ಬುಧವಾರ, ಮೇ 1, 2019

ವಿಮರ್ಶೆಯ ನಿರ್ಲಕ್ಷ್ಯದಲ್ಲಿ ಅರಳಿದ ಜನಪ್ರಿಯ ಸಾಹಿತ್ಯ



ಕಳೆದ ಶತಮಾನದಲ್ಲಿ ಕನ್ನಡ ಸಾಹಿತ್ಯವು ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ... ಹೀಗೆ ವಿವಿಧ ಕಾಲಘಟ್ಟಗಳಲ್ಲಿ ವಿಫುಲವಾಗಿ ಬೆಳೆದಿದೆ. ಕನ್ನಡ ಸಾಹಿತ್ಯವನ್ನು ಸತ್ವಯುತವನ್ನಾಗಿ ಸಮೃದ್ಧಿಗೊಳಿಸಿದ್ದು ಈ ಪ್ರಕಾರಗಳು ಎಂಬುದು ನಿಜ. ಆದರೆ ಇವುಗಳಿಗಿಂತ ವೇಗವಾಗಿ ಮತ್ತು ವ್ಯಾಪಕವಾಗಿ ಬೆಳೆದಿದ್ದು ಜನಪ್ರಿಯ ಸಾಹಿತ್ಯ. ವಿಮರ್ಶೆಯ ದಿವ್ಯ ನಿರ್ಲಕ್ಷ್ಯದ ನಡುವೆಯೂ ಹುಲುಸಾಗಿ ಬೆಳೆದು ವ್ಯಾಪಕ ಓದುಗವರ್ಗವನ್ನು ಸೃಷ್ಟಿಸಿದೆ. ಜನಪ್ರಿಯ ಸಾಹಿತ್ಯಕ್ಕೆ ಆಯಸ್ಸು ಕಡಿಮೆ ಎಂಬ ಮಾತೊಂದಿದೆ. ಇದು ಸ್ವಲ್ಪಮಟ್ಟಿಗೆ ನಿಜವಿರಬಹುದಾದರೂ ಪರಿಪೂರ್ಣ ಸತ್ಯವಂತೂ ಅಲ್ಲ. ಇಂದಿಗೂ ಕೂಡಾ ರವಿಬೆಳಗೆರೆ, ಬಿ.ಎಲ್.ವೇಣು, ನಾಗತಿಹಳ್ಳಿ ಚಂದ್ರಶೇಖರ್, ಜೋಗಿ, ವಸುಧೇಂದ್ರರಂತಹ ಸಾಹಿತಿಗಳು ವ್ಯಾಪಕ ಓದುಗವರ್ಗವನ್ನು ಹೊಂದಿದ್ದಾರೆ. ಜನಪ್ರಿಯ ಸಾಹಿತ್ಯವೆಂದರೆ ಅತಿರಂಜಿತ, ಅಮೌಲಿಕವಾದುದು ಎಂಬ ಭಾವನೆ ನಮ್ಮ ವಿಮರ್ಶಾಲೋಕದ ಡಾನ್ ಗಳಲ್ಲಿದೆ. ಹೀಗಾಗಿಯೇ ಇಂದು ಜನಪ್ರಿಯ ಸಾಹಿತ್ಯವೆಂಬ ಹಣೆಪಟ್ಟಿ ಅಂಟಿಸಿಕೊಂಡ ಅನೇಕ ಅತ್ಯುತ್ತಮ ಕೃತಿಗಳು ಅಕಾಡೆಮಿ ಪ್ರಶಸ್ತಿಗಳಿಂದ ದೂರವೇ ಉಳಿಯಬೇಕಾದ ಪರಿಸ್ಥಿತಿ ಇದೆ. ಒಂದು ಕೃತಿಯ ಬಗ್ಗೆ ವ್ಯಾಪಕವಾಗಿ ವಿಮರ್ಶೆಯಾದರೆ ಮಾತ್ರ ಶ್ರೇಷ್ಠ ಕೃತಿ, ವಿಮರ್ಶೆಯಾಗದಿದ್ದರೆ ಅದು ಟೊಳ್ಳು ಎಂಬ ಕುರುಡು ನಂಬಿಕೆ ನಮ್ಮ ಸಾಹಿತ್ಯಿಕ ವಲಯದಲ್ಲಿದೆ. ಹೀಗಾಗಿ ಅನೇಕ ಯುವ ಸಾಹಿತಿಗಳು ತಮ್ಮ ಕೃತಿಯ ಬಗ್ಗೆ ಒಳ್ಳೆಯ ವಿಮರ್ಶೆಯನ್ನು ನಿರೀಕ್ಷಿಸುತ್ತಾರೆ. ಕೃತಿಯ ಬಗ್ಗೆ ವಿಮರ್ಶಕರು ಏನೇ ಹೊಗಳಿಕೆ ತೆಗಳಿಕೆ ವ್ಯಕ್ತಪಡಿಸಿದರೂ ಅದು ಅವರ ವೈಯಕ್ತಿಕ ಅಭಿಪ್ರಾಯ. ಅಂತಿಮವಾಗಿ ಒಂದು ಕೃತಿಯ ಮೌಲ್ಯವನ್ನು ನಿರ್ಧರಿಸುವವರು ಸಾಮಾನ್ಯ ಓದುಗರೇ. ದಲಿತ ಬಂಡಾಯ ಸಾಹಿತ್ಯವನ್ನು ಹೊರತುಪಡಿಸಿದರೆ ಉಳಿದೆಲ್ಲಾ ಸಾಹಿತ್ಯ ಪಂಥಗಳು ಕೇವಲ ಬೌದ್ಧಿಕ ವಲಯಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಜನಪ್ರಿಯ ಸಾಹಿತ್ಯ ಜನಸಾಮಾನ್ಯರ ಬದುಕಿನ ಭಾಗವಾಗಿ ಬೆಳೆಯಿತು. ವ್ಯಾಪಕ ಮಟ್ಟದಲ್ಲಿ ಓದುಗರನ್ನು, ಸಾಹಿತಿಗಳನ್ನು ಸೃಷ್ಟಿಸಿತು. ದುರಂತವೆಂದರೆ ಇಂದು ಜನಪ್ರಿಯ ಸಾಹಿತ್ಯವು ಸಾಹಿತ್ಯವೇ ಅಲ್ಲ, ಅದು ಅಮೌಲಿಕ ಎಂಬ ಭ್ರಮೆ ಬೌದ್ಧಿಕ ವಲಯದಲ್ಲಿದೆ. ಜನಪ್ರಿಯ ಸಾಹಿತ್ಯದ ಉಗಮದ ಎಳೆಯನ್ನು ನವೋದಯ ಸಾಹಿತ್ಯದ ಉಗಮದ ಪೂರ್ವದಲ್ಲೇ(1921 ರ ಹಿಂದೆ) ಕಾಣಬಹುದಾದರೂ ಅದು ವೇಗವಾಗಿ ಬೆಳೆದದ್ದು 80 ರ ದಶಕದಿಂದ ಈಚೆಗೆ.


 ಪ್ರಗತಿಶೀಲ ಸಾಹಿತ್ಯದ ಹರಿಕಾರರಾದ ಅನಕೃ, ತರಾಸು ಅವರು ಮೂಲತಃ ಜನಪ್ರಿಯ ಸಾಹಿತ್ಯದಿಂದಲೇ ಪ್ರಖ್ಯಾತರಾಗಿದ್ದವರು. ಇಂದಿಗೂ ಪ್ರಸ್ತುತವೆನಿಸುವ ಕಾದಂಬರಿಗಳನ್ನು ಬರೆದು ಜನಮಾನಸದಲ್ಲಿ ನೆಲೆನಿಂತ ತ್ರಿವೇಣಿ ಒಬ್ಬ ಜನಪ್ರಿಯ ಕಾದಂಬರಿಕಾರ್ತಿ. ಜನಪ್ರಿಯ ಸಾಹಿತ್ಯವು ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನೇನು ತರದಿದ್ದರೂ ಮನಸ್ಸು ಮನಸ್ಸುಗಳ ನಡುವೆ ಪ್ರೀತಿ, ಅಂತಃಕರಣ, ಮಾನವೀಯ ಮೌಲ್ಯ,ಕೌಟುಂಬಿಕ ಸೌಹಾರ್ದತೆಗಳನ್ನು ಬೆಳೆಸಿದೆ. ಯುವ ಜನಾಂಗದಿಂದ ವಯೋವೃದ್ಧರವರೆಗೆ ಓದುವ ಹವ್ಯಾಸವನ್ನು ಹೆಚ್ಚಿಸಿದೆ. ಇಂದು ಟೀವಿ ಧಾರವಾಹಿಗಳು, ಚಲನಚಿತ್ರಗಳ ಭರಾಟೆಯ ನಡುವೆಯೂ ಜನಪ್ರಿಯ ಸಾಹಿತ್ಯ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿರುವುದು ಅದರ ಹೆಚ್ಚುಗಾರಿಕೆಗೆ ಸಾಕ್ಷಿ. ಅನೇಕ ಪತ್ರಿಕೆಗಳು ತಮ್ಮ ಪ್ರಸರಣ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದು ಜನಪ್ರಿಯ ಸಾಹಿತ್ಯ(ಧಾರವಾಹಿ)ದಿಂದಲೇ ಎಂಬುದು ಸುಳ್ಳಲ್ಲ. ಜನಪ್ರಿಯ ಸಾಹಿತಿಗಳೆನಿಸಿಕೊಂಡ ಕೆಲವರು ಅತಿರಂಜನೀಯ, ಅತಿಮಾನುಷ ವಿಷಯವನ್ನಿಟ್ಟುಕೊಂಡು ಸಾವಿರಾರು ಪುಟಗಟ್ಟಲೇ ಬರೆದು ಜನಪ್ರಿಯ ಸಾಹಿತ್ಯದ ಚೌಕಟ್ಟನ್ನು ಮೀರಿದರು. ಇದು ಮಾರುಕಟ್ಟೆಯಲ್ಲಿ ತೀವ್ರವಾಗಿ ಬಿಕರಿಯಾದರೂ ಸಾಹಿತ್ಯದ ಮೌಲ್ಯ ಕಳಚಿಬಿತ್ತು. ಹೀಗಾಗಿ ಇಂದು ಜನಪ್ರಿಯ ಸಾಹಿತ್ಯವು ಸತ್ವಹೀನ ಸಾಹಿತ್ಯ, ವಿಮರ್ಶೆಗೆ ಅಯೋಗ್ಯವಾದ ಸಾಹಿತ್ಯ ಎಂಬ ಅಭಿಪ್ರಾಯ ಎಲ್ಲರಲ್ಲೂ ಮೂಡಿದೆ. ಇವೆಲ್ಲದರ ನಡುವೆಯೂ ಸೃಷ್ಡಿಯಾದ ಅನೇಕ ಅದ್ಭುತ ಕೃತಿಗಳು ಕೂಡಾ ಇಂಥ ಅಭಿಪ್ರಾಯದ ದಟ್ಟತೆಗೆ ಒಳಗಾಗಿ ಮಂಕಾಗಿವೆ. ಅಂಥ ಕೃತಿಗಳು ಕಾಲಗರ್ಭದಲ್ಲಿ ಮರೆಯಾಗಿಹೋಗಬಹುದು.ಈ ಬಗ್ಗೆ ವ್ಯಾಪಕವಾದ ಚರ್ಚೆಯಾಗಬೇಕಾದ ಅವಶ್ಯಕತೆ ಇದೆ. ಇಡೀ ಜನಪ್ರಿಯ ಸಾಹಿತ್ಯವನ್ನು ಜರಡಿಗೆ ಹಾಕಿ ಜಾಲಾಡಿದರೆ ನಿಜಕ್ಕೂ ಅತ್ಯುತ್ತುಮವೆನಿಸುವ ಕೃತಿಗಳು ಸಿಗುತ್ತವೆ. ಈ ನಿಟ್ಟಿನಲ್ಲಿ ಕನ್ನಡ ವಿಮರ್ಶಕರು ಯೋಚಿಸಬೇಕಾಗಿದೆ....


ನಿಮ್ಮವನು,
-      ರಾಜ್

ಕಾಮೆಂಟ್‌ಗಳಿಲ್ಲ: