ಮಂಗಳವಾರ, ಜನವರಿ 1, 2019

ಮಾಂಡೋವಿ ಎಂಬ ವಿಸ್ಮಯ...!


ಪತ್ರಿಕೋದ್ಯಮದ ಭಾಷೆ ಸೃಜನಶೀಲತೆಯನ್ನು ಮೊಟಕುಗೊಳಿಸುತ್ತದೆ ಎಂಬ ಮಾತಿಗೆ ಅಪವಾದವಾಗಿರುವ ರವಿಬೆಳಗೆರೆಯವರು ಪತ್ರಿಕೋದ್ಯಮದ ಜೊತೆಯಲ್ಲಿಯೇ ಕಥೆ, ಕಾದಂಬರಿ, ಅನುವಾದ, ಅಂಕಣಬರಹ... ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳನ್ನು ರಚಿಸುತ್ತಿರುವ ಬಹುಮುಖ ಪ್ರತಿಭೆ. ತಮ್ಮ ವಿಭಿನ್ನವಾದ ಬರವಣಿಗೆ ಶೈಲಿಯಿಂದ ಬೃಹತ್ ಓದುಗವರ್ಗವನ್ನು ಸೃಷ್ಟಿಸಿಕೊಂಡಿರುವುದು ಅತಿಶಯೋಕ್ತಿಯೇನಲ್ಲ. ಇವರು ಅನುವಾದವನ್ನು ಕೂಡಾ ನಮ್ಮ ನೆಲದ ಕಥಾನಕವೇನೊ ಎಂಬಂತೆ ಆಪ್ತವಾದ ಶೈಲಿಯಲ್ಲಿ ಅನುವಾದಿಸುತ್ತಾರೆ. ಇದಕ್ಕೆ ಉದಾಹರಣೆಯಾಗಿ "ಮಾಂಡೋವಿ" ಕಾದಂಬರಿ.  ನೋಬೆಲ್ ಪ್ರಶಸ್ತಿ ವಿಜೇತ ಸ್ಪ್ಯಾನಿಷ್ ಬರಹಗಾರ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ 1985 ರಲ್ಲಿ ಬರೆದ ಕಾದಂಬರಿ "ಲವ್ ಇನ್ ದಿ ಟೈಮ್ ಆಫ್ ಕಾಲೆರಾ". ಪ್ರೇಮದ ಉತ್ತುಂಗದ ಪರಿಯನ್ನು ಈ ಕಾದಂಬರಿಯಲ್ಲಿ ಮಾರ್ಕ್ವೆಜ್ ಅತ್ಯಂತ ಕುಶಲತಿಯಿಂದ ಹೆಣೆದಿದ್ದಾನೆ. ಬಾಲ್ಯದಲ್ಲಿ ಪ್ರೀತಿಸಿದ ಹುಡುಗಿಗೋಸ್ಕರ, ಆಕೆಯ ಪ್ರೀತಿಗೋಸ್ಕರ 52 ವರ್ಷಗಳ ಸುಧೀರ್ಘ ಕಾಲ ಕಾಯುತ್ತಾನೆ. ಕೊನೆಗೂ ಅವನ ಪ್ರೀತಿ ಅವನಿಗೆ ದಕ್ಕುತ್ತದೆ. ಇಂದು ಪಾಶ್ಚಾತ್ಯರಲ್ಲಿ(ಈಗೀಗ ನಮ್ಮಲ್ಲೂ..!) ಬದುಕಿನ ಒಂದು ಭಾಗವೇ ಆಗಿರುವ ವಿವಾಹ ಪೂರ್ವ ಸಹ ಜೀವನ ಪದ್ದತಿಯ ನಡುವೆಯೂ ಮಾರ್ಕ್ವೆಜ್ ನ ಕೃತಿ ಅಚ್ಚರಿಯನ್ನುಂಟು ಮಾಡುತ್ತದೆ. ಹೀಗೂ ಪ್ರೀತಿಸಬಹುದಾ? ಎಂಬ ಭಾವ ನಮ್ಮಲ್ಲಿ ಉಂಟುಮಾಡುತ್ತದೆ.

ಇಂಥ ಅಪರೂಪದ ಕೃತಿಯನ್ನು ಅಷ್ಟೇ ಪ್ರೀತಿಯಿಂದ ರವಿ ಬೆಳಗೆರೆಯವರು ಕನ್ನಡಕ್ಕೆ ಕರೆತಂದಿದ್ದಾರೆ. ಆದರೆ ಕನ್ನಡ ಅನುವಾದ(ಮಾಂಡೋವಿ)ಯನ್ನು ಓದಿದರೆ ಇದು ಅನುವಾದ ಎನಿಸುವುದಿಲ್ಲ. ಸ್ವತಂತ್ರ ಕೃತಿಯೇನೊ ಎಂಬ ಸಂದೇಹ ಉಂಟಾಗುತ್ತದೆ. ಕಾರಣ ಇದು ಮೂಲ ಕೃತಿಯ ಯಥಾವತ್ ಅನುವಾದವಾಗಿರದೆ ಭಾವಾನುವಾದವಾಗಿದೆ. ಮೂಲ ಕೃತಿಯ ಆಶಯಕ್ಕೆ ಧಕ್ಕೆಯಾಗದಂತೆ ಕನ್ನಡಕ್ಕೆ ಮಾರ್ಪಾಟಾಗಿದೆ. ಕಾದಂಬರಿಯ ಪಾತ್ರಗಳು, ಸ್ಥಳನಾಮಗಳು... ಎಲ್ಲವೂ ಕನ್ನಡ ನೆಲದ ಸೊಗಡನ್ನು ಬಿಂಬಿಸುತ್ತವೆ.ಮೂಲ ಕೃತಿಯಲ್ಲಿ ಕಥೆ ಯುರೋಪ್ ನ ಲಾಮಾಂಕದಲ್ಲಿ ಜರುಗಿದರೆ ಕನ್ನಡದಲ್ಲಿ ಬಳ್ಳಾರಿಯಲ್ಲಿ ನಡೆಯುತ್ತದೆ. ಮೂಲ ಕೃತಿಯ ನಾಯಕ ಫ್ಲಾರೆಂಟಿನೊ ಅರಿಜ, ನಾಯಕಿ ಫರ್ಮಿವಿ ಡಾಜಾ ಈ ಪಾತ್ರಗಳು ಕನ್ನಡದಲ್ಲಿ ವೆಂಕತಚಲಪತಿ, ಮಾಂಡೋವಿ ಹೆಸರುಗಳಾಗಿ ಮೈದಳೆದಿವೆ. ರವಿಬೆಳಗೆರೆಯವರ ಆತ್ಮಕಥನ "ಖಾಸ್ ಬಾತ್" ಓದಿದವರಗೆ ಮಾಂಡೋವಿ ಕಾದಂಬರಿಯ ವಸ್ತು ಅನೇಕ ಹೋಲಿಕೆಯನ್ನು ನೀಡುತ್ತದೆ. ಇದನ್ನು ಕಾದಂಬರಿಯ ಮುನ್ನುಡಿಯಲ್ಲಿಯೇ ಬೆಳಗೆರೆಯವರು ತಿಳಿಸಿದ್ದಾರೆ. ಕಾದಂಬರಿಯ ಆರಂಭದಲ್ಲಿಯೇ ಎದುರಾಗುವ "ಪುಸ್ತಕದ ಮೇಲೆ ಕೈ ಇರಿಸಿದ ಜೀವವೇ, ನಿನ್ನ ಕೈಗಳಗೆ ಪ್ರೇಮದ ಹುಡಿ ಅಂಟಿಕೊಳ್ಳಲಿ" ಎಂಬ ಸಾಲುಗಳು ಓದುಗರನ್ನು ಆಕರ್ಷಿಸುವಲ್ಲಿ ಸಫಲವಾಗುತ್ತದೆ. ವಿಸ್ತಾರವಾದ ಆರು ಅಧ್ಯಾಯಗಳಲ್ಲಿ ಹರಡಿರುವ ಈ ಕಥೆ ಆರಂಭವಾಗುವುದೇ ವ್ಯಕ್ತಿಯೊಬ್ಬನ ಸಾವಿನ ಸನ್ನಿವೇಶದಿಂದ. ಕಥೆ ಅಂತ್ಯಗೊಳ್ಳುವುದು ಪ್ರೇಮಿಗಳಿಬ್ಬರ ಹೊಸ ಬದುಕಿನ ಆರಂಭದಲ್ಲಿ. ಈ ಸಾವು - ಬದುಕಿನ ಪಯಣದ ನಡುವೆ ಇರುವ ಮನುಷ್ಯ ಸಂಬOಧಗಳು, ಪ್ರೇಮ, ವಂಚನೆ, ಅಸಹಾಯಕತೆ, ನಿರೀಕ್ಷೆ, ಸಾರ್ಥಕತೆ... ಇವೆಲ್ಲವೂ ಕಥೆಯಲ್ಲಿ ಮಿಳಿತಗೊಡಿವೆ. ಪ್ರೇಮಿಸುವ ಪ್ರತಿಯೊಬ್ಬರೂ ಓದಲೇ ಬೇಕಾದ ಅಪೂರ್ವ ಪ್ರೇಮಕಥನ.


ನಿಮ್ಮವನು,
         -      ರಾಜ್