ಗುರುವಾರ, ಫೆಬ್ರವರಿ 14, 2019

"ಹೇಳಿ ಹೋಗು ಕಾರಣ" ಎಂಬ ಪ್ರೇಮಕಾವ್ಯ..!


ನಾನು ತುಂಬಾ ಪ್ರೀತಿಸುವ ಲೇಖಕ ರವಿ ಬೆಳಗೆರೆ ಅವರು ಇದುವರೆಗೆ 80 ಕ್ಕೂ ಹೆಚ್ಚು ಕೃತಿಗಳನ್ನು (fiction & non fiction) ಬರೆದಿದ್ದಾರೆ. ಅದರಲ್ಲಿ ನಾನು 60+ ಕೃತಿಗಳನ್ನು ಓದಿದ್ದೇನೆ. ಇವುಗಳಲ್ಲಿ ನನಗೆ (fiction ಗಳ ಪೈಕಿ)ತುಂಬಾ ಕಾಡಿದ್ದು "ಹೇಳಿ ಹೋಗು ಕಾರಣ" ಕಾದಂಬರಿ. ಕಥಾನಾಯಕ ಹಿಮವಂತ ಮತ್ತು ನಾಯಕಿ ಪ್ರಾರ್ಥನಾಳ ಪ್ರೇಮವೇ ಇಲ್ಲಿ ಪ್ರತಿ ಪುಟ ಪುಟದಲ್ಲಿ ಮಾರ್ಧನಿಸುತ್ತದೆ. ಪ್ರಾರ್ಥನಾಳನ್ನು ಅಗಾಧವಾಗಿ ಪ್ರೀತಿಸುವ ಹಿಮವಂತ್ ಅವಳನ್ನು ತನ್ನ ಕಿರುಬೆರಳ ತುದಿಯಿಂದಲೂ ಮುಟ್ಟದೆ ಪ್ರೀತಿಸುವ ಮಹಾನ್ ಪ್ರೇಮಿ. ಪ್ರೇಮ ಎಂಬುದು physical ಅಲ್ಲದೆಯೂ ಇರಬಲ್ಲದು ಎಂಬುದನ್ನು ಹಿಮವಂತ್ ಇಲ್ಲಿ ತೋರಿಸುತ್ತಾನೆ. ಅವಳಿಗೋಸ್ಕರ ನಾನಾ ಸಂಕಷ್ಟಗಳನ್ನು ಅನುಭವಿಸಿ ಅವಳನ್ನು ಮೆಡಿಕಲ್ ಓದಿಸುತ್ತಾನೆ. ಪ್ರಾರ್ಥನಾ ಕೂಡಾ ಅವನನ್ನು ಪ್ರೀತಿಸುತ್ತಿದ್ದರೂ ನಿಧಾನವಾಗಿ ಅವಳ ಮನಸು ಹಿಮವಂತನ ಪವಿತ್ರ ಪ್ರೇಮದಿಂದ ಅವಳ ಸಹಪಾಠಿ ದೇಬು ಎಂಬ ಪ್ಲರ್ಟ್ ನ ಬಲೆಗೆ ಬಿದ್ದು ಅವನನ್ನೇ ಮದುವೆಯಾಗುತ್ತಾಳೆ. ಅವಳಿಗೋಸ್ಕರ ತನ್ನ ಬದುಕನ್ನೇ ಸವೆಸಿದ, ಭವಿತವ್ಯದ ಬಗ್ಗೆ ಕನಸು ಕಟ್ಟಿದ ಹಿಮವಂತನ ಕನಸಿನ ಸೌಧ ಕುಸಿಯುತ್ತದೆ. ಅವನು ಅನುಭವಿಸಿದ ನೋವು ಓದಿಯೇ ಅನುಭವಿಸಬೇಕು. ಪ್ರಾರ್ಥನಾ ಏಕೆ ಹಿಮವಂತ್ ನನ್ನು ಬಿಟ್ಟು ಹೋದಳು...? ನನಗೂ ಅವಳ ಕೈ ಹಿಡಿದು ಕೇಳಬೇಕೆನಿಸುತ್ತದೆ... ಹೇಳಿ ಹೋಗು ಕಾರಣ... ಅಂತ. ಹಿಮವಂತನ ಪಾತ್ರದ ಮೂಲಕ ಒಬ್ಬ ಮಹಾನ್ ಪ್ರೇಮಿಯೊಬ್ಬನನ್ನು ರವಿ ಚಿತ್ರಿಸಿದ್ದಾರೆ. 

ಬಿಟ್ಟು ಹೋದ ಹುಡುಗಿಯ ಬಗ್ಗೆ ಹುಡುಗರು ಪ್ರತೀಕಾರ ತೀರಿಸಿಕೊಳ್ಳುವುದನ್ನು ಕಾಣುತ್ತಿರುವ ಇಂದಿನ ದಿನಗಳಲ್ಲಿ ಹಿಮವಂತ್ ನ ವ್ಯಕ್ತಿತ್ವದ ಬಗ್ಗೆ ನಮಗೆ ಹೆಮ್ಮೆ ಅನಿಸುತ್ತದೆ. ಹಿಮವಂತ್ ಮೌನವಾಗಿ ನೋವು ಅನುಭವಿಸುತ್ತಾನೆ. ಪ್ರೇಮವೇ ಹಾಗೆ, ಅದು ಬಿಟ್ಟುಹೋದವರಿಗಿಂತ ಉಳಿದು ಬಿಟ್ಟವರಿಗೆ ಹೆಚ್ಚು ಯಾತನೆ ಕೊಡುತ್ತೆ. ಇಡೀ ಕಾದಂಬರಿ ಓದಿ ಮುಗಿಸಿದಾಗ ಮುಗಿಯಲಾರದ ವಿಷಾದ ಭಾವವೊಂದು ನಮ್ಮನ್ನು ಆವರಿಸುತ್ತದೆ. ನಮ್ಮೊಳಗೊಬ್ಬ ಹಿಮವಂತ್ ಹುಟ್ಟಿಬಿಡುತ್ತಾನೆ. ಪ್ರೇಮ ವೈಫಲ್ಯವೆಂಬುದು ಅಂಗಾಲಿಗೆ ಚುಚ್ಚಿ ಒಳಗೆ ಮುರಿದುಕೊಂಡ ಮುಳ್ಳಿನ ಹಾಗೆ ಯಾವಾಗಲೂ ನೋವನ್ನು ಕೊಡುತ್ತಲೇ ಇರುತ್ತೆ. ಪ್ರೀತಿಸಿ ಸುಮ್ಮನೇ ದೂರ ಸರಿದುಬಿಡುವ, ಸಣ್ಣ ಕಾರಣವನ್ನೇ ನೆಪವನ್ನಾಗಿಟ್ಟುಕೊಂಡು ಪ್ರೀತಿಸಿದವರನ್ನೇ ಕೈ ಬಿಟ್ಟು ಹೋಗಿಬಿಡುವ ಮನಸುಗಳು ಇದನ್ನು ಯಾಕೆ ಅರ್ಥಮಾಡಿಕೊಳ್ಳುವುದಿಲ್ಲವೋ....? ಹಿಮವಂತನಂಥ ಪಾತ್ರ ಸೃಷ್ಟಿಸಿದ ನನ್ನ ರವಿ ನಿಜಕ್ಕೂ The great.... ಇಂಥದೊಂದು ಕೃತಿ ಓದುತ್ತಿರುವುದಕ್ಕೆ... We are great... ನೀವಿನ್ನು ಈ ಕಾದಂಬರಿ ಓದಿಲ್ಲವಾದರೆ ಪ್ಲೀಸ್ ಒಮ್ಮೆ ಓದಿ...

                 
                                                                          ನಿಮ್ಮವನು
 - ರಾಜ್