2016 ರ ಡಿಸೆಂಬರ್ 29 ರಂದು ನಸುಕಿನಲ್ಲಿ ಗುಲ್ಬರ್ಗದಿಂದ ನಮ್ಮೂರಿಗೆ ಒಬ್ಬನೇ ಬೈಕ್ ನಲ್ಲಿ ಹೊರಟಿದ್ದೆ, ಹೊಸವರ್ಷದ ಮೊದಲ ದಿನವನ್ನು ಊರಲ್ಲಿ ಕಳೆಯಲು. ಸುಮಾರು 333 ಕಿಲೋ ಮೀಟರ್ ದೂರದ ಸುಧೀರ್ಘ ಹಾದಿಯದು. ಚಳಿಯೆಂಬುದು ಅಲೆಅಲೆಯಾಗಿ ಆವರಿಸುತ್ತಿತ್ತು. ಆಗ ತಾನೇ ಸೂರ್ಯ ನಿಧಾನವಾಗಿ ಮೂಡುತ್ತಿದ್ದ. ಹಾಗೆ ಬದುಕಿನಲ್ಲಿ ಕಳೆದುಹೋದುದರ ಬಗ್ಗೆ ವಿಷಾದಪಡುತ್ತಾ, ಏನೇನೋ ಯೋಚಿಸುತ್ತಾ ಜೇವರ್ಗಿಯನ್ನು ಸಮೀಪಿಸುತ್ತಿದ್ದೆ.... ಅಷ್ಟೇ...! ತಕ್ಷಣ ನನ್ನ ಬೈಕ್ ವೇಗ ಕಡಿಮೆಯಾಯ್ತು. ಎದುರಿಗೆ ಸುಮಾರು 40 ರ ಪ್ರಾಯದ ಒಬ್ಬ ವ್ಯಕ್ತಿ ನಡೆದುಕೊಂಡು ಬರುತ್ತಿದ್ದ. ಒಂದು ಪ್ರಚ್ಛನ್ನ ಮುಂಜಾವಿನಲ್ಲಿ ಹಾಗೆ ಬರುತ್ತಿದ್ದವನನ್ನು ಕಂಡು ಒಂದು ಕ್ಷಣ ಗಲಿಬಿಲಿಗೊಂಡೆ. ತಕ್ಷಣವೇ ಸಾವರಿಸಿಕೊಂಡು ಗಮನಿಸಿದೆ.
ನನ್ನ ಗಲಿಬಿಲಿಗೆ ಕಾರಣ..... ಆ ವ್ಯಕ್ತಿ ಮೈಮೇಲೆ ಒಂದು ತುಂಡು ಬಟ್ಟೆಯಿಲ್ಲದೇ ಸಂಪೂರ್ಣ ನಗ್ನನಾಗಿ, ಯಾವುದೇ ಸಂಕೋಚವಿಲ್ಲದೇ ನಿರ್ಭಿಡೆಯಿಂದ, ಮಂದಸ್ಮಿತನಾಗಿ, ಪುಟ್ಟ ಮಗುವಿನಂತೆ ನಡೆದುಕೊಂಡು ಬರುತ್ತಿದ್ದ...! ಆತ ಹುಚ್ಚನೂ ಆಗಿರಲಿಲ್ಲ. ಆತನೊಬ್ಬ ಜೈನ ದಿಗಂಬರ ಸನ್ಯಾಸಿ...! ಆತನ ಮುಖದಲ್ಲಿ ದಿವ್ಯ ತೇಜಸ್ಸು ಕಾಣಿಸುತ್ತಿತ್ತು. ಆ ಗದಗುಟ್ಟುವ ಚಳಿಯಲ್ಲಿ ರಾತ್ರಿಯಿಡೀ ಎಲ್ಲಿಂದ ನಡೆದುಕೊಂಡು ಬಂದಿದ್ದನೋ...? ಜೇವರ್ಗಿ ದಾಟಿ ಗುಲ್ಬರ್ಗ ದ ಕಡೆಗೆ ಹೆಜ್ಜೆಹಾಕುತ್ತಿದ್ದ .... ಆತ ಯಾರ ಮನೆಯ ಮಗನೋ...? ಯಾರ ಅಣ್ಣ ತಮ್ಮನೋ...? ಬದುಕಿನಲ್ಲಿ ಏನೆಲ್ಲಾ ನೋವು ಕಷ್ಟ ಅನುಭವಿಸಿ ಇಷ್ಟೊಂದು ವೈರಾಗ್ಯ ಮೂಡಿತೋ? ಏನೆಲ್ಲಾ ಸಂಪತ್ತು, ಸಂಬಂಧಗಳನ್ನು ತ್ಯಜಿಸಿದನೋ ಗೊತ್ತಿಲ್ಲ. ಆ ಕ್ಷಣದಲ್ಲಿ ನನ್ನ ಮನಸ್ಸಿನೊಳಗೊಬ್ಬ ಸಂತ ಹುಟ್ಟಿಬಿಟ್ಟ. ಈ ಜೀವನ ಇಷ್ಟೇ ಅಲ್ವಾ , ಎಲ್ಲ ನಶ್ವರ ಅನಿಸತೊಡಗಿತು.
ಬದುಕಿನಲ್ಲಿ ನಾವು ಅಂದುಕೊಂಡಿದ್ದು ನಮಗೆ ಸಿಗಲಿಲ್ಲ ಅಂತ ಒದ್ದಾಡ್ತೀವಿ, ನೋವು ಪಡ್ತೀವಿ... ದುರ್ಬಲ ಮನಸಿನವರಾಗಿದ್ರೆ ಆತ್ಮಹತ್ಯೆ ಕೂಡಾ ಮಾಡ್ಕೋತೀವಿ. ಹಾಗೇ.... ಇವತ್ತು ಇದ್ದು ನಾಳೆ ಬಿದ್ದುಹೋಗೋ ಈ ದೇಹವನ್ನು ಎಷ್ಟೊಂದು ಪ್ರೀತಿಸುತ್ತೀವಲ್ವಾ? ಮುಖದಲ್ಲಿ ಒಂದು ಗುಳ್ಳೆಯಾಗಿದ್ರೆ, ಕೂದಲು ಸ್ವಲ್ಪ ಕೊಂಕಾಗಿದ್ರೆ ಎಷ್ಟು ಡಿಸ್ಟರ್ಬ್ ಆಗ್ತೀವಿ..... ಆದರೆ ಇಂತಹ ಯಾವುದೇ ಮೋಹವಿಲ್ಲದೇ ನಿರ್ಮೋಹದಿಂದ, ನಗ್ನನಾಗಿ ದೃಢವಾಗಿ ನಡೆದುಕೊಂಡು ಹೋಗುತ್ತಿದ್ದ ಪಾರಿವ್ರಾಜಕ ದಿಗಂಬರ ಸನ್ಯಾಸಿ ತುಂಬಾ ಗ್ರೇಟ್ ಅನಿಸ್ತು. ಈ ಬದುಕೇ ಹೀಗೆ ವಿಚಿತ್ರ... ಇವತ್ತು ವಿಲಾಸಿಯಾಗಿ ಜೀವನ ನಡೆಸುವ ಅಂಬಾನಿ, ವಿಜಯ್ ಮಲ್ಯನಂತವರೂ ಮುಂದೊಮ್ಮೆ ಎಲ್ಲವನ್ನು ತ್ಯಜಿಸಿ ನಿರ್ಮೋಹಿಯಂತೆ ಸನ್ಯಾಸಿಯಂತೆ ಜೀವನ ನಡೆಸಿದರೆ ಅಚ್ಚರಿ ಪಡಬೇಕಾಗಿಲ್ಲ. ಇಂಥ ಸಂದರ್ಭದಲ್ಲಿ ಕವಿ ಗೋಪಾಲಕೃಷ್ಣ ಅಡಿಗರ ಕವಿತೆಯ ಸಾಲುಗಳು ನೆನಪಾಗುತ್ತೆ.....
"ಯಾವ ಮೋಹನ ಮುರಳಿ ಕರೆಯಿತೋ
ದೂರ ತೀರಕೆ ನಿನ್ನನು......
...................................................
...................................................
ದೂರ ತೀರಕೆ ನಿನ್ನನು......
...................................................
...................................................
ಇರುವುದೆಲ್ಲವ ಬಿಟ್ಟು ಇರದುದರ
ಕಡೆಗೆ ತುಡಿಯುವುದೇ ಜೀವನ....."
ಕಡೆಗೆ ತುಡಿಯುವುದೇ ಜೀವನ....."
- ನಿಮ್ಮವನು
ರಾಜ್
1 ಕಾಮೆಂಟ್:
U r superb
ಕಾಮೆಂಟ್ ಪೋಸ್ಟ್ ಮಾಡಿ