ಕೆಂಡ ಸಂಪಿಗೆ
‘ರೀ... ರೀ... ಏನ್ಮಾಡ್ತಿದೀರಿ? ಬನ್ರೀ ಇಲ್ಲಿ ...’ ಒಳಮನೆಯಿಂದ ಸುಮಾಳ ಕೂಗು ಜೋರಾಗಿಯೇ ಕೇಳಿತು. ಭಾನುವಾರದ ರಜಾ ದಿನದ ಮೂಡಿನಲ್ಲಿ ಕಾಫಿ ಹೀರುತ್ತಾ ವರಾಂಡದಲ್ಲಿ ನ್ಯೂಸ್ ಪೇಪರ್ ಓದುತ್ತಾ ಕುಳಿತಿದ್ದ ನಾನು ಸ್ವಲ್ಪ ಬೇಸರದಿಂದಲೇ ‘ಏನೇ... ಏನಾಯ್ತು’ ಅಂದೆ. ‘ಇವಾಗಿಲ್ಲಿ ಬರ್ತೀರಾ? ಇಲ್ವಾ?’ ಎಂದು ಕೂಗಿದ ಅವಳ ದನಿಯಲ್ಲಿ ಮೊದಲಿಗಿಂತಲೂ ಜೋರು, ಕೋಪದ ಛಾಯೆ ಇತ್ತು. ಮೊದಲಿನಿಂದಲೂ ಅವಳು ಹಾಗೆ, ಏನಾದರೂ ಹೇಳುವಾಗ ‘ಮಾಡ್ತೀರಾ ಇಲ್ವಾ? ಹೋಗ್ತೀರಾ ಇಲ್ವಾ? ಕೇಳ್ತೀರಾ ಇಲ್ವಾ? ಹೀಗೆ ಕಡ್ಡಿ ಮುರಿದಂತಹ ಮಾತು. ಅವಳು ಹೇಳಿದ್ದು ಮಾಡಬೇಕು ಅಷ್ಟೇ. ಇಲ್ಲದಿದ್ದರೆ ಅವಳಿಗೆ ನಖಶಿಖಾಂತ ಕೋಪ. ಅದ್ಯಾವ ದುರ್ವಾಸ ಮುನಿಯ ವಂಶಸ್ಥಳೋ ಏನೋ, ತುಸು ಆಲಸ್ಯದಿಂದಲೇ ಎದ್ದು ಹೋದೆ. ಎಡಗೈಯಲ್ಲಿ ನಿನ್ನೆ ನಾನುಟ್ಟಿದ್ದ ಶರ್ಟ್, ಬಲಗೈಯಲ್ಲಿ ನೀಳವಾದ ಕೂದಲೊಂದನ್ನು ಹಿಡಿದು ಸಿಟ್ಟಿನಿಂದ ಕಂಪಿಸುತ್ತಿದ್ದಳು. ಮೊದಲೇ ಕೆಂಪು ವರ್ಣದವಳಾದ ಅವಳ ಮುಖ ಇನ್ನಷ್ಟು ಕೆಂಪಗಾಗಿತ್ತು. ಅವಳು ನಿಂತಿರುವ ಭಂಗಿ, ಕಣ್ಣುಗಳಲ್ಲಿನ ಕೋಪ ನೋಡಿಯೇ ಅರ್ಧ ತಣ್ಣಗಾಗಿ ಬಿಟ್ಟೆ. ಏನೋ ಅನಾಹುತ ಸಂಭವಿಸಲಿದೆಯೆಂದು ಒಳ ಮನಸ್ಸಿನ ರೆಕ್ಕೆ ಫಡಫಡಿಸಿತು. ‘ಏನೇ ಸುಮೀ...’ ಅನ್ನುವುದರಲ್ಲಿಯೇ ನನ್ನ ದನಿ ಅರ್ಧ ಬಿದ್ದೋಗಿತ್ತು. ‘ಏನ್ರೀ... ಏನ್ರೀ ಇದು?’ ಎಂದು ಕೂದಲನ್ನು ನನ್ನ ಮುಖಕ್ಕೆ ಹಿಡಿದು ಕೇಳುತ್ತಿದ್ದಳು. ‘ಕೂದಲಲ್ವಾ..?’ ಶುದ್ಧ ಪೆದ್ದನಂತೆ ಉತ್ತರಿಸಿದೆ.
‘ಕೂದಲು ಅಂತ ನಂಗೂ ಗೊತ್ತು ರೀ. ಇದು ನಿಮ್ಮ ಶರ್ಟ್ ಮೇಲೆ ಹೇಗೆ ಬಂತು ಅಂತ ಕೇಳ್ತಿದೀನಿ...’ ಧ್ವನಿ ಎತ್ತರಿಸಿ ಮಾತಾಡುತ್ತಿದ್ದಳು. ಅವಳು ಮೊದಲಿನಿಂದಲೂ ಹಾಗೆ ಧ್ವನಿ ಜೋರು. ‘ಸ್ವಲ್ಪ ಮೆತ್ತಗೆ ಮಾತಾಡ್ತೇ ಮಾರಾಯ್ತಿ. ಪಕ್ಕದ ಮನೆಯವರು ಕೇಳಿಸಿಕೊಂಡರೆ ಏನಂದುಕೊಂಡಾರು?’ ಎಂದು ತಗ್ಗಿದ ಸ್ವರದಲ್ಲಿ ಹೇಳಿದೆ. ಅದ್ಯಾವುದು ತನಗೆ ಸಂಬಂಧವಿಲ್ಲವೆಂಬಂತೆ ತನ್ನ ಪ್ರಶ್ನೆ ಮುಂದುವರಿಸಿದಳು. ‘ಹೇಳಿ, ಈ ಕೂದಲು ನಿಮ್ಮ ಶರ್ಟ್ ಮೇಲೆ ಹೇಗೆ ಬಂತು? ನಿನ್ನೆ ಉಟ್ಕೊಂಡಿದ್ದಲ್ವಾ, ಈ ಶರ್ಟ್ ಮೇಲೆ ಹೆಂಗಸಿನ ಇಷ್ಟುದ್ದ ಕೂದಲು ಹೇಗೆ ಬಂತು? ಆಫೀಸ್‍ಗೆ ಹೋಗೊ ಬದಲು ಯಾವಳ ಹತ್ರ ಸರಸವಾಡ್ತ ಮಲ್ಕೊಂಡಿದ್ರಿ? ಹೀಗೆ ಮೋಸ ಮಾಡೋಕೇನಾ ನನ್ನ ಕಟ್ಕೊಂಡಿದ್ದು... ಹ್ಞಾಂ..?’ ಧ್ವನಿ ಏರಿಸತೊಡಗಿದಳು. ನನಗೆ ಏನೊಂದು ಅರ್ಥವಾಗದೇ ತಲೆ ತಿರುಗತೊಡಗಿತ್ತು. ‘ಹೇಳ್ತೀನಿ, ಸ್ವಲ್ಪ ಸುಮ್ಮನಿರೆ’ ಎಂದು ಹೇಳಿ ಸಮಾಧಾನಿಸಿದೆ. ಆದರೆ ಸುಲಭಕ್ಕೆ ಸಮಾಧಾನವಾಗದ ಅವಳು ಕೋಪದಿಂದ ಭುಸುಗುಡತೊಡಗಿದಳು. ಎದುರು ಮನೆ ಜಲಜಾಳಿಗೆ ಯಾವಾಗಲೂ ನನ್ನವಳು ಕೂಗಾಡುವುದನ್ನು ಗಮನಿಸುವ ಕೆಟ್ಟ ಚಟ. ಅವಳು ಇಡೀ ಓಣಿಯ ಲೌಡ್‍ಸ್ಪೀಕರ್. ತಾನು ಕೇಳಿದ್ದನ್ನು ನೋಡಿದ್ದನ್ನು ತಿರುಚಿ ಓಣಿಯ ಜನರಿಗೆಲ್ಲ ಸಾರುವ ಹೆಂಗಸು. ಅದಾಗಲೇ ಇವಳ ಏರುಧ್ವನಿ ಅವಳ ನಾಯಿಕಿವಿಗೆ ಅಪ್ಪಳಿಸಿ ತನ್ನ ಕೌಂಪೋಡಿನಿಂದ ಹೊರಗೆ ಚಾಚಿದ್ದ ದಾಸವಾಳ ಹೂ ಕಿತ್ತುಕೊಳ್ಳುವವಳಂತೆ ನಟಿಸುತಾ,್ತ ತನ್ನ ಕಿವಿಯನ್ನು ಹಿಗ್ಗಿಸಿ ನನ್ನ ಮನೆಯ ಕಡೆಗೆ ಮೈಯೆಲ್ಲಾ ಕಿವಿಯಾಗಿಸಿ ನಿಂತಿದ್ದಳು. ‘ಛೇ... ಏನ್ ಹೆಂಗ್ಸೊ ಏನೋ...’ ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾ ಬಾಗಿಲು ಜೋರಾಗಿಯೇ ಮುಚ್ಚಿದೆ. ಧಡಾಲ್ಲನೇ ಬಾಗಿಲು ಮುಚ್ಚಿಕೊಂಡಿತು. ಮುಖ ಕಿವುಚಿಕೊಂಡು ಏನನ್ನೋ ವಟಗುಟ್ಟುತ್ತಾ ದುರ್ದಾನ ತೆಗೆದುಕೊಂಡವಳಂತೆ ದುಡುದುಡು ಹೆಜ್ಜೆಹಾಕುತ್ತಾ ಮನೆಯೊಳಗೆ ಹೋಗುವುದನ್ನು ಕಿಟಕಿಯಲ್ಲಿ ನೋಡುತ್ತಾ ನಿಂತೆ. ‘ರೀ... ಆವಾಗಿಂದ ನಾನೇನ್ ಕೇಳ್ತಾ ಇದೀನಿ? ಹೇಳ್ತೀರಾ ಇಲ್ವಾ?’ ಇನ್ನಷ್ಟು ಕೋಪದಿಂದ ಕೇಳಿದಳು. ಅವಳ ಸಿಟ್ಟು ಕ್ಷಣದಿಂದ ಕ್ಷಣಕ್ಕೆ ಏರುತ್ತಿತ್ತು. ಅವಳನ್ನು ಸಮಾಧಾನಿಸುವ ಉಪಾಯ ಕಾಣದೇ ಈ ಕೂದಲು ಹೇಗೆ ಬಂತು ಎಂದು ಯೋಚಿಸತೊಡಗಿದೆ.
ನಿನ್ನೆ ಹೊಸಪೇಟೆಯ ನನ್ನ ಆಫೀಸ್‍ನಲ್ಲಿ ಕೆಲಸ ಮುಗಿಸಿ ಹೊರಬಂದಾಗ ಆಗಲೇ ಆಗಸದಲ್ಲಿ ದಟ್ಟವಾದ ಕಪ್ಪು ಮೋಡಗಳು ಆವರಿಸಿದ್ದವು. ಶಾನುಭಾಗ್ ಹೋಟೆಲ್ ಸರ್ಕಲ್ ದಾಟಿ ಇನ್ನೇನು ಬಸ್‍ಸ್ಟ್ಯಾಂಡ್ ಒಳಗೆ ಕಾಲಿಡಬೇಕೆನ್ನುವಷ್ಟರಲ್ಲಿ ಬಹು ಪುರಾತನ ಮಿತ್ರ ಆನಂದ್ ಅಚಾನಕ್ಕಾಗಿ ಎದುರಾಗಿಬಿಟ್ಟ. ಹೈಸ್ಕೂಲೇ ಕೊನೆ, ಆ ನಂತರ ಅವನು ಸಿಕ್ಕಿರಲಿಲ್ಲ. ಪಿ.ಯು. ಓದಲು ನಾನು ದೂರದ ಧಾರವಾಡಕ್ಕೆ ಹೊರಟೆ. ಅವನು ಬಳ್ಳಾರಿಯಲ್ಲೇ ಓದು ಮುಂದುವರಿಸಿದ. ಪದವಿ ಮುಗಿದ ನಂತರ ನಾನು ಒಂದೆರಡು ಸಲ ಬಳ್ಳಾರಿಗೆ ಹೋದೆನಾದರೂ ಅವನ ವಿಳಾಸ ಗೊತ್ತಿರಲಿಲ್ಲ. ಹೀಗೆ ಬಸ್ಟ್ಯಾಂಡ್, ರೈಲ್ವೇ ಸ್ಟೇಷನ್, ಸಿನೆಮಾ ಥಿಯೇಟರ್‍ಗಳ ಜನಸಂದಣಿಯಲ್ಲಿ ಸುಮ್ಮನೇ ಜನರ ಮುಖ ದಿಟ್ಟಿಸುತ್ತಾ ಅವರ ನಡುವೆ ಎಲ್ಲಿಯಾದರೂ ಕಾಣಬಹುದೇನೋ ಎಂಬಂತೆ ನೋಡುತ್ತಿದ್ದೆ. ಈಗಿನಂತೆ ಮೊಬೈಲು, ವಾಟ್ಸಾಪ್, ಫೇಸ್‍ಬುಕ್‍ಗಳಿಲ್ಲದ ಕಾಲವದು. ಕ್ರಮೇಣ ನನ್ನ ಹುಡುಕಾಟ ವ್ಯರ್ಥ ಪ್ರಯತ್ನವೆನ್ನಿಸಿ ಸುಮ್ಮನಾದೆ. ಆ ನಂತರ ನಿಧಾನವಾಗಿ ನನ್ನ ಮನಸಿನಿಂದ ಅವನು ಮರೆಯಾಗತೊಡಗಿದ. ಬದುಕಿನ ಬಂಡಿಯಲ್ಲಿ ನಾನು ಬ್ಯುಸಿಯಾಗಿಬಿಟ್ಟೆ. ಈಗ ಅನಿರೀಕ್ಷಿತವಾಗಿ ನನ್ನೆದುರಿಗೆ ಬಂದು ನಿಂತಿದ್ದಾನೆ! ಇಬ್ಬರ ದೃಷ್ಟಿ ಪರಸ್ಪರ ಸಂಧಿಸಿತು ಅಷ್ಟೆ. ಕೆಲವು ಕ್ಷಣ ಇಬ್ಬರೂ ಹಾಗೆ ಮಾತೇ ಹೊರಡದೇ ನಿಂತುಬಿಟ್ಟೆವು. ನೆನಪಿನಾಳದ ಗಣಿಯಲ್ಲಿ ಯಾರೋ ಕೈ ಹಾಕಿ ಏನೋ ಕಲಕಿದಂತಹ ಭಾವ. ಅರೆ! ಇವ್ನು ನನ್ ಚೆಡ್ಡಿದೋಸ್ತ್ ಆನಂದ್ ಅಲ್ವಾ? ಎಂದು ಮನಸಿನೊಳಗೆ ಅಂದುಕೊಳ್ಳುತ್ತಿರುವಾಗಲೇ ನನಗಿಂತ ಮೊದಲೇ ಗುರುತು ಹಿಡಿದ ಆನಂದ್ ‘ಲೇ ದೋಸ್ತಾ...’ ಎಂದು ಖುಷಿಯಿಂದ ಚೀರುತ್ತಾ ತೆಕ್ಕೆಗೆ ಬಿದ್ದ. ‘ನಾನು ಲೇ ನಿನ್ ದೋಸ್ತ್ ಆನಿ... ಆನಂದ, ನೆನಪಾತೇನು? ಐದ್ನೆ ಕ್ಲಾಸಿದಲ್ಲಿದ್ದಾಗ ನಿಂಗೆ ಸೈಕಲ್ ಹೊಡಿಯಾದು ಕಲಿಸಿಕೊಟ್ಟಿದ್ನಲ್ಲಾ? ನೆನಪಾತೇನು? ಎಷ್ಟು ಚೆಂದ ಆಗಿಬಿಟ್ಟಿಲೇ ಇವಾಗ ಗುಂಡು ಗುಂಡಗ. ಮದ್ವಿ ಮಾಡ್ಕೊಂಡ್ಯಾ? ಏಸು ಮಕ್ಳು? ಏನ್ ಕೆಲ್ಸ ಮಾಡ್ಕ್ಯಂಡಿ?’ ಎಂದು ಪುಂಖಾನುಪುಂಖವಾಗಿ ಪ್ರಶ್ನೆ ಕೇಳುತ್ತಾ ಕೇಳಿದ ಪ್ರಶ್ನೆಗಳಿಗೆ ಉತ್ತರ ಬಯಸದೇ, ನನ್ನನ್ನು ಮಾತಾಡಿಲಿಕ್ಕೆ ಅರೆಗಳಿಗೆ ಬಿಡದೆ ‘ನಡೀ ನಡೀ ಚಾ ಕುಡ್ಕೊಂಡು ಮಾತಾಡನಂತ’ ಎಂದು ನನ್ನ ತೋಳಿನೊಳಗೆ ತನ್ನ ತೋಳು ಸೇರಿಸಿ ಎಳೆದುಕೊಂಡು ಹೊರಟೇ ಬಿಟ್ಟ. ಮೊದಲಿನಿಂದಲೂ ಅವನು ಹಾಗೆ ಒರಟು ಪ್ರೀತಿ. ಆವಾಗೂ ಈವಾಗೂ ಹಾಗೇ ಇದ್ದಾನೆ ಬದಲಾಗದಂತೆ. ಶಾನುಭಾಗ್ ಹೋಟೆಲ್‍ನ ಒಳಹೊಕ್ಕು ಮೂಲೆಯಲ್ಲಿ ಖಾಲಿಯಿದ್ದ ಟೇಬಲ್‍ಗೆ ಎದುರು ಬದಿರಾಗಿ ಕುಳಿತು ಚಹಾಗೆ ಆರ್ಡರ್ ಮಾಡಿ ಮಾತಾಡತೊಡಗಿದೆವು. ಹೊರಗೆ ದಟ್ಟೈಸಿದ್ದ ಮೋಡಗಳು ಗುಡುಗು ಮಿಂಚಿನ ಸದ್ದಿನೊಂದಿಗೆ ಸಣ್ಣಗೆ ಶುರುವಾದ ಮಳೆಹನಿ ಜೋರಾಗಿ ಭೋರ್ಗೆರೆಯತೊಡಗಿತು. ಅಷ್ಟರಲ್ಲಿ ಸರ್ವರ್ ಹಬೆಯಾಡುತ್ತಿರುವ ಚಹಾ ತಂದಿಟ್ಟ. ಆಗಾಗ ಅಲ್ಲಿ ಚಹಾ ಕುಡಿಯುತ್ತಿದ್ದೆನಾದರೂ ಇಂದೇಕೋ ಚಹಾ ತುಂಬಾ ರುಚಿಯಾಗಿದೆ ಎನಿಸಿತು. ಬಹುಶಃ ಬಹು ವರ್ಷಗಳ ನಂತರ ಆನಂದ್ ಸಿಕ್ಕಿದಕ್ಕೊ ಏನೋ. ಮಾತು ಪ್ರವಾಹವಾಗಿ ಹರಿಯಿತು. ಸಮಯ ಸರಿದಿದ್ದೇ ಗೊತ್ತಾಗಲಿಲ್ಲ. ಪರಸ್ಪರ ಫೋನ್ ನಂಬರ್, ವಿಳಾಸ ವಿನಿಮಯ ಮಾಡಿಕೊಂಡು ಹೊರಗೆ ಬಂದೆವು. ‘ಈಗ ಕಮಲಾಪುರದಲ್ಲೇ ನನ್ನ ಮನೆ ಇರೋದು. ಒಮ್ಮೆ ಮನೆಗೆ ಬಾರೋ’ ಎಂದು ಹೇಳಿ ಬೀಳ್ಕೊಟ್ಟೆ. ‘ಯಾರೀ... ತೋರಣಗಲ್ ಬಳ್ಳಾರಿ... ರೈಟ್... ರೈಟ್...’ ಎಂದು ಕೂಗುತ್ತಾ ಕಂಡಕ್ಟರ್ ವಿಷಲ್ ಊದಿದ. ಆಗಲೇ ಬಹುತೇಕ ಭರ್ತಿಯಾಗಿದ್ದ ಬಸ್ ಚಲಿಸುತ್ತಿರುವಾಗಲೇ ಓಡಿಹೋಗಿ ಹತ್ತಿಸಿಕೊಂಡ ಆನಂದ್ ಕೊನೆಯ ಬಾರಿ ಎಂಬಂತೆ ನನ್ನೆಡೆಗೆ ಕೈ ಬೀಸಿದ. ನಾನೂ ಕೈ ಬೀಸಿ ಬೈ ಹೇಳಿದೆ.
ಈಗಾಗಲೇ ಮಳೆಯ ಅಬ್ಬರ ಕಡಿಮೆಯಾಗಿ ನಿಲ್ಲುವ ಹಂತದಲ್ಲಿತ್ತು. ದಾರಿಗುಂಟ ಹರಿಯುತ್ತಿದ್ದ ಮಳೆ ನೀರಿನಲ್ಲಿ ಬೀದಿಯ ನಿಯಾನ್ ದೀಪಗಳ ಪ್ರತಿಬಿಂಬ ಹೊಳೆಯುತ್ತಿತ್ತು. ಹರಿಯುತ್ತಿದ್ದ ಮಳೆ ನೀರನ್ನು ಸೀಳಿಕೊಂಡು ಟರ್ರೋ... ಎಂಬ ವಿಕಾರಿ ಕರ್ಕಶ ಸದ್ದಿನೊಂದಿಗೆ ಆಟೋಗಳು ಚಲಿಸುತ್ತಿದ್ದವು. ಬಸ್‍ಸ್ಟ್ಯಾಂಡಿನ ಎದುರಿಗೆ ಮೈ ತುಂಬಾ ಧೂಳನ್ನೆ ಹೊದ್ದುಕೊಂಡ ಬೃಹತ್ ಬೇವಿನಮರ ಮಳೆಯಿಂದಾಗಿ ತನ್ನ ಇಡೀ ಮೈಯನ್ನು ತೊಳೆದುಕೊಂಡು ಪ್ರತಿಯೊಂದು ಎಲೆಯೂ ಸ್ವಚ್ಛವಾಗಿ ಕಂಗೊಳಿಸುತ್ತಿತ್ತು. ಅದರ ಬುಡದಲ್ಲಿಯೇ ಮಳೆಯಲ್ಲಿ ತೋಯ್ದು ತೊಪ್ಪೆಯಾಗಿದ್ದ ಬೀದಿನಾಯಿಯೊಂದು ನಡುಗುತ್ತಾ ತನ್ನ ಇಡೀ ಮೈಯನ್ನು ಝಾಡಿಸಿಕೊಳ್ಳುತ್ತಿತ್ತು. ಮಳೆಯನ್ನು ಶಪಿಸಿಕೊಳ್ಳುತ್ತಾ ಮಳೆಯಿಂದಾಗಿ ತನ್ನ ಸಂಜೆಯ ವ್ಯಾಪಾರ ನಷ್ಟವಾಯಿತೆಂದು ಅಶ್ಲೀಲವಾಗಿ ಬೈಯ್ದುಕೊಳ್ಳುತ್ತಾ ತಳ್ಳುಗಾಡಿಯ ಪಾನಿಪೂರಿ ವ್ಯಾಪಾರಿ ವಾಪಾಸ್ಸು ಮನೆಗೆ ನಡೆದಿದ್ದ. ಅರೆವೃದ್ಧೆ ವೇಶ್ಯೆಯೊಬ್ಬಳು ತನ್ನ ವಯಸ್ಸನ್ನು ಮರೆಮಾಚಲು ಅಗ್ಗದ ಪೌಡರು, ಲಿಪ್‍ಸ್ಟಿಕ್ ಲೇಪಿಸಿಕೊಂಡು ಗೇಣು ಮಲ್ಲಿಗೆ ಹೂ ಮುಡಿದು, ವಿನಾಕಾರಣ ಸೀರೆಯನ್ನು ಸರಿಪಡಿಸಿಕೊಳ್ಳುತ್ತಾ ಬಸ್‍ಸ್ಟ್ಯಾಂಡ್‍ನಿಂದ ಹೊರಬರುವ ಜನರತ್ತ ದೃಷ್ಟಿ ಹಾಯಿಸುತ್ತಾ ಅಸಹನೆಯಿಂದ ಶತಪಥ ಹೆಜ್ಜೆ ಹಾಕುತ್ತಿದ್ದಳು. ಪಾಪ... ಇವಳ ಪರಿಸ್ಥಿತಿಗೂ ಪಾನಿ ಪೂರಿಯವನ ಪರಿಸ್ಥಿತಿಗೂ ಹೆಚ್ಚಿನ ವ್ಯತ್ಯಾಸವಿಲ್ಲವೆನಿಸಿತು. ಮಳೆ ಎಷ್ಟೊಂದು ಆಹ್ಲಾದಕರ... ಎಷ್ಟೊಂದು ಭೀಕರ... ಎಷ್ಟೊಂದು ಸುಂದರ... ಎಷ್ಟೊಂದು ವಿನಾಶ... ಹೀಗೆ ಯೋಚಿಸತೊಡಗಿದೆ. ಅದೇನೇ ಇರಲಿ, ಒಂದು ಉರಿ ಬಿಸಿಲಿನ ನಂತರ ಸುರಿಯುವ ಮಳೆ ಇದೆಯಲ್ಲಾ, ಅದರಿಂದ ಏಳುವ ಮಣ್ಣಿನ ವಾಸನೆ ಕವಿಯೊಬ್ಬನಲ್ಲಿ ಕಾವ್ಯದ ಜಲಪಾತವನ್ನೇ ಸೃಷ್ಟಿಸಬಲ್ಲದು. ಮಳೆ ಸುರಿದು ನಿಂತ ಮೇಲೆ ಹಳ್ಳಿ ನಗರಗಳ ಸೌಂದರ್ಯ ದ್ವಿಗುಣವಾಗುವುದಂತೂ ಸತ್ಯ. ಪ್ರೇಮಿಗಳ ಪಾಲಿಗಂತೂ ಮಳೆ ಹಬ್ಬವೇ ಸರಿ. ಮಳೆಯಲ್ಲಿ ಸುಮಿಯೊಂದಿಗೆ ನೆನದ ಇಳಿಸಂಜೆಯನ್ನು ನೆನಪಿಸಿಕೊಂಡೆ. ಹೀಗೆ ಮಳೆಯ ಬಗ್ಗೆ ಯೋಚಿಸುತ್ತಾ ಖುಷಿಪಡುತ್ತಾ ಹಂಪೆಯ ಕಡೆಗೆ ಹೋಗುವ ಫ್ಲಾಟ್‍ಫಾರ್ಮಿಗೆ ಬಂದು ನಿಂತೆ. ಬಸ್‍ಸ್ಟ್ಯಾಂಡ್ ಎಂದಿಗಿಂತಲೂ ತುಂಬಾ ರಷ್ ಇತ್ತು. ಸರಣಿಯಾಗಿ ನಾಲ್ಕು ದಿನ ಸರ್ಕಾರಿ ರಜಾ ದಿನಗಳು ಬಂದಿದ್ದರಿಂದ ನೌಕರರು, ವಿದ್ಯಾರ್ಥಿಗಳೂ ತಮ್ಮ ತಮ್ಮ ಊರಿಗೆ ಹೊರಡುವ ಅವಸರ. ಎಲ್ಲಾ ಮಾರ್ಗದ ಬಸ್ಸುಗಳು ತುಂಬುಗರ್ಭಿಣಿಯರಂತೆ ತುಂಬಿಕೊಂಡು ಹೊರಡುತ್ತಿದ್ದವು. ರಾತ್ರಿಯಾಗಲೇ 8:30 ದಾಟುತ್ತಿತ್ತು. ನನಗೆ ಚಡಪಡಿಕೆ ಶುರುವಾಗಿತ್ತು. ತಡವಾಗಿ ಹೋದರೆ ಇವಳಿಂದ ಲಲಿತಾ ಸಹಸ್ರನಾಮ, ಗಾಯಿತ್ರಿ ಮಂತ್ರ, ಮಂಗಳಾರತಿ ಎಲ್ಲವೂ ಒಟ್ಟಿಗೆ ಆಗುತ್ತದೆಯಲ್ಲಾ ಎಂಬ ಆತಂಕ. ಕಮಲಾಪುರದ ಬಸ್ಸೇನೋ ಬಂತು. ಬಂದು ಇನ್ನೇನು ಪ್ಲಾಟ್‍ಫಾರ್ಮಿನಲ್ಲಿ ನಿಲ್ಲಬೇಕು, ಅಷ್ಟರಲ್ಲಿ ಅದೆಲ್ಲೆಲ್ಲಿ ಇದ್ದರೋ ಜನರು ಸಿಹಿಕಂಡ ನೊಣಗಳಂತೆ ಮುತ್ತಿಕೊಂಡರು. ಕ್ಷಣಾರ್ಧದಲ್ಲಿ ಇಡೀ ಬಸ್ಸು ತುಂಬಿಕೊಂಡು ಬಸ್ಸಿನ ಹೊಟ್ಟೆ ಬಿರಿಯುವಂತಾಗಿತ್ತು. ಖಾಲಿ ಉಳಿದಿದ್ದು ಡ್ರೈವರ್ ಸೀಟ್ ಒಂದೇ. ಸೀಟ್ ಒತ್ತಟ್ಟಿಗಿರಲಿ, ಒಂದು ಪಾದ ಇಟ್ಟು ನಿಲ್ಲಲ್ಲಿಕ್ಕೂ ಜಾಗ ಸಿಗದಂತಾಗಿತ್ತು. ಹರ ಸಾಹಸಪಟ್ಟು ಹೇಗೊ ಬಸ್ಸಿನೊಳಗೆ ತೂರಿಕೊಂಡೆ. ಬಸ್ಸಿನ್ನೂ ಹೊರಡಲೊಲ್ಲದು. ಇಕ್ಕಟ್ಟಿನಲ್ಲಿ ಸಿಕ್ಕು ಜನರ ಬಿಸಿ ಉಸಿರಾಟ, ಬೆವರ ಕಮಟು ವಾಸನೆ, ಇವೆಲ್ಲದರ ನಡುವೆ ವಿಪರೀತ ಸೆಕೆ ಶುರುವಾಗಿತ್ತು. ಬಸ್ ಸ್ಟಾರ್ಟ್ ಆದರೆ ಸಾಕಪ್ಪಾ ದೇವ್ರೇ ಅನ್ನಿಸಿಬಿಟ್ಟಿತು. ನನ್ನ ಮೊರೆ ದೇವರಿಗೆ ಕೇಳಿಸಿತೇನೋ... ಅಂತೂ ಬಸ್ಸು ಕುಲುಕಾಡುತ್ತಾ ಹೊರಟಿತು. ಬಸ್ಸಿನೊಳಗೆ ನಿಧಾನವಾಗಿ ತಣ್ಣನೆಯ ಗಾಳಿ ಬೀಸತೊಡಗಿತು. ಮನಸ್ಸಿಗೆ ಆಹ್ಲಾದವೆನಿಸಿತು. ಅನಂತಶಯನಗುಡಿಯ ಹತ್ತಿರ ಬರುತ್ತಿದ್ದಂತೆಯೇ ಬಿಡಾಡಿ ದನವೊಂದು ಅಡ್ಡ ಬಂದು ಡ್ರೈವರ್ ದಿಢೀರನೇ ಬ್ರೇಕ್ ಹಾಕಿದ. ಸ್ವಲ್ಪ ವಾಲಿದೆ. ನನಗಿಂತ ಕೊಂಚ ಹಿರಿಯಳಾಗಿದ್ದ ಚೂಡಿ ಧರಿಸಿದ್ದ ಹೆಂಗಸೊಬ್ಬಳು ಮುಂದಕ್ಕೆ ವಾಲಿ ನಂತರ ನನ್ನ ಭುಜಕ್ಕೆ ಡಿಕ್ಕಿ ಹೊಡೆದಳು. ರಷ್ ಇರುವ ಬಸ್‍ನಲ್ಲಿ ಇದೆಲ್ಲಾ ಸಹಜವೆಂದು ಸುಮ್ಮನಾದೆ. ನಾನು ಸುಮ್ಮನಾದುದೇ ತಪ್ಪಾಯ್ತೇನೋ ಆ ಹೆಂಗಸು “ಏನ್ರೀ ಅಂಕಲ್... ಹುಡುಗಿಯರ ಮೇಲೆ ಹೀಗೇನಾ ಬೀಳೋದು? ನೋಡ್ಕೊಂಡು ನಿಂತ್ಕೋಳ್ಳೋಕೆ ಆಗಲ್ವಾ ?” ಎಂದು ಸಿಡುಕಿದಳು. ನನಗೆ ಕೋಪ ನೆತ್ತಿಗೇರಿತ್ತು. ‘ಎಲಾ ಇವಳಾ! ನನಗಿಂತ ಹಿರಿಯಳು, ನನಗೆ ಅಂಕಲ್ ಎನ್ನುತ್ತಿದ್ದಾಳೆ. ತಾನಿನ್ನು ಹುಡುಗಿ, ಚಿಕ್ಕವಳು ಎಂದು ತೋರಿಸಿಕೊಳ್ಳುವ ಖಯಾಲಿಯ ಗುಂಪಿಗೆ ಸೇರಿದ ಜೀವಿ ಎಂಬುದು ಖಚಿತವಾಯಿತು. ಸರಿಯಾಗಿಯೇ ದಬಾಯಿಸಿದೆ. ‘ನೋಡ್ರಿ ಆಂಟಿ, ನನ್ ಮೇಲೆ ಬಿದ್ದವರು ನೀವು, ನಾನಲ್ಲ. ಮೊದ್ಲು ನೀವು ಸರಿಯಾಗಿ ನಿಂತ್ಕೋಳ್ಳಿ ಆಂಟಿ’ ಎಂದು ಗದರಿದೆ. ಆಂಟಿ ಸಿಡುಕು ಮೋರೆಯೊಂದಿಗೆ ಸುಮ್ಮನಾಯ್ತು. ಹಾಗೂ ಹೀಗೂ ಕಮಲಾಪುರ ತಲುಪಿ ಬಸ್ಸು ಇಳಿದಾಗ ರಾತ್ರಿ 9:30 ಆಗಿತ್ತು. ಸುಮಾಳ ಕೋಪದ ಅರಿವಿದ್ದ ನಾನು ಇಷ್ಟು ತಡವಾಗಿ ಹೊರಟಿದ್ದರಿಂದ ಆತಂಕ ಶುರುವಾಗಿತ್ತು. ಯಾಕೆಂದರೆ ಹೊಸಪೇಟೆಗೆ ವರ್ಗಾವಣೆಯಾದ ಆರಂಭದಲ್ಲೇ ‘ನಿಮ್ಮ ಆಫೀಸ್ ಮುಗಿಯುವುದು ಸಂಜೆ ಐದಕ್ಕೆ. ಅಲ್ಲಿಂದ ಇಲ್ಲಿಗೆ ಅರ್ಧತಾಸಿನ ಪ್ರಯಾಣ. ಹೋಗ್ಲಿ, 5:30ಕ್ಕೆ ಅಲ್ಲದಿದ್ರೂ 6:00 ಗಂಟೆಗೆ ನೀವು ಮನೇಲಿ ಇರ್ಬೇಕು ಎಂದು ಹುಕುಂ ಜಾರಿ ಮಾಡಿದ್ದಳು. ಇದು ಸ್ವಲ್ಪ ತ್ರಾಸಾದರೂ ಹೇಗೊ ಹೊಂದಿಕೊಂಡೆ. ಒಮ್ಮೊಮ್ಮೆ ಬರುವುದು ತಡವಾಗುತ್ತಿತ್ತು. ಆಗ ಊಟ ಬಿಟ್ಟು ಮುನಿಸಿಕೊಂಡಿರುತ್ತಿದ್ದಳು. ಅವಳನ್ನು ರಮಿಸಿ ಸಮಾಧಾನಪಡಿಸಿ ಇಬ್ಬರೂ ಊಟ ಮಾಡುವ ವೇಳೆಗೆ ನನಗೂ ಸಾಕು ಸಾಕಾಗಿರುತ್ತಿತ್ತು. ಗಂಡ ಹೆಂಡತಿ ಜಗಳ ಉಂಡು ಮಲಗುವತನಕ ಅಲ್ಲವೇ? ಯಥಾಪ್ರಕಾರ ಜೀವನ ಸಾಗುತ್ತಿತ್ತು, ವಿನೀತ್ ನಮ್ಮ ಬದುಕಿನಲ್ಲಿ ಬರುವವರೆಗೆ. ವಿನೀತ್ ನಮ್ಮಿಬ್ಬರ ಪ್ರೀತಿಯ ಕುಡಿ.
ಸುಮಾಳನ್ನು ಮದುವೆಯಾದ ಆರಂಭದಲ್ಲಿ ನನ್ನ ಆಫೀಸ್ ಕಮಲಾಪುರದಲ್ಲೇ ಇತ್ತು. ಮಲೆನಾಡಿನವಳಾದ ಸುಮಾಳಿಗೆ ಬಳ್ಳಾರಿ ಜಿಲ್ಲೆಯ ಬಿಸಿಲು ಅಸಹನೀಯವೆನಿಸಿದರೂ ಹಂಪೆಯ ಚೆಲುವಿಗೆ ಮನಸೋತಿದ್ದಳು. ಹಂಪೆಗೆ ಕಮಲಾಪುರವೇ ಹೆಬ್ಬಾಗಿಲು. ಹಂಪೆಯ ಕೋಟೆ, ಮಂಟಪ, ದೇವಾಲಯಗಳು ಕಮಲಾಪುರದವರೆಗೂ ಚಾಚಿಕೊಂಡಿವೆ. ಹೀಗಾಗಿ ಪ್ರತಿದಿನ ಸಂಜೆ ಆಫೀಸ್ ಮುಗಿದ ಕೂಡಲೇ ಸುಮಾಳನ್ನು ಹಂಪೆಗೆ ಕರೆದೊಯ್ಯುತ್ತಿದ್ದೆ. ಅವು ಮದುವೆಯಾದ ಆರಂಭದ ದಿನಗಳು. ಇಬ್ಬರ ಕನಸುಗಳಿಗೆ ಮೇರೆಯೇ ಇಲ್ಲದ ಕಾಲವದು. ಥೇಟ್ ಪ್ರೇಮಿಗಳಂತೆ ಒಬ್ಬರನ್ನೊಬರು ಕೈ ಕೈ ಹಿಡಿದು ಹಂಪೆಯ ತುಂಬೆಲ್ಲಾ ಓಡಾಡುತ್ತಿದ್ದೆವು. ನಮ್ಮ ಪಾಲಿಗೆ ಲಂಡನ್, ಪ್ಯಾರಿಸ್ ಎಲ್ಲವೂ ಹಂಪೆಯೇ ಆಗಿತ್ತು. ರಜಾ ದಿನಗಳಲ್ಲಿ ಇಡೀ ಹಂಪೆಯ ಜೊತೆಗೆ ಪಕ್ಕದಲ್ಲೇ ಇರುವ ಕಿಷ್ಕಿಂದಾ, ಆನೆಗೊಂದಿಗಳನ್ನೆಲ್ಲಾ ಸುತ್ತಾಡುತ್ತಿದ್ದೆವು. ಮಾತಂಗ ಪರ್ವತ, ಅಂಜನಾದ್ರಿ ಪರ್ವತ ಏರಿ ತುತ್ತ ತುದಿಯಲ್ಲಿ ನಿಂತು ನಾನು ಅವಳ ಹೆಸರನ್ನು, ಅವಳು ನನ್ನ ಹೆಸರನ್ನು ಕೂಗಿ ಪ್ರತಿಧ್ವನಿಸುವುದನ್ನು ಕೇಳಿ ಪುಟ್ಟ ಮಕ್ಕಳಂತೆ ಖುಷಿಪಡುತ್ತಿದ್ದೆವು. ಗಾಳಿಗೆ ವೇಗ ಕಲಿಸುವವನ ಹಾಗೆ ನಾನು ಬೈಕ್ ಓಡಿಸುತ್ತಿದ್ದರೆ ಕಣ್ಣಲ್ಲಿ ಸಾವಿರ ಕನಸುಗಳನ್ನು ತುಂಬಿಕೊಂಡು ಅವಳು ನನ್ನ ಬೆನ್ನು ತಬ್ಬಿ ಕುಳಿತಿರುತ್ತಿದ್ದಳು. ತುಸು ಹೆಚ್ಚೇ ದೈವ ಭಕ್ತೆಯಾಗಿದ್ದ ಸುಮಾ ಮೊದಲ ಬಾರಿಗೆ ಆಂಜನೇಯನ ಜನ್ಮಸ್ಥಳ ಕಿಷ್ಕಿಂದಾಕ್ಕೆ ಕರೆದುಕೊಂಡು ಹೋದಾಗ ಭಕ್ತಿಯಿಂದ ಭಾವಪರವಶವಾಗಿದ್ದಳು. ಅಂಜನಾದ್ರಿ ಪರ್ವತ ಹತ್ತಿ ಸುತ್ತಲೂ ಹಂಪೆಯ ನಿಸರ್ಗ ಸೌಂದರ್ಯವನ್ನು ನೋಡುವ ಅವಳ ತನ್ಮಯತೆಗೆ ಮತ್ತೆ ಮತ್ತೆ ಮನ ಸೋಲುತ್ತಿದ್ದೆ. ಹಂಪೆ ನನಗೆ ಹೊಸದಲ್ಲವಾದರೂ ಇವಳೊಂದಿಗೆ ನೋಡುವಾಗ ಮತ್ತೆ ಹೊಸದಾಗಿ ಕಾಣುತ್ತಿತ್ತು ವಿರುಪಾಕ್ಷ ದೇವಸ್ಥಾನ, ಕಡಲೆಕಾಳು ಸಾಸಿವೆಕಾಳು ಗಣಪ, ಕಲ್ಲಿನ ತೇರು, ಸುಗ್ರೀವ ಗುಹೆ, ಗಜಶಾಲೆ, ಕಮಲ ಮಹಲ್, ಮಹಾನವಮಿ ದಿಬ್ಬ... ನಾವು ನೋಡದೆ ಉಳಿಸಿದ ಜಾಗ ಯಾವುದಿದೆ? ಹಂಪೆಯ ಪ್ರತಿ ಮೂಲೆ ಮೂಲೆ ತಿರುಗಾಡಿದ್ದೆವು. ಮಾತು ಸಾಕೆನಿಸಿದಾಗ ಮೌನವಾಗಿ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಿದ್ದೆವು. ನಿರ್ಜನ ಮಂಟಪಗಳ ಕಂಬಕ್ಕೊರಗಿ ಎದುರು ಬದಿರಾಗಿ ಒಬ್ಬರನ್ನೊಬ್ಬರನ್ನು ಹಾಗೆ ನೋಡುತ್ತಾ ನೋಡುತ್ತಾ ಕುಳಿತುಕೊಳ್ಳುವುದಲ್ಲಿ ಅದೆಷ್ಟು ಸಂತಸ ಕಾಣುತ್ತಿದ್ದೆವು. ಇಳಿ ಸಂಜೆಯಲ್ಲಿ ಪುರಂದರ ಮಂಟಪದ ಮೆಟ್ಟಿಲ ಮೇಲೆ ಕುಳಿತು ಅದರ ಕೆಳಗೆ ಹರಿಯುವ ತುಂಗಭದ್ರೆಯ ತಣ್ಣನೆಯ ಒಡಲಿನಲ್ಲಿ ಪಾದ ತೋಯಿಸಿಕೊಳ್ಳುತ್ತಾ ಹರಟುತ್ತಿದ್ದೆವು. ಮದುವೆಯಾದ ಮೂರನೇ ವರ್ಷಕ್ಕೆ ನಮ್ಮ ಬದುಕಿನೊಳಗೆ ವಿನೀತ್ ಬಂದ. ಅಷ್ಟರಲ್ಲಿ ನನ್ನ ನೌಕರಿ ಕಮಲಾಪುರದಿಂದ ಹೊಸಪೇಟೆಗೆ ವರ್ಗಾವಣೆಯಾಯಿತು. ಆದರೆ ಕಮಲಾಪುರದ ವಾಸ್ತವ್ಯ ಬದಲಿಸಲಿಲ್ಲ. ಪ್ರತಿದಿನ ಕಮಲಾಪುರದಿಂದ ಹೊಸಪೇಟೆಗೆ ಪಯಣ. ದೂರದ ಪಯಣವಲ್ಲದಿದ್ದರೂ ಅದು ಸಂಜೆಯ ಹಂಪೆಯ ವಿಹಾರವನ್ನು ತಪ್ಪಿಸಿತು. ವಿನೀತ್ ಜೊತೆಯಾದುದರಿಂದ ಸುಮಾ ಕೂಡಾ ಅವನ ಲಾಲನೆ ಪಾಲನೆಯಲ್ಲಿ ಹೆಚ್ಚು ತೊಡಗಿಸಿಕೊಂಡಳು. ಹಂಪೆಯ ಒಡನಾಟ ತಪ್ಪಿದರೂ ವಿನೀತ್‍ನೊಂದಿಗೆ ಬೆರೆಯುವ ಆಟವಾಡುವ ಸಂತಸ ನನ್ನದಾಯಿತು. ಕನಸುಗಳು ಸಾವಿರ ಇದ್ದರೂ ಮಿತಿಮೀರಿದ ಆಸೆಗಳಿರಲಿಲ್ಲ. ಬದುಕು ಖುಷಿಯಾಗಿಯೇ ಸಾಗುತ್ತಿತ್ತು.
ಆದರೆ ಸುಮಿ ಇತ್ತೀಚಿಗೆ ಕೆಟ್ಟ ಅನುಮಾನದ ಚಟ ಬೆಳೆಸಿಕೊಂಡಿದ್ದಳು. ಇದ್ದಕ್ಕಿದಂತೆ ನನ್ನ ಮೊಬೈಲ್ ಫೋನ್ ಪರಿಶೀಲಿಸುವುದು, ಎಸ್ಸೆಮ್ಮೆಸ್ಸು, ವಾಟ್ಸಾಪ್, ಫೇಸ್‍ಬುಕ್‍ಗಳನ್ನೆಲ್ಲಾ ಸಾಧ್ಯಾಂತ್ಯವಾಗಿ ನೋಡುತ್ತಿದ್ದಳು. ಆಫೀಸ್‍ನಿಂದ ಬರುವುದು ಕೊಂಚ ತಡವಾದರೂ ಯಾಕೆ? ಏನು? ಹೇಗೆ? ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಳು. ಇದೆಲ್ಲಾ ಅಸಹನೀಯವೆನಿಸತೊಡಗಿತು. ಇದಕ್ಕೆಲ್ಲಾ ಮುಕುಟವಿಟ್ಟಂತೆ ನನ್ನ ಬಟ್ಟೆಗಳನ್ನು ಮೂಸಿ ಮೂಸಿ ನೋಡಲು ಆರಂಭಿಸಿದ್ದಳು..! ಮನಸು ಮುರಿದು ಬಿದ್ದುದ್ದೇ ಆವಾಗ. ಒಮ್ಮೆ ಒಗೆಯಲು ಹಾಕಿದ್ದ ನನ್ನ ಶರ್ಟ್‍ನ್ನು ಹಿಡಿದು ಏನನ್ನೋ ಪರೀಕ್ಷಿಸುತ್ತಿದ್ದಳು. ನಾನು ಅಷ್ಟಾಗಿ ಲಕ್ಷ್ಯವಹಿಸಿರಲಿಲ್ಲ. ಆದರೆ ಇದು ಪುನರಾವರ್ತನೆಯಾದಾಗ ಸೂಕ್ಷ್ಮವಾಗಿ ಗಮನಿಸಿತೊಡಗಿದೆ. ನನ್ನ ಬಟ್ಟೆಗಳನ್ನು ಮೂಸಿ ಮೂಸಿ ನೋಡುತ್ತಿದ್ದಳು. ಮುಖದಲ್ಲಿ ಅನುಮಾನದ ಗೆರೆಗಳು..! ಸಹನೆಯ ಕಟ್ಟೆಯೊಡೆದು ಕೇಳಿಯೇ ಬಿಟ್ಟೆ ‘ಏನ್ಮಾಡ್ತಿದೀಯಾ?’. ಅಂಜದೇ ಅಳುಕದೇ ಉತ್ತರಿಸಿದಳು... ‘ನಿಮ್ಮ ಶರ್ಟ್‍ನಿಂದ ಬೇರೊಂದು ಹೆಣ್ಣಿನ ಮೈವಾಸನೆ ಬರ್ತಿದೆಯೇನೋ ಅಂತ ನೋಡ್ತಿದೀನಿ’. ಅವಳ ಮಾತಿನಿಂದ ತಲೆ ಸಿಡಿದು ಹೋಗುವಂತಾಯ್ತು. ಹಣೆ ಬದಿಯ ಯಾವುದೋ ನರವೊಂದು ಟಪಟಪನೆ ಬಡಿಯತೊಡಗಿತು. ನನ್ನೆದುರಿಗೆ ಬೃಹದಾಕಾರವಾಗಿ ಬೆಳೆಯತೊಡಗಿದ ಅವಳ ಅನುಮಾನದ ಭೂತ ನನ್ನನ್ನೇ ಆಪೋಷನ ತೆಗೆದುಕೊಳ್ಳುವಂತೆ ಭಾಸವಾಯಿತು. ಥತ್! ಇವಳನ್ನೇನ್ನಾ ಇಷ್ಟು ವರ್ಷ ಪ್ರೀತಿಸಿದ್ದು? ಅಪ್ಪ ಅಮ್ಮನ ವಿರೋಧದ ನಡುವೆಯೂ ಅವರನ್ನು ಬಲವಂತವಾಗಿ ಒಪ್ಪಿಸಿ ಇವಳನ್ನು ಮದುವೆಯಾಗಿದ್ದು ಇದಕ್ಕೇನಾ? ಅನಿಸಿತು.
ಯುನಿವರ್ಸಿಟಿಯ ಕ್ಯಾಂಪಸ್ಸಿನಲ್ಲಿ ನಮ್ಮ ಪ್ರೇಮ ಆರಂಭವಾದಾಗ ಕನಸುಗಳು ಚಿಗುರೊಡೆಯುತ್ತಿದ್ದವು. ಅವಳು ನನ್ನೆಡೆಗೆ ಬೀರುತ್ತಿದ್ದ ಕುಡಿನೋಟ, ಮುಗುಳ್ನಗೆಗೆ ನನ್ನೆದೆ ಝಲ್ ಎನ್ನುತ್ತಿತ್ತು. ಅವಳ ಸನ್ನಿಧಿಗಾಗಿ ಮನಸು ಹಾತೊರೆಯುತ್ತಿತ್ತು. ಆದರೂ ಮಾತನಾಡಿಸಲೂ ಏನೋ ಸಂಕೋಚ. ಒಮ್ಮೆ ಕ್ಯಾಂಪಸ್ಸಿನಲ್ಲಿ ಮುಗಿಲು ಹರಿದುಕೊಂಡಿತೇನೋ ಎಂಬಂತೆ ಮಳೆಯ ಆರ್ಭಟ ಶುರುವಾಯಿತು. ಲೈಬ್ರರಿಯಲ್ಲಿ ಓದುತ್ತಿದ್ದ ನಾನು ತಲೆ ಎತ್ತಿ ನೋಡಿದೆ, ಎದುರಲ್ಲಿ ಅವಳು ಕುಳಿತಿದ್ದಳು. ಅದೇ ಕ್ಷಣಕ್ಕೆ ಅವಳು ನನ್ನ ನೋಡಿ ಮುಗುಳ್ನಕ್ಕಳು. ನನ್ನೆದೆಯಲ್ಲಿ ಮಿಂಚಿನ ಸಂಚಾರ! ಲೈಬ್ರರಿಯಿಂದ ಹೊರಬಂದಾಗ ಆಗಲೇ ಸಂಜೆ. ಮಳೆಯ ಆರ್ಭಟ ನಿಂತಿದ್ದರೂ ಮಳೆ ಸಂಪೂರ್ಣವಾಗಿ ನಿಂತಿರಲಿಲ್ಲ. ಜಿಟಿಜಿಟಿ ಮಳೆ ಮುಂದುವರಿದಿತ್ತು. ಪದೇ ಪದೇ ತನ್ನ ವಾಚಿನ ಕಡೆಗೆ ನೋಡಿಕೊಳ್ಳುತ್ತಾ ಮಳೆ ನಿಲ್ಲುವ ಲಕ್ಷಣಗಳು ಕಾಣದಿದ್ದಕ್ಕೆ ಅವಳು ಚಡಪಡಿಸಿ ಕೊನೆಗೆ ತನ್ನ ತನ್ನ ಚೂಡಿಯ ದುಪ್ಪಟ್ಟಾವನ್ನೇ ತಲೆಗೆ ಹೊದ್ದು ಹಾಗೆಯೇ ಮಳೆಯಲ್ಲಿಯೇ ಹೊರಟುಬಿಟ್ಟಳು. ನನ್ನ ಕೈಯಲ್ಲಿ ಛತ್ರಿ ಇದ್ದರೂ ಅವಳಿಗೆ ಮಾತಾಡಿಸಿ ಕೊಡಲು ಹಿಂಜರಿಕೆ. ಹೇಗೊ ಧೈರ್ಯಮಾಡಿ ಅವಳ ಹಿಂದೆ ಹೊರಟುಬಿಟ್ಟೆ. ಕಂಪಿಸುತ್ತಿದ್ದ ಹೃದಯವನ್ನು ನಿಯಂತ್ರಿಸುತ್ತಾ ಛತ್ರಿ ಬಿಡಿಸಿ ಅವಳಿಗೆ ಹಿಡಿದೆ. ಒಂದು ಕ್ಷಣ ಗಲಿಬಿಲಿಗೊಂಡ ಅವಳು ಸಾವರಿಸಿಕೊಂಡು ಮುಗುಳ್ನಗೆ ಬೀರಿ ‘ಥ್ಯಾಂಕ್ಸ್’ ಎಂದುಲಿದಳು. ಅದು ಅವಳು ನನ್ನೊಂದಿಗೆ ಆಡಿದ ಮೊದಲ ನುಡಿ. ಅದೇ ನಮ್ಮ ಪ್ರೇಮದ ಮುನ್ನುಡಿಯೂ ಆಯ್ತು. ಪರಸ್ಪರ ಹೆಸರು, ಊರು ವಿವರಗಳನ್ನೆಲ್ಲಾ ವಿನಿಮಯ ಮಾಡಿಕೊಂಡೆವು. ಅವಳ ಹಾಸ್ಟೆಲ್‍ವರೆಗೆ ಇಬ್ಬರೂ ಮಳೆಯಲ್ಲಿ ನೆನೆಯುತ್ತಾ ನಡೆದ ಸಮಯ ಇದೆಯಲ್ಲಾ, ಅದು ಮರೆಯಲಾಗದ ಮಧುರ ನೆನಪಾಗಿ ಉಳಿಯಿತು. ಹಾಸ್ಟೆಲ್ ಗೇಟ್‍ಗೆ ಅವಳನ್ನು ಬಿಟ್ಟು ನನ್ನ ರೂಂ ಗೆ ಮರಳಿದ ನನಗೆ ನನ್ನ ಮನಸು ಖುಷಿಯಿಂದ ಗಾಳಿಯಲ್ಲಿ ತೇಲಿಹೋಗುತ್ತಿದೆಯೇನೋ ಅಂತ ಅನಿಸಿತ್ತು. ‘ಐ ಲವ್ ಯೂ, ಲವ್‍ಯೂ ಟೂ...’ ಎಂಬ ಇವ್ಯಾವು ಪದಗಳ ಹಂಗಿಲ್ಲದೇ ನಮ್ಮ ಪ್ರೀತಿ ಆರಂಭವಾಗಿತ್ತು. ‘ಅವಳು ಮಲೆನಾಡು... ನಾನು ಬಯಲು ಸೀಮೆ, ಅವಳೂ ಏರುಧ್ವನಿ... ನಾನು ಮಹಾನ್ ಮೌನಿ, ಅವಳು ಕೋಪದಿಂದ ಕದಲುವ ಕಡಲು... ನಾನು ಶಾಂತ ಸರೋವರ...’ ಹೀಗೆ ತದ್ವಿರುದ್ಧ ವ್ಯಕ್ತಿತ್ವದ ನಮ್ಮನ್ನು ಪ್ರೇಮ ಬಂಧಿಸಿ ಒಂದುಗೂಡಿಸಿತ್ತು. ಯುನಿವರ್ಸಿಟಿಯ ನನ್ನ ಓದು ಮುಗಿಯುವುದರೊಳಗೆ ನೌಕರಿಯೊಂದು ಹುಡುಕಿಕೊಂಡು ಬಂದಿತ್ತು. ನೌಕರಿ ಹಿಡಿದು ವರ್ಷ ಕಳೆಯುವುದರಲ್ಲಿ ಸುಮಿಯನ್ನು ಮನೆಗೆ ಕರೆದೊಯ್ದು ಅಪ್ಪ ಅಮ್ಮನಿಗೆ ಪರಿಚಯಿಸಿದ್ದೆ. ಪ್ರೀತಿ ಪ್ರೇಮ ಇದ್ಯಾವುದನ್ನು ಇಷ್ಟಪಡದ ಅವರು ಮೊದಮೊದಲು ಈ ಮದುವೆ ನಿರಾಕರಿಸಿಬಿಟ್ಟಿದ್ದರು. ಆಮೇಲೆ ನನ್ನ ಪ್ರೀತಿಯ ಒತ್ತಾಯಕ್ಕೆ ಮಣಿದು ಮದುವೆಗೆ ಒಪ್ಪಿಗೆ ನೀಡಿದ್ದರು. ಸುಮಿಯ ಅಪ್ಪ ಅಮ್ಮನ ಮನಸ್ಥಿತಿಯೂ ನಮ್ಮ ಅಪ್ಪ ಅಮ್ಮನ ಮನಸ್ಥಿತಿಗಿಂತ ಭಿನ್ನವಾಗಿರಲಿಲ್ಲ, ಅಂತೂ ಎರಡೂ ಕಡೆ ಮದುವೆಗೆ ಒಪ್ಪಿಸಿ ಹಂಪೆಯ ತುಂಗಾಭದ್ರೆಯ ದಡದಲ್ಲಿಯ ರಾಮಲಕ್ಷ್ಮಣ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾದೆವು. ಅತ್ತೆ ನನ್ನ ಕಿವಿಯಲ್ಲಿ ಉಸುರಿದ್ದರು ‘ನನ್ನ ಮಗಳಿಗೆ ಕೋಪ ಜಾಸ್ತಿ, ಸ್ವಲ್ಪ ನೀನೆ ಹೊಂದಿಕೊಂಡು ಹೋಗಪ್ಪಾ’. ಅದು ನನಗೆ ಗೊತ್ತಿದ್ದದೇ ಅಲ್ಲವೆ? ಸುಮಿ ನಗುವಾಗ ಸಂಪಿಗೆಯಾದರೂ ಕೋಪಿಸಿಕೊಂಡಾಗ ಕೆಂಡ ಸಂಪಿಗೆಯೇ ಸರಿ. ಅಲ್ಲಿಂದ ಶುರುವಾಯಿತು ಸುಮಿಯೊಂದಿಗಿನ ನನ್ನ ಬಾಳ ಪಯಣ. ಸಣ್ಣದ್ದಕ್ಕೂ ಥಟ್ಟನೇ ಸಿರ್ರೆನ್ನುವ ಅವಳ ಕೋಪ ಮದುವೆಯ ಆರಂಭದಲ್ಲಿ ಸ್ವಲ್ಪ ತಗ್ಗಿತ್ತು. ಇದು ನನಗೂ ಅಚ್ಚರಿಯ ವಿಷಯವೇ ಆಗಿತ್ತು. ಆದರೆ ಇತ್ತೀಚಿಗೆ ಆ ಕೋಪ ದಿನೇ ದಿನೇ ತಾರಕಕ್ಕೇರತೊಡಗಿತ್ತು. ಇದರ ಜೊತೆಗೆ ವಿನಾಕಾರಣ ಅನುಮಾನಿಸುವ ಸ್ವಭಾವ ಬೆಳೆಸಿಕೊಂಡಿದ್ದಳು. ಅದರ ಭಾಗವಾಗಿಯೇ ಇಂದು ಕೋಪದಿಂದ ಜೋರಾಗಿ ಕೂಗಿ ಕೇಳುತ್ತಿದ್ದಾಳೆ. ‘ಈ ಕೂದಲು ನಿಮ್ಮ ಶರ್ಟ್ ಮೇಲೆ ಹೇಗೆ ಬಂತು..?’
ನಾನು ಯೋಚಿಸತೊಡಗಿದೆ. ಹೌದು, ನಿನ್ನೆ ಬಸ್‍ನಲ್ಲಿ ವಿಪರೀತ ರಷ್ ಇತ್ತು. ನನ್ನ ಹಿಂದೆ ಮುಂದೆ ಹೆಂಗಸರು ನಿಂತಿದ್ದು ಬಸ್‍ನ ಕುಲುಕಾಟದಲ್ಲಿ ಅವರ ಮೈ ನನ್ನ ಮೈಗೆ ಬಡಿಯುತ್ತಿತ್ತು. ಈ ಕೂದಲು ಅವರದೇ ಇರಬೇಕು. ಹೀಗೆ ಮನಸ್ಸಿನಲ್ಲಿ ತರ್ಕಿಸುತ್ತಾ ಸುಮಿಗೆ ವಿವರಿಸಲು ಪ್ರಯತ್ನಿಸಿದೆ. ಅವಳು ಕೇಳುವ ಸ್ಥಿತಿಯಲ್ಲಿರಲಿಲ್ಲ. ಅವಳ ಕೋಪ ಉತ್ತುಂಗಕ್ಕೇರಿ ಕೊನೆಗೆ ಊಟ ಮಾಡದೇ ಅಳುತ್ತಾ ಮಲಗಿದಳು. ಅವಳ ಈ ವರ್ತನೆಯ ಬಗ್ಗೆ ನನಗೂ ಕೋಪ ಬಂದಿತ್ತು. ಆದರೆ ಮರುಕ್ಷಣವೇ ಅವಳ ಪೆದ್ದುತನಕ್ಕೆ ಮರುಕಪಡುವುದೋ? ಅಥವಾ ಅವಳ ಅನುಮಾನಕ್ಕೆ ಕೋಪಿಸಿಕೊಳ್ಳುವುದೋ? ಎಂದು ಗೊತ್ತಾಗದೇ ಸುಮ್ಮನಾದೆ. ನಾಲ್ಕೈದು ದಿನ ಮುನಿಸಿಕೊಂಡೇ ಇದ್ದಳು. ಮುಖಕ್ಕೆ ಮುಖಕೊಟ್ಟು ಸರಿಯಾಗಿ ಮಾತಾಡಲಿಲ್ಲ. ಗಂಡ ಹೆಂಡತಿಯ ಜಗಳದ ನಡುವೆ ಕೂಸು ಬಡವಾಗಬಾರದೆಂದು ಊರಿನಿಂದ ಅಮ್ಮನನ್ನು ಕರೆತಂದೆ. ಒಂದು ವಾರ ಜೊತೆಗಿದ್ದ ಅಮ್ಮ ತನ್ನ ಸೊಸೆಗೆ ಕೆಲವು ಕಿವಿಮಾತುಗಳನ್ನು ಹೇಳಿ ವಾಪಾಸ್ಸು ಹೋದಳು. ಇವ್ಯಾವು ಸುಮಿಯ ಮನಸ್ಸಿಗೆ ತಾಕಲೇ ಇಲ್ಲ.
ಮನೆ ಕೆಲಸವನ್ನು ಅಚ್ಚುಕಟ್ಟಾಗಿ ಚುರುಕಾಗಿ ಮಾಡುತ್ತಿದ್ದ ಮನೆಗೆಲಸದ ಹುಡುಗಿಯ ಜೊತೆ ಒಮ್ಮೆ ಆತ್ಮೀಯವಾಗಿ ಮಾತಾಡುತ್ತಿದ್ದೆ. ಅದನ್ನು ನೋಡಿದವಳೇ ಸಿರ್ರನೇ ರೇಗಿ ‘ಏನ್ರೀ ಹಲ್ಲು ಕಿಸಗೋತ ಮಾತಾಡ್ತಿದೀರಿ? ಇವಳತ್ರ ನಿಮ್ಗೇನು ಕೆಲ್ಸ?’ ಎನ್ನುತ್ತಾ ‘ಏಯ್ ಬಾರೇ ಹಿತ್ತಲಲ್ಲಿ ಮುಸುರೆ ಪಾತ್ರೆ ಬಿದ್ದಿವೆ, ತೊಳೀವಂತೆ ಬಾ’ ಎಂದು ಅವಳನ್ನು ಕರೆದಳು. ಹುಡುಗಿ ಪೆಚ್ಚಾಗಿ ನನ್ನೆಡೆಗೆ ನೋಡುತ್ತಾ ಹೊರಟಳು. ಸುಮಿಯ ಈ ವರ್ತನೆ ರೇಜಿಗೆ ಹುಟ್ಟಿಸುತ್ತಿತ್ತು. ತಿಳಿಸಿ ಹೇಳಿದರೂ ಪ್ರಯೋಜನವಾಗುತ್ತಿರಲಿಲ್ಲ. ಮುಂದಿನ ವಾರಕ್ಕಾಗಲೇ ಮನೆಗೆಲಸದ ಹುಡುಗಿಯನ್ನು ಬಿಡಿಸಿ ಮಧ್ಯವಯಸ್ಸು ದಾಟಿದ ಹೆಂಗಸೊಬ್ಬಳನ್ನು ಮನೆಗೆಲಸಕ್ಕೆ ನೇಮಿಸಿಕೊಂಡಿದ್ದಳು. ‘ಅಯ್ಯೋ... ನಿನ್ನ ಅನುಮಾನದ ಬುದ್ಧಿಯೇ...’ ಎಂದು ನನ್ನೊಳಗೆ ಅಂದುಕೊಂಡೆ. ನನಗೆ ಯಾವುದಾದರೂ ಫೋನ್ ಕರೆ ಬಂದಾಗ ಅಲ್ಲೇ ನಿಂತು ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಯಾರು ಕಾಲ್ ಮಾಡಿದ್ದು? ಯಾಕೆ? ಏನಂತೆ? ಅಂತೆಲ್ಲಾ ಪ್ರಶ್ನೆಗಳನ್ನು ಪಟಪಟನೇ ಕೇಳಿ ಅನುಮಾನದಿಂದ ಮುಖ ದಿಟ್ಟಿಸುತ್ತಿದ್ದಳು. ನಿಜ ಹೇಳಿದರೂ ನಂಬುತ್ತಿರಲಿಲ್ಲ. ‘ಸುಳ್ಳು ಯಾಕೆ ಹೇಳ್ತಿದೀರಿ? ನಿಜ ಹೇಳಿ’ ಎನ್ನುತ್ತಿದ್ದಳು. ನನಗೂ ಅವಳಿಗೆ ಹೇಳಿ ಹೇಳಿ ಸಾಕಾಗಿ ಕೆಲವು ಸಲ ಸುಮ್ಮನಾಗಿಬಿಡುತ್ತಿದ್ದೆ. ಆವಾಗೆಲ್ಲಾ ಸುಮಿ ಕೋಪದಿಂದ, ಅಸಮಾಧಾನದಿಂದ ಧುಮುಗುಡುತ್ತಿದ್ದಳು. ಬಸ್‍ನ ಕೂದಲು ಪ್ರಕರಣದಿಂದ ಎಚ್ಚೆತ್ತುಕೊಂಡ ನಾನು ಈಗ ಬೈಕ್‍ನಲ್ಲಿಯೇ ಆಫೀಸ್‍ಗೆ ಹೋಗಿ ಬರುತ್ತಿದ್ದೆ. ಇದರಿಂದಾಗಿ ಸಂಜೆ ಬೇಗನೆ ಮರಳಿ ಆಫೀಸ್‍ನ ಒತ್ತಡವನ್ನೆಲ್ಲಾ ವಿನೀತನೊಂದಿಗೆ ಆಡುತ್ತಾ ಮರೆಯುತ್ತಿದ್ದೆ. ಈ ನಡುವೆ ಸುಮಿ ಕೋಪ ಕಡಿಮೆ ಮಾಡಿಕೊಂಡಿದ್ದರೂ ಬಟ್ಟೆ ಮೂಸುವುದು, ನನ್ನ ಮೊಬೈಲು ಪರಿಶೀಲಿಸುವುದು ಮಾತ್ರ ಬಿಟ್ಟಿರಲಿಲ್ಲ. ಅದಕ್ಕೂ ಆಕ್ಷೇಪಣೆ ವ್ಯಕ್ತಪಡಿಸಿದರೆ ದೊಡ್ಡ ಜಗಳವಾಗುವ ಸಂಭವವಿದ್ದರಿಂದ ಏನಾದ್ರೂ ಮಾಡಿಕೊಳ್ಳಲಿ ಎಂದು ಸುಮ್ಮನಾಗಿಬಿಟ್ಟೆ. ಇವಳ ಈ ಸ್ವಭಾವದ ಬಗ್ಗೆ ಹೊಸಪೇಟೆಯ ಖ್ಯಾತ ಮನೋವೈದ್ಯರಾದ ಡಾ. ಮನು ಅವರಲ್ಲಿ ಚರ್ಚಿಸಿದೆ. ಒಮ್ಮೆ ಕ್ಲಿನಿಕ್‍ಗೆ ಕರೆದುಕೊಂಡು ಬನ್ನಿ ಕೌನ್ಸಿಲಿಂಗ್ ಮಾಡೋಣ ಅಂದಿದ್ದರು. ಆದರೆ ಇವಳನ್ನು ಮನವೊಲಿಸಿ ಕರೆದುಕೊಂಡು ಬರುವುದೇ ನನಗೆ ಸವಾಲಿನ ವಿಷಯವಾಗಿತ್ತು. ಅವಳ ಖುಷಿಯ ಮೂಡ್ ಗಮನಿಸಿ ನಿಧಾನವಾಗಿ ಅನುನಯಿಸುತ್ತಾ ವಿಷಯ ಪ್ರಸ್ತಾಪಿಸಿದೆ. ಇದಕ್ಕಿದ್ದಂತೆಯೇ ಅವಳ ಮುಖ ವಿವರ್ಣವಾಗತೊಡಗಿತು. ಕಣ್ಣುಗಳು ಕೆಂಪಾದವು. ಕೋಪದಿಂದ ಧಿಗಿಲ್ಲನೇ ಸ್ಫೋಟಗೊಂಡಳು. ‘ಏನ್ರೀ... ಹ್ಞಾಂ... ಏನ್ ಮಾತಾಡ್ತಿದೀರಿ? ನಾನು ಸೈಕಾಲಾಜಿಸ್ಟ್ ಹತ್ರ ಬರ್ಬೇಕಾ? ನಂಗೇನೂ ಹುಚ್ಚು ಹಿಡಿದಿಲ್ಲ ಬರೋಕೆ. ಸರಿಯಾಗೇ ಇದೀನಿ. ಮೊದ್ಲು ನೀವೇ ತೋರಿಸಿಕೊಳ್ಳಿ...’ ಕೂಗಾಡತೊಡಗಿದಳು. ಇದು ಸಾಧ್ಯವಾಗದ ಕೆಲಸವೆಂದು ಸುಮ್ಮನಾದೆ. ನನ್ನನ್ನು ಅಷ್ಟೊಂದು ನಂಬುತ್ತಿದ್ದ ಪ್ರೀತಿಸುತ್ತಿದ್ದ ಸುಮಿ ಇತ್ತೀಚಿನ ಕೆಲವು ತಿಂಗಳುಗಳಿಂದ ಯಾಕೆ ಅಷ್ಟೊಂದು ಅನುಮಾನ ಪಡುತ್ತಿದ್ದಾಳೆಂದು ಅರ್ಥವಾಗದೇ ಯೋಚಿಸಿ ಯೋಚಿಸಿ ಸುಸ್ತಾದೆ. ಅಲ್ಲದೇ ಅವಳ ಕೋಪವೂ ಮಿತಿಮೀರತೊಡಗಿತ್ತು. ಚಿಕ್ಕ ಪುಟ್ಟ ವಿಷಯಕ್ಕೂ ಜೋರಾಗಿ ಕಿರುಚಾಡುತ್ತಿದ್ದಳು. ಅವಳ ಕೂಗಾಟಕ್ಕೆ ಮಗು ವಿನೀತ್ ಕಂಗಾಲಾಗಿ ಅಳುತ್ತಿದ್ದ. ನನಗಂತೂ ಸಹನೆ ಸತ್ತು ಹೋಗುತ್ತಿತ್ತು. ಆದರೂ ಸುಮ್ಮನಿದ್ದೆ. ನಮ್ಮ ನಡುವೆ ಮೊದಲಿನ ಪ್ರೀತಿ ಇಲ್ಲವಾಗಿತ್ತು. ಮೊದಲೆಲ್ಲಾ ಬೆಳಿಗ್ಗೆ ರೆಡಿಯಾಗಿ ಆಫೀಸ್‍ಗೆ ಹೋಗುವಾಗಲೆಲ್ಲಾ ಅವಳನ್ನು ಬರಸೆಳೆದು ನಾಚುತ್ತಿದ್ದ ಅವಳ ಕೆನ್ನೆಗೆ ಹೂ ಮುತ್ತು ನೀಡಿ ಬೈ ಹೇಳಿ ಹೊರಡುತ್ತಿದ್ದೆ. ಬಾಗಿಲಲ್ಲಿ ನಿಂತು ಕೈ ಬೀಸುತ್ತಿದ್ದ ಸುಮಿ ನಾನು ಮನೆಯ ಬೀದಿಯ ತುದಿ ದಾಟುವವರೆಗೆ ನಿಂತು ನೋಡುತ್ತಿದ್ದಳು. ಇವಾಗ್ಯಾಕೆ ಆ ಪ್ರೀತಿ ಮರೆಯಾಗುತ್ತಿದೆಯೋ..? ಯೋಚಿಸಿ ಯೋಚಿಸಿ ಮಧ್ಯಾಹ್ನದ ಹೊತ್ತಿಗೆ ತಲೆ ಧಿಮಿಗುಡತೊಡಗಿತ್ತು. ಇನ್ನು ಆಫೀಸ್‍ನಲ್ಲಿ ಇರಲಾರೆ ಅನ್ನಿಸಿ ಅರ್ಧದಿನ ರಜೆ ಹಾಕಿ ಮನೆ ಕಡೆ ಹೊರಟೆ.
ಬಾಗಿಲು ತೆರೆದೇ ಇತ್ತು. ಒಳಗಿಂದ ಅಪರಿಚಿತ ಹೆಣ್ಣಿನ ಜೋರುಧ್ವನಿ, ಖಿಲ್ಲನೆಯ ನಗು ಕೇಳಿ ಬರುತ್ತಿತ್ತು. ಯಾರಿರಬಹುದು ಎಂದು ಕುತೂಹಲದಿಂದ ಒಳಗೆ ಹೆಜ್ಜೆಯಿಟ್ಟೆ. ಎದುರು ಮನೆ ಜಲಜ ವಿನೀತನನ್ನು ಎತ್ತಿಕೊಂಡು ಜೋರಾದ ಧ್ವನಿಯಲ್ಲಿ ಆಡಿಸುತ್ತಿದ್ದಳು. ಸುಮಿ ಅಡುಗೆ ಕೋಣೆಯಲ್ಲಿ ಏನೋ ಮಾಡುತ್ತಿದ್ದಳು. ದಿಢೀರನೇ ನನ್ನನ್ನು ನೋಡಿದ ಜಲಜ ಮಾತೇ ಹೊರಡದಂತಾಗಿ ಮಗುವನ್ನು ಕೆಳಗಿಳಿಸಿ ಬಿರಬಿರನೆ ಹೊರಟುಬಿಟ್ಟಳು. ಅಲ್ಲಿಯವರೆಗೆ ನಗುತ್ತಿದ್ದ ವಿನೀತ್ ತನ್ನನ್ನು ಅವಳು ಬಿಟ್ಟು ಹೋಗುವುದನ್ನು ನೋಡಿ ಕಿಟಾರನೇ ಕಿರುಚಿ ಅಳತೊಡಗಿದ. ನಾನು ಅವನನ್ನು ಎತ್ತಿಕೊಂಡು ಸಂತೈಸತೊಡಗಿದೆ. ನನ್ನ ದನಿ ಕೇಳಿ ಹೊರಬಂದ ಸುಮಿ ನನ್ನನ್ನೊಮ್ಮೆ ನೋಡಿ ನನ್ನ ಅನಿರೀಕ್ಷಿತ ಆಗಮನದಿಂದ ಅಚ್ಚರಿಗೊಂಡು ಮತ್ತೆ ಅಡುಗೆ ಕೋಣೆ ಸೇರಿಕೊಂಡಳು. ಬದಲಾದ ಸುಮಿಯ ವರ್ತನೆಗೆ ಈಗ ಕಾರಣ ಸ್ಪಷ್ಟವಾಗಿ ಗೋಚರವಾಗಲಾರಂಭಿಸಿತು. ಎದುರು ಮನೆ ಜಲಜ ಮಂಥರೆಯ ಪಡಿಯಚ್ಚಿನಂಥವಳು. ಇದ್ದೊಬ್ಬ ಮಗ ದೂರದ ಊರಿನಲ್ಲಿ ಕಾಲೇಜು ಓದುತ್ತಿದ್ದ. ಅವಳ ಗಂಡ ಸಂಡೂರಿನ ಮೈನಿಂಗ್ ಕಂಪನಿಯೊಂದರಲ್ಲಿ ಮೇನೇಜರ್ ಆಗಿದ್ದವನು ಹತ್ತೊ ಹದಿನೈದೊ ದಿನಕ್ಕೊಮ್ಮೆ ಹೆಂಡತಿ ಕಾಣಲು ಮನೆಗೆ ಬರುತ್ತಿದ್ದ. ಉಳಿದಂತೆ ಯಾವಾಗಲೂ ಮನೆಯಲ್ಲಿ ಇರುವವಳು ಜಲಜಾ ಒಬ್ಬಳೇ. ಅದು ಹೇಗೆ ಸುಮಿಯೊಂದಿಗೆ ಸ್ನೇಹ ಬೆಳೆಸಿದಳೋ ಏನೋ. ಯಾರನ್ನೂ ಅಷ್ಟಾಗಿ ಹಚ್ಚಿಕೊಳ್ಳದ ಸುಮಿ ಜಲಜಾಳನ್ನು ತುಂಬಾ ನಂಬಿದ್ದಳು ಅನ್ಸುತ್ತೆ. ಗಂಡಸರ ಬಗ್ಗೆ ಯಾವಾಗಲೂ ಕುದಿಯುತ್ತಿದ್ದ ಜಲಜ ತನ್ನ ಗಂಡನೊಂದಿಗೂ ಸರಿಯಾಗಿರಲಿಲ್ಲ. ಗಂಡನನ್ನು ಯಾವಾಗಲೂ ಕಿರುಬೆರಳಲ್ಲಿ ಕುಣಿಸುತ್ತಿದ್ದಳು. ಸುಮಿಯ ಕಿವಿಯಲ್ಲಿ ನನ್ನ ಬಗ್ಗೆ ಅದೇನು ಕಿಡಿ ಹೊತ್ತಿಸಿದ್ದಳೋ..? ಇವಳ ಮಾತನ್ನು ನಂಬಿ ಸುಮಿ ನನ್ನೊಂದಿಗೆ ಹೀಗೆ ವರ್ತಿಸುತ್ತಿರಬಹುದೇ..? ಮನಸ್ಸಿನ ಅಗೋಚರ ಪದರುಗಳಲ್ಲಿ ಊಹೆ, ಅನುಮಾನದ ಅಲೆಗಳು ಏಳಲಾರಂಭಿಸಿದವು. ಮರುದಿನ ಮಾರ್ಕೆಟ್‍ನಲ್ಲಿ ಕಂಡ ಜಲಜಾಳಿಗೆ ಎಚ್ಚರಿಕೆಯ ದನಿಯಲ್ಲಿ ಹೇಳಿದ್ದೆ ‘ಇನ್ನು ಮುಂದೆ ನನ್ನ ಮನೆಯ ಹೊಸ್ತಿಲು ತುಳಿಯಬೇಡಿ’. ಜಲಜಾಳ ಮುಖ ಕಳಾಹೀನವಾಗಿ ತಲೆ ತಗ್ಗಿಸಿ ಏನೂ ಮಾತಾಡದೇ ಹೊರಟಿದ್ದಳು.
ಜನೇವರಿ 16, ಅಂದು ವಿನೀತನ ಜನ್ಮದಿನ. ಆಫೀಸ್‍ಗೆ ರಜೆ ಹಾಕಿದ್ದೆ. ಸುಮಿ ಉಲ್ಲಾಸದ ಲಹರಿಯಲ್ಲಿದ್ದಳು. ಹಂಪೆಯ ಅನಾಥಾಶ್ರಮವೊಂದರಲ್ಲಿ ವಿನೀತನ ಜನ್ಮದಿನ ಆಚರಿಸಿ ಮಕ್ಕಳಿಗೆಲ್ಲಾ ಸಿಹಿ ಹಂಚಿದೆವು. ನಾಲ್ಕು ವರ್ಷಗಳ ನಂತರ ಒಟ್ಟಿಗೆ ಹಂಪೆಗೆ ಬಂದಿದ್ದೆವು, ಜೊತೆಗೆ ವಿನೀತ್. ಹಳೆಯ ನೆನಪುಗಳು ಮರುಕಳಿಸಿದವು. ಗುಡಿ, ಮಂಟಪ, ಬಂಡೆಗಲ್ಲುಗಳ ಸುತ್ತಾ ಓಡಾಡಿ ಸಂಭ್ರಮಿಸಿದೆವು. ಸುಮಿ ಇಡೀ ದಿನ ಸಂತಸದ ಲಹರಿಯಲ್ಲಿದ್ದಳು. ಸಂಜೆ ಕಮಲಾಪುರ ಕೆರೆಯ ದಡದಲ್ಲಿ ಕುಳಿತು ವಿನೀತನೊಂದಿಗೆ ಆಟವಾಡುತ್ತಾ ಹಳೆಯ ನೆನಪುಗಳನ್ನು ಕೆದಕಿಕೊಂಡೆವು. ಸೂರ್ಯ ನಿಧಾನವಾಗಿ ಕೆಂಬಣ್ಣ ಹರಡುತ್ತಾ ಪಡುವಣದಲ್ಲಿ ಮುಳುಗುತ್ತಿದ್ದ. ಸುಮಿಯ ಇವತ್ತಿನ ವರ್ತನೆಯ ಬಗ್ಗೆ ನನಗೆ ಅಚ್ಚರಿ ಬೆರೆತ ಸಂಭ್ರಮವಿತ್ತು.
ರಾತ್ರಿ ಊಟ ಮುಗಿಸಿ ಮಲಗಿದಾಗ ‘ಸುಮೀ’ ಅಂದೆ. ‘ಮ್...?’ ಅಂದವಳ ದನಿಯಲ್ಲಿ ಜೇನಿನ ಸಿಹಿಯಿತ್ತು. ‘ನೋಡು ಸುಮೀ, ನಾವಿಬ್ಬರೂ ಪ್ರೀತಿಸಿ ಮದುವೆಯಾದವರು. ಮದುವೆಯ ಮುಂಚೆ, ಮದುವೆಯ ನಂತರ ನಮ್ಮ ನಡುವಿನ ಪ್ರೀತಿ ಅದೆಷ್ಟು ಮಧುರವಾಗಿತ್ತು. ಒಮ್ಮೆ ಯೋಚಿಸು. ಈಗ ಅದೆಲ್ಲಾ ಮರೆಯಾಗುತ್ತಿದೆ. ನಿನ್ನ ಅನುಮಾನ, ಕೋಪ ನನ್ನ ಉಸಿರುಗಟ್ಟಿಸುತ್ತಿವೆ ಕಣೇ. ಮೊದಲಿನ ಸುಮಿ ನಿನ್ನೊಳಗೆ ಎಲ್ಲಿ ಕಳೆದುಹೋದಳು? ಹೇಳು. ಸಂಸಾರದ ಹಡಗು ಮುಳುಗೋಕೆ ಅನುಮಾನದ ಚಿಕ್ಕ ರಂಧ್ರ ಸಾಕು. ಸಾಕು ಕಣೇ, ಇದನ್ನು ಇಲ್ಲಿಗೆ ಬಿಡು. ಪ್ರೀತಿಗಿಂತ ನಂಬಿಕೆ ದೊಡ್ಡದು. ನಂಬಿಕೆಯ ಬುನಾದಿ ಬಿಗಿ ಇದ್ದಾಗಲೇ ಪ್ರೀತಿಯ ಸೌಧ ಧೃಡವಾಗಿ ನಿಲ್ಲುವುದಕ್ಕೆ ಸಾಧ್ಯ, ಅಲ್ವೇ?’ ಅಂದೆ. ಸುಮಿ ಸುಮ್ಮನೇ ನನ್ನ ಮಾತು ಕೇಳುತ್ತಾ, ಪಿಳಿ ಪಿಳಿ ಕಣ್ಣು ಮಿಟುಕಿಸುತ್ತಾ ಹ್ಞೂಂಗುಟ್ಟಿದಳು, ‘ನಿನ್ನ ಪ್ರೀತಿಗೆ ನಾ ಯಾವತ್ತು ಮೋಸ ಮಾಡಿಲ್ಲ, ಮಾಡುವುದೂ ಇಲ್ಲ. ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು, ನಿನ್ನ ಪ್ರೀತಿಗೆ ಮೋಸ ಮಾಡ್ತಿದೀನಿ ಅನ್ಸುತ್ತಾ? ಈಗಲೂ ನೀ ನನ್ನ ನಂಬದಿದ್ದರೆ ನಮ್ಮ ಮಗುವಿನ ಮೇಲೆ ಪ್ರಮಾಣ ಮಾಡಿ ಹೇಳ್ತೀನಿ ಎಂದು ಮಲಗಿದ್ದ ವಿನೀತನ ತಲೆ ಕಡೆಗೆ ಕೈಚಾಚಿದೆ. ಗಬಕ್ಕನೇ ಕೈ ಹಿಡಿದುಕೊಂಡ ಸುಮಿ, ‘ರೀ... ನನ್ನ ಕ್ಷಮಿಸಿ ಬಿಡಿ, ನಿಮ್ಮನ್ನು ತುಂಬಾ ಅನುಮಾನಿಸಿದೆ, ಅವಮಾನಿಸಿದೆ, ನೋಯಿಸಿದೆ. ದಯವಿಟ್ಟು ನನ್ನ ಕ್ಷಮಿಸಿಬಿಡಿ’ ಎನ್ನುತ್ತಾ ಕಣ್ಣೀರಾದಳು. ಮನಸ್ಸು ಹೂವಿನಂತೆ ಹಗುರವಾಗತೊಡಗಿತು. ‘ಅಯ್ಯೋ ಸುಮಿ... ಇದಕ್ಕೆಲ್ಲಾ ಅಳ್ತಾರೇನೆ? ನಮ್ಮ ನಡುವೆ ಕ್ಷಮೆಯ ಮಾತೇಕೆ? ಬರೀ ಪ್ರೀತಿಯ ಮಾತು ಅಷ್ಟೇ ಇರಬೇಕು’ ಎನ್ನುತ್ತಾ ಮೃದುವಾಗಿ ತಬ್ಬಿಕೊಂಡೆ. ನಿದ್ದೆಯಲ್ಲಿ ಏನೋ ಕನಸು ಕಂಡಂತೆ ಮಗು ವಿನೀತನ ಮುಖದಲ್ಲಿ ಮುಗುಳ್ನಗೆ ಲಾಸ್ಯವಾಡುತ್ತಿತ್ತು.
****************************** ********
- ರಾಜ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ