ಸೋಮವಾರ, ಜನವರಿ 1, 2024

ಪ್ರೇಮಸಾಗರವನ್ನು ಲಂಘಿಸಿದ ಈ ಅಂಜನೀಪುತ್ರನ ಬದುಕು - ಬರಹದ ಹಾದಿಯಲ್ಲಿ ಪ್ರೀತಿಯ ಪಯಣ..!

 

    ಇಂದಿಗೆ ಸರಿ ಸುಮಾರು ನಾಲ್ಕು ದಶಕಗಳ ಹಿಂದೆ ಗಂಗಾವತಿಯ ವಡ್ಡರಹಟ್ಟಿಯಲ್ಲಿ ಮರಿಯಪ್ಪ ಮತ್ತು ದುರುಗಮ್ಮ ದಂಪತಿಗಳಿಗೆ ಎರಡನೇ ಮಗನಾಗಿ ಜನಿಸಿದ ಹನುಮಪ್ಪ ಅಲಿಯಾಸ್ ಹನುಮಕುಮಾರ ಹೆಗಡೆಯವರ ಬದುಕಿನ ಕಥನವೇ ವಿಸ್ಮಯಕಾರಿಯಾದುದು. ಅಂಜನೀಪುತ್ರ ಆಂಜನೇಯ ಜನಿಸಿದ ಅಂಜನಾದ್ರಿ ಸ್ಥಳ ಗಂಗಾವತಿ ನಗರಕ್ಕೆ ಕೂಗಳತೆಯ ದೂರದಲ್ಲಿದೆ. ಅಂಜನಾದ್ರಿಯ  ಸುತ್ತಲಿನ ಊರ ಜನರು ಸಹಜವಾಗಿಯೇ ಆಂಜನೇಯನ ಭಕ್ತರು. ಪ್ರತಿ ಶನಿವಾರ ಅಂಜನಾದ್ರಿಯ ಬೆಟ್ಟ ಏರಿ ಆಂಜನೇಯನ ದರ್ಶನ ಪಡೆದು ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಹರಕೆ ಹೊತ್ತು ಹುಟ್ಟುವ ಮಕ್ಕಳಿಗೆ ಆಂಜನೇಯ, ಹನುಮಂತ, ಮಾರುತಿ ಎಂದು ಹೆಸರಿಡುತ್ತಾರೆ. ಹೆಗಡೆಯವರ ತಂದೆತಾಯಿಯರು ಕೂಡಾ ಹನುಮಂತನ ಭಕ್ತರು. ಹನುಮಂತನ ವರ ಪ್ರಸಾದದಿಂದ ಜನಿಸಿದ ತಮ್ಮ ಮಗನಿಗೆ ‘ಹನುಮಪ್ಪ’ ಎಂದು ನಾಮಕರಣ ಮಾಡಿದರು. ಮುಂದೆ ಎಲ್.ಎಲ್.ಬಿ ಓದುವ ವೇಳೆಗೆ ಹೆಗಡೆಯವರು ‘ಹನುಮಪ್ಪ’ ಎಂಬ ತಮ್ಮ ಹೆಸರನ್ನು ‘ಹನುಮಕುಮಾರ ಹೆಗಡೆ’ ಎಂದು ಕೋರ್ಟ್ ನೋಟರಿ ಮೂಲಕ ಬದಲಾಯಿಸಿಕೊಂಡರು. ಇವರು ಹುಟ್ಟಿದ ದಿನಾಂಕವನ್ನು ನೆನಪಿಟ್ಟುಕೊಳ್ಳಲಾಗದಿದ್ದರೂ  ಮಗ ಹುಟ್ಟಿದ ದಿನ ಹಂಪಿ ಹುಣ್ಣಿಮೆ (ದವನದ ಹುಣ್ಣಿಮೆ) ಆಗಿತ್ತೆಂದು ಅವರ ತಾಯಿ ನೆನಪಿಸಿಕೊಳ್ಳುತ್ತಾರೆ. ದವನದ ಹುಣ್ಣಿಮೆಯಂದು ಐತಿಹಾಸಿಕ ಹಂಪಿಯ ಜಾತ್ರೆ ನಡೆಯುವುದರಿಂದ ಸ್ಥಳೀಯರು ಆ ಹುಣ್ಣಿಮೆಯನ್ನು ‘ಹಂಪಿ ಹುಣ್ಣಿಮೆ’ ಎಂದೇ ಕರೆಯುತ್ತಾರೆ. 


ಡಾ. ಹನುಮಕುಮಾರ ಹೆಗಡೆ

    ಹುಣ್ಣಿಮೆಯ ಪೂರ್ಣ ಚಂದ್ರನಿಗೂ - ಪ್ರೇಮಕ್ಕೂ ಅವಿನಾಭಾವ ಸಂಬಂಧ. ಹಲವಾರು ಕವಿಗಳು ಪ್ರೇಮ ಮತ್ತು ಚಂದ್ರನನ್ನು ಅಕ್ಷರಗಳಿಂದ ಸಿಂಗರಿಸಿ ಕಾವ್ಯದ ಚೆಲುವನ್ನು ನೂರ್ಮಡಿಗೊಳಿಸಿದ್ದಾರೆ. ಹುಣ್ಣಿಮೆಯ ದಿನ ಹುಟ್ಟಿದ್ದರಿಂದಲೋ ಏನೋ ಪ್ರೇಮವೇ ಮೈವೆತ್ತಂತಿರುವ ಈ ಹೆಗಡೆಯವರು  ಈ ಭೂಮಿ ಮೇಲೆ ಪ್ರೇಮವಿರುವುದರಿಂದಲೇ ನಾನಿನ್ನು ಉಸಿರಾಡುತ್ತಿದ್ದೇನೆ ಎನ್ನುತ್ತಾರೆ. ಪ್ರೇಮದೆಡೆಗೆ ಇರುವಷ್ಟೇ ಸೆಳೆತ ಆಧ್ಯಾತ್ಮದೆಡೆಗೂ ಇದೆ. ಹೀಗಾಗಿ ಇವರೊಬ್ಬ  ಪ್ರೇಮಾಧ್ಯಾತ್ಮಿ! ಪ್ರೇಮದಲ್ಲಿ ಆಧ್ಯಾತ್ಮ ಹುಡುಕುತ್ತಾ, ಆಧ್ಯಾತ್ಮದಲ್ಲಿ ಪ್ರೇಮ ಹುಡುಕುತ್ತಿರುವ ನಿರಂತರ ಪ್ರೇಮಾನ್ವೇಷಕ ಹನುಮಕುಮಾರ ಹೆಗಡೆ. 7ನೇ ತರಗತಿಯಿಂದಲೇ ಬರವಣಿಗೆಯ ಹವ್ಯಾಸ ಬೆಳೆಸಿಕೊಂಡ ಹೆಗಡೆಯವರು ಕವಿತೆಗಳನ್ನು ಬರೆಯಲಾರಂಭಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದರು. ಛಲಕ್ಕೆ ಬಿದ್ದು ಓದಿ ಮರುವರ್ಷ ಪಾಸಾದರು. ರಾಯಚೂರಿನಲ್ಲಿ ಪಿ.ಯು ಮುಗಿಸಿ ಅಲ್ಲಿಯೇ ಸುಪ್ರಸಿದ್ಧ ಎಲ್.ವಿ.ಡಿ. ಕಾಲೇಜಿನಲ್ಲಿ 2001ರಲ್ಲಿ ಬಿ.ಎ. ಪದವಿಗೆ ಸೇರಿ ಅರ್ಧದಲ್ಲಿಯೇ ಓದನ್ನು ಮೊಟಕುಗೊಳಿಸಿ, ಸಿನೆಮಾ ಕ್ಷೇತ್ರದಲ್ಲಿ  ಗೀತ ರಚನೆ ಮಾಡಿ ಖ್ಯಾತಿ ಗಳಿಸಬೇಕೆಂಬ ಹಂಬಲದೊಂದಿಗೆ ಬೆಂಗಳೂರಿಗೆ ತೆರಳಿದರು. ಅಲ್ಲಿ ಹಲವು ಗೀತೆಗಳನ್ನು ಬರೆದು ಸ್ವರ ಸಂಯೋಜನೆ ಮಾಡಿ ಸಿನೆಮಾ ಕ್ಷೇತ್ರದ ದಿಗ್ಗಜರೊಂದಿಗೆ ಒಡನಾಟ, ಅಲೆದಾಟದ ಬಳಿಕ ಅವಕಾಶ ವಂಚಿತರಾಗಿ ಅಲ್ಲಿಂದ ವಿಮುಖಗೊಂಡು ಬದುಕನ್ನು ಶೋಧಿಸುತ್ತಾ ಪಾರಿವ್ರಾಜಕ ಸನ್ಯಾಸಿಯಂತೆ ಹಲವಾರು ಮಠ ಮಾನ್ಯಗಳಲ್ಲಿ, ಸಾಧು ಸಂತರ ಸನ್ನಿಧಿಯಲ್ಲಿ ಕಾಲ ಕಳೆದರು. ಈ ಅವಧಿಯಲ್ಲಿಯೇ ಆಧ್ಯಾತ್ಮದೆಡೆಗೆ ಸೆಳೆತ ಶುರುವಾಗಿದ್ದು. ಏಳು ವರ್ಷಗಳ ಬಳಿಕ ಅರ್ಧಕ್ಕೆ ನಿಲ್ಲಿಸಿದ್ದ ಬಿ.ಎ. ಪದವಿಯನ್ನು 2007ರಲ್ಲಿ ಮುಗಿಸಿ, ಎಂ.ಎ. ಓದಲು ನಿರ್ಧರಿಸಿ ಅದೇ ವರ್ಷ ಸಂಡೂರಿನ ನಂದಿಹಳ್ಳಿಯ ಪಿ.ಜಿ. ಸೆಂಟರ್‍ಗೆ ಪ್ರವೇಶ ಪಡೆದರು. ಇಲ್ಲಿ ರಮ್ಯ ಮನೋಹರ ನಿಸರ್ಗ ಸೌಂದರ್ಯದಲ್ಲಿ, ದಿವ್ಯ ಏಕಾಂತದಲ್ಲಿ ಅವರ ಚಿಂತನೆಗಳು ಇನ್ನಷ್ಟು ಹೊಳಪು ಪಡೆಯಲಾರಂಭಿಸಿದವು.    


    ರಂಗಭೂಮಿಯ ಬಗ್ಗೆ ಮೊದಲಿನಿಂದಲೂ ಆಸಕ್ತಿ ಬೆಳೆಸಿಕೊಂಡಿದ್ದ  ಹೆಗಡೆಯವರು ಎಂ.ಎ. ಮುಗಿಸಿದ ಬಳಿಕ 2010ರಲ್ಲಿ ಕುಂದಾಪುರದ ‘ಭಂಡಾರ್ಕರ್ ಕಾಲೇಜ್’ನಲ್ಲಿ ಒಂದು ವರ್ಷ ‘ಡಿಪ್ಲೊಮೊ ಇನ್ ಥಿಯೇಟರ್’ ಕೋರ್ಸ್ ಓದಿದರು. ಈ ಅವಧಿಯಲ್ಲಿ ಭಾರತೀಯ ಆಧುನಿಕ ರಂಗಭೂಮಿಯ ನಟರಾಗಿ ಸುಮಾರು 50 ನಾಟಕಗಳಲ್ಲಿ ಅಭಿನಯಿಸಿ, ಹಲವಾರು ನಾಟಕಗಳಿಗೆ ರಂಗ ನಿರ್ದೇಶಕರಾಗಿ, ತಂತ್ರಜ್ಞರಾಗಿ ಅನುಭವ ಪಡೆದರು. ಇದರ ಜೊತೆಯಲ್ಲಿ ಬಿ.ಇಡಿ ಪದವಿಯನ್ನು ಪಡೆದುಬಿಟ್ಟರೆ ರಂಗ ಶಿಕ್ಷಕನಾಗಿ ವೃತ್ತಿ ಆರಂಭಿಸಬಹುದೆಂಬ ಆಲೋಚನೆಯಲ್ಲಿ 2014ರಲ್ಲಿ ಬೆಂಗಳೂರಿನ ‘ಡಾ. ಬಿ.ಆರ್. ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯ’ದಲ್ಲಿ ಬಿ.ಇಡಿ. ಪ್ರವೇಶ ಪಡೆದು ಜೀವನವನ್ನು ‘ಪಾವನ’ಗೊಳಿಸಿಕೊಂಡರು. ಈ ಬಿ.ಇಡಿ. ಓದಿದ ಒಂದೊಂದು ದಿನಗಳು ಅವರ ಬದುಕಿನಲ್ಲಿ ಮರೆಯಲಾಗದ ಸಿಹಿ ನೆನಪುಗಳು. ಅವರ ಪಾಲಿಗೆ  ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಮಧುರ ದಿನಗಳು.  ಇಲ್ಲಿಯೇ ಇವರ ಪ್ರೇಮ ಮೊಳಕೆವೊಡೆದು ಚಿಗುರಿದ್ದು, ಬೆಳೆದದ್ದು,  ಬೆಳೆದು ಹೆಮ್ಮರವಾಗಿದ್ದು. ಈ ಮಹೋನ್ನತ ಪ್ರೇಮಕಾವ್ಯಕ್ಕೆ ಕಾರಣವಾಗಿದ್ದು. ಇವರ ಶಿಕ್ಷಣ ಕಲಿಕೆಯ ದಾಹ ಇಲ್ಲಿಗೇ ನಿಲ್ಲುವುದಿಲ್ಲ. ಬಿ.ಇಡಿ. ನಂತರ 2015ರಲ್ಲಿ ಕೊಪ್ಪಳದ ಕಾನೂನು ಮಹಾವಿದ್ಯಾಲಯದಲ್ಲಿ ಎಲ್.ಎಲ್.ಬಿ. ಓದಿದರು. ನಂತರ ಗಂಗಾವತಿಯ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಲೇ ಹಂಪಿಯ ‘ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಗೆ ಪ್ರವೇಶ ಪಡೆದು ‘ಡಾ. ಜಾಜಿ ದೇವೇಂದ್ರಪ್ಪ’ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಅನುವಾದಿತ ಕಥೆಗಳು: ದಲಿತ ಸಂವೇದನೆ’ ಎಂಬ ಮಹಾಪ್ರಬಂಧ ಮಂಡಿಸಿ 2021ರಲ್ಲಿ ಡಾಕ್ಟರೇಟ್ ಪದವಿ ಪಡೆದರು.   


    ಹೆಗಡೆಯವರೊಂದಿಗೆ ನನ್ನದು ಸುಮಾರು ಹದಿನೈದು ವರ್ಷಗಳ ಸಾಂಗತ್ಯ. ಆದರೂ ಅವರ ಬಗ್ಗೆ ಬರೆಯುವಾಗ ಹಿಂಜರೆಯುತ್ತೇನೆ. ಅಕ್ಷರಗಳು ತಡಬಡಿಸುತ್ತವೆ. ಕಾರಣ, ಹೆಗಡೆಯವರು ಸುಲಭವಾಗಿ ಯಾರಿಗೂ ಅರ್ಥವಾಗುವುದಿಲ್ಲ. ಅವರು ‘ಹೀಗೆ’ ಎಂದು ನಿರ್ಧರಿಸುವುದರೊಳಗಾಗಿ ಅವರು ‘ಹೇಗೊ’ ಆಗಿಬಿಟ್ಟಿರುತ್ತಾರೆ. ಅವರ ವ್ಯಕ್ತಿತ್ವವನ್ನು ಒಂದೇ ಚೌಕಟ್ಟಿನಲ್ಲಿ ಹಿಡಿದಿಟ್ಟು ‘ಹೀಗೆ’ ಎಂದು ನಿರ್ಣಯಿಸುವುದು ಕಷ್ಟ.  ಅದೊಂದು ಸಾವಿರ ಕೊವೆಗಳಿರುವ ಬೃಹತ್ ಹುತ್ತವಿದ್ದಂತೆ. ಎಲ್ಲಿಯೋ ಹೊಕ್ಕು ಇನ್ನೆಲ್ಲಿಯೊ ಹೊರಬರುವ ರೀತಿ. ಅವರ ವ್ಯಕ್ತಿತ್ವವನ್ನು ಅರಿಯುವ ಸಾಹಸಕ್ಕೆ ಕೈ ಹಾಕಿದರೆ ದಟ್ಟ ಕಾನನದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಸಿಕೊಂಡವರ ಸ್ಥಿತಿಯಂತಾಗುತ್ತದೆ. ಕಳೆದ ಹದಿನೈದು ವರ್ಷಗಳಿಂದ ಹೆಗಡೆಯವರೊಂದಿಗೆ ಒಡನಾಟದಲ್ಲಿದ್ದರೂ ನನಗೇ ಇನ್ನೂ ಸಂಪೂರ್ಣವಾಗಿ ಅವರು ಅರ್ಥವಾಗಿಲ್ಲ. ಬಹುಶಃ ಅರ್ಥವಾಗುವುದೂ ಇಲ್ಲ. ಅದೊಂದು ನಿಗೂಢ ಲೋಕ. “ದೂರವಿದ್ದಷ್ಟೂ ಕೌತುಕ, ಹತ್ತಿರವಿದ್ದಷ್ಟೂ ನಿಗೂಢ”. ಹೀಗಾಗಿಯೇ ಅವರ ಬಗ್ಗೆ ಬರೆಯುವಾಗ ಹಿಂಜರೆಯುತ್ತೇನೆ. ಅವರೊಂದು ವಿಶಾಲ ಸಾಗರ. ಅದರಲ್ಲಿ ನಾನು ಗ್ರಹಿಸಿದ್ದು ಕೇವಲ ಒಂದು ಹನಿ ಮಾತ್ರ. ಅದನ್ನೇ ಇಲ್ಲಿ ಬರೆದಿರುವೆ. 


ತಾರುಣ್ಯದ ದಿನಗಳಲ್ಲಿ ಹೆಗಡೆ ಜೀ…

  ವಿಶಿಷ್ಟ, ವಿಚಿತ್ರ, ವಿಕ್ಷಿಪ್ತ, ವಿಸ್ಮಯಗಳ ಒಟ್ಟು ಸಂಕಲನವೇ ಹನುಮಕುಮಾರ ಹೆಗಡೆ. ಹಲವರಿಗೆ ಹಲವು ಆಯಾಮಗಳಲ್ಲಿ ಗೋಚರಿಸುತ್ತಾರೆ. ಆದರೆ ಮೂಲತಃ ಹೆಗಡೆಯವರದು Dual personality..! ಹೌದು, ಅವರಲ್ಲಿ ಎರಡು ವ್ಯಕ್ತಿತ್ವಗಳಿವೆ. ಅವು ಸಂಪೂರ್ಣವಾಗಿ ತದ್ವಿರುದ್ಧ ವ್ಯಕ್ತಿತ್ವಗಳು. ಬಾಹ್ಯವಾಗಿ ಒಬ್ಬ ಅಮಾಯಕನಂತೆ, ಮುಗ್ಧನಂತೆ ಕಾಣುವ ಹೆಗಡೆಯವರು ಆಂತರಿಕವಾಗಿ ಸೃಜನಶೀಲ ಕವಿ ಲೇಖಕ, ತತ್ವಜ್ಞಾನಿ, ಆಧ್ಯಾತ್ಮಿ, ಪ್ರೇಮಿ, ಮಾತುಗಾರ, ಕನಸುಗಾರ.... ಈ ಎರಡನೇ ವ್ಯಕ್ತಿತ್ವದ ಪರಿಚಯವಾಗುವುದು ಕೆಲವರಿಗೆ ಮಾತ್ರ. ಅದರಲ್ಲಿ ನಾನೂ ಒಬ್ಬ. ಈ ಪ್ರೇಮಕಾವ್ಯವನ್ನು ಬರೆದಿರುವುದೂ ಹೆಗಡೆಯವರೊಳಗಿರುವ ಇನ್ನೊಬ್ಬ ಹೆಗಡೆ. ಹೊರಗಿರುವ ಹೆಗಡೆ ಕೇವಲ ನೆಪ ಮಾತ್ರ. ಒಳಗಿರುವ ಹೆಗಡೆ ಕಣ್ಮುಚ್ಚಿದಾಗ ಹೊರಗಿರುವ ಹೆಗಡೆ ಜೀವಂತವಾಗಿರುವುದಿಲ್ಲ. ಹೆಗಡೆಯವರು ಚಿಂತನೆಯಲ್ಲಿ, ಅನುಭವದಲ್ಲಿ, ವಯಸ್ಸಿನಲ್ಲಿ, ಜ್ಞಾನದಲ್ಲಿ ನನಗಿಂತ ತುಂಬಾ ಹಿರಿಯರು. ಅವರನ್ನು ನನ್ನ ಸ್ನೇಹಿತ ಎನ್ನುವುದಕ್ಕಿಂತ ‘ಗುರು’ ಎನ್ನುವುದೇ ಸೂಕ್ತ. ಕತ್ತಲೆಯಿಂದ ಬೆಳಕಿನೆಡೆಗೆ ನಡೆಸಬಲ್ಲ ಗುರುವು ಅವರು. ಅವರಿಂದ ನಾನು ಕಲಿತಿದ್ದು ಅಪಾರ. ಹೀಗಾಗಿಯೇ ಅವರು ಪರಿಚಯವಾದ ದಿನದಿಂದಲೂ ನಾನು ಅವರನ್ನು ‘ಗುರುಗಳೇ’ ಎಂದೇ ಸಂಭೋಧಿಸುತ್ತೇನೆ. ಅವರ ಶಿಷ್ಯನಾಗಿರುವುದರಲ್ಲಿ ಅವರ್ಚನೀಯ ಆನಂದವಿದೆ. ಅವರು ನನ್ನನ್ನು ಶಿಷ್ಯ ಎಂದು ಒಪ್ಪಿಕೊಂಡಿದ್ದಾರೋ ಇಲ್ಲವೂ ಗೊತ್ತಿಲ್ಲ. ಆದರೆ ನಾನಂತೂ ಅವರನ್ನು ‘ಗುರು’ ಎಂದೇ ಭಾವಿಸಿದ್ದೇನೆ. ದ್ರೋಣನಿಗೊಬ್ಬ ಏಕಲವ್ಯನಿದ್ದಂತೆ, ನನ್ನ ಪಾಲಿನ ದ್ರೋಣಾಚಾರ್ಯ ಅವರು. “ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ” ಎಂದು ಪುರಂದರದಾಸರು ಹೇಳಿದ್ದಾರೆ. “ಗುರುವು ಹೆಗಲ ಮೇಲಿನ ಹೆಣ, ಅದನ್ನು ಇಳಿಸಬೇಕು” ಎಂದು ಸಾಹಿತಿ ಸತ್ಯಕಾಮ ಹೇಳಿದ್ದಾರೆ. ಗುರುವಿನ ಬಗೆಗಿರುವ ಇವೆರಡೂ ಪರಿಕಲ್ಪನೆಗಳು ನಿಜ. ಆದರೆ ಇವುಗಳಿಗಿಂತ ವಿಭಿನ್ನವಾಗಿ ನನ್ನ ಬದುಕಲ್ಲಿ ಬಂದವರು ನನ್ನ ಗುರು ಹನುಮಕುಮಾರ ಹೆಗಡೆಯವರು. ನನ್ನ ಮಾತು, ವರ್ತನೆ, ಚಿಂತನೆ, ಬರವಣಿಗೆಗಳಲ್ಲಿ ಅವರು ಬೆರೆತುಹೋಗಿದ್ದಾರೆ. ಶಿಷ್ಯನಾದವನು ಒಬ್ಬ ಸಮರ್ಥವಾದ ಗುರುವಿನ ಹುಡುಕಾಟದಲ್ಲಿದ್ದಂತೆಯೇ, ಗುರುವಾದವನು ಕೂಡಾ ಒಬ್ಬ ಸಮರ್ಥವಾದ ಶಿಷ್ಯನ ಹುಡುಕಾಟದಲ್ಲಿರುತ್ತಾನೆ. ಈ ಬಗೆಯ ಗುರು ಶಿಷ್ಯರ ಸಂಗಮವಾಗುವುದು ತುಂಬಾ ವಿರಳ. ನನ್ನ ಹಾಗೂ ಹೆಗಡೆಯವರ ಸಂಗಮ ಕೂಡಾ ಅಂಥದ್ದೆ.  ಸಾಹಿತ್ಯಾಭಿಮಾನಿಯಾಗಿದ್ದ ನಾನು ಬರಗೆಟ್ಟವನಂತೆ ಕುವೆಂಪು, ಕಾರಂತ, ತೇಜಸ್ವಿ, ಭೈರಪ್ಪನವರನ್ನು ಓದುತ್ತಿದ್ದರೆ ಹೆಗಡೆಯವರು ನನ್ನ ನೋಡಿ ನಗುತ್ತಿದ್ದರು. 

ಪ್ರೇಮದ ಉತ್ತುಂಗ ಸ್ಥಿತಿಯಲ್ಲಿ ಕವಿಗಳು

‘ಯಾಕೆ ಗುರುಗಳೇ?’ ಒಮ್ಮೆ ಕೇಳಿದೆ.

‘ಇವೆಲ್ಲಾ ಕೃತಿಗಳನ್ನು ಯಾಕೆ ಓದುತ್ತೀಯಾ?’ ಕೇಳಿದರು.

‘ಇವೆಲ್ಲಾ ಓದುವುದರಿಂದ ಸಾಹಿತ್ಯ ಆಳವಾಗಿ ಅರ್ಥವಾಗುತ್ತೆ, ಜ್ಞಾನ ಸಿಗುತ್ತೆ, ಬದುಕು ಅರ್ಥವಾಗುತ್ತೆ’ ಉತ್ತರಿಸಿದೆ.

‘ಅದರಿಂದ ಉಪಯೋಗವೇನು?’ ಮರುಪ್ರಶ್ನೆ ಎಸೆದರು.

‘ಅವೆಲ್ಲಾ ಓದುವುದರಿವಂದ ಜ್ಞಾನ ಸಿಗುತ್ತೆ, ಆ ಜ್ಞಾನದಿಂದ ಬದುಕು ಕಟ್ಟಿಕೊಳ್ಳಬಹುದು’ ಎಂದು ತೋಚಿದ್ದು ಹೇಳಿದೆ. 

‘ಜ್ಞಾನವೆಂದರೆ ಅವೆಲ್ಲಾ ಓದಿಕೊಳ್ಳುವುದಲ್ಲ, ಬದುಕು ಕಟ್ಟಿಕೊಳ್ಳುವುದೆಂದರೆ ಅದೆಲ್ಲಾ ಅಲ್ಲವೇ ಅಲ್ಲ’ ಗುರುಗಳು ನಿರ್ಲಿಪ್ತರಾಗಿ ನುಡಿದರು. 

‘ಮತ್ತೇನು ಗುರುಗಳೇ ಹಾಗಾದರೆ?’ ಅಚ್ಚರಿಯಿಂದ ಕೇಳಿದೆ. 

ಬದುಕು, ಬರವಣಿಗೆ, ಓದು, ಗ್ರಹಿಕೆ, ಅಭಿವ್ಯಕ್ತಿಯ ಬಗ್ಗೆ ಗುರುಗಳು ಸುದೀರ್ಘವಾದ ಉಪನ್ಯಾಸವನ್ನೇ ನೀಡಿದರು. ಬರೆದರೆ ಅದೇ ಒಂದು ಪುಸ್ತಕವಾದೀತು. 


    ಸಾಮಾನ್ಯವಾಗಿ ಎಂ.ಎ. ಕನ್ನಡ ಓದಿಕೊಂಡವರು ಸಹಜವಾಗಿಯೇ ಒಂದಿಷ್ಟು ಸಾಹಿತಿಗಳನ್ನು ಓದಿಕೊಂಡಿರುತ್ತಾರೆ. ಕುವೆಂಪು, ಮಾಸ್ತಿ, ಕಾರಂತ, ಬೇಂದ್ರೆ, ಪುತಿನ, ನರಸಿಂಹಸ್ವಾಮಿ..... ಆದರೆ ಈ ಗುರುವು ಶೈಕ್ಷಣಿಕ ಪಠ್ಯಕ್ರಮ ಬಿಟ್ಟು ಬೇರೆ ಲೇಖಕರನ್ನು ಕಣ್ಣೆತ್ತಿ ನೋಡಿದವರಲ್ಲ. ಇವತ್ತಿಗೂ ಒಂದೇ ಒಂದು ಕಾದಂಬರಿ, ಕಥಾ ಸಂಕಲನ, ಕವಿತಾ ಸಂಕಲನ ಓದಿಲ್ಲ. ಅವರ ಇದುವರೆಗಿನ ಬದುಕಿನಲ್ಲಿ ಏನಾದರೂ ಸಾಹಿತ್ಯ ಓದಿಕೊಂಡಿದ್ದಾರೆಂದರೆ ಅದು ವಿವಿಧ ಕಥೆಗಾರರ 40-50 ಕಥೆಗಳು ಮಾತ್ರ. ಅದೂ ಅವರ ಪಿಎಚ್.ಡಿ ಅಧ್ಯಯನಕ್ಕಾಗಿ. ಅನುವಾದಿತ ಕಥೆಗಳಲ್ಲಿ ದಲಿತ ಸಂವೇದನೆಯನ್ನು ಹುಡುಕುವ ವಿಷಯವನ್ನು ಪಿಎಚ್.ಡಿ ಗೆ ಆಯ್ದುಕೊಂಡಿದ್ದರಿಂದ ಅನಿವಾರ್ಯವಾಗಿ ತುಂಬಾ ಕಷ್ಟಪಟ್ಟು ಈ ಕಥೆಗಳನ್ನು ಓದಿಕೊಂಡಿದ್ದಾರೆ, ಅಷ್ಟೇ! ಇದನ್ನು ಹೊರತುಪಡಿಸಿದರೆ ಇನ್ನೊಂದು ಸಾಹಿತ್ಯ ಕೃತಿಯನ್ನು ಎಡಗೈಯಿಂದಲೂ ಮುಟ್ಟಿಲ್ಲ. ಅವರ ಓದು ಏನಿದ್ದರೂ ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕ ಗ್ರಂಥಗಳಿಗಷ್ಟೇ ಸೀಮಿತ.  ಇವೆರಡೂ ವಿಷಯಗಳಲ್ಲಿ ಆಳವಾದ ಜ್ಞಾನವಿದೆ. ಸಾಹಿತ್ಯದ ಓದು ಅವರಿಗೆ ವಜ್ರ್ಯ. ‘ನಾನು ನಿಮ್ಮ ಹಾಗೆ ಓದುಗನಲ್ಲ’ ಎಂದು ನಿರ್ಭಿಡೆಯಿಂದ ಹೇಳಿಕೊಳ್ಳುತ್ತಲೇ ‘‘ನನ್ನೊಳಗಿನ ಅವಳು’’ ಎಂಬ ಮಹೋನ್ನತ ಪ್ರೇಮಕಾವ್ಯವನ್ನೇ ಬರೆದಿದ್ದಾರೆ. ಸಾಹಿತ್ಯದ ಓದಿನ ಅನುಭವವಿಲ್ಲದೇ, ಇತರರ ಕಾವ್ಯವನ್ನು ಓದದೇ ಸ್ವತಃ ಕಾವ್ಯವನ್ನು ಬರೆಯುವುದಿದೆಯಲ್ಲಾ ಅದು ನಿಜಕ್ಕೂ ಅಚ್ಚರಿಯ ಸಂಗತಿ. ಸೃಷ್ಟಿಯ ವಿಶಿಷ್ಟ ವ್ಯಕ್ತಿಯಾದ ಇಂತವರು ಕ್ರಿ.ಶ. 8-9 ನೇ ಶತಮಾನದಲ್ಲಿ ಬದುಕಿದ್ದರೇನೋ? ಆದ್ದರಿಂದಲೇ ಇಂತವರನ್ನು ಕುರಿತು ‘ಶ್ರೀವಿಜಯ’ ತನ್ನ ‘ಕವಿರಾಜಮಾರ್ಗ’ ಕೃತಿಯಲ್ಲಿ ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್’ ಎಂದಿದ್ದಾನೆ. ಅಂತಹ ಸಂತತಿಯ ಕೊನೆಯ ಕೊಂಡಿಯೇ ಹನುಮಕುಮಾರ ಹೆಗಡೆಯವರು! ಸೃಜನಶೀಲ ಸಾಹಿತ್ಯ ಓದಿನ ಹಿನ್ನೆಲೆಯೇ ಇರದ ‘ಸಾಮಾನ್ಯ ವ್ಯಕಿ’್ತಯೊಬ್ಬನಿಂದ ‘ಅಸಾಮಾನ್ಯ ಮಹಾಕಾವ್ಯ’ವೊಂದು ಸೃಷ್ಟಿಯಾಗುವುದಕ್ಕೆ ಕಾರಣವಾಗುವ ಈ ‘ಪ್ರೇಮ’ ಎಂಬ ಅನುಭೂತಿಗೆ ಕೋಟಿ ಕೋಟಿ ನಮನ. ಬದುಕಿನಲ್ಲಿ ಒಂದು ಸಾಲೂ ಕಾವ್ಯ ಓದದೇ ಸಾವಿರಾರು ಸಾಲುಗಳ ಕಾವ್ಯ ರಚಿಸುವುದಿದೆಯಲ್ಲಾ ಅದು ಕೇವಲ ಅದು ಕೇವಲ ಹೆಗಡೆಯವರೊಬ್ಬರಿಗೆ ಮಾತ್ರ ಸಾಧ್ಯವೆನಿಸುತ್ತದೆ. ಅವರೊಬ್ಬ ಪ್ರೇಮವಧೂತ. ಆದ್ದರಿಂದಲೇ ಈ ‘ಆತ್ಯಂತಿಕ ಪ್ರೇಮವೇದ’ ಸೃಷ್ಟಿಯಾಗಿದೆ. 


ನನ್ನೊಳಗಿನ ಅವಳು  -  ಒಂದು ಮಹೋನ್ನತ ಪ್ರೇಮಕಾವ್ಯ      ನನ್ನೊಳಗಿನ ಅವಳು’ ಎಂಬ ಸಾವಿರಾರು ಸಾಲುಗಳ ಈ ಮಹಾಕಾವ್ಯವನ್ನು ಓದುತ್ತಾ ಹೋದಂತೆಲ್ಲಾ ಕಾವ್ಯ ನಮ್ಮನ್ನು ಸಮ್ಮೋಹನಗೊಳಿಸಿ ತನ್ನ ತೆಕ್ಕೆಗೆ ತೆಗೆದುಕೊಂಡುಬಿಡುತ್ತೆ. ಪ್ರೇಮಾಗ್ನಿಯನ್ನು ಹೊತ್ತು ಧಗಧಗಿಸುವ ಪ್ರೇಮಗ್ರಂಥವಿದು. ಓದುವಾಗ ಇದು ಕವಿಯ ಮೊದಲ ಕೃತಿ ಎಂದು ಅನಿಸುವುದಿಲ್ಲ. ಒಬ್ಬ ನುರಿತ ಅನುಭವಿ ನೇಕಾರ ಹೇಗೆ ಕುಶಲತೆಯಿಂದ ಬಟ್ಟೆ ನೇಯುತ್ತಾನೋ ಹಾಗೆ ಹೆಗಡೆಯವರೂ ಕೂಡಾ ಅಷ್ಟೇ ಕುಶಲತೆಯಿಂದ ಪದಗಳೊಡನೆ ಆಟವಾಡುತ್ತಾ ಈ ರಮ್ಯ ಪ್ರೇಮಕಾವ್ಯವನ್ನು ಸೃಷ್ಟಿಸಿದ್ದಾರೆ. ಈ ಕಾವ್ಯವನ್ನು ಓದಲು ಕೇವಲ ಕಣ್ಣು ಮಾತ್ರ ಸಾಲದು; ಒಳಗಣ್ಣು ಕೂಡಾ ಅಷ್ಟೇ ಅಗತ್ಯವಾಗಿ ಬೇಕು. ಆಗ ಮಾತ್ರ ಈ ಕಾವ್ಯ ಹೃದಯದ ಬಾಗಿಲನ್ನು ತಟ್ಟುತ್ತದೆ, ಬಚ್ಚಿಟ್ಟ ಭಾವಗಳನ್ನು ತಾಕುತ್ತದೆ. ಹೆಗಡೆಯವರು ತಮ್ಮ ಎದೆಯೊಳಗಿನ ಪ್ರೇಮ, ಕನಸು, ಕನವರಿಕೆ, ಕಾತುರ, ನಿರೀಕ್ಷೆ, ಆಕಾಂಕ್ಷೆ, ತಪನೆ, ತವಕ, ತಲ್ಲಣ, ತಹತಹಿಕೆಗಳನ್ನೆಲ್ಲಾ ಹಿಂಡಿ ಲೇಖನಿಯೊಳಗೆ ಬಸಿದು ಈ ಮನೋಹರ ಕಾವ್ಯವನ್ನು ಚಿತ್ರಿಸಿದ್ದಾರೆ.  ಪ್ರೇಮವೆಂಬುದು ಮನುಷ್ಯನನ್ನು ನಿರ್ಲಜ್ಜನನ್ನಾಗಿ, ಅಸಹಾಯಕನನ್ನಾಗಿ, ಅಧಃಪತನಕ್ಕೀಡುಮಾಡುತ್ತದೆ. ಅಥವಾ ಅವನಿಗೆ ಭವ್ಯತೆಯ ಅನುಭೂತಿ ನೀಡಿ ಸೃಜನಶೀಲನನ್ನಾಗಿ ರೂಪಿಸುತ್ತದೆ.  ಹೆಗಡೆಯವರು ಎರಡನೇ ಗುಂಪಿಗೆ ಸೇರಿದವರು. ಈ ಕೃತಿಯ ‘ಅರ್ಪಣೆ’ ಪುಟದಲ್ಲಿ ನೀವು ಓದಿರುತ್ತೀರಿ. ಹೌದು, ಅವರ ಈ ವಿಶಿಷ್ಟ ಪ್ರೇಮಕಾವ್ಯಕ್ಕೆ ಸ್ಫೂರ್ತಿ ‘ಅವಳು!’. ಹೆಗಡೆಯವರ ಕಪ್ಪು ಬಿಳುಪಿನ ಬದುಕಿನೊಳಗೆ ದಾಪುಗಾಲಿಟ್ಟು ಬಂದು ಪ್ರೇಮದ ರಂಗೋಲಿ ಹಾಕಿ ರಂಗು ತುಂಬಿದವಳು ‘ಅವಳು’. ಅವಳು ಹೆಗಡೆಯೊಳಗಿರುವ ‘ಅವಳು’. ಬಿ.ಇಡಿ ಓದುವಾಗ ಜೊತೆಯಾಗಿದ್ದ ‘ಅವಳು’ ಈ ಕಾವ್ಯಕ್ಕೆ ಕಾರಣವಾಗಿದ್ದರೂ ಈ ಕಾವ್ಯ ಅಂದು ಬರೆದುದಲ್ಲ.  ಹೆಗಡೆಯವರ ಹೃದಯದ ಬಡಿತವಾಗಿ ಉಳಿದಿದ್ದ ಅವಳನ್ನು ಮತ್ತೆ ಮತ್ತೆ ಪ್ರೀತಿಸುತ್ತಾ ಈ ಕಾವ್ಯ ಬರೆದದ್ದು ಇತ್ತೀಚೆಗೆ. ಬಿ.ಇಡಿ ನಂತರ ದೂರಾದ ಪ್ರಿಯತಮೆಯ ಬಗ್ಗೆ ಕೊರಗದೆ ಮರುಗದೆ ಅವಳ ನೆನಪುಗಳ ಹೂಗಳನ್ನು ಹೆಕ್ಕಿ, ಅಕ್ಷರದ ದಾರದಲ್ಲಿ ಪೋಣಿಸಿ, ಪ್ರೇಮದ ಹೂಮಾಲೆಯನ್ನಾಗಿ ಕಟ್ಟಿ ಈ ಪ್ರೇಮಗ್ರಂಥದ ಮೂಲಕ ಓದುಗರ ಕೈಗಿಟ್ಟಿದ್ದಾರೆ. ಜೋಪಾನ...! ಈ ಪ್ರೇಮಕಾವ್ಯದ ಪ್ರತಿ ಅಕ್ಷರಗಳಲ್ಲಿ ಹೆಗಡೆಯವರ ಹೃದಯ ಮಿಡಿತವಿದೆ...!! 


      ಜಗದ್ವಿಖ್ಯಾತ ಕಲಾವಿದ ‘ಲಿಯನಾರ್ಡೋ ಡಾ ವಿನ್ಸಿ’ ತಾನು ಕಂಡ ಅಪೂರ್ವ ಸುಂದರಿಯೊಬ್ಬಳನ್ನು ತನ್ನ ಕುಂಚದಲ್ಲಿ ಚಿತ್ರಿಸಿ, ಅವಳ ಮುಗುಳ್ನಗೆಯಲ್ಲಿ ಮಾಂತ್ರಿಕತೆಯನ್ನು ತುಂಬಿ ‘ಮೊನಾಲಿಸಾ’ ಚಿತ್ರವಾಗಿಸಿ ಇಡೀ ಜಗತ್ತು ನಿಬ್ಬೆರಗಾಗುವಂತೆ ಮಾಡಿಬಿಟ್ಟ. ಅವನು ಕುಂಚದಲ್ಲಿ ಮಾಡಿದ ಮಾಂತ್ರಿಕತೆಯನ್ನೇ ಇಲ್ಲಿ ಹೆಗಡೆಯವರು ಲೇಖನಿಯಲ್ಲಿ ಮಾಡಿದ್ದಾರೆ. ಅಲ್ಲಿ ಕಲಾಕೃತಿಯಲ್ಲಿ ‘ಮೊನಾಲಿಸಾ’ ಶಾಶ್ವತವಾಗಿ ಉಳಿದಿದ್ದರೆ ಇಲ್ಲಿ ಕೃತಿಯಲ್ಲಿ ಗುರು ‘ಪ್ರೇಯಸಿ’ ಶಾಶ್ವತವಾಗಿ ಉಳಿದಿದ್ದಾಳೆ. ನಾವು ನೀವೆಲ್ಲಾ ಅಳಿದ ನಂತರವೂ ಅವಳ ನೆನಪುಗಳು, ಹೆಗಡೆಯವರ ಪ್ರೀತಿ ಈ ಜಗತ್ತಲ್ಲಿ ಈ ಕಾವ್ಯದ ಮೂಲಕ ಅಜರಾಮರವಾಗಿ ಉಳಿಯಲಿದೆ. ಮುಂದಿನ ಪೀಳಿಗೆಗೆ ಹೆಗಡೆಯವರು ಉಳಿಸಿಹೋಗಲಿರುವ ಅತ್ಯಮೂಲ್ಯ ಪ್ರೇಮಕಾಣಿಕೆ ಇದಾಗಲಿದೆ. ಪ್ರೇಮವೆಂಬುದು ದೇಶ, ಭಾಷೆ, ಸಂಸ್ಕøತಿ, ಜಾತಿ, ಧರ್ಮಗಳ ಗಡಿಗಳನ್ನು ಮೀರಿ ನಿಲ್ಲುವಂತದ್ದು. ಹೀಗಾಗಿ ಈ ಕಾವ್ಯ ಬರೀ ಕನ್ನಡಕ್ಕೆ ಮಾತ್ರ ಸೀಮಿತವಾಗಿರದೇ ಹಲವು ಭಾಷೆಗಳಿಗೆ ತರ್ಜುಮೆಯಾಗಿ ಪ್ರೇಮದೇಶದ ಕಟ್ಟಕಡೆಯ ಪ್ರಜೆಗೂ ತಲುಪಬೇಕಾದ ಕೃತಿ. ಇಂತಹ ಕೃತಿಯ ಸೃಷ್ಟಿಗಾಗಿಯೇ ಹೆಗಡೆಯವರು ಈ ಭೂಮಿಯ ಮೇಲೆ ಜನಿಸಿದ್ದಾರೇನೋ ಅಂತನಿಸುತ್ತದೆ.  ಶತಪ್ರಯತ್ನ ಮಾಡಿದರೂ ಸ್ವತಃ ಅವರಿಂದಲೇ ಮತ್ತೇ ಇಂತಹ ಇನ್ನೊಂದು ಕೃತಿ ರಚಿಸಲು ಸಾಧ್ಯವಿಲ್ಲ. ಅವರಿಂದ ಈ ಕೃತಿ ರಚಿತವಾಗಬೇಕಿತ್ತು, ರಚನೆಯಾಗಿದೆ ಅಷ್ಟೇ. ಅವರು ಉಳಿದ ಜೀವಿತಾವಧಿಯಲ್ಲಿ ಇನ್ನೇನು ಸಾಧನೆ ಮಾಡಬೇಕಿಲ್ಲ. ಇದೊಂದೇ ಸಾಕು, ಅವರ ಹೆಸರನ್ನು ಅಜರಾಮರವಾಗಿರಿಸಲು. ಕನ್ನಡದಂತ ಪ್ರಾದೇಶಿಕ ಭಾಷೆಯೊಂದರಲ್ಲಿ ಇಂತಹ ಕೃತಿ ಪ್ರಕಟವಾಗುತ್ತಿರುವುದು ಕನ್ನಡಿಗರೆಲ್ಲರ ಹೆಮ್ಮೆ. ಅಕಾಡೆಮಿಕ್ ವಲಯದಲ್ಲಿ ಹೆಗಡೆಯವರ ಈ ಕೃತಿ ಮೊದಲ ಸಾಲಿನಲ್ಲಿ ನಿಲ್ಲುವಂತದ್ದು. ವಿಶ್ವವಿದ್ಯಾಲಯಗಳಲ್ಲಿ ಕೆಲವು ಅರೆನೆರೆತ ಅರೆಬೋಳುತಲೆಯ ಪ್ರೊಫೆಸರ್ ಗಳು ಕೆಲಸಕ್ಕೆ ಬಾರದ ಯಾವುದೋ ಕೃತಿಗಳನ್ನಿಟ್ಟುಕೊಂಡು ಕೋಳಿ ಕೆದರಿದಂತೆ ಮತ್ತೆ ಮತ್ತೆ ಅದನ್ನೇ ಕೆದರುತ್ತಾ, ಕೆದರುವುದನ್ನೇ ವಿಮರ್ಶೆ ಎಂದು ಭಾವಿಸುತ್ತಾ, ಓದುಗರ ಮೇಲೆ ಬಲವಂತವಾಗಿ ಹೇರುವುದನ್ನು ಬಿಟ್ಟು ಹೆಗಡೆಯಂತವರ ಕೃತಿಗಳ ಬಗ್ಗೆ ಗಮನಹರಿಸಬೇಕಾದ ಅಗತ್ಯವಿದೆ. ಕೆಲವೊಮ್ಮೆ ಈ ಪ್ರೇಮಕಾವ್ಯಕ್ಕೆ ವಿಮರ್ಶೆಯ ಹಂಗು ಬೇಕಾಗಿಲ್ಲ ಎನಿಸಿಬಿಡುತ್ತದೆ. 


            “ಕವಿಯಾದವನು ಪ್ರೇಮಿಯಾಗಿರುತ್ತಾನೆ, ಪ್ರೇಮಿಯಾದವನು ಕವಿಯಾಗಿರುತ್ತಾನೆ” ಎಂದು ಪಾಶ್ಚಾತ್ಯ ವಿದ್ವಾಂಸನೊಬ್ಬ ಹೇಳಿದ್ದಾನೆ. ಇದಕ್ಕೆ ಹೆಗಡೆಯವರು ಹೊರತಲ್ಲ. ತನ್ನ ಈ ಪ್ರೇಮಕಾವ್ಯ ಓದುಗರಿಂದ ಓದುಗರಿಗೆ ಸಾಗುತ್ತಾ ಮುಂದೊಂದು ದಿನ ತನ್ನ ಪ್ರೇಯಸಿಯ ಕೈ ಸೇರಬಹುದೆಂಬ ನಿರೀಕ್ಷೆಯಿದೆ. ಅವಳ ಕೈ ಸೋಕಿದ ಮರುಕ್ಷಣವೇ ಈ ಪ್ರೇಮಕಾವ್ಯ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ ಎಂಬ ಭಾವ ಹೆಗಡೆಯವರದು.  ತಾನೊಬ್ಬ ಕುರೂಪಿ ಎಂದು ಹೇಳಿಕೊಳ್ಳುತ್ತಲೇ ಕಾವ್ಯದಲ್ಲಿ ಸೌಂದರ್ಯದ ಸಾಲುಗಳನ್ನು ಚೆಲ್ಲಿಕೊಂಡಿದ್ದಾರೆ. ಜನ್ನನ ‘ಯಶೋಧರ ಚರಿತೆ’ಯ ಕುರೂಪಿ ಅಷ್ಟಾವಂಕ್ರನೆಡೆಗೆ ಸೌಂದರ್ಯದ ಖನಿ ರಾಣಿ ಅಮೃತಮತಿಗೆ ಉಂಟಾಗುವ ಪ್ರೇಮವನ್ನು ವಿವರಿಸುತ್ತಾ ಪ್ರೇಮವೆಂಬುದು ರೂಪ ಕುರೂಪಗಳನ್ನು ಮೀರಿದ್ದು, ಈ ಜಗತ್ತಲ್ಲಿ ಯಾವುದೂ ಅಸಾಧ್ಯವಲ್ಲ ಎಂದು ಹೆಗಡೆಯವರು ನಂಬುತ್ತಾರೆ. ಆ ನಂಬಿಕೆಯೇ ಅವರನ್ನು ಕವಿಯನ್ನಾಗಿಸಿದೆ. ದೂರವಿರುವ ತನ್ನ ಪ್ರೇಯಸಿಯ ಒಂದು ಹಿಡಿ ಪ್ರೀತಿಗಾಗಿ ಜೀವಮಾನವಿಡೀ ಒಂಟಿಗಾಲಲ್ಲಿ ನಿಂತು ಧೇನಿಸುವ ಹಠಯೋಗಿ, ಪ್ರೇಮಯೋಗಿ ಈ ಹನುಮಕುಮಾರ ಹೆಗಡೆ. ಖ್ಯಾತ ಸ್ಪ್ಯಾನಿಷ್ ಲೇಖಕ ‘ಗೇಬ್ರಿಯಲ್ ಗಾರ್ಸಿಯಾ ಮಾಕ್ರ್ವೆಜ್’ ನ ಮೇರು ಕೃತಿ ‘ಲವ್ ಇನ್ ದಿ ಟೈಮ್ ಆಫ್ ಕಾಲೆರಾ’ ಕಾದಂಬರಿಯ ನಾಯಕ ‘ಫ್ಲಾರೆಂಟಿನೋ ಅರಿಜಾ’ನಂತೆ ಹೆಗಡೆಯವರು ತಮ್ಮ ಇಡೀ ಜೀವನವನ್ನು ಅವಳಿಗಾಗಿ, ಅವಳ ಪ್ರೇಮಕ್ಕಾಗಿ ಕಾದುಬಿಡಬಲ್ಲರು. ಅಂತಹ ಪ್ರೇಮತೀವ್ರತೆಯು ಇಡೀ ಕಾವ್ಯದುದ್ದಕ್ಕೂ ಕಾಣಿಸುತ್ತದೆ.

ಅಂಜನಾದ್ರಿಯ ಹನುಮನೊಂದಿಗೆ ಪ್ರೇಮಕವಿ ಹನುಮ..!


    ಮಿರ್ಜಾ ಗಾಲೀಬ್ ತನ್ನ ಸಾವಿರಾರು ಮೋಹಕ ಗಝಲ್‍ಗಳನ್ನು ಸೃಷ್ಟಿಸಿದ್ದು ದಿಲ್ಲಿಯ ಕೆಟ್ಟ ಕೊಳಕು ಓಣಿಗಳಲ್ಲಿ, ಶರಾಬು ಅಂಗಡಿಗಳಲ್ಲಿ, ಲೋಕನಿಂದಿತರ, ದಟ್ಟದಾರಿದ್ರ್ಯರ, ಕುಡುಕರ ಸನ್ನಿಧಿಯಲ್ಲಿ. ಹೆಗಡೆಯವರ ಈ ಕಾವ್ಯ ಸೃಷ್ಟಿಯಾಗಿದ್ದು ಕೂಡಾ ಇಂಥದ್ದೇ ವಾತಾವರಣದಲ್ಲಿ. ಸಂಜೆಯಾಗುತ್ತಿದ್ದಂತೆ ಕುಡುಕರ ಕಿರುಚಾಟ, ಜಗಳ, ಅಶ್ಲೀಲ ಬೈಗುಳ ಗದ್ದಲಗಳ ನಡುವೆ ಹೆಗಡೆಯವರು ಧ್ಯಾನಸ್ಥ ಸ್ಥಿತಿಯಲ್ಲಿ ಈ ಪ್ರೇಮಕಾವ್ಯವನ್ನು ರಚಿಸಿದ್ದಾರೆ. ಇದು ಕೆಸರಿನಲ್ಲಿ ಅರಳಿರುವ ಕಮಲ.  ಹೆಗಡೆಯವರ ಬದುಕು ಮತ್ತು ಬರಹವನ್ನು ಅವಲೋಕಿಸಿದಾಗ ಅನ್ನಿಸುವುದಿಷ್ಟೇ ಅವರು ‘ಗಂಗಾವತಿಯ ಗಾಲೀಬ್!’ 


    ಪ್ರೀತಿ, ಪ್ರೇಮ, ಒಲುಮೆ, ಪ್ಯಾರ್, ಇಷ್ಕ್, ಮೊಹಬ್ಬತ್, ಪ್ರೇಮಂ, ಕಾದಲ್... ಎಂದೆಲ್ಲಾ ಕರೆಸಿಕೊಳ್ಳುವ ಈ ‘ಒಲವು’ ಎಂಬ ‘ಲವ್’ ಬಗ್ಗೆ ಹೆಗಡೆಯವರು ಬರೆದಿರುವ ಈ ಪ್ರೇಮಕಾವ್ಯವನ್ನು ಓದಿ ನಿಜಕ್ಕೂ ಬೆರಗಾಗಿದ್ದೇನೆ, ಪುಳಕಗೊಂಡಿದ್ದೇನೆ. ಪ್ರೇಮವೆಂಬುದು ಮನುಷ್ಯನನ್ನು ಇಷ್ಟೊಂದು ಸೃಜನಶೀಲನನ್ನಾಗಿ ರೂಪಿಸಬಲ್ಲದೇ ಎಂಬ ಭಾವ ಹಗಲಿರುಳೂ ಕಾಡಿದೆ. ಸಾಸಿವೆ ಕಾಳಿನಷ್ಟು ತಿಳಿದುಕೊಂಡಿದ್ದರೂ ಬ್ರಹ್ಮಾಂಡವನ್ನೇ ತಿಳಿದುಕೊಂಡಿದ್ದೇನೆ ಎಂದು ಬಿಂಬಿಸಿಕೊಳ್ಳುವ ಸ್ವಯಂ ಘೋಷಿತ ಬುದ್ಧಿಜೀವಿಗಳ ನಡುವೆ ಹೆಗಡೆಯವರು ವಿಭಿನ್ನವಾಗಿ ಕಾಣಿಸುತ್ತಾರೆ. ಎಷ್ಟೆಲ್ಲಾ ವಿಷಯಗಳನ್ನು ತಿಳಿದುಕೊಂಡಿದ್ದರೂ ಅವುಗಳನ್ನು ಎಲ್ಲಿಯೂ ತೋರಿಸಿಕೊಳ್ಳುವುದಿಲ್ಲ. ತುಂಬಿದ ಕೊಡ ತುಳುಕುವುದಿಲ್ಲ ಎನ್ನುವುದು ಇದಕ್ಕೇನೋ? ತೀರಾ ನಿಕಟವರ್ತಿಗಳನ್ನು ಹೊರತುಪಡಿಸಿದರೆ ಉಳಿದವರಿಗೆ ಇವರ ಜ್ಞಾನದರ್ಶನವಾಗುವುದು ತುಂಬಾ ವಿರಳ. ಹೀಗಾಗಿ ಎಲೆಮರೆಯ ಕಾಯಿಯ ಹಾಗೆ ಉಳಿದಿದ್ದಾರೆ.  ಇವರ ಈ ಜ್ಞಾನ ಓದಿನಿಂದ ಬಂದುದಲ್ಲ. ಬದುಕು ಕಲಿಸಿದ ಪಾಠಗಳಿಂದ, ಅನುಭವದಿಂದ, ಅನುಭಾವದಿಂದ ಬಂದಿದ್ದು. ಅದನ್ನೇ ಕಾವ್ಯವನ್ನಾಗಿಸಿದ್ದಾರೆ... ಬದುಕಿನ ಪ್ರೇಮಗೀತೆಯನ್ನಾಗಿಸಿದ್ದಾರೆ. ಸುಡುಸುಡುವ ಕೆಂಡದಂತ ಕಾವ್ಯ ಬರೆದು ಆ ಮೂಲಕ ತಮ್ಮ ಪ್ರೇಮವನ್ನು, ಅವಳ ನೆನಪನ್ನು ಅಮರವಾಗಿರಿಸಿದ್ದಾರೆ. ಸಾಧು ಸಂತರ ಸನ್ನಿಧಿಯಲ್ಲಿ ಹಲವಾರು ವರ್ಷಗಳ ಕಾಲ ಕಳೆದಿದ್ದರಿಂದಲೋ ಏನೋ ಸಾಮಾನ್ಯರಿಗೆ ಜಟಿಲವೆನಿಸುವ ಕಬ್ಬಿಣದ ಕಡಲೆಯಂತಹ ‘ತತ್ವಶಾಸ್ತ್ರ’ವನ್ನು ಆಳವಾಗಿ ಅರ್ಥೈಯಿಸಿಕೊಂಡಿದ್ದಾರೆ.  ಅದರಲ್ಲೂ ‘ಗ್ರೀಕ್ ತತ್ವಶಾಸ್ತ್ರ’ ಇವರಿಗೆ ಪ್ರಿಯವಾದುದು. ಸಾಕ್ರಟೀಸ್, ಪ್ಲೇಟೋ, ಅರಿಸ್ಟಾಟಲ್ ಅವರ ವಿಚಾರಧಾರೆಗಳ ಬಗ್ಗೆ ಗಂಟೆಗಟ್ಟಲೇ ನಿರರ್ಗಳವಾಗಿ ಮಾತಾಡಬಲ್ಲರು. ಪ್ರೇಮ, ತತ್ವಶಾಸ್ತ್ರ, ಆಧ್ಯಾತ್ಮ ಅವರನ್ನು ಮಾಗಿಸಿವೆ. ಹೀಗಾಗಿ ಅವರ ಬರವಣಿಗೆಯಲ್ಲಿ ಸಹಜವಾಗಿಯೇ ಈ ಮೂರು ವಿಷಯಗಳು ಭೋರ್ಗೆರೆದಿವೆ. ಗ್ರೀಕ್ ತತ್ವಜ್ಞಾನಿ ‘ಪ್ಲೇಟೋ’ ತನ್ನ ‘ಆದರ್ಶ ರಾಜ್ಯ’ದಲ್ಲಿ ಕವಿಗಳಿಗೆ ಸ್ಥಾನವಿಲ್ಲ, ಅವರನ್ನು ರಾಜ್ಯದಿಂದ ಹೊರಗಿಡಬೇಕು ಎಂದಿದ್ದಾನೆ. ಬಹುಶಃ ಈ ಹನುಮಕುಮಾರ ಹೆಗಡೆ ಆ ಕಾಲದಲ್ಲಿ ಬದುಕಿದ್ದು ಈ ಕೃತಿಯನ್ನು ಆಗ ಬರೆದಿದ್ದರೆ, ಪ್ಲೇಟೋ ಈ ಕಾವ್ಯವನ್ನು ಓದಿದ್ದರೆ ಖಂಡಿತಾ ತನ್ನ ನಿಲುವನ್ನು ಬದಲಾಯಿಸಿ ತನ್ನ ‘ಆದರ್ಶರಾಜ್ಯ’ದಲ್ಲಿ ಕವಿಗಳಿಗೆ ವಿಶೇಷ ಸ್ಥಾನಮಾನಗಳನ್ನು ನೀಡುತ್ತಿದ್ದ. 

ಹನುಮನೊಂದಿಗೆ ಹನುಮ..!

 ಪಂಡಿತರು ಮತ್ತು ಪಾಮರರಿಗೂ ಮೆಚ್ಚುಗೆಯಾಗುವಂತೆ ಕುಮಾರವ್ಯಾಸ ಹೇಗೆ ತನ್ನ ‘ಕರ್ಣಾಟ ಭಾರತ ಕಥಾ ಮಂಜರಿ’ ಬರೆದನೋ ಹಾಗೇ ಹೆಗಡೆಯವರು ತಮ್ಮ ಕಾವ್ಯವನ್ನು ಜನಸಾಮಾನ್ಯರೂ ವಿದ್ವಾಂಸರೂ ಒಪ್ಪುವ ಹಾಗೆ ಬರೆದಿದ್ದಾರೆ. ಅವರದು ಕ್ಲಿಷ್ಟವೂ ಅಲ್ಲದ, ಸರಳವೂ ಅಲ್ಲದ ವಿಶಿಷ್ಟ ಪದಗಳ ಸಂಯೋಜನೆ. ಮಹಾಕವಿ ರನ್ನ ತನ್ನ ಕಾವ್ಯದ ಭಾಷೆ ಕುರಿತು "ತಾನು ಸರಸ್ವತಿಯ ಶಬ್ಧ ಭಂಡಾರವನ್ನೇ ಒಡೆದಿದ್ದೇನೆ" ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಹಾಗೆ ಇಲ್ಲಿ ಹೆಗಡೆಯವರ ಕಾವ್ಯದ ಭಾಷೆ, ಪದಗಳ ಬಳಕೆ ಕೂಡಾ ಭಾಸವಾಗುತ್ತದೆ. ಕನ್ನಡ ಕಾವ್ಯಲೋಕ ಹಿಂದೆಂದೂ ಕಾಣದ ಪದಗಳನ್ನು ಎಳೆದು ತಂದು ಕಾವ್ಯದ ಸೌಂದರ್ಯ ಹೆಚ್ಚಿಸಿ ನಿಜಕ್ಕೂ ಸರಸ್ವತಿಯ ಶಬ್ಧ ಭಂಡಾರವನ್ನೇ ಒಡೆದಿದ್ದಾರೆ ಈ ಅಭಿನವ ರನ್ನ ಹನುಮಕುಮಾರ ಹೆಗಡೆ. ‘ತನ್ನ ಕಾವ್ಯವನ್ನು ಪರೀಕ್ಷಿಸುವವನಿಗೆ ಎಂಟೆದೆ ಬೇಕು’ ಎಂದಿರುವ ರನ್ನನ ಮುಂದುವರಿದ ಭಾಗವಾಗಿ ಕಾಣಿಸುವ ಹೆಗಡೆಯವರು ‘ತನ್ನ ಕಾವ್ಯವನ್ನು ಪರೀಕ್ಷಿಸುವವರಿಗೆ ಹದಿನಾರೆದೆ ಬೇಕು’ ಎನ್ನುತ್ತಾರೆ. ಇದು ಸೃಜನಶೀಲ ಕವಿಯೊಬ್ಬನ ಸಾತ್ವಿಕ ಅಹಂ ಅಷ್ಟೇ. ಕನ್ನಡಿಗರೆಲ್ಲರೂ ಹೆಮ್ಮೆಪಡಬೇಕಾದ ಕೃತಿ ಇದು.


    ಭಾರತೀಯ ಇಂಗ್ಲಿಷ್ ಲೇಖಕ ಖುಷ್ವಂತ್ ಸಿಂಗ್ ಅವರು ತಮ್ಮ ಬರವಣಿಗೆಯನ್ನು ಆರಂಭಿಸಿದ್ದೇ ನಲವತ್ತು ವರ್ಷ ವಯಸ್ಸು ದಾಟಿದ ನಂತರ. ಆದರೂ ತಮ್ಮ ಸತ್ವಯುತ ಬರಹಗಳಿಂದ ಸಾಹಿತ್ಯಲೋಕದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ಇವರ ಪರಂಪರೆಯಲ್ಲಿ ಹೆಗಡೆಯವರೂ ಸಾಗಿದ್ದಾರೆ. ತುಂಬಾ ತಡವಾಗಿ ಕೃತಿ ಪ್ರಕಟಿಸುತ್ತಿದ್ದರೂ ‘ತಡೆದ ಮಳೆ ಜಡಿದು ಬಂತು’ ಎಂಬಂತೆ ಮೊದಲ ಹೆಜ್ಜೆಯಲ್ಲಿಯೇ ‘ನನ್ನೊಳಗಿನ ಅವಳು’ ಎಂಬ ಮಹೋನ್ನತ ಪ್ರೇಮಕಾವ್ಯದೊಂದಿಗೆ ಸಾಹಿತ್ಯಲೋಕವನ್ನು ಪ್ರವೇಶಿಸಿದ್ದಾರೆ. ನಾಲ್ಕು ಸಾಲಿನ ಚುಟುಕು, ಎಂಟು ಸಾಲಿನ ಕವಿತೆ ಬರೆದು ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿ ಕವಿಗಳಾಗಲು ತವಕಿಸುವ ಇಂದಿನ ಯುವಜನಾಂಗದ ನಡುವೆ ಹೆಗಡೆಯವರ ರಮ್ಯ ಪ್ರೇಮಕಾವ್ಯ ನಮ್ಮನ್ನು ಮುದಗೊಳಿಸುತ್ತದೆ. ಹನುಮಕುಮಾರ ಹೆಗಡೆ ಎಂಬ ಅಗ್ನಿ ಪರ್ವತದ ಎದೆಯಾಳದಲ್ಲಿ ಇಷ್ಟು ವರ್ಷ ಪ್ರೇಮವೆಂಬ ಲಾವಾರಸ ಸುಪ್ತವಾಗಿತ್ತು. ಈ ಪ್ರೇಮಕಾವ್ಯದ ಮೂಲಕ ಆ ಅಗ್ನಿಪರ್ವತ ಸ್ಫೋಟಗೊಂಡು ಪ್ರೇಮದ ಲಾವಾರಸ  ಸಾಹಿತ್ಯಲೋಕದಲ್ಲಿ ಚಿಮ್ಮಿದೆ. ಅದು ಓದುಗರ ಎದೆಯಲ್ಲಿ ಪ್ರೇಮದ ಹೂ ಅರಳಿಸಲಿ. ಒಂದಿಷ್ಟು ಸ್ವಾರ್ಥವಾಗಿ ಯೋಚಿಸುವುದಾದರೆ ಹೆಗಡೆಯವರಿಗೆ ಅವರ ಪ್ರಿಯತಮೆ ದಕ್ಕದೇ ಹೋಗಿದ್ದೇ ಒಳ್ಳೆಯದಾಯಿತು ಎನಿಸುತ್ತದೆ. ಅವರ ಈ ಪ್ರೇಮ ವೈಫಲ್ಯವೇ ಈ ಮಹಾನ್ ಪ್ರೇಮಕಾವ್ಯಕ್ಕೆ ಕಾರಣವಾಗಿದೆ. ಒಂದುವೇಳೆ ಆ ಹುಡುಗಿಯೊಂದಿಗಿನ ಪ್ರೇಮ ಯಶಸ್ವಿಯಾಗಿ ಅವಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರೆ ಈ ಕಾವ್ಯ ಹುಟ್ಟುತ್ತಿರಲಿಲ್ಲ, ಮೂರ್ನಾಲ್ಕು ಮಕ್ಕಳು ಹುಟ್ಟಿರುತ್ತಿದ್ದವು ಅಷ್ಟೇ! ಬದುಕಿನ ಜಂಜಡದಲ್ಲಿ ಹೆಗಡೆಯವರೂ, ಹೆಗಡೆಯವರ ಕಾವ್ಯವೂ ಕಳೆದುಹೋಗಿಬಿಡುತ್ತಿತ್ತು. ಈ ಒಂದು ಪ್ರೇಮ ವೈಫಲ್ಯವೇ ಒಂದು ಮಹಾನ್ ಪ್ರೇಮಕಾವ್ಯದ ಸೃಷ್ಟಿಗೆ ಕಾರಣವಾಗಿದೆ. ಇಂಥದ್ದೊಂದು ಪ್ರೇಮಕಾವ್ಯಕ್ಕೆ ಸ್ಫೂರ್ತಿಯಾದ ‘ಗುರು ಪ್ರೇಯಸಿ’ಗೆ ಸಮಸ್ತ ಓದುಗರ ಪರವಾಗಿ ವಿಶೇಷ ಕೃತಜ್ಞತೆಗಳು ಸಲ್ಲುತ್ತವೆ. 

ಪ್ರೇಮದ ರಾಯಭಾರಿ - ಗಂಗಾವತಿ ಗಾಲಿಬ್


    ವಿದ್ವತ್‍ಪೂರ್ಣವಾದ ಈ ಮಹಾಕಾವ್ಯವನ್ನು ಬರೆದ ಮಹಾಕವಿ ‘ಡಾ. ಹನುಮಕುಮಾರ ಹೆಗಡೆ’ಯವರು ನಡೆದಾಡುವ ವಿಶ್ವಕೋಶ, ಬೃಹತ್ ಜ್ಞಾನಕೋಶ. ಅವರೊಂದಿಗೆ ಒಂದು ತಾಸು ಮಾತಾಡಿದರೆ ಒಂದು ಪುಸ್ತಕ ಓದಿದ ಅನುಭವವಾಗುತ್ತದೆ. ನಮ್ಮ ಓದಿನ ಅನುಭವಕ್ಕಿಂತ ಅವರ ಜೀವನಾನುಭವ ದೊಡ್ಡದು. ಈ ಮಹಾಕಾವ್ಯಕ್ಕೆ ಸ್ಫೂರ್ತಿ, ಕಾವ್ಯದ ರಚನೆ, ವಸ್ತು ವಿನ್ಯಾಸ, ಮುಖಪುಟ ವಿನ್ಯಾಸ, ಪುಟ ವಿನ್ಯಾಸ, ಪ್ರಕಟನೆ, ಕೃತಿ ಬಿಡುಗಡೆ.... ಇತ್ಯಾದಿ ಕುರಿತು ಅವರೊಂದಿಗೆ ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು ಮುನ್ನೂರು ತಾಸಿಗೂ ಮಿಗಿಲಾಗಿ ಚರ್ಚೆ ಮಾಡಿದ್ದೇನೆ. ಈ ಮಹಾಕಾವ್ಯದ ಹಸ್ತಪ್ರತಿಯನ್ನು ಏಳೆಂಟು ಸಲ ಓದಿದ್ದೇನೆ. ಪ್ರತಿಸಲ ಓದಿದಾಗಲೂ ಹೊಸ ಅನುಭವ ಪಡೆದಿದ್ದೇನೆ. ಹೆಗಡೆಯವರ ಪದ ಬಳಕೆ, ಪದ ಸಂಪತ್ತನ್ನು ಕಂಡು ನಿಜಕ್ಕೂ ಬೆರಗಾಗಿದ್ದೇನೆ. ಈ ಪ್ರೇಮಕಾವ್ಯ ಹಗಲಿರುಳೂ ಎಡೆಬಿಡದೇ ನನ್ನ ಕಾಡಿದೆ. ಜ್ವರದಂತೆ ಆವರಿಸಿಕೊಂಡಿದೆ. ಅದರ ಪ್ರಭಾವದಿಂದ ಹೊರಬರುವಲ್ಲಿ ನಿಜಕ್ಕೂ ಸೋತಿದ್ದೇನೆ. ಅವರ ಈ ಬೃಹತ್ ಪ್ರೇಮಕಾವ್ಯ ಜಗತ್ತಿನ ಸಮಸ್ತ ಪ್ರೇಮಿಗಳ ಪಾಲಿಗೆ ‘ಪ್ರೇಮ ಸಂವಿಧಾನ, ಪ್ರೇಮ ಭಗವದ್ಗೀತೆ!’. ಇಂಥದೊಂದು ಕೃತಿಯ ಮೂಲ ಹಸ್ತಪ್ರತಿಯನ್ನು ಅಕ್ಕರೆಯಿಂದ ನನ್ನ ಕೈಗಿತ್ತು ‘ನೀನೆ ನನ್ನ ಮಹಾಕಾವ್ಯದ ಮೊದಲ ಓದುಗನಾಗು’ ಎಂದು ಹೇಳಿ, ಮೊದಲ ಓದಿಗೆ ಸುವರ್ಣಾವಕಾಶ ಒದಗಿಸಿದ ಪ್ರೀತಿಯ ಮಹಾಗುರು, ವಿದ್ವಾಂಸರಾದ ಡಾ. ಹನುಮಕುಮಾರ ಹೆಗಡೆಯವರಿಗೆ ಬರೀ ಧನ್ಯವಾದಗಳನ್ನು ಹೇಳಿದರೆ ಸಾಲದು. ನನ್ನೆಡೆಗೆ ಅವರಿಗಿರುವ ಪ್ರೀತಿ ವಿಶ್ವಾಸ ದೊಡ್ಡದು. ಅದನ್ನು ಪದಗಳಲ್ಲಿ ಸೆರೆಹಿಡಿಯಲಾರೆ. ಸಾಕ್ರಟೀಸ್‍ಗೊಬ್ಬ ಪ್ಲೇಟೋಯಿದ್ದಂತೆ ಹೆಗಡೆಯವರಿಗೆ ನಾನು. ಗುರುವಿನ ಹೃದಯದೊಳಗೆ ‘ಅವಳು’ ಬೆರೆತಿರುವಂತೆ ನನ್ನೊಳಗೆ ಈ ‘ಗುರುವು’ ಬೆರೆತಿದ್ದಾರೆ. 


ಹೆಗಡೆಯವರು ಎಡಪಂಥೀಯರಲ್ಲ, ಹಾಗಂತ ಬಲಪಂಥೀಯರೂ ಅಲ್ಲ. ಅವರದು ಅವರೇ ಸೃಷ್ಟಿಸಿದ ಪಂಥ... ಅದು ಪ್ರೇಮಪಂಥ..! ಪ್ರೇಮವೇ ಮೂರ್ತರೂಪವೆತ್ತಂತಿರುವ ಹೆಗಡೆಯವರು ಪ್ರೇಮಲೋಕದ ಆಳ ಹರವುಗಳನ್ನು ಅಳೆದವರು. ಏಕಾಂಗಿ ವೀರನಂತೆ ಪ್ರೇಮದ ದಿಗಂತದೆಡೆಗೆ ಅವಳ ನೆನಪುಗಳನ್ನು ಹೊತ್ತು ಒಬ್ಬಂಟಿಯಾಗಿ ನಡೆದವರು. ಪ್ರೇಮದ ರಹದಾರಿಯಲ್ಲಿ ಹೆಗಡೆಯವರ ಈ ಪ್ರೇಮಕಾವ್ಯ ಒಂದು ಮಹತ್ತರ ಮೈಲಿಗಲ್ಲು. ಈ ಮಹಾಕಾವ್ಯದಲ್ಲಿ ಸೌಂದರ್ಯ, ಪ್ರೇಮ, ಜ್ಞಾನ ಎಂಬ ತ್ರಿಕಾಂಡಗಳಿದ್ದರೂ ಸೌಂದರ್ಯ ಮತ್ತು ಜ್ಞಾನದಲ್ಲಿ ಕೂಡಾ ಪ್ರೇಮ ಇದೆ. ಹೀಗಾಗಿ ಪ್ರೇಮವೆಂಬುದು ಪ್ರತಿ ಪುಟ, ಪ್ರತಿ ಪದ್ಯ, ಪ್ರತಿ ಅಕ್ಷರದಲ್ಲಿ ಭೋರ್ಗೆರೆದಿದೆ. ಇದೊಂದು ‘ಮಹಾನ್ ಪ್ರೇಮಿಯೊಬ್ಬನ ಮಹಾನ್ ಪ್ರೇಮಕಾವ್ಯ’. ‘ಸೌಂದರ್ಯ ಕಾಂಡ’ ಮತ್ತು ‘ಪ್ರೇಮ ಕಾಂಡ’ದಲ್ಲಂತೂ ಶೃಂಗಾರ ರಸವೆಂಬುದು ಪ್ರತಿಸಾಲು, ಪ್ರತಿ ಅಕ್ಷರದಲ್ಲಿ ಜಿನುಗಿಬಿಟ್ಟಿದೆ. ಶೃಂಗಾರ ಬಗೆಗಿನ ಅವರ ಕಲ್ಪನೆಯ ವಿಸ್ತಾರ ಓದುಗರನ್ನು ಮೈಬೆಚ್ಚಗಾಗುವಂತೆ ಮಾಡಿಬಿಡುತ್ತದೆ. ಪ್ರೇಮ, ಕಾಮ, ಮೋಹ, ಮಾಧುರ್ಯತೆಗಳನ್ನೆಲ್ಲಾ ಹಸಿಹಸಿಯಾಗಿ ಬರೆದುಬಿಟ್ಟಿದ್ದಾರೆ. 12 ನೇ ಶತಮಾನದ ಶಿವಶರಣರು ತಮ್ಮ ಕರಸ್ಥಲದಲ್ಲಿ ಲಿಂಗಪೂಜೆ ಮಾಡಿದರೆ, ಈ ಆಧುನಿಕ ಪ್ರೇಮಶರಣ ಇನ್ನೆಲ್ಲೋ ಲಿಂಗಪೂಜೆ ಮಾಡುತ್ತೇನೆ ಎನ್ನುವ ಕಲ್ಪನೆಯು ಓದುಗರನ್ನು ಬೆರಗುಗೊಳಿಸುತ್ತದೆ. ಇಂತಹ ಸಾವಿರಾರು ಸಾಲುಗಳು ಕಾವ್ಯದುದ್ದಕ್ಕೂ ಕಾಣಿಸುತ್ತವೆ. ಹೆಗಡೆಯವರ ಭರಪೂರ ರಸಿಕತೆಯು ಸೃಜನಶೀಲತೆಯೊಂದಿಗೆ ಬೆರೆತು ದೇಹ ಮೀಮಾಂಸೆ ಹಾಗೂ ಪ್ರೇಮ ಮೀಮಾಂಸೆಗೆ ಹೊಸದಿಕ್ಕನ್ನೇ ತೋರಿಸಿದೆ. ಕಾವ್ಯವನ್ನು ಓದುತ್ತಾ ಹೋದಂತೆಲ್ಲಾ ಓದುಗರು ಅಕ್ಷರಶಃ ಶೃಂಗಾರ ರಸದಲ್ಲಿ ಮುಳುಗಿಬಿಡುತ್ತಾರೆ.  ಗಝಲ್ ದಂತಕಥೆ ‘ಮಿರ್ ತಕಿ ಮಿರ್’ ತನ್ನ ಕಲ್ಪನಾ ಪ್ರೇಯಸಿಯನ್ನು ಕುರಿತು ತನ್ನ ಪ್ರೇಮವನ್ನೆಲ್ಲಾ ಅವಳಿಗೆ ಅರ್ಪಿಸುವವನಂತೆ ಭಾವತೀವ್ರತೆಯಲ್ಲಿ ಗಝಲ್ ಬರೆದಿರುವಂತೆ ಹೆಗಡೆಯವರು ಕೂಡಾ ತಮ್ಮ ವಾಸ್ತವ ಪ್ರೇಯಸಿಯನ್ನು ಕುರಿತು ಅಷ್ಟೇ ತೀವ್ರತೆಯೊಂದಿಗೆ ಈ ಮಹಾಕಾವ್ಯವನ್ನು ಬರೆದಿದ್ದಾರೆ. ತನ್ನ ಪ್ರೇಯಸಿಗೆ ಹೇಳಲಾಗದ ಅವ್ಯಕ್ತ ಭಾವನೆಗಳನ್ನು ಒಟ್ಟುಗೂಡಿಸಿ ಅವಳಿಗೆ ಬರೆದಿರುವ ಬೃಹತ್ ಪ್ರೇಮಪತ್ರವೇ ಈ ಮಹಾಕಾವ್ಯ..! ಇದನ್ನು ಪ್ರಕಟಿಸಿ ಎಲ್ಲರಿಗೂ ಹಂಚುವ ಮೂಲಕ ಪ್ರೇಮದಾಸೋಹಿಯಾಗಿದ್ದಾರೆ. ಪ್ರೇಮವನ್ನು ಕುರಿತಂತೆ ಹನುಮಕುಮಾರ ಹೆಗಡೆಯವರ ಚಿಂತನೆಗಳ ಒಟ್ಟು ಮೊತ್ತವೇ “ಹನುಮಿಸಂ..!”. ಇದು ಉಳಿದ ‘ಇಸಂ’ಗಳಿಗಿಂತ ತುಂಬಾ ವಿಭಿನ್ನವಾದುದು ಹಾಗೂ ಮನುಷ್ಯನಿಗೆ ಅತ್ಯಗತ್ಯವಾದುದು. 


    ಜಗತ್ತಿನಲ್ಲಿಯೇ ಅತ್ಯಂತ ಪ್ರಾಚೀನವಾದ ಸಾಹಿತ್ಯ ‘ನಾಲ್ಕು ವೇದಗಳು’. ಅದರಲ್ಲಿ ಮೊದಲನೇ ವೇದ ‘ಋಗ್ವೇದ’. ಇದರಲ್ಲಿ 1028 ಸೂಕ್ತಗಳಿವೆ. ‘ಪ್ರೇಮ’ವೆಂಬುದು ‘ಪಂಚಮವೇದ’ ಎಂದು ಭಾವಿಸುವ ಹೆಗಡೆಯವರು ತಮ್ಮ ಈ ಪ್ರೇಮ ಕಾವ್ಯವನ್ನು ‘ಋಗ್ವೇದ’ಕ್ಕೆ ಸರಿಸಮವಾಗಿ ನಿಲ್ಲಿಸಿ ನಾಲ್ಕು - ನಾಲ್ಕು ಸಾಲಿನ 1028 ಕವಿತೆಗಳನ್ನು ಬರೆದು ‘ಪಂಚಮ ವೇದ’ವನ್ನಾಗಿಸಿದ್ದಾರೆ. ಕಾವ್ಯ ಎಲ್ಲರಿಗೂ ಒಲಿಯುವುದಿಲ್ಲ. ಅದರಲ್ಲೂ ಪ್ರೇಮವನ್ನೇ ಕುರಿತು 1028 ಕವಿತೆಗಳನ್ನು ಬರೆಯುವುದು ಕೆಲವರಿಗಷ್ಟೇ ಸಾಧ್ಯ. ಅದರಲ್ಲೂ ಸಾಹಿತ್ಯ ಓದಿನ ಹಿನ್ನೆಲೆಯಿಲ್ಲದೇ ಇಂಥ ಬೃಹತ್ ಪ್ರೇಮಕಾವ್ಯ ರಚಿಸುವುದು ಕೇವಲ ಹನುಮಕುಮಾರ ಹೆಗಡೆಯವರಿಂದ ಮಾತ್ರ ಸಾಧ್ಯ! 1028 ಕವಿತೆಗಳ, 4112 ಸಾಲುಗಳ ಈ ಪಂಚಮವೇದ ಕನ್ನಡ ಕಾವ್ಯಲೋಕದಲ್ಲೊಂದು ವಿಶಿಷ್ಟ ವಿಸ್ಮಯ ಕೃತಿಯೇ ಸರಿ. ಕನ್ನಡ ಸಾಹಿತ್ಯ ಚರಿತ್ರೆಯ ಇತಿಹಾಸದಲ್ಲಿ ಕೇವಲ ಪ್ರೇಮವನ್ನೇ ಕುರಿತು ಇಂತಹ ಮತ್ತೊಂದು ಮಹಾಕಾವ್ಯ ರಚಿತವಾಗಿರಲಾರದು. ಈ ಹಿನ್ನೆಲೆಯಲ್ಲಿ ಇದೊಂದು ಮಹತ್ವದ ಅಪರೂಪದ ಕೃತಿ. ಹೆಗಡೆಯವರ ಅಕ್ಷರ ಬತ್ತಳಿಕೆಯಿಂದ ಇನ್ನಷ್ಟು ವಿಭಿನ್ನವಾದ ವಿಶಿಷ್ಟ ಕೃತಿಗಳು ಹೊರಬರಲಿ. ಅವು ನಮ್ಮಂಥ ಓದುಗರನ್ನು ಆವರಿಸಿಕೊಳ್ಳಲಿ ಎಂದು ಆಶಿಸುವೆ.    

  

                                                                                                                                        💗    -         ರಾಜ್   


      ‘ನನ್ನೊಳಗಿನ ಅವಳು’ ಎಂಬ ಈ ಮಹೋನ್ನತ ಪ್ರೇಮಕಾವ್ಯದ ಪ್ರತಿಗಳಿಗಾಗಿ ಸಂಪರ್ಕಿಸಿ : 


 ಶ್ರೀ ಸುನೀಲ್ ಕುಮಾರ್, 

ಪ್ರಕಾಶಕರು, 

ಸುವ್ವಿ ಪಬ್ಲಿಕೇಷನ್ಸ್ , 

ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಗಾಮ, 

ಶಿಕಾರಿಪುರ – ತಾಲೂಕು, ಶಿವಮೊಗ್ಗ – ಜಿಲ್ಲೆ. 

ಮೊಬೈಲ್ ನಂ: 96200 83614,  E-Mail: suvvibooks@gmail.com


ಕಾಮೆಂಟ್‌ಗಳಿಲ್ಲ: