ಗುರುವಾರ, ಜನವರಿ 1, 2026

ಸದಾ ಕಾಡುವ ನನ್ನ ಪ್ರೀತಿಯ ಹಾಡು

ಕಳೆದ ವರ್ಷ ೨೦೨೪ ರ ಫೆಬ್ರವರಿಯ ದಿನಗಳು. ಸಿನಿಮಾ ಪತ್ರಕರ್ತರಾದ ಶ್ರೀ ಗಣೇಶ್ ಕಾಸರಗೋಡು ಅವರು ತಮ್ಮ ಫೇಸ್‌ಬುಕ್‌ ನಲ್ಲಿ  "ಮಂಜುಮ್ಮೆಲ್ ಬಾಯ್ಸ್" ಎಂಬ ಮಲೆಯಾಳಂ ಸಿನಿಮಾ ಬಗ್ಗೆ ಅಚ್ಚರಿ ಬೆರೆತ ಮೆಚ್ಚುಗೆ ಬರಹ ಬರೆದಿದ್ದರು. ನಾನು ಅಲ್ಲಿಯವರೆಗೆ ಥಿಯೇಟರ್ ನಲ್ಲಿ ಮಲೆಯಾಳಂ ಸಿನೆಮಾ ನೋಡಿದವನಲ್ಲ. ಆದರೆ, ಈ ಸಿನಿಮಾ ನೋಡಬೇಕೆನಿಸಿತು. ಮಂಗಳೂರಿನ "ಸಿಟಿ ಸೆಂಟರ್" ಮಾಲ್ ನಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿತ್ತು. ಥಿಯೇಟರ್ ಒಳಹೊಕ್ಕೆ. ಓಹ್! ದೇವರೇ....!! ಸಿನಿಮಾ ನಿಜಕ್ಕೂ ದಂಗುಬಡಿಸುವಂತಿತ್ತು. ಆಸ್ಕರ್ ಲೆವೆಲ್ ಗೆ ನಿಲ್ಲಬಲ್ಲ ಸಿನಿಮಾ ಅದು. ೨೦೦೫ ರಲ್ಲಿ ನಡೆದ ನೈಜ ಘಟನೆ ಆಧಾರಿಸಿದ ಚಿತ್ರವದು. ನಿರ್ದೇಶನ, ಛಾಯಾಗ್ರಹಣ, ಸಂಗೀತ, ವಿಎಫ್‍ಎಕ್ಸ್..... ಎಲ್ಲವೂ ಅತ್ಯದ್ಭುತ! ಯಾವುದೇ ಸ್ಟಾರ್ ನಟರಿಲ್ಲದೇ ಈ ಸಿನಿಮಾ ದಕ್ಷಿಣ ಭಾರತದಲ್ಲಿ ಮಾಡಿದ ಮೋಡಿ ಅಚ್ಚರಿಯುಂಟುಮಾಡುವಂತದ್ದು. 

ಆದರೆ, ಈಗ ನಾನು ಬರೆಯುತ್ತಿರುವುದು ಈ ಸಿನಿಮಾ ಬಗ್ಗೆ ಅಲ್ಲ. ಈ ಸಿನಿಮಾದ ಆರಂಭದಿಂದ ಅಂತ್ಯದವರೆಗೆ ಚಿತ್ರದುದ್ದಕ್ಕೂ  ಮೊರೆಯುವ ಮಾಂತ್ರಿಕ ಸ್ಪರ್ಷದ ಹಾಡೊಂದರ ಬಗ್ಗೆ. 
"ಕಣ್ಮಣಿ ಅನ್ಬೋದು....." ಎಂದು ಶುರುವಾಗುವ ಈ ತಮಿಳು ಹಾಡು ಸ್ವತಃ ಕಮಲ್ ಹಾಸನ್ & ಎಸ್.ಜಾನಕಿ ಹಾಡಿದ್ದಾರೆ. ಥಿಯೇಟರ್ ನಲ್ಲಿ ಕೂತಿದ್ದವನು ಈ ಕಾಡು ಕೇಳಿ ಸಣ್ಣಗೆ ಮಧುರವಾಗಿ ಕಂಪಿಸಿಬಿಟ್ಟೆ. ಹೃದಯದ ಕವಾಟಗಳಲ್ಲೆಲ್ಲಾ ಈ ಹಾಡು ಧುಮ್ಮಿಕ್ಕತೊಡಗಿತ್ತು. ಭಗವಂತಾ..!!  ಸಂಗೀತ ಮಾಂತ್ರಿಕ ಇಳೆಯರಾಜಾ ನಿಜಕ್ಕೂ ಅನರ್ಘ್ಯ ರತ್ನ. ಅದೆಂತಾ ಸಂಗೀತ ಸಂಯೋಜಿಸಿದ್ಥಾರೆ ಆ ಮಹಾನುಭಾವ! ತಮಿಳು ಭಾಷೆ ನನಗೆ ಅರ್ಥವಾಗಲ್ಲ. ಸಂಗೀತಕ್ಕೆ ಭಾಷೆ ಹಂಗೇಕೆ? ಭಾಷೆಯನ್ನು ಮೀರಿದ್ದು ಸಂಗೀತ. Of course, ಸಂಗೀತವೇ ಒಂದು ಭಾಷೆ! The universal language !!   Actually, ಆ ಹಾಡು ಈ ಸಿನಿಮಾದ ಹಾಡು ಅಲ್ಲ. ೧೯೯೧ ರಲ್ಲಿ ಬಿಡುಗಡೆಯಾದ ಕಮಲ್ ಹಾಸನ್ ಅಭಿನಯದ ತಮಿಳು ಚಿತ್ರ "ಗುಣ" ಎಂಬ ಸಿನಿಮಾದ ಹಾಡು ಅದು. ಬಹುಶಃ ಆಗ ಆ ಹಾಡು ಅಷ್ಟೊಂದು ಜನಪ್ರಿಯವಾಗಿಲ್ಲದಿರಬಹುದೇನೋ ಅಥವಾ ಜನಮಾನಸದಲ್ಲಿ ಮರೆತು ಹೋಗಿರಬಹುದೇನೋ ಗೊತ್ತಿಲ್ಲ. ಈ 'ಮಂಜುಮ್ಮೆಲ್ ಬಾಯ್ಸ್' ಚಿತ್ರದಿಂದ ಈ ಹಾಡು ಮತ್ತೇ ಜೀವಂತಿಕೆಯನ್ನು ಪಡೆದುಕೊಂಡಿತು. ಈ ಒಂದುಮುಕ್ಕಾಲು ವರ್ಷದ ಅವಧಿಯಲ್ಲಿ ಸಾವಿರಾರು ಸಲ ಈ ಹಾಡು ಕೇಳಿದ್ದೇನೆ. ಒಮ್ಮೆಯೂ ಬೇಸರ ಹುಟ್ಟಿಸಿಲ್ಲ. ಸಂಗೀತವೇ ಹಾಗೆ. ಎಂಥವರನ್ನು ಅದು ಹಿಡಿದು ನಿಲ್ಲಿಸಿಬಿಡುತ್ತೆ. ನೀವೊಮ್ಮೆ ಈ ಹಾಡು ಕೇಳಿ. ಯೂಟ್ಯೂಬ್ ಲಿಂಕ್ ಇಲ್ಲಿದೆ. ಕ್ಲಿಕ್…

ನಾನಂತೂ ಹಾಡುಗಳ ಹುಚ್ಚ. ಒಂದಿಷ್ಟು ಹಾಡುಗಳು ಸದಾ ನನ್ನ ಜೊತೆಗಿರುತ್ತವೆ, ನನ್ನ ನೆರಳಿನಂತೆ. ಬಹುಶಃ ಈ ಜಗತ್ತಲ್ಲಿ ಹಾಡು-ಸಂಗೀತ ಇರದೇಹೋಗಿದ್ದರೆ ನನ್ನಂತವರ ಬದುಕು ದುರ್ಭರವಾಗಿಬಿಡುತಿತ್ತು. "ನಮ್ಮ ಒಬ್ಬಂಟಿತನವನ್ನು ದಿವ್ಯವಾದ ಏಕಾಂತವನ್ನಾಗಿ ಪರಿವರ್ತಿಸಿಕೊಳ್ಳಬೇಕು" ಎಂದು ಹೇಳಿದವನು ಓಷೋ ರಜನೀಶ್. ಒಬ್ಬಂಟಿತನ ಕಾಡಿದಾಗಲೆಲ್ಲಾ ನನಗೆ  ಹಾಡುಗಳು ಅಂತಹ ಏಕಾಂತವನ್ಮು ಸೃಷ್ಟಿಸಿಕೊಟ್ಟಿವೆ.  ಬೇಸರವಾದಾಗ, ಮನಸ್ಸು ಪ್ರಕ್ಷುಬ್ಧವಾದಾಗ ಹಾಡುಗಳು ಸಂತೈಸಿವೆ. "ಅಮ್ಮ ಬೇಕು" ಅಂತ ಮಕ್ಕಳು ರಚ್ಚೆ ಹಿಡಿಯುತ್ತಾವಲ್ಲ.... ಥೇಟ್ ಹಾಗೆಯೇ ಹಾಡುಗಳೆಡೆಗೆ ನನ್ನ ಸೆಳೆತ. ನನ್ನದೊಂದು ಆಸೆ, ಅತ್ಯುತ್ತಮ ಸಾಹಿತ್ಯ ಕೃತಿಗಳನ್ನು ಸಂಗ್ರಹಿಸಿ ಒಂದು ಚೆಂದನೆಯ ಲೈಬ್ರರಿ ಮಾಡಿಕೊಳ್ಳಬೇಕು. ಜೊತೆಗೆ, My all time favourite ಅನ್ನಿಸುವಂತಹ ಒಂದಿಷ್ಟು ಹಾಡುಗಳನ್ನು ಕೇಳುತ್ತಾ , ಪುಸ್ತಕ ಓದುತ್ತಾ..... ದಿವ್ಯವಾದ ಏಕಾಂತದೊಳಗೆ ಈ ಬದುಕು ಮುಗಿಸಬೇಕು.... 


- ನಿಮ್ಮವನು, 

    ರಾಜ್