ಗುರುವಾರ, ಆಗಸ್ಟ್ 15, 2019

ಒಡೆದ ಕನ್ನಡಿ ಚೂರುಗಳು (ಕಥೆ)




 ಒಡೆದ ಕನ್ನಡಿ ಚೂರುಗಳು 


‘ಅಯ್ಯಯ್ಯಪ್ಪೋ... ಯಪ್ಪೋ...’ ಬಿಸಿಲೂರಿನ ಸರ್ಕಾರಿ ಆಸ್ಪತ್ರೆಯ ವಾರ್ಡ್ನಿಂದ ಹೊರಬಿದ್ದ ಮೈಲ್ಗ್ಯಾನ ಹೃದಯ ವಿದ್ರಾವಕ ಕೂಗು ಮಧ್ಯರಾತ್ರಿಯ ನೀರವ ಮೌನವನ್ನು ಕದಡತೊಡಗಿತು. ನೈಟ್ಶಿಫ್ಟ್ ಡ್ಯೂಟಿಯಲ್ಲಿದ್ದ ವಾರ್ಡ್ಬಾಯ್ ಹನುಮ ಚಿಕ್ಕ ಸ್ಟೂಲ್ ಮೇಲೆ ಕುಳಿತು ತೂಕಡಿಸುತ್ತಿದ್ದವನು ಥಟ್ಟನೇ ಬೆಚ್ಚಿಬಿದ್ದು ಒಂದು ಕ್ಷಣ ಆಲಿಸಿ ‘ಥೂ... ಇವನೌನ..’ ಎಂದು ಮನಸ್ಸಿನಲ್ಲೇ ಬೈದುಕೊಂಡು ಮತ್ತೆ ನಿದ್ರೆಗೆ ಜಾರಿದ್ದ. ಗಾಢ ನಿದ್ರೆಯಲ್ಲಿದ್ದ ನರ್ಸ್ವೊಬ್ಬಳು ಮೈಲ್ಗ್ಯಾನ ಕೂಗಿಗೆ ಎಚ್ಚರಗೊಂಡು ತನ್ನ ನಿದ್ದೆ ಭಂಗಗೊಳಿಸಿದಕ್ಕೆ ಗೊಣಗಾಡುತ್ತಲೇ ಬಂದು ಯಾವುದೋ ಇಂಜೆಕ್ಷನ್ ಚುಚ್ಚಿದಳು. ಇಡೀ ಜೀವಮಾನದ ನೋವನ್ನೆಲ್ಲಾ ಒಮ್ಮೆಲೆ ಅನುಭವಿಸುತ್ತಿರುವವನಂತೆ ಚೀರಾಡುತ್ತಿದ್ದ ಮೈಲ್ಗ್ಯಾನ ಕೂಗು ಕ್ರಮೇಣ ಕ್ಷೀಣವಾಗುತ್ತಾ ನಸುಕಿನ ಜಾವದ ವೇಳೆಗೆ ಸ್ತಬ್ಧವಾಗಿತ್ತು. ನೋವಿನಾಳದ ನಡುವೆ ಗಾಢನಿದ್ರೆಗೆ ಜಾರಿದ್ದ. ನಿದ್ದೆ ಮೈ ಮನಸ್ಸಿನ ನೋವನ್ನು ಮರೆಸುತ್ತದೆಯಂತೆ, ತಾತ್ಕಾಲಿಕವಾಗಿಯಾದರೂ...

*****************

ಮೈಲ್ಗ್ಯಾ ಬಿಸಿಲೂರಿನ ದಿನಗೂಲಿ ಪೌರಕಾರ್ಮಿಕ. ಇವನ ತಂದೆ ನಿಂಗ ಕೂಡಾ ಪೌರಕಾರ್ಮಿಕನಾಗಿದ್ದವನೇ. ಮೈಲ್ಗ್ಯಾ ಹುಟ್ಟುವಾಗಲೇ ತಾಯಿಯನ್ನು ಕಳೆದುಕೊಂಡಿದ್ದ. ಮೈಲ್ಗ್ಯಾನ ಹೆರಿಗೆಯಲ್ಲೇ ಅವನ ತಾಯಿ ತೀರಿಕೊಂಡಿದ್ದಳು. ತಂದೆ ನಿಂಗ ಮೈಲ್ಗ್ಯಾನನ್ನು ಬಹಳ ಕಷ್ಟಪಟ್ಟು ಜೋಪಾನದಿಂದ ಸಾಕಿದ್ದ. ಸ್ನೇಹಿತರು ಮರುಮದುವೆಗೆ ಒತ್ತಾಯಿಸಿದ್ದರೂ ತನ್ನ ಮಗನಿಗೆ ಮಲತಾಯಿ ತರುವುದು ಅವನಿಗಿಷ್ಟವಿರಲಿಲ್ಲ. ಹೀಗಾಗಿ ಮರುಮದುವೆಯಾಗದೇ ಹಾಗೆ ಉಳಿದಿದ್ದ. ‘ಊರ ಹೊಲಸು ಬಳಿಯುವುದು ನನಗೇ ಕೊನೆಯಾಗಲಿ, ನನ್ನ ಮಗ ಓದಿ ವಿದ್ಯಾವಂತನಾಗಲಿ’ ಎಂದು ಬಯಸಿದ್ದ ಅವನು ಮೈಲ್ಗ್ಯಾನ ಮೇಲೆ ಆಶಾ ಗೋಪುರವನ್ನೇ ಕಟ್ಟಿಕೊಂಡಿದ್ದ. ಪ್ರತಿದಿನ ತಾನೇ ಶಾಲೆಗೆ ಬಿಟ್ಟು ಕರೆತರುತ್ತಿದ್ದ. ‘ನಿನ್ನ ಮಗನನ್ನು ಎಲ್ಲಿವರ್ಗೆ ಓದಿಸ್ತೀಯಾ’  ಎಂದು ಯಾರಾದರೂ ಕೇಳಿದರೆ ‘ಎಮ್ಮೆಲ್ಲೆ ಆಗುವರ್ಗೆ ಓದಿಸ್ತೀನಿ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ. ಎಂ.ಎಲ್.ಎ. ಎನ್ನುವುದು ಸರ್ಕಾರದ ಉನ್ನತ ನೌಕರಿ ಎಂದು ತಿಳಿದುಕೊಂಡಿದ್ದ ಅಮಾಯಕ ಅನಕ್ಷರಸ್ತ ಅವನು. ಆದರೆ ಮೈಲ್ಗ್ಯಾ ಏಳನೇ ಕ್ಲಾಸಿಗೆ ಬರುವ ವೇಳೆಗೆ ಪೋಲಿ ಹುಡುಗರ ಸಹವಾಸಕ್ಕೆ ಬಿದ್ದು ಕೆಟ್ಟುಹೋಗಿದ್ದ. ನಿಂಗನ ಅಂಕೆ ಮೀರಿ ಬೆಳೆದಿದ್ದ ಅವನಿಗೆ ಓದು ತಲೆಗೆ ಹತ್ತದೇ ಶಾಶ್ವತವಾಗಿ ಶಾಲೆಗೆ ಶರಣು ಹೊಡೆದಿದ್ದ. ಮಗನನ್ನು ತಿದ್ದಲು ಸಾಧ್ಯವಿಲ್ಲವೆನಿಸಿದಾಗ ತನ್ನ ಕನಸು ತನ್ನ ಕಣ್ಮುಂದೆಯೇ ಕುಸಿಯುತ್ತಿರುವುದನ್ನು ಕಂಡ ನಿಂಗ ಬಿಕ್ಕಿಬಿಕ್ಕಿ ಅತ್ತಿದ್ದ. ತಾನು ಗಟ್ಟಿಮುಟ್ಟಾಗಿರುವವರೆಗೆ ದುಡಿದು ಮಗನನ್ನು ಸಾಕಿ ಕೊನೆಗೆ ಯಾವುದೋ ರೋಗ ಬಂದು ಕಣ್ಮುಚ್ಚುವ ವೇಳೆಗೆ ತನ್ನ ಮನೆದೇವರು ಮೈಲಾರಲಿಂಗನನ್ನು ನೆನೆದು ‘ತಂದೆಯೇ... ನನ್ನ ಮಗನನ್ನು ನೀನೆ ಕಾಪಾಡಪ್ಪ’ ಎಂದು ಬೇಡಿಕೊಂಡು ಕಣ್ಮುಚ್ಚಿದ್ದ. ಮುಂದೆ ನನ್ನ ಮಗ ನನ್ನಂತೆಯೇ ಪೌರಕಾರ್ಮಿಕನಾಗುತ್ತಾನೆಂದು ನಿಂಗನಿಗಾದರೂ ಎಲ್ಲಿ ಗೊತ್ತಿತ್ತು, ಗೊತ್ತಿದ್ದರೆ ಎಷ್ಟು ನೊಂದುಕೊಳ್ಳುತ್ತಿದ್ದಾನೋ? ಬಂಧು ಬಳಗ ಯಾರೂ ಇರದಿದ್ದ ಮೈಲ್ಗ್ಯಾ ಇದ್ದ ತಂದೆಯನ್ನು ಕಳೆದುಕೊಂಡು ಅಕ್ಷರಶಃ ಅನಾಥನಾಗಿಬಿಟ್ಟಿದ್ದ. ಬದುಕು ಒದ್ದು ಬುದ್ಧಿ ಕಲಿಸತೊಡಗಿತ್ತು. ವಿದ್ಯೆಯ ಗಂಧವಿಲ್ಲದಿದ್ದರಿಂದ ಅನಿವಾರ್ಯವಾಗಿ ತಂದೆಯ ವೃತ್ತಿಯನ್ನೇ ಮುಂದುವರಿಸಿದ. ಕರುಳು ತುಂಬಾ ಕುಡಿದಾಗ ಒಮ್ಮೊಮ್ಮೆ  ತನ್ನ ತಂದೆಯನ್ನು, ಅವನ ಕನಸನ್ನು ಈಡೇರಿಸದೇ ತಾನು ಹಾಳಾಗಿದ್ದನ್ನು ನೆನೆದು ಪಶ್ಚಾತ್ತಾಪಗೊಂಡು, ದುಃಖಗೊಂಡು ಬೋರಾಡಿ ಅಳುವುದುಂಟು. 

*********************

ಆಗಿನ್ನು ವೃತ್ತಿ ಬದುಕಿನ ಆರಂಭದ ದಿನಗಳು. ಮೈಲ್ಗ್ಯಾನ ಜೊತೆಗಾರರಾಗಿದ್ದ ಕೊಟ್ರ, ಚೌಡ ಅಲ್ಲಲ್ಲಿ ಕಟ್ಟಿಕೊಂಡಿದ್ದ ತ್ಯಾಜ್ಯವನ್ನು ಬಾಚಿ ಚರಂಡಿ ಹರಿವನ್ನು ಸರಾಗಗೊಳಿಸಲು ಮ್ಯಾನ್ಹೋಲ್ ಮೂಲಕ ಬೃಹತ್ ಒಳ ಚರಂಡಿಯೊಳಗೆ ಇಳಿದು ಅಲ್ಲೇ ಅವರಿಬ್ಬರೂ ಕುಸಿದು ಬಿದ್ದಿದ್ದರು.. ಯಾವಾಗಲೋ ಪ್ರಾಣ ಹೋಗಿ ಕೈಕಾಲು ಸೆಟೆಯಲಾರಂಭಿಸಿತ್ತು. ಆಸ್ಪತ್ರೆಯಲ್ಲಿ ಪೋಸ್ಟ್ಮಾರ್ಟ್ಂ ಮಾಡಿದ ಡಾಕ್ಟರ್ ರೇವಪ್ಪ ಅವರಿಬ್ಬರೂ ವಿಷಾನಿಲ ಸೇವನೆಯಿಂದ ಮೃತಪಟ್ಟಿರುವುದಾಗಿ ಷರಾ ಬರೆದಿದ್ದರು. ಬಿಳಿ ಬಟ್ಟೆಯಲ್ಲಿ ಸುತ್ತಿದ್ದ ಶವಗಳು ಹೊರಬಂದಾಗ ಕೊಟ್ರ, ಚೌಡರ ಕುಟುಂಬಗಳ ರೋಧನ ಮುಗಿಲು ಮುಟ್ಟಿತ್ತು. ಚೌಡನ ಹೆಂಡತಿ ಲಚ್ಚಿಯ ಮುಖದಲ್ಲಿ ಜೀವಕಳೆಯೇ ಇರಲಿಲ್ಲ. ಕಣ್ಣೀರು ಬತ್ತಿಹೋದಂತಾಗಿ ಒಣಗಿದ ಕಣ್ಣೀರ ಛಾರೆ ಕೆನ್ನೆಯ ಮೇಲೆ ಮೂಡಿತ್ತು. ಕೆದರಿದ ಕೂದಲೆಲ್ಲಾ ಗಾಳಿಗೆ ಹಾರಾಡುತ್ತಿತ್ತು. ಇದ್ಯಾವುದರ ಅರಿವಿಲ್ಲದ ಅವಳ ಕಂಕಳಲ್ಲಿದ್ದ ಮಗು ತನ್ನ ಅಬೋಧ ಕಂಗಳಿಂದ ಪಿಳಿಪಿಳಿ ಕಣ್ಣು ಮಿಟುಕಿಸುತ್ತಾ ಕೈಯಲ್ಲಿದ್ದ ಖಾಲಿ ಕಡ್ಡಿ ಪೆಟ್ಟಿಗೆಯನ್ನು ಬಾಯಲ್ಲಿಟ್ಟುಕೊಂಡು ಕಡಿಯುತ್ತಾ ನಗುತ್ತಾ ಆಡುತಿತ್ತು. ಚೌಡನಿಗಿಂತ ಕೊಂಚ ಚಿಕ್ಕವನಾಗಿದ್ದ ಕೊಟ್ರ ಕಳೆದ ವರ್ಷವಷ್ಟೇ ಮದುವೆಯಾಗಿದ್ದ. ಅವನ ಹೆಂಡತಿ ಗಂಗಿ ಈಗ ಪುಟ್ಟ ಬಸುರಿ. ತನ್ನ ಗಂಡನ ಸಾವಿನ ಆಘಾತದಿಂದ ಅವಳು ತತ್ತರಿಸಿಹೋಗಿದ್ದಳು. ಅಳುವುದಕ್ಕೂ ಶಕ್ತಿಯಿಲ್ಲದಂತಾಗಿ ಆಸ್ಪತ್ರೆಯ ಕಂಬಕ್ಕೊರಗಿ ಕೂತುಬಿಟ್ಟಿದ್ದಳು. ಅವಳಿನ್ನೂ ವಾಸ್ತವವನ್ನು ಅರಗಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.  ಕೊಟ್ರನ ಶವ ನೋಡಿದವಳೇ  ‘ಅಯ್ಯಯ್ಯೋ... ನನ್ನ ಒಂಟಿಮಾಡಿ ಬಿಟ್ಟು ಹೋದ್ಯಲ್ಲೋ...’ ಎಂದು ಚೀರುತ್ತಾ ಆಸ್ಪತ್ರೆಯ ಕಲ್ಲಿನ ಕಂಬಕ್ಕೆ ಹಣೆ ಜಜ್ಜತೊಡಗಿದಳು. ಸರಸರನೇ ಊದಿಕೊಂಡ ಹಣೆಯಿಂದ ರಕ್ತವೆಂಬುದು ಕಾರಂಜಿಯಂತೆ ಚಿಮ್ಮಿತ್ತು. ಕೆಲವೇ ದಿನಗಳಲ್ಲಿ ಗಂಗಿ ತನ್ನ ಹೊಟ್ಟೆಯೊಳಗಿನ ಕೂಸಿನ ಸಮೇತ ಊರ ಹೊರಗಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಲಚ್ಚಿ ನಸುಗತ್ತಲ ಬೀದಿಗಳಲ್ಲಿ ತನ್ನ ಯೌವ್ವನವನ್ನು ಮಾರಾಟಕ್ಕಿಟ್ಟಿದ್ದಳು. ಕೊನೆಗೆ ಮದ್ದಿಲ್ಲದ ರೋಗಕ್ಕೆ ಅವಳು ಬಲಿಯಾಗಿದ್ದಳು. ಅನಾಥವಾದ ಅವಳ ಕೂಸನ್ನು ಯಾರೋ ಮಕ್ಕಳಿಲ್ಲದ ದಂಪತಿಗಳು ಕರೆದೊಯ್ದಿದ್ದರು. ಮೈಲ್ಗ್ಯಾನ ವೃತ್ತಿಯ ಆರಂಭದ ದಿನಗಳಲ್ಲಿ ನಡೆದ ಈ ಘಟನೆಗಳಿಗೆಲ್ಲಾ ಅವನು ಸಾಕ್ಷಿಯಾಗಿದ್ದ. ಚೌಡ ಕೊಟ್ರರ ಸಾವು, ಅದರ ಪರಿಣಾಮಗಳು ಅವನ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿತ್ತು.  

*****************

‘ಅಲ್ಲಾಹು ಅಕ್ಬರ್... ಅಶಹದು ಅಲ್ಲಾಹ್ ಇಲಾಹ ಇಲ್ಲಾಲ್ಲಾ...’ ನಸುಕಿನ ಜಾವದಲ್ಲಿ ದೂರದ ಮಸೀದಿಯೊಳಗಿನಿಂದ ತೇಲಿಬಂದ ಅಜಾನ್ ಕೂಗು ಹೊಲಗೇರಿಯ ಅಂಚಿನಲ್ಲಿದ್ದ ಜೋಪಡಿಯಲ್ಲಿ ಬಿಗಿಯಾಗಿ ದುಪ್ಪಟಿಯನ್ನು ಸುತ್ತಿಕೊಂಡು ಮೈ ಕುಗ್ಗಿಸಿ ಗಾಢವಾಗಿ ನಿದ್ರಿಸುತ್ತಿದ್ದ ಮೈಲ್ಗ್ಯಾನನ್ನು ಥಟ್ಟನೆ ಎಚ್ಚರಿಸಿತು. ಹೊರಗೆ ಮೂಳೆ ಕಟಕಟಿಸುವಂಥ ಚಳಿ. ಇನ್ನು ಸ್ವಲ್ಪ ಹೊತ್ತು ಮಲಗಬೇಕೆನ್ನುವ ಮನಸ್ಸಿನ ಆಸೆಯನ್ನು ಬಲವಂತವಾಗಿ ತಳ್ಳಿ ಎದ್ದು ಕುಳಿತ. ನೆರಿಕೆಯ ಮೂಲೆಯಲ್ಲಿ ಸಿಕ್ಕಿಸಿದ್ದ  ಸವದತ್ತಿ ಎಲ್ಲಮ್ಮನ ಕ್ಯಾಲೆಂಡರ್ಗೆ ಕಣ್ಮುಚ್ಚಿಕೊಂಡೇ ಕೈ ಮುಗಿದು ಏನನ್ನೋ ಮಣಮಣಿಸಿದ. ಅಸಂಖ್ಯಾತ ತೂತುಗಳು ಬಿದ್ದು ಅಲ್ಲಲ್ಲಿ ಹರಿದಿದ್ದ ಕೌದಿಯನ್ನು ಮಡಚಿ ಹೊರಗೆ ಬಂದಾಗ ಇಡೀ ಊರಿಗೆ ಊರೇ ಮಂಜು ಮುಸುಕಿದಂತಿತ್ತು. ಬೂದಿ ತುಂಬಿದ್ದ ಒಲೆಯಲ್ಲಿ ಕೈ ಹಾಕಿ ಕೆದಕಿ ಚಿಕ್ಕ ಇದ್ದಿಲ ತುಂಡೊಂದನ್ನು ತೆಗೆದು ಹಲ್ಲುಜ್ಜಿ ಮುಖ ತೊಳೆದ. ಮೂಲೆಯಲ್ಲಿದ್ದ ಎಲ್ಲಮ್ಮಳಿಗೆ ಇನ್ನೊಮ್ಮೆ ಕೈ ಮುಗಿದು ಮುದುರಿ ಮುದ್ದೆಯಾಗಿದ್ದ ಮಾಸಲು ಖಾಕಿ ಪ್ಯಾಂಟ್ ಅಂಗಿ ತೊಟ್ಟು ತಲೆಗೆ ಬಿಗಿಯಾಗಿ ಟವೆಲ್ ಸುತ್ತಿಕೊಂಡು ಹೊರಬಿದ್ದಾಗ ನಿಧಾನವಾಗಿ ಕತ್ತಲು ಕರಗಲಾರಂಭಿಸಿತು.  

ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿದ್ದ ಶೌಚಾಲಯದ ಗುಂಡಿ ತುಂಬಿಕೊಂಡು ದಟ್ಟವಾದ ಕೆಟ್ಟ ವಾಸನೆಯನ್ನು ಪಸರಿಸಿತ್ತು. ಆಗಲೇ ನಾಲ್ಕೈದು ಜನ ಪೌರಕಾರ್ಮಿಕರು ತಮ್ಮ ಉಡುಪುಗಳನ್ನು ಬಿಚ್ಚಿಟ್ಟು ಮಲದ ಗುಂಡಿಯ ಸ್ಚಚ್ಚತೆಗೆ ಸಿದ್ಧರಾಗಿ ನಿಂತಿದ್ದರು. ಅದರಲ್ಲಿ ಒಂದಿಬ್ಬರು ಮೈಲ್ಗ್ಯಾನಂತೆ ಪೌರಕಾರ್ಮಿಕನಾಗಿದ್ದರೂ ಸರ್ಕಾರದ ಖಾಯಂ ಉದ್ಯೋಗಿಯಾಗಿದ್ದರು. ಸ್ಥಿತಿವಂತ ಕುಟುಂಬ ಅವರದಾಗಿತ್ತು. ಆದರೆ ಹಲವಾರು ವರ್ಷಗಳಿಂದ ದಿನಗೂಲಿಯಾಗಿ ದುಡಿಯುತ್ತಿದ್ದ ಮೈಲ್ಯಾನಿಗೆ ಸಂಬಳವೆನ್ನುವ ಪುಡಿಗಾಸು ಮೂರೋ ನಾಲ್ಕೊ ತಿಂಗಳಿಗೊಮ್ಮೆ ಬರುತ್ತಿತು.್ತ ತನ್ನ ಕೆಲಸ ಖಾಯಂ ಆದರೆ ಬದುಕು ಸುಧಾರಿಸುತ್ತದೆ ಎಂಬ ನಿರೀಕ್ಷೆಯಿತ್ತು. ಆ ನಿರೀಕ್ಷೆಯಲ್ಲಿಯೇ ಇಷ್ಟು ವರ್ಷ ಕೆಲಸ ಮಾಡುತ್ತಿದ್ದ. ದಿನಗೂಲಿಯಾಗಿ ದುಡಿಯುತ್ತಿದ್ದ ಮೈಲ್ಗ್ಯಾನ ಸಹೋದ್ಯೋಗಿಗಳ ಸ್ಥಿತಿ ಮೈಲ್ಗ್ಯಾನ ಸ್ಥಿತಿಗಿಂತ ಭಿನ್ನವಾಗಿರಲಿಲ್ಲ. ‘ಠಣ್...’ ಎಂಬ ಸದ್ದಿನೊಂದಿಗೆ ಮಲದ ಗುಂಡಿಗೆ ಮುಚ್ಚಲಾಗಿದ್ದ ಕಲ್ಲಿನ ಚಪ್ಪಡಿಯನ್ನು ಬದಿಗೆ ಸರಿಸಿದ ಮೈಲ್ಗ್ಯಾನಿಗೆ ಗುಂಡಿಯೊಳಗಿನಿಂದ ಅಪ್ಪಳಿಸಿದ ಭೀಕರ ದುರ್ನಾತಕ್ಕೆ ಹೊಟ್ಟೆ ತೊಳೆಸಿದಂತಾಯ್ತು. ಕೆಲಸಕ್ಕೆ ಸೇರಿದ ಆರಂಭದಲ್ಲಿ ಮೈಲ್ಗ್ಯಾನಿಗೆ ಇದೆಲ್ಲಾ ಅಸಹ್ಯ ತರಿಸುತ್ತಿದ್ದರೂ ಕ್ರಮೇಣ ಹೊಂದಿಕೊಂಡಿದ್ದ. ತನ್ನ ತಂದೆ ತನ್ನನ್ನು ಬೆಳೆಸಲು ಇಂಥ ಕೆಲಸ ಮಾಡುತ್ತಾ ಎಷ್ಟೆಲ್ಲಾ ಕಷ್ಟಪಟ್ಟಿರಬಹುದೆಂದು ನೆನಪಿಸಿಕೊಳ್ಳುತ್ತಾ ಒಮೊಮ್ಮೆ ಕಣ್ಣೀರಾಗುತ್ತಾನೆ. ಬಿಸಿಲೂರಿನ ಸಮಸ್ತ ಪೌರಕಾರ್ಮಿಕರೆಲ್ಲರೂ ಹೊಲಗೇರಿಯವರೇ. ಹೊಲಸು ಬಳಿಯುವುದು ಕೆಳಜಾತಿಯ ಕುಲಕಸುಬು ಎಂಬ ಸಮಾಜದ ಅಘೋಷಿತ ನಿಯಮಕ್ಕೆ ಅವರೆಲ್ಲರೂ ಬದ್ಧರಾದಂತಿತ್ತು. ಮಲದ ಗುಂಡಿಯ ಕೆಲಸವಿದ್ದಾಗ ಅದರ ದುರ್ನಾತ ಅರಿವಿಗೆ ಬಾರದಂತಿರಲು ಒಂದೆರಡು ಕ್ವಾರ್ಟರ್ ಬ್ರಾಂದಿ ಏರಿಸಿ ನಿಶೆಯಲ್ಲಿಯೇ ಕೆಲಸಕ್ಕಿಳಿಯುವುದು ರೂಢಿ. ಕುಡಿಯದೇ ಹಾಗೆ ಮಲದ ಗುಂಡಿಗೆ ಇಳಿದರೆ ಅದರ ದುರ್ನಾತಕ್ಕೆ ತಲೆತಿರುಗಿ ಬೀಳುವುದು ಖಚಿತ ಎಂಬುದು ಎಲ್ಲಾ ಪೌರಕಾರ್ಮಿಕರ ನಂಬಿಕೆ. ಅದು ನಿಜವೂ ಹೌದು. ಅಲ್ಲೇ ಕುಳಿತು ಒಂದಿಷ್ಟು ಕುಡಿದು ನಿಶೆಯೇರಿದಂತೆ ಮಲದ ಗುಂಡಿಯೊಳಗಿಳಿದಿದ್ದ ಮೈಲ್ಗ್ಯಾ ಹಾಗೂ ಅವನ ಜೊತೆಗಾರರು ಮಲದ ದಟ್ಟವಾದ ದುರ್ನಾತದ ಪರಿವೇ ಇಲ್ಲದಂತೆ ಸಲಿಕೆಯಿಂದ ತ್ಯಾಜ್ಯವನ್ನು ಬಾಚಿ ಕಬ್ಬಿಣದ ಪುಟ್ಟಿಗೆ ತುಂಬಿ ಹೊತ್ತುಕೊಂಡು ಅಲ್ಲೆ ಹತ್ತಿರದಲ್ಲಿ ನಿಂತಿದ್ದ ಕಾರ್ಪೋರೇಷನ್ನ  ಟ್ರ್ಯಾಕ್ಟರ್ಗೆ ತುಂಬತೊಡಗಿದರು. ಸರ್ಕಾರ ಮಲ ಹೊರುವುದು ನಿಷೇಧವಿದ್ದರೂ ಅದು ಬಿಸಿಲೂರಿಗೆ ಅನ್ವಯಿಸಿರಲಿಲ್ಲ. ಯಾಕೆಂದರೆ ಮಲದ ಗುಂಡಿ ಸ್ವಚ್ಛಗೊಳಿಸುವ ಜೆಟ್ಟಿಂಗ್, ಸಕ್ಕಿಂಗ್ ಮಷಿನ್ಗಳೇ ಇರಲಿಲ್ಲ. ಅಲ್ಲದೇ ಪೌರಕಾರ್ಮಿಕರಿಗೆ ನೀಡಬೇಕಾಗಿದ್ದ ಮಾಸ್ಕ್, ಗ್ಲೋವ್ಸ್ಗಳನ್ನು ನೀಡದೆ ಕಾರ್ಪೋರೇಷನ್ ಅಧಿಕಾರಿಗಳು ನುಂಗಿಹಾಕಿದ್ದರು. ಸರ್ಕಾರ ನೀಡುವ ಸವಲತ್ತುಗಳ್ಯಾವುವು ಮೈಲ್ಗ್ಯಾನಂತವರಿಗೆ ದೊರಕಿರಲಿಲ್ಲ. ಮೊದಲೇ ದಿನಗೂಲಿಯಾಗಿ ದುಡಿಯುತ್ತಿದ್ದ ಪೌರಕಾರ್ಮಿಕರು ಈ ಸೌಲಭ್ಯಗಳ ಬಗ್ಗೆ ಕೇಳಿದರೆ ಎಲ್ಲಿ ತಮ್ಮ ಕೆಲಸಕ್ಕೆ ಸಂಚಕಾರ ಬರುತ್ತದೆಯೋ ಎಂಬ ಅಭದ್ರತೆಯಲ್ಲಿ ತಮ್ಮ ಆರೋಗ್ಯ ಮರೆತುಬಿಟ್ಟವರಂತೆ ಸುಮ್ಮನಾಗಿಬಿಟ್ಟಿದ್ದರು. ಬಿಸಿಲೇರುವ ಹೊತ್ತಿಗಾಗಲೇ ಮಲದ ಗುಂಡಿ ಖಾಲಿಯಾಗಿತ್ತು. ಗುಂಡಿಗೆ ಮೊದಲಿನಂತೆ ಕಲ್ಲಿನ ಚಪ್ಪಡಿ ಎಳೆದು ಮುಚ್ಚಿ ಅಲ್ಲಿಯೇ ಹತ್ತಿರದಲ್ಲಿದ್ದ ನಲ್ಲಿಯಲ್ಲಿ ಕೈ ಕಾಲು ಮುಖ ತೊಳೆದುಕೊಂಡ ಮೈಲ್ಗ್ಯಾ ಎದುರಿಗಿದ್ದ ಗುಡಿಸಲಿನಂತಹ ಹೋಟೆಲ್ನ ಅಂಗಳಕ್ಕೆ ಬಂದುನಿಂತ. ತಾನು ಕೆಲಸಕ್ಕೆ ಸೇರಿದ ಆರಂಭದಲ್ಲಿ ಇದೇ ಹೋಟೆಲ್ನ ನೆರಿಕೆಯ ಸಂದಿನಲ್ಲಿ ಹುದುಗಿಸಿಟ್ಟಿದ್ದ ತೆಂಗಿನ ಚಿಪ್ಪಿನಲ್ಲಿ ಚಹಾ ಹಾಕಿಸಿಕೊಂಡು ಕುಡಿದು ತಾನೇ ತೊಳೆದು ಮರಳಿ ಸ್ವಸ್ಥಾನಕ್ಕೆ ಸೇರಿಸಿಡುತ್ತಿದ್ದ. ಈಗ ಕಾಲ ಬದಲಾಗಿತ್ತು. ಮೈಲ್ಗ್ಯಾ ಹಾಗೂ ಮೈಲ್ಗ್ಯಾನಂತವರಿಗೆ ಚಹಾ ಕುಡಿಯಲು ಪ್ಲಾಸ್ಟಿಕ್ ಕಪ್ಗಳು ಬಂದಿದ್ದವು, ಬಳಸಿ ಬಿಸಾಡುವಂತಹವು. ಮೈಲ್ಗ್ಯಾನ ಬದುಕನ್ನೂ ಕೂಡಾ ಸಮಾಜ ಬಳಸಿ ಬಿಸಾಕಿತ್ತು. ಮೈಲ್ಗ್ಯಾನನ್ನು ಕಂಡರೆ ಮೈಲಿಗೆಯನ್ನು ಕಂಡವರಂತೆ ದೂರ ಸರಿಯುತ್ತಿದ್ದ ಮೇಲ್ಜಾತಿಯವರು ಎನ್ನಿಸಿಕೊಂಡ ಜನರಿಗೆ ಮೈಲ್ಗ್ಯಾ ಬೇಕಾಗಿದ್ದು ತಮ್ಮ ಹೊಲಸನ್ನು ಸ್ವಚ್ಛಗೊಳಿಸುವುದಕ್ಕೆ ಮಾತ್ರವೇ. ‘ಇವರ ಹೊಲಸನ್ನು ತೊಳಿಯೋಕೆ ಬಳಿಯೋಕೆ ನಾವು ಬೇಕು, ಆದರೆ ನಮ್ಮನ್ನು ಹೇಲು ತಿನ್ನೋ ನಾಯಿಗಿಂತ ಕೀಳಾಗಿ ಕಾಣುತ್ತಾರಲ್ಲ ಎಂದು ಮೈಲ್ಗ್ಯಾ ನೊಂದುಕೊಳ್ಳುತ್ತಿದ್ದ.  ‘ತಾನು ಚೆನ್ನಾಗಿ ಓದಿ ತನ್ನ ತಂದೆಯ ಆಸೆ ಈಡೇರಿಸಿದ್ದರೆ ಇಂದು ದೊಡ್ಡ ಆಫೀಸರ್ ಆಗಿರುತ್ತಿದ್ದೆ’ ಎಂದು ಕೆಲವೊಮ್ಮೆ ಯೋಚಿಸಿ ತನ್ನ ಕಲ್ಪನೆಗೆ ತಾನೇ ನಗುತ್ತಾನೆ. ಅವನ ತಂದೆ ನಿಂಗ ಹೂವಿನಹಡಗಲಿ ಹತ್ತಿರದ ಮೈಲಾರಲಿಂಗನ ಪರಮಭಕ್ತ. ಪ್ರತಿವರ್ಷ ಜಾತ್ರೆಗೆ ತಪ್ಪದೇ ಹೋಗುತ್ತಿದ್ದವನು. ಅಲ್ಲದೇ ಮೈಲಾರಲಿಂಗ ಅವನ ಮನೆ ದೇವರು.  ತನಗೆ ಮಗ ಹುಟ್ಟಿದ್ದು ಮೈಲಾರಲಿಂಗನ ಅನುಗ್ರಹದಿಂದಲೇ ಎಂದು ಭಾವಿಸಿ ಮಗನಿಗೆ ‘ಮೈಲಾರಪ್ಪ’ ಎಂದು ಹೆಸರಿಟ್ಟಿದ್ದ. ತಾನು ಪ್ರೀತಿಯಿಂದ ಮೈಲಾರಿ ಎಂದು ಕರೆಯುತ್ತಿದ್ದ. ಶಾಲೆಯಲ್ಲಿ ಮೈಲಾರಪ್ಪ ಎಂದು ಹೆಸರು ಸೇರಿಸಿದ್ದರೂ ಜನರ ಬಾಯಲ್ಲಿ ಅದು ಮೈಲಪ್ಪ, ಮೈಲ ಆಗಿ ಕೊನೆಗೆ ಮೈಲ್ಗ್ಯಾ ಎಂದು ಬದಲಾಗಿ ಸ್ಥಾಪಿತವಾಗಿತ್ತು. ಈಗ ಯಾರಾದರೂ ಮೈಲಾರಪ್ಪ ಎಂದು ಕೂಗಿ ಕರೆದರೂ ತಿರುಗಿ ನೋಡದಷ್ಟು ಅವನಿಗೆ ತನ್ನ ಮೂಲ ಹೆಸರು ಮರೆತುಹೋಗಿತ್ತು. ಮೈಲ್ಗ್ಯಾ ಎಂಬ ಹೆಸರಿಗೆ ಅಷ್ಟೊಂದು ಒಗ್ಗಿಕೊಂಡಿದ್ದ.


ಬೆಳಿಗ್ಗೆ ಬಸ್ಯಾ ಕೊಟ್ಟಿದ್ದ ಕೊರೆಬೀಡಿಯನ್ನು ಅರ್ಧ ಸೇದಿ ನಂದಿಸಿ ಕಿವಿ ಸಂದಿಯಲ್ಲಿಟ್ಟುಕೊಂಡಿದ್ದು  ನೆನಪಾಗಿ ಮುಟ್ಟಿಕೊಂಡ. ಬೀಡಿ ಅಲ್ಲಿಯೇ ಇತ್ತು. ಅದನ್ನು ತೆಗೆದುಕೊಂಡು ಹಲ್ಲಲ್ಲಿ ಕಚ್ಚಿಹಿಡಿದು ಕಡ್ಡಿಗೀರಿ ಗಾಳಿಗೆ ಆರದಂತೆ ಬೊಗಸೆಯಲ್ಲಿ ಮರೆಮಾಡಿ ಕಿಡಿಹೊತ್ತಿಸಿ ಪುಸುಪುಸು ಹೊಗೆ ಬಿಡಲಾರಂಭಿಸಿದ. ಎದೆಯ ಉಸಿರ ತಿತ್ತಿಗಳ ತುಂಬಾ ಚೈತನ್ಯವೊಂದು ಪ್ರವಹಿಸಿದಂತಾಗಿ ಉಲ್ಲಸಿತನಾದ. ಬೀಡಿಯ ಕೊನೆಯ ಜುರಿಕೆಯನ್ನು ಸಾಧ್ಯವಾದಷ್ಟು ದೀರ್ಘವಾಗಿ ಎಳೆದು ಬಿಸಾಕಿ ಕಾಲಲ್ಲಿ ಹೊಸಕಿದ.  ಊರ ನಡುವಿನ ಮುಖ್ಯ ಸರ್ಕಲ್ನಲ್ಲಿ ಮ್ಯಾನ್ಹೋಲ್ ಕಟ್ಟಿಕೊಂಡಿದ್ದು ನೆನಪಾಗಿ ಅಲ್ಲಿಗೆ ಬಂದು ನಿಂತ.  ಜನರ ಗೌಜುಗದ್ದಲದಲ್ಲಿ ಮೈಲ್ಗ್ಯಾ ಎಂಬ ಜೀವಿ ಅಸ್ತಿತ್ವವಿಲ್ಲದವನಂತೆ ನಿಂತಿದ್ದ. ಕೈಯಲ್ಲಿದ್ದ ಕಬ್ಬಿಣದ ಪುಟ್ಟ ರಾಡಿನಿಂದ ಮ್ಯಾನ್ ಹೋಲ್ನ ಮುಚ್ಚಳ ಮೀಟಿ ಬದಿಗೆ ಸರಿಸಿ ನೋಡಿದ. ಮ್ಯಾನ್ಹೋಲ್ ಬಹುತೇಕ ತುಂಬಿಕೊಂಡಿತ್ತು. ನಗರದ ಅಸಂಖ್ಯಾತ ಜನರ ಹೊಲಸೆಲ್ಲಾ ಹುಲುಸಾಗಿ ಹರಿದು ಬಂದು ಕಟ್ಟಿಕೊಂಡು ನಿಂತಿತ್ತು. ರಪ್ಪನೇ ರಾಚಿದ ಗಬ್ಬು ನಾತಕ್ಕೆ ಪಕ್ಕದಲ್ಲೆ ಹೂಹಣ್ಣು ಮಾರುತ್ತಿದ್ದ ವ್ಯಾಪಾರಿಗಳು, ತಳ್ಳುಗಾಡಿಯಲ್ಲಿಯ ಭಜ್ಜಿ, ವಡಾಪಾವ್ಗಳನ್ನು ತಿನ್ನುತ್ತಿದ್ದ ಜನರು ಮೂಗು ಮುಚ್ಚಿಕೊಂಡು  ಮುಖ ಸಿಂಡರಿಸಿಕೊಂಡರು. ಇದ್ಯಾವುದರ ಬಗ್ಗೆ ಲಕ್ಷ್ಯವಹಿಸದೇ ಅಡ್ಡಾದಿಡ್ಡಿಯಾಗಿ ಬೆಳೆದಿದ್ದ ತನ್ನ ಕುರುಚಲು ಗಡ್ಡವನ್ನು ಕೆರೆದುಕೊಳ್ಳುತ್ತಾ ಸರಸರನೇ ಬಟ್ಟೆ ಕಳಚಿಟ್ಟು ದುರ್ವಾಸನೆಯಿಂದ ತುಂಬಿಕೊಂಡಿದ್ದ ಕರ್ರನೆಯ ನೀರನ್ನು ಒಮ್ಮೆ ನೋಡಿ ಅದರೊಳಗೆ ತನ್ನ ಬಡಕಲು ದೇಹವನ್ನು ಬಾಗಿಸಿ ಇಳಿಸಿಬಿಟ್ಟ. ಎದೆಯ ಮಟ್ಟದವರೆಗೆ ಚರಂಡಿ ನೀರಿನಲ್ಲಿ ನಿಂತು ಬಗ್ಗೆ ಕಬ್ಬಿಣದ ರಾಡ್ನಿಂದ ಏನನ್ನೋ ಸಿಕ್ಕಿಸಿ ಎಳೆದು ಸರಿಪಡಿಸಿದ. ಅದುವರೆಗೂ ಸಂಗ್ರಹವಾಗಿದ್ದ ದುರ್ವಾಸನೆಯ ಕೊಳಚೆ ನೀರು ಒಡೆದ ಆಣೆಕಟ್ಟಿನಿಂದ ಹೊರಬಿದ್ದ ನೀರಿನಂತೆ ಸರಸರನೇ ಹರಿದುಹೋಯ್ತು. ಮ್ಯಾನ್ಹೋಲ್ನಿಂದ ಹೊರಬಂದು ಅದರ ಮುಚ್ಚಳ ಮುಚ್ಚಿ ಎದ್ದು ನಿಂತಾಗ ಮೈಲ್ಗ್ಯಾನ ದೇಹವಿಡೀ ಅಮೇಧ್ಯದ ಅಭಿಷೇಕವಾದಂತಿತ್ತು. ಸುತ್ತಲೆಲ್ಲೂ ಬೀದಿ ನಲ್ಲಿಯ ನೀರು ಇಲ್ಲದ್ದರಿಂದ ಟವೆಲ್ನಿಂದ ಮೈ ಒರೆಸಿಕೊಂಡು ಬಟ್ಟೆ ತೊಟ್ಟುಕೊಳ್ಳುವ ವೇಳೆಗೆ ನಡು ಮಧ್ಯಾಹ್ನವಾಗಿತ್ತು. 

ಮಧ್ಯಾಹ್ನ ಉಂಡು ಮಲಗಿದಾಗ ಗಾಢವಾದ ನಿದ್ದೆ ಆವರಿಸಿತು. ತಂದೆ ನಿಂಗ ಬೋರಾಡಿ ಅತ್ತಂತೆ, ತಾನು ಸತ್ತಿರುವಂತೆ... ಏನೇನೋ ಕೆಟ್ಟ ಕನಸು... ಥಟ್ಟನೇ ಎದ್ದು ಕುಳಿತ ಮೈಲಿಗ್ಯಾನ ಹಣೆಯಲ್ಲಿ ಬೆವರು ಹನಿಗಳು ಸಾಲಾಗಿ ಮೂಡಿದ್ದವು. ‘ ನೀನೆ ಕಾಪಾಡವ್ವ’ ಎಂದು ಮೂಲೆಯಲ್ಲಿದ್ದ ಎಲ್ಲಮ್ಮನ ಕ್ಯಾಲೆಂಡರ್ಗೆ ಭಕ್ತಿಯಿಂದ ಕೈಮುಗಿದ. ಸಂಜೆ ಲಕ್ಷ್ಮಿ ಥಿಯೇಟರ್ನಲ್ಲಿ ಶೌಚಾಲಯ ಸ್ವಚ್ಛಗೊಳಿಸಬೇಕೆನ್ನುವುದು ನೆನಪಾಗಿ ಜೋಪಡಿಗೆ ಲಟಾರಿ ಬೀಗ ಜಡಿದು ಹೊರಟ. ಥಿಯೇಟರ್ನ ಸಿಬ್ಬಂದಿಗಳಿಗೆಲ್ಲಾ ಚಿರಪರಿಚಿತನಾಗಿದ್ದ ಮೈಲ್ಗ್ಯಾ ಪ್ರತಿಸಲವೂ ಶೌಚಾಲಯ ತೊಳೆದು ಸ್ವಚ್ಛಗೊಳಿಸಿದ ನಂತರ ಪುಕ್ಕಟೆಯಾಗಿ ಥಿಯೇಟರ್ನಲ್ಲಿ ಕುಳಿತು ಸಿನಿಮಾ ನೋಡಿ ಬರುವ ರೂಢಿಯಿತ್ತು. ವಿಶಾಲವಾದ ಥಿಯೇಟರ್ನ ಅಂಗಳದಲ್ಲಿ ಹಾಕಲಾಗಿದ್ದ ಚೇರ್ನಲ್ಲಿ ಕುಳಿತಿದ್ದ ಥಿಯೇಟರ್ನ ಮ್ಯಾನೇಜರ್ ಶ್ರೀಕಂಠಪ್ಪನಿಗೆ ನಮಸ್ಕರಿಸಿ ಶೌಚಾಲಯ ಒಳಹೊಕ್ಕ. ಇಡೀ ಶೌಚಾಲಯಕ್ಕೆ ನೀರು ಚೆಲಿ,್ಲ ಮೂಲೆಯಲ್ಲಿಟ್ಟಿದ್ದ ಫಿನಾಯಿಲ್ನ್ನು ಅದರ ಮೇಲೆ ಸ್ವಲ್ಪ ಸ್ವಲ್ಪವೇ ಸುರುವಿ ಬ್ರಶ್ನಿಂದ ಗಸಗಸ ಉಜ್ಜತೊಡಗಿದ. ನಂತರ ಮತ್ತೊಮ್ಮೆ ನೀರು ಸುರುವಿ ಕಡ್ಡಿಕಸಬರಿಕೆಯಿಂದ ಬಾಚುತ್ತಾ ನೀರನ್ನು ಹೊರಗೆ ತಳ್ಳಿದ. ಈಗ ಇಡೀ ಶೌಚಾಲಯ ಸ್ವಚ್ಛವಾಯ್ತು ಎಂಬ ತೃಪ್ತಿಯೊಂದಿಗೆ ಅಲ್ಲಿಯೇ ಕೈ ಕಾಲು ಮುಖ ತೊಳೆದುಕೊಂಡು ಕೊರಳಲ್ಲಿ ಇಳಿಬಿಟ್ಟಿದ್ದ ಬಣ್ಣಗೆಟ್ಟ ಟವೆಲ್ಗೆ ಮುಖ ಒರೆಸಿಕೊಳ್ಳುತ್ತಾ ಮ್ಯಾನೇಜರ್ ಶ್ರೀಕಂಠಪ್ಪನ ಮುಂದೆ ಕೈಕಟ್ಟಿಕೊಂಡು ನಿಂತ. ಶ್ರೀಕಂಠಪ್ಪ ತಮ್ಮ ಉದ್ದ ಕೂದಲಿನ ವಿದೇಶಿ ತಳಿಯ ನಾಯಿಯ ಮೈ ಸವರುತ್ತಾ ಅದಕ್ಕೆ ಹಾಲಿನಲ್ಲಿ ಅದ್ದಿದ್ದ ಬ್ರೆಡ್ ತಿನ್ನಿಸುತ್ತಿದ್ದರು. ಥರೇವಾರಿ ಬಿಸ್ಕತ್ತು ಬ್ರೆಡ್ಗಳು, ಚಿಕನ್ನು ಮಟನ್ನು ಎಂತೆಲ್ಲಾ ತಿನ್ನುತ್ತಿದ್ದ ಆ ನಾಯಿಯ ಅದೃಷ್ಟ ಕಂಡು ಮೈಲ್ಗ್ಯಾ ಕರುಬಿದ್ದ. ಸುಖದ ಸುಪ್ಪತ್ತಿಗೆಯಲ್ಲಿ ಬೆಳೆಯುತ್ತಿದ್ದ ಆ ನಾಯಿ ತಾನಾಗಬಾರದಿತ್ತೇ ಎಂದು ಎಷ್ಟೋ ಸಲ ಅಂದುಕೊಳ್ಳುತ್ತಿದ್ದ. ಮೈಲ್ಗ್ಯಾ ಕೈ ಕಟ್ಟಿಕೊಂಡು ನಿಂತಿರುವದುನ್ನು ಗಮನಿಸಿದ ಶ್ರೀಕಂಠಪ್ಪ ‘ಪಾಯಿಖಾನಿಯೆಲ್ಲಾ ಕ್ಲೀನಾಗಿ ತೊಳಿದೆಯೇನ್ಲಾ’ ಎಂದು ಕೇಳಿ ಖಚಿತ ಪಡಿಸಿಕೊಂಡು ನೂರರ ನೋಟೊಂದನ್ನು ಮೈಲ್ಗ್ಯಾನಿಗೆ ನೀಡಿದರು. ಇನ್ನೊಮ್ಮೆ ಅವರಿಗೆ ನಮಸ್ಕರಿಸಿ ಥಿಯೇಟರ್ ಒಳಹೊಕ್ಕ. ಕತ್ತಲೆ ತುಂಬಿದ್ದ ಥಿಯೇಟರ್ ಒಳಗೆ ಜನ ತುಂಬಾ ಕಡಿಮೆಯಿತ್ತು. ಮೂಲೆಯ ಚೇರೊಂದರಲ್ಲಿ ಕುಳಿತು ಸಿನಿಮಾ ನೋಡುತ್ತಿದ್ದ ಮೈಲ್ಗ್ಯಾನಿಗೆ, ಮಧ್ಯಾಹ್ನದ ಕನಸು ಮತ್ತೆ ಮತ್ತೆ ನೆನಪಾಗತೊಡಗಿತು. ಸಿನಿಮಾ ನೋಡುವ ಉತ್ಸಾಹ ಜರ್ರನೇ ಇಳಿದು ಅರ್ಧಕ್ಕೆ ಎದ್ದು ಹೊರನಡೆದ. ಅನತಿ ದೂರದಲ್ಲಿದ್ದ ಬಾರ್ ಹೊಕ್ಕು ಎರಡು ಕ್ವಾರ್ಟರ್ ಬ್ರಾಂದಿ ಏರಿಸಿ, ಖಾರ ಲೇಪಿಸಿ ಹುರಿದಿದ್ದ ಶೇಂಗಾ ಬೀಜಗಳನ್ನು ಮೆಲ್ಲತೊಡಗಿದ. ನಿಧಾನವಾಗಿ ದೇಹ ಗಾಳಿಯಲ್ಲಿ ತೇಲತೊಡಗಿದ ಅನುಭವ. ಎದುರಿಗೆ ಇದ್ದ ತಳ್ಳುಗಾಡಿಯಲ್ಲಿ ಒಂದು ಆಮ್ಲೇಟ್ ಎಗ್ರೈಸ್ ತಿಂದು ರಾತ್ರಿಯ ಊಟ ಮುಗಿಸಿದ್ದ.

ರೈಲ್ವೆ ಇಲಾಖೆಯಲ್ಲಿ ಗ್ಯಾಂಗ್ಮನ್ ಆಗಿದ್ದ ಕೆಂಚ ಕಂಠಪೂರ್ತಿ ಕುಡಿದು ‘ನನ್ನ ಏನಂತ ತಿಳ್ಕಂಡಿರಿ ಲೇ... ಸೆಂಟ್ರಲ್ ಗೋರ್ಮೆಂಟು ಎಂಪ್ಲಾಯಿ ನಾನು. ನನ್ ಮೈ ಮುಟ್ಟಿದ್ರೆ ಮಕ್ಳಾ... ಒದ್ದು ಜೈಲಿಗಾಕಿಸಿ ಬಿಡ್ತೀನಿ’ ಎಂದು ತೊದಲುತ್ತಾ ಅಬ್ಬರಿಸಿ ತೂರಾಡಿ ದೊಪ್ಪನೇ ಚರಂಡಿ ಬದಿಗೆ ಬಿದ್ದ. ಮತ್ತೆ ಏಳಲು ಪ್ರಯತ್ನಿಸಿದನಾದರೂ ಸಾಧ್ಯವಾಗದೇ ಏನನ್ನೊ ತೊದಲುತ್ತಾ ಅಲ್ಲೆ ಉರುಳಿಕೊಂಡ. ‘ಪ್ರೈಮಿನಿಷ್ಟ್ರು ಮಲ್ಕೊಂಡವ್ರೆ. ದಯಮಾಡಿ ಯಾರೂ ಗಲಾಟೆ ಮಾಡಬ್ಯಾಡ್ರಲೇ...’ ಇನ್ನೊಬ್ಬ ಕುಡುಕ ಚೀರಿದ್ದ. ‘ಈ ನನ್ ಮಕ್ಳುದು ದಿನ ಇದೇ ಆಗಿಹೋಯ್ತು’ ಎಂದು ಗೊಣಗುತ್ತಾ ಮೈಲ್ಗ್ಯಾ ತನ್ನ ಜೋಪಡಿಯ ಕಡೆಗೆ ಹೆಜ್ಜೆ ಹಾಕಿದ. ರಸ್ತೆಯ ಕೊನೆಯ ತಿರುವಿನಲ್ಲಿ ಆವರಿಸಿದ್ದ ಬೀದಿ ದೀಪದ ಮಂದಬೆಳಕಿನಲ್ಲಿ ಅವಳು ಯಾರನ್ನೋ ಅರಸುತ್ತಾ ನಿಂತಿದ್ದಳು. ಹತ್ತಿರ ಬಂದ ಮೈಲ್ಗ್ಯಾನನ್ನು ತಾನೇ ಮಾತಾಡಿಸಿ ವ್ಯವಹಾರ ಕುದುರಿಸಲು ಪ್ರಯತ್ನಿಸಿದಳು. ಇದ್ಯಾವುದು ಅಭ್ಯಾಸವಿರದಿದ್ದ ಮೈಲ್ಗ್ಯಾ ಅವಳನ್ನು ನಯವಾಗಿಯೇ ನಿರಾಕರಿಸಿ ಮುಂದೆ ಹೆಜ್ಜೆ ಇಡುವಾಗ ಅಳು ಬೆರೆತ ದುಃಖದ ದನಿಯಲ್ಲಿ ಹೇಳಿದಳು ‘ಯಜಮಾನಾ... ಬೆಳಿಗ್ಗೆಯಿಂದ ಏನೂ ತಿಂದಿಲ್ಲ’. ಬಾವಿಯ ಆಳದಿಂದ ಬಂದ ಅಸಹಾಯಕ ಪ್ರಾಣಿಯ ಕೂಗಿನಂತಿತ್ತು ಅವಳ ದನಿ. ಥಟ್ಟನೇ ಮೈಲ್ಗ್ಯಾನಿಗೆ ತನ್ನ ಕಾಲುಗಳನ್ನು ಯಾರೋ ಕಟ್ಟಿಹಾಕಿಬಿಟ್ಟಿದ್ದಾರೆನಿಸಿತು. ಮುಂಜೆ ಹೆಜ್ಜೆ ಇಡಲಾಗಲಿಲ್ಲ. ಹೃದಯ ಕಲಕಿದಂತಹ ಭಾವ. ‘ನೋಡು ಈ ಹೊಲ್ಸು ಕೆಲಸ ಬಿಡು ಮೊದ್ಲು. ಈ ಜಗತ್ತಿನಲ್ಲಿ ನಂಗೆ ನನ್ನವರು ಅಂತ ಯಾರು ಇಲ್ಲ, ನಂಗಿರೋದು ನಾನು ಮಾತ್ರ. ನೀನೂ ಕೂಡಾ ನನ್ನಂಗೆ ಇದ್ದರೆ ಬಂದು ನನ್ನೊಂದಿರಗಿರಬೋದು. ಅನ್ನ ಮಾಡುವಾಗ ಒಂದಿಡಿ ಅಕ್ಕಿ ಜಾಸ್ತಿ ಹಾಕ್ತೀನಿ’ ಅಂದ. ಮರುಮಾತಾಡದೇ ಅವಳು ಮೈಲ್ಗ್ಯಾನೊಂದಿಗೆ ಅವನ ಜೋಪಡಿಗೆ ಬಂದಿದ್ದಳು. ಹಸಿದು ಬಂದಿದ್ದ ಅವಳಿಗೆ ತಾನೇ ಖುದ್ದಾಗಿ ಅಡುಗೆ ಮಾಡಿ ಬಡಿಸಿದ್ದ. ಹೊಟ್ಟೆ ತುಂಬಾ ಉಂಡ ಅವಳ ಕಣ್ಣಲ್ಲಿ ಕೃತಜ್ಞತೆಯ ಭಾವವಿತ್ತು. ‘ನಿನ್ನೆಸರೇನು?’ ಎಂದು ಕೇಳಿದ ಮೈಲ್ಗ್ಯಾನ ಕಡೆಗೆ ಒಂದು ಕಿರುನಗೆ ಚೆಲ್ಲಿ ‘ಸುಂಕ್ಲಮ್ಮ’ ಎಂದುಲಿದಿದ್ದಳು. ಅವಳ ಮುಖದಲ್ಲಿ ಟನ್ನುಗಟ್ಟಲೇ ಬೆಡಗು, ಬಿನ್ನಾಣ, ವೈಯಾರಗಳ ಮೂಟೆಯ ರಾಶಿಯೇ ಇತ್ತು. ಜೋಪಡಿಯ ಬುಡ್ಡಿ ದೀಪದ ಬೆಳಕಿನಲ್ಲಿ ಅದು ಪ್ರತಿಫಲಿಸಿದ್ದನ್ನು ಮೈಲ್ಗ್ಯಾ ಗಮನಿಸಿದ್ದ. ಅದರಾಚೆಗೆ ಅವಳ ಬಗ್ಗೆ ಮತ್ತೊಂದು ಪ್ರಶ್ನೆಯನ್ನು ಯಾವತ್ತೂ ಕೇಳಿರಲಿಲ್ಲ. ಬೆಳಿಗ್ಗೆ ಎದ್ದಾಗ ಸುಂಕ್ಲಿಯ ಹರಿದ ಸೀರೆ, ರವಿಕೆಯನ್ನು ನೋಡಿದ್ದ.  ಸಂಜೆ ಕೆಲಸ ಮುಗಿಸಿಬರುವಾಗ ಹೂವಿನ ಚಿತ್ತಾರದ ಎರಡು ಸೀರೆಗಳನ್ನು ರವಿಕೆಯನ್ನು ಕೊಂಡುತಂದಿದ್ದ. ಜೋಪಡಿಗೆ ಮರಳಿದಾಗ ಅಚ್ಚರಿ ಕಾದಿತ್ತು. ಅವಳು ಅಂಗಳದಲ್ಲಿ ಸಗಣಿ ಸಾರಿಸಿ ರಂಗೋಲಿ ಹಾಕಿದ್ದಳು. ಒಳಗೂ ಸಗಣಿ ಸಾರಿಸಿ ನೆರಿಕೆಯ ಸಂದುಗೊಂದುಗಳಿಗೆ ಕೆಸರು ಮೆತ್ತುತ್ತಿದ್ದಳು. ಇಡೀ ಜೋಪಡಿಯನ್ನು ಒಪ್ಪಓರಣಗೊಳಿಸಿದ್ದಳು. ಇಷ್ಟು ದಿನ ಹೇಗೊ ಬದುಕಿದ್ದ ಮೈಲ್ಗ್ಯಾನ ಬದುಕಿನಲ್ಲಿ ಅವಳು ಬದಲಾವಣೆಯ ಗಾಳಿಯಾಗಿ ಬೀಸುತ್ತಿದ್ದಳು. ಶೀಲ, ಪಾತಿವ್ರತ್ಯ, ಮದುವೆ ಇದ್ಯಾವುದರ ಗೊಡವೆಯಿಲ್ಲದೇ ಜೊತೆಗೆ ಬದುಕಲು ಇಬ್ಬರೂ ನಿರ್ಧರಿಸಿದಂತಿತ್ತು. ಸುಂಕ್ಲಮ್ಮ ಎನ್ನುವ ಹೆಸರು ಮೈಲ್ಗ್ಯಾನ ಒರಟು ಬಾಯಲ್ಲಿ ಸುಂಕ್ಲಿ ಎಂದು ಬದಲಾಗಿ ಸ್ಥಾಪಿತವಾಗಿತ್ತು. ಸುಂಕ್ಲಿ ಯಾವಾಗಲೂ ಮೈಲ್ಗ್ಯಾನನ್ನು ಪ್ರೀತಿಯಿಂದ ‘ಯಜಮಾನಾ...’ ಎಂದೇ ಕರೆಯುತ್ತಿದ್ದಳು. ವ್ಯರ್ಥವಾಗುತ್ತಿದ್ದ ಮೈಲ್ಗ್ಯಾನ ಯೌವ್ವನಕ್ಕೊಂದು ಅರ್ಥ ಕೊಟ್ಟಿದ್ದಳು ಸುಂಕ್ಲಿ.

ಹಂದಿಮಾಂಸವೆಂದರೆ ಮೈಲ್ಗ್ಯಾನಿಗೆ ಪಂಚಪ್ರಾಣ. ಒಮ್ಮೆ ಇಳಿಸಂಜೆಯಲ್ಲಿ ಪೊಗದಸ್ತಾಗಿ ಬೆಳೆದಿದ್ದ ಮಧ್ಯಮ ಗಾತ್ರದ ಹಂದಿಯೊಂದು ಗುಂಪಿನಿಂದ ತಪ್ಪಿಸಿಕೊಂಡು ಬಂದು ಮೈಲ್ಗ್ಯಾನ ಜೋಪಡಿಯ ನೆರಿಕೆಯನ್ನು ಗೂರುತ್ತಿತ್ತು. ಸದ್ದು ಮಾಡದೇ ನಿಧಾನವಾಗಿ ಹೆಜ್ಜೆಯಿಡುತ್ತಾ ಗಬಕ್ಕನೇ ಹಿಡಿದುಕೊಂಡು ಬಿಟ್ಟಿದ್ದ. ‘ಗ್ರೂಚ್... ಗ್ರೂಚ್...’ ಎಂದು ಚೀರುತ್ತಿದ್ದ ಹಂದಿಯ ಬಾಯಿ ಒತ್ತಿ ಹಿಡಿದು ಜೋಪಡಿಯೊಳಗೆ ತಂದಿದ್ದ. ರಾತ್ರಿಯ ಮಾಂಸದಡಿಗೆ ನೆನಪಿಸಿಕೊಂಡೇ ಮೈಲ್ಗ್ಯಾನ ಬಾಯಲ್ಲಿ ನೀರೂರಿತ್ತು. ಸುಂಕ್ಲಿ ಸೊಗಸಾಗಿ ಅಡುಗೆ ಮಾಡಿದ್ದಳು. ಜೊತೆಗೆ ಬಾಟ್ಲಿ ತುಂಬಾ ಬ್ರಾಂದಿ! ಮೈಲ್ಗ್ಯಾ ನಾಲಿಗೆ ಚಟಕ್ಕೆ ಬಿದ್ದು ಅಳತೆ ಮೀರಿ ತಿಂದು ಹೊಟ್ಟೆ ಉಬ್ಬರಿಸಿಕೊಂಡು ರಾತ್ರಿಯೆಲ್ಲಾ ನಿದ್ದೆಯಿಲ್ಲದೇ ಹೊರಳಾಡಿದ್ದ. ಮರುದಿನವಿಡೀ ಚೊಂಬು ತುಂಬಿಕೊಂಡು ಕಳ್ಳಿಗಿಡದ ಸಾಲಿನ ಕಡೆಗೆ ಓಡಾಡಿದ್ದೆ ಓಡಾಡಿದ್ದು. ‘ಥೂ..! ಹಂದಿ ಸೂಳೇಮಗಂದು... ಯಾರ ಹೇಲು ತಿಂದು ಬಂದಿತ್ತೋ ಏನೋ, ನನ್ ಹೊಟ್ಟೆ ಕಿತ್ಕಂಡಬುಡ್ತು’ ಎಂದು ಗೊಣಗಾಡಿದ್ದ. ಇವನ ಪರಿಸ್ಥಿತಿ ಕಂಡು ಸುಂಕ್ಲಿ ಕಿಲಕಿಲ ನಕ್ಕಿದ್ದಳು. 

ಸುಂಕ್ಲಿಯೊಂದಿಗಿನ ಸಹಜೀವನದ ಮೂರನೇಯ ವರ್ಷಕ್ಕೆ ಮೈಲ್ಗ್ಯಾ ತಂದೆಯಾಗಿ ಬಡ್ತಿ ಹೊಂದಿದ. ಸುಂಕ್ಲಿ ಗಂಡು ಮಗುವನ್ನು ಹೆತ್ತುಕೊಟ್ಟಿದ್ದಳು. ಬೊಚ್ಚು ಬಾಯಲ್ಲಿ ನಗುವ ಮಗುವಿನ ಮೆತ್ತನೆಯ ಹಾಲುಗೆನ್ನೆ, ಹವಳದಂತ ತುಟಿ, ಪುಟ್ಟಪಾದಗಳನ್ನು ಮುಟ್ಟುತ್ತಾ ಮಗುವಿನೊಂದಿಗೆ ಆಡುವುದು ಮೈಲ್ಗ್ಯಾನ ಅತಿ ಇಷ್ಟದ ಕೆಲಸವಾಗಿತ್ತು. ಮಗುವನ್ನು ಹಡೆದದ್ದು ಸುಂಕ್ಲಿಯಾದರೂ ಅವಳಿಗಿಂತ ಜಾಸ್ತಿಯಾಗಿ ಮಗುವನ್ನು ಹಚ್ಚಿಕೊಂಡುಬಿಟ್ಟಿದ್ದ. ಕೆಳಗಿಳಿಸಿದರೆ ಎಲ್ಲಿ ಕಾಲು ಕೊಳೆಯಾಗಿಬಿಡುತ್ತೊ ಎಂಬಂತೆ ಮಗುವನ್ನು ಯಾವಾಗಲೂ ಎತ್ತಿಕೊಂಡೇ ಓಡಾಡುತ್ತಿದ್ದ. ಇವನ ಅತಿಯಾದ ಕಕ್ಕುಲಾತಿ ಕಂಡು ‘ಮಗೂಗೆ ನೀನೆ ಮೊಲೆಹಾಲು ಕುಡಿಸಿ, ಜೋಗುಳ ಹಾಡಿ ಮಲಗಿಸು’ ಎಂದು ಒಮ್ಮೆ ಸುಕ್ಲಿ ಹುಸಿ ಮುನಿಸಿನಿಂದ ಅಂದಿದ್ದಳು. ತನ್ನ ಮೇಲೆ ತಂದೆ ನಿಂಗ ಕಟ್ಟಿಕೊಂಡಿದ್ದ ಕನಸನ್ನು ಈಗ ತನ್ನ ಮಗನಾದರೂ ಈಡೇರಿಸಲಿ ಎಂದು ಮೈಲ್ಗ್ಯಾ ಕನಸು ಕಾಣತೊಡಗಿದ. ಸಿದ್ಧ ಮಾದರಿಯ ಶೂದ್ರ ಹೆಸರುಗಳನ್ನು ಕೈಬಿಟ್ಟು ಇಡೀ ಹೊಲಗೇರಿಯ ಇತಿಹಾಸದಲ್ಲೇ ಮೊದಲಬಾರಿಗೆ ಚೆಂದದ ಹೆಸರು ಇಡಬೇಕೆಂದು ತೀರ್ಮಾನಿಸಿದ. ದಿನದಿಂದ ದಿನಕ್ಕೆ ತುಂಬು ಚಂದಿರನಂತೆ ಬೆಳೆಯುತ್ತಿದ್ದ ಮಗನಿಗೆ ‘ಚಂದ್ರಶೇಖರ’ ಎಂದು ಹೆಸರಿಟ್ಟ. ಹತ್ತಿರದಲ್ಲಿದ್ದ ಸರ್ಕಾರಿ ಶಾಲೆಗೂ ಸೇರಿಸಿದ್ದ. ಈಗ ಮಗ ಎರಡನೇ ಕ್ಲಾಸಿನಲ್ಲಿ ಓದುತ್ತಿದ್ದ. ತನ್ನ ಮಗ ಚೆಂದಾಗಿ ಓದಿ ದೊಡ್ಡ ಆಫೀಸರಾಗಬೇಕು ಎಂಬ ಕನಸು ಹೆಮ್ಮರವಾಗಿತ್ತು. ‘ನಾನು ಬಡವಿ, ಆತ ಬಡವ... ಒಲವೇ ನಮ್ಮ ಬದುಕು’ ಎಂಬ ಕವಿ ನುಡಿಯಂತೆ ಮೈಲ್ಗ್ಯಾ ಸುಂಕ್ಲಿಯರ ಸಂಸಾರ ಕಡುಬಡತನದಲ್ಲಿದ್ದರೂ ಪ್ರೀತಿಗೇನೂ ಕೊರೆತೆಯಿರಲಿಲ್ಲ. ಅವರಿಬ್ಬರ ಪ್ರೀತಿಯ ದ್ಯೋತಕವಾಗಿ ಮಗು ಹುಟ್ಟಿ ಅವರ ಪ್ರೀತಿಯ ಬಂಧವನ್ನು ಇನ್ನಷ್ಟು ಬಿಗಿಗೊಳಿಸಿತ್ತು.

ರಾತ್ರಿ ಅಡುಗೆ ಮುಗಿಸಿ ಮಗನಿಗೆ ಉಣ್ಣಿಸಿ ಮಲಗಿಸಿದಳು. ಮೈಲ್ಗ್ಯಾ ಇನ್ನು ಬಂದಿರಲಿಲ್ಲ. ‘ಅವನು ಬಂದ್ಮೇಲೆ ಜೊತೆಯಲ್ಲೇ ಉಂಡರಾಯಿತು’ ಎಂದುಕೊಂಡ ಸುಂಕ್ಲಿ ಪ್ಲಾಸ್ಟಿಕ್ ಚೊಂಬಿನಲ್ಲಿ ನೀರು ತುಂಬಿಕೊಂಡು ಬಹಿರ್ದೆಸೆಗೆ ಹೊರಟಳು. ಹಗಲಿಡೀ ಜನರು ಸುತ್ತಾಮುತ್ತ ಓಡಾಡುವುದರಿಂದ ಅಲ್ಲದೇ ಹತ್ತಿರಲ್ಲೆಲ್ಲೂ ಕಾರ್ಪೋರೇಷನ್ ಶೌಚಾಲಯ ಇಲ್ಲದ್ದರಿಂದ ಅವಳು ಪ್ರತಿದಿನ ರಾತ್ರಿಯೇ ಬಹಿರ್ದೆಸೆಗೆ ಹೋಗುವುದು. ಕಡುಕತ್ತಲಿನಲ್ಲಿ ಕುಳಿತ ಸುಂಕ್ಲಿಗೆ ತನ್ನ ಕಾಲಹಿಮ್ಮಡಿಗೆ ಏನೋ ಚುಚ್ಚಿದ ಅನುಭವವಾದರೂ ಮುಳ್ಳಿರಬಹುದೆಂದು ಸುಮ್ಮನಾದಳು. ಆಗಲೇ ಮೈಲ್ಗ್ಯಾ ಕುಡಿದು ಬಂದು ಮಗನ ಪಕ್ಕದಲ್ಲೇ ಮಲಗಿದ್ದ. ಉಣ್ಣೋಕೆ ಎಬ್ಬಿಸಿದರೂ ಏಳಲಿಲ್ಲ. ಯಾಕೋ ತನಗೂ ಹಸಿವೆಯೇ ಇಲ್ಲದಂತಾಗಿ ಉಣ್ಣದೇ ಹಾಗೆ ಮಲಗಿದಳು ಸುಂಕ್ಲಿ. ಆದರೆ ನಿದ್ದೆ ಬರಲೊಲ್ಲದು. ಬಾಯಿ ಒಣಗಿದಂತೆನಿಸಿ ವಿಪರೀತ ಬೆವರಲಾರಂಭಿಸಿದಳು. ಪಕ್ಕದಲ್ಲಿ ಮಲಗಿದ್ದ ಮೈಲ್ಗ್ಯಾನನ್ನು ಎಬ್ಬಿಸಲು ಪ್ರಯತ್ನಿಸಿದಳಾದರೂ ಕುಡಿದ ನಿಶೆಯಲ್ಲಿ ಮಲಗಿದ್ದವನನ್ನು ಎಬ್ಬಿಸುವಲ್ಲಿ ಸಫಲಳಾಗಲಿಲ್ಲ. ‘ಏನೇ ನಿಂದು? ಸುಮ್ನೆ ಮಲ್ಕೊ’ ಎಂದು ಗೊಣಗಾಡಿದ್ದ. ಸ್ವಲ್ಪ ನೀರು ಕುಡಿದು ಬಲವಂತವಾಗಿ ಕಣ್ಮುಚ್ಚಿ ನಿದ್ದೆ ಮಾಡತೊಡಗಿದಳು. ನಸುಕಿನಲ್ಲಿ ಮೈಲ್ಗ್ಯಾ ಎದ್ದಾಗ ಅವನು ನೋಡಿದ ದೃಶ್ಯ ಎದೆಯೊಡೆಯುವಂತಿತ್ತು. ಸುಂಕ್ಲಿ ಕೊನೆಯುಸಿರೆಳೆದಿದ್ದಳು.  ತೆರೆದುಕೊಂಡ ಬಾಯಿಂದ ಬೆಳ್ಳಗಿನ ನೊರೆ ಹರಿದುಹೋಗಿತ್ತು. ಅವಳ ಬಲಗಾಲ ಹಿಮ್ಮಡಿಯ ಹಿಂದೆ ಆಳವಾಗಿ ಎರಡು ಸೂಜಿ ಚುಚ್ಚಿದಂತ ಗುರುತಿತ್ತು. ಸುಂಕ್ಲಿ ಈಗ ಬರಿ ನೆನಪಾಗಿ ಉಳಿದುಬಿಟ್ಟಳು. ಮೈಲ್ಗ್ಯಾನಿಗೆ ಈ ಜೀವನವೇ ನಶ್ವರ ಎನಿಸತೊಡಗಿತು. ರಾಜಕೀಯ ಪಕ್ಷವೊಂದರ ಬಹಿರಂಗ ಸಭೆಯಲ್ಲಿ ರಾಜಕಾರಣಿಯೊಬ್ಬ ‘ಬಯಲು ಶೌಚಮುಕ್ತ ದೇಶ ನಮ್ಮದಾಗಬೇಕು. ಎಲ್ಲರೂ ಶೌಚಾಲಯ ನಿರ್ಮಿಸಿಕೊಳ್ಳಿ, ಸ್ವಚ್ಛ ಭಾರತ್ಗೆ ಕೈ ಜೋಡಿಸಿ ’ ಎಂದು ಭಾಷಣ ಬಿಗಿಯುತ್ತಿದ್ದ. ಅಲ್ಲಿ ನೀಡಲಿರುವ ಊಟದ ನಿರೀಕ್ಷೆಯಲ್ಲಿ ಕಾದು ಕೂತಿದ್ದ ಮೈಲ್ಗ್ಯಾ ‘ಮನೆಯೇ ಇಲದ್ಲವರಿಗೆ ಶೌಚಾಲಯ ಬೇರೆ ಕೇಡು’ ಎಂದು ವಿಷಾದದ ನಗೆ ನಕ್ಕ. 

ತನ್ನ ಮತ್ತು ಸುಂಕ್ಲಿಯ ಪ್ರೇಮದ ಪ್ರತಿರೂಪವಾಗಿದ್ದ ಮಗ ಚಂದ್ರು ಈಗ ಎಂಟನೇ ಕ್ಲಾಸ್ ಓದುತ್ತಿದ್ದ. ಅವನಿಗೆ ತಾಯಿಯ ನೆನಪು ಅಸ್ಪಷ್ಟ. ಅವನ ಸಾನಿಧ್ಯದಲ್ಲಿ ಮೈಲ್ಗ್ಯಾ ಸುಂಕ್ಲಿಯನ್ನು ಕಳೆದುಕೊಂಡ ನೋವನ್ನು ನಿಧಾನವಾಗಿ ಮರೆಯಲಾರಂಭಿಸಿದ. ಈಗ ಅವನಿಗಿದ್ದ ಆಸೆ ಒಂದೇ, ತನ್ನ ಮಗ ಓದಿ ದೊಡ್ಡ ಆಫೀಸರ್ ಆಗಬೇಕೆಂಬುದು. ಕೋಟು ಸೂಟು ಬೂಟು ಹಾಕಿಕೊಂಡು ಮಿರಿಮಿರಿ ಮಿಂಚುವ ದೊಡ್ಡ ಕಾರಿನಲ್ಲಿ ಅವನು ಓಡಾಡುವುದನ್ನು ನೋಡಿದ ನಂತರವೇ ತಾನು ನೆಮ್ಮದಿಯಿಂದ ಸಾಯಬೇಕು ಎಂದು ನಿರ್ಧರಿಸಿಬಿಟ್ಟಿದ್ದ. ‘ಓದಿನಲ್ಲಿ ನಿನ್ನ ಮಗ ಜಾಣ ಇದ್ದಾನೆ’ ಎಂಬ ರಾಮಪ್ಪ ಮೇಷ್ಟ್ರ ಮಾತು ಮೈಲ್ಗ್ಯಾನಲ್ಲಿ ಕನಸುಗಳ ಸಾಮ್ರಾಜ್ಯವನ್ನೇ ನಿರ್ಮಿಸಿತ್ತು. ಎಷ್ಟೇ ಕಷ್ಟವಾದ್ರೂ ಸರಿ, ನನ್ನ ಮಗನನ್ನು ದೊಡ್ಡ ಆಫೀಸರ್ ಆಗುವಷ್ಟು ಓದಿಸಬೇಕು ಎಂದು ತೀರ್ಮಾನಿಸಿಬಿಟ್ಟಿದ್ದ. ನಸುಕಿನಲ್ಲಿ ಆರಂಭವಾದ ಮೈಲ್ಗ್ಯಾನ ಕೆಲಸ ಮಧ್ಯಾಹ್ನ ಒಂದರ ಹೊತ್ತಿಗೆ ಮುಗಿದಿರುತ್ತಿತ್ತು. ಜೋಪಡಿಗೆ ಮರಳಿ ಉಂಡು ತುಸು ನಿದ್ದೆ ಮಾಡಿದ ನಂತರ ಸಂಜೆ ಕೆಲವು ಹೋಟೆಲುಗಳಲ್ಲಿ ಮನೆಗಳಲ್ಲಿ ಶೌಚಾಲಯ ಸ್ವಚ್ಛಗೊಳಿಸುತ್ತಿದ್ದ. ಇದರಿಂದ ದೊರೆಯುತ್ತಿದ್ದ ಅಲ್ಪ ಸ್ವಲ್ಪ ಹಣವನ್ನು ಮಗನ ಮುಂದಿನ ಓದಿನ ಖರ್ಚಿಗೆ ಉಳಿತಾಯ ಮಾಡಲಾರಂಭಿಸಿದ. ದೊಡ್ಡ ಆಫೀಸರನ್ನಾಗಿ ಮಾಡೋಕೆ ಎಷ್ಟು ಖರ್ಚಾಗುತ್ತೋ ಏನೋ..?

*********************

ಎಂದಿನಂತೆ ನಸುಕಿನ ಜಾವದಲ್ಲಿ ಎದ್ದು ತನ್ನ ಜೊತೆಗಾರರೊಂದಿಗೆ ಬೀದಿಗಳಲ್ಲಿ ಕಸಗುಡಿಸಿ ಓಣಿಗಳಲ್ಲಿ, ರಸ್ತೆ ಬದಿಗಳಲ್ಲಿ ಇಟ್ಟಿದ್ದ ಕಾರ್ಪೋರೇಷನ್ ಕಸದ ತೊಟ್ಟಿಗಳಲ್ಲಿ ತುಂಬಿಕೊಂಡಿದ್ದ ಕಸವನ್ನು ಟ್ರ್ಯಾಕ್ಟರ್ಗೆ ತುಂಬಲಾರಂಭಿಸಿದ. ಬಿಸಿಲು ಪ್ರಖರವಾಗತೊಡಗಿತು. ಸದಾ ಜನಸಂದಣಿಯಿಂದ ಗಿಜಿಗುಡುವ ಮಾರ್ಕೆಟ್ನ ಪಕ್ಕದಲ್ಲಿದ್ದ ತೆರೆದ ಚರಂಡಿಯು ತ್ಯಾಜ್ಯ ತುಂಬಿಕೊಂಡು ಕೊಳಚೆ ನೀರು ಎಲ್ಲೆಂದರಲ್ಲಿ ಹರಿಯುತ್ತಿತ್ತು. ಅದರ ದುರ್ವಾಸನೆ ತಾಳಲಾರದೇ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದ ಜನರು ಸ್ವಚ್ಛಗೊಳಿಸಲಾರದ ಕಾರ್ಪೋರೇಷನ್ನವರಿಗೆ ಹಿಡಿಶಾಪ ಹಾಕುತ್ತಿದ್ದರು. ದುರ್ವಾಸನೆ ಬೀರುತ್ತಿದ್ದ ಕರ್ರಗಿನ ತ್ಯಾಜ್ಯದಲ್ಲಿ ಎಂಥೆಂಥದ್ದೋ ಬಿಳಿ ಹುಳುಗಳು ಸರಸರ ಹರಿದಾಡುತ್ತಿದ್ದದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಚರಂಡಿಯುದ್ದಕ್ಕೂ ಗುಂಯ್ಗುಟ್ಟುವ ಅಸಂಖ್ಯಾತ ಸೊಳ್ಳೆಗಳು ತಮ್ಮ ಸಾಮ್ರಾಜ್ಯವನ್ನೇ ನಿರ್ಮಿಸಿದ್ದವು.  ತನ್ನ ಬದುಕಿಗೆ ಭೀಕರ ಮುನ್ನುಡಿ ಬರೆಯಲಿರುವ  ಈ ಚರಂಡಿಯ ಬಗ್ಗೆ ಅರಿವಿರದ ಮೈಲ್ಗ್ಯಾ ಅದನ್ನು ಸ್ವಚ್ಛಗೊಳಿಸಲು ತನ್ನ ಜೊತೆಗಾರರೊಂದಿಗೆ ಬಂದಿದ್ದ. ಬೃಹತ್ ಗಾತ್ರದ ಮೈಯನ್ನು ಚರಂಡಿಯೊಳಗೆ ಉರುಳಿಸಿ ಒದ್ದಾಡುತ್ತಾ ತನ್ನ ಮರಿಗಳೊಂದಿಗೆ ಹೆಣ್ಣು ಹಂದಿಯೊಂದು ನಿರಾತಂಕವಾಗಿ ಮಲಗಿತ್ತು. ಆಗತಾನೆ ಸ್ವತಂತ್ರವಾಗಿ ಆಹಾರ ಸಂಪಾದಿಸುವುದನ್ನು ಕಲಿಯುತ್ತಿದ್ದ ಹಂದಿಮರಿಗಳು ತಮ್ಮ ಉದ್ದನೆಯ ಮೂತಿಯನ್ನು ಚರಂಡಿಯ ತ್ಯಾಜ್ಯದೊಳಗಿಟ್ಟು ಗೂರುತ್ತಾ ‘ಗ್ರೂಚ್ ಗ್ರೂಚ್’ ಸದ್ದು ಹೊರಡಿಸುತ್ತಾ ಬಲು ಸಂಭ್ರಮದಿಂದ ಚಟಪಟ ಓಡಾಡುತ್ತಿದ್ದವು. ‘ಥೂ.. ಮಿಂಡ್ರಿಗುಟ್ಟಿದೋವು, ಚರಂಡಿ ತುಂಬಾ ಉಳ್ಳಾಡಿ ಚರಂಡಿ ಹರಿದಂಗೆ ಮಾಡಿಬಿಡ್ತಾವೆ’ ಎಂದು ಬೈದುಕೊಳ್ಳುತ್ತಾ  ‘ಉಶ್ಶ್ssss...’ ಎಂದು ಹಂದಿಯೆಡೆಗೆ ಕಲ್ಲು ಬೀಸಿದ ಮೈಲ್ಗ್ಯಾನೆಡೆಗೆ ತಲೆಯೆತ್ತಿ ನೋಡಿ ಒಮ್ಮೆ ‘ಗ್ರೂಚ್’ ಎಂದು ಧ್ವನಿ ಹೊರಡಿಸಿದ ಹಂದಿಯು ಮತ್ತೆ ಚರಂಡಿಯಲ್ಲಿ ಉರುಳಿಕೊಂಡಿತು. ತನ್ನ ಹೊಡೆತಕ್ಕೂ ಜಗ್ಗದ ಹಂದಿಯನ್ನು ಕಂಡು ‘ಅಲೇ ಇವನೌನ’ ಎಂದು ಸಿಡುಕುತ್ತಾ ದೊಡ್ಡ ಕಲ್ಲುಗಳನ್ನು ಬೀಸಿ ಬೆದರಿಸಿ ಓಡಿಸತೊಡಗಿದ. ಅನಿವಾರ್ಯವೆಂಬಂತೆ ಆಲಸ್ಯದಿಂದೆದ್ದ ಹಂದಿ ಪಕ್ಕದಲ್ಲಿ ದಟ್ಟವಾಗಿ ಬೆಳೆದಿದ್ದ ಜಾಲಿ ಪೊದೆಯ ಗುರುಗುಡುತ್ತಾ ನಡೆಯಿತು. ಕುಂಯ್ಗುಡುತ್ತಾ ಹಿಂಬಾಲಿಸಿದ ಮರಿಗಳು ಹಿಂಡುಹಿಂಡಾಗಿ ಅದರ ಕೆಚ್ಚಲಿಗೆ ಮುಗಿಬಿದ್ದಿದ್ದವು. ನೆಲಕ್ಕೆ ತಾಕುವಂತಿದ್ದ ಅದರ ಹೊಟ್ಟೆ,  ತುಂಬು ಕೆಚ್ಚಲುಗಳು, ದಷ್ಟಪುಷ್ಟವಾಗಿ ಕೊಬ್ಬಿದ್ದ ಅದರ ದೇಹ ನೋಡಿ ಮೈಲ್ಗ್ಯಾನ ನಾಲಿಗೆಯ ಅಗೋಚರ ಸಂದುಗೊಂದುಗಳಲ್ಲಿ ನೀರೆಂಬುದು ಊಟೆವೊಡೆಯತೊಡಗಿತ್ತು. ಚೆನ್ನಾಗಿ ಮೈ ತೊಳೆದು ಕೊಯ್ದುಬಿಟ್ರೆ ಇಡೀ ಕೇರಿ ಹೊಟ್ಟೆ ತುಂಬಾ ತಿಂದು ತೇಗಬಹುದೆಂದುಕೊಂಡ. ಮೈಲ್ಗ್ಯಾನ ಜೊತೆಗಾರರಾಗಲೇ ಸಲಿಕೆ ಪುಟ್ಟಿಗಳೊಂದಿಗೆ ಚರಂಡಿಯಲ್ಲಿಳಿದು ತ್ಯಾಜ್ಯವನ್ನು ಬಾಚಿ ಚರಂಡಿಯ ಬದಿಗೆ ಹಾಕುತ್ತಿದ್ದರು. ತುಂಬಿಕೊಂಡಿದ್ದ ಚರಂಡಿಯ ಬದಿಯಲ್ಲಿ ಕುಕ್ಕರಗಾಲಲ್ಲಿ ಕೂತು ಸಲಿಕೆಯನ್ನು ಎತ್ತಿಕೊಂಡು ತನ್ನೆರಡು ಕಾಲುಗಳನ್ನು ಚರಂಡಿಯ ತ್ಯಾಜ್ಯದೊಳಗೆ ಇಳಿಸಿ ಎದ್ದುನಿಂತ. ಮೆತ್ತನೆಯ ಹೊಲಸು ತ್ಯಾಜ್ಯದೊಳಗೆ ಪಾದಗಳು ನಿಧಾನವಾಗಿ ಮುಳುಗತೊಡಗಿದವು. ಕಾಲ್ಬೆರಳುಗಳ ಸಂದಿಯಿಂದ ಪಿಚಪಿಚನೆ ಕೊಳಚೆ ನೀರು ಚಿಮ್ಮಿತು. ಹೆಚ್ಚೆಂದರೆ ಮೊಳಕಾಲುವರೆಗಿನ ಆಳದ ಚರಂಡಿಯಷ್ಟೇ. ಒಂದಡಿಯಷ್ಟು ಪಾದ ಮುಳುಗಿತ್ತೋ ಇಲ್ಲವೋ ಮೈಲ್ಗ್ಯಾನ ಬಾಯಿಂದ ‘ಹ್..!’ ಎಂಬ ಉದ್ಗಾರ ಹೊರಬಿತ್ತು. ಚರಂಡಿಯ ತ್ಯಾಜ್ಯದೊಳಗಿದ್ದ ಗಾಜಿನ ಬಾಟಲಿಯ ಚೂಪಾದ ತುಂಡುಗಳು ಮೈಲ್ಗ್ಯಾನ ಎರಡೂ ಪಾದಗಳಿಗೂ ಚುಚ್ಚಿಬಿಟ್ಟಿದ್ದವು. ಕುಸಿದು ಕುಳಿತ ಮೈಲ್ಗ್ಯಾನ ಅಂಗಾಲುಗಳಿಂದ ರಕ್ತಸ್ರಾವ ನಿಲ್ಲುವ ಲಕ್ಷಣಗಳು ಕಾಣದಿದ್ದಾಗ ಮೈಲ್ಗ್ಯಾನ ಜೊತೆಗಾರ ದ್ಯಾಮ ತನ್ನ ಲಟಾರಿ ಸೈಕಲ್ನಲ್ಲಿ ಕೂರಿಸಿಕೊಂಡು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದ.  ಸರ್ಕಾರಿ ಆಸ್ಪತ್ರೆಯ ಕಂಪೋಂಡರ್ ರುದ್ರಮುನಿ ಮೈಲ್ಗ್ಯಾನಿಗೆ ತುಂಬಾ ಪರಿಚಿತನೇ ಆಗಿದ್ದ. ಆಸ್ಪತ್ರೆಯ ಶೌಚಾಲಯವನ್ನು ಸ್ವಚ್ಛಗೊಳಿಸುವುದು ಮೈಲ್ಗ್ಯಾನೇ ಅಲ್ಲವೇ? ಸಂಜೆ ಆಸ್ಪತ್ರೆಗೆ ಹೋದಾಗ ಒಂದೆರಡು ಒಳರೋಗಿಗಳನ್ನು ಹೊರತುಪಡಿಸಿದರೆ ಆಸ್ಪತ್ರೆ ಬಿಕೋ ಎನ್ನುತ್ತಿತ್ತು. ಡಾಕ್ಟರ್ ಇರಲಿಲ್ಲ. ರುದ್ರಮುನಿಯೂ ಕಾಣಲಿಲ್ಲ. ಯಾಕೋ ಜಲಭಾದೆಯೆನಿಸಿ ಮೂಲೆಯಲ್ಲಿದ್ದ ಶೌಚಾಲಯದತ್ತ ಕುಂಟುತ್ತಾ ಹೆಜ್ಜೆ ಹಾಕಿದ. ನಸುಗತ್ತಲು ಆವರಿಸಿದ್ದ ಮೂಲೆಯಲ್ಲಿ ಏನೋ ಚಲಿಸಿದಂತಾಗಿ ದಿಟ್ಟಿಸಿ ನೋಡಿದ. ಅಲ್ಲಿ ಕಂಪೋಂಡರ್ ರುದ್ರಮುನಿ ನರ್ಸ್ ಸರೋಜಾಳೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ. ತಕ್ಷಣವೇ ಗಂಟಲಲ್ಲಿ ಏನೋ ಸಿಕ್ಕಿದಂತಾಗಿ ‘ಖಂವ್ವನೇ’ ಕೆಮ್ಮಿ ಬಿಟ್ಟ. ಸರಸದಲ್ಲಿ ಮೈಮರೆತಿದ್ದ ಜೋಡಿ ಬೆಚ್ಚಿಬಿತ್ತು. ರಸಭಂಗಗೊಳಿಸಿದ ಮೈಲ್ಗ್ಯಾನನ್ನು ನೋಡಿದ ಸರೋಜಾ ಮುಖದಲ್ಲಿ ಅಸಹನೆ ತುಂಬಿಕೊಂಡು ಹೊರಟರೆ ರುದ್ರಮುನಿ ರೇಗಿಯೇ ಬಿಟ್ಟ, “ಏನ್ಲೇ ಮೈಲ್ಗ್ಯಾ ನಿಂದು ಇಷ್ಟೊತ್ತಲ್ಲಿ? ನಿಂಗೆ ಹೊತ್ತು ಗೊತ್ತು ಏನೂ ಇಲ್ಲೇನು?’. ಮೈಲ್ಗ್ಯಾ ತಡವರಿಸುತ್ತಾ ತನ್ನ ಕಾಲಿಗಾದ ಗಾಯ ತೋರಿಸಿದ. ರುದ್ರಮುನಿ ತನ್ನೊಳಗೆ ತಾನು ಏನನ್ನೋ ಗೊಣಗುತ್ತಾ ಕಡು ಕಂದು ಬಣ್ಣದ ಟಿಂಚರ್ನಲ್ಲಿ ಹತ್ತಿ ಅದ್ದಿ ಬ್ಯಾಂಡೇಜ್ ಕಟ್ಟಿ, ಪುಟ್ಟ ಶೀಷೆಯಲ್ಲಿ ಒಂದಿಷ್ಟು ಟಿಂಚರ್, ಹತ್ತಿ ಕೊಟ್ಟು ದಿನ ಹಚ್ಕೋ ಅಂದ.

ಮೈಲ್ಗ್ಯಾ ಮನೆಗೆ ಬಂದಾಗ ಮಗ ಚಂದ್ರ ಮನೆಯಲ್ಲಿರಲಿಲ್ಲ. ಇವನೆಲ್ಲಿ ಹೋದ್ನೊ ಎನ್ನುತ್ತಾ ಹೊರಗೆ ಬಂದಾಗ ಕೇರಿಯ ನಡುವೆ ಇದ್ದ ಗಾಳೆಮ್ಮನ ಗುಡಿಯ ಕಟ್ಟೆಯ ಮೇಲೆ ಕೆಲವು ಪೋಲಿ ಹುಡುಗರೊಂದಿಗೆ ಸೇರಿ ಚಂದ್ರ ತೂರಾಬಿಲ್ಲೆ ಆಡುತ್ತಾ ಕೂತಿದ್ದ. ತಾನು ಆಗಾಗ ಕೊಡುತ್ತಿದ್ದ ಚಿಲ್ಲರೆಯನ್ನು ಮಗ ಕೂಡಿಟ್ಟು ತೂರಾಬಿಲ್ಲೆ ಆಡುವುದು ಮೈಲ್ಗ್ಯಾನಿಗೆ ಗೊತ್ತಿರಲಿಲ್ಲ. ಚಂದ್ರ ಯಾವಾಗ ಕಲಿತಿದ್ದನೋ? ಕೈಯಲ್ಲಿ ಕೆಲವು ನಾಣ್ಯಗಳನ್ನು ಹಿಡಿದುಕೊಂಡು ಆಡುತ್ತಾ ಕುಳಿತಿದ್ದ ಚಂದ್ರನನ್ನು ನೋಡಿ ಮೈಲ್ಗ್ಯಾ ಕೆರಳಿಬಿಟ್ಟ. ತಾನು ಬಾಲ್ಯದೊಂದಿಗೆ ಹೀಗೆ ಪೋಲಿ ಹುಡುಗರೊಂದಿಗೆ ಸೇರಿ ತೂರಾಬಿಲ್ಲೆ. ಇಸ್ಪೀಟು, ಬೀಡಿ ಮುಂತಾದ ಕೆಟ್ಟ ಚಟಗಳನ್ನು ಕಲಿತು ಹಾಳಾಗಿದ್ದು ಕಣ್ಮುಂದೆ ಬಂತು, ತನ್ನ ಮಗನಾದರೂ ಚೆನ್ನಾಗಿ ಓದಿ ದೊಡ್ಡ ಆಫೀಸರ್ ಆಗಬೇಕೆಂಬ ತನ್ನ ಕನಸನ್ನು ಮಗ ಹಾಳು ಮಾಡುತ್ತಿದ್ದಾನೆ ಎನಿಸಿತು. ಬೆರಳ ತುದಿಯಿಂದ ರಿವ್ರನೇ ರೂಪಾಯಿ ನಾಣ್ಯವನ್ನು ಮೇಲಕ್ಕೆ ಚಿಮ್ಮಿ ಅದು ನೆಲಕ್ಕೆ ಬೀಳುವ ಮೊದಲೇ ಅಷ್ಟೇ ವೇಗವಾಗಿ ಅದನ್ನು ಅಂಗೈಯಿಂದ ಮುಚ್ಚುವ ಪ್ರಯತ್ನದಲ್ಲಿದ್ದ ಚಂದ್ರನ ಕುತ್ತಿಗೆಗೆ ಕೈ ಹಾಕಿ ದರದರನೆ ಎಳೆಯುತ್ತಾ ಗುಡಿಯ ಮುಂದೆ ಬೆಳೆದಿದ್ದ ಕಣಗಿಲೆ ಗಿಡದ ಟೊಂಗೆಯನ್ನು ಮುರಿದುಕೊಂಡು ‘ಆಡ್ತೀಯಾ..? ಇನ್ನೊಂದ್ಸಲ ತೂರಾಬಿಲ್ಲಿ ಆಡ್ತೀಯಾ..?’ ಎನ್ನುತ್ತಾ ಆಕ್ರೋಶದಿಂದ ಚರ್ಮ ಕಿತ್ತುಬರುವಂತೆ ಹೊಡೆಯತೊಡಗಿದ. ತನ್ನಪ್ಪನ ಅನಿರೀಕ್ಷಿತ ದಾಳಿಯಿಂದ ಕಂಗಾಲಾದ ಚಂದ್ರ ಹೊಡೆತ ತಾಳಲಾರದೇ ‘ಇಲ್ಲಪ್ಪಾ ಇಲ್ಲ... ಆಡಲ್ಲಪ್ಪಾ... ಬಿಟ್ಬಿಡಪ್ಪಾ...’ ಎನ್ನುತ್ತಾ ಜೋರಾಗಿ ಕಿರುಚುತ್ತಾ ಅಳಲಾರಂಭಿಸಿದ. ಇದನ್ನೆಲ್ಲಾ ನೋಡಿದ ತುರಾಬಿಲ್ಲೆ ಆಡುವ ಹುಡುಗರೆಲ್ಲಾ ಯಾವಾಗಲೊ ಓಡಿ ಹೋಗಿದ್ದರು. ಯಾರೋ ಕೇರಿಯ ಒಂದಿಬ್ಬರು ಮೈಲ್ಗ್ಯಾನಿಗೆ ಬೈಯ್ದು ‘ಮಗನನ್ನು ಸಾಯಿಸಬೇಕೆಂದು ಕೊಂಡಿಯೇನ್ಲೇ’ ಎಂದು ಕೈಯಲಿದ್ದ ಟೊಂಗೆಯನ್ನು ಕಿತ್ತುಕೊಂಡರು. ಚಂದ್ರನ ಮೈತುಂಬಾ ಬಿದ್ದ ಏಟಿನಿಂದಾಗಿ ಬಾಸುಂಡೆಗಳೆದ್ದು ಉರಿಯಲಾರಂಭಿಸಿತು. ಯಾಕೊ ತನ್ನ ಮನಸ್ಸೇ ತನ್ನ ನಿಗ್ರಹದಲ್ಲಿಲ್ಲ ಎಂದುಕೊಳ್ಳುತ್ತಾ ಬಾರ್ ಕಡೆಗೆ ಹೊರಟ. ಒಂದೆರಡು ಕ್ವಾರ್ಟರ್ ಬ್ರಾಂದಿ ಗಂಟಲೊಳಗೆ ಇಳಿಯುತ್ತಿದಂತೆ ತನ್ನ ತಪ್ಪಿನ ಅರಿವಾಗತೊಡಗಿತು. ಮಗನಿಗೆ ಸಿಟ್ಟಿನಲ್ಲಿ ಹೊಡೆದುಬಿಟ್ಟೆ. ನಿಧಾನವಾಗಿ ತಿಳಿಸಿ ಹೇಳಬೇಕಿತ್ತು. ತಾಯಿ ಇಲ್ಲದ ಕೂಸು ಅದು ಎಂದು ವಿಲವಿಲ ಒದ್ದಾಡಿದ. ಮೃಗದಂತೆ ವರ್ತಿಸಿಬಿಟ್ಟೆನಲ್ಲಾ, ಎಷ್ಟು ನೋವಾಯ್ತೊ ಏನೋ ನನ್ನ ಮಗೂಗೆ’ ಎಂದು ಕಣ್ಣೀರು ಹಾಕಿದ. ಸುಂಕ್ಲಿ ಬದುಕಿದ್ದರೆ ಒಂದು ಪೆಟ್ಟು ಹಾಕಲು ಬಿಡುತ್ತಿರಲಿಲ್ಲ ಎಂದೆನಿಸಿತು. ಬರುವಾಗ ಕಾಸೀಂಸಾಬ್ನ ಸಿಹಿತಿಂಡಿಯ ಅಂಗಡಿಯಲ್ಲಿ ಚಂದ್ರನಿಗಿಷ್ಟವಾದ ಜಿಲೇಬಿ ಕಟ್ಟಿಸಿಕೊಂಡ. ಜೋಪಡಿಗೆ ಬಂದಾಗ ಬಾಗಿಲು ತೆರೆದೇ ಇತ್ತು. ಒಳಗೂ ಹೊರಗೂ ಅಮವಾಸ್ಯೆಯ ದಟ್ಟ ಕತ್ತಲಿತ್ತು. ‘ಮಗಾ... ಚಂದ್ರಾ...’ ಎಂದು ಪ್ರೀತಿಯಿಂದ ಕೂಗಿದ. ಒಳಗಿನಿಂದ ಉತ್ತರ ಬರಲಿಲ್ಲ. ಬಹುಶಃ ಮಗ ಅಳುತ್ತಾ ಹಾಗೆ ಮಲಗಿಕೊಂಡಿರುತ್ತಾನೆ. ಅವನನ್ನು ಎಬ್ಬಿಸಿ ಸಮಾಧಾನಪಡಿಸಿ ಊಟ ಮಾಡಿಸಬೇಕೆಂದುಕೊಂಡ. ಒಳಗೆ ಹೋಗಿ ಬುಡ್ಡಿ ದೀಪ ಬೆಳಗಿಸಿದ. ಒಳಗೆ ಚಂದ್ರ ಇರಲಿಲ್ಲ. ನೆರಿಕೆಯ ಸಂದಿಯಲ್ಲಿ ಜಿಲೇಬಿಯ ಪೊಟ್ಟಣ ಸಿಕ್ಕಿಸಿ ಹೊರಗೆ ಬಂದು ಚಂದ್ರಾ... ಚಂದ್ರಾ... ಎಂದು ಕೂಗಿದ. ಅವನು ಕೂಗಿದ್ದು ಪ್ರತಿಧ್ವನಿಗೊಂಡು ಅವನಿಗೆ ಕೇಳಿಸಿತೆ ಹೊರತು ಪ್ರತ್ಯುತ್ತರ ಬರಲಿಲ್ಲ. ಹೊರಗೆ ಸಣ್ಣಗೆ ಜಿಟಿಜಿಟಿ ಮಳೆ ಶುರುವಾಗಿತ್ತು. ಜೊತೆಗೆ ಹೋರು ಗಾಳಿ ಬೀಸಲಾರಂಭಿಸಿತ್ತು. ‘ಎಲ್ಲಿಹೋದ ಇಷ್ಟೊತ್ತಲ್ಲಿ’ ಎಂದುಕೊಂಡು ಸುತ್ತಲೂ ‘ಚಂದ್ರಾ...  ಚಂದ್ರಾ...’ ಎಂದು ಕೂಗುತ್ತಾ ಹುಡುಕಲಾರಂಭಿಸಿದ. ಎಲ್ಲೂ ಚಂದ್ರನ ಸುಳಿವಿರಲಿಲ್ಲ. ಅಮವಾಸ್ಯೆಯ ಕಗ್ಗತ್ತಿನಲ್ಲಿ ಚಂದ್ರ ಕರಗಿಹೋಗಿದ್ದ. ರಾತ್ರಿ ನಿದ್ರೆಯಿಲ್ಲದೇ ಹೊರಳಾಡಿದ. ಮರುದಿನ ಊರು ಸುತ್ತಾಡಿದ. ಅಕ್ಕ ಪಕ್ಕದ ಊರುಗಳಲ್ಲಿ ಅಲೆದಾಡಿದ. ಆದರೆ ಚಂದ್ರ ಎಲ್ಲೂ ಕಾಣಲೇ ಇಲ್ಲ. ನಿರಾಶನಾಗಿ ಸಂಜೆ ಜೋಪಡಿಗೆ ಮರಳುವ ವೇಳೆಗೆ ರಸ್ತೆ ಬದಿಯಲ್ಲಿ ಪುಟ್ಟ ಟೀ ಹೋಟೆಲು ಇಟ್ಟುಕೊಂಡಿದ್ದ ಸಂಗಪ್ಪಜ್ಜ ಮೈಲ್ಗ್ಯಾನನ್ನು ಕೂಗಿ ಕರೆದ. ನಿನ್ನೆ ರಾತ್ರಿ ಮುಂಬೈ ಕಡೆಗೆ ಹೋಗುತ್ತಿದ್ದ ಲಾರಿಯಲ್ಲಿ ಚಂದ್ರ ಹತ್ತಿದ್ದನ್ನು ತಾನು ನೋಡಿದ್ದಾಗಿಯೂ, ತಾನು ಕೂಗಿ ಕರೆದರೂ ಅವನು ತಿರುಗಿ ನೋಡದೆ ಹೋಗಿದ್ದನ್ನು ಹೇಳಿದ. ಮೈಲ್ಗ್ಯಾ ಆಘಾತದಿಂದ ಕುಸಿದುಹೋದ. ಮೈಯೊಳಗಿನ ಶಕ್ತಿಯನ್ನೆಲ್ಲಾ ಕಳೆದುಕೊಂಡವನಂತೆ ಕಾಲೆಳೆಯುತ್ತಾ ಜೋಪಡಿಗೆ ಬಂದ. ನೆರಿಕೆಯ ಸಂದಿಯಲ್ಲಿ ಸಿಕ್ಕಿಸಿಟ್ಟಿದ್ದ ಜಿಲೇಬಿಗೆ ಇರುವೆಗಳು ದಟ್ಟವಾಗಿ ಮುಕ್ಕರಿಕೊಂಡಿದ್ದವು. ಇವತ್ತಲ್ಲ ನಾಳೆ ನನ್ನ ಮಗ ವಾಪಾಸ್ಸು ಬರುತ್ತಾನೆ ಎಂಬ ನಿರೀಕ್ಷೆಯಲ್ಲಿ ಮೈಲ್ಗ್ಯಾ ದಿನಗಳೆದ.

ಅಂಗಾಲಿಗೆ ಗಾಜು ಚುಚ್ಚಿ ಆದ ಗಾಯ ಇನ್ನೂ ಉಲ್ಬಣವಾಗಿ ನೋವು ಹೆಚ್ಚಾಗಿತ್ತು. ದಿನಾಲು ಟಿಂಚರ್ ಹಚ್ಚಿಕೊಳ್ಳುತ್ತಿದ್ದರೂ ಕಡಿಮೆಯಾಗಿರಲಿಲ್ಲ. ನೋವು ವಿಪರೀತವಾದಾಗ ಅದೇ ಸರ್ಕಾರಿ ಆಸ್ಪತ್ರೆಗೆ ಹೋದ. ಆಸ್ಪತ್ರೆಯ ಕಾರಿಡಾರ್ನಲ್ಲಿ ಚಿಗುರು ಮೀಸೆಯ ಯುವಕನೊಬ್ಬ ನರ್ಸ್ ಸರೋಜಳಿಗೆ ಸಣ್ಣದನಿಯಲ್ಲಿ ಏನನ್ನೋ ಹೇಳುತ್ತಾ ವಿನಂತಿಸಿಕೊಳ್ಳುತ್ತಾ ನಿಂತಿದ್ದ. ಅವನ ಬೆನ್ನ ಹಿಂದೆ ಮುಖಕ್ಕೆ ದುಪ್ಪಟ್ಟಾ ಕಟ್ಟಿಕೊಂಡಿದ್ದ ಹುಡುಗಿಯೊಬ್ಬಳು ನಿಂತಿದ್ದಳು. ಅವಳ ಕಣ್ಣುಗಳಲ್ಲಿ ಚಕ್ರತೀರ್ಥ! ಯುವಕನ ವಿನಂತಿಗೆ ಸರೋಜ ಅಸಹನೆಯಿಂದ ಸಿಡಿಮಿಡಿಗೊಳ್ಳುತ್ತಿದ್ದಳು. ಸ್ವಲ್ಪ ದೂರದಲ್ಲಿ ಕೂತಿದ್ದ ಮೈಲ್ಗ್ಯಾನಿಗೆ ಬೇಡವೆಂದರೂ ಅವರ ಸಂಭಾಷಣೆ ಕಿವಿಗೆ ಅಪ್ಪಳಿಸಲಾರಂಭಿಸಿತು. ವಿಷಯವಿಷ್ಟೇ; ಕಳ್ಳ ಬಸಿರನ್ನು ತೆಗೆಯುವುದರಲ್ಲಿ ಕುಖ್ಯಾತಿ ಪಡೆದಿದ್ದ ನರ್ಸ್ ಸರೋಜ ಯುವಕನೊಂದಿಗೆ ಬಂದಿದ್ದ ಹುಡುಗಿಯ ಅಬಾರ್ಷನ್ಗಾಗಿ ಹತ್ತು ಸಾವಿರ ರೂ ಬೇಡಿಕೆಯಿಟ್ಟಿದ್ದಳು. ಅದು ತೀರಾ ಹೆಚ್ಚಾಯ್ತು ಎಂದ ಯುವಕ ‘ಸ್ವಲ್ಪ ಕಡಿಮೆ ಮಾಡ್ಕೊಳ್ಳಿ ಮೇಡಂ. ಅಷ್ಟೊಂದು ದುಡ್ಡು ನನ್ನತ್ತ ಇಲ್ಲ’ ಎಂದು ವಿನಂತಿಸಿಕೊಳ್ಳುತ್ತಾ ಆರು ಸಾವಿರಕ್ಕೆ ಒಪ್ಪಿಸಲು ಶತಪ್ರಯತ್ನ ಮಾಡುತ್ತಿದ್ದ. ‘ಮದ್ವೆಗೆ ಮುಂಚೆ ಇದೆಲ್ಲಾ ಯಾಕ್ರೋ ನಿಮ್ಗೆ? ಹುಷಾರಾಗಿರೋದು ಗೊತ್ತಿಲ್ವಾ? ಅಷ್ಟೊಂದು ತೀಟೆ ಇದ್ರೆ ಮದ್ವೆ ಮಾಡ್ಕೊಳ್ಳಿ’ ಎಂದು ಸಿಡುಕುತ್ತಾ ಕೊನೆಗೆ ಎಂಟು ಸಾವಿರಕ್ಕೆ ವ್ಯವಹಾರ ಕುದುರಿಸಿದಳು. ಯುವಕ ಕೊಟ್ಟ ತಿಳಿನೇರಳೆ ಬಣ್ಣದ ನಾಲ್ಕು ನೋಟುಗಳ ಪುಡಿಕೆಯನ್ನು ತನ್ನ ರವಿಕೆಯೊಳಗೆ ಸಿಕ್ಕಿಕೊಳ್ಳುತ್ತಾ ಸಂಜೆ ಆರು ಗಂಟೆಗೆ ಬನ್ನಿ, ಆಗ ಯಾರೂ ಇರುವುದಿಲ್ಲ’ ಎಂದು ಹೇಳಿ ಕಳಿಸಿದಳು. ಇದನ್ನೆಲ್ಲಾ ಕಂಡ ಮೈಲ್ಗ್ಯಾನಿಗೆ ಈ ಜಗತ್ತು ತುಂಬಾ ಅಸಹ್ಯ ಅನಿಸತೊಡಗಿತು. ಕಾಂಪೋಂಡರ್ ರುದ್ರಮುನಿ ಕೂಗಿ ಕರೆದಾಗ ವಾಸ್ತವಕ್ಕೆ ಬಂದ ಮೈಲ್ಗ್ಯಾ ಕುಂಟುತ್ತಾ ಡಾಕ್ಟರ್ ಚೇಂಬರ್ನೊಳಗೆ ಕಾಲಿಟ್ಟ. ಗಾಯದ ವಿವರಗಳೆನ್ನೆಲ್ಲಾ ತಿಳಿದುಕೊಂಡ ಡಾ. ರೇವಪ್ಪ ಸಿರಿಂಜ್ನಲ್ಲಿ ಸ್ವಲ್ಪ ರಕ್ತ ತೆಗೆದು ಪರೀಕ್ಷೆಗೆ ಲ್ಯಾಬೋರೇಟರಿಗೆ ಕಳಿಸಿದರು. ಸ್ವಲ್ಪ ಸಮಯದ ನಂತರ ಬಂದ ರಕ್ತ ಪರೀಕ್ಷೆಯ ವರದಿ ನೋಡಿ ‘ನಿನಗೆ ಸಕ್ರೆ ಕಾಯಿಲೆ ಬಂದಿದೆ. ಇನ್ಮುಂದೆ ಆರೋಗ್ಯ ಚೆನ್ನಾಗಿ ನೋಡ್ಕೋಬೇಕು. ಇಲ್ಲದಿದ್ರೆ ತೊಂದ್ರೆ ತಪ್ಪಿದ್ದಲ್ಲ. ಸಮಯಕ್ಕೆ ಸರಿಯಾಗಿ ಊಟ, ಮಾಡಿ ಮಾತ್ರೆ ತಗೋಬೇಕು. ಸಿಹಿ ತಿನ್ನಕೂಡದು... ಇತ್ಯಾದಿ ಸೂಚನೆಗಳನ್ನು ಹೇಳಿ ಗಾಯಕ್ಕೆ ಹೊಸ ಬ್ಯಾಂಡೇಜ್ ಕಟ್ಟಿ ಕೆಲವು ಮಾತ್ರೆಗಳನ್ನು ಕೊಟ್ಟರು. ಶ್ರೀಮಂತರಿಗೆ ಮಾತ್ರ ಬರುವ ಈ ಕಾಯಿಲೆ ನನ್ನಂತ ಕಡುಬಡವನಿಗೆ ಯಾಕೆ ಬಂತೊ ಏನೋ’ ಎಂದು ಮೈಲ್ಗ್ಯಾ ಗೊಣಗಾಡಿದ. ಸ್ವಲ್ಪ ದಿನದಲ್ಲಿ ಕಾಲಿನ ಗಾಯ ವಾಸಿಯಾದಂತಾಗಿ ಮೊದಲಿನಂತೆ ಕೆಲಸಕ್ಕೆ ಹೋಗಲಾರಂಭಿಸಿದ. ಕಾಲಿನ ಗಾಯ ವಾಸಿಯಾಗಿದ್ದರೂ ಮನಸ್ಸಿನ ಗಾಯ ಉಲ್ಬಣವಾಗಿತ್ತು. ಬಿಟ್ಟು ಹೋದ ಮಗನ ನೆನಪು, ಸತ್ತು ಹೋದ ಸುಂಕ್ಲಿಯ ನೆನಪು ಅವನನ್ನು ಮಾನಸಿಕವಾಗಿ ಹಣಿದು ಹಾಕಿತ್ತು. ಸುಂಕ್ಲಿ ಸತ್ತಾಗ ಮಗನಾದರೂ ತನ್ನ ಜೊತೆಗೆ ಇದಾನಲ್ಲ ಎಂಬ ಸಮಾಧಾನವಿತ್ತು. ಆದರೆ ಈಗ ಅವನೂ ದೂರವಾಗಿದ್ದ. ‘ವಿಶಾಲವಾದ ಜಗತ್ತಿನಲ್ಲಿ ಒಬ್ಬಂಟಿ ನಾನು’ ಎನ್ನುವ ಭಾವ ಅವನನ್ನು ಸದಾ ಕಾಡಲಾರಂಭಿಸಿತು. ಒಣಗಿದ ಕಟ್ಟಿಗೆಯಂತೆ ಬಡಕಲಾಗಿದ್ದ ಮೈಲ್ಗ್ಯಾನ ಮೈಯಲ್ಲಿ ಅರೆಪಾವು ರಕ್ತ ಮಾಂಸವಿರಲಿಲ್ಲ. ಎದೆಗೂಡಿನ ಎಲುಬುಗಳು ಎದೆಯ ಚರ್ಮವನ್ನು ಸೀಳಿ ಹೊರಬರುವಂತಿದ್ದವು. ಆಳಕ್ಕಿಳಿದ ಕಣ್ಣುಗುಡ್ಡೆಗಳಲ್ಲಿ ಜೀವವೇ ಇದ್ದಂತಿರಲಿಲ್ಲ. ನಗುವನ್ನೇ ಕಳೆದುಕೊಂಡ ಕೆನ್ನೆಗಳು ಒಳಕ್ಕೆ ಸರಿದುಕೊಂಡಿದ್ದವು. ಮೈಯ ಚರ್ಮ ಬಿಗಿ ಕಳೆದುಕೊಂಡು ಮುದುರು ಬೀಳತೊಡಗಿತ್ತು. ಬಹುಬೇಗನೇ ಮುಪ್ಪನ್ನು ಆಹ್ವಾನಿಸಿಕೊಂಡಿದ್ದ. 

ರಾತ್ರಿ ಮಲಗಿದ್ದಾಗ ಕಾಲುಗಳಲ್ಲಿ ಏನೋ ತುರಿಕೆ ಶುರುವಾಗಿತ್ತು. ಅದನ್ನು ನಿರ್ಲಕ್ಷಿಸಿದ ಮೈಲ್ಗ್ಯಾ ಗಡದ್ದಾಗಿ ಗೊರಕೆ ಹೊಡೆಯುತ್ತಾ ನಿದ್ದೆ ಮಾಡಿದ್ದ. ಮರುದಿನ ರಾತ್ರಿ ಮತ್ತೆ ಕಾಲುಗಳಲ್ಲಿ ವಿಪರೀತ ತುರಿಕೆ, ಜೊತೆಗೆ ಕಾಲು ಜೋಮುಗಟ್ಟಿದಂತಾಗುತ್ತಿತ್ತು. ಕಾಲಿನ ಒಳಗೆ ಸರಸರನೇ ಏನೋ ಸರಿದಾಡಿದಂತಹ ಅನುಭವ. ರಾತ್ರಿಯಿಡೀ ನಿದ್ದೆಯಿಲ್ಲದೇ ಒದ್ದಾಡಿದ. ಮರುದಿನ ಆಸ್ಪತ್ರೆಗೆ ಹೋದಾಗ ಕಾಂಪೊಂಡರ್ ರುದ್ರಮುನಿ ಯಾವುದೋ ಬಿಳಿ ಮುಲಾಮೊಂದನ್ನು ಕೊಟ್ಟು ‘ರಾತ್ರಿ ಮಲಗುವಾಗ ಹಚೊ’್ಕ ಎಂದಿದ್ದ. ರಾತ್ರಿ ಕಾಲುಗಳಿಗೆ ಮುಲಾಮು ಸವರಿಕೊಂಡು ಮಲಗತೊಡಗಿದ ಮೈಲ್ಗ್ಯಾನಿಗೆ ತುರಿಕೆ, ಜೋಮು, ಕಾಲಿನ ಒಳಗೆ ಸರಿದಾಡಿದಂತಹ ಅನುಭವ ಎಲ್ಲವೂ ನಿಂತುಹೋಗಿತ್ತು. ಒಂದು ವಾರ ಕಳೆದರೂ ಅದೆಲ್ಲಾ ಕಾಣಿಸಿಕೊಳ್ಳದಿದ್ದಾಗ ರುದ್ರಮುನಿಯ ವೈದ್ಯಕೀಯ ಜ್ಞಾನಕ್ಕೆ ಮೆಚ್ಚುಗೆ ಸೂಸಿದ. ಆದರೆ ಮರುದಿನವೇ ಕಾಲುಗಳಲ್ಲಿ ಗುಳ್ಳೆ ಎದ್ದು ಕೀವು ತುಂಬಿ ಊದಿಕೊಂಡಿದ್ದವು. ಎದ್ದು ನಿಂತವನ ಕಾಲುಗಳಲ್ಲಿ ಏನೋ ಸೆಳಕು. ಹೆದರಿ ಡಾಕ್ಟರ್ ಬಳಿಗೆ ಓಡಿದಾಗ ಡಾಕ್ಟರ್ ಪರೀಕ್ಷಿಸಿ ನಿರ್ಭಾವುಕವಾಗಿ ನುಡಿದಿದ್ದರು ‘ನಿನ್ನ ಕಾಲುಗಳು ಗ್ಯಾಂಗ್ರಿನ್ನಿಂದಾಗಿ ಕೊಳೆತು ಹೋಗುತ್ತಿದೆ. ಎರಡೂ ಕಾಲುಗಳನ್ನು ಕತ್ತರಿಸಿ ತೆಗೆಯಬೇಕಾಗುತ್ತದೆ. ಇಲ್ಲದಿದ್ದರೆ ಜೀವಕ್ಕೆ ಅಪಾಯ’. ಡಾಕ್ಟರ್ ಮಾತು ಕೇಳಿ ಮೈಲ್ಗ್ಯಾನಿಗೆ ಬರಸಿಡಿಲು ಬಡಿದಂತಾಗಿತ್ತು. ಅನ್ನ ಕೊಟ್ಟಿದ್ದ ಅವನ ವೃತ್ತಿ ಅವನ ಕಾಲುಗಳನ್ನೇ ಕಿತ್ತುಕೊಂಡಿತ್ತು.

ಸ್ಟ್ರೆಚರ್ ಮೇಲೆ ಮಲಗಿದ್ದ ಮೈಲ್ಗ್ಯಾ ಕೊನೆ ಬಾರಿಗೆಂಬಂತೆ ತನ್ನ ಕಾಲುಗಳನ್ನು ನೋಡಿಕೊಂಡ. ತಾನು ಹಾರಿದ್ದು ಕುಣಿದಿದ್ದು ಓಡಿದ್ದು ಈಜಿದ್ದು ಎಲ್ಲವೂ ನೆನಪಾಯಿತು. ಹುಟ್ಟಿದಾಗಿನಿಂದ ಜೊತೆಗಿರುವ ದೇಹದ ಬಹುಮುಖ್ಯ ಅಂಗವನ್ನೇ ಕಳೆದುಕೊಂಡು ತಾನಿನ್ನು ಶಾಶ್ವತ ಅಂಗವಿಕಲವಾಗಲಿದ್ದೇನೆ ಎಂಬ ಕಲ್ಪನೆಯೇ ಅವನನ್ನು ಹಿಂಡಿ ಹಿಪ್ಪೆ ಮಾಡಿತ್ತು. ಕಣ್ಣುಗಳಲ್ಲಿ ಸಣ್ಣಗೆ ನೀರಿನ ತೆರೆ. ಆಪರೇಷನ್ ಥಿಯೇಟರ್ ಒಳಗೆ ಸ್ಟ್ರೆಚರ್ನ್ನು ತಳ್ಳಿಕೊಂಡು ಹೋದ ನರ್ಸ್ ಸರೋಜ ಯಾವುದೋ ಇಂಜೆಕ್ಷನ್ನ್ನು ಚುಚ್ಚಿದ್ದಷ್ಟೆ ನೆನಪು, ನಿಧಾನವಾಗಿ ಮೈಲ್ಗ್ಯಾನಿಗೆ ಮಂಪರು ಆವರಿಸಲಾರಂಭಿಸಿತು. ಯಾವಾಗ ಎಚ್ಚರವಾಯ್ತೋ ಗೊತ್ತಿಲ್ಲ. ಎಚ್ಚರವಾದಾಗ ಮೊದಲು ನೋಡಿಕೊಂಡಿದ್ದೆ ಕಾಲುಗಳನ್ನು. ತೊಡೆಯ ಕೆಳಭಾಗದಲ್ಲೇನಿದೆ? ಅಸಲಿಗೆ ಕೆಳಭಾಗ ಎಂಬುದೇ ಇರಲಿಲ್ಲ. ಇಡೀ ಮೊಣಕಾಲು ಕತ್ತರಿಸಿ ಬ್ಯಾಂಡೇಜ್ ಹಾಕಲಾಗಿತ್ತು. ನಡುರಾತ್ರಿಯಲ್ಲಿ ಎಚ್ಚರವಾದಾಗ ತುಂಡಾದ ಮೊಂಡು ಕಾಲುಗಳನ್ನು ನೋಡಿ ಚೀರಾಡತೊಡಗಿದ್ದೇ ಆಗ.... ‘ಅಯ್ಯಯ್ಯಪ್ಪೋ... ಯಪ್ಪೋ...’

*******************

ನಂತರ ನಡೆದದ್ದು ಮೈಲ್ಗ್ಯಾನ ಬದುಕಿನಲ್ಲಿ ವಿಷಾದದ ಪಯಣ. ಒಂದಡಿ ಚಲಿಸಬೇಕಾದರೂ ಪ್ರಯಾಸಪಟ್ಟು ಸರಿದುಕೊಂಡೇ ಹೋಗಬೇಕಾಗಿತ್ತು. ಮೈಲ್ಗ್ಯಾನ ಪರಿಸ್ಥಿತಿ ನೋಡಲಾರದೇ ಕನಿಕರಗೊಂಡ ವೆಲ್ಡಿಂಗ್ ಶಾಪ್ನ ಹುಸೇನಿ ಚೌಕಾಕಾರದ ಹಲಗೆಯೊಂದಕ್ಕೆ ನಾಲ್ಕು ಪುಟ್ಟ ಕಬ್ಬಿಣದ ಗಾಲಿಗಳನ್ನು ಜೋಡಿಸಿಕೊಟ್ಟಿದ್ದ. ಅದರ ಮೇಲೆ ಕುಳಿತುಕೊಂಡೇ ತನ್ನೆರಡು ಕೈಗಳಲ್ಲಿ ಟೈರ್ನ ತುಂಡನ್ನು ಹಿಡಿದು ನೆಲಕ್ಕೆ ಒತ್ತುತ್ತಾ ತನ್ನನ್ನು ತಾನು ತಳ್ಳಿಕೊಳ್ಳುತ್ತಾ ಚಲಿಸಬೇಕಾಗಿತ್ತು. ನೋವು, ದುಃಖ, ವಿಷಾದ, ಏಕಾಂಗಿತನಗಳೇ ಅವನ ಸಂಗಾತಿಗಳಾದವು. ಸಕ್ಕರೆ ಕಾಯಿಲೆ ಇಡೀ ಬದುಕನ್ನೇ ಕಹಿಯನ್ನಾಗಿ ಮಾಡಿತ್ತು. ಈಗ ಕಣ್ಣ ಮುಂದೆ ಇದ್ದದ್ದು ಹೊಟ್ಟೆಪಾಡಿನ ಪ್ರಶ್ನೆ. ಕೂಡಿಟ್ಟಿದ್ದ ಅಲ್ಪ ಸ್ವಲ್ಪ ದುಡ್ಡು ಔಷಧಿಗೆ ಖರ್ಚಾಗಿತ್ತು. ಹಸಿವೆಯೆಂಬ ಭೂತ ಕಣ್ಣೆದುರಿಗೆ ಬಾಯ್ತೆರೆದು ನಿಂತಿತ್ತು. ಕಾಲುಗಳೇ ಇಲ್ಲದಿರುವಾಗ ದುಡಿಯುವುದು ಹೇಗೆ ? ಯೋಚಿಸಿ ಯೋಚಿಸಿ ಕೊನೆಗೆ ಒಂದು ದೃಢ ನಿರ್ಧಾರಕ್ಕೆ ಬಂದ ಮೈಲ್ಗ್ಯಾ ಲಕ್ಷ್ಮಿ ಥಿಯೇಟರ್ನ ಎದುರಿಗಿದ್ದ ಬೃಹತ್ ಬೇವಿನ ಮರದ ಕೆಳಗೆ ಶೂ ಪಾಲೀಶ್ ಡಬ್ಬಿ, ಬ್ರಶ್ಶು ಹಿಡಿದುಕೊಂಡು ಪ್ರತಿಷ್ಠಾಪಿತನಾದ. ಶೂ ಪಾಲೀಶ್ ಮಾಡುತ್ತಾ ತನ್ನ ಉಳಿದ ಬದುಕನ್ನು ಕಳೆಯಬೇಕೆಂದು ತೀರ್ಮಾನಿಸಿಬಿಟ್ಟಿದ್ದ. ಆದರೆ ಶೂ ಪಾಲೀಶ್ ಮಾಡಿಸಿಕೊಳ್ಳುವ ಗಿರಾಕಿಗಳಿಗಿಂತ ಕರುಣೆಯಿಂದ ನೋಡುವವರೇ ಹೆಚ್ಚಾಗಿದ್ದರು. ಅವರ ಕರುಣಾಪೂರಿತ ನೋಟ ಮೈಲ್ಗ್ಯಾನ ಎದೆಯನ್ನು ಚುಚ್ಚುತ್ತಿದ್ದವು. ಕಾಲಿಲ್ಲದವನ ಹತ್ರ ಶೂ ಪಾಲಿಶ್ ಮಾಡಿಸಿಕೊಳ್ಳುವುದು ಮಹಾಪಾಪ ಎಂಬಂತಿತ್ತು ಅವರ ಭಾವ. ಮೈಲ್ಗ್ಯಾನ ಪಕ್ಕದಲ್ಲಿಯೇ ಮೂರ್ನಾಲ್ಕು ಹುಡುಗರು ಕೂಡಾ ಶೂ ಪಾಲೀಶ್ ಮಾಡುತ್ತಾ ಪೈಪೋಟಿಗೆ ಬಿದ್ದಿದ್ದರು. ಕೆಲವೇ ದಿನಗಳಲ್ಲಿ ಶೂ ಪಾಲೀಶ್ ಮಾಡುವ ಮೈಲ್ಗ್ಯಾನ ಕೈಗಳು ಸೋತು ಹೋಗಿದ್ದವು. ಇದರಿಂದ ಕನಿಷ್ಟ ನನ್ನ ಹೊಟ್ಟೆಯೂ ತುಂಬಲಾರದೆನಿಸಿ ಅಸಹಾಯಕತೆಯಿಂದ ಸಿಟ್ಟಿನಿಂದ ಪಾಲೀಶ್ ಡಬ್ಬಿ, ಬ್ರಶ್ನ್ನು ದೂರಕ್ಕೆ ಎಸೆದು ಗಣೇಶ ಗುಡಿಯ ಹೊರಗೆ ಭಿಕ್ಷೆ ಬೇಡುತ್ತಾ ಕುಳಿತಿದ್ದ ಲೋಕನಿಂದಿತರ ಗುಂಪಿಗೆ ಸೇರ್ಪಡೆಯಾದ. ಸ್ನಾನ ಕಾಣದ ಬಡಕಲು ಮೈ, ಉದ್ದುದ್ದ ಬೆಳೆದು ಗಂಟು ಗಂಟಾಗಿ ಇಳಿಬಿದ್ದಿದ್ದ ತಲೆಗೂದಲು, ಕ್ಷೌರ ಕಾಣದ ಒರಟು ಗಡ್ಡ ಮೀಸೆ, ಹರಿದುಹೋಗಿದ್ದ ಮಾಸಲು ಬಟ್ಟೆಗಳು ಇವೆಲ್ಲಾ ಮೈಲ್ಗ್ಯಾನನ್ನು ಭಿಕ್ಷುಕನಂತೆ ಬಿಂಬಿಸುತ್ತಿದ್ದವು.  ತನ್ನಂತೆ ಕಾಲುಗಳನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ತಾಲೂಕಾಫೀಸ್ ಎದುರಿಗೆ ತನ್ನ ಮೂರು ಗಾಲಿಯ ಸೈಕಲ್ನಲ್ಲಿ ಟೈಪ್ರೈಟರ್ ಇಟ್ಟುಕೊಂಡು ಟೈಪ್ ಮಾಡುತ್ತಾ, ಸ್ಟ್ಯಾಂಪ್ಪೇಪರ್ ಕವರುಗಳನ್ನು ಮಾರುತ್ತಾ ದುಡಿಯುವುದನ್ನು ನೋಡಿದ್ದ. ಅವನಿಗೆ ವಿದ್ಯೆಯಿದೆ. ಕಾಲಿಲ್ಲದಿದ್ದರೂ ಕಲಿತ ವಿದ್ಯೆಯಿಂದ ದುಡಿದು ಸಂಪಾದಿಸಿ ಬದುಕುತ್ತಿದ್ದಾನೆ ಅಂತ ಅನಿಸಿತ್ತು. ಏಕೋ ಏನೋ ಮೊದಲ ಬಾರಿಗೆ ತನ್ನ ತಂದೆ ತನಗೆ ವಿದ್ಯೆ ಕಲಿಸಲು ಮಾಡಿದ ಪ್ರಯತ್ನ, ತಾನು ಓದದೇ ಪೋಲಿ ಬಿದ್ದು ಹಾಳಾಗಿದ್ದು ಎಲ್ಲವೂ ನೆನಪಾಯ್ತು. ಈ ಜಗತ್ತಿನಲ್ಲಿ ನನ್ನವರು ಅಂತ ಯಾರೂ ಇಲ್ಲವಲ್ಲ ಎಂದು ಯೋಚಿಸುತ್ತಾ ಕಣ್ಣೀರಾದ. ತಾನೀಗ ಅನಾಥ, ಸತ್ತರೆ ಅದೇ ಕಾರ್ಪೋರೇಷನ್ ಪೌರ ಕಾರ್ಮಿಕರೆ ತನ್ನನ್ನು ಅನಾಥ ಶವದಂತೆ ಹೂಳುತ್ತಾರೆ ಎನಿಸಿತು. ತಾನು ದಿಕ್ಕಿಲ್ಲದ ಅನೇಕ ಅನಾಥ ಶವಗಳನ್ನು ಹೂಳಿದ್ದು ನೆನಪಾಯಿತು. ತಾನು ಅನಾಥ ಶವವಾಗುವುದನ್ನು ನೆನಪಿಸಿಕೊಂಡು ನರಳಿಬಿಟ್ಟ. ಮೊದ ಮೊದಲು ಬಿಟ್ಟು ಹೋದ ಮಗ ಎಂದಾದರೂ ಮರಳಿ ಬರುತ್ತಾನೆಂಬ ನಿರೀಕ್ಷೆಯಾದರೂ ಇತ್ತು. ಈಗ ಅದು ಕೂಡಾ ಉಳಿದಿರಲಿಲ್ಲ. ಆದರೆ ಮಗ ಈಗ ಎಲ್ಲಿರುವನೋ, ಹೇಗಿರುವನೋ ಎಂಬ ನೆನಪು ಮಾತ್ರ ಕಾಡುತ್ತಿತ್ತು.

ಹಗಲಿಡೀ ಗಿಜಿಗುಟ್ಟುವ ಸದ್ದು ಗದ್ದಲದಲ್ಲಿ ಮುಳುಗಿದ್ದ ಬಿಸಿಲೂರು ಸಂಜೆ ಹೊತ್ತಿಗೆ ಶಾಂತವಾಗಿತ್ತು. ತಣ್ಣನೆಯ ಗಾಳಿ ಬೀಸುತಿತ್ತ್ತು. ಬೀದಿ ದೀಪದ ಬೆಳಕಿನಲ್ಲಿ ರಸ್ತೆಯ ಬದಿಗೆ ಕಿರ್ರ್ಗುಟ್ಟುವ ಗಾಲಿ ಹಲಗೆಯನ್ನು ತಳ್ಳಿಕೊಂಡು  ಸಾಗುತ್ತಿದ್ದ ಮೈಲ್ಗ್ಯಾನಿಗೆ ತನ್ನ ಜೋಪಡಿಯ ಕಡೆಗೆ ಹೊರಳುವ ರಸ್ತೆಯ ಕೊನೆಯ ತಿರುವಿನಲ್ಲಿ ಬಂದಾಗ ಸುಂಕ್ಲಿಯನ್ನು ಮೊದಲ ಸಲ ಭೇಟಿಯಾಗಿದ್ದು ಇದೇ ಜಾಗದಲ್ಲಿ ಎಂದು ನೆನಪಿಸಿಕೊಂಡ. ಕತ್ತಲು ನಿಧಾನವಾಗಿ ಹರಡಲಾರಂಭಿಸಿತ್ತು. ಇದಕ್ಕಿದ್ದಂತೆ ಮೈಯೆಲ್ಲಾ ನಿಶ್ಯಕ್ತಿ ಆವರಿಸಿದಂತಾಗಿ ಕಣ್ಣುಗಳು ಮಂಜು ಮಂಜಾಗಿ ಎದುರಿಗಿನ ಚಿತ್ರಣವೆಲ್ಲಾ ಮಸುಕು ಮಸುಕಾಗಿ ಕಾಣಿಸತೊಡಗಿತು. ವಿಪರೀತ ಹಸಿವು, ಬಾಯಾರಿಕೆಯಾಗತೊಡಗಿತು. ಬೆಳಿಗ್ಗೆಯಿಂದ ತಾನು ಏನನ್ನು ತಿಂದಿಲ್ಲವೆಂದು ನೆನಪಾಯ್ತು. ಅಷ್ಟರಲ್ಲಿ ‘ಯಜಮಾನಾ...’ ಎಂದು ಸುಂಕ್ಲಿ ಕರೆದ ದನಿ ಕೇಳಿಸಿತು. ತನ್ನ ಭ್ರಮೆಗೆ ತಾನೇ ನಕ್ಕು ಮುಂದಕ್ಕೆ ಹೋಗಲು ಅಣಿಯಾದ. ‘ಯಜಮಾನಾ...’ ಮತ್ತೆ ಸುಂಕ್ಲಿ ತನ್ನನ್ನು ಕೂಗಿ ಕರೆಯುತ್ತಿರುವ ದನಿ ಕೇಳಿಸುತ್ತಿದೆ. ‘ಛೇ! ಭ್ರಮೆ ಇರಲಾರದು’ ಎಂದುಕೊಂಡ ಮೈಲ್ಗ್ಯಾ ತಿರುಗಿ ನೋಡಿದ, ಅಷ್ಟೇ. ಗಾಲಿ ಹಲಿಗೆಯಿಂದ ಮುಗ್ಗಿರಿಸಿಬಿದ್ದ. ಒಡೆದುಕೊಂಡ ಮೂಗಿನಿಂದ ರಕ್ತ ಧಾರಾಕಾರವಾಗಿ ಹರಿದಿತ್ತು. ಜಾರಿದ ಗಾಲಿ ಹಲಗೆ ಅಷ್ಟು ದೂರದಲ್ಲಿ ಬೋರಲು ಬಿದ್ದಿತ್ತು. ಮೈಲ್ಗ್ಯಾ ತನ್ನ ಕೊನೆಯುಸಿರು ಚೆಲ್ಲಿಬಿಟ್ಟಿದ್ದ. ಕಣ್ರೆಪ್ಪೆಗಳು ತೆರೆದುಕೊಂಡೇ ಇದ್ದವು. ಅವನ ಕಣ್ಣಿನಲ್ಲಿ ಕರಗಿಹೋದ ಕನಸುಗಳು ಒಡೆದ ಕನ್ನಡಿ ಚೂರುಗಳಂತೆ ಕಾಣುತ್ತಿದ್ದವು. ಎದುರಿಗಿದ್ದ ನೀಲಗಿರಿ ಮರದ ಟೊಂಗೆಗೆ ಅದುವರೆಗೆ ಸೋಮಾರಿಯಂತೆ ಜೋತುಬಿದ್ದಿದ್ದ ಬಾವಲಿಯೊಂದು ಇದ್ದಕ್ಕಿದ್ದಂತೆ ‘ಕೀಚ್... ಕೀಚ್...’ ಸದ್ದು ಮಾಡುತ್ತಾ ಪುರ್ರನೇ ಹಾರಿಹೋಯ್ತು. ಹಾರಿಹೋದ ಬಾವಲಿಯ ಕಡೆಗೆ ನಿಧಾನವಾಗಿ ಕತ್ತು ತಿರುಗಿಸಿದ ಗೂಬೆಯೊಂದು ‘ಗೂಕ್... ಗೂಕ್...’ ಎಂದು ಕರ್ಕಶ ದನಿ ಹೊರಡಿಸಿ ಸುಮ್ಮನಾಯಿತು. 


                                                              ***********************        
    
                                                                                                   - ರಾಜ್


ಕಾಮೆಂಟ್‌ಗಳಿಲ್ಲ: