ಭಾನುವಾರ, ಫೆಬ್ರವರಿ 23, 2020

ಕಾವ್ಯಲೋಕದಲ್ಲಿ ಪ್ರಜ್ವಲಿಸಿದ ಪ್ರೇಮಜ್ವಾಲೆಯ ಹೆಸರೇ ಮನೀಷಾ..!



ಪ್ರೇಮಜ್ವಾಲೆ ಮನೀಷಾ ಅವರೊಂದಿಗೆ ಒಂದು ಅಪರೂಪದ ಫೋಟೋ..!


ಅವು ಪಿಎಚ್. ಡಿ ಯ ಎರಡನೇ ವರ್ಷದ ದಿನಗಳು. ಮೊದಲನೆ ವರ್ಷ ಸಿಟಿಯಲ್ಲಿ ಹಾಸ್ಟೆಲ್ ಇತ್ತು. ಆಗ ಗೆಳೆಯ ರಾಮಕೃಷ್ಣ ಕುಸನೂರಿನಲ್ಲಿ ರೂಂ ಮಾಡಿಕೊಂಡಿದ್ದ. ಆಗ ಅವನ ಪರಿಚಯವಿತ್ತಾದರೂ ಆತ್ಮೀಯತೆ ಇರಲಿಲ್ಲ. ಎರಡನೇ ವರ್ಷ ಸಿಟಿಯಿಂದ ಕ್ಯಾಂಪಸ್ ಗೆ ಹಾಸ್ಟೆಲ್ ಶಿಫ್ಟ್ ಆದಾಗ ರಾಮಕೃಷ್ಣ ಹಾಸ್ಟೆಲ್ ಗೆ ಬಂದ, ಆತ್ಮೀಯನಾದ. ಈ ಆತ್ಮೀಯತೆಗೆ ಅವನ ಸಂಪನ್ನ ಗುಣ ಸ್ವಭಾವ ಮತ್ತು ಅವನು ನನ್ನ ಜಿಲ್ಲೆಯವನೆಂಬ ಕಾರಣವೂ ಇರಬಹುದು. ಅವನ ಬಗ್ಗೆ ಫೇಸ್ ಬುಕ್ ನಲ್ಲಿ ಎರಡು ಲೇಖನಗಳನ್ನು ಬರೆದು ನನ್ನ ಪ್ರೀತಿಯ ಅಗಾಧತೆ ವ್ಯಕ್ತಪಡಿಸಿದೆ. ಕ್ಯಾಂಪಸ್ ನಲ್ಲಿದ್ದ "ಕುವೆಂಪು ಕ್ಯಾಂಟೀನ್" ಅವನ ಪಾಲಿನ ಪರ್ಮನೆಂಟ್ ಅಡ್ಡೆಯಾಗಿತ್ತು. ಯಾವಾಗಾದ್ರೂ ಕರೆಮಾಡಿದ್ರೆ 'ಕ್ಯಾಂಟೀನ್ ನಲ್ಲಿರುವೆ, ಬರ್ರಿ' ಅಂತಿದ್ದ. ಅಲ್ಲಿ ಬೈಟು ಟೀ ಕುಡಿಯುತಿದ್ದೆವು. ಜೊತೆಗೆ ಬಸಯ್ಯ, ರೇವಣಯ್ಯ ಇದ್ದಿದ್ರೆ ಮೂರರಲ್ಲಿ ನಾಲ್ಕು ಟೀ ಮಾಡಿ ಕುಡಿಯುತ್ತಿದ್ದೆವು. ಕೆಲವೊಮ್ಮೆ ಆರೇಳು ಜನ ನಮ್ಮೊಂದಿಗೆ ಸೇರ್ಪಡೆಯಾಗುತ್ತಿದ್ದರು. ಅಲ್ಲಿ ಟೀ ಕುಡಿಯೋದು ನೆಪ ಮಾತ್ರ. ಅರ್ಧರ್ಧ ಟೀ ಕುಡಿದು ತಾಸುಗಟ್ಟಲೇ ಹರಟೆ ಹೊಡೆಯುತ್ತಾ, ಹಾಡು ಕೇಳುತ್ತಾ ಕುಳಿತುಬಿಡುತ್ತಿದ್ದೆವು.

ಕ್ಯಾಂಪಸ್ಸಿನಲ್ಲಿ, ಲೈಬ್ರರಿಯಲ್ಲಿದ್ದಾಗ ರಾಮಕೃಷ್ಣನಿಗೆ ಆಗಾಗ ಫೋನ್ ಕರೆ ಬರುತ್ತಿತ್ತು. ''ನಮ್ ತಮ್ಮ ಕಾಲ್ ಮಾಡಿದ್ದಾನೆ, ಕ್ಯಾಂಟೀನ್ ನಲ್ಲಿ ಕಾಯ್ತಾ ಇದಾನೆ" ಅಂದು ಅಲ್ಲಿಂದ ತಕ್ಷಣ ಹೊರಡುತ್ತಿದ್ದ. ರಾಮಕೃಷ್ಣನ ತಮ್ಮ ಕೂಡಾ ಇಲ್ಲೇ ಓದ್ತಾ ಇದಾನಾ? ಹೇಳೇ ಇಲ್ವಲ್ಲಾ ಇಷ್ಟು ದಿನ... ಅಂತ ಅನ್ನಿಸಿ ಸುಮ್ಮನಾದೆ. ಆಮೇಲೆ ನಮ್ಮ ತಮ್ಮ ಹಾಗಂದ, ಹೀಗಂದ ಅಂತ ತಮ್ಮನ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದ. "ಯಾರೋ ನಿನ್ ತಮ್ಮ? ಯಾವ ಡಿಪಾರ್ಟ್ಮೆಂಟ್? ನಂಗೆ ತೋರಿಸಿಲ್ವಲ್ಲ...? ಅಂದೆ. "ಅದಕ್ಕೇನಂತೆ, ಪರಿಚಯ ಮಾಡಿಸ್ತೀನಿ ಬಿಡಿ" ಅಂದ. ಒಮ್ಮೆ ಕ್ಯಾಂಟೀನ್ ನಲ್ಲಿ ಅವನೊಂದಿಗೆ ಕೂತಿದ್ದಾಗ ಅವನಿಗೆ ಕರೆ ಬಂತು. 
"ಎಲ್ಲಿದ್ದೀರಿ?" ಅಂತ ಕೇಳಿರಬೇಕು ಆ ಕಡೆಯ ಧ್ವನಿ. 
"ಕ್ಯಾಂಟೀನ್ ನಲ್ಲಿದ್ದೇನೆ" ಬನ್ನಿ ಅಂದ. 
"ಯಾರೋ ಅದು..? ಬಸಯ್ಯನಾ ” ಕೇಳಿದೆ. 
"ಅಲ್ಲ, ನನ್ ತಮ್ಮ" ಅಂದ.

ತಕ್ಷಣ ಚುರುಕಾದೆ. ಇವತ್ತಾದ್ರೂ ಆ ತಮ್ಮನ ನೋಡಬೇಕು ಅಂತ ಕುತೂಹಲಭರಿತನಾಗಿ ಕೂತೆ. ದೂರದಲ್ಲಿ ಜೀನ್ಸ್ ಪ್ಯಾಂಟ್, ಅರ್ಧಕ್ಕೆ ತೋಳು ಮಡಚಿದ ಜೀನ್ಸ್ ಶರ್ಟ್ ಧರಿಸಿದ್ದ, ಕನ್ನಡಕ ಹಾಕಿಕೊಂಡಿದ್ದ ಗುಂಗುರು ಕೂದಲಿನ ಒಂದು ಆಕೃತಿ ಪುಟುಪುಟು ಹೆಜ್ಜೆಹಾಕಿಕೊಂಡು ಬರುತ್ತಿರುವುದು ಕಾಣಿಸಿತು. ಹತ್ತಿರ ಬರುತ್ತಿದ್ದಂತೆ ರಾಮಕೃಷ್ಣನ ತುಟಿಯಲ್ಲಿ ಮುಗುಳ್ನಗೆಯೊಂದು ಮಿಂಚಿತು. ಆ ವ್ಯಕ್ತಿ ನಮ್ಮ ಟೇಬಲ್ ಗೆ ಬಂತು ಕೂತಿತು. ಇಬ್ಬರ ನಡುವೆ ಮಾತುಕತೆ ಓತಪ್ರೋತವಾಗಿ ನಡೆಯಿತು. ನಾನು ಸುಮ್ಮನೇ ಗಮನಿಸುತಿದ್ದೆ. ಮಾತಿನ ಮಧ್ಯೆ ರಾಮಕೃಷ್ಣ ಅವರಿಗೆ ನನ್ನ ಪರಿಚಯಿಸಿದ. ಮತ್ತು ಅವರು ರಾಮಕೃಷ್ಣನ ತಮ್ಮನಾಗಿದ್ದ..! 
ಆ ತಮ್ಮನ ಹೆಸರೇ..... ಮನೀಷಾ ಪಾಟೀಲ್ ಅಲಿಯಾಸ್ ಸಹನಾ...! ಅಲಿಯಾಸ್ ಲಾMort..!
ಹೌದು, ರಾಮಕೃಷ್ಣನ ಪಾಲಿಗೆ ಮನೀಷಾ ತಮ್ಮನೇ...! 

ಚೊಚ್ಚಲ ಕೃತಿ ಓದುವ ಸಂಭ್ರಮದಲ್ಲಿ ಲಾ Mort


ಆಮೇಲೆ ನನಗೂ ಆತ್ಮೀಯರಾದರು. ಗುಮ್ಮಟ ನಗರಿ ಬಿಜಾಪುರದಿಂದ ಎಂ.ಎಸ್ಸಿ (Psychology) ಓದಲು ಸಿಯುಕೆಗೆ ಬಂದವರು ಅವರು. ನನ್ನ ಪ್ರೀತಿಯ ಕವಿ ಜಯಂತ್ ಕಾಯ್ಕಿಣಿಯವರು ಓದಿದ್ದು ಎಂ.ಎಸ್ಸಿ (Bio Chemistry) ನೇ. ಆದರೆ ಮಾಡಿದ್ದು ಮಾತ್ರ ಸಾಹಿತ್ಯ ಕೃಷಿನೇ. ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿರದಿದ್ದರೂ ಅಚ್ಚರಿಯೆನಿಸುವ ಕಥೆ, ಕಾವ್ಯ ರಚಿಸುವ ಮೂಲಕ ಸಾಹಿತ್ಯ ಲೋಕದಲ್ಲಿ ಮಿಂಚಿದ್ದಾರೆ. ಸಿನೆಮಾ ಕ್ಷೇತ್ರದಲ್ಲಂತೂ "ಮಧುರ ಗೀತೆಗಳ ಮಾಂತ್ರಿಕ" ಎಂದೇ ಖ್ಯಾತರಾಗಿದ್ದಾರೆ. ನನ್ನ ಪಾಲಿಗೆ ಅವರೊಂದು ಅಚ್ಚರಿ. ವಿಜ್ಞಾನ ಓದಿಕೊಂಡಿದ್ದರೂ ಕನ್ನಡದಲ್ಲಿ ಎಷ್ಟು ಸೊಗಸಾಗಿ ಬರೆದಿದ್ದಾರೆ...! ಈ ಮಾತು ಈ ಲೇಖನದಲ್ಲಿ ಯಾಕೆ ಹೇಳುತ್ತಿದ್ದೇನೆ ಅಂದ್ರೆ.... 
ಮನೀಷಾ ಕೂಡಾ ಜಯಂತ್ ಕಾಯ್ಕಿಣಿಯವರಂತೆ ಎಂ.ಎಸ್ಸಿ(Psychology) ಓದಿದವರು. ಅದರ ಜೊತೆಗೆ ಸಾಹಿತ್ಯದೆಡೆಗೆ ತೀವ್ರ ಮೋಹವನ್ನು ಬೆಳೆಸಿಕೊಂಡವರು. ಈ ಮೋಹ ಬರೀ ಓದಿಗೆ ಮಾತ್ರ ಸೀಮಿತವಾಗಿಲ್ಲ. ಅಸಂಖ್ಯಾತ ಕವಿತೆ, ಗಝಲುಗಳನ್ನು ಬರೆದಿದ್ದಾರೆ (ನಾನೇ ಅವರ ಸುಮಾರು 150-200 ಕವಿತೆ, ಗಝಲುಗಳನ್ನು ವಾಟ್ಸಾಪ್ಪಿನಲ್ಲಿ ಸಂಗ್ರಹಿಸಿಟ್ಟಿದ್ದೆ. ಅವರು ಅವುಗಳನ್ನು ಕಳೆದುಕೊಂಡು ನನ್ನಲ್ಲಿ ವಿನಂತಿಸಿಕೊಂಡಾಗ ಮರಳಿ ಅವುಗಳನ್ನೆಲ್ಲಾ ಅವರಿಗೆ ಕಳಿಸಿದ್ದೆ).

Your quote app ನಲ್ಲಿ ಅವರ ಕಾವ್ಯದ ಚೆಲುವನ್ನು ಆಸ್ವಾದಿಸಬಹುದು. ಕಾವ್ಯ ಬರೆಯುವಾಗ ಇರುವ ತುಡಿತ ಅವುಗಳನ್ನು ಪ್ರಕಟಿಸುವ ಬಗ್ಗೆ ಇಲ್ಲ ಎಂಬುದನ್ನು ವಿಷಾದದಿಂದಲೇ ಹೇಳಬೇಕಾಗಿದೆ. ಹೌದು, ಅವರ ಅನೇಕ ಕಾವ್ಯಗಳು ವಾಟ್ಸಾಪ್ ನಲ್ಲಿ ಹುಟ್ಟಿ, ನಮ್ಮಂಥ ಕಾವ್ಯಪ್ರಿಯರಿಗೆ ಕಳಿಸಿ ಅಲ್ಲೇ ಕಣ್ಮುಚ್ಚಿವೆ. ಅವರು ಇದುವರೆಗೆ ಬರೆದ ಕಾವ್ಯಗಳನ್ನು ಒಟ್ಟುಗೂಡಿಸಿದ್ದರೆ ಸಾವಿರ ಗಡಿ ದಾಟುತ್ತಿತ್ತೇನೋ... ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮುಂದಿನ ದಿನಗಳಲ್ಲಾದರೂ ಅವರು ತಮ್ಮ ಕವಿತಾ ಸಂಕಲನವೊಂದನ್ನು ಪ್ರಕಟಿಸಲಿ ಎಂಬ ಪ್ರೀತಿಯ ಒತ್ತಾಯ ನನ್ನದು. ಅವರ ಬಹುತೇಕ ಕವಿತೆಗಳಿಗೆ ಪ್ರೂಫ್ ನೋಡಿ ಸರಿಪಡಿಸಿದ್ದೇನೆ ಎನ್ನುವ ಖುಷಿ, ಹೆಮ್ಮೆ ನನಗಿದೆ. ಈ ಮೂಲಕ ಅವರ ಅನೇಕ ಕವಿತೆಗಳ ಮೊದಲ ಓದುಗನಾಗಿದ್ದೇನೆ. 

ಅವರ ಕಾವ್ಯವನ್ನು ಓದಿದಾಗ ನಿಜಕ್ಕೂ ವಿಸ್ಮಯವೆನಿಸುತ್ತದೆ. ತಮ್ಮ ಬಹುತೇಕ ಕಾವ್ಯಗಳಲ್ಲಿ "ಸಾಹೀಬಾ... ಸಾಹೀಬಾ..." ಎಂದು ವಿಲಾಪಿಸುತ್ತಲೇ ತಮ್ಮೆದೆಯೊಳಗಿನ ತೀವ್ರತರವಾದ ಪ್ರೇಮವನ್ನು ಸ್ಫೋಟಿಸಿಬಿಡುತ್ತಾರೆ. ಅವರ ಪ್ರೇಮಕಾವ್ಯಗಳು ಶಾಂತವಾಗಿ ಜುಳುಜುಳು ಹರಿಯುವ ಝರಿಯ ನೀರಲ್ಲ. ಅದು ಧುಮ್ಮಿಕ್ಕಿ ಭೋರ್ಗೆರೆಯುವ ಕಡಲ ಪ್ರವಾಹ. (ಲಭ್ಯವಿರುವ ಅವರ ಕಾವ್ಯಗಳ ಬಗ್ಗೆ ಸಮಗ್ರವಾಗಿ ಇನ್ನೊಂದು ಲೇಖನ ಬರೆಯುವೆ.) ಅವರ ಕಾವ್ಯ ಓದುವಾಗ ಚನ್ನಮಲ್ಲಿಕಾರ್ಜುನನೆಡೆಗೆ ಅಕ್ಕಮಹಾದೇವಿಗಿದ್ದ ಪ್ರೀತಿಬೆರೆತ ಹಂಬಲ, ಶ್ರೀಕೃಷ್ಣನೆಡೆಗೆ ಮೀರಾಳಿಗಿದ್ದ ಭಕ್ತಿ ಬೆರೆತ ಪ್ರೇಮದಂತೆ ಭಾಸವಾಗುತ್ತದೆ. ಕೆಲವು ಕಾವ್ಯಗಳಂತೂ ಸಾಹಿರ್ ಲೂಧಿಯಾನ್ವಿಯೆಡೆಗಿದ್ದ ಅಮೃತಾ ಪ್ರೀತಂ ಳ ಪ್ರೇಮಪ್ರಲಾಪವೇ ಅಕ್ಷರರೂಪು ಪಡೆದಿದೆ ಎನಿಸುತ್ತದೆ. ಸಾಹೀಬಾ ನ ಸ್ಥಾನದಲ್ಲಿ ಒಂದು ಕಗ್ಗಲ್ಲು ಇದ್ದಿದ್ದರೂ ಅದು ಇವರ ಕಾವ್ಯದಲ್ಲಿರುವ ಪ್ರೇಮದ ತೀವ್ರತೆಗೆ ಕರಗಿ ನೀರಾಗಿಬಿಡುತ್ತಿತ್ತೇನೋ... ಅಂತ ಅನ್ಸುತ್ತೆ. ಕರಗಲಾರದ ಆ ನಿಷ್ಕರುಣಿ ನಿರ್ದಯಿ ಸಾಹೀಬಾನಿಗೊಂದು ಧಿಕ್ಕಾರವಿರಲಿ.

ಸಾಹೀಬಾ... ಸಾಹೀಬಾ... ಎಂದು ಮಿಡಿಯುವ ಅವರ ಕಾವ್ಯಗಳಲ್ಲಿ ಪ್ರೇಮಕ್ಕಾಗಿ ಪರಿತಪಿಸುವ ಭಾವವಿದ್ದಂತೆ ಅಲ್ಲಿ ಸಿಗದಿದ್ದಕ್ಕಾಗಿ ಅನುಭವಿಸುವ ನೋವು ಇದೆ..., ಕಣ್ಣೀರಿದೆ..., ಹಂಬಲಿಸುವಿಕೆಯಿದೆ..., ದುಃಖವಿದೆ..., ರೋಧನವಿದೆ..., ವಿಷಾದವಿದೆ..., ವಿರಹವಿದೆ..., ಆರ್ತನಾದವಿದೆ..., ಆಧ್ಯಾತ್ಮವಿದೆ..., ತತ್ವವಿದೆ..., ತಹತಹಿಕೆಯಿದೆ..., ಭಗ್ನಪ್ರೇಮವನ್ನು ಮತ್ತೆ ಸರಿಪಡಿಸಿ ಕಟ್ಟುವ ಛಲವಿದೆ..., ಕಾತುರದಿಂದ ಕಾಯುವ ಭಾವವಿದೆ..., ಕನವರಿಕೆಗಳಿವೆ..., ಈ ಜನ್ಮಕ್ಕೂ ಮುಗಿಯಲಾರದಷ್ಟು ಕನಸುಗಳಿವೆ..., ಆ ಕನಸುಗಳೆಲ್ಲಾ ನನಸಾಗಲಿ ಎಂಬ ಅದಮ್ಯ ಆಸೆಯಿದೆ..., ಸಂತನೊಬ್ಬನ ಪರಿತ್ಯಕ್ತ ಮನಸ್ಥಿತಿಯಿದೆ..., ಅಂತಿಮವಾಗಿ.... 
ಇಲ್ಲಿಗೆ ಇಷ್ಟು ಸಾಕು, ಸಾವು ಬಂದುಬಿಡಲಿ ಎಂದು ಸಾವಿಗಾಗಿ ಕಾಯುವ ನಿರೀಕ್ಷೆಯಿದೆ.... 

ಸಾಮಾನ್ಯರಲ್ಲಿ ಸಾಮಾನ್ಯರಂತೆ ಕಾಣುವ ಸರಳ ಜೀವಿ ಮನೀಷಾರಲ್ಲಿ ಇಂಥಾ ಭಾವನೆಗಳ ಭೋರ್ಗೆರೆತವಿದೆಯಾ...? ಎಂಬ ಅಚ್ಚರಿ ನನ್ನನ್ನು ಎಡೆಬಿಡದೇ ಕಾಡಿದೆ. ಹುಡುಗಿಯರಿಗೆ ಸೌಂದರ್ಯ ಪ್ರಜ್ಞೆಯೆಂಬುದು ಜನ್ಮತಃ ಬಂದಿರುತ್ತದೆ. ಆದರೆ ಮನೀಷಾ ಇದಕ್ಕೆ ವ್ಯತಿರಿಕ್ತ. ಸಾದಸೀದಾ..! ಅರ್ಧಕ್ಕೆ ತೋಳು ಮಡಚಿದ ಶರ್ಟ್, ಜೀನ್ಸ್ ಪ್ಯಾಂಟ್, ಹಾರಾಡುವ ತಲೆಗೂದಲಿಗೊಂದು ಹೇರ್ ಬ್ಯಾಂಡೋ, ಕ್ಲಿಪ್ಪೋ... ಅಷ್ಟೇ. ಟಿಪಿಕಲ್ ಹುಡುಗಿಯರಂತೆ ಕುಂಕುಮ, ಬಳೆ, ಹೂ, ಮೇಕಪ್.... ಊಹೂಂ... ಅವೆಲ್ಲದರಿಂದ ಬಹುದೂರ. ಹೀಗೆ ಹುಡುಗನಂತಿರುವುದರಿಂದಲೋ ಏನೋ ರಾಮಕೃಷ್ಣ ಅವರನ್ನು ತಮ್ಮ ಎಂದು ಸ್ವೀಕರಿಸಿದ್ದಾನೆ ಅನ್ಸುತ್ತೆ. ಮನೀಷಾ ನಸುಗಪ್ಪು ಮೈಬಣ್ಣದವರು. ಅವರ ಈ ಬಣ್ಣದ ಬಗ್ಗೆ ಎಷ್ಟೊಂದು ಪ್ರೀತಿಯೆಂದರೆ ವಾಟ್ಸಾಪ್ ನಲ್ಲಿ ಚಾಟ್ ಮಾಡುವಾಗಲೂ ಕೂಡಾ ಕಪ್ಪು ಬಣ್ಣದ Emoji ಗಳನ್ನೇ (ಕೈ, ಮುಖ, ಹುಡುಗಿ... ಇತ್ಯಾದಿ Emoji) ಬಳಸುತ್ತಾರೆ. ಅದು ಕಪ್ಪು ಬಣ್ಣದೆಡೆಗೆ ಅವರಿಗಿರುವ ಪ್ರೀತಿಯ ಔನತ್ಯ. “Black is beautiful” ಎಂಬ ನಿಲುವು ಅವರದ್ದು.

ಅವರ ಮತ್ತು ನನ್ನ ಸ್ನೇಹ ಒಡನಾಟದಲ್ಲಿ ಬೆಳೆದುದಲ್ಲ, ವಾಟ್ಸಾಪ್ ಚಾಟಿಂಗ್ ನಲ್ಲಿ ಬೆಳೆದದ್ದು. ಎದುರಿಗೆ ಸಿಕ್ಕಾಗ ಒಂದು ಮುಗುಳ್ನಗೆ, ಹಿತವಾದ ಒಂದೆರಡು ಮಾತು ಅಷ್ಟೇ. ರಾಮಕೃಷ್ಣನೊಂದಿಗೆ ನಾನಿದ್ದಾಗ ಮನೀಷಾ ನನ್ ಬಗ್ಗೆ ಹೇಳುತ್ತಿದ್ದರು... "ಇವ್ರು ಎದುರಿಗೆ ಮಾತಾಡಲ್ಲ, ವಾಟ್ಸಾಪ್ ನಲ್ಲಿ ಅಷ್ಟೇ ಮಾತಾಡ್ತಾರೆ" ಅಂತ. ಮೌನ ಮತ್ತು ಮುಗುಳ್ನಗೆ ನನ್ನ ಸ್ವಭಾವವಾಗಿತ್ತು. ಆದರೆ ಮನೀಷಾ ಅದಕ್ಕೆ ತದ್ವಿರುದ್ಧವಾಗಿದ್ದವರು. ಮಾತು ಮತ್ತು ನಗು ಸರಾಗವಾಗಿ ಹರಿಸುತ್ತಿದ್ದವರು. ತಮ್ಮ ಅಂತರಂಗದ ಅನೇಕ ವಿಷಯಗಳನ್ನು ನನ್ನೊಂದಿಗೆ ಹಂಚಿಕೊಂಡರು. ಖಾಸಗಿ ವಿಚಾರಗಳನ್ನು ಹೇಳಿಕೊಂಡರು. ಈ ಅವಧಿಯಲ್ಲಿ ತುಂಬಾ ಆತ್ಮೀಯರಾದರು. ಇಬ್ಬರ ಮಧ್ಯೆ ಸಣ್ಣ ಪುಟ್ಟ ಕಿಂಡಲ್ ಗಳು, ಛೇಡಿಸುವಿಕೆಗಳು ನಡೆಯುತ್ತಿದ್ದವು. ಒಮ್ಮೆ ಅದು ಅತಿರೇಕಕ್ಕೆ ಹೋಯ್ತೇನೋ... ಇಬ್ಬರೂ ಸಿಟ್ಟಿಗೆದ್ದು ಸಿಯುಕೆಯ ಗೇಟ್ ನಲ್ಲಿ ಶರಂಪರ ಜಗಳವಾಡಿದೆವು. ಅದೂ ಮೂರ್ನಾಲ್ಕು ನಿಮಿಷ ಅಷ್ಟೇ. ಇಬ್ಬರ ತಪ್ಪುಗಳು ಅರಿವಾಗಿ ಬಹುಬೇಗ ಕೂಲ್ ಆದೆವು. ಅವರು ಎಂ.ಎಸ್ಸಿ ಮುಗಿಸಿದ ನಂತರ ದೂರದ ಭಟ್ಕಳದಲ್ಲಿ ಒಂದು ವರ್ಷ ಕಾಲೇಜೊಂದರಲ್ಲಿ ಲೆಕ್ಚರರ್ ಆಗಿ ಕೆಲಸಮಾಡಿದರು. ಅಲ್ಲಿ ಸಮುದ್ರದೊಂದಿಗೆ ಸಖ್ಯ ಬೆಳೆಸಿಕೊಂಡು ಕಾವ್ಯ ಬರೆದರು. ಆಮೇಲೆ ಸಮುದ್ರ ಇವರ ಮೇಲೆ ಮುನಿಸಿಕೊಂಡಿತೋ... ಅಥವಾ ಇವರು ಸಮುದ್ರದ ಮೇಲೆ ಮುನಿಸಿಕೊಂಡರೋ ಗೊತ್ತಿಲ್ಲ... ಮತ್ತೆ ಗುಲ್ಬರ್ಗಕ್ಕೆ ಬಂದರು ಎಂದಿನಂತೆ ಕಾವ್ಯ ಪ್ರವಾಹ ಸೃಷ್ಟಿಸುತ್ತಾ.

ಮುಚ್ಚುಮರೆಯಿಲ್ಲದೇ ನೇರವಾಗಿ, ನಿರ್ಭಿಡೆಯಿಂದ ಮಾತಾಡುವ ಅವರ ಸ್ವಭಾವ ನನಗಿಷ್ಟ. ಉಳಿದಂತೆ ಅವರ ಕಾವ್ಯ ನನ್ನನ್ನು ಯಾವಾಗಲೂ ಮಧುರವಾಗಿ ಕಾಡುತ್ತಿರುತ್ತದೆ. ಅವರ ಕಾವ್ಯ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಹಿಂದಿ, ಇಂಗ್ಲಿಷ್ ನಲ್ಲೂ ಬರೆದಿದ್ದಾರೆ. ಈ ಮೂರು ಭಾಷೆಗಳಲ್ಲಿ ಅವರಿಗೆ ಅಗಾಧವಾದ ಪಾಂಡಿತ್ಯವಿದೆ. ಮತ್ತು ಅದು ನನ್ನನ್ನು ಯಾವಾಗಲೂ ಬೆರಗುಗೊಳಿಸುತ್ತೆ. ಒಂದು ಭಾಷೆಯನ್ನು ಮಾತಾಡುವುದೇ ಬೇರೆ.... ಅದನ್ನು ಸಾಹಿತ್ಯಿಕವಾಗಿ ಬಳಸಿಕೊಂಡು ಬರೆಯುವುದೇ ಬೇರೆ. ಇವೆರಡೂ ಮನೀಷಾಗೆ ಸಿದ್ಧಿಸಿವೆ. ಅವರ ಕವಿತೆಗಳನ್ನು ಓದಿ ಬಹುವಾಗಿ ಮೆಚ್ಚಿದ್ದೇನೆ. ಕೆಲವು ಕವಿತೆಗಳ ಬಗ್ಗೆ ನನ್ನ ಅನಿಸಿಕೆ ವ್ಯಕ್ತ ಪಡಿಸಿದಾಗ "ಬರೀ ಬಿಲ್ಡಪ್ ಹೇಳ್ತೀರಿ" ಅಂತ ಅನ್ನುತ್ತಿದ್ದರು. ಗೆಳೆಯರಾದ ರಾಮಕೃಷ್ಣ, ತೌಡಿ, ನೂರಂದಪ್ಪಾಜೀ, ಗೌಡ...... ಇವರೆಲ್ಲರ ಬಗ್ಗೆ ಬರೆದಾಗ "ಬರೀ ಬಿಲ್ಡಪ್ ಬರಿದೀರಿ. ಟಿಂಗಲ್ ಮಾಡ್ತಿದೀರಿ" ಅಂತ ಹೇಳುತ್ತಿದ್ದರು. "ನಾನು ಕನ್ನಡ ಸಾಹಿತ್ಯದ ವಿದ್ಯಾರ್ಥಿ, ಬರೆಯುವಾಗ ಸಹಜವಾಗಿಯೇ ಸ್ವಲ್ಪ ಅಲಂಕಾರಿಕವಾಗಿ ಬರೆಯುತ್ತೇನೆ, ಅಷ್ಟೇ. ಅದು ಬಿಲ್ಡಪ್ ಅಲ್ಲ" ಅಂತ ಅದಕ್ಕೆ ಸಮರ್ಥನೆ ಕೊಟ್ಟಾಗ ಅದನ್ನು ಒಪ್ಪುತ್ತಿರಲಿಲ್ಲ. ನನ್ನ ಗೆಳೆಯರ ಬಗ್ಗೆ ಬರೆಯುವಾಗ ಯಾರಿಗೂ ಮುಂಚಿತವಾಗಿ ತಿಳಿಸಿರಲಿಲ್ಲ. ಬರೆದ ಮೇಲೆ ಅವರಿಗೆ ಸರ್ಪ್ರೈಜ್ ನೀಡಿ ಖುಷಿಗೊಳಿಸಿದ್ದೆ. 
ಆದರೆ, ಮನೀಷಾಗೆ ಕೇಳಿದೆ "ನಿಮ್ ಬಗ್ಗೆ ಬರೀಬೇಕು" ಅಂತ. ಅವರು ಬೆಚ್ಚಿಬಿದ್ದರು. "ಬೇಡಿ, ಬರೀಬೇಡಿ" ಅಂತ ವಾರ್ನ್ ಮಾಡಿದರು.
"ಬರೆದರೆ ದೋಸ್ತಿ ಕಟ್ ಮಾಡುವೆ" ಎಂಬ ಬೆದರಿಕೆವೊಡ್ಡಿದರು. "ನೀವು ದೋಸ್ತಿ ಕಟ್ ಮಾಡಿದರೆ ಇನ್ನೊಂದು ಅತ್ಯುಗ್ರವಾಗಿ ಲೇಖನ ಬರೆಯುವೆ" ಎಂದು ನಾನೂ ಪ್ರತಿ ಬೆದರಿಕೆವೊಡ್ಡಿದೆ. ಆಮೇಲೆ ಅದೇನನ್ನಿಸಿತೋ.... 
"ಬರೆಯಿರಿ, ಆದ್ರೆ ಓವರ್ ಬಿಲ್ಡಪ್ ಬರೀಬೇಡಿ ಪ್ಲೀಸ್" ಅಂದರು. "ಓವರ್ರಾಗಿ ಯಾರ ಬಗ್ಗೆನೂ ಬರೆದಿಲ್ಲ, ನಿಮ್ ಬಗ್ಗೆ ಕೂಡಾ ಹಾಗೆ ಬರೆಯಲ್ಲ" ಎಂದು ಭರವಸೆ ಕೊಟ್ಟೆ. 
ಅವರಿಗೆ ಸಮಾಧಾನವಾಯ್ತೆನೋ.... ಸುಮ್ಮನಾದರು.
"ಆದ್ರೆ ಕೆಲವು ಸಲ ನನ್ನ ಪೆನ್ನು ನನ್ನ ಮಾತು ಕೇಳಲ್ಲ, ಅದೇ ನನ್ನ ಸಮಸ್ಯೆ" ಎಂದು ನನ್ನ ಅಸಹಾಯಕತೆ ವ್ಯಕ್ತಪಡಿಸಿದೆ. 
ತಲೆ ಚಚ್ಚಿಕೊಂಡಿರುವ ಕಪ್ಪು ಹುಡುಗಿಯ Emoji ಯೊಂದನ್ನು ಕಳಿಸಿ ಸುಮ್ಮನಾದರು. ಇಡೀ ಲೇಖನ ಬರೆಯುವಾಗ ರೆಕ್ಕೆ ಮೂಡಿಸಿಕೊಳ್ಳುತ್ತಿದ್ದ ನನ್ನ ಪೆನ್ನನ್ನು ತುಂಬಾ ನಿಯಂತ್ರಿಸಿ, ನಿರ್ದಯವಾಗಿ ಅದರ ರೆಕ್ಕೆಗಳನ್ನು ಕತ್ತರಿಸಿ ಬರೆದಿರುವೆ. ನನ್ನೊಳಗಿನ ಲೇಖಕನನ್ನು ಇಲ್ಲಿ ಹುಡುಕಬೇಡಿ. ಹೀಗಾಗಿ ಲೇಖನ ಹೇಗೆ ಮೂಡಿಬಂದಿದೆಯೋ ಎಂಬ ಆತಂಕ ನನ್ನಲ್ಲಿದೆ. ಓದಿ ನೀವೆ ಹೇಳಬೇಕು.

(ಇಡೀ ಲೇಖನವನ್ನು ಟೈಪಿಸಿ ಪೋಸ್ಟ್ ಮಾಡಬೇಕೆನ್ನುವ ಈ ಸಮಯದಲ್ಲಿ ಬಂದ ಸುದ್ದಿಯೇನೆಂದರೆ... "Your quote" app ನವರು ಮನೀಷಾ ಅವರ ಕವಿತೆಗಳ ಸಂಕಲನ ಪ್ರಕಟಿಸಿದ್ದಾರೆ (ಫೋಟೋ ನೋಡಿ). ಅದರ ಶೀರ್ಷಿಕೆ "ಪ್ರೇಮ ಮೃತ್ಯು". ಇವೆರಡು ಮನೀಷಾರನ್ನು ಕಾಡಿದ ಮತ್ತು ಕಾಡುತ್ತಿರುವ ವಿಷಯಗಳು ಎಂಬುದು ಗಮನಾರ್ಹ. ‘ಲಾMort’ ಎಂಬ ಕಾವ್ಯನಾಮದಲ್ಲಿ ಇದನ್ನು ಪ್ರಕಟಿಸಿದ್ದಾರೆ. ಬೆಲೆ ತುಂಬಾ ದುಬಾರಿಯಾದುದ್ದೇ... 599 ರೂ...! Your quote app online store ನಲ್ಲಿ ಲಭ್ಯವಿದೆ, ಆಸಕ್ತರು ಖರೀದಿಸಬಹುದು. ಮನೀಷಾ ತಮ್ಮ ಕಾವ್ಯಗಳನ್ನು ಕೃತಿಯ ರೂಪದಲ್ಲಿ ಪ್ರಕಟಿಸಿದ್ದೇ ಸಂತಸದ ವಿಷಯ. ಅದಕ್ಕಾಗಿ ಅವರಿಗೆ ಅಭಿನಂದಿಸುವೆ. ಅಂದಹಾಗೆ ‘La Mort’ ಎಂದರೆ ಫ್ರೆಂಚ್ ಭಾಷೆಯಲ್ಲಿ ‘ಸಾವು’ ಎಂದರ್ಥ..!)

ಎದೆಯಲ್ಲಿ ಈ ಶತಮಾನಕ್ಕೂ ಮುಗಿಯಲಾರದ ನೋವನ್ನಿಟ್ಟುಕೊಂಡರೂ ಸದಾ ನಗು ಚಿಮ್ಮಿಸುತ್ತಾ ಮಾತಾಡುವ ಮನೀಷಾ ಅವರ ಜೀವನಾನುಭವಗಳೇ ಅವರ ಕಾವ್ಯಕ್ಕೆ ಜೀವಾಳ. ಅವರ ಲೇಖನಿಯಿಂದ ಇನ್ನಷ್ಟು ಕಾವ್ಯಗಳು ಸೃಷ್ಟಿಯಾಗಲಿ, ಅವು ನಮ್ಮಂತ ಕಾವ್ಯಪ್ರೇಮಿಗಳನ್ನು ನಿರಂತರ ಹಿತವಾಗಿ ಕಾಡುತ್ತಿರಲಿ ಎಂದು ಪ್ರೀತಿಯಿಂದ ಹಾರೈಸುವೆ....

     ನಿಮ್ಮವನು,
       - ರಾಜ್

ಕಾಮೆಂಟ್‌ಗಳಿಲ್ಲ: