕಿಸುವ ಪ್ರಶ್ನೋತ್ತರಗಳ
ಅಂಕಣವಿದು. ರಕ್ತಪಾತಗಳ ಕ್ರೈಂ ಬಗ್ಗೆ ಬರೆಯುವ
ರವಿ ಬೆಳಗೆರೆಯವರು ಇಲ್ಲಿ ಅದಕ್ಕೆ ತದ್ವಿರುದ್ದವಾಗಿ
ನಗೆಯುಕ್ಕಿಸುವಂತೆ ಬರೆಯುತ್ತಾರೆ.
*****************
ಕೆಲವು ಸಲವಂತೂ ಒಂದೇ ವಾಕ್ಯದಲ್ಲಿ
ಎಷ್ಟು ಚೆಂದ ಉತ್ತರಿಸಿದ್ದಾರಲ್ಲ… ಅನಿಸುತ್ತಿತ್ತು.
ಓದುಗರೊಬ್ಬರ
ಪ್ರಶ್ನೆ: ಕೆಲವರು ನಿಮ್ಮ ಬಾಲ್ಯದ
ಬಗ್ಗೆಯೇ ಪ್ರಶ್ನಿಸುತ್ತಾರಲ್ಲ?
ಆರ್.ಬಿ. ಉತ್ತರ : ಅವರಿಗೆ
ನನ್ನ ಬಾಲ ಸಿಗುವುದಿಲ್ಲ, ಹೀಗಾಗಿ…
*****************
ನನ್ನ ಮುಚ್ಚಟೆಯಲ್ಲಿ
ಪರಮಗುರುವು… |
ತುಂಬಾ ಹಿಂದೆಯೇ “ಕೇಳಿ” ಯ ಪ್ರಶ್ನೋತ್ತರಗಳನ್ನು ಒಳಗೊಂಡ ಕೃತಿ ಕೂಡಾ ಪ್ರಕಟವಾಗಿತ್ತು. ಪ್ರತಿವಾರದ ಈ ಅಂಕಣದಲ್ಲಿ ಒಂದೆರಡು ಅತ್ಯುತ್ತಮ ಪ್ರಶ್ನೆಗಳಿಗೆ ತಕ್ಕ ಕಾರ್ಟೂನ್ ಗಳು ಅಲ್ಲಿ ರಚನೆಯಾಗಿರುತ್ತಿದ್ದವು. ಒಮ್ಮೆ ಹೀಗೆ “ಕೇಳಿ” ಓದುತ್ತಿರುವಾಗ ಒಂದು ಕಾರ್ಟೂನ್ (ಕಲಾವಿದರ ಹೆಸರು ನೆನಪಿಲ್ಲ) ನನ್ನ ಗಮನ ಸೆಳೆಯಿತು. ಅದನ್ನು ನೋಡಿದ ಕೂಡಲೇ ನಗು
ಉಕ್ಕಿತು.
ಅಲ್ಲಿ ರವಿ ಬೆಳಗೆರೆಯವರನ್ನು ಗಿ಼ಣಿಶಾಸ್ತ್ರ ಹೇಳುವ ಜ್ಯೋತಿಷಿಯ ಗೆಟಪ್ ನಲ್ಲಿ ಚಿತ್ರಿಸಲಾಗಿತ್ತು. ಅಲ್ಲಿಯ ಪ್ರಶ್ನೆ ಮತ್ತು ಉತ್ತರ ಸ್ಪಷ್ಟವಾಗಿ ನೆನಪಿಲ್ಲವಾದರೂ ಅದರ ಸಾರ ಹೀಗಿತ್ತು…
ಪ್ರಶ್ನೆ: “ಕೇಳಿ”ಯಲ್ಲಿ ಓದುಗರು ಪ್ರಶ್ನೆಯೇ ಕೇಳದಿದ್ದರೆ?
ಉತ್ತರ: ಜ್ಯೋತಿಷಿಯಾಗಿ ಭವಿಷ್ಯದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೆ.
ಆ ಚಿತ್ರ ಎಷ್ಟು ಇಷ್ಟವಾಯಿತೆಂದರೆ ಅದನ್ನು ನೋಡುತ್ತಾ, ಹಾಳೆಯೊಂದರಲ್ಲಿ ಇಂಕ್ ಪೆನ್ನಿನಿಂದ ರೇಖೆ ಎಳೆಯುತ್ತಾ ಚಿತ್ರಿಸಿಕೊಂಡೆ. ಆಗ ನಾನು ಧಾರವಾಡದಲ್ಲಿ ಪದವಿ ಓದುತ್ತಿದ್ದೆ. ಇತ್ತೀಚೆಗೆ ಆ ಚಿತ್ರ ಕೈಗೆ ಸಿಕ್ಕಾಗ ಇದೆಲ್ಲಾ ನೆನಪಾಯ್ತು.
ಅಂದಹಾಗೆ, ಚಿತ್ರ ಹೇಗಿದೆ? ಚೆಂದ ಬಿಡಿಸಿದೀನಾ?
ನಿಮ್ಮವನು.
- ರಾಜ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ